00393. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬


00393. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬
______________________________

ಇಳೆಯಬಿಟ್ಟಿನ್ನುಮೆತ್ತಲುಮೈದದ ಪ್ರೇತ |
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೊ? – ಮಂಕುತಿಮ್ಮ ||

ಇಹ ಜೀವನದಲ್ಲಿ ದೇಹವೊಂದರೊಳಗಿನ ಜೀವವಾಗಿರುವ ತನಕ ಈ ಭೂಮಿಯಮೇಲೆ ಹೇಗೊ ಬದುಕಿರಲಿಂದು ಲೌಕಿಕ ರಹದಾರಿಯಾದರು ಇರುತ್ತದೆ. ಅಂತಹ ಜೀವಾತ್ಮ ದೇಹ ಸಾವಿಗೀಡಾದಂತೆ, ಅದನ್ನು ತ್ಯಜಿಸಿ ಒಂದೊ ಮೇಲಿನದಾವುದೊ ಲೋಕಕ್ಕೆ ತೆರಳಬೇಕು, ಇಲ್ಲವೆ ಮತ್ತೊಂದಾವುದೊ ದೇಹದಲ್ಲಿ ಜಾಗ ಹುಡುಕಿಕೊಂಡು ಹೊಸ ಜೀವನವನ್ನಾರಂಭಿಸಬೇಕು. ಇವೆರಡು ಆಗದ ಸ್ಥಿತಿಯಲ್ಲಿರುವ ಆತ್ಮಗಳ ಗೋಳಾಟದ ಕಥೆಯೆ ಹೇಳಲಾಗದ ದಾರುಣತೆ. ಆ ತ್ರಿಶಂಕು ಸ್ಥಿತಿಗೆ ಸಿಕ್ಕಿ ತಲ್ಲಣಿಸಿ ಒದ್ದಾಡುವ ಪ್ರೇತದ ಸ್ಥಿತಿ ಯಾವ ದೇವರಿಗೆ ತಾನೆ ಪ್ರೀತಿ ? ಇಳೆಯಲ್ಲಿರುವಂತಿಲ್ಲ, ಬಿಟ್ಟೆಲ್ಲೂ ಹೋಗುವ ತಾಣವೂ ಗೊತ್ತಿಲ್ಲದ ಅತಂತ್ರ ಪರಿಸ್ಥಿತಿಯಲ್ಲಿ ದಿಕ್ಕೆಟ್ಟು ಅಲೆಯುವುದೆ ‘ಹಣೆಬರಹ’ವಾಗಿಬಿಡುತ್ತದೆ. ಅದೇ ಮನಸ್ಥಿತಿಯಲ್ಲಿ ತಲ್ಲಣಿಸಿ ಕಂಗೆಟ್ಟಿರುವ ಲೋಕದ ಪರಿಸ್ಥಿತಿಗೆ ಮಮ್ಮಲ ಮರುಗುವ ಪರಿ ಈ ಸಾಲುಗಳಲ್ಲಿ ವರ್ಣಿತವಾಗಿದೆ. ಈ ಲೋಕದ ತಲ್ಲಣವಾದರೂ ಯಾಕಾಗಿ? ಕವಿ ಕಾಣುವಂತೆ ಹಳೆಯ ಧರ್ಮ ಸತ್ತುಹೋಗಿದೆ, ದೇಹ ಬಿಟ್ಟ ಆತ್ಮದಂತೆ. ಆದರೆ ಅದರ ಬದಲಿನ ಹೊಸಧರ್ಮ ಹುಟ್ಟಿಲ್ಲವಾಗಿ ಏನು ಮಾಡಬೇಕೆಂದರಿವಾಗದೆ ಅಡ್ಡಾಡುವ ಪ್ರೇತದಂತೆ ತಲ್ಲಣಿಸಿಹೋಗಿದೆ ಈ ಲೋಕ. ಸತ್ತುಹೋದ ಹಳತಿಗೆ ಮತ್ತೆ ಮುಖ ತೋರುವಂತಿಲ್ಲ; ಹೊಸತನ್ನಾಶ್ರಯಿಸೋಣವೆಂದರೆ ಅದಿನ್ನು ಹುಟ್ಟೆ ಇಲ್ಲ. ಇತ್ತ ಹಳೆ ಧರ್ಮವನ್ನು ಮುಂದುವರಿಸಲೂ ಆಗದು, ಹೊಸ ಮನೋಧರ್ಮವನ್ನು ಅಳವಡಿಸಿಕೊಳಲು ಆಗದು. ಅಂತಹ ಅತಂತ್ರಕ್ಕೆ ಸಿಕ್ಕಿ ತಲ್ಲಣಿಸಿ ನರಳುವ ಪಾಡು ಈ ಲೋಕದ್ದಾಗಿ ಹೋಗಿದೆ. ಈ ತಳಮಳ ಎಂದಾದರು ಕೊನೆಯಾಗಲುಂಟೆ ಅಥವ ಇದು ಜೀವಮಾನ ಪೂರ್ತಿ ನಿರಂತರವೆ ? ಎಂದು ಸಂಕಟಪಡುವ ಕವಿಮನದ ಜಿಜ್ಞಾಸೆ ಈ ಪದ್ಯದ ಭಾವ.

