00064. ಗಂಗಾವತಾರಣ (ಗಂಗಾ + ಅವತಾರ + ರಣ)

Background : Requested by Mr. Partha

ನಾಗೇಶಮೈಸೂರು ಅವರಿಂದ ಕವನದ ನಿರೀಕ್ಷೆಯಲ್ಲಿ

ಸಂಪದಿಗರೆ ಇಲ್ಲಿ ಮೂರು ವಿಬಿನ್ನ ಚಿತ್ರಗಳಿವೆ
ಎರಡು ಬೇರೆ ಬೇರೆ ಸನ್ನಿವೇಶಗಳು
ಸಾಂದಾರ್ಭಿಕವಾಗಿ ನಾಗೇಶಮೈಸೂರು ಇವರನ್ನು ಕವನ ರಚಿಸಲು ಕೋರಿದ್ದೇನೆ
ಅಥವ ಅಹ್ವಾನವನ್ನು ಬೇರೆ ಯಾರೆ ಸ್ವೀಕರಿಸಿದರು ಸಂತಸ,
ಬಹುಮಾನ : ಸಂಪದಿಗರ ಚಪ್ಪಾಳೆ, ಮೆಚ್ಚುಗೆ

June 20, 2013 – 4:34pmpartha1059 (Partha sir invitation to write poems)(ಪೂರ್ಣ ಹೆಸರು : ಪಾರ್ಥಸಾರಥಿ)

ಪಾರ್ಥಾ ಸಾರ್, ಇದೋ ಇಲ್ಲಿದೆ ನನ್ನ
Submitted by nageshamysore on June 20, 2013 – 10:05pm
ಪಾರ್ಥಾ ಸಾರ್, ಇದೋ ಇಲ್ಲಿದೆ ನನ್ನ ವಿನಮ್ರ ಯತ್ನ – ನಿಮಗೆ ಹಾಗೂ ಸಂಪದರಿಗೆ ಇಷ್ಟವಾದೀತೆಂದು ಭಾವಿಸುತ್ತೇನೆ (ಗಂಗೆಯ ದೃಷ್ಟಿಕೋನದಿಂದ ಬರೆದಿದ್ದು). ಹೀಗೊಂದು ಸ್ಪೂರ್ತಿಗೆ ಕಾರಣರಾದ ನಿಮಗೆ, ನಿಮ್ಮ ಚಿತ್ರಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
(ಅಂದ ಹಾಗೆ ನಿಮ್ಮ ಮೊದಲ ಚಿತ್ರದ ಸ್ಪೂರ್ತಿಯಲ್ಲಿ ನೈಜ್ಯ ಗಂಗಾವತರಣದ ಸುತ್ತ ಪ್ರತ್ಯೇಕವಾಗೊಂದು ಕವನ ಬರೆಯಲು ಪ್ರೇರೇಪಣೆಯಾಗುತ್ತಿದೆ – ತಮಗೆ ಅಭ್ಯಂತರವಿಲ್ಲವೆಂದು ಭಾವಿಸುವೆ)

– ನಾಗೇಶ ಮೈಸೂರು

01/03 ಗಂಗಾವತಾರಣ (ಗಂಗಾ + ಅವತಾರ + ರಣ)
——————————————————

ಬಾರೆನೆಂದತ್ತೆ ನಾನಂದು ಇಳೆಗೆ
ಸಿಡುಕಿ ಭೋರಿಟ್ಟೆ ರೊಚ್ಚು ಭುವಿಗೆ
ಹೆಡೆಮುರಿಕಟ್ಟಿ ಮುಡಿಗೆ ಮುಡಿದೆ
ಯಾರೋ ಭಗೀರಥನಿಗಿತ್ತೆ ಬಿಡದೆ!

