00473. ಹಾಳು ಚಳಿ, ಬೇಕವಳು ಬಳಿ…!


00473. ಹಾಳು ಚಳಿ, ಬೇಕವಳು ಬಳಿ…!
_____________________________

 

 (Belle Dame sans Merci” 1893, by John William Waterhouse (1849-1917).. Picture and quote courtesy : Wikipedia @  https://en.m.wikipedia.org/wiki/File:John_William_Waterhouse_-_La_Belle_Dame_sans_Merci_(1893).jpg)

 
ಚಳಿಗೆ ನೀನೆ ನನ್ನಾ ಕಂಬಳಿ
ಆಗುವೆ ಬಾ, ಬೇಗ come-ಬಳಿ
ಅಂದರೆಂದು ಕವಿ ಡುಂಡಿ ರಾಜು
ಕೊಟ್ಟೆನಲ್ಲ ನಾನು ಹೀರೊ ಪೋಜು..

ನಳಿದೋಳುಗಳೆನ್ನಾ ತಬ್ಬಲಿ !
ತಬ್ಬದಾ ಹೊತ್ತು ನಾ ತಬ್ಬಲಿ.. 😦
ಗುಸು ಪಿಸುಮಾತು ಮನದಾ ಟಬ್ಬಲಿ
ಅಪ್ಪಿದ ಬಯಕೆಯೆಂತು ಹೊರ ದಬ್ಬಲಿ ?

ಕುಡಿದರು ಸರಿ ಜತೆಗೆ ಅಂಬಲಿ
ಕುಡಿದಾ ಹನಿಯಲಿ ಒಲುಮೆ ತುಂಬಲಿ
ಹಂಚಿಕೊಳ್ಳುವ ಬಾ, ಸಾಕೊಂದೆ ಕಂತಲಿ
ಹೊದ್ದು ಆಗದಂತೆ ಹಮ್ಮಿಗೆ ‘हम’ – ಬಲಿ..

ಭುವನೈಕ ಸುಂದರಿಯೆಂಬ ಜಂಬ
ಮೂರು ಹೊತ್ತು ಕನ್ನಡಿ ಪ್ರತಿಬಿಂಬ
ವಿನಾಕಾರಣ ದಿನ ಮುನಿದೆದ್ದ ಪಗಲಿ..
ರಮಿಸಲೆಂತು ಊದಿ, ಮೊಗ ಚೊಂಬಲ್ಲಿ…?

ಕೇಳಲಿ ಬಿಡಲಿ ಕೊಟ್ಟುಬಿಟ್ಟು ಮುತ್ತು
ಹದ್ದು ಮೀರೆ ಕುತ್ತು, ಚಿನ್ನ ಸರವಾಗಿತ್ತು
ಹೆಣಗಬೇಕು ನೋಡು ಪ್ರೀತಿಯ ಗಂಟು
ಗೊಣಗುತಿದ್ದರು ತೇಪೆ ಹಾಕುವ ನಂಟು..!

00472. ವಿಪರೀತ ಚಳಿಗೆ…


00472. ವಿಪರೀತ ಚಳಿಗೆ…
________________________

  

(Winter in Rego Park, Queens, Newyork – Picture courtesy : wikipedia @ https://en.m.wikipedia.org/wiki/File:Winter_in_NY.jpg)

 
ಕೊರೆ ಕೊರೆವ ಚೂರಿಯಲುಗಿನಿರಿತ
ಈ ಚಳಿಲೋಕದ ನಿಯಮ ಗೊತ್ತ ?
ಬರಿ ಉಸಿರಾಟದ ಹಬೆಯು ಕೂಡ
ಬಾಯ್ಬಿಡುತಲೆ ತುಟಿ ಕಟ್ಟುತ ಮೋಡ ..!

ಸೇದದಿದ್ದರು ಸಿಗರೇಟಂತೆ ಧೂಮ
ದಬ್ಬಿದ ಉಸಿರು “ಇನ್ವರ್ಟೆಡ್ ಕಾಮ”
ಮೈನಸ್ಸು ಆರು ಸಾಮಾನ್ಯ ಚಳಿಯೆ ?
ಸ್ವೆಟರು ಕೋಟು ಥರ್ಮಲ್ಲಿನ ಕೆಳೆಯೆ..

ಹಾಡುಹಗಲ ಸೂರ್ಯ ಮೇಣದ ಬತ್ತಿ
ಸುಡು ಬಿಸಿಲ ಪ್ರಖರ ತಂಪಲಿ ಭರ್ತಿ
ಇಣುಕೋ ದಿನಕರ ಅಣಕು ವ್ಯಾಪಾರ
ಹೋಗಪ್ಪ ಸಾಕು ನಿನ್ನ ನಾಟಕ ಚಳಿಜ್ವರ..

