00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ

ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ
( shorter version below which is published in Singapore Kannada saNgha , singapore ‘siMchana’ monthly magazine coloumn – chinthakara chaavadi, August 2013, news letter)

ಅನಿವಾರ್ಯಗಳ ಬೆನ್ನಟ್ಟಿ ಹುಟ್ಟೂರು, ಕೇರಿ, ದೇಶಗಳ ಸೌಖ್ಯವನ್ನು ತೊರೆದು ಪರದೇಶಗಳಲ್ಲಿ, ಹೊರನಾಡುಗಳಲ್ಲಿ ತಳವೂರಿದ ಬಹುತೇಕ ಕನ್ನಡಿಗರನ್ನು ಕಾಡುವ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಮುಖ ಹಾಗೂ ಭಾವನಾತ್ಮಕ ಸಮಸ್ಯೆಯೆಂದರೆ ಮಾತೃಭಾಷಾ ಸ್ಪಂದನದಿಂದ ಹೆಚ್ಚುಕಡಿಮೆ ಪೂರ್ತಿ ವಂಚಿತರಾಗಿಬಿಡುವ ಮಕ್ಕಳ ಹಾಗೂ ಅವರ ತರುವಾಯದ ಪೀಳಿಗೆಯ ಸಮಷ್ಟಿ. ಇದೊಂದು ರೀತಿಯ ತೀರಾ ಅಂತರಾಳದ ಆತ್ಮ ಪ್ರಚೋದನಾತ್ಮಕ-ಭಾವನಾತ್ಮಕ ಪ್ರಶ್ನೆ. ಹೊಟ್ಟೆಪಾಡಿಗೊ, ರಾಜೀ ಸೂತ್ರದ ತೆವಲಿಗೊ ಅಥವಾ ಇನ್ನಾವುದೊ ಕಾರಣದಿಂದ ವಿದೇಶಗಳಲ್ಲಿ ಬಂದು ನೆಲೆಸಿದ್ದರು ತಮ್ಮ ಮಾತೃಭಾಷೆಯ ಬೇರಿಗೆ ಹೇಗಾದರೂ ಹೆಣಗುತ್ತಲೆ ತಗುಲಿಕೊಂಡಿರುವ ತಪನೆ ಹಾಗೆ ಬಂದಂತಹ ಮೊದಲ ತಲೆಮಾರಿನ ಮತ್ತು ಸಮಾನಾಂತರದ ಪೀಳಿಗೆಗಳಿಗಷ್ಟೆ ಸಾಧ್ಯವಾಗುತ್ತದೆ. ಅದರಲ್ಲೂ ಮೊದಲ ಕೆಲ ದಿನಗಳ ಹೋರಾಟದ ಆರಂಭವೆಲ್ಲ ಕಳೆದು ತಳಾರವಾಗಿ ನೆಲೆಯುರಿದ ನೆಮ್ಮದಿ, ದೈಹಿಕ ಸಂತೃಪ್ತಿಗಳ ಸ್ತರದಿಂದ ಮಾನಸಿಕ ಹಾಗೂ ಬೌದ್ಧಿಕ ಸ್ತರಗಳತ್ತ ತುಡಿಯಲೆಣಿಸತೊಡಗುತ್ತದೆ. ಆ ಬೌದ್ದಿಕ ಹಸಿವೆಯನ್ನು ತಣಿಸುವ ಕೆಲವೆ ಮೂಲಗಳಲ್ಲಿ ತವರು ನೆಲದ ಭಾಷಾ ತುಡಿತ ಪ್ರಮುಖವಾಗಿ ಕಾಡತೊಡಗುತ್ತದೆ. ಖಂಡುಗವಾಗಿ , ಸಮೃದ್ದಿಯಾಗಿ, ದಂಡಿಯಾಗಿ ಸಿಗುತ್ತಿದ್ದ ವಾತಾವರಣದಲ್ಲಿ ಕಾಣದೆ ಮಾಯವಾಗಿದ್ದ ಈ ಪ್ರಜ್ಞ್ನೆ ಕೊರತೆಯ ಪರಿಸರದಲ್ಲಿ ಗಾಢವಾಗಿ ಕಾಡತೊಡಗುತ್ತದೆ. ಮೂಲೆಯಲೆಲ್ಲೊ ಸುಪ್ತ ನಿಕ್ಷಿಪ್ತವಾಗಿದ್ದ ಭಾಷಾ ಪ್ರೇಮ ಅಗಾಧ ತುಡಿತದ ರೂಪ ತಾಳಿ ಹೊಸ ಬಗೆಯ ಕ್ರಿಯಾಶೀಲತೆ , ಹುಡುಕಾಟಗಳಿಗೆ ಹಚ್ಚಿಬಿಡುತ್ತದೆ. ಛೋದ್ಯವೆಂದರೆ, ಈಗ ಆಸಕ್ತಿಯ ಹಂಬಲ ಉಚ್ಛ್ರಾಯ ಸ್ಥಿತಿಯಲ್ಲಿದ್ದರೂ, ಅದಕ್ಕೆ ಪೂರಕವಾಗಬೇಕಾದ ವಾತಾವರಣ ಸಿಗುವುದಿಲ್ಲ. ಮಾತನಾಡುವ ಜನರಾಗಲಿ, ಓದುವ ಪುಸ್ತಕಗಳಾಗಲಿ, ಸಮಾನ ಮನಸ್ಕ ಅಭಿರುಚಿಗಳ ಸಾಂಗತ್ಯವೆ ಇರಲಿ – ಎಲ್ಲವೂ ಪಂಥವೆ ಆಗಿಬಿಡುತ್ತವೆ. ಅವಾವುದೂ ಸರಾಗವಾಗಿ ಸಿಗದ ಸಾಧ್ಯತೆಯೆ ಅವುಗಳು ಬೇಕೆನ್ನುವ ಹವಣಿಕೆಯನ್ನು ಮತ್ತಷ್ಟು ಹಿಗ್ಗಿಸಿ, ಇನ್ನೂ ಪ್ರಖರವಾದ ತೀವ್ರತೆಯಲ್ಲಿ ಹೆಚ್ಚಿನ ಒತ್ತಡದ ರೂಪದಲ್ಲಿ ಗುಣುಗುಡಿಸತೊಡಗುತ್ತದೆ. ಹುಟ್ಟೂರಿನಲ್ಲಿದ್ದರೆ ಬಹುಶಃ ಜಾತಿ, ಗುಂಪು ಇತ್ಯಾದಿಗಳ ಸಖ್ಯದಿಂದ ಚಿಪ್ಪಿನೊಳಗಡಗಿರುತ್ತಿದ್ದವರನ್ನು, ಅವೆಲ್ಲ ಒತ್ತಡಗಳ ಮೊತ್ತವೆ ಎಳೆತಂದು ಗುಂಪು ಗಣಗಳಿಂದ ಹೊರತಾದ ನೈಜ್ಯ ತುಡಿತಗಳ ನೆಲೆಗಟ್ಟಿನಲ್ಲಿ ಒಗ್ಗೂಡಿಸಿ, ಸಾಂಗತ್ಯವನ್ನು ಬೆಳೆಸಿಬಿಡುತ್ತದೆ. ಅಲ್ಲಿಂದ ಆರಂಭ ಹೊಸ ಚೈತ್ರ ಯಾತ್ರೆ, ಹೊಸ ಬಂಧಗಳ ಜಾತ್ರೆ, ತುಡಿವ ಸಮಾನ ಮನಗಳ ರಥ ಯಾತ್ರೆ.

