00356. ಹಸ್ತದ ಗೆರೆ


00356. ಹಸ್ತದ ಗೆರೆ
___________________
(published in suragi on 01.October.2015 :http://surahonne.com/?p=http://surahonne.com/?p=9629)

IMG_2504
ಚಿತ್ರ ಕೃಪೆ: ಸ್ವಯಂಕೃತಾಪರಾಧ 🙂 

ಹೀಗೆ ಮಾತಾಡುತ್ತ ಕುಳಿತ ಹೊತ್ತು ಮಗನ ಕೈ ಹಿಡಿದು ಸುಮ್ಮನೆ ನೋಡ್ತಾ ಇದ್ದೆ – ಹಸ್ತ ಪೂರ ಗೆರೆಗಳಿದ್ರೂ ಅಸ್ಪಷ್ಟವಾಗಿ, ನಯವಾಗಿ ಕಾಣೋ ತರವನ್ನ. ಬರಿಯ ದಪ್ಪ ಗೆರೆ ಬಿಟ್ರೆ ಮಿಕ್ಕಿದ್ದು ತೆಳು ಗೆರೆಗಳು ಕಡಿಮೆ; ಜತೆಗೆ ತೀರಾ ಇಲ್ಲವೆ ಇಲ್ಲ ಅನ್ನೊ ಹಾಗೆ ತೆಳುಗೆರೆಗಳು.

ಹಾಗೆ ಸುಮ್ಮನೆ ನನ್ನ ಕೈ ನೋಡಿಕೊಂಡೆ – ನಗು ಬಂತು. ಕಡ್ಡಿ ಸೌದೆ ಕಡ್ಡಿ ಪೇರಿಸಿಟ್ಟ ಹಾಗೆ, ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ಹರವಿಕೊಂಡು ಬಿದ್ದಿದ್ದವು ಗೆರೆಗಳು. ಅದೇನು ಚಿಕ್ಕ ವಯಸಿಂದಲು ಹಾಗೆ ಇತ್ತಾ, ದೊಡ್ಡವರಾಗ್ತಾ ಹಾಗಾಗಿತ್ತ ನೆನಪಿಗೆ ಬರಲಿಲ್ಲ. ಆದರೆ ಚಿಕ್ಕ ವಯಸಲ್ಲಿ ದೊಡ್ಡವರು ಮಾತಾಡ್ತಾ ಹೇಳ್ತಿದ್ದ ಮಾತು ನೆನಪಾಯ್ತು – ‘ಕೈ ಮೇಲಿನ ಗೆರೆಗಳು ಜಾಸ್ತಿಯಿದ್ರೆ ಜೀವನದಲ್ಲಿ ಕಷ್ಟಗಳು ಜಾಸ್ತಿ ಇದೆ / ಇರುತ್ತೆ ಅಂತ ಲೆಕ್ಕ; ಜನರ ಕೈ ನೋಡಿದ್ರೆ ಸಾಕು ಸುಖವಾಗಿದಾರ, ಇಲ್ವಾ ಅಂತ ಹೇಳ್ಬಿಡಬೋದು!’

ಕಷ್ಟಗಳು ಜಾಸ್ತಿಯಾಗಿ ಅದು ದೇಹದಲ್ಲೇನೊ ರಾಸಾಯನಿಕ ಪ್ರಕ್ರಿಯೆ ನಡೆಸಿ, ಅದರ ಪರಿಣಾಮ ಅಂಗೈಯಲ್ಲಿ ಗೆರೆಗಳಾಗಿ ಕಾಣುತ್ತೆ ಅನ್ನೋದಕ್ಕೆಲ್ಲ ಸೈಂಟಿಫಿಕ್ ಎವಿಡೆನ್ಸ್ ಇದೆಯಾ, ಇಲ್ವಾ ಗೊತ್ತಿಲ್ಲ. ಆದರೆ ನಮ್ಮ ಸಾಂಪ್ರದಾಯಿಕ ನಂಬಿಕೆಗೆ ಯಾವ ಸಾಕ್ಷಿ ಬೇಕು ಹೇಳಿ ? ಅದಕ್ಕೆ ಆಯಸ್ಸಿನ ಗೆರೆ, ಸಾಮರಸ್ಯದ ಜೋಡಿಗೆರೆ, ವಿದ್ಯೆಯ ಗೆರೆ, ಮಕ್ಕಳ ಗೆರೆ, ಅನ್ನರೇಖೆ ಎಂದು ಇರೋ ಒಂದೊಂದಕ್ಕು ಒಂದೊಂದು ನಾಮಕರಣ ಮಾಡಿ ಖುಷಿ ಪಡೊ ಜನರಲ್ವೆ ನಾವು? ಅದನ್ನೆ ಹೊಟ್ಟೆಪಾಡಿಗೆ ಶಾಸ್ತ್ರ ಹೇಳೊರಿಂದ ಹಿಡಿದು, ಕಂಪ್ಯೂಟರಲ್ಲಿ ಹಾಕಿ ತೋರಿಸೊ ಜ್ಯೋತಿಷ್ಯದ ಪಂಡಿತರತನಕ ಬಳಸಿ ಅದರದೆ ಆದ ‘ಎಕೊ ಸಿಸ್ಟಂ’ ಮಾಡಿಕೊಂಡುಬಿಟ್ಟಿದ್ದೇವೆ..

