ಇದು 2012ರ ಸಾಲಿನ ಸಿಂಗಾಪುರ ಕನ್ನಡ ಸಂಘ ನಡೆಸಿದ ಜಾಗತಿಕ ಕವನ ಸ್ಪರ್ಧೆ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕವನದ ಭಾಗಾಂಶ. ಒಂದು ಸೂಕ್ಷಾತಿಸೂಕ್ಷ್ಮ ಕಣದಿಂದಿಡಿದು ಅಖಂಡ ಗಾತ್ರದ ಜೀವಿಯವರೆಗು, ಸೃಷ್ಟಿಕ್ರಿಯೆಯ ಪ್ರಕ್ರಿಯೆಯೆ ವಿಸ್ಮಯಕಾರಿ. ಒಂದು ಜತೆ ಸೂಕ್ಷ್ಮಾಕಾರದ ವೀರ್ಯ ಮತ್ತು ಅಂಡಾಣುಗಳ ಮಿಲನವೆ ಮೊತ್ತದಲಿ ಸೃಷ್ಟಿಕ್ರಿಯೆಯ ಸಾರವಾದರೂ, ಅದು ನೈಸರ್ಗಿಕವಾಗಿ, ನಿಯಮಿತವಾಗಿ, ತನ್ನಂತಾನೆ ನಡೆಯಲು ಬೇಕಾದ ಸರಳ ವ್ಯವಸ್ಥೆಯೆ ಅಪ್ರತಿಮ ಅಚ್ಚರಿಯ ಮೇರುಶಿಖರ. ಕಣ್ಣಿಗೆ ಕಾಣದ ಈ ಸೂಕ್ಷ್ಮ ಕಣಗಳಲ್ಲೆ, ವಂಶವಾಹಿಗಳನ್ನು ಬೀಜಾಕ್ಷರ ರೂಪದಲ್ಲಿ ಬರೆದಿಟ್ಟು ಸಂತತಿಯಿಂದ ಸಂತತಿಗೆ, ಜನಾಂಗದಿಂದ ಜನಾಂಗಕ್ಕೆ ಸಾಗಿಸುವ ಖಚಿತ ಹಾಗೂ ಚಾಣಾಕ್ಷ್ಯ, ಚತುರ ವ್ಯವಸ್ಥೆ, ಆದಿಯನಾದಿ ಕಾಲದಿಂದ ನಡೆದುಕೊಂಡೇ ಬಂದಿರುವ ರೀತಿ – ಎಲ್ಲವು ಸೇರಿ ಇದನ್ನೊಂದು ಸರಳ, ಸಾಮಾನ್ಯ ಪ್ರಕ್ರಿಯೆಯ ಹಾಗೆ ತೋರಿಸಿ ಅದರ ಮಹತ್ವವನ್ನೆ ಮರೆಮಾಚಿಬಿಡುತ್ತವೆ. ಇದರ ಹಿಂದಿನ ವಿಜ್ಞಾನ, ಜತೆಗೆ ಮೇಳೈವಿಸಿದ ಸಾಮಾಜಿಕ ಹಾಗೂ ಮಾನಸಿಕ ಸಿದ್ದತೆ, ಆಚಾರ ವಿಚಾರಗಳ ಒಡಂಬಡಿಕೆ, ಗಂಡು ಹೆಣ್ಣಿನ ಮಿಲನದ ವ್ಯಾಪಾರದ ಆಕರ್ಷಣೆ, ಅದು ಮಿತಿಮೀರದಂತೆ ಕಟ್ಟುಪಾಡುಹಾಕುವ ವಿವಾಹದಂತಹ ಸಾಮಾಜಿಕ ವ್ಯವಸ್ಥೆ – ಹೀಗೆ, ಕಲೆ, ವಿಜ್ಞ್ನಾನ, ಅರ್ಥ ಶಾಸ್ತ್ರ, ತತ್ವಶಾಸ್ತ್ರ, ಗಣಿತ – ಇನ್ನು ಎಷ್ಟೊ ತರದೆಲ್ಲವುಗಳ ಸಂಗಮಿಸಿದ ಸರಳ ರೂಪದ ಸಮೀಕರಣ – ಈ ಸೃಷ್ಟಿ ವ್ಯಾಪಾರದ ಮನಸ್ಸತ್ವ. ಆ ಪ್ರಕ್ರಿಯೆಯನ್ನು ಕವನದ ಬಂಧದಲ್ಲಿ ಕಟ್ಟಿಡುವ ಯತ್ನವೆ ‘ಅಂಡ ಪಿಂಡ ಬ್ರಹ್ಮಾಂಡ’
ಈ ಅಂಡ ಪಿಂಡ ಬ್ರಹ್ಮಾಂಡ …
______________________________
ಒಂದು ಕಣ ನಿನಾದ, ಜಗಮೂಲದ ಕರ್ಮಕಾಂಡ
ಜಗತ್ಸೃಷ್ಟಿ ಸುಂದರ ಕಾಂಡ,ಅಂಡ,ಪಿಂಡ,ಬ್ರಹ್ಮಾಂಡ
ಅಣು,ರೇಣು,ತೃಣ,ಕಾಷ, ್ಠಪರಮಾಷ್ಟ, ಪರಮಶ್ರೇಷ್ಠ
ಚರಾಚರಂತರ ಷಡ್ಯಂತ್ರಾಂಕುರ ಉಚ್ಛ,ನೀಚ,ಕನಿಷ್ಠ ||
ಸೃಷ್ಟಿ ರಹಸ್ಯ ಅತಿ ನಿಗೂಢತರ ಸಂಕೇತ ಸಾರ
ಸೂಕ್ಷಾತಿಸೂಕ್ಷ್ಮ ಕಣದ, ಕಣಾದ, ಕಣ್ವ ಪರಿವಾರ
ಕಾಣಲಾಗದ ಬರಹ ಬಚ್ಚಿಟ್ಟ ಖಚಿತ ಬೀಜಾಕ್ಷರ
ಸಂತತಿ ಸಂತತಿ ಪ್ರಯಾಸ ಪ್ರವಾಸ ನಿರಂತರ ||
ಎನಿರಬಹುದೀ ಸಂಕೆತಾಕ್ಷರದೊಳಗುಟ್ಟು ತಲೆ ಚಿಟ್ಟು
ಕಾಣದವನ ಮೇಲೆ ಹೇಗೆ ಬರೆಯುವ ಈ ಉಳಿ ಪೆಟ್ಟು
ಸಾಲದಕೆ ಬರೆದುದಾದರು ಎಷ್ಟೊಂದು ಬಗೆ ಬಗೆ ಕೂಟು
ಕೊನೆಗೆಲ್ಲ ಕಟ್ಟಿ ಮುಚ್ಚಿಟ್ಟ ಜಾಣ್ಮೆ, ಈ ನಾಜೂಕಿನ ಸಗಟು ||
ವಿಸ್ಮಯ ಇನ್ನು ಅಪಾರ ಕೊನೆ ಮುಟ್ಟದ ತರ್ಕ ವಿಚಾರ
ತಂತಾನೇ ಬಿಚ್ಚಿಕೊಳ್ಳುವುದ್ಹೇಗೋ ಅದಕದೆ ಸಂಕೇತಾಕ್ಷರ
ಬರೆದಿಟ್ಟ ಸರದಿ, ಸರಿ ಸೂಕ್ತ ವೇಳೆಗೆ ತೆರೆಯೊ ಅವತಾರ
ಚೊಕ್ಕ ಚತುರತೆಯಿಂದ ಚಿಕ್ಕ ಮಡಿಲಿಗೆ ಸರಿಯೊ ವಿಚಾರ ||
ಎಂಥಾ ನಿಯಂತ್ರಣ ಸೂತ್ರ, ಹದ್ದುಬಸ್ತಿನಲಿಡೆ ಗಾತ್ರ ಗಮನ
ಸೂತ್ರವನೆ ಸಿಗಿದು ಗಂಡು ಹೆಣ್ಣೋಳು ಹಂಚಿಟ್ಟ ಸರ್ವದಮನ