ಆದರೀ ರೂಪಧಾರಣೆಯ ಪಯಣ ಅಂತಿಮವೇನಲ್ಲವಾಗಿ, ನಿಧಾನವಾಗಿ ವಿಸ್ತರಿಸುತ್ತಾ ಹೋಗುವ ಪರಿಧಿ ಹೊಸ ಹೊಸ ಒಳತೋಟಿಗಳನ್ನು ಸಂಕಲಿಸುತ್ತ ಅತೃಪ್ತಿಯ ಸ್ತರವನ್ನು ಆದಷ್ಟು ಮಟ್ಟಿಗೆ ಕುಗ್ಗಿಸುತ್ತ ಸಾಗಿರುವಾಗಲೆ ಧುತ್ತೆಂದು ಎದುರಾಗುತ್ತದೆ ಹೊಸದೊಂದು ಭೂತಾಕಾರದ ಸಮಸ್ಯೆ – ಮುಂದಿನ ಪೀಳಿಗೆಯ ಮಕ್ಕಳ ರೂಪದಲ್ಲಿ. ಅಪ್ಪ ಅಮ್ಮಂದಿರಾದರೊ ಬಾಲ್ಯ, ಯೌವ್ವನದ ದಿನಗಳಲ್ಲಿ ಸ್ವಂತ ನೆಲದಲ್ಲಿ ಕಳೆದ ಅನುಭವ, ಅನುಭೂತಿಯಿಂದಾಗಿ ಬೇಕಾದ ಬಲವಾದ ಅಡಿಪಾಯ ಆಗಲೆ ಬಲವಾಗಿ ಬಿದ್ದಿರುತ್ತದೆ. ಆದರೆ ಈ ಮಕ್ಕಳ ವಿಷಯಕ್ಕೆ ಬಂದರೆ ಆ ವಾತಾವರಣದ ಗಂಧವೆ ಇಲ್ಲದೆ ಬೆಳೆದವರು; ಹಲ ಕೆಲವರು ಆರಂಭದಲ್ಲಿ ಸ್ವದೇಶದ ಸೊಗಡನ್ನು ತುಸು ಅನುಭವಿಸಿದ್ದರೂ, ಅದು ಮಾಗಿ, ಪ್ರಬುದ್ಧವಾಗುವ ಮೊದಲೆ ಬಿಟ್ಟು ಬರುವ ಅನಿವಾರ್ಯದಿಂದಾಗಿ ಇತ್ತ ಈ ಕಡೆಯೂ ಇಲ್ಲದೆ ಅತ್ತ ಆ ಕಡೆಯೂ ಇಲ್ಲದೆ ಎಡಬಿಡಂಗಿಯಾದವರು. ಹೊಸತಿನ ಜಾಗದಲ್ಲಿ ಬೆಳೆದವರಿಗಂತೂ ಆ ತರಹದ ತುಡಿತಗಳಿಗೆ ಬೇಕಾದ ವಾತಾವರಣವೆ ಇರುವುದಿಲ್ಲ. ಇದ್ದರೂ ಪುಟ್ಟ ಮನೆಯ ಅವರಣಕ್ಕಷ್ಟೆ ಸೀಮಿತವಾಗಿಬಿಡುತ್ತದೆ. ಅಲ್ಲೇನು ಕಡಿಮೆ ಭಾಧೆಯೆನ್ನುವಂತಿಲ್ಲ. ಸಹಜ ವಾತಾವರಣದ ಕೊರತೆಯಿಂದಾಗಿ ಮಾತೃಭಾಷೆಯಲಿ ತಡಬಡಾಯಿಸುವ ಮಕ್ಕಳ ಪಾಡು ನೋಡಲಾಗದೆ ಪೋಷಕರೆ ಇಂಗ್ಲ್ಲೀಷಿನ ಸಂವಹನಕ್ಕಿಳಿಯುವ ಸಾಧ್ಯತೆ ಹೆಚ್ಚು. ಒಮ್ಮೆ ಹಾಗಾಗಲು ಆರಂಭವಾಯ್ತೆಂದರೆ, ಸಿಗುತ್ತಿದ್ದ ಚೂರುಪಾರು ಭಾಷಾಗಂಧವೂ ಇಲ್ಲವಾಗಿ ‘ಬಟ್ಲರ್ ‘ ಇಂಗ್ಲೀಷಿನ ಹಾಗೆ ‘ಬಟ್ಲರ್’ ಕನ್ನಡದ ಪಡಸಾಲೆಯಾಗಿ ಹಾಸ್ಯಾಸ್ಪದವಾಗಿಬಿಡುತ್ತವೆ. ‘ಳ’ ಕಾರಕ್ಕೆ ‘ಲ’ ಕಾರ , ‘ಶ’ ಕಾರಕ್ಕೆ ‘ಸ’ ಕಾರಗಳ ಚೌಚೌ ಬಾತಿನ ಹಾಗಾಗುತ್ತ ಭಾಷಾ ಕಿಚಡಿಯ ಹೊಸ ವ್ಯಾಖ್ಯೆಯೆ ಹುಟ್ಟಿಕೊಳ್ಳುವ ಅನಾಹುತವೂ ಎದುರಾಗುತ್ತದೆ.