ಇಲ್ಲಿ ಧರ್ಮ ಎನ್ನುವುದನ್ನು ಬರಿಯ ಪದದ ನೈಜ ಮೂಲಾರ್ಥಕ್ಕೆ ಮಾತ್ರ ಸೀಮಿತಗೊಳಿಸದೆ ಧರ್ಮ, ಸಂಸ್ಖೃತಿ, ಆಚಾರ, ವಿಚಾರ, ನಡೆ, ನುಡಿ, ಜೀವನ ಶೈಲಿ, ಮನೋಭಾವ, ಮನೋಧರ್ಮಗಳನ್ನೆಲ್ಲ ಒಗ್ಗೂಡಿಸಿದ ಸಮಷ್ಟಿತ ಭಾವದಲ್ಲಿ ನೋಡಬೇಕು. ಆಗಷ್ಟೆ ಈ ಪದ್ಯದ ಗಹನತೆ ಮತ್ತು ವಿಶಾಲ ವ್ಯಾಪ್ತಿಯ ಆಳಗಲ ನಿಲುಕಿಗೆ ಸಿಗುವುದು. ಈಗಿನ ಪೀಳಿಗೆಗಳಲ್ಲಿರುವ ಗೊಂದಲ, ಗುರಿ-ಗಮ್ಯ ಗೊತ್ತಿರದ ಬದುಕಿನ ರೀತಿ, ಯಾಂತ್ರಿಕವಾಗಿ ಏನೊ ಮಾಡಿಕೊಂಡು ಹೋಗುತ್ತಿರುವ ಅಸಹಾಯಕ ಭಾವ – ಇವೆಲ್ಲಕ್ಕು ಮೂಲ ಕಾರಣವನ್ನು ಇಲ್ಲಿ ವಿವರಿಸಿರುವುದನ್ನು ಕಾಣಬಹುದು. ಹಿಂದೆ ಮುಂದೆ ನೋಡದೆ ಹಳತ ಬಿಟ್ಟು ಹೊಸತನ್ನು ಅಳವಡಿಸಿಕೊಳಲು ಹೊರಟ ಲೋಕ ಹೊಸತರ ಸ್ವರೂಪದ ಸುಳಿವೆ ಕಾಣದೆ ಎಡವಿ ಬಿದ್ದುದನ್ನು ಸರಳವಾಗಿ ಆಡಿ ತೋರಿಸುವ ಚಮತ್ಕಾರ ಈ ಸಾಲುಗಳದು.

00392. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫


00392. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫
_______________________________

ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿವೆ ಮಾಸಿ |
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |
ತಳಮಳಿಸುತಿದೆ ಲೋಕ – ಮಂಕುತಿಮ್ಮ ||

ಪರಂಪರೆಯೆನ್ನುವುದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬರಬೇಕಾದ ಅಮೃತ ರಸ – ಹಾಗೆ ಬರುವಾಗ ತನ್ನಂತಾನೆ ಹೊಸತಿಗೆ ಅಳವಡಿಸಿಕೊಳ್ಳುತ್ತ, ಹೊಂದಿಸಿಕೊಳ್ಳುತ್ತ, ‘ಹಳೆ ಬೇರು, ಹೊಸ ಚಿಗುರು’ ಎನ್ನುವ ಹಾಗೆ. ಆದರೆ ಈ ಕಲಿಯುಗದ ಮಹಿಮೆಯೊ, ಕಾಲಧರ್ಮದ ಪ್ರಭಾವವೊ – ಪೀಳಿಗೆ ಪೀಳಿಗೆಗೆ, ಸಂತತಿ ಸಂತತಿಗೆ ಆ ಹಳತಿನ ಕುರಿತಾದ ಗೌರವ, ಶ್ರದ್ಧೆ, ಆದರ, ಭಕ್ತಿಗಳು ಕುಗ್ಗುತ್ತಾ, ಮಾಸುತ್ತ ಅದರ ಬದಲು ಆಧುನಿಕತೆಯ ಅಂಧಾನುಕರಣೆ, ಹಳತಿನ ಅವಹೇಳನ ಮಾಡುವ ಮನೋಭಾವಗಳು ನೆಲೆಯೂರುತ್ತಿವೆ. ಅಪ್ಪ ಹಾಕಿದ ಆಲದ ಮರದಂತೆ ಹಳತಿಗೆ ಜೋತುಬಿದ್ದ ನಿಂತ ನೀರಾಗಬಾರದು ಎನ್ನುವುದು ನಿಜವಾದರೂ, ಹಳತೆಲ್ಲ ಹಿಂದೆ ಸರಿಯುತ್ತಿರಬೇಕಾದರೆ, ಅದರ ಮೀರಿಸುವ ಅಥವಾ ಕನಿಷ್ಠ ಅದರದೆ ಸಮಾನ ಬಲದ ಹೊಸ ದರ್ಶನ, ಸಿದ್ದಾಂತ, ತಿಳುವಳಿಕೆ, ಜ್ಞಾನದ ಆಸರೆಯೀವ ಹೊಸತೊಂದರ ಸಹಚರ್ಯೆಯಿರಬೇಕಲ್ಲವೆ? ಹೊಸತಿನ ಸಿದ್ದಾಂತದ ಮಾರ್ಗದರ್ಶನದ ಸುಳಿವೆ ಕಾಣುತ್ತಿಲ್ಲವಾದರೂ, ಹಳತನ್ನೆಲ್ಲ ಒದರೆಸೆದುಬಿಟ್ಟು , ಹೊಸತರಂತೆ ಕಾಣುವ ಯಾವಾವುದೊ ದಾರಿಯತ್ತ ಹಿಂದೆ ಮುಂದೆ ನೋಡದೆ ಮುನ್ನುಗ್ಗುವುದು ಸರಿಯೆ ? ಎನ್ನುವ ಪ್ರಶ್ನೆ ಕವಿಯದು. ಅಚ್ಚರಿಯೆಂದರೆ ಈ ರೀತಿಯ ಮಾನಸಿಕ ತಳಮಳ ಈಗಲೂ ನಮ್ಮ ಮನಗಳಲ್ಲಿ ಜೀವಂತವಾಗಿರುವ ಪರಿ ನೋಡಿದರೆ, ಈ ರೀತಿಯ ಹಳತು – ಹೊಸತರ ತಿಕ್ಕಾಟದ ಸದ್ದು ಪೀಳಿಗೆಗಳಾಚೆಗೂ ಸದಾ ನಿರಂತರವಾಗಿ ಹರಿಯುವ ಅಂತರಗಂಗೆಯೇನೊ ಎನಿಸದಿರದು. ಆದರೆ ಈ ಪರಿಸ್ಥಿತಿಗೆ ಸಿಕ್ಕಿಬಿದ್ದ ಮನಗಳ ಸ್ಥಿತಿಯಾದರೂ ಎಂತದ್ದೆನ್ನುವುದನ್ನು ಕವಿ ಎಷ್ಟು ಸೊಗಸಾಗಿ ಕುಂಟ ಕುರುಡನ ಪ್ರತಿಮೆಯಲ್ಲಿ ಹಿಡಿದಿಡುತ್ತಾರೆ ನೋಡಿ? ಹಳತಿನ ಆರಾಮವೆನಿಸಿದ್ದ ಪರಿಸರ ಹೇಗಿತ್ತೆಂದರೆ ಕುಂಟಾ, ಕುರುಡ ಎನಿಸಿಕೊಂಡವರೂ ಸಹ ಯಾವುದೆ ತೊಡಕಿಲ್ಲದೆ ಸರಾಗವಾಗಿ ಅಡ್ಡಾಡಿಕೊಂಡು ಮನೆಯಲ್ಲಿರುವಷ್ಟು. ಆದರೆ ಅಲ್ಲಿ ಪಳಗಿದ್ದ, ಅದರಲ್ಲಿ ಹೇಗೊ ಸಮತೋಲನ ಕಂಡುಕೊಂಡು ಜೀವಿಸಿಕೊಂಡಿದ್ದ ಕುಂಟ, ಕುರುಡರು ಹೊಸತಿನ ಆಘಾತಕ್ಕೆ ಸಿಕ್ಕಿ ತತ್ತರಿಸಿ ಹೋಗುತ್ತಿದ್ದಾರೆ ದಿಕ್ಕು ದೆಸೆ ಕಾಣದಂತೆ – ಹೊಂದಿಕೊಳ್ಳಲಾಗದ, ನಿಭಾಯಿಸಿಕೊಳ್ಳುವುದು ಹೇಗೆಂದು ಗೊತ್ತಿರದ ಹೊಸ ಮನೆಯಲ್ಲಿ. ಈ ಜಗದ, ಲೋಕದ ಜನರ ಸ್ಥಿತಿಯೇನೂ ಕಡಿಮೆಯಿಲ್ಲ ‘ ಅತ್ತಲೂ ಇರುವಂತಿಲ್ಲ, ಇತ್ತಲು ಇರುವಂತಿಲ್ಲ’ ಎಂಬ ‘ಅತ್ತ ದರಿ, ಇತ್ತ ಪುಲಿ’ ಗೊಂದಲದಲ್ಲಿ ಸಿಕ್ಕಿ ಆ ಕುಂಟರು, ಕುರುಡರ ಹಾಗೆಯೆ ತಳಮಳಿಸುತ್ತಿದ್ದರೆ ಎನ್ನುತ್ತಾನೆ ಮಂಕುತಿಮ್ಮ.

