00398. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦


00398. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦
___________________________________

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು ? |
ಚಂಡ ಚತುರೋಪಾಯದಿಂದಲೇನಹುದು ? ||
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು |
ಅಂಡಲೆತವಿದಕೇನೊ ? – ಮಂಕುತಿಮ್ಮ || ೦೨೦ ||

ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ದಾಸರು ಎಂದೊ ಹೇಳಿಬಿಟ್ಟಿದ್ದಾರೆ. ಅದರೊಂದು ಮುಖವನ್ನು ಈ ಪದ್ಯದ ಸಾರವೂ ಅನುರಣಿಸುತ್ತದೆ ಮೂಢನಂಬಿಕೆಗಳ ಹಿಂದೆ ನಡೆವ ಜಗವನ್ನು ಛೇಡಿಸುವ ದನಿಯಲ್ಲಿ. ಮಾನವನ ಆಸೆ, ಆಕಾಂಕ್ಷೆಗಳಿಗೆ ಕೊನೆ ಮೊದಲಿಲ್ಲದ ಕಾರಣ ಏನಾದರೊಂದು ಅಹವಾಲು ಹಿಡಿದು ಅದರ ಪೂರೈಕೆಗೆ ಯಾರದೋ ದುಂಬಾಲು ಬೀಳುವ ಪ್ರವೃತ್ತಿ ಸಹಜವಾಗಿ ಕಾಣುವಂತದ್ದು. ತನ್ನ ಬಂಧು, ಬಳಗ, ನೆಂಟರಿಷ್ಟರ ಮೊರೆಹೊಕ್ಕೊ, ಗೊತ್ತಿರುವ, ಗೊತ್ತಿರದಿರುವೆಲ್ಲರ ಕೈ, ಕಾಲು ಹಿಡಿದೊ ತಮ್ಮ ಬಯಕೆ ಪೂರೈಸಿಕೊಳ್ಳುವುದು ಅದರಲ್ಲೆಲ್ಲ ಪ್ರಮುಖವಾಗಿ ಕಾಣುವ ವಿಧಾನವಾದರೂ, ಅದನ್ನು ಮೀರಿದ ಮುನ್ನುಡಿಯಾಗಿ ಕಂಡ, ಕಂಡ ದೇವರಿಗೆ ಕೈ ಜೋಡಿಸಿ, ಹರಕೆ ಹೊತ್ತು, ಪೂಜೆ ಪುನಸ್ಕಾರದ ಆಮಿಷಗಳನ್ನೊಡ್ಡಿ ತಮ್ಮ ಕಾಮನೆಗಳನ್ನು ಪೂರೈಸುವಂತೆ ಬೇಡಿಕೊಳ್ಳುವುದು ಸಾಧಾರಣ ಪ್ರತಿಯೊಬ್ಬರಲ್ಲಿ ಕಾಣಬಹುದಾದ ಸಂಗತಿ.

ಆ ಆಸೆ, ಕಾಮನೆ, ಕಾರ್ಯಸಾಧನೆಗಳ ತೀವ್ರತೆ ಎಷ್ಟಿರುತ್ತದೆಂದರೆ, ಅದಕ್ಕಾಗಿ ಮಾನವ ಎಂತಹ ಚಂಡ-ಚತುರೋಪಾಯಗಳನ್ನು ಮಾಡಲೂ ಸಿದ್ಧ. ಸಾಮ, ದಾನ, ಬೇಧ, ದಂಡಾದಿ ಚತುರೋಪಾಯಗಳನ್ನು ಬಳಸಿ ಯಾವ ಹುನ್ನಾರವನ್ನು ಮಾಡಿಯಾದರೂ ಸರಿ, ತಾನಂದುಕೊಂಡಿದ್ದನ್ನು ಸಾಧಿಸುವ, ತನ್ನ ಬಯಕೆಯನ್ನು ಪೂರೈಸಿಕೊಳ್ಳುವ, ಯಾವ ನೈತಿಕಾನೈತಿಕ ಮಟ್ಟಕ್ಕಾದರೂ ಇಳಿಯುವ ಮಾನವ ಇದನ್ನೆಲ್ಲಾ ನಿಜಕ್ಕು ಮಾಡುವ ಅಗತ್ಯವಿದೆಯೆ ? ಎಂದು ಕೇಳುತ್ತಾನೆ ಮಂಕುತಿಮ್ಮ. ಎಷ್ಟೆ ಗಳಿಸಲಿ, ಏನೇ ಉಳಿಸಲಿ, ಏನೇ ವೈಭೋಗದಿಂದ ಮೆರೆದಾಡಲಿ ಪ್ರತಿಯೊಬ್ಬನಿಗು ನಿಜಕ್ಕೂ ಬೇಕಾಗಿರುವುದು ಒಂದಷ್ಟು ಹಿಡಿಯನ್ನ (ತಂಡುಲ) ಮತ್ತು ಮಾನ ಮುಚ್ಚುವ ಗೇಣುದ್ದದ ಬಟ್ಟೆ ಮಾತ್ರ. ಆ ಕನಿಷ್ಠದಗತ್ಯದ ಹೊರತಾಗಿ ಮಿಕ್ಕೆಲ್ಲವು ಬರಿಯ ತೋರಿಕೆಯ ವೈಭವವೆ ಹೊರತು ಮತ್ತೇನು ಇಲ್ಲ. ಇಂತಿರುವಾಗ, ಅಷ್ಟೆಲ್ಲಾ ಹುನ್ನಾರ, ಸಂಚು ನಡೆಸುತ್ತ ಅಂಡಲೆಯುವ ಪಾಡಾದರು ಏಕೆ ಬೇಕು ? ಎಂದು ಪ್ರಶ್ನಿಸುತ್ತ ಸರಳ ಜೀವನ ಸತ್ಯವನ್ನು ಬಿಚ್ಚಿಡುತ್ತಾನೆ. ಯಾವಾಗ ಆ ದೊಡ್ಡ ಲಾಲಸೆಗಳಿರದೊ ಆಗ ದೇವರಲ್ಲಿ ಬೇಡುವುದೂ ಕೂಡ ಐಹಿಕದ, ಲೌಕಿಕ ಸೌಖ್ಯದ ಬದಲು ಅಲೌಕಿಕದ, ವ್ಯಕ್ತಿ ವಿಕಸನದ ಸಾತ್ವಿಕ ಲಾಲಸೆಯಾಗಿಬಿಡುತ್ತದೆ. ಅದರತ್ತ ಚಿಂತಿಸುವಂತೆ ಪ್ರೇರೇಪಿಸುತ್ತದೆ, ಈ ಪದ್ಯದ ಸಾಲುಗಳು.