00404. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೫


00404. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೫
___________________________________

ಜೀವಗತಿಗೊಂದು ರೇಖಾಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? |
ಆವುದೀ ಜಗಕಾದಿ? – ಮಂಕುತಿಮ್ಮ || 25 ||

ಜೀವನಕ್ಕೊಂದು ಗುರಿಯಿರಿರಬೇಕು, ಗಮ್ಯವಿರಬೇಕು ಅದೇ ಜೀವನೋತ್ಸಾಹದ ಸ್ಪೂರ್ತಿಯ ಗುಟುಕು ಎನ್ನುತ್ತಾರೆ. ಆದರೆ ಜೀವನ ಹೀಗೆ ಯಾವುದೊ ದಿಕ್ಕು, ದೆಸೆ ಹಿಡಿದು ಹೊರಟರು ಅದನ್ನು ಸರಿಯಾದ ಹಾದಿಯಲ್ಲಿ ನಿರ್ದೇಶಿಸುತ್ತ, ನಡೆಸಲು ಒಂದು ಮಾರ್ಗದರ್ಶಿ ಸೂತ್ರವಿರಬೇಕು. ನೀರಿನಲ್ಲಿ ದೋಣಿಯನ್ನೊ, ಹಡಗನ್ನೊ ನಡೆಸುವ ನಾವಿಕನಿಗೆ ಹೇಗೆ ಹಾದಿಯ ಸುಳಿವನ್ನು ಭೂಪಠವೊಂದು ಒದಗಿಸಬಲ್ಲದೊ, ಹೇಗೆ ಸೂಜಿಕಾಂತವೊಂದು (ಮ್ಯಾಗ್ನೆಟಿಕ್ ಕಂಪಾಸ್) ತನ್ನ ಸದಾ ಉತ್ತರ – ದಕ್ಷಿಣಾಭಿಮುಖವಾಗಿ ನಿಲ್ಲುವ ಮುಖೇನ ನಾವಿಕ ನಡೆದ ದಿಕ್ಕನ್ನು ನಿಖರವಾಗಿ ತಿಳಿಸುವುದು ಮಾತ್ರವಲ್ಲದೆ, ಯಾನದಲ್ಲಿ ಕಳೆದ ದಿನಗಳೆಷ್ಟು, ಉಳಿದ ದಿನಗಳೆಷ್ಟು ಎಂದೆಲ್ಲಾ ವಿವರವೀಯುತ್ತ ಅವನ ಗಮ್ಯದ ಪಯಣಕ್ಕೆ ನಿರಂತರವಾಗಿ ಸಹಾಯ ಮಾಡುತ್ತಿರುತ್ತದೆ. ನಮ್ಮ ಜೀವನದ ನಿರಂತರ ಚಲನೆಯ ನಾವೆಗು ಅಂತದ್ದೊಂದು ದಿಕ್ಕು ದೆಸೆ ತೋರಿ ಗುರಿಯತ್ತ ಒಯ್ಯುವ ಸಲಕರಣೆ, ಉಪಕರಣವಿರಬೇಕೆನ್ನುವುದು ಬಹಶ ಸರಳ, ಸಾಧಾರಣ ನಿರೀಕ್ಷೆ.

