00466. ಕಾಲ ವಿಸ್ಮಯ..


00466. ಕಾಲ ವಿಸ್ಮಯ..
_______________________

    
Picture courtesy , wikipedia – https://en.m.wikipedia.org/wiki/File:1214Clock.svg

& https://en.m.wikipedia.org/wiki/File:Blender3D_NormalWalkCycle.gif

ಹೊರಡವಸರ ಹೊರಡಲವಸರ
ಹೊರಡಿಸಲೇನವಸರ ಧಾವಂತ
ಎಲ್ಲ ಕಾಲದ ದೂತ ಕಾಲ ಧೂರ್ತ
ಕಾಲಡಿಗೆ ಸಿಗದು ಕಾಲದ ಬಾಲ ||

ಮೊದಲು ಕೊನೆಯುಂಟೆ ಕಾಲಕೆ ?
ಆದಿ ಅನಾದಿ ಬುನಾದಿ ಸೋಜಿಗ
ಆಲ್ಲಿತ್ತೆ ಸೃಷ್ಟಿಗೆ ಮೊದಲು ಕಾಲ
ಕಾಲಿಕ್ಕಿ ನಡೆದಿತ್ತೆ ಯಾರದೊ ಹಂಬಲ ? ||

ಕಾಲ ಹೆಜ್ಜೆಯ ವೇಗ ಅನಿಯಮಿತ
ನಿಯಾಮಕವಾವುದೊ ಗಣಿತದ ಲೆಕ್ಕ
ಗುರುತ್ವವದು ತಗ್ಗಿಸಿ ಬಗ್ಗಿಸಿ ಕುಗ್ಗಿಸಿ
ವೇಗಾವೇಗಗಳ ನಿರ್ಧರಿಸುವ ಜಾಲ ||

ಅತಿ ಗುರುತ್ವದತಿಶಯವಾಗಿ ವೇಗ
ಕಾಲ ಓಡುವುದಂತೆ ನಾಗಾಲೋಟ
ಕೂತದರ ಯಾನದಲಿ ನಡೆ ಭವಿತಕ್ಕೆ
ಇಡಲು ಸಾಧ್ಯವೆ ಮರಳೆ ಭೂತಕ್ಕೆ ? ||

ಭೂಗುರುತ್ವದಡಿ ಏರಿಳಿಸೆ ಗುರುತ್ವ
ಕಾಲಯಾನದ ಯಂತ್ರವಾದೀತು ಸ್ವಸ್ಥ
ಏರದರಲಿ ಇಳಿದರದೆ ಭೂಗೋಳ
ದಾರಿ ತಪ್ಪೆ ಬ್ರಹ್ಮಾಂಡದಾವುದೊ ಮಾಳ ||