00084. ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ವ್ರತ

ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದಲಿ ಅವರೂ ಸಹಾಯ ನಿರತರೆ. ಅವರೆಲ್ಲರ ಪರವಾಗಿ , ಮುಖ್ಯ ಸಂಪದದ ವನಿತಾ ಬಳಗದ ಪರವಾಗಿ ಶ್ರೀ ಮಹಾಲಕ್ಷ್ಮಿಗೆ ಈ ಕವನ ರೂಪದ ಹಾಡಿನ ಅರ್ಪಣೆ. ಬಾಲ್ಯದಲ್ಲಿ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡುತ್ತಿದ್ದ ಮಸುಕು ಮಸುಕು ನೆನಪು. ಏನೆಲ್ಲಾ ಮಾಡುತ್ತಿದ್ದರೆಂಬ ವಿವರ ಸ್ಪಷ್ಟವಾಗಿ ನೆನಪಿಲ್ಲವಾದರೂ, ಮಬ್ಬಿನ ನೆನಕೆಗೆ ಕವನ ರೂಪ ಕೊಡಲೆತ್ನಿಸಿದ್ದೇನೆ – ನಾಗೇಶ ಮೈಸೂರು

ವರಮಹಾಲಕ್ಷ್ಮಿ ವ್ರತ
____________________________

ಶ್ರಾವಣದೀ ಶುಕ್ರವಾರ ವರಮಹಾಲಕ್ಷ್ಮಿ ವ್ರತ
ಹೆಜ್ಜೆ ಮೇಲ್ಹೆಜ್ಜೆಯಿಟ್ಟು ಬರುವಳು ತಾ ಹರಸುತ
ಶ್ರೀಹರಿಯ ವಕ್ಷದಿಂದ ಇಳಿದು ಬಂದ ಸುಭೀಕ್ಷ
ತೆರೆದಿಡು ಮನೆ-ಮನ ಬಾಗಿಲ ಮಾಡದೆ ಅಲಕ್ಷ್ಯ ||

ಮಡಿಯುಟ್ಟು ಮನದೊಳಗೆ, ಭಕ್ತಿ ಎದೆಯೊಳಗೆ
ರೇಷ್ಮೆ ಬೆಳ್ಳಿ ಬಂಗಾರದೊಡವೆ ಫಳಫಳ ಹೊರಗೆ
ಕಲಶದಲಿ ತುಂಬಿಸಿ ನಾಣ್ಯ ಐಶ್ವರ್ಯ ಬಿನ್ನಾಣ
ಬಾಳೆಲೆಗ್ಹರಡಿದ ಅಕ್ಕಿಯ ಮೇಲೆ ಕುಳಿತ ಚೆನ್ನ ||

ಹಾರವಾಗಿ ಕಲಶಕೆ ತಳಿರು ಮಾವಿನೆಲೇ ತೆಕ್ಕೆ
ಅರಿಶಿನ ಕುಂಕುಮ ಚಂದನ ಹೂವ್ವಲಂಕಾರಕ್ಕೆ
ಸರ್ವಾಲಂಕಾರಭೂಷಿತೆ ಲಕ್ಷ್ಮಿದೇವಿ ನಗುವಂತೆ
ಹೆಣ್ಣು ಹೆಂಗಳೆ ಬಾಲೆಯರೆಲ್ಲ ಸಡಗರದ ಮಾತೆ ||

ಕರೆದ ಅರಿಶಿನ ಕುಂಕುಮಕೆ ವನಿತೆಯರ ಆಗಮ
ಹಂಚಿ ತಾಂಬೂಲ ಪ್ರಸಾದ ನಾರಿಲಕ್ಷ್ಮಿ ಸಂಭ್ರಮ
ಬಂದವರೆಲ್ಲರ ಭಾಗ್ಯ ನೆಲೆ ನಿಲಿಸಲಿರೆ ಸೌಭಾಗ್ಯ
ಐಶ್ವರ್ಯ ಸಂಪದ ಸಮೃದ್ಧಿಗೆಲ್ಲ ಆಗುತ ಯೋಗ್ಯ ||

ಶ್ರೀಹರಿಗಂಚುವವಳ ಪ್ರೀತಿ ಹಂಚುವಳೊಲೈಸಿರೆ
ಹರಿಯ ಮುಟ್ಟುವ ಹಾದಿ ತೆರೆದೆ ಸಂಪತ್ತಿನಾಸರೆ
ಭಕ್ತಿ ಮಾರ್ಗದೆ ಮುಕ್ತಿ ಐಶ್ವರ್ಯದ ಜತೆ ಕರುಣಿಸಿ
ಮುತ್ತೈದೆಯೆಲ್ಲರ ಬಾಳಲಿ ನೆಮ್ಮದಿ ಮಳೆ ಸುರಿಸಿ ||

ಮಕ್ಕಳಿಗೆಲ್ಲ ಕೊಬ್ಬರಿ ಸಕ್ಕರೆಯೆ ತಾಂಬೂಲವಾಗಿ
ನೆರಿಗೆಯ ಜರಿ ರೇಷ್ಮೆ ಲಂಗ ದಾವಣಿಯ ಹುಡುಗಿ
ಮನೆಯೊಳಗ್ಹೊರಗೆಲ್ಲ ಓಡಾಡುತಿರಲಾ ಸಂತಾನ
ಇಷ್ಟ ಅಷ್ಟ ಲಕ್ಷ್ಮಿಗಳೆಲ್ಲ ಒಂದೇ ಅಂಗಳಕಾಗಮನ ||

ಇಷ್ಟಾರ್ಥಕೋಟಿ ಸಿದ್ಧಿಯಾಗೊ ಫಲಶ್ರುತಿ ಕೊಟ್ಟು
ಮನೆಮನಗಳೆಲ್ಲರಲಿ ತುಂಬಿಸಮ್ಮ ಕರುಣೆಯಿಟ್ಟು
ಬೇಡದಿದ್ದರು ಕೊಡುತ ವರಗಳ ಹರ್ಷದ ಹಾಡು
ಎಲ್ಲಾ ನಾರಿ ಮನೆಮನ ಮಹಾಲಕ್ಷ್ಮಿಯಾಗಿಬಿಡು ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
August 16, 2013 – saMpada published

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s