ಒಲ್ಲದವಳನ್ನೆತ್ತಿ ಸಲ್ಲಾಪವೆಲ್ಲ ಬತ್ತೆ
ಏಕಾಕಿ ನರಳಿದರು ನೀನಿಲ್ಲಾ ಪತ್ತೆ
ಗಂಡಸಿಗೇಕಿರಬೇಕೋ ಗೌರಿ ದುಃಖ
ಯಾರು ಕೇಳಿದರಿಲ್ಲೆನ್ನಾ ಕಷ್ಟಸುಖ!

ಬಿಟ್ಟೆನ್ನ ಪಾಪನಾಶಿನಿಯ ಪಟ್ಟ ಕಟ್ಟಿ
ಯಾರದೆಲ್ಲ ಪಾಪವೆನ್ನ ಕೊರಳಸುತ್ತಿ
ನಿಷ್ಕರುಣೆಯಲ್ಲೆ ಮಾಡಿ ನೀರಪಾಲು
ಮೈಲಿಗೆ ಬೇಡೆನ್ನೆ ನ್ಯಾಯವೆ ಹೇಳು!

ಹಾಳಾಗಲಿ ತಿರುಗಿ ಒಯ್ಯಲೂ ಒಲ್ಲೆ
ಜಗವಿರುವವರೆಗೆ ನಾನಿರಬೇಕೇನಿಲ್ಲೆ?
ಲಯದೊಡೆಯ ತಾನೆ ನಿ ಉಕ್ಕಿಸಯ್ಯ
ತರಿಸಿಬಿಡು ತುಸು ಮುನ್ನವೆ ಪ್ರಳಯ!

ಸೃಷ್ಟಿ ಸ್ಥಿತಿಗಳೆಲ್ಲ ಕಳೆದಾಯ್ತು ಕಾಲ
ಭುವಿಯೆಂದೊ ಲಯವಾಗಬೇಕಿತ್ತಲ್ಲ
ನೀ ಮಾಡದೆಲೆ ಕರ್ತವ್ಯದಾ ಪ್ರಳಯ
ಸುಮ್ಮ ತಪ ಕೂಡೆ ಸರಿಯೆ ಶಿವಯ್ಯಾ?

ಮಿತಿ ಮೀರಿ ಹೋಯ್ತೊ ಮನ ತಾಳ್ಮೆ
ಬರಿ ಹೆಸರಷ್ಟೆ ಗಂಗಾಧರನಾ ಹಿರಿಮೆ
ಮೌನದೆ ಸಂಭಾಳಿಸಲೆಂತಾ ವಿವಾಹ
ಮರೆತುಬಿಟ್ಟೆಯಾ ನನದೂ ಪ್ರವಾಹ!

ಕೊನೆಗೂ ಅರಿಯದಾದೆ ಗಂಗೆ ದುಃಖ
ನಾ ಅತ್ತರೂ ಕಾಣದ ನೀರೆ ನನ್ನ ಸಖ
ಮೇರೆ ಮೀರಿ ಸಂಕಟ ನೆರೆಯಾ ರೂಪ
ಈ ನೆಲದೆ ನೀ ಲಯ ನಿನಗಿತ್ತ ಶಾಪ!

– ನಾಗೇಶ ಮೈಸೂರು

Feedback in sampada:
Submitted by partha1059 on June 20, 2013 – 10:29pm
ನಾಗೇಶರೆ
ಅದ್ಭುತವಾಗಿದೆ ನಿಮ್ಮ ಕವನ, ಗಂಗೆಯ ದೃಷ್ಟಿಯಲ್ಲಿನ ಈ ಪ್ರಳಯ ಅವಳ ಭಾವ ದುಃಖ ದುಮ್ಮಾನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಕೆಲವು ಸಾಲುಗಳಂತು ನಿಮಗೆ ಹೇಗೆ ಸ್ಪುರಿಸುತ್ತದೆ ಎನ್ನುವ ಅಚ್ಚರಿ ಮೂಡಿಸುತ್ತದೆ
ಹೆಡೆಮುರಿಕಟ್ಟಿ ಮುಡಿಗೆ ಮುಡಿದೆ
ಯಾರೋ ಭಗೀರಥನಿಗಿತ್ತೆ ಬಿಡದೆ!

