00436. ಹೊಟ್ಟೆ ನೋವು…!


00436. ಹೊಟ್ಟೆ ನೋವು…!
____________________________________

ಹೊಟ್ಟೆ ನೋವಿನ ವಿಶ್ವರೂಪ ಇಂತೆಂದು ಹೇಳಿ ಮುಗಿಸಲಾಗದ ವಿಪರೀತದ ಪ್ರವರ… ಏನೊ ಕಾರಣಕ್ಕೆ ತನುವೊಳಗಿನ ಇಂಜಿನ್ನು ಗಬ್ಬೆದ್ದು ಹೋಗಿ ಅದರ ಅಂಗದೊಳಗಿನ ಕಲ್ಲಾಗಿಯೊ, ಭಿತ್ತಿಯೊಳಗಿನ ಹುಣ್ಣಾಗಿಯೊ, ಸಾರಿಗೆ ವ್ಯೂಹವನ್ನು ಕಲುಷಿತಗೊಳಿಸಿದ ಸರಕಿನ ರೂಪದಲ್ಲೊ ಸಾಕ್ಷಾತ್ಕಾರಗೊಂಡಾಗ ಬಹುತೇಕ ಕಾಣಿಸಿಕೊಳ್ಳುವ ಪ್ರಕಟ ರೂಪವೆಂದರೆ ಹೊಟ್ಟೆನೋವಾಗಿ. ಅಪರೂಪಕ್ಕೊಮ್ಮೆ ಬಂದು ಹೋಗುವ ಅತಿಥಿ ರೂಪದಿಂದ ಹಿಡಿದು ಪದೇ ಪದೇ ಬಂದು ಕಾಡಿ ಜೀವ ಹಿಂಡುವ ನಕ್ಷತ್ರಿಕ ರೂಪದವರೆಗೆ ಅದರ ವೈವಿಧ್ಯತೆಗೇನೂ ಕೊರತೆಯಿಲ್ಲ. ಇನ್ನು ತಿಂಗಳು ತಿಂಗಳ ನೈಸರ್ಗಿಕ ಪ್ರಕ್ರಿಯೆಯ ನೆಪದಲ್ಲಿ ತಪ್ಪದೆ ಬಂದು ಕಾಡುವ ಹೊಟ್ಟೆನೋವನ್ನು ಸಹಿಸುವ ಹೆಂಗಳೆಯರ ಅನುಭವವೂ ಪ್ರತಿ ಹೆಣ್ಣಿಗೆ ಪರಿಚಿತವಾದದ್ದೆ. ಇನ್ನು ಬಾಯಿಬಿಟ್ಟು ಹೇಳಲಾಗದೆ ಹೊಟ್ಟೆನೋವಿಂದ ಅತ್ತು ರಂಪಾಟ ಮಾಡುವ ಹಸುಗಂದಗಳನ್ನು ರಮಿಸಿ ಮಲಗಿಸಲು ಗ್ರೈಫ್ ವಾಟರ್ ಕುಡಿಸಿ ಮಲಗಿಸುವ ಪರಿ ಯಾವ ತಾಯಿಗೆ ತಾನೆ ಗೊತ್ತಿರದು ಹೇಳಿ ? ಹೀಗೆ ಯಾವುದಾದರೊಂದು ರೂಪದಲ್ಲಿ ಎಲ್ಲರನ್ನು ಕಾಡಿರಬಹುದಾದ ಹೊಟ್ಟೆನೋವಿನ ಉದ್ದ ಅಗಲ ವ್ಯಾಪ್ತಿ ಸಾಕಷ್ಟು ದೊಡ್ಡದೆಂದೆ ಹೇಳಬಹುದು.
ಮೂಲ ಯಾವುದೆ ಇದ್ದರು ಅದು ಬಂದಾಗ ಕಾಡುವ ಪರಿ ಮಾತ್ರ ಅಸಾಧಾರಣವೆಂದೆ ಹೇಳಬೇಕು.. ಹೊಟ್ಟೆಯೊಳಗಿಂದೆಲ್ಲೊ ಆರಂಭವಾಗಿ ಕರುಳಿಂದ ಹಿಡಿದು ಸಿಕ್ಕ ಸಿಕ್ಕ ಅಂಗವನ್ನೆಲ್ಲ ನಿಧಾನವಾಗಿ ವ್ಯಾಪಿಸುತ್ತ , ತಂತಾನೆ ಹರಡಿಕೊಂಡು ನಿಂತೆಡೆ ನಿಲ್ಲದೆ ಚಲಿಸುತ್ತ, ಕೆಲವೆಡೆ ಠಿಕಾಣಿ ಹಾಕಿ ಹಿಂಡಿ, ನುಲಿದು, ನಲಿಯುತ್ತ ಅನಾಯಾಸ ನರ್ತನ ಮಾಡತೊಡಗಿದರೆ ಅದನ್ನು ಅನುಭವಿಸುವ ಜೀವಿಯ ಯಾತನೆ ಆ ದೇವರಿಗೆ ಪ್ರೀತಿ. ಧಾರಾಳವಾಗಿ ನೀರು ಕುಡಿಯುವುದರಿಂದ ಹಿಡಿದು, ಎಣ್ಣೆ ಸೇವೆ, ಎಳನೀರು, ನೀರು ಮಜ್ಜಿಗೆ, ನಿಂಬೆ ಪಾನಕ, ಸೋಡಾ, ಜೀರಿಗೆ ನೀರುಗಳೆಲ್ಲದರ ಸೇವೆ ಮಾಡಿಸಿಕೊಂಡು ಅದೆಲ್ಲಕ್ಕು ಬಗ್ಗದಿದ್ದರೆ ಕೊನೆಗೆ ಒಂದು ಕೈಲಿ ಹೊಟ್ಟೆ ಹಿಡಿದುಕೊಂಡೆ ಡಾಕ್ಟರರ ಬಾಗಿಲಿಗು ಹತ್ತಿಸುವ ಈ ನೋವು ತಾನಿರುವ ತನಕ ವಿಲವಿಲ ಒದ್ದಾಡಿಸಿ, ನೆಲದ ಮೇಲೆಲ್ಲ ಬಿದ್ದೆದ್ದು ಹೊರಳಾಡುವಂತೆ ಮಾಡಿ, ಅತೀ ಸಹಿಷ್ಣುಗಳೆಂಬ ಹಣೆಪಟ್ಟಿ ಹೊತ್ತವರಲ್ಲು ಕಣ್ಣೀರು ಬರೆಸಿ ಕಂಗೆಡಿಸಬಲ್ಲ ತಾಕತ್ತು ಇದರದು. ತಿನ್ನುವ ಸಾಮಾನ್ಯ ಪ್ರಕ್ರಿಯೆಯೂ ಅಳತೆ ಮೀರಿದರೆ ಹೊಟ್ಟೆನೋವಿಗೆ ಮೂಲಕಾರಣವಾಗಿ ಆ ತಿನ್ನುವಾಟಕ್ಕೆ ಕಡಿವಾಣ ಹಾಕುವ ಖಳನಾಯಕನಾಗುವುದು ಇದರ ಮತ್ತೊಂದು ಸಾಮಾನ್ಯ ಮುಖ.
ಅಂತಹ ಹೊಟ್ಟೆನೋವಿನೊಂದು ಗಳಿಗೆಯನ್ನು ಪದರೂಪದಲ್ಲಿ ಹಿಡಿವ ಯತ್ನ – ಈ ಕವನ 🙂