ಬೀದಿಗ್ಹೆಜ್ಜೆಯಿಡಲು ಯಾಕೊ ಮುಜುಗರ
ದಿರಿಸಿನ ಮೇಲ್ದಿರಿಸು ಧರಿಸಿ ದೇಹಕೆ ಭಾರ
ಮಫ್ಲರ್ ಟೋಪಿ ಗ್ಲೌಸು ಶಿರದಿಂದಂಗುಷ್ಟ
ಕಾಲ್ಚೀಲ ಸಹಿತ ಯುದ್ಧಕೆ ನಡೆವ ಕಷ್ಟ..

ಗಾಳಿ ಬೀಸದಿರೆ ಸಹನೀಯ ಚಳಿಗಾಲ
ಬೀಸಲಲ್ಪ ಚಳಿಯೂ ನಡುಗಿಸೊ ಅವತಾರ
ಮರಗಟ್ಟಿ ಬೆರಳು ಕಿವಿಮೂಗಿನ ನೆರಳು
ಹಿಮ ಬಿದ್ದರಲ್ಲೆ ಸ್ವರ್ಗ, ನೋಡೆ ಕಿಟಕಿಯ ಸರಳು !!

– ನಾಗೇಶಮೈಸೂರು

00471. ಧೂಮ-ಸಾಹಿತ್ಯ…!


00471. ಧೂಮ-ಸಾಹಿತ್ಯ…!
_____________________ 

  

ಭೂಮ್ಯಾಕಾಶಾಂತರ್ಗತ ಕವಲೆ
ನಾನಾಕಾರ ಹಾಹಾಕಾರ ತಿರುಳೆ
ದೇಹ ಹೋಮ ಕುಂಡವಾಗಿ
ಸಿಗರೇಟನು ಹಚ್ಚಿತೆ ಅಗ್ನಿ?

ಕೈ ಬಾಯಿಯ ಜುಗಲ್ ಬಂಧಿ
ಬಿಟ್ಟು ಬಿಡದೆಲ್ಲ ಸಂದಿ ಗೊಂದಿ
ಪುಸು ಪುಸು ಬುಸು ಬುಸು ಸರ್ಪ
ನುಗ್ಗಿದ ಕಡೆಯೆಲ್ಲಾ ಒಣ ದರ್ಪ..!

ಗುರುತ್ವವನೆ ಬೆಚ್ಚಿಸೊ ಬಯಲೆ
ನಾನಾ ನರ್ತನ ಮೇಲೇರಲೆ
ಪಿಶಾಚ ರೂಪ ಕರಿ ನೀಲ ಬಿಳುಪ
ಕಲಸಿದ್ದೆ ಹಗುರ ಕಾಡೆ ಮಾಲೆ!

ಕೆಮ್ಮಿದ್ದರು ದಮ್ಮಿರಬೇಕು ಪಕ್ಕ
ಶೈಲಿ ವಿನ್ಯಾಸಗಳ ರಂಗಿನ ಸುಖ
ಹೇಳಿದ ಮಾತ ಕೇಳದ ಸಂಸಾರ
ಸುಟ್ಟರು ವಿಧೇಯ ಇವನೊಂಥರ!

ಬೆಚ್ಚಗಿರಿಸುವನೊ ಕೊಚ್ಚುವನೊ
ಒತ್ತಡಗಳನಳಿಸುವ ಕೊರಮನೊ
ಹಂಗಿಗೆ ಬಿದ್ದರೆ ಅವನದೆ ರಾಜ್ಯ
ರಂಗಿಲ್ಲದ ಹೊಗೆಯಡಿ ದಾಸ್ಯ!

ಜತೆಗಾರರ ಜತೆ ಸಖ್ಯ ಸುಖ
ಕುಡಿತ ಕುಣಿತ ಜೊತೆ ಪಾನಕ
ಒಂದನೊಂದು ಸೇರಿಸುವ ಚೊಕ್ಕ
ಹೆಣ್ಣೊಂದು ಸಿಕ್ಕೆ ಮುಗಿಯಿತೆ ಲೆಕ್ಕ!

ಬರಿ ಕೂರಲಾಗದ ಚಡಪಡಿಕೆ ಗುದಿ
ಕೈ ಹಿಡಿಯಬೇಕೆ ಸಿಗರೇಟಿನ ತುದಿ
ಆರಂಭ ಶೋಕಿ ಸೇದಲಿರದಾ ಅಗತ್ಯ
ಸೇದಿಟ್ಟ ದೇಹ ಸಿಗರೇಟಿನ ಸಾಹಿತ್ಯ!

– ನಾಗೇಶ ಮೈಸೂರು
(ಶಾಸನ ವಿಧಿಸಿದ ಎಚ್ಚರಿಕೆ : ಧೂಮಪಾನ ಆರೋಗ್ಯಕ್ಕೆ ಹಾನಿಕರ)
(picture: A reproduction of a carving from the temple at Palenque, Mexico, depicting a Mayan priest smoking from a smoking tube – Picture and information courtesy from Wikipedia @ – https://en.m.wikipedia.org/wiki/File:Mayan_priest_smoking.jpg)
ನಾಗೇಶ ಮೈಸೂರು, Nagesha mysore, Kannada Poems, Singapore
ಲೇಖನ ವರ್ಗ (Category): ಕಾವ್ಯ ಮತ್ತು ಕವನ