00403. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪


00403. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪
___________________________________

ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ ? |
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? |
ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ || 24 ||

ಸುರರ ಜತೆಗಿನ ನರರ ಬಂಧವನ್ನು ಬಿಂಬಿಸುತಲೆ ಅದರಲ್ಲಿರುವ ತಾರತಮ್ಯವನ್ನು ಟೀಕಿಸುವ ಹುನ್ನಾರ ಈ ಪದ್ಯದ್ದು. ನರ ಮಾನವರಿಗೆ ದೇವರೆಂದರೆ ಭಯ ಭಕ್ತಿ ಉಂಟು – ಅವರ ಶಕ್ತಿ ಮತ್ತು ಅಗಾಧ ಸಾಮರ್ಥ್ಯಗಳು ತಮ್ಮನ್ನು ಬಗ್ಗುಬಡಿಯಬಲ್ಲವೆಂಬ ಅರಿವಿನಿಂದ; ಅಷ್ಟೆ ಆಸೆ, ಆಸ್ಥೆ, ಪ್ರೀತಿಯೂ ಉಂಟು – ಅದೇ ಅಗಾಧ ಶಕ್ತಿ, ಸಾಮರ್ಥ್ಯಗಳು ವರದ ರೂಪದಲ್ಲಿ ಪ್ರಸನ್ನವಾಗಿ ಪ್ರಕಟವಾದರೆ ಬದುಕು ಪಾವನವಾಗುವುದಲ್ಲ – ಎಂಬ ಕಾಮನೆಯಲ್ಲಿ. ಒಂದೆಡೆ ಬಯಕೆಗಳನ್ನು ತೀರಿಸಬಲ್ಲ ಮತ್ತು ಇನ್ನೊಂದೆಡೆ ಕಷ್ಟ ಕಾರ್ಪಣ್ಯವಿತ್ತು ಶಿಕ್ಷಿಸಬಲ್ಲ ಶಕ್ತಿಗಳೆರಡು ಇರುವುದರಿಂದ ದೇವತೆಗಳಿಗೆ ಕೊಂಚ ಹೆಚ್ಚೆ ಹಮ್ಮು. ಅವೆರಡರ ಬಲ ಸಾಮರ್ಥ್ಯಗಳೆ ಅವರ ತಲೆಗೇರಿಕೊಂಡು, ಅವರನ್ನು ಆಡಿಸುವ ಶಕ್ತಿಗಳಾಗಿಬಿಡುತ್ತವೆ – ಅವೇ ಅದರ ತಾಯ್ತಂದೆಗಳೊ ? ಎನ್ನುವಂತೆ. ನರರ ಅಸಹಾಯಕತೆ ಹೆಚ್ಚಿದಷ್ಟು, ಅವರ ಭಯ, ಭೀತಿ ಇನ್ನಷ್ಟು ಹೆಚ್ಚಿ ಅವರೆಲ್ಲ ಒಕ್ಕೊರಲಿನಿಂದ ಕಾಪಾಡೆಂದು ಮೊರೆಯಿಡುತ್ತಿದ್ದರೆ, ಹಾಗೆ ಕಾಪಾಡಬಲ್ಲ ದೇವತೆಗಳು ನೇರ ಬಂದು ಸಮಯಕ್ಕೊದಗುವರೆ ? ಇಲ್ಲವೆ ಇಲ್ಲ. ಬದಲಿಗೆ ಇದನ್ನೆ ಆಟವಾಗಿಸಿಕೊಂಡು, ತಮ್ಮಲ್ಲಿರುವ ಬಲ, ಶಕ್ತಿಗಳ ಪರೀಕ್ಷೆಗೆ ಇದನ್ನೆ ಸದಾವಕಾಶವಾಗಿ ಬಳಸಿಕೊಳ್ಳುತ್ತ ಅವನ್ನೆಲ್ಲ ದುರ್ಬಲರ ಮೇಲೆ ಪ್ರಯೋಗಿಸಿ ಆಟವಾಡಿಸುತ್ತಾರೆ.

ಕಷ್ಟಗಳ ಪರಂಪರೆಯಲ್ಲಿ ನಲುಗುವ ಮಂದಿ ಅದನ್ನು ಕರ್ಮವೆಂದೊ, ದೇವರೊಡ್ಡಿದ ಪರೀಕ್ಷೆಯೆಂದೊ ಮಾತಾಡದೆ ಅನುಭವಿಸಿಕೊಂಡು ಹೋಗುತ್ತಿದ್ದರೂ, ಬಿಡದೆ ಆ ದೇವರ ಧ್ಯಾನ, ಭಕ್ತಿಯ ಪೂಜೆಗಳನ್ನು ಮುಂದುವರೆಸಿಕೊಂಡೆ ಹೋಗುತ್ತಾರೆ, ಮತ್ತಷ್ಟು ತೊಡಕಿಗೆ ಸಿಗದಿದ್ದರೆ ಸಾಕೆನ್ನುವ ಆಸೆಯಲ್ಲಿ. ದೇವತೆಗಳನ್ನು ಧರ್ಮಾಧಿಕಾರಿಗಳೆನ್ನುತ್ತಾರೆ, ಅವರು ಜನರ ಕಷ್ಟನಷ್ಟದ ತುಲನೆ ಮಾಡಿ ಎಲ್ಲವನ್ನು ಸುಗಮವಾಗಿರಿಸಬೇಕು. ಆದರೆ ಅವರೆ ಗೋಳುಹಾಕಿಕೊಳ್ಳುತ್ತ, ಬಗೆಬಗೆಯ ಪರೀಕ್ಷೆಗೊಡ್ಡಿ ಕಾಡಿದರೆ ಅಲ್ಲಿ ಧರ್ಮವಾದರೂ ಎಲ್ಲಿರುತ್ತದೆ? ಸಮಾನ ಬಲದವರಲ್ಲದ ಅಶಕ್ತ ಮಾನವರ ಮೇಲಿನ ಈ ಶೋಧನೆ ತರವೆ? ಎನ್ನುವ ಜಿಜ್ಞಾಸೆ ಮಾಡುತ್ತಲೆ ಆ ಸುರ ಬಳಗದ ನೈತಿಕ ಧರ್ಮವನ್ನು ಪ್ರಶ್ನಿಸುತ್ತಾನೆ – ಮಂಕುತಿಮ್ಮ.

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s