00056. ಹಿತ್ತಲ ಗಿಡದ ಮದ್ದು

ಈಚೆಗೆ ಯಾರೊ ಗೆಳೆಯರು ‘ಗುದ್ದಿ ಕಳಿಸಿದ’ ಮಿಂಚಂಚೆಯಲ್ಲಿ (ಕ್ಷಮಿಸಿ – ಫಾರ್ವಡಿನ ವಿಕೃತಾನುವಾದ , ಒದ್ದು ಕಳಿಸಿದ್ದೊ ಗುದ್ದಿ ಕಳಿಸಿದ್ದೊ ಗೊಂದಲವಿದ್ದರು ಕೊನೆಗೆ ಗುದ್ದನ್ನೆ ಬಳಸಿದೆ) ನಮ್ಮವೆ ಭಾರತೀಯ ಅಡುಗೆ ಮೂಲ ಸಾಮಾಗ್ರಿಗಳ ಹಿರಿಮೆಯನ್ನು ಬಣ್ಣಿಸಿತ್ತು. ಅದನ್ನೆ ಕವನವಾಗಿಸಿ ಇಲ್ಲಿ ಪ್ರಕಟಿಸುತ್ತಿದ್ದೇನೆ – ಕೆಲವು ಪರದೇಶಿ ಪದಗಳನ್ನು ಹಾಗೆ ಬಳಸಿದ್ದೇನೆ ಸುಲಭವಾಗಲೆಂದು (ಕೊಲೆಸ್ಟರಾಲ್ ಇತ್ಯಾದಿ). ಕೆಲವೆಡೆ ಕನ್ನಡ ಪದ ಜತೆಗೆ ಇಂಗ್ಲಿಷಿನ ಉಚ್ಚಾರಣೆಯನ್ನು ಹಾಗೆ ಉಳಿಸಿಕೊಂಡಿದ್ದೇನೆ (ಕಾಡಮಮ್, ಚಿಲ್ಲಿ ಇತ್ಯಾದಿ..) – ಹಿತ್ತಲ ಗಿಡ ಕೂಡ ಮದ್ದೆ ಎಂದು ವಾದ ಮಂಡಿಸಲು….ಬನ್ನಿ ಆಸ್ವಾದಿಸೋಣ – ನಾಗೇಶ ಮೈಸೂರು, ಸಿಂಗಪೂರದಿಂದ

ಹಿತ್ತಲ ಗಿಡದ ಮದ್ದು
_________________________

ಕೊಬ್ಬು ಕರಗಿಸುವ ಭಾರತೀಯರಿವರಂತೆ
ತಿಂದದ್ದು ಅರಗಿಸೊ ಭಾರತದ ತವರಂತೆ
ನಾವು ದಿನವೂ ತಿಂದುಂಡುಡುವ ಆಹಾರ
ಕಾಯುವರೆ ಒಳಕೆಲವರಿದ್ದು ಹಾಹಾಕಾರ!

ಬೆಳ್ಳುಳ್ಳಿ ಮೊದಲಣ್ಣ ಗಾರ್ಲಿಕ್ಕು ಖದರಣ್ಣ
ಸಲ್ಫರಿನ ಸಂಯುಕ್ತಾ ಆಲಿಸಿನ್ನು ಇಹುದಣ್ಣ
ಪ್ರತಿ ಬ್ಯಾಕ್ಟೀರಿಯ ಕೊಲೆಸ್ಟರಾಲ ತಗ್ಗಿಸಣ್ಣ
ಅನಾರೋಗ್ಯ ಕೊಬ್ಬುರಿಸಿ ಕೊಬ್ಬಿಗೆ ಕಡಿವಾಣ!

ಭಲೆ ಗಮ ಗಮ ಸೊಂಪಿನ ಏಲಕ್ಕಿ ಸೊಗಡು
ತಿಂದದ್ದ ಜೀರ್ಣಿಸೆ ಸೊಗಬಾಯ್ತುಂಬ ಹರಡು
ಚಯಾಪಚಯ ಕ್ರಿಯೆ ಹೆಚ್ಚಿಸಿ ಕೊಬ್ಬನ್ನೆ ಸುಟ್ಟ
ಮೂಲಿಕೆಯ ಕೆಲಸ ಕಾರ್ಡಮಮ್ಮಿನ ನೋಟ!