ಈ ಪ್ರಕ್ರಿಯೆಯ ಭೀಕರತೆಯ ಆಳ ಪೀಳಿಗೆಯಿಂದ ಪೀಳಿಗೆಗೆ ಹೆಚ್ಚುತ್ತಾ ಹೋಗುವುದು ವಿಷಾದನೀಯ ಫಲಿತಾಂಶ. ನಾಡು, ನುಡಿ, ಭಾಷೆ, ಸಂಸ್ಕೃತಿಗಳಿಂದ ಹೊರಗಾದ ಒಟ್ಟಾರೆ ಹೊಸ ಎಡಬಿಡಂಗಿ ಪೀಳಿಗೆಯೊಂದರ ಹುಟ್ಟಿಗೆ ನಾವೆ ನಮಗರಿವಿದ್ದೊ, ಇಲ್ಲದೆಯೊ ಪ್ರತ್ಯಕ್ಷವಾಗೊಯೊ, ಪರೋಕ್ಷವಾಗಿಯೊ ಕಾರಣವಾಗಿಬಿಡುವ ಅಪಾಯಕರ ಸ್ಥಿತಿಗೆ ಸಿಕ್ಕಿಕೊಂಡುಬಿಡುತ್ತೇವೆ. ಹಾಗಾಗದಿರಬೇಕಾದರೆ ಆ ಕುರಿತ ಕಾಳಜಿ, ಅಕ್ಕರಾಸ್ತೆ ಯಾರಿಂದಲೊ ಆಗಬೇಕೆಂದು ಕುಳಿತರೆ ಅಸಾಧ್ಯ. ಇದು ಹೆಚ್ಚಿನ ಕಾರ್ಯ ಭಾರವಾದರೂ ಸರಿ, ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡಬೇಕಾದ ಕನಿಷ್ಠ ಕರ್ತವ್ಯವೆಂಬ ಅರಿವಿನಲ್ಲಿ ಪಣ ತೊಟ್ಟು, ಸಮಯವನ್ನು ಮೀಸಲಾಗಿರಿಸಿ ಸತತ ಪ್ರಯತ್ನದಲ್ಲಿ ಕಲಿಸಬೇಕು. ಆ ರೀತಿ ಕಲಿತ ಮಕ್ಕಳು ತಂತಾನೆ ಸ್ವತಃ ಮುಂದುವರೆಸಿಕೊಂಡು ಹೋಗುವ ಹಂತಕ್ಕೆ ತಲುಪುವ ತನಕ ಛಲ ಬಿಡದ ತ್ರಿವಿಕ್ರಮನಂತೆ ಹುರಿದುಂಬಿಸಿ, ಪ್ರೋತ್ಸಾಹಿಸಬೇಕು. ಈಗಿನ ಅಂತರ್ಜಾಲ ಯುಗದಲ್ಲಿ ಹಾಗೆ ಮಾಡಲೇಬೇಕೆಂಬ ಇಚ್ಛಾಶಕ್ತಿ , ಕಳಕಳಿ ತೀವ್ರವಾಗಿದ್ದರೆ ಇದೇನು ಅಸಾಧ್ಯವೂ ಅಲ್ಲ. ಅದನ್ನು ಕಾರ್ಯಗತಗೊಳಿಸುವ ಕನಿಷ್ಟತೆಯೆ ನಾವು ಮುಂದಿನ ಪೀಳಿಗೆಗೆ ನೀಡುವ ಕಾಣಿಕೆ. ಯಾಕೆಂದರೆ, ಭಾಷೆಯೊಂದನ್ನು ಸರಕಾಗಿ ಅಳವಡಿಸಿಕೊಟ್ಟರೆ ಅದು ನಾಡು, ನುಡಿ, ಸಂಸ್ಖೃತಿಯ ಇನ್ನೆಲ್ಲಾ ಸ್ತರದ ಬಾಗಿಲುಗಳನ್ನು ತಾನೆ ತೆರೆಸುವ ಹರಿಕಾರನಾಗಿಬಿಡುತ್ತದೆ, ಯಾವ ಪ್ರೇರಣೆಯಿರದಿದ್ದರೂ ಸಹ.

ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಈ ವೇಗ ಜೀವನ ಜಗದ ಜಂಜಾಟದಲ್ಲಿ ಹಾಗೆ ಮಾಡಲು ಬೇಕಾದ ಸಮಯ ಮತ್ತು ನಿಷ್ಠಾಪೂರ್ಣ ಇಚ್ಛಶಕ್ತಿ ನಮ್ಮಲ್ಲಿದೆಯೆ ಎಂಬುದು. ಆಯ್ಕೆ ನಮ್ಮದಾದರೂ, ಫಲಿತದ ಫಲಾನುಭವಿಗಳು ನಮ್ಮದೆ ಆದ ಭವಿತದ ಪೀಳಿಗೆಗಳದು.

– ನಾಗೇಶ ಮೈಸೂರು

———————–
Shorter version:

ಕಟ್ಟುವ ಬನ್ನಿ ಕನ್ನಡತನ ಉಳಿಸಿ ಬೆಳೆಸುವ ಪೀಳಿಗೆ

ಅನಿವಾರ್ಯಗಳ ಬೆನ್ನಟ್ಟಿ ಹುಟ್ಟೂರು, ಕೇರಿ, ದೇಶಗಳ ಸೌಖ್ಯವನ್ನು ತೊರೆದು ಪರದೇಶಗಳಲ್ಲಿ, ಹೊರನಾಡುಗಳಲ್ಲಿ ತಳವೂರಿದ ಬಹುತೇಕ ಕನ್ನಡಿಗರನ್ನು ಕಾಡುವ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಮುಖ ಹಾಗೂ ಭಾವನಾತ್ಮಕ ಸಮಸ್ಯೆಯೆಂದರೆ ಮಾತೃಭಾಷಾ ಸ್ಪಂದನದಿಂದ ಹೆಚ್ಚುಕಡಿಮೆ ಪೂರ್ತಿ ವಂಚಿತರಾಗಿಬಿಡುವ ಮಕ್ಕಳ ಹಾಗೂ ಅವರ ತರುವಾಯದ ಪೀಳಿಗೆಯ ಸಂಕಷ್ಟ. ಹೊಟ್ಟೆಪಾಡಿಗೆ ವಿದೇಶಗಳಲ್ಲಿ ಬಂದು ನೆಲೆಸಿದ್ದರು ತಮ್ಮ ಮಾತೃಭಾಷೆಯ ಬೇರಿಗೆ ಹೇಗಾದರೂ ತಗುಲಿಕೊಂಡಿರುವ ತಪನೆ, ಹಾಗೆ ಬಂದಂತಹ ಮೊದಲ ತಲೆಮಾರಿನ ಮತ್ತು ಸಮಾನಾಂತರದ ಪೀಳಿಗೆಗಳಿಗಷ್ಟೆ ಸಾಧ್ಯವಾಗುತ್ತದೆ. ಅದರಲ್ಲೂ ಮೊದಲ ಕೆಲದಿನ ಕಳೆದು ತಳಾರವಾಗಿ ನೆಲೆಯುರಿದ ನೆಮ್ಮದಿ, ದೈಹಿಕ ಸಂತೃಪ್ತಿಗಳ ಸ್ತರದಿಂದ ಮಾನಸಿಕ ಹಾಗೂ ಬೌದ್ಧಿಕ ಸ್ತರಗಳತ್ತ ತುಡಿಯಲೆಣಿಸತೊಡಗುತ್ತದೆ. ಆ ಬೌದ್ದಿಕ ಹಸಿವೆಯನ್ನು ತಣಿಸುವ ಕೆಲವೆ ಮೂಲಗಳಲ್ಲಿ ತವರು ನೆಲದ ಭಾಷಾ ತುಡಿತ ಪ್ರಮುಖವಾಗಿ ಕಾಡತೊಡಗುತ್ತದೆ. ಮೂಲೆಯಲೆಲ್ಲೊ ಸುಪ್ತ ನಿಕ್ಷಿಪ್ತವಾಗಿದ್ದ ಭಾಷಾ ಪ್ರೇಮ ಅಗಾಧ ತುಡಿತದ ರೂಪ ತಾಳಿ ಹೊಸ ಬಗೆಯ ಕ್ರಿಯಾಶೀಲತೆ, ಹುಡುಕಾಟಗಳಿಗೆ ಹಚ್ಚಿಬಿಡುತ್ತದೆ. ಛೋದ್ಯವೆಂದರೆ, ಈಗ ಆಸಕ್ತಿಯ ಹಂಬಲ ಉಚ್ಛ್ರಾಯ ಸ್ಥಿತಿಯಲ್ಲಿದ್ದರೂ, ಅದಕ್ಕೆ ಪೂರಕವಾಗಬೇಕಾದ ವಾತಾವರಣ ಸಿಗುವುದಿಲ್ಲ. ಅವಾವುದೂ ಸರಾಗವಾಗಿ ಸಿಗದ ಸಾಧ್ಯತೆಯೆ ಅವುಗಳು ಬೇಕೆನ್ನುವ ಹವಣಿಕೆಯನ್ನು ಮತ್ತಷ್ಟು ಹಿಗ್ಗಿಸಿ, ಇನ್ನೂ ಪ್ರಖರವಾದ ತೀವ್ರತೆಯಲ್ಲಿ ಹೆಚ್ಚಿನ ಒತ್ತಡದ ರೂಪದಲ್ಲಿ ಗುಣುಗುಡಿಸತೊಡಗುತ್ತದೆ. ಅಲ್ಲಿಂದ ಆರಂಭ ಹೊಸ ಚೈತ್ರ ಯಾತ್ರೆ, ಹೊಸ ಬಂಧಗಳ ಜಾತ್ರೆ, ತುಡಿವ ಸಮಾನ ಮನಗಳ ರಥ ಯಾತ್ರೆ.