ನಿಗದಿಯಾದ ಪೂರ್ವ ಯೋಜನೆಯಿರದೆ, ಸರಿಯಾದ ದಿಕ್ಕು ದೆಸೆಯನ್ನರಿಯದೆ ಗೊತ್ತು ಗುರಿಯಿರದ ಎತ್ತಲೊ ನಡೆದಂತಿರುವ ಜಗವನ್ನು ಕಂಡು ಕಳವಳದಿಂದ ಹೇಳುತ್ತಿರುವ ಮಾತೆನ್ನುವ ಭಾವ ಒಂದೆಡೆ ಮೊಳಗಿದರೆ, ಹಾಗೆ ನಡೆದಿರುವ ಹಾದಿಗೆ ಇರಬೇಕಾದ ತೀರಾ ಸಾಮಾನ್ಯ ಜ್ಞಾನವೂ ಇರದ ವಿಷಾದ, ಖೇದವೂ ಅಲ್ಲಿ ಮನೆ ಮಾಡಿಕೊಂಡಿದೆ. ಒಂದೆಡೆ ಬಿದ್ದುಹೋಗುತ್ತಿರುವ ಹಳತಿನ ಮೌಲ್ಯವನ್ನು ಅರಿಯದ ಮೂಡರೆಂಬ ಸಂಕಟ ಕಾಡುತ್ತಿದ್ದರೆ, ಮತ್ತೊಂದೆಡೆ ಅದನ್ನು ದೂರ ತಳ್ಳುವ ಅವಸರದಲ್ಲಿ ಅಪ್ಪಿಕೊಳ್ಳುತ್ತಿರುವ ಹೊಸತಿನಲ್ಲಿ ಎಳ್ಳಿಗಿಂತ ಹೆಚ್ಚು ಜೊಳ್ಳೆ ಇದೆಯಲ್ಲಾ ಎನ್ನುವ ನೋವು ಕಾಣಿಸಿಕೊಳ್ಳುತ್ತದೆ ಕವಿ ಭಾವದಲ್ಲಿ. ಹಳತು ಸರಿಯಿಲ್ಲವೆಂಬ ನೈಜ ಕಾರಣಕ್ಕೆ ಹೀಗಾಗಿದ್ದರೆ ಅಷ್ಟೊಂದು ಬೇಸರವಿರುತ್ತಿರಲಿಲ್ಲವೇನೊ – ಆದರಿಲ್ಲಿ ಹಳತನ್ನರಿಯದೆಯೆ ಅದರ ಮೌಲ್ಯಮಾಪನ ಮಾಡದೆಯೆ ತಿರಸ್ಕರ, ಅಸಡ್ಡೆಯಿಂದ ಹೊಸತರತ್ತ ಮುಖ ಮಾಡಿಕೊಂಡು ಹೋದರು, ಅಲ್ಲಿ ಇದ್ದಕ್ಕಿಂತ ಉತ್ತಮವಾದದ್ದೇನಾದರೂ ಇರುವುದೆ ಎಂದು ತಾಳೆ ನೋಡಲು ಆಗದಷ್ಟು ಗೊಂದಲವಿರುವೆಡೆ ಕುರುಡು ಹೆಜ್ಜೆ ಹಾಕಬೇಕಾದ ಅನಿವಾರ್ಯಕ್ಕೆ ತಳಮಳಿಸುವ ಕವಿಭಾವ ಇಲ್ಲಿ ಅನನ್ಯ ರೂಪದಲ್ಲಿ ಪ್ರಕಟವಾಗುತ್ತದೆ, ಲೋಕದ ಕಳವಳದಂತೆಯೆ.