ಬಿಟ್ಟೆನ್ನ ಪಾಪನಾಶಿನಿಯ ಪಟ್ಟ ಕಟ್ಟಿ
ಯಾರದೆಲ್ಲ ಪಾಪವೆನ್ನ ಕೊರಳಸುತ್ತಿ

ಕೊನೆಗೂ ಅರಿಯದಾದೆ ಗಂಗೆ ದುಃಖ
ನಾ ಅತ್ತರೂ ಕಾಣದ ನೀರೆ ನನ್ನ ಸಖ
ಮೇರೆ ಮೀರಿ ಸಂಕಟ ನೆರೆಯಾ ರೂಪ
ಈ ನೆಲದೆ ನೀ ಲಯ ನಿನಗಿತ್ತ ಶಾಪ!

ಹಾಗೆ ನಿಮಗೆ ಅನುಕೂಲ/ಇಷ್ಟವಾಗಬಹುದು ಎಂದು ಒಂದು ಲಿಂಕ್ ಕೊಡುತ್ತಿದ್ದೇನೆ
http://padyapaana.com/

Submitted by nageshamysore on June 21, 2013 – 12:08am
ಪಾರ್ಥರೆ ನಿಮದೆ ತಾನೆ ಸ್ಪೂರ್ತಿ
ಚೆನ್ನಿದ್ದರೆ ನಿಮಗಲ್ಲವೆ ಕೀರ್ತಿ
ಚಿತ್ತಾರದಲೆ ನೀವಿರಿಸಿದಿರಿ ಚಿತ್ತ
ನಾಕುಸಾಲಷ್ಟೆ ಹೂವ್ವಾಗಿ ಕೆಳಬಿತ್ತ!

:-)- ನಾಗೇಶ ಮೈಸೂರು, ಸಿಂಗಾಪುರದಿಂದ

Submitted by makara on June 21, 2013 – 9:59pm
@ಸಪ್ತಗಿರಿಗಳೇ ಮತ್ತು @ನಾಗೇಶರೇ,
ಎರಡೂ ಕಾವ್ಯಗಳೂ ತಮ್ಮದೇ ಶೈಲಿಯಲ್ಲಿ ಸುಂದರವಾಗಿ ಮೂಢಿ ಬಂದಿವೆ. ಇಬ್ಬರಿಗೂ ಅಭಿನಂದನೆಗಳು.
@ಪಾರ್ಥ ಸರ್,
ನನಗೆ ಕಾವ್ಯ ಬರೆಯಲು ಬಾರದು; ಆದ್ದರಿಂದ ಒಂದು ಜೋಕ್; ಬೇಸರಿಸದಿದ್ದರೆ!
“ಅಂದು ತಲೆಯ ಮೇಲೆ ಏರಿಸಿಕೊಂಡಿದ್ದರಿಂದ, ಇಂದು ಕೊಚ್ಚಿಕೊಂಡು ಹೋಗುವಂತಾಯ್ತು ಶಿವನ ಪರಿಸ್ಥಿತಿ, ಪಾಪ!”