ಬಟ್ಟೆ ಐರನ್ ಮಾಡೊ ಹಾಗೆ, ಕಷ್ಟಗಳೆಲ್ಲ ಐರನ್ ಮಾಡಿಬಿಟ್ರೆ ಗೆರೆಗಳು ಅಳಿಸಿಹೋಗುತ್ತಾ? ಅಥವಾ ನೀಟಾಗಿ ಜೋಡಿಸಿದ ಸೌದೆ ತರ ಬದಲಾಗುತ್ತ ಅಂತ ಇನ್ನೊಂದು ಪ್ರಶ್ನೆ ಮೂಡಿ ಮತ್ತೆ ನಗು ಬಂತು; ಆಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ “ನಯವಾದ, ನುಣುಪು ಹಸ್ತ ಮಾಡಿಸಿಕೊಂಡು, ಜೀವನದ ಕಷ್ಟಗಳನ್ನೆಲ್ಲ ಸರ್ಜರಿ ಮುಖಾಂತರ ಪರಿಹರಿಸಿಕೊಳ್ಳಿ” ಅನ್ನೊ ಹೊಸ ಜಾಹೀರಾತು ನೋಡ್ಬಹುದೇನೊ ? ವಿಷಯ ನಿಜವೊ ಸುಳ್ಳೊ – ಅಲ್ಲೂ ಬಿಜಿನೆಸು ಕಾಲಿಕ್ಕೋದು ಮಾತ್ರ ಗ್ಯಾರಂಟಿ 🙂

ಬಟ್ಲರು ಕನ್ನಡ ಕಲಿತಿದ್ದ ಮಗ ‘ಯಾಕೆ ನಗ್ತಾ ಇರೋದು’ ಅಂದ. ಅವನಿಗೆ ಕನ್ನಡ ಕಲಿಸಿದ ಹಾಗಾಗುತ್ತೆ ಅಂತ ಹಾಗೆ ಒಂದು ಪುಟಾಣಿ ಪದ್ಯ ಬರೆದು ವಿವರಿಸಿದೆ. ಅರ್ಧ ಅವನಿಗರ್ಥವಾಗೊ ಹಾಗೆ, ಇನ್ನರ್ಧ ನನಗೆ ಅರ್ಥವಾಗೊ ಹಾಗೆ. ಆ ಲಹರಿ ಈ ಕೆಳಗೆ, ಸುರಗಿಯ ಮಡಿಲಲ್ಲಿ 🙂

ಹಸ್ತ
ರೇಖೆ ಅಸ್ತವ್ಯಸ್ತ
ಗೀಟು ಗೆರೆಗಳ ಕೂಟ
ಬದುಕಿಗಂತೆ ಜೂಟಾಟ ||

ಜೂಜಾಟ
ಆಡೆ ಹಸ್ತದ ಚಟ
ರಾಜಾ ರಾಣಿ ಎಕ್ಕ ಜೋಕರು
ಜಂಜಾಟದಲು ಎಂಥಾ ಖದರು ||

ಬೀಸಾಟ
ಬೀಸೊ ಕಲ್ಲು ದಿಟ್ಟ
ಕಸುವಿದ್ದರೆ ಹಿಟ್ಟಿನ ಹುಡಿ
ಕೈಲಾಗದಿರೆ ನೆಪಕೇನು ದಂಢಿ ||

ಕೈ ಹಿಡಿತ
ಬಿಗಿದಪ್ಪಿ ಇಂಗಿತ
ಬೆಸೆದ ಹಸ್ತ ಸಾಂಗತ್ಯ
ಮನಗಳ ಮನ ಸಾಹಿತ್ಯ ||

ಮಿಳಿತ
ರೇಖೆ ಸಂಕಲಿಸುತ್ತ
ಬೆರೆತು ಹೋಗಲೆ ಬಾಳು
ಜತೆಗೆದುರಿಸೆ ಬೆಳಕಿನಿರುಳು ||

———————–
ನಾಗೇಶ ಮೈಸೂರು

00355. ಇರುಸು ಮುರುಸಡಿಗೆ..