ಹೊಟ್ಟೆ ನೋವು
_______________

ಹೊಕ್ಕಳಿನಾಳದಲೊಂದು ಬೆಕ್ಕು ಹೊಕ್ಕಂತೆ
ತನ್ನೇ ನುಲಿದು ನುಲಿಸುತ ಹಿಂಡಿ ಸೊಪ್ಪಾದಂತೆ
ತಿರುತಿರುಗಿ ಮರಳಿ ಗಿರಿಗಿಟ್ಟಲೆ ಸುತ್ತು
ಬಿಟ್ಟರೆಗಳಿಗೆ ಯಾತನೆ ನೆನಪಲೆ ಸೊರಗಿತ್ತು ||

ಎಲ್ಲಿತ್ತೊ ? ಹೇಗಿತ್ತೊ ? ಯಾವ ಊರಿನ ಕುತ್ತೊ
ಯಾಕಿಲ್ಲಿ ಬಂದಿತ್ತೊ ಒಳ ಅಂಗಣದಲಿ ಕುತೂ
ಏನಾಟ..! ಪರದಾಟ..!! ತಿದಿ ಒತ್ತಿದಂತೆ ಗೂಟ
ಖಾಲಿ ಬಯಲಲ್ಲದೆಡೆ ಕ್ರೀಡೆಯಾಡಿಸಿ ಸಂಕಟ ||

ಇದ್ದಕ್ಕಿದ್ದಂತೆದ್ದು ಭುಗಿಲೆದ್ದ ಬೆಂಕಿಯ ಕಾವು
ಜನ್ಮಾಂತರದೆಲ್ಲಾ ಕರ್ಮ ಮೂರ್ತವಾದಂತೆ ನೋವು
ಯಾತನೆಯದು ಪದಕೆ ಸಿಗದು ವಿಲವಿಲ ಒದ್ದಾಟ
ಲೆಕ್ಕಿಸದೆಲೆ ಸುತ್ತಮುತ್ತ, ನೆಲಕೆ ಬಿದ್ದು ಹೊರಳಾಟ ||

ಜೀವ ಹಿಂಡುವ ಪರಿ, ಕರುಳಲದರಾ ನಗಾರಿ
ಜಠರದಲೊ ನಾಳದಲೊ ಕೋಶವೆಲ್ಲ ಸವಾರಿ
ಸವರಿ ನೇವರಿಸೊ ಮೃದುಲ, ಕಾಡುವುದು ಸರಿಯೆ?
ಕೇಳುವುದಾರ ಜಪ್ಪಿ, ಬಿಡದ ನೋವೊ ನರಹರಿಯೆ ||

ದಿವ್ಯ ಗಳಿಗೆಯದು ನಿರಾಳ, ಬಿಟ್ಟುಹೋದಾಗ ಸವತಿ
ಕಕ್ಕಿ ಹೊರ ದಬ್ಬಿ ಬೇಡದ ಕಕ್ಕುಲತೆ ಯಾಕೋ ಅತಿ
ಅಂದುಕೊಳುವಾಗಲೆ ಮತ್ತೆ ಮರುಕಳಿಸಿ ಥಟ್ಟನೆ
ಕಾಡುವ ಹೊತ್ತಲಿ ಜತೆಗಿಲ್ಲದೆ ಹೋದವನ ನೆನೆದೆನೆ ||

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s