00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ?

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ?_____________________________________________

ನಮ್ಮ ದೇಶ, ರಾಜ್ಯ, ಜನಗಳ ಪ್ರಗತಿಯ ಪ್ರಶ್ನೆ ಬಂದಾಗಲೆಲ್ಲ ಅದರ ಜತೆಯಲ್ಲೆ ಹಾಸುಹೊಕ್ಕಾಗಿ ಕಾಡುವ ಪ್ರಶ್ನೆ ಬದಲಾವಣೆಗೆ ನಾವೆಷ್ಟು ಸಿದ್ದರಿದ್ದೇವೆ ಎಂಬ ಜಿಜ್ಞಾಸೆ. ಈ ಕೆಳಗಿನ ಕೆಲವು ಹೋಲಿಕೆಗಳನ್ನು ಗಮನಿಸಿ:

– ಚೈನಾದಂತ ಬೃಹತ್ ದೇಶವೂ ಈ ಹೊತ್ತು ಅಗಾಧ ಬಲಾಢ್ಯ ರಾಷ್ಟ್ರವಾಗುವತ್ತ ದಾಪುಗಾಲಿಕ್ಕಿ ನಡೆಯುತ್ತಿದೆ. ಕೆಲ ದಶಕಗಳ ಹಿಂದೆ ಭಾರತ ಮತ್ತು ಚೀನಾ – ಎರಡು ದೇಶಗಳನ್ನು ಹೋಲಿಸಿದರೆ, ಆರ್ಥಿಕ ಸ್ಥಿತಿಗತಿಯ ನೆಲೆಗಟ್ಟಿನಲ್ಲಿ ಹೆಚ್ಚು ಕಡಿಮೆ ಸಮಬಲರೆಂಬ ಪರಿಸ್ಥಿತಿ ಹಾಗೂ ಅನಿಸಿಕೆಯಿತ್ತು. ತುಲನೆಗಾಗಿ ಅಂದು ಇವೆರಡು ದೇಶಗಳ ನಡುವೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸ್ಪರ್ಧೆಯೇರ್ಪಟ್ಟಿತ್ತೆಂದರೆ, ಇಬ್ಬರು ಸ್ಪರ್ಧಿಗಳು ಒಂದೆ ಆರಂಭಿಕ ಸ್ಥಿತಿಯಲ್ಲಿದ್ದರೆಂದು ಹೇಳಬಹುದಾದ ಕಾಲ. ಆದರೆ ದಶಕಗಳುರುಳಿದ ಹಾಗೆ ಆದದ್ದೇನು? ಜಾಗತಿಕವಾಗಿ ಹತ್ತು ಹಲವು ಟೀಕೆ–ಟಿಪ್ಪಣಿಗೊಳಗಾದರೂ ಲೆಕ್ಕಿಸದೆ, ಸರಿಯೊ ತಪ್ಪೊ ತನ್ನ ಹಾದಿ ತನ್ನದೆಂಬ ಬಿಗಿ ನಂಬಿಕೆಯಲ್ಲಿ ಕೇಂದ್ರೀಕೃತ, ನಿಯಂತ್ರಿತ ಹತೋಟಿಯುಕ್ತ ವಾತಾವರಣದಲ್ಲಿ ದಾಪುಗಾಲಿಕ್ಕಿದ ಚೈನ ನೋಡು, ನೋಡುತ್ತಿದ್ದಂತೆ ತನ್ನ ಆರ್ಥಿಕ ಪ್ರಾಬಲ್ಯ, ಹೆಚ್ಚುಗಾರಿಕೆಯನ್ನು ವೃದ್ಧಿಪಡಿಸಿಕೊಳ್ಳುತ್ತಲೆ ಹೋಯ್ತು. ಈಗ ಹೆಚ್ಚು ಕಡಿಮೆ ಎಲ್ಲಾ ಬಲಾಢ್ಯ ದೇಶಗಳು ಅದರ ಮಾರುಕಟ್ಟೆಯ ಬಲಕ್ಕೆ ತಲೆಬಾಗಿ, ತನ್ನೆಲ್ಲ ಸಂಪನ್ಮೂಲ ಬಂಡವಾಳಗಳನ್ನು ಅಲ್ಲೆ ಚೆಲ್ಲಿ ಅಲ್ಲೆ ಬೆಳೆಯಲು ಹವಣಿಸುತ್ತವೆ – ಅಲ್ಲಿ ಒಳಗೆ ಹೂಡಿದ ಹಣ, ಸಂಪನ್ಮೂಲವನ್ನು ಮತ್ತೆ ಹಿಂತೆಗೆದುಕೊಂಡು ಬರುವುದು ಕಷ್ಟವೆಂದು ತಿಳಿದಿದ್ದರೂ! ಅದು ಅಲ್ಲಿಯ ಆರ್ಥಿಕ ನೀತಿಯ ತಾಕತ್ತು ಮತ್ತು ಮಾರುಕಟ್ಟೆಯ ಬಲ.