00355. ಇರುಸು ಮುರುಸಡಿಗೆ..
_________________________________

ಯಾವಾವುದೊ ಸಲ್ಲುವ, ಸಲ್ಲದ ಕಾರಣಕ್ಕಾಗಿ ಇರುಸು ಮುರಿಸಿಗೆ ಒಳಗಾಗದ ಜೋಡಿಯಾದರೂ ಎಲ್ಲುಂಟು ಈ ಜಗದಲ್ಲಿ ? ಪ್ರೇಮಿಗಳಲ್ಲಿ, ದಂಪತಿಗಳಲ್ಲಿ, ನೆಂಟಸ್ತಿಕೆ, ಸ್ನೇಹಗಳಲ್ಲಿ ಇರುಸುಮುರುಸಾಗುವುದು ಸರ್ವೆ ಸಹಜವಾದರೂ, ದಂಪತಿಗಳಲ್ಲಿ ಅದು ತಾಳುವ ವೈವಿಧ್ಯಮಯ ರೂಪಕ್ಕೆ ಸರಿಸಾಟಿಯಾದದ್ದು ಮತ್ತೊಂದಿರಲಾರದು. ಅದರಲ್ಲು ನಮ್ಮ ಭಾರತೀಯ ದಂಪತಿಗಳ ವಿಷಯಕ್ಕೆ ಬಂದರೆ, ಆ ರಣರಂಗದ ಕಾರ್ಯ ಭೂಮಿಕೆ ನಡೆಯುವುದೆ ಅಡಿಗೆ ಮನೆ ಮತ್ತು ಅಡಿಗೆಯ ಬಗೆ ಮತ್ತು ರುಚಿಗಳಲ್ಲಿನ ವೈವಿಧ್ಯಗಳ ಅನಾವರಣವಾಗುವ ಮೂಲಕ. ಅದುವರೆವಿಗು ತೆರೆಮರೆಯಲಿದ್ದ ಸೃಜನಶೀಲತೆಯ ಅಂಶಗಳೆಲ್ಲಾ ‘ಕಲಾಕಾರ್’ ಭಾಷೆಯಲ್ಲಿ ವ್ಯಕ್ತವಾಗುವ ಈ ‘ಘನ ಘೋರ’ ಮೌನ ಕದನದಲ್ಲಿ ಅಂತಿಮವಾಗಿ ಶಾಂತಿ ಸಂಧಾನವೆ ಗೆದ್ದು ಬರುವುದು ಸಾಮಾನ್ಯವಾದರೂ, ಅದು ಬರುವವರೆಗಿನ ಹೊಯ್ದಾಟ, ತಾಕಲಾಟಗಳು ಮಾತ್ರ ಒಂದು ವಿಧದ ಅದ್ಭುತ ಅನುಭೂತಿಯ ಸರಕೆಂದೆ ಹೇಳಬೇಕು.

ಆ ನೂರಾರು ವೈವಿಧ್ಯಗಳಲ್ಲೊಂದು ತರವಾದ, ಅಂತದ್ದೊಂದು ದೃಶ್ಯವನ್ನು ಸರಳ ಕವನದಲ್ಲಿ ಹಿಡಿದಿಡುವ ಯತ್ನ ಈ ಕೆಳಗೆ..

ಇದ್ದರೇನಂತೆ ಇರಿಸು ಮುರಿಸು
ಪ್ರೇಮದಡಿಗೆ ಮಾಡಿ ಬಡಿಸು
ಉಣಿಸಲಿರಲಿ ತಿನಿಸು ಮುನಿಸು
ತಟ್ಟೆ ಮುಂದೆ ಕೂತೆ ನಿಭಾಯಿಸು ||

ಹಾಕಿಷ್ಟು ಉಪ್ಪು ಹೆಚ್ಚು ಕಮ್ಮಿ
ದುಮುಗುಟ್ಟಿಸುತಳುವಾ ಡಮ್ಮಿ
ಹೆಚ್ಚಿರಲಿ ಅನ್ನ ಸಾಲದ ಸಾರು
ಗೊತ್ತಾಗುವಂತೆ ಒಡತಿ ಯಾರು ||

