00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…

ಹೊರನಾಡುಗಳಲ್ಲಿ ನೆಲೆಸಿದ ಮನಸುಗಳಿಗೆ ತಾಯ್ನಾಡಿನ ತುಡಿತ ಸಹಜವಾಗಿ ಕಾಡುವ ಪ್ರಕ್ರಿಯೆ. ಅಂತೆಯೆ ತಾಯ್ನಾಡಿನಲಿ ಇರುವವರಿಗೆ ಸ್ಥಳೀಯ ಭ್ರಮ ನಿರಸನ, ಸಿನಿಕತೆಯಿಂದ ಹೇಗಾದರೂ ಬಿಡುಗಡೆಯಾಗುವ ಹಂಬಲಿಕೆ. ಹೀಗಾಗಿ ಎರಡೂ ಕಡೆಯಲ್ಲೂ, ಪಕ್ಕದವನ ಮನೆಯ ತೋಟ ಹಸಿರಾಗಿ ಕಾಣುವ ವಿಪರ್ಯಾಸ. ಒಟ್ಟಾರೆ, ಯಾವ ರೀತಿಯಲ್ಲೊ ಸಿಗದುದರ ಹುಡುಕಾಟವಂತೂ ತಪ್ಪಿದ್ದಲ್ಲಾ. ಆದರೆ ಆ ಹುಡುಕಾಟದ ಹವಣಿಕೆಯೆ ಸೃಜನಶೀಲತೆಯ, ಕ್ರಿಯಾಶೀಲತೆಯ ಮೂಲ ಸರಕಾಗಿ ಹೊಸ ಆಯಾಮಗಳತ್ತ ಚಿಮ್ಮಿಸಿದರೆ ಅಚ್ಚರಿಯೇನೂ ಇಲ್ಲ; ಮತ್ತೆ ಕೆಲವೆಡೆ ಹತಾಶೆಯ ಪಾತಾಳಕ್ಕಿಳಿಸಿದರೂ ಸೋಜಿಗವೇನಲ್ಲ. ಈ ಬದಿಯ ತಾಕಲಾಟದ ಕೆಲ ತುಣುಕನ್ನು ಹಿಡಿದಿಡುವ ಸರಳ ಯತ್ನ – ಈ ಕಾವ್ಯ ಬರಹ.

ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…
_________________________________

ಬೇಕು ಸಿಂಗಪುರದಲೊಂದು ಚಾಮುಂಡಿ ಬೆಟ್ಟ
ಜತೆಗೆ ಸೆಗಣಿ ಸಾರಿಸಿದ ನೆಲ ಏಣಿಯಾ ಅಟ್ಟ
ಹಾಗೆ ಖಾಲಿ ನೆಲದ ಸೈಟು ಸ್ವಂತಕ್ಕೆ ಸಗಟು
ಒಳಗೊಂದು ಬಂಗಲೆ ಕೈತೋಟ ಮರ ಸೊಟ್ಟು!

ಕಾರಂಜಿ ಕುಕ್ಕರಹಳ್ಳಿ ಕೆರೆಗಳ ಕೊಚ್ಚೆ ಜತೆಗಿಟ್ಟು
ಅಗ್ರಹಾರದಾ ಜಟಕಾ ಬಂಡಿಯೊಂದನು ಕಟ್ಟು
ಸಾವಿರ ಮೆಟ್ಟಿಲ ಪಾದದ ಅಷ್ಟಿಷ್ಟಾದರು ಇಟ್ಟು
ಚಬುಕು ಟಕಟಕನೆನಿಸಿರೆ ನಡೆಸುತ ಸಾರೋಟು!

ಪುರಮ್ಮುಗಳ ಬೀದಿಯಲೊದ್ದಾಡುವ ಮಲ್ಲಿಗೆ ಬಳ್ಳಿ
ಪೀಪಿ ಕೇಸರಿ ಹೂವ್ವ ಬಿರಿದ ಮನೆ ಮೂಲೆಯ ಕಳ್ಳಿ
ಖಾಲಿ ಸೈಟ ಪಾರ್ಥೇನಿಯಂ ಸಡ್ಡು ಹೊಡೆದು ಎಕ್ಕ
ನೀಲಿ ಬಿಳಿ ಸ್ಪಟಿಕದೆಸಳು ಆರಿಸೊ ಬುಟ್ಟಿಯ ಪಕ್ಕ!

