00397. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೯


00397. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೯
___________________________________

ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ |
ಕ್ಷ್ವೇಳವೇನಮೃತವೇಂ ? ಮಂಕುತಿಮ್ಮ ||

ಈ ಪದ್ಯವನ್ನು ಓದಿದಾಗೆಲ್ಲ ಮತ್ತೆ ಮತ್ತೆ ಗಹನದಿಂದ ಲೌಕಿಕ ಸಂವಹನದ ಛಾಯೆ ಎದ್ದು ನಿಲ್ಲುತ್ತದೆ. ಅಲೌಕಿಕ ಚಿಂತನೆಯ ಉಚ್ಛ ಸ್ತರದಿಂದ ಐಹಿಕ ಜೀವನದ ನಶ್ವರತೆಯ ಸೆರಗಿಗೆ ನೇರ ಕೊಂಡಿ ಬಿಗಿಯುವ ಈ ಶೈಲಿ ಅನನ್ಯವೆಂದೆ ಹೇಳಬಹುದು. ನಮ್ಮ ಧಾರ್ಮಿಕ ಪ್ರೇರೇಪಿತ ತತ್ವ, ಸಿದ್ದಾಂತಗಳಲ್ಲಿ ನಂಬಿಕೆಯಿರುವವರಿಗೆ ಸೃಷ್ಟಿಕರ್ತ ಬ್ರಹ್ಮ ಮಣ್ಣಿನಿಂದ ಈ ಮಾನವ ಪ್ರತಿಮೆಗಳನ್ನು ಮಾಡಿ, ಜೀವ ತುಂಬಿ ಈ ಜಗತ್ತಿಗೆ ಬಿಡುತ್ತಾನೆಂಬ ಕಲ್ಪನೆ ಚಿರಪರಿಚಿತ. ಸಾಮಾನ್ಯ ಜನಪದರಲ್ಲಂತು ಅದು ಕಲ್ಪನೆ, ಕಥೆಗು ಮೀರಿದ ಪ್ರಶ್ನಾತೀತ ನಂಬಿಕೆಯ ಸ್ತರದ ವಸ್ತು. ಇಲ್ಲಿ ಮಣ್ಣಿನ ಹೆಂಟೆಯೆನ್ನುವುದು ಅದೇ ಕಲ್ಪನೆಯ ಸಾಕಾರ ರೂಪ. ಅದು ಬ್ರಹ್ಮನ ಕೃತ್ಯವೊ, ವೈಜ್ಞಾನಿಕ ಪ್ರಕ್ರಿಯೆಯೊ ಎನ್ನುವ ಜಿಜ್ಞಾಸೆಯನ್ನೆಲ್ಲ ಬದಿಗಿರಿಸಿ ನೋಡಿದರೆ, ಪ್ರತಿಯೊಂದು ಜೀವಿ ಅಥವ ವ್ಯಕ್ತಿಯ (ಆಳು) ಅಸ್ತಿತ್ವವನ್ನು ನಿರೂಪಿಸುವ ಸತ್ವವೆಂದರೆ ಅದರ ಉಸಿರಾಟದ ಪ್ರಕ್ರಿಯೆ. ಅದೇ ಜೀವ ಜಗಕ್ಕು , ನಿರ್ಜೀವ ಜಗಕ್ಕೂ ನಡುವೆ ಇರುವ ವ್ಯತ್ಯಾಸ. ಉಸಿರಾಟ ನಿಂತರೆ ಗಾಳಿಯಿಲ್ಲದ ಜೀವ ಹೊತ್ತಿದ್ದ ದೇಹ ಆ ನಿರ್ಜೀವ ವಸ್ತುವಿಗೆ ಸಮ, ಬರಿಯ ಮಣ್ಣು ಹೆಂಟೆಯಿದ್ದ ಹಾಗೆ. ಹೀಗಾಗಿ ಬರಿಯ ಮಣ್ಣಿನ ಹೆಂಟೆಯಂತಹ ದೇಹದೊಳಕ್ಕೆ ಗಾಳಿ (ಜೀವಾಮ್ಲ, ಪ್ರಾಣವಾಯು) ಹೊಕ್ಕು ಮನೆ ಮಾಡಿಕೊಂಡರಷ್ಟೆ ಅದು ಜೀವವೆನಿಸಿಕೊಳ್ಳುವುದು. ಅದರ ಸೂಚನೆಯಾಗಿಯೆ ಹೊರಳಾಟದ ರೂಪದಲ್ಲಿ ಒಳಗು, ಹೊರಗೆಲ್ಲ ಚಲಿಸುತ್ತ ಜೀವಂತವಾಗಿಡುತ್ತದೆ ಇಡೀ ಮಣ್ಣಿನ ಹೆಂಟೆಯನ್ನು. ಇದು ಮೊದಲ ಸಾಲಲ್ಲಿ ಬಿಂಬಿತವಾಗುವ ಭಾವ.