ಹಾಕಿದೊಗ್ಗರಣೆಗು ಏರುಪೇರು
ಮಾತಿನಲಂತು ಬರಿ ಕಹಿ ಒಗರು
ಕಣ್ಣೋಟವಿರಲಿ ಹುಲಿಯುಗುರು
ಅಪ್ಪಿ ತಪ್ಪಿಯೂ ಇಡದೆ ನೀರು ||

ಬಲಮೂಲೆ ಖಾಲಿ ಬರಿ ಗಲಿಬಿಲಿ
ಮಿಡಿಯುಪ್ಪಿನ ಕಾಯೂ ತಬ್ಬಲಿ
ಮೊಸರನ್ನವಿಲ್ಲ ಹುಳಿ ಮಾತಲ್ಲ
ಸಾಕೆ ಮಾರಾಯ್ತಿ ಸಿಡಿದೆದ್ದ’ನಲ್ಲ’ ||

ಸಾರಿ ಕ್ಷಮಿಸು ಬರಿ ಲೆಕ್ಕಾಚಾರ
ಬಾಯ್ಬಿಟ್ಟರೆ ಸರಿ ದುಃಖ ದೂರ
ತಂದೊಳಗಿಂದ ಬಡಿಸು ಈಗವಶ್ಯ
ಮುನಿಸಲು ಮಾಡಿಟ್ಟ ಭಕ್ಷ್ಯ ಭೋಜ್ಯ ||

00354. ಕಾಣಿಸಿಕೊಳದವನ ಜಾಡಿನಲಿ..


00354. ಕಾಣಿಸಿಕೊಳದವನ ಜಾಡಿನಲಿ..
____________________________ 

 ಚಿತ್ರ ಕೃಪೆ: ಸ್ವಯಂಕೃತಾಪರಾಧ 🙂 

ಮೂರ್ತ ದೃಶ್ಯದಲೊ, ಅಮೂರ್ತದದೃಶ್ಯದಲೊ
ಸಂಕುಚಿತ ಗುಳಿಯಲೊ, ವಿಸ್ತಾರ ಬಯಲಲ್ಲೊ
ಮಾರುವೇಷದಲೊ, ನಿಜರೂಪಿನ ಸಹಜದಲೊ
ಕಾಣಿಸಿಕೊಳಬಾರದೆ ಬಂದು, ಕಣ್ಣ ಮುಂದೆಲ್ಲೊ ||

ನಿನ್ನ ಹೆಸರಿನದೆ ತತ್ತ್ವ , ನಿನದೆ ಸಿದ್ಧಾಂತ ನಿತ್ಯ
ನಿನ್ನ ಬೋಧನೆ ಲಕ್ಷ್ಯ, ನಿನದೆ ಮಂತ್ರದ ಘೋಷ
ನಿನ್ನದೆ ಪದಗಳಿಗೆ, ವ್ಯಾಖ್ಯಾನ ವಿವರಣೆ ಸಹಿತ
ನಿನಗೆ ಮಾತ್ರವದೇಕೆ, ಅಡಗಿ ಕೂರೊ ಸ್ವಾರ್ಥ ? ||

ಕಪಟವಲ್ಲವೆ ನಿಜದೆ, ಮಂದಿರದ ಶಿಲೆಯಾಗೆ
ವಂಚನೆ ತಾನೆ ಹೇಳು, ನಿರಾಕಾರ ರೂಪ ಬಗೆ
ದೇವಸುತ ಮನುಜ ಹಿತ, ಇನ್ನೆಂಥ ಪರಮಾರ್ಥ
ಜಿಜ್ಞಾಸೆಯಲಿ ಕೆಡವಿ, ಗೊಂದಲದಲೆಲ್ಲಾ ವ್ಯರ್ಥ ||

ನಿನದಿರಬಹುದು ಗುರಿ ಕಪಟ, ಉದ್ದೇಶ ನಿಮಿತ್ತ
ಕಾಣದದ ಮನುಜ ಗುಣ, ಬೆನ್ನಟ್ಟುತದನೆ ಸೂಕ್ತ
ಕಳೆದುಬಿಡುವಾ ಬದುಕು, ಅರಿವಿಗೆ ನಿಲುಕದಲೆ
ಮಂಪರು ಹರಿವ ಹೊತ್ತು, ಕಂತೆ ಒಗೆಸುವ ಕಲೆ ||

