00140. ಶುಮಾಕರನೆಂಬ ವೇಗದ ವಿಪರ್ಯಾಸ

00140. ಶುಮಾಕರನೆಂಬ ವೇಗದ ವಿಪರ್ಯಾಸ

ಈ ಲೋಕದ ವಿಪರ್ಯಾಸಗಳ ಕುರಿತು ಆಲೋಚಿಸಿದಾಗ ನಿಜಕ್ಕೂ ವಿಸ್ಮಯವಾಗುತ್ತದೆ; ಹಾಗೆಯೆ ಖೇದವೂ ಸಹ – ಅದರಲ್ಲೂ ಈ ಘಟನೆಯನ್ನು ನೆನೆದಾಗಲಂತೂ ಈ ‘ಗ್ರಹಚಾರ’, ‘ಟೈಮ್ ಸರಿಯಿಲ್ಲ’ ಇತ್ಯಾದಿಯಾಗಿ ಜನ ಸಾಮಾನ್ಯರಾಡುವ ಮಾತು ಅದೆಷ್ಟು ಸತ್ಯವೆನಿಸಿಬಿಡುತ್ತದೆ. ಹೇಳಿ ಕೇಳಿ ಈತ ವೇಗದ ಕ್ರೀಡೆಗಳಲ್ಲೊಂದೆಂದೆ ಪರಿಗಣಿತವಾದ ಕ್ರೀಡೆಯೊಂದರ ಅನಭಿಷಕ್ತ ರಾಜನಾಗಿ ಮೆರೆದವ – ಅದೂ ‘ಫಾರ್ಮೂಲ ಒನ್’ ರೇಸಿನಲ್ಲಿ ಸತತವಾಗಿ ನಿರಂತರವಾಗಿ ಗೆದ್ದು, ವರ್ಷಗಟ್ಟಲೆ ಚಾಂಪಿಯನ್ನಿನ ಪಟ್ಟ ಅಲಂಕರಿಸಿ ಜನಮನ ಸೂರೆಗೊಂಡವ. ಈ ಕ್ರೀಡೆಗೊ, ವೇಗವೆ ಜೀವಾಳ ಹತೋಟಿ ತಪ್ಪಿದರೆ ನೇರ ಅಂತಕನ ಮನೆಯ ಕದ ತಟ್ಟುವ ಸಾಧ್ಯತೆಯೆ ಬಹಳ. ಅಂತಹ ಕ್ರೀಡೆಯ ಅಪಾಯಕಾರಿ ಮಜಲುಗಳನ್ನೆಲ್ಲ ಪದೆಪದೆ ಮಣಿಸಿ ಗೆದ್ದು ಬಂದ ಮಹಾವೀರ – ಅದೂ ವೇಗದ ಅಸ್ತ್ರ ಬಳಸಿ.

ಯಾರೂ ಸಾಧಿಸದಿದ್ದ ಮಟ್ಟ ಮುಟ್ಟಿದ್ದಾಯ್ತು, ದಾಖಲೆಯ ಮೇಲೆ ದಾಖಲೆ ಬರೆದಿದ್ದೂ ಆಯ್ತು, ಪ್ರಖ್ಯಾತಿಯ ಉತ್ತುಂಗ ಶಿಖರದಲ್ಲಿ ರಾರಾಜಿಸುವ ಗಳಿಗೆಯಲ್ಲೆ ನಿವೃತ್ತಿಯನ್ನು ಘೋಷಿಸಿದ್ದೂ ಆಯ್ತು – ಮತ್ತೆ ಹಿಂದಿರುಗಿ ಬಂದರೂ ಯಾಕೊ ಆ ಹಳೆಯ ಮಟ್ಟ ಮುಟ್ಟಲಾಗದ ಮೇರು ಶಿಖರದಂತೆ ಕಾಡಿತ್ತು . ವೇಗವನ್ನು ಇಷ್ಟರಮಟ್ಟಿಗೆ ಪ್ರೀತಿಸುವ ಜೀವ ಸದಾ ಸುಮ್ಮನಿರಲು ಸಾಧ್ಯವೆ? ಕಾರಿರದಿದ್ದರೆ ಬೇಡ ಎಂದು ಹಿಮದಲ್ಲಿ ಜಾರಾಡುವ ಮನೋಲ್ಲಾಸದ ಕ್ರೀಡೆಯನ್ನು ಆಯ್ದುಕೊಂಡಿತು. ಅಲ್ಲೂ ಬಿಡದೆ ಕಾಡಿದ ವೇಗದ ಭೂತ ಸರಿ ಸುಮಾರು ಗಂಟೆಗೆ ನೂರು ಕಿಲೊಮೀಟರಿನ ಮಟ್ಟಕ್ಕೆ ಮುಟ್ಟಿದಾಗ ಕಾದಿತ್ತು ಗ್ರಹಚಾರದ ನಂಟಿನ ಕುಹಕ. ಜಾರಾಟದಲ್ಲಿ ಕಾಲು ಜಾರಿದ ಶುಮಾಕರನೆಂಬ ಈ ಜೀವಂತ ದಂತಕಥೆ, ಹತೋಟಿ ಮೀರಿ ನಿಯಂತ್ರಣ ಕಳೆದುಕೊಂಡಾಗ ನೇರ ಅಪ್ಪಳಿಸಿದ್ದು ಹಿಮದಲ್ಲಡಗಿದ್ದ ಬಂಡೆಯೊಂದರ ತಲೆಗೆ. ಅದರಲ್ಲೂ ಎಂತಹ ಹೊಡೆತವೆನ್ನುತ್ತೀರಿ? ತಲೆಯ ರಕ್ಷಣೆಗೆಂದು ಹಾಕಿದ್ದ ಶಿರಸ್ತ್ರಾಣವೆ ಎರಡಾಗಿ ಸೀಳಿ ಹೋಗುವಷ್ಟು!