00391. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪


00391. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪
_________________________________

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೆ ಗಾಳಿಯನುಸಿರ್ವ ನರ ಜಾತಿಯೊಳಗೆಂತು |
ಬಂದುದೀ ವೈಷಮ್ಯ ? – ಮಂಕುತಿಮ್ಮ ||

ಮಾನವರೆಲ್ಲರು ವಾಸಿಸುತ್ತಿರುವುದೊಂದೊ ಭೂಮಿಯ ಮೇಲೆ. ಅಂತಾಗಿ ಎಲ್ಲ ನೋಡುತ್ತಿರುವ ತಾಣ, ದಿಕ್ಕುಗಳು ಬೇರೆಬೇರೆಯಾದರೂ, ಎಲ್ಲರೂ ಕಾಣುತ್ತಿರುವುದು ಮಾತ್ರ ಒಂದೆ ಆಕಾಶ. ಹೆಜ್ಜೆಯಿಕ್ಕಿ ನಡೆದಾಡುವ ಅಸಂಖ್ಯಾತ ಹಾದಿಗಳಿದ್ದರು ಅದೆಲ್ಲವು ಒಂದೆ ಭೂಮಿಯ ಮಡಿಲಿಗಂಟಿದ ವಿಸ್ತೃತ ರೂಪಗಳಾದ ಕಾರಣ, ನಡೆವ ಉದ್ದೇಶದಿಂದ ತುಳಿಯುವ ನೆಲವೂ ಒಂದೆ ಆಗುತ್ತದೆ – ಭೂಮಿಯ ಯಾವುದೇ ಮೂಲೆಯಲ್ಲಿ ನೆಲೆಸಿದ್ದರು.

ಇನ್ನು ಅದೇ ನೆಲದಲ್ಲಿ ಬೆಳೆಯುವ ಧಾನ್ಯವಾದರೂ ಬೇರೆಯೆನ್ನಲಾದೀತೆ ? ಏನೆ ಬೆಳೆದುಂಡರೂ ಅದು ಬರುವುದು ಒಟ್ಟಾರೆ ಭುವಿಯ ಬಸಿರನ್ನೊಡೆದ ಹಸಿರಿನ ರೂಪಾಗಿಯೆ. ಆದರಲ್ಲೂ ಆಹಾರದ ಸರಪಳಿಯ ಕೊಂಡಿಯಿಡಿದು ಹೊರಟರೆ ಎಲ್ಲದರ ಆದಿ ಮೂಲವೂ ಒಂದೆ ಆಗಿಬಿಡುತ್ತದೆ.

ಇನ್ನು ಆಹಾರವೆ ಹಾಗೆಂದಮೇಲೆ ನೀರಿನ ವಿಷಯದಲ್ಲಂತೂ ಮಾತನಾಡುವಂತೆಯೆ ಇಲ್ಲ – ಎಲ್ಲರೂ ಕುಡಿವ ನೀರು ಆ ಭೂಮಿಯ ಮೂಲದಿಂದಲೆ ಬರಬೇಕು ತಾನು ಬರುವಾಗ ಬೆರೆತ ಲವಣಾದಿಗಳಿಂದ ಯಾವುದೆ ರುಚಿಯನ್ನು ಆರೋಪಿಸಿಕೊಂಡರು. ಕಡೆಗೆ ಮಳೆಯಾಗುವ ನೀರು ಕೂಡ ಇಲ್ಲಿಂದಲೆ ಆವಿಯಾಗಿ ಮೇಲೇರಿ, ಮೋಡವಾಗಿ ನುಲಿದು ಮತ್ತೆ ಮಳೆಯಾಗಿ ಇಳೆ ಸೇರಬೇಕು.

ಇನ್ನು ಎಲ್ಲರೂ ಉಸಿರಾಡುವ ಗಾಳಿ ? ಬೇರೆಲ್ಲದರ ವಿಷಯದಲ್ಲಿ ಸ್ವಲ್ಪ ತಾರತಮ್ಯ, ರೂಪ ಬೇಧಗಳನ್ನು ಕಾಣಬಹುದೊ ಏನೊ – ಆದರೆ ಗಾಳಿಯ ವಿಷಯದಲ್ಲಿ ಹಾಗೆನ್ನುವಂತೆಯೆ ಇಲ್ಲ, ಅದರಲ್ಲೂ ಪ್ರಾಣವಾಯುವಿನ ವಿಷಯದಲ್ಲಿ. ಎಲ್ಲೆ ಇದ್ದರೂ, ಎಲ್ಲರೂ ಕುಡಿಯುವುದು , ಉಸಿರಾಡುವುದು ಅದೊಂದೆ ಗಾಳಿಯ ರೂಪವನ್ನು. ಜತೆಗೇನೆ ಕಲ್ಮಷಗಳ ಮಿಶ್ರಣವನ್ನು ಒಳಗೆಳೆದುಕೊಳ್ಳಬೇಕಾಗಿ ಬಂದರು ಬದುಕಿನ , ಜೀವದ ಉಳಿವಿಗೆ ಪ್ರಾಣವಾಯುವಷ್ಟೆ ಸಚೇತಕ ಪ್ರತಿಯೊಬ್ಬನಲ್ಲು.