ನಿನಗದೆ ಬೇಕಿದೆಯೇನೊ, ಪುಟಕಿಟ್ಟ ಬಂಗಾರ
ಮೂಲದ್ರವ್ಯದ ಶುದ್ಧತೆ, ನಿನ್ನ ಲೋಕದ ಸಾರ
ಇಹಜೀವನ ಕಳೆವುದೆ, ಇರಬಹುದು ಅರ್ಹತೆ
ಸಾವಿನ್ಹೆಸರಲಿ ನೇರ, ನಿನ್ನ ಕಾಣುತಲಿ ಜಾಗ್ರತೆ ||

– ನಾಗೇಶಮೈಸೂರು

00353: ತಲೆಯಿಲ್ಲದವಗಿಲ್ಲ ತಲೆನೋವು (ಲಘು ಹರಟೆ)


00353: ತಲೆಯಿಲ್ಲದವಗಿಲ್ಲ ತಲೆನೋವು (ಲಘು ಹರಟೆ)
_____________________________________

20130524-114439.jpg
ಚಿತ್ರ ಕೃಪೆ: ಸ್ವಯಂಕೃತಾಪರಾಧ 🙂

ಮೊನ್ನೆ ಯಾಕೋ ತಲೆ ಭಾರವೆಂದು ನರಳುತ್ತ ಕೂತಿದ್ದಾಗ ಹೀಗೆ ಯಾರೋ ಸಿಕ್ಕರು. ನಮಸ್ಕಾರದ ಔಪಚಾರಿಕತೆಯೆಲ್ಲ ಮುಗಿದ ಮೇಲೆ ಗಮಗಮಿಸುತ್ತಿದ್ದ ಮೂಲ ನೀಲಗಿರಿ ತೈಲದ ವಾಸನೆ ಹಿಡಿದು, “ಯಾಕೆ ಹುಷಾರಿಲ್ವಾ?”ಎಂದರು.

” ಏನಿಲ್ಲ ಸ್ವಲ್ಪ ತಲೇನೋವು..” ಎಂದೆ ದೇಶಾವರಿ ಪೆಚ್ಚು ನಗೆ ಬೀರುತ್ತ.

” ಒಂದಷ್ಟು ಬಿಸಿ ಕಾಫಿ ಕುಡುದು ಬೆಚ್ಚಗೆ ಮಲಗೇಳೋದಲ್ವ ? ಎಲ್ಲಾ ಸರಿಯಾಗಿರೋದಲ್ಲಾ ?” ಎಂದು ತಲೆ ನೋವಿನ ಯೂನಿವರ್ಸಲ್ ಸಲ್ಯೂಷನ್ ನೆನಪಿಸಿದರು..

” ಈಗ ಸ್ವಲ್ಪ ಹೊತ್ತಲ್ಲಿ ಅಮೃತಾಂಜನ್ ಹಚ್ಚಿದೀನಿ.. ಸ್ವಲ್ಪ ಹೊತ್ತಿಗೆಲ್ಲ ಸರಿ ಹೋಗುತ್ತೆ ಬಿಡಿ..” ಅಂದೆ ನಾನು ಮತ್ತೆ ಅದೇ ನಗೆ ನಗುತ್ತ..

“.. ನೀವು ಗಟ್ಟಿಗರು ಬಿಡಿ ಮಾರಾಯ್ರೆ… ಅಂತು ನಿಮಗೆ ತಲೆಯಿರೊದಂತು ಖಚಿತಾ ಆದಂಗಾಯ್ತು ಬಿಡಿ..”

“ಹಾಂ..?”

“ತಲೆಯಿದ್ದೊರಿಗೆ ಮಾತ್ರ ತಾನೆ ತಲೆ ನೋವ್ ಬರೋದು ? ಏನೇನೊ ಯೋಚಿಸಿ, ಚಿಂತಿಸಿ ತಲೆಗೆ ಒಳ್ಳೆ ಕೆಲ್ಸ ಕೊಡ್ತಿರಾ ಅಂತ ತಾನೆ ಅರ್ಥಾ ? ಅಲ್ಲಿಗೇ ನಿಮಗೆ ತಲೆ ಇದೆ ಅನ್ನೋದ್ ಗಟ್ಟಿ ಆದಂಗಲ್ವಾ ಮಾರಾಯ್ರೆ ? ಅದೇ ನನ್ನ ನೋಡಿ ! ತಲೆನೋವೆ ಬರಲ್ಲಾ.. ನಂಗೆ ಆಗಾಗ ಅನುಮಾನ ಬಂದ್ಬಿಡುತ್ತೆ ತಲೆ ನಿಜವಾಗ್ಲೂ ಇದೆಯೊ, ಇಲ್ವೊ ಅಂತಾ..” ಎಂದು ತಮ್ಮ ಮೇಲೆ ಜೋಕ್ ಮಾಡಿಕೊಳ್ಳುತ್ತ ಇನ್ನೊಂದು ಹೊಸ ತರದ ಹುಳಾ ಬಿಟ್ಟು ಹೊರಟುಹೋದರು..!

