00072. ಆಧ್ಯಾತ್ಮಿಕ ಕರ ಬಾಡಿಗೆ ತರ..!

ಆಧ್ಯಾತ್ಮಿಕ ಕರ ಬಾಡಿಗೆ ತರ..!

ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ, ಮನವರಿಕೆಯೊ ಬರಿಯ ಕನವರಿಕೆಯೊ ತಿಳಿಯದ ಅಯೋಮಯ ಸ್ಥಿತಿ. ತಿದ್ದುವ, ವ್ಯಾಖ್ಯಾನ ನೀಡುವ ಗೋಜಿಗೆ ಹೋಗದೆ ಬಂದ ಹಾಗೆ, ಇಲ್ಲಿ ದಾಖಲಿಸಿದ್ದೇನೆ. ಬರೆಯುವಾಗ ಹೊಳೆವ ಏನೆಲ್ಲ ಅರ್ಥಪೂರ್ಣತೆಗಳು, ಹೊಳಹುಗಳು, ನಿಗೂಢತೆಗಳು ಸರಳ ಪದಗಳಾಗಿ ಹೊರಬರಲು ಪಡುವ ಪ್ರಸವ ವೇದನೆಯನ್ನು ಪರಿಗಣಿಸಿದರೆ , ಇದೊಂದು ಸುಖ ಪ್ರಸವವೆಂದೆ ಹೇಳಬಹುದು. ಅರ್ಥಪೂರ್ಣವೆನಿಸಿದರೆ ಕರ ಬಾಡಿಗೆ ಕಟ್ಟಿ, ಸ್ವಂತ ಮನೆಗೆ ಹುಡುಕಾಟ, ಇಲ್ಲದಿದ್ದರೆ ನಿರಂತರ ಜನ್ಮಾಂತರ ಹುಡುಗಾಟ.. 🙂

– ನಾಗೇಶ ಮೈಸೂರು

ಆಧ್ಯಾತ್ಮಿಕ ಕರ ಬಾಡಿಗೆ ತರ
—————————-

ಇಳಿಸಲೆಂದೆ ಭೂಭಾರ
ಎತ್ತಿದಂತೆ ಅವತಾರ
ಹಗುರಿಸೆ ಈ ತನು ಭಾರ
ತುಂಬಿಸೆ ಆಧ್ಯಾತ್ಮಿಕ ಕರ
ಆತ್ಮಕೆ ಕಟ್ಟುವ ಬಾಡಿಗೆ ತರ!

ಬಂಗಾರ ಅಡವಿಡೆ ಕಾಡಿ
ನಾವೇ ಕಟ್ಟುವಂತೆ ಬಡ್ಡಿ
ದೇಹಾತ್ಮದ ಉಚಿತ ಸೇವೆ
ಈ ದೇಹ ಬಿಟ್ಟರೆ ಸಾವೆ
ಹೋಗೊ ಮುನ್ನ ಕರ ಸೇವೆ!

ಸೂಕ್ಷ್ಮರೂಪದ ಗಣಕ
ಇದ್ದೂ ಇಲ್ಲದ ವೈಣಿಕ
ಎಲ್ಲಿದ್ದಾನೊ ಕಾಣೊತನಕ
ಎಲ್ಲೆಲ್ಲೊ ಹುಡುಕೊ ಜಾತಕ
ಮುಂಗಡ ಕಟ್ಟೊ ತವಕ!

ಹಿಡಿಯದಲೆ ಜುಟ್ಟಿಡಿದು
ಹಿಡಿದರೂ ಕೈಗೇ ಸಿಗದು
ಅಂಗೈಲೆ ಕೂತಂತೆ ಭಾಸ
ಬರಿ ಬಿರುಕು ಗೆರೆ ಅಭಾಸ
ಅರಿವಾಗದವನ ವಿಳಾಸ!

ಬಾಯ್ಬಿಟ್ಟು ಕೇಳದವನು
ಮುನ್ನಲೆಯ ಹೇಳದವನು
ಹಿನ್ನಲೆ ತೋರದೆ ತೋರುವ
ಮೌನದೆ ಸನ್ನಿಧಿಯಲಿರುವ
ಮೂಕಪ್ರೇಕ್ಷಕ ಸಂಸಾರದವ!

ಬರೆದು ಹುಡುಕುವರುಂಟು
ತಿರಿದು ಅಲೆದವರುಂಟು
ಅರಿತವರ ಕಾಣುವುದೆಂತು
ಅರಿವೆ ಕಟ್ಟುತ ನಿಸ್ತಂತು
ಬರಿಗಣ್ಣಿಗೆ ಕಾಣದ ವಸ್ತು!

ಪುರಾಣ ಪರಂಪರೆ ನೀತಿ
ನಮ್ಮೊಳಗಿಹನೆಂದೆ ಪ್ರತೀತಿ
ಅವ ಕಾಣದಿದ್ದರೆ ಸುಳ್ಳೆ
ಕಾಣೊ ಮಸೂರ ಹುಡುಕಲೆ
ಈ ದೇಹದ ಮನೆ ಕಟ್ಟಲೆ!

ಹುಡುಕಾಟ ಮುಗಿಸೆ ತವಕ
ಸ್ವಂತ ಮನೆ ಸೇರುವ ಲೆಕ್ಕ
ಬದಲಿಸಿ ಬಾಡಿಗೆ ಮನೆಗಳ
ಹುಡುಗಾಟವಾಡೊ ದೇಹಗಳ
ಬಾಡಿಗೆ ಕರ ಕಟ್ಟುವ ದಾಳ!

ಕೇಳಲಿ ಬಿಡಲಿ ಜೀಯಾ
ಕಟ್ಟುತಲಿರು ಬಾಡಿಗೆಯ
ಸಾಕಿದ್ದರೆ ನಿನ ಶಕ್ತಾನುಸಾರ
ಮಿಕ್ಕಿದರಿಳಿಸುವ ಇಹಭಾರ
ಕೊರೆಗಾದಷ್ಟಾಗಲಿ ಹಗುರ!

– ನಾಗೇಶ ಮೈಸೂರು

ಸರಣಿ: ಆಧ್ಯಾತ್ಮಿಕ ಕರ ಬಾಡಿಗೆ ತರ,ನಾಗೇಶ ಮೈಸೂರು, Nagesha mysore, Kannada Poems, Singapore
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
July 14, 2013 – 9:02

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s