ಆದರೆ ನಾವಿರುವ ಜಗ ನಿಯಮದಲ್ಲಿ ಹಾಗೆ ನಡೆಯುವುದಿಲ್ಲ. ಇಲ್ಲಿ ಆದಿಯೂ ಕಾಣುವುದಿಲ್ಲ , ಅಂತ್ಯವೂ ಗೊತ್ತಾಗುವುದಿಲ್ಲ. ಜೀವನದಲ್ಲಿ ಮುನ್ನುಗ್ಗುತ್ತ ಇರಬೇಕೆನ್ನುವುದೇನೊ ಸತ್ಯವಾದರೂ, ಅಂತಿಮವಾಗಿ ಎಲ್ಲಿಗೆ ಮತ್ತು ಹೇಗೊ ಹೋಗಬೇಕೆಂಬುದನ್ನು ನಿಖರವಾಗಿ ತಿಳಿಸದೆ ಎಲ್ಲಿಗೆಂದು ಹೋಗುವುದು? ಅಂತಿಮವಿರಲಿ, ಆರಂಭಿಸುವುದೆಲ್ಲಿಂದ ಎನ್ನುವ ಶುರುವಿನ ಗೆರೆಯನ್ನು ತೋರುವುದಿಲ್ಲವಲ್ಲ ಈ ಜೀವನದರ್ಶನ ? ಅಸ್ಪಷ್ಟವಾಗಿಯಾದರೂ ಆ ಆದಿ ಅಂತಿಮ ತುದಿಗಳ ಅರಿವಿಲ್ಲದ ಸನ್ನಿವೇಶದಲ್ಲಿ, ಅವನ್ನು ಊಹಿಸಿ, ಪರಿಭಾವಿಸಿಕೊಂಡು ಮುನ್ನಡೆಯಲಾದರೂ ಹೇಗೆ? ಆ ಪ್ರಶ್ನೆ ಕೇಳೋಣವೆಂದರೆ ಯಾರನ್ನು ಕೇಳುವುದು? ಸೃಷ್ಟಿಕರ್ತ ಕೈಗೆ ಸಿಗುವಳತೆಯಲ್ಲಿ ಕಾಣುತ್ತಿಲ್ಲವಲ್ಲ? ಬಹುಶಃ ಅವನನ್ನು ಕಾಣಬೇಕೆಂದರೆ, ಅವನಿರುವ ಜಾಗ ಅಂದರೆ, ಅವನು ಮೊಟ್ಟಮೊದಲು ತನ್ನ ಕಾಯಕ ಆರಂಭಿಸಿದ ಆದಿಯ ಆದಿಯಲೆಲ್ಲೊ ಇರಬಹುದೋ ಏನೊ? ಅಲ್ಲಿಗೆ ಹೋಗಿ ಸಮಸ್ಯೆ, ಪ್ರಶ್ನೆಗಳಿಗೆಲ್ಲ ಪರಿಹಾರ ಕೇಳಿ ಬರುವಾ ಎಂದರೆ ಆ ಜಗದ ಆದಿ, ಜಗದ ಮೂಲ ಯಾವುದು ಎನ್ನುವುದು ಗೊತ್ತಿಲ್ಲವೆ? ಯಾರನ್ನು ಕೇಳುವಂತಿಲ್ಲ, ಆರಂಭ ಅಂತ್ಯ ಗೊತ್ತಿಲ್ಲ, ಯಾವುದೇ ಉಪಕರಣಗಳ ಸಹಕಾರವೂ ಇಲ್ಲ – ಆದರೂ ನೀಸಿ ನಿಭಾಯಿಸು ಎಂದರೆ ಹೇಗೆ ಮಾಡುವುದೆಂಬ ಪ್ರಶ್ನೆ ಮಂಕುತಿಮ್ಮನಲ್ಲಿ ಅನುರಣಿಸಿದೆ.

ಇಲ್ಲಿ ‘ಮೊದಲು ಕೊನೆ’ ಎನ್ನುವುದು ಹುಟ್ಟು ಸಾವಿನ ಪ್ರತೀಕವೂ ಹೌದು. ಅವುಗಳ ಅನಿಶ್ಚಿತತೆ, ಅಸ್ಪಷ್ಟತೆಗಳ ನಡುವೆಯೂ ಬರಿ ಊಹೆ, ಪರಿಭಾವನೆಯಲ್ಲಿ ಬದುಕು ನಡೆಸುವುದೆಂತು? ಎನ್ನುವುದು ಮುಖ್ಯ ಪ್ರಶ್ನೆಯಾಗಿಬಿಡುತ್ತದೆ. ಅಂತೆಯೆ ‘ಆವುದೀ ಜಗಕಾದಿ?’ ಎನ್ನುವುದು ಸೃಷ್ಟಿಯ ಒಟ್ಟಾರೆ ಬುಡದ ಮೂಲಕ್ಕೆ ಕೈ ಹಾಕುವ ಯತ್ನ – ಆ ಗುಟ್ಟರಿವಾದರೆ ಜೀವನದ ಗುಟ್ಟನ್ನು ಬಿಡಿಸಬಹುದೆನ್ನುವ ಆಶಯ ಅದರಲ್ಲಡಕವಾಗಿರುವ ಭಾವ.

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s