ಹೀಗೆ ಇಡೀ ನರ ಜಾತಿಯ ಮೂಲಭೂತ ವಿಶ್ಲೇಷಣೆಗಿಳಿದರೆ ಎಷ್ಟೊಂದು ಸಾಮ್ಯತೆಗಳು ಎದ್ದು ಕಾಣುತ್ತವೆ , ಅದರಲ್ಲು ಪ್ರತಿಯೊಬ್ಬರಲ್ಲು ಸಮಾನವಾಗಿರುವ ಸಾಮ್ಯತೆಗಳು. ಆದರೂ ರಾಗದ್ವೇಷ ಪ್ರೇರಿತವಾದ ಮಾನವ ಹೃದಯಗಳು ಪರಸ್ಪರರತ್ತ ವೈಷಮ್ಯ ಸಾಧಿಸುತ್ತ, ನಾನು ಬೇರೆ, ನೀನು ಬೇರೆ ಎಂದು ನೂರಾರು ಜಾತಿ, ಕುಲ, ಮತಗಳ ಹಂಗಿನಲ್ಲಿ ಹೊಟ್ಟೆಕಿಚ್ಚು, ಸ್ವಾರ್ಥಲಾಲಸೆಯ ಲೆಕ್ಕಾಚಾರಕ್ಕೆ ಸಿಕ್ಕಿ ನರಳುವುದೇಕೊ ? ಎನ್ನುವುದು ಮಂಕುತಿಮ್ಮನ ಸಂದೇಹ. ಎಲ್ಲರನ್ನು ಮಾಡಿದವನೊಬ್ಬನೆ, ಎಲ್ಲರ ವಾಸ, ಆಹಾರ, ದಾಹಾದಿಗಳ ಸ್ವರೂಪವು ಒಂದೆ. ಅಂದ ಮೇಲೆ ಕಾದಾಡದೆ ಒಗ್ಗಟ್ಟಾಗಿರಲೇನು ಅಡ್ಡಿ ? ಎನ್ನುವ ಕವಿ ಹೃದಯ ಅದೇ ಮನೋಭಾವದ ಎಲ್ಲರಿಗು ಸುಲಭದಲ್ಲಿ ಅರ್ಥವಾಗುತ್ತದೆ. ಇಲ್ಲಿನ ವೈಷಮ್ಯ ಭಾವ ಯಾವುದೆ ಎರಡು ನರರ ನಡುವೆ ಇರಬಹುದಾದ ಸಂಕೀರ್ಣವಾದರೂ, ಈ ಪದ್ಯಕ್ಕೆ ಆ ಕಾಲದಲ್ಲಿ ಮತ್ತು ಈಗಲೂ ಪ್ರಸ್ತುತವಿರುವ ನಮ್ಮ ಜಾತಿಮತ ಪದ್ದತಿಗಳೆ ಪ್ರಬಲ ಪೂರಕ ಹಿನ್ನಲೆಯಾಗಿದ್ದಿರಬೇಕು. ಆದರೆ ಆ ಹಿನ್ನಲೆಯಿರದೆಯೂ ಈಗಲೂ ಪ್ರಸ್ತುತವಾಗುತ್ತ, ಇಡೀ ಜಗತ್ತಿನ ನಿಲುಕಿನಲ್ಲಿ ಈಗಲೂ ಅನ್ವಯವಾಗುವ ಈ ಸಾಲುಗಳು ಅದರ ನಿರಂತರತೆಗೆ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು.

00390. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೩


00390. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೩
_______________________________

ಪುರುಷ ಸ್ವತಂತ್ರತೆಯ ಪರಮ ಸಿದ್ದಿಯದೇನು ? |
ಧರಣಿಗನುದಿನದ ರಕ್ತಾಭಿಷೇಚನೆಯೆ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವುದೆ? – ಮಂಕುತಿಮ್ಮ ||

ಸ್ವಾತಂತ್ರ ಮತ್ತು ಸ್ವೇಚ್ಛೆಯ ನಡುವಿನ ತೆಳುಗೆರೆ ಬಹಳ ಸೂಕ್ಷ್ಮವಾದದ್ದು. ಯಾವುದು ಎಲ್ಲಿ ಮುಗಿಯುತ್ತದೆ, ಮತ್ತೆಲ್ಲಿ ಆರಂಭವಾಗುತ್ತದೆ ಎಂದು ಗುರುತಿಸುವುದು ಸುಲಭವಲ್ಲ. ಸ್ವಾತಂತ್ರವಿರದಾಗ ಅದಕ್ಕೆ ಹಪಹಪಿಸುವ ಮನಕ್ಕೆ, ಅದು ಸಿಕ್ಕಿದಾಗ ರೆಕ್ಕೆ ಬಿಚ್ಚಿದ ಹಕ್ಕಿಯಷ್ಟೆ ಆನಂದಾನುಭೂತಿ ಲಭ್ಯ. ಅದಕ್ಕಾಗಿ ಹೊಡೆದಾಟ ನಡೆಸದೆ ಸುಲಲಿತವಾಗಿ ಕೈ ಸೇರಿದ ಸುಖವನ್ನನುಭವಿಸಿದವರಿಗೆ ಅದರ ಸ್ವಾನುಭವವಿರದಿದ್ದರು, ಅದರ ಮೌಲ್ಯದ ಅರಿವು, ಎಚ್ಚರಿಕೆಯಿರಬೇಕಾದ್ದು, ಸೂಕ್ಷ್ಮ ಗಡಿರೇಖೆಯ ಮಿತಿಯ ಪರಿಗಣನೆಯಿರಬೇಕಾದ್ದು ಮುಖ್ಯ. ಕವಿಯ ಸಾಮಾಜಿಕ ಪರಿಸರದಲ್ಲಿ ಪುರುಷ ಪ್ರಾಧಾನ್ಯತೆ ಸಾಮಾನ್ಯವಾಗಿದ್ದ ಕಾರಣ, ಅದು ಅವರಲ್ಲಿನ ಹೆಚ್ಚಿನ ಸ್ವಾತಂತ್ರವನ್ನು ಕೊಡಮಾಡುವ ಅಧಿಕಾರಯುತ ಶಕ್ತಿಯಾಗಿ ಬದಲಾಗುವುದು ಅಸಹಜ ಬೆಳವಣಿಗೆಯೇನಲ್ಲ. ಮೂಲತಃ ಪುರುಷಪ್ರಧಾನ ಪರಿಸರದಲ್ಲಿ ಅವರಿಗೆ ಸಿಗುವ ಸ್ವತಂತ್ರತೆಯು ಜವಾಬ್ದಾರಿಯಿಂದ, ಹೊಣೆಗಾರಿಕೆಯಿಂದ ಬಳಸಲ್ಪಡುವ ಅಧಿಕಾರವೊ, ಸಂಯಮಿತ ಸ್ವೇಚ್ಛೆಯೊ ಆಗಬೇಕೆ ಹೊರತು ದುರ್ಬಳಕೆಯ ಪರಿಕರವಾಗಬಾರದು. ಆದರೆ ಇತಿಹಾಸವನ್ನು ಆಳವಾಗಿ ಅವಲೋಕಿಸಿದರೆ ಕಾಣುವುದೇನು? ಸಿಕ್ಕ ಸ್ವಾತಂತ್ರವು ನೀಡುವ ಶಕ್ತಿಯನ್ನೆ ಮಿಕ್ಕೆಲ್ಲರನ್ನು ಕಡಿವಾಣ, ಹತೋಟಿ, ನಿಯಂತ್ರಣದಲ್ಲಿರಿಸುವ ಸಿದ್ದಿಯ ಸಮನಾರ್ಥಕವಾಗಿಸಿ, ಸ್ವೇಚ್ಛೆಯಿಂದ ಹಿಂದೆ ಮುಂದೆ ನೋಡದೆ ಸಿಕ್ಕಸಿಕ್ಕವರನ್ನೆಲ್ಲ ತರಿದು ಧರೆಗೊರಗಿಸುತ್ತ ರಕ್ತಾಭೀಷೇಕ ಮಾಡಿಕೊಂಡು ಹೋಗುವುದೇನು ದೊಡ್ಡ ಪುರುಷಾರ್ಥವೆ ? ಎಂದು ಕೇಳುತ್ತದೆ ಕವಿಮನಸು. ಹಾಗೆ ಮುನ್ನಡೆಯುವ ಅವಸರದಲ್ಲಿ ಅಗತ್ಯವಿರಲಿ, ಬಿಡಲಿ ಸಿಕ್ಕೆಡೆಯಲ್ಲೆಲ್ಲ ಕರವಾಳವನ್ನು (ಕತ್ತಿ), ಹೂವಿನ ಸರವೆತ್ತಿದಷ್ಟೆ ಸಲೀಸಾಗಿ ಸೆಳೆಯುತ್ತ ಹೋದರೆ, ಅದರಿಂದುಂಟಾಗುವ ದುಷ್ಕೃತ್ಯದ ಫಲಿತ ರಕ್ತ ಸುರಿಸುವುದಲ್ಲದೆ ಹೂವಿನ ಪರಿಮಳವನ್ನು ಹೊರಚೆಲ್ಲಲು ಸಾಧ್ಯವೆ ಎನ್ನುತ್ತಾನೆ ಮಂಕುತಿಮ್ಮ.