ಹೀಗೆ ತೀರಾ ದೊಡ್ಡ ತರದ ಗಿರಾಕಿ ಎಂದನಿಸಿಕೊಳಲು ಹೋಗದೆ, ಎಲ್ಲರನ್ನೂ ಅವರೆ ಸ್ವಯಂ ವೈದ್ಯರಾಗುವಂತೆ ಮಾಡುವ ಅಥವಾ ಹತ್ತಿರದವರನ್ನೆ ತಜ್ಞ ವೈದ್ಯರನ್ನಾಗಿಸುವ ತಲೆ ನೋವು ಎಲ್ಲರಿಗೂ ಸುಪರಿಚಿತವೆ ಸರಿ. ತೀರಾ ಪರಿಚಿತರೆನ್ನುವ ಸದರಕ್ಕೊಳಗಾಗಿ ಕೊಂಚ ಅಸಡ್ಡೆಗು ಒಳಗಾಗುವ ಈ ತಲೆನೋವಿಗೊಂದು ಕೈ ಕುಲುಕುವ ಯತ್ನ ಈ ಸರಳ ಕವನದ ಮೂಲಕ 🙂

ತಲೆ ಶೂಲೆ, ತಲೆ ಶೂಲೆ
ಹೆಣ ಭಾರ ಹೆಗಲ ಮೇಲೆ
ಜಗದ ಹೇರು ಹೊತ್ತ ಹಾಗೆ
ಸಿಡಿಯಿತೇನು ತಲೆ ಸೋಗೆ ||

ಎಳೆಯ ತಲೆ ಬಲಿತ ತಲೆ
ಲೆಕ್ಕವಿಲ್ಲ ಎಲ್ಲ ಒಂದೆ ಬೆಲೆ
ಬಂದಾಗ ಸಮ ಶಿರೋಭಾರ
ಬಾಮು ಗುಳಿಗೆಗೆ ವ್ಯಾಪಾರ ||

ಅಂಜನ ಹಾಕೋ ಅಮೃತ
ಹಣೆ ಮೂಗು ಕುತ್ತಿಗೆ ಸುತ್ತ
ಹಚ್ಚಿ ನೀಲಗಿರಿ ದಟ್ಟ ವಾಸನೆ
ಹೊದ್ದೆ ಮಲಗೆ ಗಾಢ ಸುಮ್ಮನೆ ||

ಕಳೆದುಹೋದರೆಲ್ಲಾ ಬೆವರಲೆ
ಅಳಿದುಳಿದ ಜಾಡು ಹಿಂದಲೆ
ಬಿಸಿ ಕಾಫಿ ಕಡು ಕುಡಿದ ತೃಪ್ತಿ
ಶಿರವೇದನೆ ಮಡು ಕರಗಿ ಜಪ್ತಿ ||

ಸಿಕ್ಕವರೊಬ್ಬರ ತಮಾಷೆ ಮಾತು
ತಲೆಯಿರುವುದು ಖಾತರಿಯಾಯ್ತು !
ಬರದಿದ್ದರೆ ತಲೆ ನೋವು ಉಚಿತ
ಆಗಲೆಂತು ತಲೆಯಿರುವಾ ಖಚಿತ? ||

  • – ನಾಗೇಶಮೈಸೂರು

https://nageshamysore.wordpress.com/00353-%e0%b2%a4%e0%b2%b2%e0%b3%86%e0%b2%af%e0%b2%bf%e0%b2%b2%e0%b3%8d%e0%b2%b2%e0%b2%a6%e0%b2%b5%e0%b2%97%e0%b2%bf%e0%b2%b2%e0%b3%8d%e0%b2%b2-%e0%b2%a4%e0%b2%b2%e0%b3%86%e0%b2%a8%e0%b3%8b%e0%b2%b5/

00352. ಹೆಸರಲೆ ದುಪ್ಪಟ್ಟಾದವಳ ಕಥೆ


00352. ಹೆಸರಲೆ ದುಪ್ಪಟ್ಟಾದವಳ ಕಥೆ

_______________________________

  