ಬ್ರಹ್ಮಚರ್ಯ, ಗೃಹಸ್ತ್ಯ, ಪೌರೋಹಿತ್ಯಗಳ ಕಟ್ಟುಪಾಡು ಲೇಪನ
ವೈವಾಹಿಕ ಶೋಭನ ಅಂಡ, ಬೀಜಾಣುಗಳ ಮಿಲನದ ನಮನ ||
– ನಾಗೇಶ ಮೈಸೂರು, ಸಿಂಗಾಪುರದಿಂದ
ಅಂಡ ಪಿಂಡ ಬ್ರಹ್ಮಾಂಡದ ವ್ಯಾಪ್ತಿಯಿಂದ ಕೊರೆದಿಟ್ಟ ಬೀಜಾಕ್ಷರ ಸಂಕೇತ ಬೀಜಾಂಡ ಮಿಳಿತವಾಗಿ ದೇಹದೊಳಹೊಕ್ಕು ಗರ್ಭಾಧಿಕಾರ ಪಡೆದ ಗಳಿಗೆಯ ಹಾಗೂ ನಂತರದ ನವಮಾಸದ ಭೌತಿಕ ಚಟುವಟಿಕೆಗಳತಿಶಯದ ಅಂತರಾಳ ಬಿಚ್ಚಿಡುವ ಯತ್ನ ‘ಸೃಷ್ಟಿಯ ರಹಸ್ಯ’ ಕಾವ್ಯದ ಆಶಯ. ಹಾಗೆಯೆ ಜನ್ಮ ತಳೆದ ನವಜಾತ ಶಿಶು ಜೀವನ ಚಕ್ರ ಪರಿಕ್ರಮಣದ ಗಾಲಿ ಹೊತ್ತು ಎಲ್ಲರಂತೆ ಬಾಲ್ಯ, ಯೌವ್ವನ, ಪ್ರಾಯ, ವೃದ್ದಾಪ್ಯಗಳನ್ನು ಅಪ್ಪುತ್ತ ಆ ಚಕ್ರ ನಿರಂತರವಾಗಿರುವಂತೆ ನೋಡಿಕೊಳ್ಳುವ ಕರ್ಮಬಂಧವೂ ಇಲ್ಲಿ ಅಂತರ್ಗತ. ಅ ಪುನಾರವರ್ತನೆಯ ಚಕ್ರದಲ್ಲಿಯೆ ಬ್ರಹ್ಮ್ಮಂಡದ ಸೃಷ್ಟಿ ರಹಸ್ಯದ ಕೀಲಿ ಕೈ ಅಡಗಿರಬಹುದೆಂಬ ಕುತೂಹಲ / ಪ್ರಶ್ನೆಯಲ್ಲಿ, ಈ ನೈಸರ್ಗಿಕ ಪ್ರಕ್ರಿಯೆಯನ್ನು ಭೌತಿಕ ನೆಲೆಯಿಂದ ತಾತ್ವಿಕ ನೆಲೆಗಟ್ಟಿಗೊಯ್ದು ನಿಲ್ಲಿಸುವ ಹವಣಿಕೆ. ಆ ದೃಷ್ಟಿ ಕೋನದಿಂದ, ಒಂದು ವಿಧದಲ್ಲಿ ಈ ಕವನ ‘ಅಂಡ ಪಿಂಡ ಬ್ರಹ್ಮಾಂಡ’ಕ್ಕೆ ಪೂರಕವಾಗಿಯು ಅಥವ ವಿವರ ವಿಷದಿಕರಣದ ಅಂಗವಾಗಿಯು ನೋಡಬಹುದು.
ಬ್ಲಾಗ್ ವರ್ಗಗಳು: ಆಧ್ಯಾತ್ಮಿಕ, ವಿಸ್ಮಯ, ಸೃಷ್ಟಿರಹಸ್ಯ, ತಾತ್ವಿಕ, ಗರ್ಭಾಂಕುರ
ಸರಣಿ: ನಾಗೇಶ ಮೈಸೂರು
(ಸಂಪದದಲ್ಲಿ ಪ್ರಕಟಿಸಿದ ಬರಹ)
April 28, 2013 – 12:38am