ಇಲ್ಲಿ ಮೇಲ್ನೋಟಕ್ಕೆ ಪುರುಷ ಶಕ್ತಿ, ಕತ್ತಿಯ ಯುದ್ಧ, ರಕ್ತಾಭಿಷೇಚನ ಇತ್ಯಾದಿಗಳ ಬಳಕೆಯಿಂದ ಯುಗಯುಗಗಳಿಂದ ನಡೆದು ಬಂದ ಕದನ, ಯುದ್ಧಗಳ ಕುರಿತಾಗಿ ಹೇಳುತ್ತಿದ್ದರೆ ಎಂದನಿಸಿದರು, ನನಗೆ ಮತ್ತೊಂದು ನಿಗೂಢ ಕೋನವೂ ಇದರೊಳಗಡಗಿರುವಂತೆ ಭಾಸವಾಗುತ್ತದೆ. ಇದು ಅಂತರಾಳದಲ್ಲಿ ಗಂಡು ಹೆಣ್ಣಿನತ್ತ ನೋಡುತ್ತಿದ್ದ ದೃಷ್ಟಿಕೋನದ ಟೀಕೆಯೂ ಆಗಿರಬೇಕೆಂಬುದೆ ಆ ಅನಿಸಿಕೆ. ಪುರುಷ ಸ್ವಾತಂತ್ರ ಬಲದಿಂದ ಸಿಕ್ಕಿದ ಅಧಿಕಾರವನ್ನೆ ಬಳಸಿ ಹೆಣ್ಣಿನ ನೇರ ಅಥವಾ ಪರೋಕ್ಷ ಶೋಷಣೆಗೆ ತೊಡಗುವ, ಉಗುರಲಿ ಹೋಗುವುದನ್ನು ಕೊಡಲಿ ಹಿಡಿದು ತೊಲಗಿಸುವ ಪ್ರವೃತ್ತಿಯನ್ನು ಟೀಕಿಸುವ, ಸ್ತ್ರೀಯ ಮಾನಸಿಕ ವಿಭಿನ್ನತೆಯ ವಿವೇಚನೆ ಮತ್ತು ಸೂಕ್ಷ್ಮಜ್ಞತೆಯರಿವಿರದ ಒರಟುತನವನ್ನು ಎತ್ತಾಡುವ, ಹಿಂಸಾಪ್ರವೃತ್ತಿಗಿಳಿದು ದಂಡಿಸುವ ಬುದ್ಧಿಯನ್ನು ಖಂಡಿಸುವ ಕವಿಭಾವವೇನೊ ಅನಿಸುತ್ತದೆ. ಇಲ್ಲಿ ಧರಣಿಯನ್ನು ಹೆಣ್ಣಿನ ಪ್ರತಿಮಾ ರೂಪವಾಗಿ ಪರಿಗಣಿಸುತ್ತ, ರಕ್ತಾಭಿಷೇಚನವನ್ನು ಒರಟು ದೌರ್ಜನ್ಯಕ್ಕೆ ಸಮೀಕರಿಸುತ್ತ ನೋಡಿದಾಗ ಅದರ ಮುಂದಿನ ಸಾಲು ಮತ್ತಷ್ಟು ಅರ್ಥಗಳನ್ನು ಸ್ಪುರಿಸುತ್ತದೆ. ಸ್ತ್ರೀಯ ಒಡನಾಟದಲ್ಲಿ ಸಹಜವಾಗಿ ಬಳಸಬಹುದಾದ ಮಧುರಭಾವಾನುಭೂತಿಯ ಪುಷ್ಪಸರದ ಬದಲು, ಬಲವಂತದ ಕಟ್ಟೋತ್ತಾಯದ ಕರವಾಳದಂತಹ ಕ್ರಮದನುಸರಣೆಗಿಳಿದು, ನಂತರ ಫಲಿತವಾಗಿ ಹೂವಿನ ಪರಿಮಳ ಹೊರಡಲಿಲ್ಲವೆಂದು ದೂರಲಾಗುತ್ತದೆಯೆ ? ಪ್ರಕೃತಿಯನೊಲಿಸುವ ಹುನ್ನಾರದಲ್ಲಿ ತನ್ನಾಯುಧಗಳೊಡನೆ ರಣರಂಗಕ್ಕೆ ಹೊರಟ ಪುರುಷ ಪ್ರವೃತ್ತಿ, ಮೃದುಲ ಪ್ರಕೃತಿಯ ಅಂತರಾಳವನ್ನರಿಯದೆ ತನ್ನ ಶಕ್ತಿ, ಬಲದ ಹಮ್ಮಿನಲ್ಲಿ ಹಣಿಯಲು ಹೊರಟರೆ ಆ ಒರಟು ಚೆಲ್ಲಾಟಕ್ಕೆ ನೆತ್ತರ ಘಾತಕ ಸ್ರಾವವಾಗುವುದೆ ಹೊರತು ಪರಿಮಳಭರಿತ ಪುಷ್ಪಗಳಿಂದ ಸುವಾಸನೆ ಬೀರುವ ಮಾನಸ ಸರೋವರವಾಗದು. ಹೀಗೆ ಪ್ರಕೃತಿಯತ್ತ ಪುರುಷನ ದೃಷ್ಟಿಕೋನದ ಒಂದು ತುಣುಕನ್ನು ಈ ಸಾಲುಗಳು ದರ್ಶನ ಮಾಡಿಸುತ್ತವೆಯೆಂದು ನನ್ನ ಭಾವನೆ.

