ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ 🙂
(ಕಾವ್ಯ ಹಾಸ್ಯಮಯವಾಗಿದ್ದರೂ ಸಂದೇಶ ಸೀರಿಯಸ್ಸಾಗಿದೆಯೆಂದು ಕೊಂಡಿದ್ದೇನೆ! ಹಾಗೆಯೆ ಈ ನಿರ್ಧಾರಕ್ಕೆ ತಲುಪಿದವರೆಲ್ಲ ಆ ಮೂಲಕ ಉಳಿಸಿದ ಹಣವನ್ನು ‘ಸಂಪದ ‘ ಫಂಡಿಗೆ ಕಟ್ಟಿಬಿಡಿ – ಸಂಪದದ ಏಳಿಗೆಗೆ ಉಪಯೋಗಿಸಲು ಸಾಧ್ಯವಾಗುವಂತೆ – ಅ ಚಾಳಿ ಬಿಟ್ಟಂತೆಯು ಆಯ್ತು, ಸಮಾಜ ಸೇವೆಯೂ ಆಯ್ತು 🙂 – ನಾಗೇಶ ಮೈಸೂರು
ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..)
—————————————————–
ಬಿಟ್ಟುಬಿಡಿ ಸಿಗರೇಟು ಕೊಟ್ಟೇ ಎದುರೇಟು
ಅಪಾಯದ ಬಿಸ್ಕೆಟ್ಟು ಇನ್ನು ಯಾಕಿಷ್ಟು ಲೇಟು ?
ಅಂಟಿಕೊಂಡಷ್ಟು ಬೆನ್ನು ಬಿಡದ ಭೇತಾಳ
ಸತಿ ಸುತ ಪುತ್ರಿ ಕೈಲುಗಿಸಿಕೊಳ್ಳೊ ಮನೆ ಹಾಳ!
ಗಾಂಧಿ ಹೇಳಿದರೆಂದು ‘ಕೆಟ್ಟದನೆಲ್ಲಾ ಸುಟ್ಟಾಕಿ’
ಹೀಗೆ ಸುಡುವುದು ಸರಿಯೆ ಸಿಗರೇಟಿನ ಪಟಾಕಿ?
ಅವರೆಂದರು ಸುಡು – ಬರಿ ಕೆಟ್ಟ ವಸ್ತುಗಳಷ್ಟೆ
ಸಿಗರೇಟೇನೊ ಕೆಟ್ಟದು ಸರಿ, ದೇಹಕೇಕೆ ಜಾಗಟೆ!
ಪ್ರಾಯ ಹುಡುಕಾಡುತ ಪ್ರೀತಿ ಏನೆಲ್ಲ ಪಜೀತಿ
ಸಿಗುವತನಕ ಕಾಯಲು ಬೇಕೊಬ್ಬ ಜತೆಗಾತಿ
ಅವಳು ಸಿಕ್ಕಲಿ ಇವಳನು ಬಿಡುವೆನೆಂದ ಸರಕ
ಸಿಕ್ಕಮೇಲಿಬ್ಬರು ಹೆಂಡಿರು, ತೋರರಲ್ಲಾ ಮರುಕ!
ಚಿಕ್ಕ ವಯಸಲಿ ಕದ್ದೂ ಕದ್ದೂ ಸೇದುವ ಚಟಕೆ
ಮೊಳೆತಾಗ ಕಾಸು ಮೀಸೆ ಬಯಲಾಗೆ ಹಠಕೆ
ಅವರಿವರೆಂದರೆಂದು ಬಿಟ್ಟು ಮತ್ತೆ ಹಿಡಿದ ಏಡಿ
ನೀವೆ ಬಿಟ್ಟುಬಿಡಿ ಯಾರೇಕೆ ಹೇಳಬೇಕು ನೋಡಿ!
ಹೇಗೊ ಏನೊ ಸಹವಾಸ ಕಲಿತಿದ್ದಾಯ್ತು ನರಕ
ಸ್ನೇಹದ ಗಂಟೆಗಳೆಲ್ಲ ಉರುಳಿದ್ದು ಕತ್ತಲೆ ಬೆಳಕ
ಯುವ ದೇಹವಲ್ಲ ತಡೆಯದಲ್ಲ ಪ್ರಾಯದ ಕಾಯ
ಅಲ್ಲಸಲ್ಲದ ರೋಗಕೆ ಮೊದಲೆ ಬಿಟ್ಟುಬಿಡೆಯಾ?
ಬಿಟ್ಟುಬಿಡಿ ಸಿಗರೇಟು ಹೇಗೂ ಬಲು ತುಟ್ಟಿಯ ರೇಟು
ಈಗಿನ ಹೈ ಟೆಕ್ಕಾಸ್ಪತ್ರೆಯ ಚಿಕಿತ್ಸೆಗಳೆ ಎಡವಟ್ಟು
ಕೆಮ್ಮು ಜ್ವರ ಟೆಸ್ಟಿಗೆ ಜೀವ ಹಾರಿ ಸರ್ಜರಿಗಿನ್ನು ಭರ್ಜರಿ
ಜತೆ ಸೇರಿದರೆ ಧೂಮಪಾನ ದಿನ ಆಸ್ಪತ್ರೆಯ ಹಾಜರಿ!
ಹ್ಯಾಬಿಟ್ಟು ಸ್ಟೈಲು ಸ್ಟ್ರೆಸ್ಸು ನೆಪವೆಲ್ಲ ಪಕ್ಕಕಿಡೆ ಸಮಯ
ನೆಗೆದುಬಿದ್ದರು ಹೂಳಲು ಉಳಿತಾಯಕಿಳಿಯೊ ಭಯ
ನಾಳೆ ಗೀಳೆ ಬೇಡ ನೆನೆದುಕೊಂಡೆ ಸಂಸಾರದ ಮಂದಿ
ಬಿಟ್ಟುಬಿಡಿ ಈಗಿನಿಂದೆ ಸಿಗರೇಟ ಸಹವಾಸವಾಗಿ ಶುದ್ಧಿ!
– ನಾಗೇಶ ಮೈಸೂರು
ಸರಣಿ: ಬಿಟ್ಟುಬಿಡಿ ಸಿಗರೇಟು…!, ನಾಗೇಶ ಮೈಸೂರು, Kannada Poems, Singapore
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
July 5, 2013 – 11:32pm