ಆ ಹೊಡೆತಕ್ಕೆ ನೇರ ಕೋಮಾ ಸ್ಥಿತಿಯ ಮಡಿಲ ಸೇರಿದ ಈ ಮಹಾನ್ ಕ್ರೀಡಾಪಟು ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ನಿರತ. ಈಗಲೆ ಏನು ಹೇಳಬರದೆಂಬ ಡಾಕ್ಟರರ ಉವಾಚದ ಜತೆ ಚಿಕ್ಕ ವಯಸಿನ ಈ ವ್ಯಕ್ತಿಯ ಪಕ್ಕದಲ್ಲಿ ಕಣ್ಣೀರಿಡುತ್ತ ನಿಂತಿರುವ ಪತ್ನಿ ಮತ್ತು ಮಕ್ಕಳ ಕುಟುಂಬ. ಬದುಕಿ ಬಂದರೂ ಮೊದಲಿನಂತಿರುವ ಸಾಧ್ಯತೆ ಕಮ್ಮಿ ಎನ್ನುವ ಅಭಿಪ್ರಾಯ ಒಂದೆಡೆಯಾದರೆ, ಆ ಸಾಧ್ಯತೆಯೆ ಶೇಕಡ ಐವತ್ತರಷ್ಟು ಮಾತ್ರ ಎನ್ನುವ ಮತ್ತೊಂದು ಚಿಂತಕರ ಚಾವಡಿ. ಜೀವನವೆಲ್ಲ ಹೋರಾಟದಲ್ಲೆ ಸಾಗಿಸಿದ ಈ ಗಟ್ಟಿ ಜೀವ ಹೇಗೊ ಬದುಕುಳಿಯುವ ಸಾಧ್ಯತೆಯೆ ಹೆಚ್ಚೆಂದು ಬಹುತೇಖರ ಅಭಿಪ್ರಾಯ, ಅಭಿಲಾಷೆಯಾದರೂ ಅದು ಮೊದಲಿನ ಶುಮಾಕರನಾಗಿರಲಾರದು ಎಂಬುದು ಎಲ್ಲರ ಅಭಿಮತ ಸಹ.