ಇದೇನು ಕವಿಯ ಮೂಲದಿಂಗಿತ ಭಾವಗಳಲೊಂದಾಗಿತ್ತೊ ಅಥವಾ ಸಾಮಾನ್ಯವಾಗಿ ಕವಿತೆಗಳಲ್ಲಾಗುವಂತೆ ಓದುಗನ ಭಿನ್ನ ಮನಸ್ಥಿತಿಗನುಸಾರವಾಗಿ ಸ್ಪುರಿಸುವ ವೈವಿಧ್ಯ ಭಾವದ ಸರಕೊ ಹೇಳುವುದು ಕಠಿಣ. ಅದರಲ್ಲೂ ಇದನ್ನು ಬರೆದ ಕಾಲಮಾನದಲ್ಲಿದ್ದ ಮಡಿವಂತಿಕೆ, ಸಾಮಾಜಿಕ ಮತ್ತು ಪರಿಸರ ಪ್ರೇರಿತ ನಿರ್ಬಂಧಗಳ ಕಾರಣದಿಂದ ಕವಿ ಅದನ್ನು ಪ್ರಕಟವಾಗಿ ಹೇಳಬೇಕೆಂದುಕೊಂಡರು, ಮುಕ್ತವಾಗಿ ಬಿಚ್ಚಿಡುವುದಕ್ಕಿಂತ ಗೂಢಾರ್ಥದಡಿ ಬಚ್ಚಿಡುವ ಸಾಧ್ಯತೆಯೆ ಹೆಚ್ಚು. ಇದು ಅಂತಹುದೆ ಅರ್ಥವೇ – ಎಂದು ಅಧಿಕಾರಯುತವಾಗಿ ಹೇಳಬಲ್ಲ ಪಾಂಡಿತ್ಯ ನನಗಿರದಿದ್ದರು, ಇದು ನನ್ನಲ್ಲಿ ಹೊರಳಿದ ವಿಭಿನ್ನ ಭಾವವೊಂದೆಂದು ಹೇಳಲು ಅಡ್ಡಿಯಿಲ್ಲವೆನ್ನಬಹುದು.

00389. ಕಲಿತಾಡು ಕನ್ನಡವ..


00389. ಕಲಿತಾಡು ಕನ್ನಡವ..
_______________________
(published in Suragi 29.10.2015)

ಕನ್ನಡ ಕಲಿ
‘ಕನ್ನಡ’ಕದಲಿ
‘ಕದ’ಲಿದರೆ ಕದ
ನಿಧಿ ಪೆಟ್ಟಿಗೆ ಸದಾ ||

ತೆರೆದಾ ಮನ
ತೆರೆ ಸರಿಸಿ ಘನ
ಬಿಚ್ಚಿದ ಕೊಡೆ ಮಾಯೆ
ಕನ್ನಡದಲದರದೆ ಛಾಯೆ ||

ನಾಲಿಗೆ ಸದಾ
ಎಲುಬಿಲ್ಲದ ಸಿದ್ಧ
ಶುದ್ಧ ಮಾಡುವ ತರ
ನುಡಿ ಕನ್ನಡ ಸ್ವರ ಸರ ||

ಸರಸರ ಸಾರ
ನುಡಿದೆ ಸಾದರ
ಮಾತಾಗುತ ಸದರ
ಮನಸಾಗುವ ಹಗುರ ||

ಕನ್ನಡಿ ಗಂಟು
ಆಗದಂತೆ ನಂಟು
ಸರಿ ಕಲಿತವರದೆಷ್ಟು
ಕವಿ ಕಾವ್ಯ ಬರೆದವರಷ್ಟು ||

ಕನ್ನ ಹಾಕಲಿ
ಕನ್ನಡವ ಬಾಚಲಿ
ಕದ್ದಿದ್ದೆಲ್ಲಾ ಶಾಶ್ವತ
ಸಿರಿವಂತ ಕನ್ನಡ ಸುತ ||

ಕನ್ನಡ ನಗಲಿ
ನಗೆಗಡಲೆ ಸಿಗಲಿ
ಕಡಲೆ ಕಬ್ಬಿಣ ಕರಗಿ
ಮಲ್ಲೆ ಸಂಪಿಗೆ ಸುರಗಿ ||

———————–
ನಾಗೇಶ ಮೈಸೂರು

ಕಲಿತಾಡು,ನಾಗೇಶಮೈಸೂರು,ಕನ್ನಡ,ನವೆಂಬರ್,nagesha,ನಾಗೇಶ,ನಾಡು,ನುಡಿ,ಮೈಸೂರು,nageshamysore,ರಾಜ್ಯೋತ್ಸವ,ಮಾತೆ,ಮೈಸೂರು,

00388. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨


00388. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨
_____________________________

ಮಾನವರೋ ದಾನವರೋ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |
ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ ||

