ಹರಿಹರಪುರ ಶ್ರೀಧರರ ಲೇಖನಮಾಲೆ ಪ್ರೇರೇಪಿಸಿದ ವೇದ, ವರ್ಣ, ಜಾತಿಗಳ ಚಿಂತನೆಯ ನಡುವೆ ತಟ್ಟನೆ ಉದಿಸಿತೊಂದು ಪ್ರಶ್ನೆ – ಈಗಲೂ ವರ್ಣಗಳಿವೆಯೆ? ಇದ್ದರೆ ಎಲ್ಲಡಗಿವೆ, ಹೇಗಿವೆ ?ಎಂದು. ಉತ್ತರ ಹುಡುಕುತ್ತ ಕವನ ರೂಪ ತಳೆದಾಗ ಬಂದ ಭಾವ ಲಹರಿ ಇದು. ಬರಿ ನನ್ನ ಅನಿಸಿಕೆಯಷ್ಟೆ ಆದಕಾರಣ, ಇದಕ್ಕೆ ಯಾವ ಆಧಾರವನ್ನು ಕೊಡಲಾರೆ – ಬಹುಶಃ ನನ್ನ ಕಾವ್ಯದ ಸ್ವಗತ ಎನ್ನುವ 🙂 – ನಾಗೇಶ ಮೈಸೂರು, ಸಿಂಗಪುರದಿಂದ.
ಗುಂಪಿನೊಳಗವಿತಿದೆಯೆ ವರ್ಣ?
________________________
ವೇದಕಾಲದಲಿತ್ತಂತೆ ವರ್ಣ ನಾಕೆ ನಾಕು
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರ ಸರಕು
ವೃತ್ತಿ ಪ್ರವೃತ್ತಿಗೆ ಅವರವರಿಡಿದಾ ಬದುಕು
ಸರತಿ ಕಳೆಯೆ ಒಂದೆ ಸೂರಲಡಿಗೆ ಬೆಳಕು!
ಈ ಕಾಲಕೂ ವರ್ಣ ನಿಜಕು ನಾಕೆ ನಾಕು
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರ ಸರಕು
ಅವಿತುಬಿಟ್ಟಿದೆಯಲ್ಲಾ ಹುಡುಕಲೆ ಬೇಕಿತ್ತು
ವೇದಾಧ್ಯಯನ ಗ್ರಂಥ ಹೊತ್ತಗೆಯನ್ಹೊತ್ತು!
ಹುಡುಕಿದರು ತಿಡುಕಿದರು ಸಿಗದ ಸಂಪತ್ತು
ಈ ಜನಮನದ ನಡೆ ನುಡಿ ತೀರಾ ಬೇರಿತ್ತು
ನಂಬಲಾಗದ ವಸ್ತು ನಿಜವೆಂದು ನುಡಿದಿತ್ತು
ವಾಸ್ತವದಿ ನೋಡಲೆ ಬರಿ ಗೊಂದಲ ಸುಸ್ತು!
ಕಂಡಿದ್ದೆಲ್ಲವು ಒಂದೆ ನೂರೆಂಟು ಜಾತಿ ಮತ
ಎಲ್ಲಿಹವೊ ಆ ಯುಗವರ್ಣ ವೇದ ಸಿದ್ದಾಂತ
ಕುಲಸಂಕುಲ ಸಕಲ ಅನುಕೂಲಾನುಕೂಲ
ಹೆಸರಿಗೊಂದೊಂದೊಂದು ಪಂಗಡದಾಬಾಲ!
ಅಂತು ಕೊನೆಗೊಂದು ದಿನ ಹುಡುಕೆ ಸಫಲ
ಬಚ್ಚಿಟ್ಟುಕೊಂಡ ವರ್ಣಗಳೆಲ್ಲ ಬಟಾ ಬಯಲ
ಪ್ರತಿ ಜಾತಿ ಪಂಗಡಗಳೊಳಗೇ ಸೇರಿ ಬೆತ್ತಲೆ
ಗುಂಪೊಳಗೇ ವರ್ಣಗಳ ಮಾಡಿಟ್ಟಿತ್ತೇ ಕತ್ತಲೆ!
ಕಡೆಗಾಯ್ತೆ ಸಮಾಧಾನ ವರ್ಣವಿದೆ ಜೀವಿತ
ಸರಿಯೊ ತಪ್ಪೋ ಹೊದ್ದ ಛಾದರದ ದುರಿತ
ಜಾತಿ ಮತ ಪಂಗಡಾ ಸುತ್ತಿಟ್ಟು ಮೈ ಮುರಿತ
ಹೂತು ಹೋಗೆಲ್ಲ ಬರಲಾಗದೆ ಚಡಪಡಿಸುತ!
ಕಾದಿದ್ದು ಸಾಕು ಬರನಲ್ಲಾ ಆ ಯುಗಪುರುಷ
ನಮಗೆ ನಾವೇ ಮೆಟ್ಟಿ ತೋರಬೇಕಿದೆ ಪೌರುಷ
ಒಳಗವಿತ ವರ್ಣಗಳನೆಲ್ಲ ಕೊಡವಿ ಮೇಲಿಟ್ಟು
ತಪ್ಪಿಸಬೇಕಿದೆ ಜಾತಿ ಮತ ಪಂಗಡ ನೆಲೆಗಟ್ಟು!
– ನಾಗೇಶ ಮೈಸೂರು
ಸರಣಿ: Nagesha mysoreSingapore,ಗುಂಪಿನೊಳಗವಿತಿದೆಯೆ ವರ್ಣ?, ಗುಂಪೊಳಗೆ ಗೋವಿಂದ ವರ್ಣಗಳ ಕಂದ, Poems
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
June 8, 2013 – 12:29pm