00476. ಸಹಜೀವನ ಸಹನ – ಸೊಳ್ಳೆ ನೊಣ ಪುರಾಣ..! (ಮಕ್ಕಳಿಗೆ)


00476. ಸಹಜೀವನ ಸಹನ – ಸೊಳ್ಳೆ ನೊಣ ಪುರಾಣ..!(ಮಕ್ಕಳಿಗೆ)

_______________________________________ 

  

(Picture source from : https://en.m.wikipedia.org/wiki/File:Aedes_aegypti_E-A-Goeldi_1905.jpg)

  
(Picture sourc from : https://en.m.wikipedia.org/wiki/File:Hooke-bluefly.jpg)

ಈ ಭೂಮಂಡಲದಲಿ ಎಲ್ಲಾದರೂ ಸರಿ, ಬಾಳ್ವೆ ನಡೆಸಲು ಬೇಕಾದ ಅತಿ ಕನಿಷ್ಟ ಅರ್ಹತೆಯೆಂದರೆ – ಸಹಜೀವನಕೆ ಹೊಂದಾಣಿಕೆಯಾಗಬಲ್ಲ ಸಹನೆ. ಈ ಸಹಜೀವನ ಮನುಜ – ಮನುಜ ಮಾತ್ರವಲ್ಲದೆ, ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳಲ್ಲು ಕಂಡುಬರುವ ಹಾಗೆ, ನಾಗರೀಕತೆಯ ಸೊಂಕಿನಿಂದಾಗಿ ಮನುಜ ಮತ್ತು ಗಿಡ,ಮರ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳ ನಡುವೆಯು ಇರಲೇಬೇಕಾದ ಅಗತ್ಯದ ಕುರಿತು ಆಡಿಕೊಳ್ಳುವ ಕವನ – ಈ ಪದ್ಯ.

ಈ ನವ ಜೀವನ
ಸಹಜೀವನ ಸಹನ
ಸಹನೆಯೆ ಜೀವನ ಗಾನ
ಕ್ರಿಮಿ ಕೀಟ ಜಂತು ಜತೆಗಾಹ್ವಾನ ||

ಸೊಳ್ಳೆ ನೊಣಗಳ ಕಾಟ
ಬೇಡವೆಂದರೂ ಬರುವಾ ನೆಂಟ
ಹೊತ್ತು ಬಾರೊ ರೋಗದ ತರಲೆ ಕಂಟಕ
ಸ್ವಚ್ಚವಿಡಬೇಕು ಮನೆ ಮಠ ಆಗೆ ನಿರಾತಂಕ ||

ನೆಲಗಿಲ ಶುದ್ಧ ಜಲ
ವರೆಸುತ ಕ್ರಿಮಿ ಕೀಟಗಳ
ಇಟ್ಟರೆ ಕನ್ನಡಿಯಂತೆ ಒಳಗೆ ಹೊರಗೆ
ಹತ್ತಿರ ಸುಳಿಯದ ಸೊಳ್ಳೆ ನೊಣಗಳೆ ಕೊರಗೆ ||

ಹೀಗೆಷ್ಟೋ ಸಹವಾಸಿಗಳು
ಬಾಡಿಗೆ ಕೊಡದ ಸಹವರ್ತಿಗಳು
ಸಮರಸ ಜೀವನದ ಪಾಠ ಕಲಿಸೊ ಐಗಳು
ಸಹಜೀವನ ಸಹನೆಗೆ ಅಡಿಪಾಯವಿಡುವ ಕೈಗಳು ||

—————————————————————–
ನಾಗೇಶ ಮೈಸೂರು

00475. ಧಿಮಾಕಿನ ಚಂದ್ರನ ದೌಲತ್ತು..!


00475. ಧಿಮಾಕಿನ ಚಂದ್ರನ ದೌಲತ್ತು..!
_________________________

 (Picture source : http://www.planetsforkids.org/upload/-moon-a.jpg#moon%201024×768

ಸೂರ್ಯನ ಬೆಳಕನ್ನು ಬರಿ ಎರವಲು ಪಡೆದೆ ಮೆರೆವ ಚಂದ್ರನ ಧಿಮಾಕನ್ನು ಲೇವಡಿ ಮಾಡುವ ಲಘುಹಾಸ್ಯದ ಕವನ. ಜತೆಗೆ ಅವನದಲ್ಲದೆ ಅಲ್ಲದ ಬಾಡಿಗೆಗೆ ಪಡೆದ ಸೌಂದರ್ಯದ ನೆರಳಲ್ಲೆ ಕವಿಗಳಿಂದಿಡಿದು ಎಲ್ಲರ ಹೊಗಳಿಕೆಗೆ ಪಾತ್ರನಾಗುವ ಅನ್ಯಾಯದ ಕುರಿತು ಪ್ರತಿಭಟನೆ ಈ ಮೊದಲ ಭಾಗ ‘ಚಂದ್ರನ ದೌಲತ್ತು’ವಿನಲ್ಲಿ ಪ್ರಕಟಿತ.

