00099. ಕೆಂಪೇಗೌಡರೆ ಬನ್ನಿ ಹೀಗೆ ……

ಜಯಪ್ರಕಾಶರ ಕೆಂಪೇಗೌಡರು (ಕೆಂಪೇಗೌಡರ ಪ್ರವಾಸ ಪ್ರಸಂಗ – 15.09.2013, ಸಂಪದ) ಬರುವ ಮೊದಲೆ ನಾರದರ ಹತ್ತಿರ ವಿವರ ಕೇಳಿ ಮುಂಜಾಗರೂಕರಾಗಿಬಿಟ್ಟರು. ಆದರೆ ಸುಮಾರು 21 ವರ್ಷಗಳ ಹಿಂದೆ ನಾರದರು ‘ಸಿಕ್ ಲೀವ್’ ಹಾಕಿದ್ದರಿಂದಲೊ ಏನೊ (ಅಥವ ಇಪ್ಪತ್ತು ವರ್ಷದ ಮೊದಲಿದ್ದ ಹುಮ್ಮಸ್ಸೊ ಏನೊ) – ನೇರ ಬೆಂಗಳೂರಿಗೆ ಬಂದು ತುಸು ಅಡ್ಡಾಡುವ ಮನಸು ಮಾಡಿದಾಗ ಆದ ಅನುಭವ ಈ ಪದ್ಯ – ಜೂನ್ 92 ರ ಹೊತ್ತಿನಲ್ಲಿ ಬರೆದಿದ್ದು. ಅಲ್ಲಿಂದಿಲ್ಲಿಯತನಕ ಕಾವೇರಿಯಲ್ಲಿ ಸಾಕಷ್ಟು ಹೊಸ ನೀರು ಹರಿದಿದೆ. ಎರಡು ದಶಕಗಳ ಹಿಂದಿನ ಪರಿಸ್ಥಿತಿಯನ್ನು ಮನಸಲಿಟ್ಟುಕೊಂಡು ಓದಿದರೂ ಇಂದಿಗೂ ಸುಸಂಗತವಾಗಿರುವ ಹೋಲಿಕೆಯನ್ನು ಕಾಣಬಹುದು. ಜಯಪ್ರಕಾಶರ ಕೆಂಪೇಗೌಡರ ಜೋಡಿ ಓದಿಕೊಳ್ಳಲು ಚೆನ್ನಾಗಿರುತ್ತದೆ ಎಂಬ ಅನಿಸಿಕೆಯೊಡನೆ ಪ್ರಕಟಿಸುತ್ತಿದ್ದೇನೆ.

ಕೆಂಪೇಗೌಡರೆ ಬನ್ನಿ ಹೀಗೆ ……
__________________________

ಕೆಂಪೇಗೌಡರೆ
ಬನ್ನಿ ಹೀಗೆ ;
ಸ್ವರ್ಗ ಬೋರಾಗಿ
ವಾಕ್ ಬಂದಿರಾ ?
ಹೀಗೇಕೆ
ನಿಂತೇ ಬಿಟ್ಟಿರಿ ?
ತಬ್ಬಿಬ್ಬಾಗಬೇಡಿ
ಇದು
ಬೆಂದಕಾಳೂರೆ ..

ಹಾಂ..
ಸಾಲು ಮರಗಳೆಂದಿರ ?
ಸೊಂಪಾಗಿ ಬೆಳೆಯಲೆಂದು
ಕಾಡಿಗಟ್ಟಿದ್ದೇವೆ..
ನೀವಿಟ್ಟ
ಗಡಿ ಮೀರಿ
ಬೆಳೆದ ಮೇಲೆ
ಬೇಕೇ ಬೇಕಲ್ಲ
ತಲೆಗೊಂದು ಸೂರು ?
ಒಹ್!
ಗೌಡರೆ, ಜೋಪಾನ ;
ಇದು ಬಿಟಿಎಸ್ ಬಸ್ಸು .
ಹಾಗೆಲ್ಲ ನುಗ್ಗೀರಿ
ತೋಳು ಮುರಿದೀತು ..
ಕೆಮ್ಮು ಬಂತೆ ?
ಬಿಡಿ, ಬೀಡಿ
ಅಭ್ಯಾಸವಾದೀತು 🙂