ಹಾಗೆಂದು, ಬರಿಯ ಗಾಳಿ ಹೊರಳಾಡಿಬಿಟ್ಟಿತೆಂದು ಅದನ್ನು ಜೈವಿಕ ಅಸ್ತಿತ್ವದ ಸಾರ್ಥಕತೆಯೆಂದು ಹೇಳಿಬಿಡಲಾಗುವುದೆ? ಆಗದು. ಬರಿಯ ಗಾಳಿ ತುಂಬಿದ ಮಾತ್ರಕ್ಕೆ ಮಾನವ ಜನ್ಮಕ್ಕೆ ಸಂಪೂರ್ಣ, ಪರಿಪೂರ್ಣ ಸ್ಥಿತಿ ಬಂದಂತಾಗಲಿಲ್ಲ. ಜೀವನದ ಸಾರ್ಥಕತೆ ಅಡಗಿರುವುದು ಬರಿಯ ಗಾಳಿ ತುಂಬಿದ ಭೌತಿಕ ಅಸ್ತಿತ್ವ ಮಾತ್ರದಲ್ಲಲ್ಲ. ಅದಕ್ಕೊಂದು ಬೇರೆಯದೆ ಆದ ಘನ ಉದ್ದೇಶವಿದೆ. ಯಾವುದೋ ಪುರುಷಾರ್ಥದ ಬೆನ್ನು ಹತ್ತಿ ಹೋಗಬೇಕಾದ ಕರ್ತವ್ಯ, ಬಂಧನ, ಅನಿವಾರ್ಯತೆಗಳಿವೆ. ಅದಾವುದು ಇರದ ಮೋಹ, ಲಾಲಸೆಗಳಿಂದ ಗಾಳಿ ತುಂಬಿದ ಆಳಂತೆ ಮಾತ್ರ ಬದುಕಿದರೆ ಅದು ಮಣ್ಣು ಹೆಂಟೆಗೆ ಸಮವೆ ಹೊರತು, ನಿಜವಾದ ಅರ್ಥದಲ್ಲಿ ಆಳೆಂದು ಹೇಳಲಾಗುವುದಿಲ್ಲ. ಇದ್ದೂ ಇರದ ಅಸ್ತಿತ್ವದ ಸಮನಾಗಿಬಿಡುತ್ತದೆಯೆನ್ನುವ ಅರ್ಥ ಎರಡನೆ ಸಾಲಲ್ಲಿ ಹೊರಡುತ್ತದೆ.

