00500. ಹೇಗಿದ್ದಾರೋ ಹಾಗೆ …! (ವಯಸೆ ಆಗದ ದೇವರುಗಳು) (ಮಕ್ಕಳಿಗೆ)


00500. ಹೇಗಿದ್ದಾರೋ ಹಾಗೆ …! (ವಯಸೆ ಆಗದ ದೇವರುಗಳು) (ಮಕ್ಕಳಿಗೆ)
______________________________________________

ದೇವರುಗಳಲ್ಲಿ ನಂಬಿಕೆಯಿರುವ ನಾವೆಲ್ಲ ದೇವರನ್ನು ಕಂಡಿರುವುದು ಫೋಟೊಗಳ ಮೂಲಕ, ದೇವಾಲಯದ ಮೂರ್ತಿಗಳಿಂದ, ಚಿತ್ರಕಲೆಯ ಮೂಲಕ ; ಅದು ಬಿಟ್ಟರೆ ಚಲನ ಚಿತ್ರಗಳ ವೇಷ ಭೂಷಣಗಳ ಮುಖಾಂತರ. ಹೀಗೆ ಎಲ್ಲೆ ನೋಡಿರಲಿ, ಯಾರೆ ನೋಡಿರಲಿ – ನಮ್ಮ ತಾತ, ಮುತ್ತಾತ, ಮುತ್ತಜ್ಜರುಗಳಿಂದ ಹಿಡಿದು ನಮ್ಮ ಮಕ್ಕಳು ಮರಿಗಳ ತನಕ – ಈ ದೇವರುಗಳು ಮಾತ್ರ ಹಾಗೆ ಒಂದೆ ತರಹ ಕಾಣುತ್ತಾರೆ. ವಯಸ್ಸಾಗದ ಅದೆ ಯುವ ಮುಖ, ಕಳೆ ಇತ್ಯಾದಿಗಳು ಅವರ ಅಮೃತ ಸಿದ್ದಿ ಅಮರತ್ವದೊಂದಿಗೆ ಬೆರೆತು ಅವರ ಕುರಿತ ವಿಶಿಷ್ಟ ಕಲ್ಪನೆಗಳಿಗೆ ಮತ್ತಷ್ಟು ನೀರೆರೆದು ಪೋಷಿಸಿ, ಅವರನ್ನು ನಮ್ಮ ದೃಷ್ಟಿಗಳಲ್ಲಿ ಮತ್ತಷ್ಟು ವೈಶಿಷ್ಠ್ಯಪೂರ್ಣರೆನಿಸಿಬಿಡುತ್ತವೆ. ಆ ಭಾವದ ಸಾರಾಸಗಟಿನ ಚಿತ್ರಣ ಈ ಕವನ.

  
(Photo source, wikipedia : https://en.m.wikipedia.org/wiki/File:Hindu_deities_montage.png)

ತಾತ ಮುತ್ತಾತನ ಕಾಲದಿಂದಲೂ
ಹೇಗಿದ್ದಾರೋ ಹಾಗೆ ಇರುವರು
ಕೊಂಚವೂ ಕೂಡ ಕೊಂಕಿದಂತಿಲ್ಲ
ವಯಸೆ ಆಗದೆ ನಿಂತಿಹರಲ್ಲ ||

ದೇಗುಲಗಳಲಿ ಬಾಗಿಲ ತೆಗೆದು
ಹೊಸ ಬಾಗಿಲು ಗೋಡೆ ಕಟ್ಟಿದರೂನು
ಒಂದೆ ಸರ್ತಿ ಪ್ರಾಣಮೂರ್ತಿ ರೀತಿ
ಒಂದೆ ಪ್ರಾಯದಿ ನಗುತಿಹ ಕೀರುತಿ ||

ಒಂದೆ ದಿರುಸು ಶಸ್ತ್ರಾಸ್ತ್ರದ ಬಿರುಸು
ಒಂದೆ ಕಿರುನಗೆ ಮುಗುಳ್ನಗೆ ಸೊಗಸು
ಅಲಂಕಾರ ಮೇಲಚ್ಚಿದರೆಷ್ಟು ಸಗಟು
ಮೊತ್ತದಿ ಹಾಗೆ ಉಳಿಯುವ ಒಗಟು ||

ಎಲ್ಲ ದೇವರಿಗೂ ಇಲ್ಲದ ಮೀಸೆ
ಯೌವನ ಪ್ರಾಯ ಸೂಸುವ ಪರಿಷೆ
ಬದಲೇ ಇಲ್ಲದ ಬಿಳಿ ಮುಖವಾಡ
ಕಿರೀಟ ಧರಿಸೆ ಓಡಾಡುತ ಮೋಡ ||