ಅದೆ ಸಮಾನ ಸ್ಥಿತಿಯ ತಳಹದಿಯ ಮೇಲೆ ಭಾರತವೂ ಆರಂಭಿಸಿತು – ತನ್ನದೆ ಆದ ನೀತಿ, ನಿಯಮಗಳ ನೆಲೆಯ ಮೇಲೆ. ಸಮಾಜವಾದದ ತಳುಕು ಹಾಕಿಕೊಂಡೆ ಜನಪ್ರಭುತ್ವದ, ಜನರಿಂದಲೆ ಚುನಾಯಿಸಲ್ಪಟ್ಟ ಪ್ರತಿನಿಧಿಗಳಿಂದ ಆಡಳಿತ ಚುಕ್ಕಾಣಿ ಹಿಡಿಸಿ ರಾಷ್ಟ್ರ, ರಾಜ್ಯ, ಜಿಲ್ಲಾ ತಾಲ್ಲೂಕಿನಿಂದ ಗ್ರಾಮ ಪಂಚಾಯತಿಯವರೆಗೂ ಅದರ ಬೇರು ಹಬ್ಬಿಸಿದ್ದಾಯ್ತು. ನಡು ಮಧ್ಯದಲೆಲ್ಲೊ ದಾರಿ ತಪ್ಪಿತೇನೊ ಅನಿಸಿದಾಗ ಮುಕ್ತ ವಾತಾವರಣದ ಬೆನ್ನು ಹಿಡಿದು ಆರ್ಥಿಕ ಉದಾರಿಕರಣದ ಮಂತ್ರ ಜಪಿಸುತ್ತ ನಡೆದಿದ್ದಾಯ್ತು. ಅದರೆ ದಾರಿಯುದ್ದಕ್ಕು ಏನೆಲ್ಲಾ ಸಂದಿಗ್ದ, ಗೊಂದಲಗಳು, ತಡವರಿಕೆ, ಎಡವಟ್ಟುಗಳು; ಯಾಕೊ, ಎಲ್ಲೊ, ಏನೊ ಸರಿಯಿಲ್ಲವೆಂದು ಎಲ್ಲರಿಗೂ ಗೊತ್ತಿರುವ ತರದ ಭಾವನೆ…ಆದರೆ ಯಾರೂ ಏನು ಮಾಡಲಾಗದ ಅಸಹಾಯಕತೆ, ವಿವರಿಸಲು ಆಗದ ತೊಳಲಾಟಗಳು. ಒಂದು ರೀತಿ ಅದು ಎಲ್ಲರದು ಆದ ಯಾರದೂ ಅಲ್ಲದ ತೊಡಕುಗಳು. ಎಲ್ಲರಿಗೂ ಸೇರಿದ ಯಾರೂ ಹೊರದ ಜವಾಬ್ದಾರಿಗಳು. ಆದ್ಯತೆಯನುಸಾರ ವಿಂಗಡಿಸಲು ಆಗದಷ್ಟು ಅಸಂಖ್ಯಾತ ಆದ್ಯತೆಗಳು. ಯಾವುದು ಮೊದಲು, ಯಾವುದು ನಂತರವೆಂಬ ಗೊಂದಲ, ಗಡಿಬಿಡಿಗಳು. ಯಾರೊ ಏನಾದರೂ ಒಳಿತು ಮಾಡಲಿದ್ದರೆಂಬ ಆಸೆಯಿನ್ನೂ ಒಣಗುವ ಮೊದಲೆ, ಯಾವುದೊ ಐಚ್ಚಿಕವೊ, ಅನೈಚ್ಚಿಕವೊ ಆದ ಬದಲಾವಣೆಯ ಬಿರುಗಾಳಿ ಬೀಸಿ ಸ್ವರ್ಥ ಲಾಲಸೆಯಿಂದಲೊ, ಪರಿಸ್ಥಿತಿಯ ವೈಚಿತ್ರದಿಂದಲೊ ಆ ಆಸೆಯೆ ಮುರುಟಿ ಹೋದದ್ದದೆಷ್ಟು ಸಲವೊ. ಸುಮ್ಮನೆ ಕಣ್ಣಾಡಿಸಿ ನೋಡಿ ಎಷ್ಟೊಂದು ತರದ ವೈಪರೀತ್ಯಗಳ ನಡುವೆ ನಮ್ಮ ವ್ಯವಸ್ಥೆಯೆಂಬ ಗಾಡಿ ಹೇಗೊ ಮುಲುಗುತ್ತಾ ನಡೆದಿದೆ….

– ವೈವಿಧ್ಯತೆಯಲ್ಲಿ ಏಕತೆಯೆಂಬ ಮಂತ್ರ ನಮ್ಮದು – ಐನೂರಕ್ಕೂ ಮಿಕ್ಕಿದ ಭಾಷಾಸಂಕುಲಗಳ ಪರಿವಾರದಿಂದ ಶ್ರೀಮಂತವಾದ ಸಂಸ್ಖೃತಿ ನಮ್ಮದು. ಇದು ನಮ್ಮ ಬಲವೊ ಇಲ್ಲ ಬಲಹೀನತೆಯೊ? ಎಂದು ವಾದ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲದಷ್ಟು ವಾದಿಸಿಯೂ ಪರಿಹಾರಗಾಣದೆ ಮತ್ತೆ ಮೊದಲಿದ್ದಲ್ಲಿಗೆ , ಎಲ್ಲಿದ್ದೆವೊ ಅಲ್ಲಿಗೆ ಹೇಗಿದ್ದೆವೊ ಹಾಗೆ ಬಂದು ಬೀಳುವ ಸಾಧ್ಯತೆಯೆ ಹೆಚ್ಚು. ಹಳೆ ಕಾಲದ ಚೀನಾದಲ್ಲಿದ್ದುದ್ದು ಇದೆ ಪರಿಸ್ಥಿತಿಯೆ; ಆದರೆ ಅಲ್ಲಾವುದೋ ಕಾಲದಲ್ಲೆ ‘ಚಿನ್’ ಸಂತತಿಯ ರಾಜನೊಬ್ಬ ಬಲವಂತದಿಂದ ಒಂದೆ ದೇಶ, ಒಂದೆ ಭಾಷೆ, ಒಂದೆ ಸಂಸ್ಕೃತಿಯ ಪರಿಭಾಷೆಯನ್ನು ಕಡ್ಡಾಯಗೊಳಿಸಿದ. ಈಗಲೂ ಚೀನಾದಲ್ಲಿ ಆ ಎಲ್ಲಾ ಪ್ರಾದೇಶಿಕ, ಪ್ರಾಂತೀಯ ಭಾಷೆಗಳು ಹಾಗೆಯೆ ಉಳಿದುಕೊಂಡಿವೆ – ಆಯಾ ಪ್ರಾಂತ್ಯಗಳಲ್ಲಿ. ಆದರೆ ಆಡಳಿತಾತ್ಮಕ ಭಾಷೆ ಮಾತ್ರ ಮ್ಯಾಂಡರೀನ್ ಒಂದೆ (ಸಾಮಾನ್ಯವಾಗಿ ಚೀನಿ ಭಾಷೆಯಲ್ಲಿ ಇದನ್ನು ‘ಪೂ ತೋಂಗ್ ಹ್ವಾ’ ಅನ್ನುತ್ತಾರೆ). ಹಾಗೆಯೆ, ಈ ಪ್ರಾಂತೀಯ ಭಾಷೆಗಳು ಹಲವಿದ್ದರೂ ಅದನ್ನು ವಿವಿಧ ಪ್ರಾಂತೀಯ ಭಾಷೆಗಳಲ್ಲಿ ಬಳಸುವ ಲಿಪಿಯನ್ನು ಏಕಿಕರಣಗೊಳಿಸಿ, ಅರ್ಧ ಸಂವಹನದ ಹೊರೆಯನ್ನು ಹಗುರಾಗಿಸಿಕೊಂಡಿದ್ದಾರೆ. ಅದರ ಯಶ, ಅಪಯಶ ಅಥವಾ ಗುಣಾವಗುಣಗಳೇನೇ ಇರಲಿ ಪ್ರಶ್ನೆಯೇನೆಂದರೆ ಈ ಒಗ್ಗೂಡಿಸುವಿಕೆಯ ಬೆಳವಣಿಗೆ ಇಂದಿನ ಚೀನಾದ ಪ್ರಗತಿಯ ರಥದಲ್ಲಿ ಎಷ್ಟರಮಟ್ಟಿನ ಪಾತ್ರ ವಹಿಸಿದೆ ಎಂಬುದು.

