00070. ಹೆಣ್ಮನದ ಹವಾಗುಣ….!

ಕವಿ ಭಾವ: ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು ಕಾಣುತ್ತಿರುತ್ತವೆ. ಪರಿಸರದಲ್ಲಿನ ಹವಾಮಾನದಂತೆ ಊಹಿಸಲಾಗದ, ತಟ್ಟನೆ ಬದಲಾಗುವ ಗುಣಾವಗುಣಗಳ ಸಂಕಲನವನ್ನೆತ್ತಿ ಕಟ್ಟಿಡುವ ಯತ್ನ ಈ ಕವನದಲ್ಲಿದೆ.

ಹೆಣ್ಮನದ ಹವಾಗುಣ….
_______________________________

ಹೆಣ್ಮನದ ಹವಾಗುಣ ಮೋಡದ ತರ
ಕವಿದಿರಬಹುದು ವಿಸ್ತಾರ – ಮಳೆಬಾರದೆ ಪೂರ
ಚೀರಾಡಿ ಬಿಡಬಹುದು – ಮುಸಲಾಧಾರೆಯ ವಾರ ||

ಉತ್ಸಾಹದ ಬುಗ್ಗೆ, ಉದ್ವೇಗದ ಸುಗ್ಗಿ ಸರ
ಚಟಪಟ ಅರಳು ಹುರಿದಂತೆ, ಮಾತಾಡಿ ತೀರ
ವರುಷದ ಸರಕೆಲ್ಲ, ಒಂದೆ ದಿನ ಹೊರ ಹಾಕುವವರ ||

ಹುಮ್ಮಸ್ಸು ಕುಗ್ಗೆ, ಕಾರಣವಿರದಿದ್ದರು ಜಡೆ
ಸುಮ್ಮನೆ ಮಾತಾಡದೆ, ಕೂತುಬಿಟ್ಟು ಒಂದೇ ಕಡೆ
ತಿನಿಸಿಗು ಮುನಿಸಿಕೊಂಡು, ಎಣ್ಣೆ ಸೀಗೆ ಹಗೆತನ ಕಾಡೆ ||

ಏನು ಮಾಡದವರ ಮೇಲೆಲ್ಲಾ ಚೀರಾಟ
ಸಣ್ಣ ಪುಟ್ಟ ಕಳ್ಳೆ ಪಿಳ್ಳೆ, ನೆಪಗಳಿಗೆಲ್ಲ ಹೋರಾಟ
ಅತ್ತು ಕರೆದು ಭೋರ್ಗರೆದು ಅಕಟ, ಹೇಳಬಾರದೆ ಸಂಕಟ? ||

ಇದ್ದಕ್ಕಿದ್ದಂತೆ ಪ್ರೀತಿ, ಕರುಣೆ ಪ್ರೇಮ ಧರಿತ್ರಿ
ಊರಿನೆಲ್ಲ ಸಂತಸಗಳ, ಹೊತ್ತು ಸುರಿವಾ ಸೌಮಿತ್ರಿ
ತಿಂಗಳೊಂದರ ಒಪ್ಪತ್ತಿನ, ಅಡಿಗೆಯದೊಂದೆ ದಿನದಲಿ ಖಾತ್ರಿ! ||

ಒಂದಿನ ಸಿಂಗಾರದಲಿ, ರಮಣಿ ರಸಭರಿತ ಖನಿ
ಖಿನ್ನತೆ ಹಲ್ಕಿರಿದಾಗ, ತಲೆಯೂ ಬಾಚದ ದನಿ ರಜನಿ
ಎರಡರ ಮಧ್ಯೆ ಏನೂ, ಮಾಡಲರಿಯದ ಮೊಂಡಿನ ಭಗಿನಿ ||