ವಿಪರ್ಯಾಸವೆಂದರೆ ವೇಗವನ್ನು ಎಡದ ಕೈನ ಆಟದಂತೆ ಆಡಿಸುತ್ತ ಮಾನ ಸಮ್ಮಾನಗಳನ್ನು ಗಳಿಸಿದವನನ್ನು ಅದೇ ವೇಗವೆ ಕೇವಲ ರಂಜನೆಯ ಜಾರುವ ಕ್ರೀಡೆಯ ನೆಪದಲ್ಲಿ ಹೀಗೆ ಹಿಡಿದು ಮುಕ್ಕಿ ಹೆಣಗಾಡಿಸುತ್ತಿರುವ ಪರಿ. ವಿಧಿ ವಿಪರಿತಗಳನ್ನು ನಂಬದವರನ್ನು ಅಚ್ಚರಿಗೊಳಿಸುವ ವಿಧಿ ವಿಪರೀತ. ಹೊಸ ವರ್ಷದ ಹೊಸ್ತಿಲಲಿ ಇದು ಆ ಕುಟುಂಬಕ್ಕೊದಗಿದ ತೀವ್ರ ಆಘಾತ. ಅದೆಲ್ಲ ಸಂಕಟವನ್ನು ಮೀರಿ ಹೋರಾಡಿ ಜಯಿಸುವ ಸಾಮರ್ಥ್ಯ ಅವನದಾಗಲಿ ಮತ್ತು ಜೀವನದ ಮಿಕ್ಕ ಗಳಿಗೆಗಳನ್ನು ಸಂತಸದಿಂದ ಸವಿಯುತ್ತ ಕಳೆಯುವ ಅದೃಷ್ಟ ಶುಮಿಗೆ ಮತ್ತೆ ಒದಗಿ ಬರಲಿ ಎಂದು ಹಾರೈಸುತ್ತ ಈ ವಿಪರ್ಯಾಸದ ಕುರಿತಾದ ಕಿರುಗವನವೊಂದು ಇಲ್ಲಿ ಪ್ರಸ್ತುತ – ಖೇದ, ವಿಷಾದದ ಹೂರಣದೊಂದಿಗೆ.

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಶುಮಾಕರನೆಂಬ ವೇಗದ ವಿಪರ್ಯಾಸ
____________________________

ಶುಮಾಕರ ಬರೆದದ್ದು ಇತಿಹಾಸ
ಫಾರ್ಮೂಲ ಒಂದರ ಸಹವಾಸ
ವೇಗದೊಂದಿಗೆ ತಾನಾಡಿ ಸರಸ
ದಾಖಲೆ ಬರೆದನೆ ಪ್ರತಿ ದಿವಸ ||

ಇಂದಾದರು ಕಾರಿನ ಜತೆ ನಿವೃತ್ತಿ
ಬಿಟ್ಟುಹೋಗದಲ್ಲಾ ವೇಗ ಪ್ರವೃತ್ತಿ
ವೇಗ ಹುಡುಕಿದ ಮನ ವೇಗೋತ್ಕರ್ಷ
ಹಿಮದಲಿ ಜಾರಾಡುವಾಟದ ಆಮಿಷ ||

ಗಳಿಗೆ ಏನಾಗಿತ್ತೊ ಕಾಡಿತ್ತು ಗ್ರಹಚಾರ
ಜಾರಿದ ವೇಗ ಹೆಚ್ಚುಕಮ್ಮಿ ನೂರರ ಹತ್ತಿರ
ಜಾರುತಲೆ ಜಾರಿ ಬಿದ್ದನೊ ವೇಗದ ಕಲಿ
ಸೀಳಿದ ಶಿರಸ್ತ್ರಾಣ ಹೆಬ್ಬಂಡೆಗೆ ತಗುಲಿ ||

ನೇರ ಆಸ್ಪತ್ರೆಯ ಹಾದಿಯಲೆ ಕೋಮಾ
ಹೋರಾಟ ನಡೆದಿದೆ ಉಳಿಸಲು ಕರ್ಮ
ಸಾವು ಬದುಕಿನ ಉಯ್ಯಾಲೆಯಲಿ ಸಿಕ್ಕ
ವೀರಾಗ್ರಣಿಗೆ ಬದುಕು ಕೊಡುವುದೆ ಲೆಕ್ಕ? ||

ಅಪಾಯದ ರೇಸಿನಲೆ ಸೆಣಸಿ ದಾಟಿದವನ
ಜಾರುಬಂಡೆಯ ಆಟ ಬೀಳಿಸಿದ ಕಥನ
ವ್ಯಂಗ್ಯ, ಛೋದ್ಯ, ವಿಪರ್ಯಾಸದ ಬದುಕು
ಕಾಲೆಳೆದು ಬೀಳಿಸಲು ನೆಪವೊಂದಿದ್ದರೆ ಸಾಕು ||

———————————————–
ನಾಗೇಶ ಮೈಸೂರು, ೦೧. ಜನವರಿ. ೨೦೧೪
———————————————–

(SaMpada)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s