– ಹಾಗೆಯೆ ಭಾಷೆಯ ಕುರಿತು ಆಲೋಚಿಸುತ್ತ ಮತ್ತೊಂದು ಆಯಾಮವನ್ನು ನೋಡಿ..ನಮ್ಮಲ್ಲಿರುವ ಭಾಷಾ ವೈವಿಧ್ಯದಿಂದಾಗಿ ಒಬ್ಬೊಬ್ಬರು ಒಂದೆರಡುಮೂರು ಭಾಷೆ ಕಲಿತಿರಬಹುದಾದರೂ, ವ್ಯವಹಾರಿಕ ಮಟ್ಟದ ಸಂವಹನ ಬಂತೆಂದರೆ ತಟ್ಟನೆ ಇಂಗ್ಲೀಷಿಗೆ ಶರಣಾಗಬೇಕು – ಎರಡು ಕಾರಣಗಳಿಂದ; ಒಂದು – ಸಾಧಾರಣ ಇಂಗ್ಲೀಷು ಮಾತ್ರವೆ ಎಲ್ಲರಿಗೂ ಗೊತ್ತಿರುವ ಸಾಧ್ಯತೆ ಹೆಚ್ಚು. ಎರಡನೆಯದಾಗಿ ಎಷ್ಟೊ ವ್ಯವಹಾರಿಕ ಸಂಭಾಷಣೆಗಳಿಗೆ ಅಗತ್ಯವಾದ, ದಿನ ಸಾಮಾನ್ಯ ಬಳಕೆಯಲ್ಲಿರುವ ಪದಗಳೆ ಗೊತ್ತಿರುವುದಿಲ್ಲ! ಇನ್ನು ಕೆಲವೊಮ್ಮೆ ಇದ್ಯಾವ ಕಾರಣವೂ ಅಲ್ಲದ ಮತ್ತೊಂದು ಸರಳ ಕಾರಣವಿರುತ್ತದೆ – ಆ ಸಂಸ್ಥೆ ಯಾ ವಾತಾವರಣದ ಅಧಿಕೃತ ಭಾಷೆ ಇಂಗ್ಲೀಷು ಆಗಿರುವುದರಿಂದ , ಎಲ್ಲವೂ ಸ್ವಪ್ರೇರಕವಾಗಿ ಆ ಭಾಷೆಯಲ್ಲೆ ನಡೆಯಬೇಕು. ಹೀಗಾಗಿ, ನಮ್ಮವರಲ್ಲದ ಹೊರಗಿನವರು ಯಾರು ಬಂದರೂ ಅವರಿಗೆ ಸ್ಥಳೀಯ ಭಾಷೆಯ ಕುರಿತಿರಬಹುದಾದ ಭೀತಿ, ಬಲು ಬೇಗನೆ ಮಾಯವಾಗಿ ಇಂಗ್ಲೀಷೊಂದಿದ್ದರೆ ಸಾಕು, ಎಲ್ಲಾ ಸುಗಮ ಎಂಬ ಜ್ಞಾನೋದಯವಾಗುತ್ತದೆ. ಒಂದು ಸ್ತರದಲ್ಲಿ ಇದು ಸಂವಹನ ಮತ್ತು ಕಲಿಕೆಯ ದೃಷ್ಟಿಯಿಂದ ಉಪಯೋಗಕರವಾದರೂ, ಮತ್ತೊಂದು ನಿಟ್ಟಿನಲ್ಲಿ ನೋಡಿದಾಗ ಇದರಿಂದಾಗಿ ನಮಗೆ ಸ್ಥಳೀಯ ಭಾಷೆಯ ಹೊದಿಕೆಯಿಂದಿರಬಹುದಾಗಿದ್ದ ಒಂದು ರಕ್ಷಣಾತ್ಮಕ ಕವಚದ ಯಾ ವಲಯದ ಒಂದು ಪದರವೆ ಮಾಯವಾದಂತಾಗಿ ನಾವಲ್ಲಿ ಬೆತ್ತಲೆ ನಿಂತ ಅನುಭವವಾಗುತ್ತದೆ. ಇಲ್ಲಿನ ಜಿಜ್ಞಾಸೆ ಅದು ಸರಿಯಾ ಅಥವಾ ತಪ್ಪಾ ಅನ್ನುವುದಲ್ಲ. ಬದಲಿಗೆ, ಅಂಥ ಒಂದು ಕೊರತೆಯಾಗಬಹುದಿದ್ದ ವಿಷಯವನ್ನು ಸರಿಯಾದ ಆಡಳಿತ ನೀತಿಯಿಂದಾಗಿ ಹೇಗೆ ಅವಕಾಶವಾದಿತನವಾಗಿ ಮಾರ್ಪಡಿಸಿಕೊಳ್ಳಬಹುದೆಂಬ ಹೋಲಿಕೆಗಾಗಿ ಹೇಳಿದ್ದು. ಇದನ್ನು ಸರಳವಾಗಿ ಹೇಳಬೇಕಾದರೆ ಮತ್ತೆ ಚೀನಾದ ಉದಾಹರಣೆ ನೋಡೋಣ. ಅಲ್ಲಿ ಎಲ್ಲಕ್ಕು “ಪೂ ತೊಂಗ್ ಹ್ವಾ” ಇರಲೆ ಬೇಕು, ಇಲ್ಲದಿದ್ದರೆ ನಡೆಯುವುದಿಲ್ಲ. ಆಫೀಸಿನಲ್ಲಿ ಅಷ್ಟಿಷ್ಟು ಆಂಗ್ಲ ಭಾಷಾ ಸಮರ್ಥರು ಸಿಕ್ಕರೂ, ಎಷ್ಟೊ ಸಾರಿ ಅವರ ಜತೆ ಸಂಭಾಷಿಸುವ ಹೊತ್ತಿಗೆ ನಮ್ಮ ಪ್ರೈಮರಿ ಮಕ್ಕಳ ಜತೆ ಇಂಗ್ಲೀಷಿನಲ್ಲಿ ಮಾತಾಡುವುದೆ ಸುಲಭವೆಂಬ ಭಾವನೆ ಬರಿಸಿಬಿಡುತ್ತದೆ ( ಈಚೆಗೆ ಅಲ್ಲೂ ಮಾತನಾಡುವವರ ಸಂಖ್ಯೆ ಹಾಗೂ ಸಾಮರ್ಥ್ಯ ವೃದ್ಧಿಸುತ್ತಿದ್ದರೂ, ಅದೂ ಒಂದು ರೀತಿ ವಿಕಾಸವಾದದ ಹಾದಿಯಿಡಿದು ಅದದ್ದೆ ಹೊರತು ಸ್ವಂತ ಭಾಷೆಗಳ ಹೊಂದಾಣಿಸಿ ಮಾಡಿದ್ದಲ್ಲ). ಇನ್ನು ಹೊರಗಿನ ಪ್ರಪಂಚಕ್ಕೆ ಕಾಲಿಟ್ಟರೆ ಅಂಗಡಿ, ಹಣ್ಣು, ತರಕಾರಿಯೆಲ್ಲಕ್ಕೂ ಅಲ್ಲಿನ ಭಾಷೆ ಗೊತ್ತಿರದಿದ್ದರೆ ದೇವರೆ ಗತಿ – ಬರಿ ಕೈ, ಬಾಯಿ, ಮೂಕ ಸನ್ನೆಗಳನ್ನೆ ಅವಲಂಬಿಸುವ ಪರಿಸ್ಥಿತಿ. ಹೀಗಾಗಿ, ಅಲ್ಲಿಗೆ ಬಂದ ಪರದೇಶಿಗರು ಮೊದಲು ಮಾಡುವ ಕೆಲಸ ಅಲ್ಲಿನ ಭಾಷ ಕಲಿಕೆಯ ಸರ್ಕಸ್ಸಿಗಿಳಿಯುವುದು. ಅಲ್ಲಿನ ಡಿಕ್ಷನರಿ ಹಾಗೂ ಇನ್ನಿತರ ಭಾಷಾ ಸಲಕರಣೆಗಳನ್ನು ಖರೀದಿಸುವುದು, ಪಾಠ ಹೇಳಿಸಿಕೊಳ್ಳಲು ಉಪಾಧ್ಯಾಯರ ವ್ಯವಸ್ಥೆ ಮಾಡಿಕೊಳ್ಳುವುದೊ, ಪುಸ್ತಕಗಳನ್ನು ಖರೀದಿಸುವುದೊ, ‘ಹಾನ್ ಯು ಪಿನ್ ಯಿನ್ ‘ ಮುಖಾಂತರ ಪದಗಳ ಉಚ್ಚಾರಣೆ, ಮತ್ತು ಹೇಳುವ ಬಗೆ ಹಾಗೂ ಕ್ರಮವನ್ನು ಕಲಿಯುವುದೊ – ಹೀಗೆ ಎಷ್ಟು ತರದ ದೈನಂದಿನ ಅನಿವಾರ್ಯಗಳು, ಇನ್ನಷ್ಟು ತರದ ಸ್ಥಳೀಯ ಔದ್ಯೋಗಿಕ ಅಥವ ವ್ಯವಹಾರಿಕ ಅವಕಾಶಗಳಾಗಿ ಬದಲಾಗಿ ಹೋಗಿ, ಸ್ಥಳೀಯ ಉದ್ಯಮವನ್ನು ಸೃಷ್ಟಿಸುತ್ತವೆ ಮತ್ತು ಪೋಷಿಸುತ್ತವೆ. ಅಲ್ಲಿ ಅದು ಅನಿವಾರ್ಯವಾಗಿಬಿಡುತ್ತದೆ, ಗತ್ಯಂತರವಿಲ್ಲದೆ. ನಮ್ಮಲ್ಲಿ, ಅದೂ ಯಾರಾದರೂ ಆಸಕ್ತಿಯಿದ್ದವರೂ, ಬೇಕಿದ್ದರೆ ಮಾತ್ರ ಕಲಿಯಬಹುದಾದ ಸಂಸ್ಕೃತಿಯ ಸರಕಾಗಿಬಿಡುತ್ತದೆ. ಅಂತಹ ವಾತಾವರಣದಲ್ಲಿ ಎಷ್ಟು ಜನ ಬಂದು ಮನಸಿಟ್ಟು ಕಲಿಯುತ್ತಾರೆಂದು ಹೇಳಲೂ ನಾವೇನು ಐನಸ್ಟೀನರೇನೂ ಆಗಬೇಕಿಲ್ಲ. ಹಾಗೆ ನೋಡಿದರೆ ನಮ್ಮವರು ಕಲಿಯುವ ರೀತಿ ನೋಡಿದರೂ ಸಾಕು, ಹಣೆಬರಹ ಗೊತ್ತಾಗಿಬಿಡುತ್ತದೆ.