ಬೇಯಿಸೊ ಬೇಯಿಸದೆಯೊ ಎಲೆಕೋಸೆ ಶೆಟ್ಟಿ
ಸಕ್ಕರೆ ಕಾರ್ಬೊಹೈಡ್ರೇಟು ಕೊಬ್ಬಾಗಬಿಡ ಜಟ್ಟಿ
ಅದಕೆ ತೂಕವಿಳಿಸಬೇಕಿರಲೆ ಮುಕ್ಕಿ ಕ್ಯಾಬೇಜು
ವಯಸಿನಲು ಕಾಣಲೆ ಎಳೆಯರಂತೆ ಟೀನೇಜು!

ನೀರು ಮಜ್ಜಿಗೆ ಕುಡಿಸುವ ಅಜ್ಜಿಗೆ ಕೈಮುಗಿಯೊ
ಚಿಟುಕಿನಷ್ಟೆ ಕೊಬ್ಬು ಕ್ಯಾಲೋರಿ ಸರಿ ಮಳೆಯೊ
ದಿನ ಕುಡಿದರೆ ಕೊಡುವ ಪೋಷಕಾಂಶಗಳ ಸತ್ವ
ಕೂಡಿಸದೆ ಕ್ಯಾಲೋರಿ ಕೊಡೆ ಬೇಕಾದ್ದೆಲ್ಲ ಮಹತ್ವ!

ಚೋಟು ಮೆಣಸಿನಕಾಯಿ ಕೆಂಪು ಹಸಿರು ಬಾಯಿ
ಬಾಯಿಗಿಟ್ಟರೆ ಚಿಲ್ಲಿ ಖಾರದನಲ್ಲಿಯೆ ಬೊಂಬಾಯಿ
ಚಯಾಪಚಯ ಹೆಚ್ಚಿಸುವ ಕ್ಯಾಪ್ಸಸಿನ್ನಿನ ಕೈವಾಡ
ತಿಂದಿಪ್ಪತ್ತು ನಿಮಿಷಕು ಕ್ಯಾಲೋರಿ ಉರಿಸದೆ ಬಿಡ!

ಚಕ್ಕೆ ಲವಂಗಗಳ ಅವತಾರ ಇನ್ಸುಲಿನ್ನಾ ಸಹಚರ
ಇಳಿಸಬಲ್ಲ ಏನೆಲ್ಲ ಕೆಳೆ ಮಧುಮೇಹ ಎರಡನೆತರ
ಕೊಲೆಸ್ಟರಾಲು ಗ್ಲೂಕೋಸು ಎಲ್ಡಿಎಲ್ಲು ಟ್ರೈಗ್ಲಿಸರೈಡು
ಕುಗ್ಗಿಸೆ ಸಿನಾಮೋನ, ಕ್ಲೋವುಗಳಿದ್ದರೆ ಬಳಸಿಬಿಡು!

ಪುಡಿಯಾಗಿಸಿ ಕರಿಬೇವಿನಸೊಪ್ಪ ಊಟಕುದುರಿಸಪ್ಪ
ಪುಡಿ ಕುಡಿದಾದರೂ ಸರಿ ಎಂಟತ್ತೆಲೆ ದಿನಕೆ ಸಾಕಪ್ಪ
ಕೊಬ್ಬು ವಿಷಕಾರಕಗಳೆಲ್ಲ ಗುಡಿಸುತ ತೂಕಕು ಕಡಿತ
ಕೆಟ್ಟ ಕೊಲೆಸ್ಟರಾಲಿನ ತೀಟೆಗು ಬುದ್ಧಿ ಕಲಿಸೊ ದೂತ!

ಹನಿ ಜೇನುತುಪ್ಪವೆ ಕಲೆತು ಸ್ಥೂಲಕಾಯಕು ಒಳಿತು
ಸವರಿ ಮುನ್ನುಗ್ಗಿಸಿ ಬಳಸಿರೆ ಕೂತ ಕೊಬ್ಬಿರೆ ಕೊಳೆತು
ಬೆಳ್ಳಂಬೆಳಗ ಜಾವಕೊಂದು ಚಮಚೆ ಬಿಸಿನೀರ್ಸಹಿತ
ಕುಡಿದರೀ ಮನೆ ವೈದ್ಯ ಮಾಡೆ ತನುಮನಕೆಲ್ಲ ಹಿತ!