ಹೆಣ್ಮನವೆ ಹೀಗೆ, ಪ್ರತಿಕ್ಷಣ ಬದಲಾಗುವ ಬಗೆ
ಕಣ್ಣೊಳಗೆ ಕಾಣುವ ಬಗೆ ಕೆಳೆಯೊ, ಹಗೆತನವೊ ಹೇಗೆ ?
ಅರಿವಾಗದ ಚಂಚಲತೆ ಕೂಗೆ, ಬಿಟ್ಟು ಬಿಡದೆ ಮನದೊಳಗೆ !||

____________________________
ನಾಗೇಶ ಮೈಸೂರು
____________________________

ಸರಣಿ: ನಾಗೇಶ ಮೈಸೂರು, ಹೆಣ್ಮನಹವಾಗುಣ,ವಾತಾವರಣ, ಬದಲಾವಣೆ, ಮೂಡುಗಳು, ಶರಧಿ, ಆಳ,ಹೆಣ್ಣಿನ ಮನ, ಭಾವ, ವಾಸ್ತವ, siMgaapura, Nagesha mysore
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
July 7, 2013 – 1:02pm

3 thoughts on “00070. ಹೆಣ್ಮನದ ಹವಾಗುಣ….!”

    1. ನಮಸ್ಕಾರ ಭಾವನರವರೆ 🙂

      ಯಾರೊ ಒಬ್ಬರೆ ಸ್ಪೂರ್ತಿ ಅಂತ ಹೇಳಲು ಕಷ್ಟ. ಹಲವಾರು ಸಂಧರ್ಭ, ಸನ್ನಿವೇಶಗಳಲ್ಲಿ ನೋಡಿದ್ದ ಬೇರೆ ಬೇರೆ ವ್ಯಕ್ತಿತ್ವಗಳ ನಡುವಳಿಕೆ, ಪ್ರತಿಕ್ರಿಯೆ ಒಂದು ರೀತಿ ಸಮಷ್ಟಿಯ ರೂಪದಲ್ಲಿ ಇಲ್ಲಿ ಸೇರಿಕೊಂಡಿವೆ. ಜತೆಗೆ ಒಂದಷ್ಟು ಇತರರ ಅನುಭವದ ಆಧಾರವೂ ಸೇರಿಕೊಂಡಿದೆ. ಇದೆಲ್ಲಕ್ಕೂ ಜತೆಗೆ ‘ಬಹುಶಃ ಇದು ಸಾಮಾನ್ಯವಾಗಿ ಹೆಣ್ಣುಗಳಲ್ಲಿರಬಹುದಾದ ಗುಣಧರ್ಮವೇನೊ’ ಅನ್ನುವ ಊಹೆ, ಅನಿಸಿಕೆಯು ಸೇರಿಕೊಂಡಿದೆ. ಹೀಗಾಗಿ ಒಬ್ಬರೆ ಸ್ಪೂರ್ತಿಯೆನಲು ಬರುವುದಿಲ್ಲ. ಆದರೆ ಒಂದು ಕೂತೂಹಲವಂತೂ ಇದೆ – ಇದು ಬರಿ ಕೇವಲ ನನ್ನ ಅನಿಸಿಕೆಯೆ (ಬರಿಯ ಕವಿ ಲಹರಿ) ಅಥವ ಇದರಲ್ಲಿ ಒಂದಷ್ಟು ತಥ್ಯವಿದೆಯೆ ಎಂದು. ಹಾಗೆಯೆ ಪುರುಷ ದೃಷ್ಟಿಕೋನದಿಂದ ನೋಡಿದ ತಪ್ಪಾದ ಅಥವ ಅಪರಿಪೂರ್ಣ ಗ್ರಹಿಕೆಯೇನೊ ಎಂಬ ಅಳುಕೂ ಇದೆ. ನಿಮಗೇನನಿಸಿತು?