ಗಲ್ಲಿಗಲ್ಲಿಲ್ಲೊಂದು ಕಾಕಾ ಸೇಟು ಡೈಮಂಡ್ ಟೀ ಕಿಕ್ಕ
ರಸ್ಕು ಬಿಸ್ಕತ್ತುಗಳ ಅದ್ದಿ ಸಿಗರೇಟಿಗರ ಸೇದೊ ಲೆಕ್ಕ
ನಂಜುಮಾಳಿಗೆ ವೃತ್ತ ಲೋಕಾಭಿರಾಮದಲಿ ಮಾತು
ಬರಿ ಕಾಡು ಹರಟೆ ಖಾಲಿ ಮಾತಲೆ ಕಳೆದ ಹೊತ್ತು!

ಅಶ್ವತ್ಥಕಟ್ಟೆಯಡಿ ಕೂತು ದೇವರಿಗೊಪ್ಪಿಸಿದ ವರದಿ
ಅರ್ಧಕರ್ಧವದರಲಿ ಬರಿ ಸಿನೆಮ ನೋಡಿದ ಸುದ್ಧಿ
ಆ ಹುಡುಗಿ ಈ ಹುಡುಗ ಅವರಿವರದೇ ಮಾತುಕಥೆ
ಯಾಕೊ ಕಾಣೆಯಾಗಿವೆ, ಹೋಯ್ತೆಲ್ಲಿ ನಿಮಗೆ ಗೊತ್ತೆ?

ಹತ್ತೆ ನಿಮಿಷದ ದೂರ, ಅರಮನೆಯಾ ಸಪರಿವಾರ
ಇದ್ದರು ಸಾಕು ಭಾಗ, ನಾವೆ ಹಚ್ಚೊ ದೀಪಾಲಂಕಾರ
ಟಿಕೆಟ್ಟಿಲ್ಲದೆ ಕೂತು ನೋಡುವಾ ಪ್ರಾಂಗಣ ದರ್ಬಾರು
ಮುಳುಗೇಳುವ ಜೋಲೆ ರವಿರಥದ ಆರಾಮ ಛೇರು!

ಚಿಕ್ಕ ದೊಡ್ಡ ಮಾರ್ಕೆಟ್ಟು, ಸರ್ಕಲ್ಲಿನಲೆ ಹಣ್ಣು,ಹೂಕಟ್ಟು
ಗುರುಗಳೊ ಪ್ರಭುಗಳೊ ಮೈಸೂರು ಪಾಕಿನ ಪ್ಯಾಕೆಟ್ಟು
ಪುಟ್ಟಿ ಬುಟ್ಟಿ ಬಿದಿರ ತಟ್ಟೆಯಲಿಟ್ಟು ಮಾರುವವರ ದೃಶ್ಯ
ಚೌಕಾಸಿ ಮಾಡುತಲೆ ಸೊಗವನನುಭವಿಸೊ ಸಂತೋಷ!

ಹೀಗಿದೆ ನೋಡಿ ವಿಪರ್ಯಾಸದ ಅಸಂಗತಗಳ ತುಡಿತ
ಅಲ್ಲಿರುವವರಿಗೆ ನಮ್ಮೂರ ಸಿಂಗಪುರಿಸುವ ಕೈ ಕಡಿತ
ಇಲ್ಲಿರುವ ನಮಗೊ ನಮ್ಮೂರುಗಳದೆ ಸರಿ ಹುಡುಕಾಟ
ಸಿಕ್ಕಿದ ಹೋಲಿಕೆ ಸಾಮ್ಯತೆಯೆಲ್ಲಾ ನಮ್ಮ ತಕ್ಷಣ ನೆಂಟ!

ಯಾವುದೊ ಬೇರ ತವರು, ಹೊಟ್ಟೆಪಾಡಿಗೆಷ್ಟು ತರದ ಸೂರು
ಇಲ್ಲಿದ್ದಾಗಲ್ಲಿನ ತುಂತುರು, ಅಲ್ಲಿದ್ದಾಗಿಲ್ಲಿಗೋಡಿಸೊ ಕೊಸರು
ತುಡಿತಗಳೆ ಹೀಗೆ ಮೊದಲು ಹೊಟ್ಟೆಗೆ ಗೇಣು ಬಟ್ಟೆಗೆ ಯುದ್ಧ
ತುಂಬುತಲೆ ಹೊಟ್ಟೆ ಬಟ್ಟೆ, ಬೌದ್ದಿಕ ಭಾವುಕ ತೆವಲ ಸಮೃದ್ಧ!

Sampada: 14.09.2013

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s