– ಅದೆ ಭಾಷೆಯ ವಿಶ್ವರೂಪದ ಮತ್ತೊಂದು ಮಗ್ಗುಲು ನೋಡಿ. ಚೈನಾದಲ್ಲಿ ಯಾವುದೆ ಕಂಪನಿ ತಳವೂರಿದರೂ ಅಲ್ಲಿನ ಸ್ಥಳೀಯ ಕಾಯ್ದೆ ಕಟ್ಟಲೆ ಪಾಲಿಸಬೇಕಾದ ನಿಯಮ ಎಲ್ಲಾ ದೇಶಗಳಂತೆ ಅಲ್ಲೂ ಇದೆ. ಆದರೆ, ಅಲ್ಲಿನ ವಿಶೇಷವೆಂದರೆ ಅವೆಲ್ಲ ಹೆಚ್ಚುಕಮ್ಮಿ ಚೀನೀ ಭಾಷೆಯಲ್ಲಿ ಮಾತ್ರವೆ ಇರುತ್ತದೆ. ಅದನ್ನು ಅರ್ಥೈಸಲು, ಭಾಷಾಂತರಿಸಲು, ದೈನಂದಿನ ವ್ಯವಹಾರದಲ್ಲಿ ಅಲ್ಲಿನ ನಿಯಮಕ್ಕೆ ತಕ್ಕಂತೆ ಅದನ್ನು ಸಂಭಾಳಿಸಲು ಆ ಭಾಷೆ ಬಲ್ಲವರೆ ಬೇಕು. ಅಂದರೆ, ಹೊರಗಿಂದ ಬಂದ ಕಂಪನಿಗಳು ಭಾಷೆ ಬಲ್ಲ ಸ್ಥಳೀಯರಿಗೆ ಕೆಲಸ ಸೃಷ್ಟಿಸಿಕೊಡಬೇಕು, ಇಲ್ಲವೆ ಈ ರೀತಿಯ ಸೇವಾದಾನ ಮಾಡುವ ಸಣ್ಣ ಪುಟ್ಟ ಸಂಸ್ಥೆಗಳ ಮೊರೆ ಹೋಗಬೇಕು – ತೆರಬೇಕಾದ ತೆರ ತೆತ್ತು. ಹೇಗೆ ಮಾಡಿದರೂ ಅದು ಸ್ಥಳೀಯ ಕಾರ್ಮಿಕರ ಮತ್ತು ಉದ್ಯೋಗದ ಪೋಷಣೆಗೆ ಪೂರಕವೆ ಆಗಿ ಅಲ್ಲಿನ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ಬಲ ಕೊಡುತ್ತದೆ. ಬಹುಶಃ ಇದು ಯಾವ ಮಟ್ಟದಲ್ಲಿರಬಹುದೆಂದರೆ, ಒಂದು ವೇಳೆ ಅಲ್ಲಿನ ಸರ್ಕಾರ ಎಲ್ಲ ಇಂಗ್ಲೀಷಿನಲ್ಲಿದ್ದರೆ ಸಾಕು ಎಂದೇನಾದರೂ ನಿರ್ಧಾರ ಮಾಡಿದರೆ – ಸುಮಾರು ಜನ ಕೆಲಸವಿಲ್ಲದೆ ಬೀದಿಗೆ ಬೀಳುವ ಗತಿ ಬಂದುಬಿಡುತ್ತದೊ ಏನೊ? (ಅವರೇನು ಅಂತಾ ಮೂರ್ಖತನದ ಕೆಲಸ ಮಾಡುವುದಿಲ್ಲ ಬಿಡಿ!). ಇಲ್ಲಿ ಸ್ವಲ್ಪ ಆಳವಾಗಿ ನೋಡಿದರೆ ಎದ್ದು ಕಾಣುವ ಒಂದು ಸರಳ ಅಂಶ – ಇದ್ಯಾವುದು ಅಲ್ಲಿ ತಂತಾನೆ ಏನೂ ಆಗುತ್ತಿಲ್ಲ. ಎಲ್ಲದರ ಹಿಂದೆ ಒಂದು ಆಡಳಿತಾತ್ಮಕ ಸಮಷ್ಟಿ ಪ್ರಜ್ಞೆ ವ್ಯವಸ್ಥಿತ ರೂಪದಲ್ಲಿ ಕೆಲಸ ಮಾಡುತ್ತಿದೆ. ಒಂದು ನಿಯಮಬದ್ಧ ಸೈದ್ದಾಂತಿಕ ಪ್ರಜ್ಞೆ ಸಮಗ್ರ ಯೋಜನೆ ರೂಪಿಸುವ ಹಂತದಿಂದ ಹಿಡಿದು ವಿನ್ಯಾಸ, ಅಳವಡಿಕೆ, ಅನುಸರಣೆಗಳೆಲ್ಲದರ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡ ಕರಡು ಹೊರಬರುವವರೆಗು, ಆ ಕಾರ್ಯದ ಹಿಂದಿನ ಬೌದ್ದಿಕ, ಪ್ರೇರಕ ಮತ್ತು ಪೋಷಕ ಶಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಯಾವಾಗ ಅದು ಸಿದ್ದ ರೂಪದಲ್ಲಿ ಎಲ್ಲಾ ಹಂತದಲ್ಲಿನ ಬಳಕೆಗೆ ಹೊರಬರುವುದೊ, ಆಗ ಮುಂದಿನ ಪ್ರಶ್ನೆ ಯಾರು ಅದನ್ನು ಒಪ್ಪುವರೊ, ಬಿಡುವರೊ ಅನ್ನುವುದಲ್ಲಾ – ಬದಲಿಗೆ ಎಷ್ಟು ಶೀಘ್ರದಲ್ಲಿ ಅದನ್ನು ಅಳವಡಿಸಿಕೊಳ್ಳುವರೊ ಎನ್ನುವುದು. ದೇಶಾದ್ಯಂತ ಇರುವ ಒಂದು ಸಮಗ್ರ ಆಡಳಿತ ವ್ಯವಸ್ಥೆಯಿಂದಾಗಿ ಮತ್ತು ಪ್ರಶ್ನಾತೀತ ಅಧಿಕಾರದ ಹೊದಿಕೆಯಡಿಯಲ್ಲಿ ಆಜ್ಞಾರೂಪದಲ್ಲಿ ವಿತರಣೆಯಾಗುವ ಎಲ್ಲಾ ಯೋಜನೆಗಳು ಸರಸರನೆ ಕಾರ್ಯಗತವಾಗತೊಡಗುತ್ತವೆ, ಕ್ಷಿಪ್ರ ವೇಗದಲ್ಲಿ. ಅದರಲ್ಲೂ, ಅಲ್ಲಿನ ಕಾರ್ಮಿಕರ ಶ್ರಮಿಕ ಮನೋಭಾವದ ಹಿನ್ನಲೆಯಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹಿಡಿಯುವ ಅರ್ಧಕ್ಕಿಂತಲೂ ಕಡಿಮೆ ಸಮಯದಲ್ಲೆ ಎಲ್ಲಾ ಕೆಲಸಗಳು ಕಾರ್ಯಗತವಾಗಿಬಿಡುತ್ತವೆ; ಪ್ರಸ್ತುತ ಅದಕ್ಕಿರುವ ದೈತ್ಯ ಆರ್ಥಿಕ ಬಲದಿಂದಾಗಿ ಹಣಕಾಸಿನ ಕೊರತೆಯಂತೂ ಇರುವುದಿಲ್ಲ. ಹೀಗಾಗಿ ಯಾರೊ ಹೇಳಿದ ಈ ಮಾತು ಎಷ್ಟು ಸತ್ಯ ಅನಿಸಿಬಿಡುತ್ತದೆ – ‘ಈ ದೇಶಕ್ಕೆ ಯಾವುದೆ ಪಟ್ಟಣ, ನಗರಕ್ಕಾದರೂ ಸರಿ – ಕನಿಷ್ಟ ಆರು ತಿಂಗಳು, ವರ್ಷಕ್ಕೊಮ್ಮೆಯಾದರೂ ಬಂದು ಹೋಗದಿದ್ದರೆ ಮುಂದಿನ ಬಾರಿ ಬಂದಾಗ ಹಿಂದೆ ನೋಡಿದ್ದ ಗುರುತೂ ಸಿಗದಷ್ಟು ಬದಲಾಗಿಹೋಗಿರುತ್ತದೆ’. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ವೇಗ ಇಲ್ಲಿ ಬಂದು ನೋಡದಿದ್ದರೆ ಊಹಿಸಲೂ ಆಗದಷ್ಟು ತೀವ್ರ ನಾಗಾಲೋಟ.

