00384. ಮಾತೆಯರಾಗಲಿ ಕನ್ನಡ ಮಾತೆ..


00384. ಮಾತೆಯರಾಗಲಿ ಕನ್ನಡ ಮಾತೆ..
________________________________

ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದೆ – ಎಂದಿನಂತೆ ನವೆಂಬರಿನ ಸೆರಗು ಹೊದ್ದು. ಆಡಂಬರ ಆಚರಣೆಗಳ ಸಡಗರ ಸಂಭ್ರಮ ಎಂದಿನಂತೆ ಹಾಯ್ದು ಹೋಗಲಿರುವಾಗಲೆ ಯಾವ ಅಬ್ಬರ ಆಡಂಬರಗಳಿಲ್ಲದೆ ಮಾಡಬಹುದಾದ ಮತ್ತೊಂದು ವಿಷಯ ಮನಸಿಗೆ ಬರುತ್ತಿದೆ. ಅದರಲ್ಲೂ ವಿದೇಶದಲ್ಲಿ ಕನ್ನಡ ಗಂಧವಿಲ್ಲದೆ ಬೆಳೆಯುವ ಮಕ್ಕಳ ವಿಷಯದಲ್ಲಿ ಇದು ತುಂಬಾ ಮುಖ್ಯವಾದದ್ದು. ಅದು ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಮಾಡಬಹುದಾದ ಸುಲಭದ ಕೆಲಸ – ಕನಿಷ್ಠ ಮಾತಾನಾಡಬಲ್ಲ ಆಡು ಕನ್ನಡವನ್ನು ಮಕ್ಕಳಿಗೆ ಹೇಳಿಕೊಡುವುದು, ನಿರಂತರ ಮಾತನಾಡಿಸಿ ಅದು ಅಭ್ಯಾಸವಾಗುವಂತೆ ಮಾಡುವುದು. ತೀರಾ ಕೊಂಡಿ ಕಳಚಿ ಹೋಗದಂತೆ ಮಾಡುವಲ್ಲಿ ಇದು ಅಷ್ಟಿಷ್ಟಾದರೂ ಸಹಾಯಕಾರಿ. ಈ ಯೋಚನೆ ಬಂದಿದ್ದು ಏಕೆಂದರೆ ಮಗರಾಯ ಐಪ್ಯಾಡಿನ ಭಾಷಾಂತರ ನಿಘಂಟಿನ ಆವೃತ್ತಿಯೊಂದನ್ನು ಹಿಡಿದುಕೊಂಡು ಇಂಗ್ಲೀಷಿನಿಂದ ಕನ್ನಡಕ್ಕೆ ಪರಿವರ್ತಿಸಿ ಆ ಕನ್ನಡ ಅಕ್ಷರ ಕೂಡಿಸಿ ಓದಲು ಯತ್ನಿಸುತ್ತಿದ್ದ – ಸ್ವಪ್ರೇರಣೆಯಿಂದ. ಇನ್ನು ಕಾಗುಣಿತಾಕ್ಷರ ಬರದಿದ್ದರೂ ಅವನ ಯತ್ನಕ್ಕೆ ಖುಷಿಯಾಗಿ ನಾವು ಸಹಾಯ ಮಾಡಲೆತ್ನಿಸುತ್ತಿದ್ದಾಗ ಅನಿಸಿತು – ಈ ತರದ ಸಲಕರಣೆಗಳಿಂದ ಸರಿಯಾದ ಮಾರ್ಗದರ್ಶನ ನೀಡಿದರೆ ಅವರೆ ಕಲಿಯುವ ಸಾಧ್ಯತೆಯಿದೆಯೆಂದು. ಅದರ ಬುನಾದಿಯಾಗಿ, ತಳಹದಿಯಾಗಿ ಸ್ವಲ್ಪ ಆ ಭಾಷಾ ಪ್ರೇಮ ಹುಟ್ಟುವ ವಾತಾವರಣ ಸೃಜಿಸಿದರೆ ಸಾಕು. ಅದರ ಮೊದಲ ಹೆಜ್ಜೆಯಾಗಿ ಮನೆಯಲ್ಲಿ ಅಪ್ಪ, ಅಮ್ಮ ತರದ ಸಣ್ಣ ಪದಗಳಿಂದಲೆ ಆರಂಭಿಸಬಹುದು. ಈಗಾಗಲೆ ಎಷ್ಟೊ ಜನ ಇದಕ್ಕು ಹೆಚ್ಚು ಮಾಡುತ್ತಿರಬಹುದು.. ಇನ್ನು ಆರಂಭಿಸದಿದ್ದವರು ಈ ಕನ್ನಡ ರಾಜ್ಯೋತ್ಸವದಿಂದಾದರು ಆರಂಭಿಸಿದರೆ ಕನ್ನಡಕ್ಕೊಂದು ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ, ಮುಂದಿನ ಪೀಳಿಗೆಗೆ ದಾಟಿಸುವ ಯತ್ನದಲ್ಲಿ. ಇದರಲ್ಲಿ ತಂದೆಗಳ ಪಾತ್ರವೂ ಹಿರಿದೆ ಆದರು ಮಾತೆಯರು ಮೊದಲ ಅಡಿಗಲ್ಲು ಹಾಕಿದರೆ ಭಾವನಾತ್ಮಕ ಬಂಧ ಬಲವಾಗಲಿಕ್ಕೆ ರಹದಾರಿ ಕೊಟ್ಟಂತಾಗುತ್ತದೆ. ಕನ್ನಡ ಮಾತಾಡಲೊಲ್ಲದ ಕನ್ನಡ ಮಾತೆಯರೂ ಇರುವುದು ನಿಜವಾದ ಕಾರಣ ಅವರಿಗೊಂದು ವಿಶೇಷ ಮನವಿಯಾಗಿ ಈ ಪುಟ್ಟ ಕವನ – ಕನ್ನಡ ಮಾತೆಯರಾಗಿ ಕನ್ನಡ ಮಾತೆಯನ್ನು ಪೋಷಿಸಲೆಂದು ಆಶಿಸುತ್ತ, ವಿನಂತಿಸಿಕೊಳ್ಳುತ್ತ.