Submitted by nageshamysore on June 21, 2013 – 11:23pm
ಪಾರ್ಥರೆ, ಸಪ್ತಗಿರಿಯವರ ಮಾದರಿಯಲ್ಲಿ, ತುಸು ಚಿತ್ರಗಳಿಗೆ ವಸ್ತುನಿಷ್ಟವಾಗಿರುವಂತೆ ಮೂರಕ್ಕೂ ಒಂದೊಂದು ಪ್ಯಾರ ಹೊಸೆದು ಜತೆಗೆ ಸೇರಿಸುತ್ತಿದ್ದೇನೆ 🙂 ಅಂದ ಹಾಗೆ ಸಪ್ತಗಿರಿಗಳೆ ನಿಮ್ಮ ಕವನ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿವೆ – ಅದನ್ನ ಬರಿ ಗೀಚಿದ್ದು ಅನ್ನುತ್ತಿರಲ್ಲ..:-) ಮತ್ತು ಶ್ರೀಧರರಿಗೂ ಅಭಿನಂದನೆಗಳು (ನಾವು ಸಾಲುಸಾಲು ಹೊಸೆದಿದ್ದನ್ನ ಒಂದೆ ಸಾಲಲ್ಲಿ ಮುಗಿಸಿದ್ದಕ್ಕೆ!) – ನಾಗೇಶ ಮೈಸೂರು, ಸಿಂಗಪುರದಿಂದ.

02/03: ರುದ್ರಾವೇಷ, ಗಂಗಾ ರೋಷವೆ?ಕೂತೆ ನಿರ್ಲಿಪ್ತನಂತೆ…!
—————————————————————-

01. ರುದ್ರಾವೇಷ!
ಅಂದಾಗಿ ರುದ್ರಾದಿರುದ್ರಾ ವೀರಭದ್ರ ಹಮ್ಮಿನಲಿ
ರೊಚ್ಚಿನಲಿಳಿದವಳಾವೇಶವ ಜುಟ್ಟಲೇ ತಡೆದ ಕಲಿ
ಅಚ್ಚರಿಗೆ ನೋಡೆ ನಂದಿಶ ಕೈ ಸೊಂಟಕಿಟ್ಟೆ ಗೌರೀಶ
ಸಲಿಲವಾಗ್ಹರಿಸೆ ಗಂಗೆಯ ಭಗೀರಥನ ಮನದಾಶ!

02. ಗಂಗಾ ರೋಷವೆ?
ಅರ್ಧನಾರೀಶ್ವರನೆನೆ ಮುಳುಗಿಸಿ ಮರಳಲರ್ಧ
ತಾ ಮಾತ್ರ ತಲೆಯೆತ್ತಿ ಬೀಗಿಹಳೆ ಮುಡಿಯಿಂದ
ಕಟ್ಟಿಟ್ಟರೂ ಜಟೆಯಲಿ ಕಟ್ಟೊಡೆಸಿದ ವೀರಾವೇಶ
ಅಚಲ ಶಿಲೆಯಾಗಿ ಕೂರಿಸಿಬಿಟ್ಟಿತೆ ಗಂಗಾರೋಷ!

03. ಕೂತೆ ನಿರ್ಲಿಪ್ತನಂತೆ…!
ಕೂತುಬಿಟ್ಟನೇಕೊ ಶಿವ ನಿರ್ಲಿಪ್ತ ಅರೆ ನಿಮಿಲಿತ
ಕಂಡೂ ಕಾಣದಂತೆ ಭಾಗೀರಥಿ ಮುನಿಸ ದುರಿತ
ಇದ್ದರು ಕೋಪ ತ್ರಿನೇತ್ರ ತೆರೆಯಲ್ಹೇಗೆ ಹಣೆಗಣ್ಣ
ಜಟೆ ಕೂತವಳ ಮೇಲದನು ಬಿಡಲ್ಹೇಗೆ ಮುಕ್ಕಣ್ಣ!

