00410. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೯


00410. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೯
___________________________________

ಎರುಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು – ಮಂಕುತಿಮ್ಮ || ೨೯ ||

ಈ ಪದ್ಯದಲ್ಲಂತು ನಮ್ಮ ವೇದಾಂತಿಕ ತತ್ವಶಾಸ್ತ್ರದ ನಂಬಿಕೆಯ ಸಾರವೆ, ಹಿಂಡಿ ಸೋಸಿದ ರಸದಂತೆ ಕಾಣಿಸಿಕೊಂಡಿದೆ. ಇಲ್ಲಿ ಗೊತ್ತಿರಬೇಕಾದ ಮುಖ್ಯ ಹಿನ್ನಲೆಯೆಂದರೆ ನಮ್ಮ ದೇವರುಗಳ ಕುರಿತಾದ ನಂಬಿಕೆಯ ಹಿಂದಿರುವ ಸ್ಥೂಲ, ಮೂಲಾಧಾರ ಕಲ್ಪನೆ.

ನಮಗೆ ತಿಳಿದಿರುವಂತೆ, ನಾವು ಪೂಜಿಸುವ ದೇವರುಗಳು ನೂರಾರು, ಸಾವಿರಾರು. ಮುಕ್ಕೋಟಿಗು ಮಿಗಿಲಾದ ದೇವತೆಗಳಿದ್ದಾರೆಂದೆನ್ನುತ್ತದೆ ನಮ್ಮ ಪುರಾಣಗಳ ಕಡತ. ಆದರೆ ಅದು ಬಾಹ್ಯದ ಮೇಲ್ಪದರದ ಧ್ಯಾನ. ತುಸು ಆಳವಾದ ಅಧ್ಯಯನಕ್ಕೆ ಹೊಕ್ಕರೆ ಅನಾವರಣವಾಗುವ ಕಲ್ಪನೆಯೆಂದರೆ ಇರುವುದೊಂದೆ ದೈವ – ಅದೇ ಪರಬ್ರಹ್ಮ. ಮಿಕ್ಕೆಲ್ಲವೂ ಆ ಮೂಲ ಸ್ವರೂಪದ ವಿವಿಧ ಸೃಷ್ಟಿ ರೂಪಾಂತರಗಳು ಎಂದು. ಈ ಹಿನ್ನಲೆಯಲ್ಲೆ ಕವಿಯಲ್ಲಿ ಮೂಡುವ ಸಂದೇಹಗಳು ಇಲ್ಲಿ ಅಂತಿಮ ಪ್ರಶ್ನೆಯಾಗಿ ಕಾಣಿಸಿಕೊಂಡಿವೆ.

ಮೊದಲಿಗೆ ಪರಬ್ರಹ್ಮನ ಮೂಲರೂಪೆ ಚಿಗುರೊಡೆದ ಶಾಖೆಗಳಾಗಿ ಮಿಕ್ಕೆಲ್ಲರ ರೂಪಾಗಿ ಪ್ರಕಟವಾಗಿದೆಯೆಂದು ಅಂದುಕೊಂಡೆ ಮುಂದುವರೆದರೆ – ಆ ಸಾಕ್ಷಾತ್ ಪರಬ್ರಹ್ಮನಾದ ಶಿವನು ರುದ್ರನ ರೂಪದಲ್ಲೂ ಕಾಣಿಸಿಕೊಳ್ಳುತ್ತಾನೆ (ಏಕಾದಶ – ಅಂದರೆ ಹನ್ನೊಂದು ರುದ್ರರು ಇದ್ದಾರೆಂದು ಪ್ರತೀತಿ). ಒಂದೆಡೆ ಸೌಮ್ಯ ರೂಪಿ ಶಿವನಿರುವ ಸತ್ಯವಾದರೆ ಮತ್ತೊಂದೆಡೆ ರೌದ್ರ ರೂಪಿ ರುದ್ರನೂ ಇರುವ ಸತ್ಯ.

ಅದೇ ತರ್ಕದಲ್ಲಿ ವಿಷ್ಣುವಿನ ಪರಿಗಣನೆಗಿಳಿದರೆ ಒಂದೆಡೆ ಮನಮೋಹಕ ಗಾಯನದ ಸುಧೆಯುಣಿಸುವ ಮೋಹನ ಮುರುಳಿ, ಅರ್ಥಾತ್ ಕೊಳಲನ್ಹಿಡಿದ ಕೃಷ್ಣನ ರೂಪ ಅನುಭವಕ್ಕೆ ಬಂದರೆ ಮತ್ತೊಂದೆಡೆ ಅದೆ ಗೊಲ್ಲರಗೊಲ್ಲನ ಕೈಯಲ್ಲಿ ಯುದ್ಧ ಕಹಳೆಯನೂದುವ, ಪಾಂಚಜನ್ಯ ಶಂಖವಿರುವ ಅವತಾರ ಕಾಣಿಸಿಕೊಳ್ಳುತ್ತದೆ. ಹೀಗೆ ಒಬ್ಬನದೆ ವ್ಯಕ್ತಿತ್ವದ ಹೊದಿಕೆಯಡಿಯಲ್ಲಿ ಎರಡು ಪರಸ್ಪರ ವಿರೋಧಾಭಾಸದ ಗುಣಾವಗುಣಗಳ ಸಂಕಲನ ಕಂಡುಬರುತ್ತದೆ. ಇವೆರಡರಲ್ಲಿ ಯಾವುದು ಅವರ ನೈಜಗುಣ ಎಂದು ಭಾವಿಸಬೇಕೆನ್ನುವ ಗೊಂದಲ ಕವಿಯನ್ನು ಕಾಡುತ್ತದೆ. ಸಮಯಕ್ಕೆ ತಕ್ಕಂತೆ ಎರಡನ್ನು ಬಳಸಿದ ಹಿನ್ನಲೆಯಲ್ಲಿ ಎರಡೂ ದಿಟವಾದ ನೈಜ ಗುಣಗಳೆ ಇರಬಹುದೇ ಎಂಬ ಅನುಮಾನವೂ ಎಡತಾಕುತ್ತದೆ.

ಕೊನೆಗೆ ಆ ಸಂಶಯಗಳೆಲ್ಲ ಸಂಗಮಿಸಿದ ಅಚ್ಚರಿ ವಿಸ್ಮಯದ ರೂಪ ತಾಳುತ್ತ, ಒಂದು ಮಾಮೂಲಿ ಚಿಟಿಕೆ ಹೊಡೆಯಲೂ ಕನಿಷ್ಠ ಎರಡು ಬೆರಳಿರಬೇಕು. ಅಂತಿರುವಾಗ ಆ ದೇವರೆನಿಸಿಕೊಂಡ ಅವನೊಬ್ಬನೆ ಹೀಗೆ ಎರಡು ಅಥವಾ ಅದಕೂ ಮಿಕ್ಕಿದ ಬಗೆ ಬಗೆ ಪಾತ್ರಗಳನ್ನಾಡುವುದಾದರೂ ಎಂತೊ ಎಂದು ತನ್ನಲ್ಲೆ ಪ್ರಶ್ನೆಯಾಗಿಸಿಕೊಂಡು ಮಥಿಸಿಕೊಳ್ಳತೊಡಗುತ್ರದೆ. ಇಲ್ಲೂ ಅದೇ ಎದ್ದು ಕಾಣುವ ದ್ವಂದ್ವದ, ಗೊಂದಲ ಭಾವವೆ ಪ್ರಶ್ನೆಯ ಮೂಲ ಸ್ವರೂಪವಾಗಿರುವುದನ್ನು ಕಾಣಬಹುದು.

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s