ಆದರೀ ರೂಪಧಾರಣೆಯ ಪಯಣ ಸಾಗಿರುವಾಗಲೆ ಧುತ್ತೆಂದು ಎದುರಾಗುತ್ತದೆ ಹೊಸದೊಂದು ಭೂತಾಕಾರದ ಸಮಸ್ಯೆ – ಮುಂದಿನ ಪೀಳಿಗೆಯ ಮಕ್ಕಳ ರೂಪದಲ್ಲಿ. ಅಪ್ಪ ಅಮ್ಮಂದಿರಾದರೊ ಬಾಲ್ಯ, ಯೌವ್ವನದ ದಿನಗಳಲ್ಲಿ ಸ್ವಂತ ನೆಲದಲ್ಲಿ ಕಳೆದ ಅನುಭವ, ಅನುಭೂತಿಯಿಂದಾಗಿ ಬೇಕಾದ ಬಲವಾದ ಅಡಿಪಾಯ ಆಗಲೆ ಬಲವಾಗಿ ಬಿದ್ದಿರುತ್ತದೆ. ಆದರೆ ಈ ಮಕ್ಕಳ ವಿಷಯಕ್ಕೆ ಬಂದರೆ ಆ ವಾತಾವರಣದ ಗಂಧವೆ ಇಲ್ಲದೆ ಬೆಳೆದವರು; ಹಲ ಕೆಲವರು ಆರಂಭದಲ್ಲಿ ಸ್ವದೇಶದ ಸೊಗಡನ್ನು ತುಸು ಅನುಭವಿಸಿದ್ದರೂ, ಅದು ಮಾಗಿ, ಪ್ರಬುದ್ಧವಾಗುವ ಮೊದಲೆ ಬಿಟ್ಟು ಬರುವ ಅನಿವಾರ್ಯದಿಂದಾಗಿ ಇತ್ತ ಈ ಕಡೆಯೂ ಇಲ್ಲದೆ ಅತ್ತ ಆ ಕಡೆಯೂ ಇಲ್ಲದೆ ಎಡಬಿಡಂಗಿಯಾದವರು. ಹೊಸತಿನ ಜಾಗದಲ್ಲಿ ಬೆಳೆದವರಿಗಂತೂ ಆ ತರಹದ ತುಡಿತಗಳಿಗೆ ಬೇಕಾದ ವಾತಾವರಣವೆ ಇರುವುದಿಲ್ಲ. ಇದ್ದರೂ ಪುಟ್ಟ ಮನೆಯ ಅವರಣಕ್ಕಷ್ಟೆ ಸೀಮಿತವಾಗಿಬಿಡುತ್ತದೆ. ಅಲ್ಲೇನು ಕಡಿಮೆ ಭಾಧೆಯೆನ್ನುವಂತಿಲ್ಲ – ಸಹಜ ವಾತಾವರಣದ ಕೊರತೆಯಿಂದಾಗಿ ಮಾತೃಭಾಷೆಯಲಿ ತಡಬಡಾಯಿಸುವ ಮಕ್ಕಳ ಪಾಡು ನೋಡಲಾಗದೆ ಪೋಷಕರೆ ಇಂಗ್ಲ್ಲೀಷಿನ ಸಂವಹನಕ್ಕಿಳಿಯುವ ಸಾಧ್ಯತೆ ಹೆಚ್ಚು. ಈ ಪ್ರಕ್ರಿಯೆಯ ಭೀಕರತೆಯ ಆಳ ಪೀಳಿಗೆಯಿಂದ ಪೀಳಿಗೆಗೆ ಹೆಚ್ಚುತ್ತಾ ಹೋಗುವುದು ವಿಷಾದನೀಯ. ನಾಡು, ನುಡಿ, ಭಾಷೆ, ಸಂಸ್ಕೃತಿಗಳಿಂದ ಹೊರಗಾದ ಹೊಸ ಪೀಳಿಗೆಯೊಂದರ ಹುಟ್ಟಿಗೆ ನಾವೆ ಪ್ರತ್ಯಕ್ಷವಾಗೊ, ಪರೋಕ್ಷವಾಗಿಯೊ ಕಾರಣವಾಗಿಬಿಡುವ ಅಪಾಯಕರ ಸ್ಥಿತಿಗೆ ಸಿಕ್ಕಿಕೊಂಡುಬಿಡುತ್ತೇವೆ.