ಪಾರ್ಥರೆ, ಕ್ಷಮಿಸಿ ನಿಮ್ಮ
Submitted by nageshamysore on June 22, 2013 – 10:41am
ಪಾರ್ಥರೆ, ಕ್ಷಮಿಸಿ ನಿಮ್ಮ ಚಿತ್ರಗಳಿನ್ನು ನನ್ನನ್ನು ಕಾಡುವುದನ್ನು ನಿಲ್ಲಿಸಿಲ್ಲ – ಅದಕ್ಕೆ ಮತ್ತೊಂದು ಅವೃತ್ತಿಯನ್ನು ಸೇರಿಸಿಬಿಡುತ್ತಿದ್ದೇನೆ – ಈಗ ವೀಕ್ಷಕನೊಬ್ಬನ ದೃಷ್ಟಿಕೋನದಿಂದ 🙂

03/03. ಕಾದು ನವ ಭಗೀರತರ…!
———————————-2

ಇತಿಹಾಸವೊ ಪುರಾಣವೊ
ಛಲ ಬಿಡದ ಭಗೀರತ
ಹಲುಬಿಟ್ಟು ಬಯಸಿದ ಗಂಗೆ;
ನೂತನ ಭುವಿಯನುಭವಕೆ
ಹಿಗ್ಗಿನಿಂದೊರಟವಳ ರಣೋತ್ಸಾಹ
ರಭಸಾವೇಶ ನಿಯಂತ್ರಣಕೆ
ಬಿಚ್ಚಬೇಕಾಯ್ತೆ ಮುಡಿ ಪರಶಿವ –
ಹರಿಯಬಿಟ್ಟವಳ ಮೆಲುವಾಗಿ
ಕಟ್ಟಬೇಕಾಯ್ತೆ ಜಟೆಯಲಿ
ಲೋಕಹಿತ ಭಾವ!

ಇಂದಿಲ್ಲಾರಿಲ್ಲ ಭಗೀರತರು
ಕೇಳಲಾರು ಜನಹಿತ ಸ್ವಗತ..
ನೋಡರು ನೆರೆ ಪ್ರವಾಹ ಪ್ರಕೋಪ
ಬರಗಾಲದ ಶಾಪ ಬಿರುಕು ನೆಲ;
ಕಾದು ಕುಳಿತು ಕೋರಿದವನ
ಬೇಸತ್ತು ಕುಸಿದನೆ ಗಂಗಾಧರ
ಹತಾಶೆಗಿತ್ತನೆ ಅಣತಿ
ಕಡಿವಾಣವಿಡದೆ ಜಟೆಯೊಳಗೆ
ಕಣ್ಮುಚ್ಚಿ ನೋಡುತ ಪೂರ್ಣಾಹುತಿ?
ಹೀಗೊಂದೆಚ್ಚರಿಸೊ ಪ್ರಯೋಗವೆ
ಜಗ ಲಯವಾಗಿಸುವ ರೀತಿ..?
ಹಂತ ಹಂತವಾಗಿ
ನುಂಗುತ ಸೃಷ್ಟಿ, ಸ್ಠಿತಿ
ಪ್ರಕೃತಿ
ಮಿಕ್ಕುಳಿಸೊ ಪ್ರಳಯ
ಘೋರ ವಾಸ್ತವ ಲಯಕೆ
ಕೂತಲ್ಲೆ ಶಿವನೂ ಅಸಹಾಯಕ!

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ನಾಗೇಶರೆ ಅದ್ಭುತವಾಗಿ ಕವನ ಹಣೆಯುವ
Submitted by partha1059 on June 24, 2013 – 12:53am
ನಾಗೇಶರೆ ಅದ್ಭುತವಾಗಿ ಕವನ ಹಣೆಯುವ ನೀವು ಕ್ಷಮಿಸಿ ಅನ್ನುವದೇಕೆ, ನೀವಾಗೆ ನಮಗೆ ಕವನದ ರಸದೌತಣ ನೀಡುವಾಗ ಸುಮ್ಮನೆ ಕೇಳುವದಷ್ಟೆ (ಓದುವದಷ್ಟೆ) ನಮ್ಮ ಕೆಲಸ . ಇಲ್ಲಿ ಪ್ರಾಸದ ಪ್ರಮೇಯವೆ ಇಲ್ಲದೆ ಕವನ ಹೇಗೆ ಮೂಡಿದೆ ಅಲ್ಲವೆ :-))

