00459.ವಿವೇಕಾನಂದ ಗೊತ್ತ ?


00459.ವಿವೇಕಾನಂದ ಗೊತ್ತ ?
___________________

  
ಚಿತ್ರಕೃಪೆ : ವಿಕೀಪೀಡಿಯಾ :https://en.m.wikipedia.org/wiki/File:Swami_Vivekananda-1893-09-signed.jpg

ಅವಿವೇಕದೊಳಗು ವಿವೇಕ
ವಿವೇಕಾನಂದ ಗೊತ್ತಾ?
ವಿವೇಕದೊಳಗೆ ಆನಂದ
ಹೆಸರಿನೊಳಗಿಟ್ಟ ಚಂದ ||

ಹುಡುಕಿದ್ದೆ ಹುಡುಗ ಸತ್ಯ
ನರೇಂದ್ರನಾಗಿ ಸುತ್ತುತ್ತ
ರಾಮಕೃಷ್ಣ ಪರಮಹಂಸ
ಶಾರದೆ ಮಾತೆಯ ಚಿತ್ತ ||

ಕಂಡಾಗ ಗುರುವ ಗುರಿಗೆ
ಮೋಕ್ಷ ಸಿಕ್ಕಿ ಅಲೆದ ಪರಿಗೆ
ಕಟ್ಟಿದ್ದೆಲ್ಲ ಜ್ಞಾನದ ಸಾಧನೆ
ನರನಾಡಿ ಭಾರತ ಸಂವೇದನೆ ||

ಮಣಿಸಿ ಭೋರ್ಗರೆವ ಕನ್ಯಾಕುಮಾರಿ
ಉಟ್ಟ ಬಟ್ಟೆಯಲೆ ಈಜಿದ ಬ್ರಹ್ಮಚಾರಿ
ಬಂಡೆಯ ಹತ್ತಿ ಕುಳಿತ ಧೀಮಂತಿಕೆ
ದಿಟ್ಟ ನಿಂತ ಭಾರತದ ಶ್ರೀಮಂತಿಕೆ ||

ಧರ್ಮದ ಬಲ ಮೇಲಲ್ಲಾ ಕೆಳಗೆ
ಅಡಿಯಲಿಟ್ಟ ಭಗವದ್ಗೀತೆ ಬುನಾದಿ
ಹೊತ್ತೆಲ್ಲಾ ಜಗದ ಧರ್ಮಸಾರ ಶುದ್ಧ
ಹಿಂದು ಧರ್ಮ ಧ್ವಜ ಹಿಡಿದನೀ ಬುದ್ಧ ||

00458. ನವರಸ ಲಲಿತಾ (ಶೃಂಗಾರ-ರಸ-ಸಂಪೂರ್ಣಾ)


00458. ನವರಸ ಲಲಿತಾ (ಶೃಂಗಾರ-ರಸ-ಸಂಪೂರ್ಣಾ)
______________________________________

ಜಗನ್ಮಾತೆ ಲಲಿತೆಯ ಸಹಸ್ರ ನಾಮಗಳಲ್ಲಿ ಒಂದು ‘ಶೃಂಗಾರ ರಸ ಸಂಪೂರ್ಣ’.. ಈ ಹೆಸರಿನ ವಿವರಣೆಯ ವ್ಯಾಖ್ಯಾನವನ್ನು ಓದುವಾಗ ಪ್ರಾಸಂಗಿಕವಾಗಿ ಮಾತೆ ಲಲಿತೆಯ ನವರಸಗಳನ್ನಾವರಿಸಿದ ಸ್ವರೂಪದ ಕುರಿತ ವರ್ಣನೆಯನ್ನು ಕವನವಾಗಿಸಿದ್ದೆ (ಸಂಪದದಲ್ಲಿ). ಈ ವಿವರಣೆಯ ವಿಶಿಷ್ಟತೆಯೆಂದರೆ ನವರಸದ ಜತೆಗೆ ಅದೆಲ್ಲಕ್ಕು ಕಲಶವಿಟ್ಟಂತೆ, ಮಿಕ್ಕೆಲ್ಲ ಭಾವಗಳನ್ನಧಿಗಮಿಸುವ ‘ಎದೆ ತುಂಬಿದ ರಸಭಾವ’ವು ಹತ್ತನೆಯ ವರ್ಣನಾತೀತ ರಸದ ರೂಪದಲ್ಲಿ ಅನಾವರಣಗೊಳ್ಳುವುದು. ಆ ಹತ್ತು ರಸಗಳ ಸಂಕ್ಷಿಪ್ತ ಚೌಪದಿ ರೂಪ ಈ ಕೆಳಗಿದೆ. ಈ ಎಲ್ಲ ರಸಗಳು ಶ್ರೀ ಲಲಿತೆಗೆ ಸಂಬಂಧಿಸಿದ ವಿವರಣೆಯನ್ನೆ ಆಧರಿಸಿ ಆಯಾ ರಸದ ವರ್ಣನೆಗೊಂದು ಮೂರ್ತ ರೂಪ ಕೊಡಲೆತ್ನಿಸುವುದು ಇಲ್ಲಿನ ವಿಶೇಷ.