ಹಾಗಾಗದಿರಬೇಕಾದರೆ ಆ ಕುರಿತ ಕಾಳಜಿ, ಅಕ್ಕರಾಸ್ತೆ ಯಾರಿಂದಲೊ ಆಗಬೇಕೆಂದು ಕುಳಿತರೆ ಅಸಾಧ್ಯ. ಇದು ಹೆಚ್ಚಿನ ಕಾರ್ಯ ಭಾರವಾದರೂ ಸರಿ, ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡಬೇಕಾದ ಕನಿಷ್ಠ ಕರ್ತವ್ಯವೆಂಬ ಅರಿವಿನಲ್ಲಿ ಪಣ ತೊಟ್ಟು, ಸಮಯವನ್ನು ಮೀಸಲಾಗಿರಿಸಿ ಸತತ ಪ್ರಯತ್ನದಲ್ಲಿ ಕಲಿಸಬೇಕು. ಆ ರೀತಿ ಕಲಿತ ಮಕ್ಕಳು ತಂತಾನೆ ಸ್ವತಃ ಮುಂದುವರೆಸಿಕೊಂಡು ಹೋಗುವ ಹಂತಕ್ಕೆ ತಲುಪುವ ತನಕ ಛಲ ಬಿಡದ ತ್ರಿವಿಕ್ರಮನಂತೆ ಹುರಿದುಂಬಿಸಿ, ಪ್ರೋತ್ಸಾಹಿಸಬೇಕು. ಅದನ್ನು ಕಾರ್ಯಗತಗೊಳಿಸುವ ಕನಿಷ್ಟತೆಯೆ ನಾವು ಮುಂದಿನ ಪೀಳಿಗೆಗೆ ನೀಡುವ ಕಾಣಿಕೆ. ಯಾಕೆಂದರೆ, ಭಾಷೆಯೊಂದನ್ನು ಸರಕಾಗಿ ಅಳವಡಿಸಿಕೊಟ್ಟರೆ ಅದು ನಾಡು, ನುಡಿ, ಸಂಸ್ಖೃತಿಯ ಇನ್ನೆಲ್ಲಾ ಸ್ತರದ ಬಾಗಿಲುಗಳನ್ನು ತಾನೆ ತೆರೆಸುವ ಹರಿಕಾರನಾಗಿಬಿಡುತ್ತದೆ, ಯಾವ ಪ್ರೇರಣೆಯಿರದಿದ್ದರೂ ಸಹ. ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಈ ವೇಗ ಜೀವನ ಜಗದ ಜಂಜಾಟದಲ್ಲಿ ಹಾಗೆ ಮಾಡಲು ಬೇಕಾದ ಸಮಯ ಮತ್ತು ನಿಷ್ಠಾಪೂರ್ಣ ಇಚ್ಛಾಶಕ್ತಿ ನಮ್ಮಲ್ಲಿದೆಯೆ ಎಂಬುದು. ಆಯ್ಕೆ ನಮ್ಮದಾದರೂ, ಫಲಿತದ ಫಲಾನುಭವಿಗಳು ನಮ್ಮದೆ ಆದ ಭವಿತದ ಪೀಳಿಗೆಗಳದು.

– ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s