      ಅಂದ ಹಾಗೆ – ನಿಮ್ಮ ಶ್ರಾವಣ ಸುಂದರಿ ಹಾಡಿಗೆ ಹುಡುಕಲು ‘ಸಂಪದ’ ದಲ್ಲೂ ಒಂದು ಕೋರಿಕೆ ಹಾಕಿದ್ದೆ. ಸುಮಾರು ಜನ ನೋಡಿದ್ದರೂ, ಇನ್ನು ಯಾರೂ ಅದನ್ನು ಹೊಂದಿರುವ ಕುರಿತು ಹೇಳಿಲ್ಲ. ಬಲು ಅಪರೂಪದ ಹಾಡೆಂದು ತೋರುತ್ತದೆ. ( http://www.sampada.net/forum/%E0%B2%88-%E0%B2%AD%E0%B2%BE%E0%B2%B5%E0%B2%97%E0%B3%80%E0%B2%A4%E0%B3%86-%E0%B2%97%E0%B3%8A%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%86%E0%B2%AF%E0%B3%86 )

      ಮತ್ತೆ ಸೀತೆ, ಊರ್ಮಿಳೆ, ಶೂರ್ಪನಖಿಯ ಸರಣಿಯಲ್ಲಿ ಈಗ ಮಂಡೋದರಿಯ ಸೇರ್ಪಡೆಯಾಗಿದೆ (00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ….?). ಸಮಯವಾದರೆ ಓದಿ ನೋಡಿ 🙂

      https://nageshamysore.wordpress.com/00115-%e0%b2%ae%e0%b2%82%e0%b2%a1%e0%b3%8b%e0%b2%a6%e0%b2%b0%e0%b2%bf-%e0%b2%a8%e0%b2%bf%e0%b2%a8%e0%b2%97%e0%b3%8d%e0%b2%af%e0%b2%be%e0%b2%95%e0%b2%bf-%e0%b2%aa%e0%b2%b0%e0%b2%bf-%e0%b2%95%e0%b2%bf/

      ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
      Thanks & Best Regards / Nagesha Mysore
      WeBlog site: nageshamysore.wordpress.com

      Like

      1. ನಮಸ್ಕಾರ ನಾಗೇಶ್.

        ಹೆಣ್ಮನದ ಬಗ್ಗೆ ನಾ ಕೇಳಿದ ಪ್ರಶ್ನೆ ಹಾಗೇ ಸುಮ್ಮನೆ ತಮಾಷೆಗೆ ಅಷ್ಟೇ.
        ಆದರೆ ನಿಮ್ಮ ಉತ್ತರ ನನ್ನನ್ನು ಚಿಂತನೆಗೆ ಹಚ್ಚಿತು. ನನ್ನ ಪ್ರಕಾರ ಮಹಿಳೆಯರದು ಬಹುಮುಖ ಕರ್ತವ್ಯದ ಪಾತ್ರವಾದುದರಿಂದ ಅವರಲ್ಲಿ mood swings ಪುರುಷರಿಗಿಂತ ಸ್ವಲ್ಪ ಜಾಸ್ತಿ ಅಂತ ಅನ್ನಿಸುತ್ತೆ. ಹಾಗಂತ exceptions ಇಲ್ಲವೆಂದೇನಲ್ಲ. ಸಂತಸವಿರಲಿ ಕೋಪವಿರಲಿ ಬೇಸರವಿರಲಿ ಹಂಚಿಕೊಂಡಾಗ / ಹೊರಹಾಕಿದಾಗ ( emotional outburst ) ಸಿಗುವ ನಿರಾಳವೇ ಈ ಪರಿಯ ಹವಾಗುಣಕ್ಕೆ ಕಾರಣ ಅಂತ ನನ್ನ ಅನಿಸಿಕೆ.

        ಅಂದ್ಹಾಗೆ, ನನ್ನ ಶ್ರಾವಣ ಸುಂದರಿ ಇನ್ನೂ ಪತ್ತೆಯಾಗಿಲ್ಲ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಮುಂದೆಂದಾದರೂ ಸಿಕ್ಕರೆ ನಿಮಗೂ ಭೇಟಿ ಮಾಡಿಸ್ತೀನಿ.

        – ಭಾವನಾ

        Like

Leave a reply to nageshamysore ಪ್ರತ್ಯುತ್ತರವನ್ನು ರದ್ದುಮಾಡಿ