ಚಂದ್ರನ ದೌಲತ್ತು ……!
______________________

ಚಂದ್ರನ ದೌಲತ್ತು
ಎಷ್ಟೊಂದು ಸವಲತ್ತು
ಪೌರ್ಣಿಮೆ ಬಂದರೆ ಸಾಕು
ಎಂಥ ಬಿಂಕ,ಬಿನ್ನಾಣ,ಧಿಮಾಕು ||

ಹಾಲೋ ಹಾಲಿನ ಬೆಳಕು
ಜಗಮಗಿಸಿ ಸುಧೆ ಥಳುಕು
ಬೆಳಕ್ಕೊಟ್ಟೋನು ಪಾಪ ಪಶ್ಚಿಮ
ಸಾಲ ತಕ್ಕೊಂಡೋನ ಶಂಖ ಚಂದ್ರಮ ||

ಮನೆ ಬಾಗಿಲು ಕಿಟಕಿ
ತಾರಸಿ ಮೇಲ್ಗಡೆ ಹೊಂಚ್ಹಾಕಿ
ಬೀದಿ ಬೀದಿಗೂ ಬುಡುಬುಡುಕಿ
ಬರಿ ಬದಿ ಮರ ರಸ್ತೆ ಮಧ್ಯ ಸಿಲುಕಿ ||

ಮೋರೆ ಮುಳ್ಮುಳ್ಳುಗೆ
ಕಾಲ್ತಲೆ ಮೈ ನಡ ಹುಳ್ಹುಳ್ಳಗೆ
ಬೆಳಕ್ಬಿದ್ದರಷ್ಟೇ ಕಾಣೋದು ಬೆಳ್ಬೆಳ್ಳಗೆ
ಅಷ್ಟಕ್ಕೇ ಏನಾಟ ಕಥೆ ಕುಣಿದ್ಹೊರಗೊಳಗೆ ||

ಕವಿ ಕಳ್ಳರು ಸುಳ್ಳರು
ಸುಮ್ಸುಮ್ಮನೆ ಹೊಗಳುವರು
ದೂರದ ಬೆಟ್ಟ ಬರಿ ನುಣ್ಣಗೆ ತಣ್ಣಗಿರು
ಹೋಗಿ ನೋಡದಿದ್ರು ತಿರಿದು ಬರೆಯುವರು ||

ಕೇವಲ ಹುಣ್ಣಿಮೆಗೊಂದು ದಿನ ಫಳಫಳ ಹೊಳೆದು ಮತ್ತೆಲ್ಲ ದಿನ ಕ್ಷಯವಾಗುವ ಚಂದ್ರಮನ ಧಿಮಾಕನ್ನು , ನೇರ ಅವನ್ನಲ್ಲೆ ಎತ್ತಿ ಹಾಡಿ ಲೇವಡಿ ಮಾಡಿ ತೋರುವ ಕವನ, ‘ಧಿಮಾಕಿನ ಚಂದ್ರ’. ಅವನಿಗೆ ಅವನ ಹುಳುಕನ್ನೆ ಎತ್ತಿ ತೋರಿಸುತ್ತ, ಧಿಮಾಕು ಸಾಕು ಎಂಬ ಸಂದೇಶ ರವಾನಿಸುವ ಯತ್ನ ಈ ಕವನದ್ದು.

ಧಿಮಾಕಿನ ಚಂದ್ರ..!
______________________

ಚಂದ್ರಣ್ಣ ನೀ ಮೋಸ
ಎಡಬಿಡಂಗಿ ಸಹವಾಸ
ತಿಂಗಳಿಗೊಂದ್ಸಲ ಮೇಕಪ್ಪಲಿ
ಮುಚ್ಚಿಬಿಡ್ತಿಯ ಬಾಕಿ ದಿನದ ಖಾಲಿ ||

ಅಪ್ಪುಗೆ ಭಾವದ ನಿದ್ರ
ತೀರಿಸಿ ಪ್ರಣಯಿಗಳ ದಾರಿದ್ರ್ಯ
ಪ್ರೇರೇಪಿಸಿ ಪ್ರೀತಿ ಪ್ರೇಮ ಸುಭದ್ರ
ಪರಿಣಯ ಪ್ರಳಯದ ಅವೇಗದ ಸದರ ||

ಕೆರಳಿಸ್ತಿಯ ಸಮುದ್ರ
ಉಬ್ಬರವಿಳಿಸುತ ಅಲೆ ರುದ್ರ
ಉದ್ರೇಕಿಸಿ ಭಾವದಮನ ಉಪದ್ರ
ಸುರಿ ಸ್ಪುರಿಸುತ ಬೇಕು ಬೇಡ ಸಮೃದ್ದ ||

ಆಡಿಸ್ತಿಯ ಆಟ
ಗ್ರಹಣದ ತರ ಕಾಟ
ಗ್ರಹಗತಿ ಕೆಡಿಸೋ ಕೂಟ
ರಾಹು ಕೇತು ಜತೆ ಚೆಲ್ಲಾಟ ||

ಅಂತು ಚಂದ್ರ ಲಾಂದ್ರ
ಬೀಗಬೇಡ ನೀನೆ ಸುರಸುಂದ್ರ
ತೆಪ್ಪಗೆ ಬಿದ್ದಿರು ಮೇಲ್ಮೂಲೆ ಭದ್ರ
ಗೊತ್ತಿದೆ ನೀನಾಳೆ ಅಮಾವಾಸೆ ಚಂದ್ರ ||

– ನಾಗೇಶ ಮೈಸೂರು