೦೧. ಅದ್ಭುತ

ಅತ್ಯಾಶ್ಚರ್ಯ ಸಾಕಾರವಾಗಿ ಲಲಿತ, ಪರಬ್ರಹ್ಮ ಕಲ್ಪನಾತೀತ
ಸಗುಣ ನಿರ್ಗುಣ ಸಂಕಲಿತ, ಏಕೀಭವಿತ ಅರ್ಧನಾರಿ ಅದ್ಭುತ
ಪುಷ್ಪವೊಂದರಲೆ ಗಂಡು ಹೆಣ್ಣಂತೆ ಸಹಜ, ಶಿವಶಕ್ತಿ ನಿಜ ರೂಪ
ಅತಿಶಯ ಪುರುಷ ಪ್ರಕೃತಿ ಸಂಗಮ, ಪ್ರತಿಬಿಂಬಿತ ಅಪರೂಪ ||

೦೨. ಕರುಣ

ಕುಂಡಲಿನೀ ಸಹಸ್ರಾರಕೇರಿಸುವ್ಹಾದಿ, ಸಾಧಕನಾಗಿ ನಿತ್ರಾಣ
ಹಠಯೋಗದಿ ಮುನ್ನಡೆದರು, ಕಾಠಿಣ್ಯವಾಗಿಸುತೆ ಗತಪ್ರಾಣ
ಮೊರೆಯಿಡೆ ಕರುಣಾಮರ ಲಲಿತೆ, ನಿರ್ಜೀವದಲು ಶಕ್ತಿ ರಸ
ಮರುಕ ಕನಿಕರ ದಯೆ ಹರಸುತ್ತ, ಸ್ಪುರಿಸುವ ಕರುಣಾ ರಸ ||

೦೩. ಬೀಭತ್ಸ

ಜಗದೆಲ್ಲಕು ಮೂಲಾಧಾರ, ಬ್ರಹ್ಮಾಂಡ ನಡೆಸಿ ಲಲಿತೆ ಸ್ವರ
ಅನುರಣಿತ ಪ್ರತಿ ಕ್ಷಣಕು, ಸೃಷ್ಟಿ ಸ್ಥಿತಿ ಲಯಗಳ ಅವತಾರ
ಸತ್ಯವರಿಯದೆ ಅಜ್ಞಾನದ ಮುಸುಕಲಿ, ಬಂಧಿತಗೆ ಜುಗುಪ್ಸೆ
ದೇವಿಯ ಕಾಡುವ ಭೀಭತ್ಸ ಭಾವ, ಜ್ಞಾನಿಗಳಾಗಿಸೆ ಅಪೇಕ್ಷೆ ||