ಸುತ್ತೆಲ್ಲ ನಡೆದಿರುವ ಅಟ್ಟಹಾಸದ ರೂವಾರಿಗಳಾದರೊ ಬೇರಾರೊ ಆಗಿರದೆ ಇದೆ ಮನುಕುಲದ ಸಂತತಿಯ ವಾರಸುದಾರರೆ ಆಗಿರುವ ವಿಷಾದದ ಸಂಗತಿಯನ್ನು ಗಮನಿಸಿದ ವಿಹ್ವಲ ಕವಿಮನ ‘ಅವರೇನು ಮನುಷ್ಯರೋ? ರಾಕ್ಷಸ ಸಂತತಿಯವರೊ? ಎಂದು ರೊಚ್ಚಿಗೇಳುತ್ತದೆ. ಆ ಸಾತ್ವಿಕ ಕೋಪದ ದನಿಯಲ್ಲೆ ಮನಸು ಕೇಳುತ್ತದೆ – ತನಗಾಗಿ ಕೇವಲ ಕಣ್ಣೀರ ರೂಪದ ಬಾಷ್ಪಾಂಜಲಿ ಸಾಕೆನ್ನುವ ಭೂತಾಯಿಯ ಮಡಿಲಿಗೆ ಯಾಕೆ ರಕ್ತಧಾರೆಯನ್ನೆರೆಯುತ್ತುವರು? ಎಂದು. ಹರ್ಷಾತಿರೇಖದ ಆನಂದಬಾಷ್ಪವೇ ಆಗಲಿ, ದುಃಖಾತಿರೇಖದ ಗೋಳಿನ ಕಣ್ಣೀರೆ ಆಗಲಿ – ಎರಡು ಭಾವಾತಿರೇಖಗಳ ಪ್ರದರ್ಶನಕ್ಕೆ ಕೇವಲ ಕಣ್ಣೀರಿನ ಸಂವಹನವೊಂದಿದ್ದರೆ ಸಾಕು, ಆ ತಾಯಿಯನ್ನು ತೃಪ್ತಿಪಡಿಸಲು ಅಥವಾ ಅವಳ ಅರಿವಿಗೆ ನಿಲುಕುವಂತೆ ಅನಾವರಣಗೊಳ್ಳಲು. ಅಂತಹ ನೀರನ್ನು ಮಾತ್ರ ಕೇಳುವ, ಅದನ್ನು ಕುಡಿದು ತಣಿದೆ ಅದರಿಂದಲೆ ವನರಾಜಿಯನ್ನು ಪೋಷಿಸಿ, ಸಲಹಿ ಮತ್ತದನ್ನೆ ಮತ್ತೆ ಫಸಲಾಗಿ ಮರಳಿಸುವ ಉದಾತ್ತ ಧ್ಯೇಯೋದ್ದಾತ್ತ ಜನನಿಯ ಮಡಿಲಿಗೆ , ಹೀಗೆ ಹೊಡೆದಾಟ, ಬಡಿದಾಟಗಳ ಮೂಲಕ ನರರನ್ನೆ ಕತ್ತರಿಸಿ, ರಕ್ತದ ಕೋಡಿ ಹರಿಸಿ ಅವಳಿಗೆ ಬೇಡಿದ್ದರೂ ಅದನ್ನು ಕುಡಿಸುವರಲ್ಲ – ಎಂಬ ವಿಸ್ಮಯ, ನೋವು ಮುಗ್ದ ಕವಿ ಮನದ ಪ್ರಲಾಪವಾಗಿಬಿಡುತ್ತದೆ.

ಮತ್ತೆ ಕೊಂಚ ಒಳಗಿಳಿದು ನೋಡಿದರೆ – ಯಾವುದೆ ಕದನ, ಯುದ್ಧ, ಹೋರಾಟ, ಹೊಡೆದಾಟ, ಬಡಿದಾಟಗಳೆಲ್ಲ ನೇರವಾಗಿಯೊ, ಪರೋಕ್ಷವಾಗಿಯೊ ಈ ಭೂಮಾತೆಯ ಸ್ವಾಧೀನ ಮತ್ತು ಸ್ವಾಮಿತ್ಯಕ್ಕೋಸ್ಕರ, ಮತ್ತವಳಲ್ಲಡಗಿದ ಅಪಾರ ಸಂಪತ್ತಿನ ಅಧಿಪತ್ಯಕ್ಕೋಸ್ಕರ ಎಂಬುದರ ಅರಿವು ಕವಿಯ ದಿಗ್ಭ್ರಮೆ, ನೋವುನ್ನು ಅಧಿಕವಾಗಿಸಿದ್ದು ಕಾಣುತ್ತದೆ. ಅದೇನನ್ನು ಬೇಡದ ಬರಿಯ ಭಾಷ್ಪಾರ್ಪಣೆಗೆ ಎಲ್ಲವನ್ನು ಕೊಡುವ ವಿಶಾಲ, ಉದಾರ ಮನಸಿನ ಮಡಿಯನ್ನೆಲ್ಲ ಪಾಶವೀ ರಕ್ತದಿಂದ ಮೈಲಿಗೆಯಾಗಿಸುತ್ತಾರಲ್ಲ ಎಂಬ ಹಪಹಪಿಕೆಯಲ್ಲಿ. ಆದರೆ ಆ ಹಿತವಚನದ ಮಾತನ್ನು ಕೇಳುವ ಜನರಾದರೂ ಯಾರು? ಯಾವುದಾದರೊಂದು ಕಾರಣದ ನೆಪ ಹಿಡಿದು ಹಗೆಯ ಕತ್ತಿ ಮಸೆಯುತ್ತ, ಅದೆಬ್ಬಿಸಿದ ದ್ವೇಷದ ದಳ್ಳುರಿಯ ಕಿಡಿಯಲ್ಲಿ, ಉಸಿರುಗಟ್ಟಿಸುವ ಆ ಬೆಂಕಿಯ್ಹೊಗೆಯ ಪರಿಸರದಲ್ಲೆ ಪರಸ್ಪರ ಕಾದುತ್ತ ಇಡೀ ಭೂಮಂಡಲವನ್ನೆ ರಣರಂಗವನ್ನಾಗಿಸಿ ಪರಸ್ಪರರನ್ನೆ ತರಿದು ಹಾಕುತ್ತಿರುವರಲ್ಲ? ಇದನ್ನೇನು ವಾಸಿಸುವ ಭೂಮಿಯೆಂದುಕೊಂಡಿದ್ದಾರೊ ಅಥವಾ ಕಟುಕನ ಕಟ್ಟೆಯಲಿ ದಯೆ, ಧರ್ಮ, ದಾಕ್ಷಿಣ್ಯ ತೋರದೆ ಕಡಿಯುವ ಕಸಾಯಿಖಾನೆ ಎಂದು ಭಾವಿಸಿದ್ದಾರೊ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ ಬೇಸತ್ತ ಮಂಕುತಿಮ್ಮನ ಮನ.