ಮಿಲೆಟ್ಟುಗಳ ಸಣ್ಣಕಾಳು ರಾಗಿ ಜೋಳ ನವಣೇ ಸಜ್ಜೆ
ನಾರು ತುಂಬಿ ತುಳುಕುವ ಶ್ರೀಮಂತ ಸಂತತಿಗೆ ಗೆಜ್ಜೆ
ಹೀರಿಬಿಡುತ ಕೊಲೆಸ್ಟರಾಲನೆ ಸ್ರವಿಸುತ ಜೀರ್ಣರಸ
ಬೆರೆಯುತ ಕೊಬ್ಬಿನ ಜತೆ ಕರಗಿಸುವಾ ನಾರೀ ಸರಸ!

ಮೊಳಕೆಯೊಡೆದ ಹಸಿರ್ಕಾಳು ಎಲ್ಲ ವಿಟಮಿನ್ನುಗಳು
ಎಬಿಸೀಯಿ ಕ್ಯಾಲ್ಸಿಯಂ ಕಬ್ಬಿಣ ಪೊಟಾಸಿಯಮ್ಮುಗಳು
ಲವಣ ಪ್ರೋಟೀನು ನಾರುಗಳಂತೆ ಕೊಲೆಸ್ಟರಾಲಿಳಿತಕೆ
ಕಾರ್ಬೊಹೈಡ್ರೇಟಾಗಿ ಜೀರ್ಣ ರಕ್ತಾಸಕ್ಕರೆ ನೇರಾಗಲಿಕೆ!

ಸಾಸಿವೆ ಕಾಳಿನ ಎಣ್ಣೆಗಿದೆ ತುಸುವೆ ಸಂತೃಪ್ತಿತ ಕೊಬ್ಬು
ಜತೆಗೆಷ್ಟೋ ತರಹ ಆಮ್ಲಗಳ ಜತೆ ಸೇರಿ ಕಥೆ ತಬ್ಬಿಬ್ಬು
ಅತ್ಯಾಗತ್ಯ ವಿಟಮಿನ್ನು ಆಂಟಿ ಆಕ್ಸಿಡೆಂಟುಗಳ ಪಡೆಯ
ಕುಗ್ಗಿಸಿ ಕೊಲೆಸ್ಟರಾಲಿನ ಮಟ್ಟ ಭೇಷಾಗುವ ಹೃದಯ!

ಅರಿಶಿನ ಪುಡಿ ಅರಿಶಿನ ಕೊನೆ ಮನೆ ಮನಗಳ ಮದ್ದ
ಕಿರುಸಾಂದ್ರ ಲಿಪೊ ಪ್ರೋಟೀನುಗಳ ಕುಗ್ಗಿಸೆ ಸಮೃದ್ದ
ಹೆಚ್ಚಿಸಿ ರಕ್ತ ಪರಿಚಲನೆ ತಡೆಯುತ್ತ ಗಡ್ಡೆ ಕಟ್ಟೊ ಮತ್ತ
ತಡೆಯಬಲ್ಲ ಶಕ್ತ ಆಗುವ ಮೊದಲೆ ಹೃದಯಾಘಾತ!

ಹೀಗೆ ಹಿತ್ತಲ ಗಿಡ ಮದ್ದಲ್ಲ ಮೂಗು ಮುರಿದರೆ ಭಾರ
ನಮ್ಮ ಮೂಗನು ನಾವೆ ಕಳೆದುಕೊಳ್ಳುವ ಭೀತಿ ತೀರ
ಶಾಸ್ತ್ರವೊ ಸಂಪ್ರದಾಯವೊ ಪಾಲಿಸಿರೆ ನಮ್ಮಾಹಾರ
ಸಹಜದಲೆ ಗುಣವೆ ತನುಮನ ಚಿಂತೆಗಿಲ್ಲೆ ಪರಿಹಾರ!

– ನಾಗೇಶ ಮೈಸೂರು

ಸರಣಿ: Nagesha mysore, SingaporeMasaala Poem
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
May 31, 2013 – 9:27am

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s