ಪಾರ್ಥ ಸಾರ್ ನೋಡಿ, ನನ್ನಿಂದ ನನಗೇ
Submitted by nageshamysore on June 24, 2013 – 1:02am
ಪಾರ್ಥ ಸಾರ್ ನೋಡಿ, ನನ್ನಿಂದ ನನಗೇ ಅರಿವಾಗದ ಹಾಗೆ ಪ್ರಾಸವಿಲ್ಲದೆಯೂ ಬರೆಸಿಬಿಟ್ಟಿರಿ – ಮೊದಲೆ ಹೇಳಿದ ಹಾಗೆ ಕ್ರೆಡಿಟ್ಟೆಲ್ಲಾ ನಿಮಗೆ 🙂 – ನಾಗೇಶ ಮೈಸೂರು

Submitted by ಗಣೇಶ on June 24, 2013 – 2:24am
ಭೋರ್ಗರೆದು ಧುಮುಕಿದ ಗಂಗೆಯನ್ನು ಅಂದು ಶಿವ(ಪ್ರಕೃತಿ) ತನ್ನ ಜಟೆ(ಮರ ಗಿಡ)ಯಿಂದ ಬಂಧಿಸಿ, ನಿದಾನಕ್ಕೆ ಹರಿಯಲು ಬಿಟ್ಟದ್ದು.
ಈಗ ಗಂಗೆಯ ಹರಿವಿನ ಉದ್ದಕ್ಕೂ ಜಟೆಯನ್ನು ಬೋಳಿಸಿ, ಅಂಗಡಿ,ಹೋಟಲ್..ಬೆಳೆಸಿ ಗಂಗೆಗೇ ಸವಾಲ್ ಹಾಕಿದ್ದಾರೆ. ಎತ್ತರೆತ್ತರ ಕಾಂಕ್ರಿಟ್ ಶಿವನನ್ನು ನಿರ್ಮಿಸಿ “ಒಂ ನಮಃ ಶಿವಾಯ” ಎನ್ನುವ ಬದಲು ಮುಗಿಲೆತ್ತರಕ್ಕೆ ಮರವನ್ನು ಬೆಳೆಯಲು ಬಿಟ್ಟು ಅದರಲ್ಲಿ ಶಿವನನ್ನು ಕಾಣಬೇಕು.-ಅಂ.ಭಂ.ಸ್ವಾಮಿ.

Submitted by Vinutha B K on July 10, 2013 – 10:10pm
ಪಾರ್ಥ ಹಾಗೂ ನಾಗೇಶ್ ರವರೆ ತುಂಬಾ ದಿನಗಳಿಂದ ಇದಕ್ಕೆ ಪ್ರತಿಕ್ರಿಯೆ ಬರೆಯಬೇಕೆಂದುಕೊಂಡವಳು ,ಸಮಯದ ಅಭಾವದಿಂದ ಸುಮ್ಮನಾಗಿದ್ದೆ , ಸಂದರ್ಭಕ್ಕೆ ತಕ್ಕ ಹಾಗೆ ಇದ್ದ ಕೋರಿಕೆಗೆ ಒಂದರ ನಂತರ ಇನ್ನೊಂದು ಕವನ ಬರೆದ ನಾಗೇಶ್ ರವರೆ ಧನ್ಯವಾದ .

Submitted by nageshamysore on July 10, 2013 – 11:10pm
ನಮಸ್ಕಾರ ವಿನುತರವರೆ, ಇದರ ನಿಜವಾದ ಕ್ರೆಡಿಟ್ಟು ಪಾರ್ಥರವರದ್ದು. ನಾನು ಬರಿ ‘ಬಿಟ್ಟ ಪದ ತುಂಬಿಸಿದೆ’ ಅಷ್ಟೆ 🙂 ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು – ನಾಗೇಶ ಮೈಸೂರು, ಸಿಂಗಾಪುರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s