ಕನ್ನಡ ಮಾತೆಯರೇಕೊ..
______________________

ಕನ್ನಡ ಮಾತೆಯರೇಕೊ
ಕನ್ನಡ ಮಾತೆ ಆಡರಲ್ಲ ?
ಮಕ್ಕಳೊಡನೆ ಮಾತಾಟ
ಕನ್ನಡವೆಲ್ಲಿ ಕಾಣೆಯಾಯ್ತ ? ||

ಮಮ್ಮೀ ಡ್ಯಾಡೀ ಮಧುರ
ಕರೆಯಲದೆಷ್ಟೂ ಸದರ
ಅಪ್ಪ ಅವ್ವಾ ಅಮ್ಮಾ ಅಣ್ಣ
ಅನ್ನಬೇಕಿತ್ತಲ್ಲಾ ಉದರ ? ||

ಉಳಿವಿಗಾಗಿ ಹೋರಾಟ
ನಿಜ ಬದುಕೆ ಜೂಜಾಟ
ಜೂಜಿನ ಜೂಟಾಟ ಕುತ್ತೆ
ಕಳುವಾಗದಿಹಳೆ ಮಾತೆ ? ||

ಉಂಡು ತಿಂದು ಲಾಲಿ
ಹಾಡುವಾಗ ಜೋಕಾಲಿ
ಕಂದ ಮಲಗೆಂದು ಹಾಡಿ
ಮಿಡಿದರದೆ ಕನ್ನಡ ದುಡಿ ||

ಟುಸು ಪುಸು ಜಗದಾಚೆ
ಜತೆ ಕೂತ ಆತ್ಮೀಯತೆ
ಬಚ್ಚಿಡದೆ ಬಿಚ್ಚಲಿ ಮಾತೆ
ಕನ್ನಡ ತಾಯಿಗೆ ಘನತೆ ||

– ನಾಗೇಶ ಮೈಸೂರು

ಕನ್ನಡ, ಮಾತೆ, ರಾಜ್ಯೋತ್ಸವ, ನಾಡು, ನುಡಿ, ನವೆಂಬರ್, ನಾಗೇಶ, ಮೈಸೂರು, ನಾಗೇಶಮೈಸೂರು, nagesha, Mysore, nageshamysore

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s