ಆಹಾ..
ಅದನೇಕೆ ನೋಡೀರಿ ಹಾಗೆ
ತೆರೆದ ಬಾಯಲ್ಲಿ ?
ಏನೆಂದಿರ
ಬಣ್ಣದ ದೀಪಗಳು ?
ಅದಕೆನ್ನುತಾರೆ
ಬಾರು – ರೆಸ್ಟೋರೆಂಟು ;
ಇಲ್ಲೂ
ಆಸ್ಥಾನ ನರ್ತಕಿಯರಿದ್ದಾರೆ
ನೋಡುವಿರಾ ಒಳಗೆ,
ಬಿಸಿ ಬಿಸಿ ರೋಮ್ಯಾನ್ಸ್
ಫ್ಲೋರ ಡಾನ್ಸ್
ಅರೆ ಬೆತ್ತಲೆ ನೀರೆ
ಜತೆಗೆ ಕುಡಿಯುವುದಿದ್ದರೆ
ಮದಿರೆ
ಒಂದು ಮಗ್ ಬೀರೆ !

ಅರೆ…
ಹಸಿವಾಯಿತೆ
ಕ್ಷಮಿಸಿ ತಿಳಿಯಲಿಲ್ಲ
ಮುದ್ದೆ ?
ಹಾಗೆಂದರೇನು ?
ಬನ್ನಿ
ಇಲ್ಲಿ ಕೂಡಿ.
ಏನು ಬೇಕು ಹೇಳಿ –
ಕಟ್ಲೆಟ್ಟು, ಆಮ್ಲೆಟ್ಟು..
ತಿನ್ನೋದಾದರೆ
ಒಂದು ಪ್ಲೇಟು
ಚಿಕನ್ ಕಬಾಬು ,
ದಬಾಬು..
ಬಾಯರಿತೆಂದಿರ?
ಚೆಲ್ಲಬೇಡಿ ದೊರೆ
ಎರಡನೇ ಲೋಟ
ಸಿಗುವುದಿಲ್ಲ ..
ಪದೇ ಪದೇ ಕೇಳೀರಿ
ಇದು
ಬೆಂಗಳೂರು !

ಅರೆರೆ …
ಗೌಡರೆ
ನಿಲ್ಲಿ
ಎಲ್ಲಿ ಓಡುವಿರಿ ?
ಇನ್ನೂ
ಲಾಲ್ ಭಾಗ್ ಇದೆ ,
ಕಬ್ಬನ್ ಪಾರ್ಕಿದೆ ,
ವಿಧಾನ ಸೌಧವಿದೆ
ಇಲ್ಲೇ
ಹತ್ತಿರದಲ್ಲೇ
ನಿಮ್ಮ ಪ್ರತಿಮೆಯು ಇದೆ !
ರಸ್ತೆಗೂ ನಿಮ್ಮ ಹೆಸರೇ ಇದೆ
ನೋಡಿ ಹೋಗುವಿರಂತೆ ..
ಹೊರಟೆ ಬಿಟ್ಟಿರಾ ?
ಸರಿ ಬಿಡಿ ನಿಮ್ಮಿಷ್ಟ
ಮತ್ತೆ ನೋಡೋಣ,
(ದೊಡ್ಡ) ನಮಸ್ಕಾರ.

================================================
ನಾಗೇಶ ಮೈಸೂರು
ದಿನಾಂಕ : ೨೩.ಜೂನ್.೧೯೯೨,
ಬೆಂಗಳೂರು
================================================
ಭೂನಾರದ ಉವಾಚ : ಈ ತಿಂಗಳು ಕೆಂಪೆಗೌಡರ ಹುಟ್ಟುಹಬ್ಬ ಇಲ್ಲಾ ತಾನೆ? 🙂
ಕಲಹ ಪ್ರಿಯ ಉವಾಚ: ಮೋದಿಯವರದಂತೂ ಇವತ್ತೆ ಎಂದು ಓದಿದೆ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s