೦೪. ರುದ್ರ

ಮರದ ನೆರಳಂತೆ ತಂಪು, ದೇವಿ ಸನ್ನಿಧಿ ಪ್ರಶಾಂತ ಸಾಗರ
ಉರಿ ಬಿಸಿಲಂತೆ ರೌದ್ರ, ಸಿಟ್ಟು ಸೆಡವು ರೋಷದ ಅವತಾರ
ಪ್ರಕೃತಿ ರೂಪಿಣಿ ಹೊರತಾಗದೆ ಹೆಣ್ಣಾಗಿ, ಪ್ರಕಟಿಸುತ ರುದ್ರ
ಜಟೆಯಲಿ ಗಂಗೆಗೆ ಹರಿ ಹಾಯ್ದ ರೋಷಕೆ, ಸಂವತ್ಸರ ರೌದ್ರ ||

೦೫. ವೀರ

ಜೀವಿ ಪ್ರಾಪಂಚಿಕತೆ ವ್ಯಾಮೋಹ, ಲೌಕಿಕ ವ್ಯಸನ ಭಂಡಾರ
ಎಡಬಿಡದೆ ಕಾಡಿಸಿ ಅರಿಷಡ್ವರ್ಗ, ದುಷ್ಟಮನದ ಭಂಡಾಸುರ
ದುಷ್ಟದಮನ ಪರಾಕ್ರಮ, ಸಗಣ ಸಮೇತ ಹೋರಾಟಾ ದಿನ
ತನ್ನೊಳಗ ಗೆಲ್ವ ಶೌರ್ಯ ಕಲಿತನ, ವೀರರಸವೆ ದೇವಿ ಧ್ಯಾನ ||

೦೬. ಶಾಂತ

ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ ಆವರ್ತನ ಚಕ್ರ
ಮಹಾ ಪ್ರಳಯ ತಾಂಡವ ನೃತ್ಯಕೆ, ಸಾಕ್ಷೀ ಭೂತ ಶಕ್ತಿ ಮಾತ್ರ
ಅಗ್ನಿಪರ್ವತದೊಡಲಿಂದ ಜತನ, ಹಿರಣ್ಯಗರ್ಭ ಪಡೆಯಲವನ
ಪಂಚೇಂದ್ರಿಯ ಜಿತ ಪ್ರಶಾಂತ ನರ್ತನ, ಶಾಂತವಾಗಿಸಿ ಶಿವನ ||

೦೭. ಶೃಂಗಾರ

ಸೃಷ್ಟಿಯೆ ಈ ಜಗದಾ ವಿಸ್ಮಯ, ಅಲಂಕಾರ, ಭೂಷಣಪ್ರಾಯ
ಪ್ರಣಯಾನುರಾಗಗಳೆ, ಭಾವಜವಿಲಾಸದ ಶೃಂಗಾರ ಸಮಯ
ಭಾವಜಾಂತಕನೂ ಹೊರತಿಲ್ಲ, ವಿಲಾಸಾ ರಸಿಕತೆಗೆ ಸಕ್ರೀಯ
ಶಿವಶಕ್ತಿ ಪರಬ್ರಹ್ಮದೇಕೀಭವ ರೂಪ, ಜಗ ಸಾರುವ ಉಪಾಯ ||

೦೮. ಹಾಸ್ಯ

ಶೃಂಗಾರ ಲಾಸ್ಯದೆ ಸರಸ, ಜತೆ ಸೇರಿಸುತ ಹಾಸ್ಯ ಸಲ್ಲಾಪ
ತ್ರಿಕಾರ್ಯದೇಕತಾನತೆ ನಡುವೆ, ಚಿಮ್ಮಿಸಿದ ಹರ್ಷೋಲ್ಲಾಸ
ಗಹನ ಗಂಭೀರ ಜ್ಞಾನ, ಹಾಸ್ಯ ರಸದಿ ಕಠಿಣತೆಗೆ ಸೋಪಾನ
ಸುಲಿದ ಬಾಳೆಯಂತೆ ಸುಲಲಿತ, ಹಾಸ್ಯರಸ ಪರವಶ ಮನ ||