ಇದರ ಜತೆಗೆ ಎರಡನೆ ಸಾಲಿನಲ್ಲಿ ಬಳಸಿರುವ ಹೆಂಟೆ ಪದಕ್ಕೆ ಇರುವ ಹೆಣ್ಣುಕೋಳಿ ಎನ್ನುವ ಅರ್ಥವನ್ನು ಆರೋಪಿಸಿದರೆ ಅದು ಅಧೀರತೆ, ಪುಕ್ಕಲುತನಗಳ ಸೂಚ್ಯ ಇಂಗಿತವೂ ಆಗುತ್ತದೆ. ಗಾಳಿ ತುಂಬಿದ ಮಣ್ಣುಹೆಂಟೆ ತನ್ನ ಪುರುಷಾರ್ಥವನ್ನರಿತು ಸರಿಯಾದ ‘ಆಳಿನ’ ಸ್ವರೂಪವನ್ನು ಅವತರಿಸಿಕೊಳ್ಳದಿದ್ದರೆ ಅದು ಪುಕ್ಕಲುತನ, ಹೇಡಿತನದ ಸಂಕೇತವೂ ಆಗುತ್ತದೆ, ಬರಿಯ ಹೆಂಟೆಯ ಬದುಕಿನಂತಾಗುತ್ತದೆ. ಮುಂಬರುವ ಕಷ್ಟಕಾರ್ಪಣ್ಯಗಳನ್ನೆಲ್ಲ ಎದುರಿಸುವ ಧೈರ್ಯ, ಸ್ಥೈರ್ಯವಿಲ್ಲದೆ ಸೋತು ಸೊರಗುವ ಅಸಹಾಯಕತೆ, ಜವಾಬ್ದಾರಿಯಿಂದ ಓಡಿಹೋಗುವ ಸೋಗಲಾಡಿತನ ಬದುಕನ್ನು ನಿಯಂತ್ರಿಸತೊಡಗುತ್ತದೆ. ಅಂತಹ ಬದುಕು ಈ ಜೀವನದ ನಿಜವಾದ ಉದ್ದೇಶವಲ್ಲ ಎಂಬ ದೃಷ್ಟಿಯಲ್ಲು ಅರ್ಥೈಸಬಹುದು.

ಹೀಗೆ ಗಹನ ಸ್ತರದಲ್ಲಿ ಜೀವ ಜೀವಾತ್ಮಗಳ ಜತೆಗಿನ ಜೀವಾನಿಲದ ಅನೋನ್ಯತೆಯನ್ನು, ಅದಕ್ಕೆ ಆರೋಪಿಸಲ್ಪಡುವ ಬರಿಯ ಲೌಕಿಕಕ್ಕೆ, ಐಹಿಕಕ್ಕೆ ಮೀರಿದ ಯಾವುದೊ ಗುರುತರ ಹೊಣೆಗಾರಿಕೆಯನ್ನು ತೋರಿಸುತ್ತ ವ್ಯಕ್ತಿ, ವ್ಯಕ್ತಿತ್ವದ ಸಾರ್ಥಕತೆಯತ್ತ ಸೆಳೆಯುವ ಪ್ರಯತ್ನ ಮಾಡುವ ಮೊದಲೆರಡು ಸಾಲುಗಳಿಗಿಂತ ವಿಭಿನ್ನ ಸ್ತರದ ಅನುಭವವಾಗುವುದು ಕೊನೆಯೆರಡು ಸಾಲಿನಲ್ಲಿ. ‘ಗಾಳಿ ತುಂಬಿದ ಆಳಾಗಿ’ ಸೂಕ್ತ ಸಾರ್ಥಕ ಜೀವನ ನಡೆಸಬೇಕು ಅಂತೇನೊ ಹೇಳಿದ್ದಾಯ್ತು. ಆದರೆ ಅದೇನು ಸುಲಭದ ಕಾರ್ಯವೆ ? ಹೂವೆತ್ತಿದಂತೆ ನಡೆದುಬಿಡುವ ಕೆಲಸವೆ? ಆ ಕುರಿತ ವಿಶ್ಲೇಷಣೆ ಮುಂದಿನ ಸಾಲುಗಳ ಸಾರ. ಬದುಕೆನ್ನುವುದು ಹೂವಿನ ಮಂಚವಲ್ಲ. ನಡೆಯುವ ಹಾದಿಯಲ್ಲಿ ನೂರೆಂಟು ಅಡ್ಡಿ, ಆತಂಕಗಳು, ತಂಟೆ, ತಕರಾರುಗಳು ಕಾಡುತ್ತವೆ. ಒಳ ತುಂಬಿದ ಗಾಳಿಯನ್ನೆ ಕಂಗೆಡಿಸುವ ರೀತಿಯ ಧೂಳಿನ ಸುಳಿಗಳು ಎದುರಾಗುತ್ತವೆ. ನೀರಿನಲ್ಲಿ ತನ್ನನ್ನೆ ಸುತ್ತುತ್ತ ಸಿಕ್ಕಿದ್ದನ್ನೆಲ್ಲ ಕಬಳಿಸಿ ಸುರುಳಿ ಸುತ್ತಿಸಿ ಎತ್ತೆಸೆಯುವ ಸುಳಿಗಳು ಎದುರಾಗುತ್ತವೆ. ಅದನ್ನೆಲ್ಲ ಎದುರಿಸಿ ಬದುಕುವ, ಮುನ್ನುಗ್ಗುವ ಧೈರ್ಯ, ಅನುಭವ, ಛಾತಿ, ಪಕ್ವತೆ – ಎಲ್ಲವೂ ಇರಬೇಕು. ಆದರೆ ಈ ಪರಿಪಕ್ವತೆಯೆನ್ನುವುದು ಮಣ್ಣುಹೆಂಟೆಗೆ ಹುಟ್ಟಿನಿಂದ ಬಂದ ಸರಕಲ್ಲವಲ್ಲ ? ಅದನ್ನು ಹಂತಹಂತವಾಗಿ ಕಲಿಸಿಕೊಡುವುದೆ ಜೀವನಾನುಭವ. ಅದಿರದ ಜೀವಿಯ ತನುಮನಗಳು ಮರದ ಹಾಗೆ. ಹೊರಗಿನ ತೊಗಟೆ ಒಣಗಿ ಪಕ್ವವಿದ್ದಂತೆ ಕಂಡರೂ, ಆ ಕವಚದಡಿಯಲ್ಲಿ ಒಳಗೆಲ್ಲ ಹಸಿಹಸಿ. ಹಸಿ ಮರಕ್ಕೆ ಬೆಂಕಿ ಹಚ್ಚಿದರೆ ಒಣಪುಳ್ಳೆಯ ಹಾಗೆ ಚಟಪಟನೆ ಉರಿಯುವುದು ಸಾಧ್ಯವೆ? ಆ ಅಪಕ್ವತೆಯ ‘ಹಸಿತನ’ ಬೆಂಕಿಯಾಗುರಿಯಬೇಕಾದರೆ ನೋವಿನ ಅನುಭವ ಅನುಭವಿಸಲೇಬೇಕು – ಹೊಗೆಯಾಗುವ ರೂಪದಲ್ಲಿ. ಆ ಹೊಗೆ ಸ್ವಯಂ ತನ್ನನ್ನು ಕಾಡುವಷ್ಟೆ ಸಹಜವಾಗಿ ಇತರರನ್ನು ಕಾಡುತ್ತದೆನ್ನುವುದು ಮತ್ತೊಂದು ವಿಪರ್ಯಾಸ. ಆ ಪ್ರಕ್ರಿಯೆಯಲ್ಲೆ ನೋವಿನ ಮೂಲಕ ಪಕ್ವತೆಯಾಗರಳುವ ರೂಪಾಂತರ ಸಹ. ಇಡಿ ಬದುಕಿನ ಪೂರ್ತಿ ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ – ಸುಖದುಃಖಗಳೆಂಬ ನಿರಂತರ ತಾಡನಗಳೊಡನೆ ಸೆಣೆಸುತ್ತ. ನೈಜ ಸ್ಥಿತಿಯಿದಾಗಿರುವಾಗ ವಿಷವಾದರೇನು, ಅಮೃತವಾದರೇನು? ಸಿಹಿಯಾದರೇನು, ಕಹಿಯಾದರೇನು? – ಎಂದು ಎಲ್ಲವನ್ನು ಒಂದೆ ರೀತಿಯಲ್ಲಿ ಸ್ವೀಕರಿಸುತ್ತ, ಪ್ರತಿಯೊಂದನ್ನು ಪರಿಪಕ್ವತೆಯ ಹಾದಿಗೊದಗಿದ ಪೂರಕ ಸರಕೆಂದು ಅನುಭಾವಿಸುತ್ತ ಬದುಕಿನ ಸಾರ್ಥಕತೆಯತ್ತ ಹೆಜ್ಜೆಯಿಡಬೇಕು – ಬರಿಯ ಮಣ್ಣಿನ ಹೆಂಟೆಯಾಗಿಯೆ ಉಳಿದುಬಿಡದೆ, ಎನ್ನುತ್ತಾನೆ ಮಂಕುತಿಮ್ಮ.

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s