ಅದೆ ನಮ್ಮ ದೇಶದಲ್ಲಿ ಬರುವ ಯಾವುದೆ ಬಹುರಾಷ್ಟ್ರಿಯ / ಬಹು ಪ್ರಾಂತೀಯ ಕಂಪನಿಗಳ ಸ್ಥಿತಿ ನೋಡಿ – ಮಾನಸಿಕವಾಗಿ, ಸ್ಥಳೀಯ ಮತ್ತು ಪ್ರಾಂತೀಯ ಭಾಷೆ, ನೀತಿ, ನಿಯಮಗಳ ಪರಿಪಾಲನೆಗೆ ಪೂರ್ತಿ ಸಿದ್ದವಾಗಿಯೆ ಬರುವ ಈ ಸಂಸ್ಥೆಗಳು, ಇಲ್ಲಿ ಬಂದಾಗ ಅರಿಯುವ ಮೊದಲ ಅಂಶ – ಭಾಷೆ, ನೀತಿ , ನಿಯಮಾವಳಿಗಳ ವಿಷಯದಲ್ಲಿ ಇಲ್ಲಿ ಎಷ್ಟೊಂದು ಗೊಂದಲಗಳಿವೆ ಎಂಬುದು. ನಿಧಾನವಾಗಿ, ಇಂಗ್ಲೀಷಿನಂತ ಪ್ರಮುಖ ಭಾಷೆಯೊಂದಿದ್ದರೆ ಸಾಕು – ಮಿಕ್ಕೆಲ್ಲ ಹೇಗೊ ನಿಭಾಯಿಸಬಹುದೆಂಬ ‘ಜ್ಞಾನೋದಯ’ ಉಂಟಾಗುತ್ತದೆ. ಒಂದು ವೇಳೆ ಸ್ಥಳೀಯ ಕಾನೂನು , ಕಟ್ಟಳೆಗಳಿದ್ದರೂ ಮೇಲು ಸ್ತರದ ನಿಭಾಯಿಸುವ ಮಟ್ಟದಲಷ್ಟೆ ಇರುವುದರಿಂದಾಗಿ ಅದೇನು ದೊಡ್ಡ ತೊಡಕಾಗುವುದಿಲ್ಲ. ಇಲ್ಲಿನ ಸ್ಥಳೀಯ ತೊಡಕುಗಳಿಂದ ಕಂಗಾಲಾಗುವ ಬದಲು, ಅವೆ ಈ ತೊಡಕುಗಳನ್ನು ಇನ್ನಷ್ಟು ಕಗ್ಗಂಟಾಗಿಸುವ ದಿಕ್ಕಿನಲ್ಲಿ ಸಾಗಲಿಕ್ಕೆ ಈ ಪರಿಸ್ಥಿತಿ ಅನುವು ಮಾಡಿಕೊಡುತ್ತದೆ. ಅಲ್ಲಿ ಕೆಲಸ ಮಾಡುವವರೂ ಎಲ್ಲಾ ಕಡೆಯಿಂದ ಬಂದು ಸೇರಿದವರಾಗಿ ಮತ್ತೆ ಭಾಷೆಯ ತೊಡಕು ಪರಿಹಾರಕ್ಕೆ ಆಂಗ್ಲಭಾಷಾ ಮಾತ್ರೆ ‘ಸರ್ವ ರೋಗಾನಿಕಿ…’ ಅನ್ನುವ ರೀತಿಯಲ್ಲಿ ಸಂಜೀವಿನಿ ಮಂತ್ರವಾಗಿಬಿಡುತ್ತವೆ. ಇನ್ನು ವೈಯಕ್ತಿಕ ಒಡನಾಟದ ಮಟ್ಟದಲ್ಲಿಯಂತೂ – ‘ವಿವಿಧತೆಯಲ್ಲಿ ಏಕತೆ’ ; ಅನೌಪಚಾರಿಕವಾಗಿ ಭಾಷಾವಾರೂ ಗುಂಪುಗಳು, ಪ್ರಾಂತೀಯ ಕೂಟಗಳು ಒಂದೊಂದಾಗಿ ತಲೆಯೆತ್ತಿ ತಮ್ಮದೆ ಆದ ಹರಿವಿನಲ್ಲಿ ಸಮಾನಾಂತರ ಅಂತರ್ಜಲವಾಗಿ ಹರಿಯತೊಡಗುತ್ತವೆ. ಅನಾಚಾರಿಕ ಮಟ್ಟದಲ್ಲೆ ಆದರೂ, ವ್ಯಕ್ತಿಗಳಿಗರಿವಿಲ್ಲದೆ ಇವು ಔಪಚಾರಿಕ ನಡಾವಳಿಗಳಲ್ಲೂ ತಮ್ಮ ಛಾಪನ್ನು ಪ್ರತ್ಯಕ್ಷವಾಗಿಯೊ, ಅಪ್ರತ್ಯಕ್ಷವಾಗಿಯೊ ಒತ್ತಲಾರಂಭಿಸುತ್ತವೆ. ಹೀಗೆ ಎಲ್ಲವೂ ತಂತಮ್ಮದೆ ಆದ ಸ್ವತಂತ್ರ ಕಾಲುವೆಗಳಲ್ಲಿ ಯಾರ ಹಂಗಿಲ್ಲದೆ, ಯಾರ ಅರಿವಿಗೂ ಬಾರದಂತೆ ಅಸ್ಥಿತ್ವದಲ್ಲಿರುವ ವಾತಾವರಣ ನಿರ್ಮಾಣವಾಗುತ್ತದೆ. ಇದೆಲ್ಲದರಲ್ಲೂ ಒಂದು ಮಾತ್ರ ಸಮಾನ ಅಂಶವಾಗಿ ಎಲ್ಲರ ಹತ್ತಿರವೂ ಏಕರೂಪದ ವರ್ತನೆಯನ್ನು ಹೊರಡಿಸುತ್ತದೆ – ಕೆಲಸಕ್ಕೆ ಸಂಬಂಧಿಸಿದ ಪರಸ್ಪರರ ಸಂವಹನಾ ಭಾಷೆ. ಪರಕೀಯವಿದ್ದರೂ ಎಲ್ಲರು ಅದನ್ನೆ, ಬಳಸುತ್ತ, ಕಲಿಯುತ್ತ, ಪೋಷಿಸುತ್ತ, ಅನುಸರಿಸುತ್ತ ನಡೆಯುವ ಪರಿಸ್ಥಿತಿ. ಯಾವುದೆ ಸಂಸ್ಕೃತಿ, ಕಲಾಚಾರ, ಆಚಾರ – ವಿಚಾರಗಳ ಹೆಬ್ಬಾಗಿಲೆ ಭಾಷೆ. ಆ ಬಾಗಿಲನ್ನು ತೆರೆಯುತ್ತಿದ್ದಂತೆ ಮಿಕ್ಕೆಲ್ಲವೂ ನಿಧಾನವಾಗಿ ಅಂತರ್ಜಲದಂತೆ ಹರಿದುಬರತೊಡಗುತ್ತವೆ. ಹಾಗೆ ಬಂದ ಹರಿವು ಸುಮ್ಮನೆ ಬರುವುದಿಲ್ಲ – ಅದು ಹಳತಿನ ಮೇಲೆ ಹರಿಯುತ್ತ, ನಿಧಾನವಾಗಿ ಅದನ್ನು ಮುಚ್ಚುತ್ತಲೊ, ತೊಳೆಯುತ್ತಲೊ ಅದನ್ನೆ ಆವರಿಸಿಕೊಂಡುಬಿಡುತ್ತದೆ. ಹಳತೆ ತನ್ನ ಅಸ್ತಿತ್ವಕಾಗಿ ಹೋರಾಡುವ ಸ್ಥಿತಿ ತಂದಿಕ್ಕುವುದು ಮತ್ತೊಂದು ಹೇಳದೆಯೂ ಅರಿವಾಗುವ ಪರಿಣಾಮ. ಹೀಗೆ ತೆರೆದುಕೊಂಡ ಹೊರಗಿನ ಹೆಬ್ಬಾಗಿಲು, ಒಳಗಿನ ಹಳೆ ಹೆಬ್ಬಾಗಿಲನ್ನು ಮುಚ್ಚಿಹಾಕಲು ಬೇಕಾದ ಆಮಿಷ, ಪರಿಕರ, ಶಕ್ತಿ ಸಾಮರ್ಥ್ಯಗಳನ್ನೆಲ್ಲ ಹೊತ್ತೆ ಬಂದಿರುವುದರಿಂದ, ಯಾವುದೆ ಬಗೆಯ ಹೋರಾಟವನ್ನು ದಮನಿಸಿ ನೆಲೆಯಾಗುವ ಧಾರ್ಷ್ಟ್ಯ ಸಹಜವಾಗಿಯೆ ಇವುಗಳಲ್ಲಿರುವುದರಿಂದ – ಈ ಪ್ರಕ್ರಿಯೆ ನಡೆಯುವುದೊ, ಬಿಡುವುದೊ ಎಂಬ ಪ್ರಶ್ನೆಯೆ ಉದ್ಭವಿಸುವುದಿಲ್ಲ; ಬದಲಿಗೆ ಎಷ್ಟು ನಿಧಾನವಾಗಿ ಅಥವಾ ಎಷ್ಟು ಶೀಘ್ರವಾಗಿ ನಡೆಯಲಿದೆ ಎಂಬುದಷ್ಟೆ ಪ್ರಶ್ನೆಯಾಗಿ ಉಳಿಯುತ್ತದೆ. ಆಡಳಿತಾತ್ಮಕ, ಸಮಗ್ರರೂಪದ ಬೆಂಬಲವಿಲ್ಲದ ಯಾವ ಚಳುವಳಿಯೂ ವೈಯಕ್ತಿಕ ಮಟ್ಟದಲ್ಲಿ ನಿರಂತರವಾಗಿ ನೆಲೆ ನಿಲ್ಲುವುದು ಅಸಾಧ್ಯ. ಹೀಗಾಗಿ ಹಾಗೆ ಪ್ರತಿಭಟಿಸ ಬಯಸುವರಲ್ಲು ಸಿನಿಕತೆ, ಅಸಹಾಯಕತೆ, ಸೋತ ಮನೋಭಾವ.