೦೯. ಭಯಾನಕ

ಬಾಹ್ಯ ರೂಪಾಂತರದಂತೆ ನಡೆನುಡಿ, ದೇವಿ ಲಲಿತೆಗೂ ಕಾಡಿ
ಹೆಣ್ಣಾಗಿ ಏಕಾಂತದಲಿ, ಸರ್ಪಭೂಷಣನೊಡಗೂಡಿದ ಗಾರುಡಿ
ನಿರ್ಭಿತಿಯಲ್ಹರಿದಾಡುವ, ಸರ್ಪಸಂತತಿಗೆ ಭಯಾನಕ ಮುದ್ರೆ
ಸಹಸ್ರಾರ ಮಿಲನಕೆಲ್ಲೆಡೆ ತೊಡಕೆ, ಸಾಧಕನಿಗೆಚ್ಚರಿಸಿರೆ ಭದ್ರೆ ||

೧೦. ಎದೆ ತುಂಬಿದ ರಸ ಭಾವ

ರಸಾನುಭೂತಿ ಮಧುರ ಸಂಗಮ, ಸಮ್ಮಿಲನಾ ಜಗಕೆ ಉಗಮ
ಶಿವ ಶಕ್ತಿ, ಪುರುಷ ಪ್ರಕೃತಿ, ಭಕ್ತ ಸಾಧಕರೆಲ್ಲರ ಸಾತ್ವಿಕ ಪ್ರೇಮ
ಪರಮಾನಂದಾಮೃತ ಸ್ರವಿಸುತ ಸಹಜ, ರಸಮಯ ಸಾನಿಧ್ಯ
ಎದೆ ತುಂಬಿ ಹರಿವ ಭಾವ ಸಂಚರಣೆ, ವರ್ಣನಾತೀತ ಸಮೃದ್ಧ ||

00457. ಹೆಜ್ಜೆಯ ಅಚ್ಚೆ…


00457. ಹೆಜ್ಜೆಯ ಅಚ್ಚೆ…
___________________________________

ಕೆಲವು ಹೆಜ್ಜೆಗಳೆ ಹಾಗೆ..
ಜೇಡಿ ಮಣ್ಣಲಿ ಅಚ್ಚೊತ್ತಿದ ಹಾಗೆ
ಗುರುತಿನ ಆಳ ಅಗಲ ಉದ್ದ
ಒದ್ದೆಯೊ ಒಣಗೊ ಗುರುತು ನಿಖರ..

ದನಿ ಸಂತಸದ ಗೆಜ್ಜೆ ನಾದ
ನೋವಿನಾಲಾಪ ಪ್ರಲಾಪ ಬೀಜ
ಒಂದರ ಮೇಲೊಂದೊತ್ತಿ ಪದರ
ಮುಜುಗರ ಅಳು-ನಗು ಸಮ್ಮಿಶ್ರ…

ಊರಿಬಿಡಲಿತ್ತರೂ ತಾವು ತೆರೆದು
ಕದಗಳೇಳರಾಚೆಯ ಸರಹದ್ದು
ಕುಣಿದೆಬ್ಬಿಸಿ ಧೂಳು ನಿರೀಕ್ಷೆ ಬೆಟ್ಟ
ಸುರಿದ ತಣ್ಣೀರ ಮಳೆ, ಎಲ್ಲಿ ಮೋಕ್ಷ ?

ಹೆಜ್ಜೆಯಿಕ್ಕಿದ ಸಂತಸ ಕುಣಿದುದೆಷ್ಟೊ
ಮಿಕ್ಕ ಗುರುತಿನ ನೋವು ಕಾಡಿದ್ದಷ್ಟೂ
ಬಾರೆಂದು ಕರೆಯದೆಯೆ ಬಂದ ಸಲಿಗೆ
ಹೇಳದೆ ಕೇಳದೆ ಹೋದೆ ಯಾರ ಬಳಿಗೆ ?

ಕಂಗಾಲಾಗಿ ದಿಟ್ಟಿಸಿ ಅದೆ ಅಚ್ಚಿನ ಸುತ್ತ
ಸವೆಯಬಿಡದೆ ತುದಿಗಳ ಜತನ ಸ್ವಸ್ಥ
ಕತ್ತೆತ್ತಿ ನೋಟ ದೇಗುಲ ಗಂಟೆ ನಿನಾದ –
ತಂದೀತೇನು ಮರಳಿ ಹೆಜ್ಜೆಯ ಸದ್ದನ್ನು..?