00474. ಮನುಜ ದೇಹದ ನವದ್ವಾರಗಳು


00474. ಮನುಜ ದೇಹದ ನವದ್ವಾರಗಳು
___________________________

ನಮಗರಿವಿಲ್ಲದ ಹಾಗೆ ನಮ್ಮ ದೈನಂದಿನವನೆಲ್ಲಾ ಸಂಭಾಳಿಸೊ ಎಷ್ಟೊ ಅಂಗಗಳು, ನಮ್ಮ ದೇಹವನ್ನು ಕಾಯುವ ಪರಿಯೆ ಸೋಜಿಗ. ಇಲ್ಲಿ ದ್ವಾರ ರೂಪದಲ್ಲಿ ಒಳಗೊ, ಹೊರಗೊ ಅಥವ ಎರಡನ್ನು ಮಾಡುವ ಒಂಭತ್ತು ಅಂಗಗಳನ್ನು ಹಿಡಿದಿಡುವ ಪ್ರಯತ್ನ – ಅವುಗಳ ಕಾರ್ಯ ವೈಖರಿಯ ಜತೆಗೆ…

ನವನವೀನ ತೆರೆತೆರೆ ನವ ದ್ವಾರ..
_____________________________

ನವರತ್ನ ನವಧಾನ್ಯ ನವಗ್ರಹಗಳಾ ತವರ
ನವದ್ವಾರಗಳ ಕುತೂಹಲಕ್ಹುಟ್ಟಿತೀ ಪ್ರವರ
ದ್ವಾರಗಳೊಂಭತ್ತು ಮನುಜ ದೇಹದ ಸ್ವತ್ತು
ಅದರಲಿ ಏಳ್ಹೊತ್ತಾ ತಲೆ ಬುರುಡೆಯಲಿತ್ತು ||

ಕಣ್ಣೆ ಸಂಪತ್ತು ಮೊದಲೆರಡು ದ್ವಾರದ ತಾರೆ
ಬೆಳಕಿನ ನೂಲೇಣಿ ಒಳ ಹೊಕ್ಕು ಬಾರೊ ಸೀರೆ
ಅಂತಃಚಕ್ಷು ಧ್ಯಾನ ಭಾವನೆಯ ಹೊರಯಾನ
ಬಿಟ್ಟರೆ ಒಳ ಸೆಳೆಯುವ ದೃಷ್ಟಿ ಅಂತರ್ಯಾನ ||

ಕಂಗಳ ನೆರೆ ಹೊರೆ ಕರ್ಣಗಳೆರಡರ ಹೆದ್ವಾರ
ಶಬ್ದ ಜಗದ ಒಳ ಹರಿವಿಗೆ ತೆರೆದಾ ಹರಿಕಾರ
ಕೇಳಿದ್ದಾಲಿಸಿದ್ದೆಲ್ಲವಾಗಿ ಸಂವಹನದ ಗ್ರಹಣ
ಮನನವಾಗಲಿ ಬಿಡಲಿ ದತ್ತವಾಗಿ ಸಂಗ್ರಹಣ ||

ಕಿವಿಯಿರೆ ಮುಖದಾಚೀಚೆ ಕಣ್ಣಿರೆ ನೇರಕ್ಕೆ ಚಾಚೆ
ಎರಡರಾ ದ್ವಾರಗಳು ಸಾಕಷ್ಟು ದೂರಗಳಾಚೀಚೆ
ಐದಾರನೆ ನಾಸಿಕ ದ್ವಾರ ಬಲು ಹತ್ತಿರದ ಸಮರ
ಒಳಹೊರಗೆರಡು ಹರಿವಿನ ಜೀವ ಮೂಗಿನ ನೇರ ||

ಈ ಏಳನೆ ದ್ವಾರ ಹೊಟ್ಟೆ ಪಾಡಿನ ತುಂಬೋದರ
ಆಹಾರ ದೇಹದೊಳಗಿಳಿಸುವ ಕೊಳವೆಯ ದಾರ
ಬಾಯಿಂದಲೆ ಸುಖಾಗಮನ ಜೀರ್ಣಾಂಗ ರವಾನ
ನಾಲಿಗೆ ರುಚಿ ತೆವಲಿಗೆ ತಾವಿತ್ತು ಸಾಕುವ ತಾಣ ||

ಇನ್ನುಳಿದೆರಡು ದ್ವಾರ ಹೊರದಬ್ಬುವ ಕಸ ಸಾರ
ಮೂತ್ರ ವಿಸರ್ಜನೆಗೆ ದ್ರವಿಸಿದ ತ್ಯಾಜ್ಯಕೆ ಕಾತುರ
ಮಲ ವಿಸರ್ಜಿಸಲು ಘನ ತ್ಯಾಜ್ಯವು ಹೊರಬಾರಾ
ದೇಹದ ಗಬ್ಬೆಲ್ಲ ಹೊರಗಟ್ಟುವ ವಿಸ್ಮಯದ ದ್ವಾರ ||

ಅದ್ಭುತ ನವದ್ವಾರಗಳ ಕಥೆ ದೇವ ವಿನ್ಯಾಸ ಲತೆ
ಕಣ್ಣು ಕಿವಿ ಬಾಯಿ ಒಳಹರಿವೇಕಪಥ ದಾರಿ ಜತೆ
ಮೂಗೊಂದೆ ವಿಸ್ಮಯ ಗಾಳಿಗೆ ಒಳಗೂ ಹೊರಗೂ
ವಿಸರ್ಜನಾಂಗಕೂ ಬರಿ ಹೊರಹರಿವಿನ ಬುರುಗು ||

– ನಾಗೇಶ ಮೈಸೂರು