ಕಾರು ಇನ್ನೇನು ಹೊರಡುವ ಹೊತ್ತು.. ಡ್ರೈವರು ಗೂ ರೋಂಗ್ ದೂರದಿಂದಲೆ ಬರುತ್ತಿದ್ದುದನ್ನು ಗಮನಿಸಿ ಕಾರಿನ ಬಾಗಿಲು ತೆರೆಯುತ್ತಿದ್ದ… ಆಗ ಕೇಳಿಸಿತ್ತು ಗಾಜಿನ ದೈತ್ಯ ಸ್ವಯಂಚಾಲಿತ ಗೋಡೆಯ ಹತ್ತಿರ ಬರುತ್ತಿದ್ದ ಹಾಗೆ ಹಿಂದಿನಿಂದ ದಾಪುಗಾಲಿಕ್ಕುತ್ತ ಯಾರೊ ಬರುತ್ತಿರುವ ಸದ್ದು – ಅಸಹಜವೇನಲ್ಲ ಆ ಹೊತ್ತಲಿ; ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತ ಪ್ರತಿಯೊಬ್ಬರದು. ಅದರಲ್ಲು ಬಸ್ಸು, ರೈಲು ಹಿಡಿದು ನಡೆವವರ ಕಥೆ ನಿತ್ಯದ ಪ್ರಹಸನ. ಒಂದೂವರೆಯಿಂದ ಎರಡು ಗಂಟೆಯವರೆಗು ರಸ್ತೆಯಲ್ಲೊ, ಟ್ರಾಫಿಕ್ಕಿನಲ್ಲೊ, ತೂಕಡಿಕೆಯಲ್ಲೊ, ತೂಗಾಟದಲ್ಲೊ ಅಥವಾ ಮತ್ತಾವುದೊ ಲೋಕದಲ್ಲಿ ಜಗ್ಗಾಡಿ ನಂತರ ಮನೆ ಸೇರುವುದೆಂದರೆಪ್ರಹಸನವೆ ಸರಿ. ನೋಡಿ ನಲಿವ ದಣಿದ ಪ್ರೇಕ್ಷಕರೆ ಪಾತ್ರಧಾರಿಗಳೂ ಆದ ವಿಚಿತ್ರ, ವಿಸ್ಮಯಕಾರಿ ಪ್ರಪಂಚ. ಈಗಾಗಲೆ ಮಾಮೂಲಿ ಹೊತ್ತು ದಾಟಿ ಹೋದ ಕಾರಣ ಸ್ವತಃ ಏನಾದರು ವ್ಯವಸ್ಥೆ ಮಾಡಿಕೊಳ್ಳಬೇಕು – ಪ್ರಯಾಣಕ್ಕೆ. ಊರಿಂದಾಚೆಗಿನ ಆ ಜಾಗದಲ್ಲಿ ಟ್ಯಾಕ್ಸಿ ಸಿಗುವುದು ಕಷ್ಟ. ಬಸ್ಸಿಗೆ ಕಾಯದೆ ವಿಧಿಯಿಲ್ಲ – ಹತ್ತಿರದ ರೈಲು ನಿಲ್ದಾಣದವರೆಗಾದರು ತಲುಪುವ ತನಕ. ಕಾರಿಟ್ಟುಕೊಂಡವರದು ಟ್ರಾಫಿಕ್ಕಿನಲ್ಲಿ ಸಿಕ್ಕಿ ಬೀಳುವ ಗೋಳಾದರು ನಡುವಿನ ಕಾಯುವ, ಬದಲಿಸುವ ಗೋಜಿರುವುದಿಲ್ಲ….

(Click the page link below for the rest of the article: https://nageshamysore.wordpress.com/00352-%e0%b2%b9%e0%b3%86%e0%b2%b8%e0%b2%b0%e0%b2%b2%e0%b3%86-%e0%b2%a6%e0%b3%81%e0%b2%aa%e0%b3%8d%e0%b2%aa%e0%b2%9f%e0%b3%8d%e0%b2%9f%e0%b2%be%e0%b2%a6%e0%b2%b5%e0%b2%b3-%e0%b2%95%e0%b2%a5%e0%b3%86/)
Thanks and best regards,

Nagesha MN

00351. ಗಣೇಶನ ಹಬ್ಬದ ಭರ್ಜರಿ… !