ಹೀಗೆ ಹೋಲಿಕೆಯ ಭೂತಗನ್ನಡಿಯಲ್ಲಿ ನೋಡುತ್ತಾ ಹೋದರೆ ಒಂದರ ಹಿಂದೆ ಒಂದು ಪುಂಖಾನುಪುಂಖವಾಗಿ ಪಟ್ಟಿ ಮಾಡುತ್ತ ಹೋಗಬಹುದಾದರೂ, ಇಲ್ಲಿನ ಉದ್ದೇಶ ಅದಲ್ಲ. ಅಥವಾ ಅಲ್ಲೆಲ್ಲಾ ಅದ್ಭುತವಾಗಿದೆ, ಇಲ್ಲೆಲ್ಲ ಕಳಪೆ ಎನ್ನುವ ಇರಾದೆಯೂ ಅಲ್ಲ. ಒಂದು ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಯುತ್ತಿರುವ ರೀತಿಯಲ್ಲಿ, ಯಾಕೆ ನಮ್ಮ ವ್ಯವಸ್ಥೆಯಲ್ಲೂ ನಡೆಯುತ್ತಿಲ್ಲ ಎನ್ನುವ ಜಿಜ್ಞಾಸೆ. ನಮ್ಮ ಪಂಥಗಳೆ ಬೇರೆ, ನಮ್ಮ ಆಡಳಿತ ನೀತಿ ಸೂತ್ರ ಪರಿಮಾಣಗಳೆ ಬೇರೆ, ನಮ್ಮ ಮನೋಭಾವವೆ ಬೇರೆ, ಸಂಸ್ಕೃತಿಯ ಬೇರುಗಳೆ ಬೇರೆ – ಎಲ್ಲವೂ ನಿಜ. ಆದರೆ ಇವೆಲ್ಲದರ ಧನಾತ್ಮಕ ಮೊತ್ತವಾಗಿ ಅರಳುವ ಬದಲು ನಮ್ಮ ಪ್ರಗತಿಯೇಕೆ ಕುಂಟುಗಾಲಿಕ್ಕುತ ಹಿಂದುಳಿಯುತ್ತಿದೆ? ರೂಪಾಯಿಯ ಅಪಮೌಲ್ಯವಾಗಲಿ, ಭರಿಸಲಾಗದ ಜೀವನ ನಿರ್ವರ್ಹಣಾಮಟ್ಟದ ವೆಚ್ಚಗಳಾಗಲಿ, ಕುಗ್ಗುತಿರುವ ಪ್ರಗತಿಯ ವೇಗವಾಗಲಿ, ಕಚ್ಚಾಟನಿರತ ರಾಜಕೀಯ ಲಂಪಟತನವಾಗಲಿ, ಅಶಕ್ತರ ಹಾಗೂ ಸ್ತ್ರೀಯರ ಮೇಲಿನ ದಬ್ಬಾಳಿಕೆಯಾಗಲಿ, ಕೊನೆಗೆ ಇದನ್ನೆಲ್ಲ ಅಸಹಾಯಕತೆಯಿಂದ ನೋಡಬೇಕಾದ ಸಾತ್ವಿಕ ರೋಷವೆ ಆಗಲಿ – ಏನಿದರ ಹಿಂದಿನ ಕಾರಣ? ಯಾರಿದರ ಹೊಣೆ ಹೊತ್ತು ನಿಭಾಯಿಸುವವರು? ಯಾರು ಇದನ್ನು ಸರಿಪಡಿಸುತ್ತ ದೇಶದ ಘನತೆ, ಗೌರವಗಳ ಬಾವುಟ ಜಗತ್ತಿನ ಭೂಪಟದಲ್ಲಿ ಮತ್ತೆ ಗೌರವ, ಗರ್ವಗಳಿಂದ ಹಾರಾಡುವಂತೆ ಮಾಡಬಲ್ಲ ಜಾದೂಗಾರ? ಮಸಲಾ, ಬದಲಾವಣೆಯಾಗಬೇಕಾದ ಅಗತ್ಯವನ್ನಂತು ಎಲ್ಲರು ಒಕ್ಕೊರಲಿಂದ ಒಪ್ಪುವ ಮಾತು; ಆದರೆ ಬದಲಾಗಬೇಕಿರುವುದು ಯಾರು ಮತ್ತು ಯಾವುದು? ಮೊತ್ತ ಬದಲಾಗಬೇಕಿರುವುದು ನಾವಾ, ನೀವಾ ಅಥವಾ ವ್ಯವಸ್ಥೆನಾ? ಅಥವಾ ಇದೆಲ್ಲದರ ಮೊತ್ತವಾದ ಸಂಘಟಿತ , ಸಾಮಾಜಿಕ ಪ್ರಜ್ಞೆಯಾ?

ಉತ್ತರಗಳು ಸುಲಭದ್ದಲ್ಲ. ಗೊಂದಲಗಳು ಸರಳದ್ದು ಅಲ್ಲ. ಜಾಗತೀಕರಣದ ಸಂವಹನ ಕ್ರಾಂತಿಯಲ್ಲಿ ಈಗ ಹೆಚ್ಚೆಚ್ಚು ಸಾಮೂಹಿಕ ಮತ್ತು ಸಾಂಘಿಕ ಸಂಪರ್ಕಗಳು ಆಗಬಹುದಾದರೂ, ಅದನ್ನು ಸಮಷ್ಟಿ ಶಕ್ತಿಯ ಮಟ್ಟದಲ್ಲಿ ಕ್ರೋಢಿಕರಿಸಿ, ಒಗ್ಗಟ್ಟಿನ ಮೂಸೆಯಲಿ ಉಂಡೆಗಟ್ಟಿ ಒಂದು ಸಂಘಟಿತ ಸೂತ್ರದ ಗೋವರ್ಧನ ಗಿರಿಯಡಿಯಲ್ಲಿ ಮುನ್ನಡೆಸಬೇಕಾದ ದೂರದೃಷ್ಟಿ ನಾಯಕತ್ವ ಮತ್ತು ಅದನ್ನು ಸಾಧ್ಯವಾಗಿಸುವ ಸಾಮಾಜಿಕ ಹಾಗೂ ನೈತಿಕ ಜನ ಜಾಗೃತಿ, ಪ್ರಜ್ಞೆ ಈಗಿನ ಅತ್ಯಾಗತ್ಯ ಅನಿವಾರ್ಯಗಳಲ್ಲಿ ಒಂದು. ಆ ಮರೀಚಿಕೆ, ನಮ್ಮ ಸಂಕೀರ್ಣ ವ್ಯವಸ್ಥೆಯಲ್ಲಿ ಸಾಧ್ಯವಾದೀತೆ ಅಥವಾ ‘ಕರ್ಮಣ್ಯೆ ವಾಧಿಕಾರಸ್ತೆ….’ ಎಂದುಕೊಳ್ಳುತ ಆಗಾಗಬಹುದೆಂಬ ಆಶಯದೊಂದಿಗೆ ಭವಿಷ್ಯದತ್ತ ದೃಷ್ಟಿನೆಟ್ಟು ಕಾಯುತ್ತ ಕೂರುವುದೆ ನಮ್ಮ ದೇಶದ ಹಣೆಬರಹವಾಗಿಬಿಡುತ್ತದೆಯೆ?

ಇದೆಲ್ಲದಕ್ಕು ಉತ್ತರವನ್ನು ಕಾಲವೆ ಹೇಳಬೇಕು.

– ನಾಗೇಶ ಮೈಸೂರು
(published in sampada on 10.08.2013)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s