00351. ಗಣೇಶನ ಹಬ್ಬದ ಭರ್ಜರಿ… !
_____________________________
(ಸುರಗಿ ಪ್ರಕಟಣೆ – 17.09.2015)

IMG_1536
ವರ್ಷಕೊಮ್ಮೆ ಅಮ್ಮನ ಜತೆ ತಪ್ಪದೆ ಬಂದು ಭೇಟಿಯಿತ್ತು ಹೋಗುವ ಗಣಪನೆಂದರೆ ನಮಗೆಲ್ಲ ಎಂತದೊ ಪ್ರೀತಿ. ಬೇರೆ ಹಬ್ಬಗಳಲ್ಲಿ ಬಂದು ಹೋಗುವ ನೂರೆಂಟು ದೇವರುಗಳಿಗು ಮಿಗಿಲಾದ ವಿಶೇಷ ಪ್ರೀತಿ ಗಣಪನ ಮೇಲೆ. ಮಿಕ್ಕವರದು ಬಹುತೇಕ ಮನೆಯಲ್ಲಿರುವ ಪೋಟೊ ಅಥವಾ ವಿಗ್ರಹಕ್ಕೆ ಮಾಡುವ ಅಲಂಕಾರ ಪೂಜೆಯಾದರೆ ಗಣಪನ ಪೂಜೆಗೆ ಮಾತ್ರ ಹೊಸದಾಗಿ ಮಾಡಿದ ಮಣ್ಣಿನ ವಿಗ್ರಹ ತಂದು, ಮಂಟಪದಲ್ಲಿರಿಸಿ, ಅಲಂಕರಿಸಿ ಪೂಜಿಸುವ ಹುಮ್ಮಸ್ಸು. ಸಾಲದೆಂಬಂತೆ ಒಂದು ದಿನದ ಬದಲು ಹಲವಾರು ದಿನ ಇಟ್ಟುಕೊಂಡು ಬಗೆ ಬಗೆಯ ಭಕ್ಷ್ಯ ಭೋಜ್ಯ ನೈವೇದ್ಯಗಳಿಟ್ಟು ಪೂಜಿಸುವ ಪ್ರೀತಿ – ಕೊನೆಗೆ ನೀರಿಗೆ ಒಯ್ದು ಮುಳುಗಿಸುವ ತನಕ….

(Please click the page link to read the rest of the article: https://nageshamysore.wordpress.com/00351-%e0%b2%97%e0%b2%a3%e0%b3%87%e0%b2%b6%e0%b2%a8-%e0%b2%b9%e0%b2%ac%e0%b3%8d%e0%b2%ac%e0%b2%a6-%e0%b2%ad%e0%b2%b0%e0%b3%8d%e0%b2%9c%e0%b2%b0%e0%b2%bf/)
Thanks & best regards,

Nagesha MN

00350. ನಮ್ಮ ಗಣಪನಿಗೇನು ಕಮ್ಮಿ ?


00350. ನಮ್ಮ ಗಣಪನಿಗೇನು ಕಮ್ಮಿ ?
___________________________
 

 

ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೇ ಅನ್ನಬೇಕು.. ಎಲ್ಲರಿಗೂ ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೇ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೊ ಏನೊ, ಕೈಯಲ್ಲಿ ಹಿಡಿದ ಕಡುಬಿನ ಗಾತ್ರವೂ ಹಿರಿದೆ. ಇನ್ನು ಮೂಗಿನ ಕುರಿತು ಮಾತಾಡುವಂತೆಯೆ ಇಲ್ಲ – ಸೊಂಡಿಲಿನುದ್ದ ಗಾತ್ರಕ್ಕೆ ಸ್ಪರ್ಧೆ ನೀಡುವವರಾದರೂ ಯಾರು ? ಇನ್ನು ಕಿವಿಯೋ ಮೊರದಗಲದ ಗಜಕರ್ಣ. ಒಂದು ರೀತಿ ತಲೆಯ ಎರಡು ಪಕ್ಕಕ್ಕು ತಗುಲಿಸಿದ ಬೀಸಣಿಗೆಯ ಹಾಗೆ….

(Please click the link to read the rest of the article.. https://nageshamysore.wordpress.com/00350-%e0%b2%a8%e0%b2%ae%e0%b3%8d%e0%b2%ae-%e0%b2%97%e0%b2%a3%e0%b2%aa%e0%b2%a8%e0%b2%bf%e0%b2%97%e0%b3%87%e0%b2%a8%e0%b3%81-%e0%b2%95%e0%b2%ae%e0%b3%8d%e0%b2%ae%e0%b2%bf/)

Thanks and best regards,

Nagesha MN