ಗುಡಿಯಲ್ಲಿರಲಿ ಸಿನಿಮಾಗೆ ಬರಲಿ
ಬದಲೇ ಆಗದ ದೇವರ ಖಯಾಲಿ
ಮತ್ತದೆ ಸೋಜಿಗ ತಿಳಿಯೆ ಮೋಜಿಗ
ಮತ್ತವರವರನೆ ನೋಡುತ ಈ ಜಗ ||

———————————————————————
ನಾಗೇಶ ಮೈಸೂರು
———————————————————————

00499. ತಾರುಣ್ಯ ಹುಟ್ಟಿದಾರಣ್ಯ…


00499. ತಾರುಣ್ಯ ಹುಟ್ಟಿದಾರಣ್ಯ…
______________________________________

ತಾರುಣ್ಯವೆಂಬುದು ಪ್ರತಿ ವ್ಯಕ್ತಿಯ ಬಾಳಿನ ಅಮೋಘ ಅಧ್ಯಾಯ. ರೆಕ್ಕೆ ಬಿಚ್ಚಿದ ಹಕ್ಕಿಯಂತೆ, ಅಡೆ ತಡೆಯಿಲ್ಲದೆ ಹಾರುವ ಪತಂಗದಂತೆ ಹಾರಾಡಿಸುವ ಈ ವಯಸಿನ ರಾಗ ಲಹರಿ ಅರಳಿ, ಹೂವ್ವಾಗಿ, ತೆನೆಯಾಗಿ ಮಾಗುವ ಪರಿಯೆ ಸೊಬಗು. ಆ ಹಾದಿಯಲ್ಲಿ ಸಂತಸ , ಹರ್ಷವೆಲ್ಲ ಇರುವಂತೆಯೆ ನೋವು, ದುಃಖ, ಕಲಿಕೆಯೂ ಅಂತರ್ಗತ. ಆ ತಾರುಣ್ಯದ ಹಮ್ಮಿನಲ್ಲಿ ಏನೆಲ್ಲಾ ಘಟಿಸುವುದೆನ್ನುವುದನ್ನು ಅನುಭವಿಸಿ, ಅನುಭಾವಿಸುವುದೆ ಒಂದು ವಿಸ್ಮಯ ಲೋಕ; ಹುಟ್ಟುತ್ತಲೆ ಹೊಸತೊಂದು ಅರಣ್ಯ ಗರ್ಭವನ್ನೆ ಬಿಚ್ಚಿಡುತ್ತಾ ಹೋಗುವ ಆ ರಿಂಗಣದ ಭಾವವನ್ಹಿಡಿಡುವ ಯತ್ನವೆ ಈ ಕಾವ್ಯ – ತಾರುಣ್ಯ ಹುಟ್ಟಿದಾರಣ್ಯ.

ಮನದ ರಿಂಗಣ ತನನ
ವಯಸಿನ ಸಮ್ಮೋಹನ
ಬಗೆಯಾ ತನು ತಿಲ್ಲಾನ
ಅದೇಕೊ ರೋಮಾಂಚನ ||

ಗುರುಗುಟ್ಟಿ ಸರಿ ಪ್ರಾಯ
ಯಾರಿಟ್ಟರೊ ಅಡಿಪಾಯ
ಬುರುಬುರನೇ ಮೊಗ್ಗರಳಿ
ಹೂವ್ವಾದ ದೇಹ ಮುರಳಿ ||

ತನುವರಳುತಲೆ ಆತಂಕ
ನೀನಿರುವೆ ಎಲ್ಲಿಯತನಕ
ಹಿಗ್ಗೊ ಸಿಗ್ಗೊ ಕುಗ್ಗೊ ಸುಖ
ಗೊಂಚಲ ಗೊಂದಲ ಸಖ ||

ಮೂರು ಗಳಿಗೆ ಕೂರುವ ದೆಶೆ
ಆರುಗಳಿಗೆ ಹಾರಾಡುವ ಆಸೆ
ಒಂಭತ್ತರ ವೇದನೆ ಒದ್ದಾಟಕೆ
ಬೇಕಿತ್ತೆ ತೆನೆ ಯೌವನದಾಟಕೆ ||

ಎಲ್ಲಿತ್ತೊ ಹರ್ಷದ ನೆಲ್ಲಿಕಾಯಿ
ಹುಳಿಯಾದರು ಸಿಹಿ ಬಾಯಿ
ರೆಕ್ಕೆ ಬಿಚ್ಚಿದ ಪತಂಗದ ಸಂಗ
ಮೈ ಬಿಚ್ಚಿ ಹಾರಿದ್ಹಕ್ಕಿ ಪ್ರಸಂಗ ||

——————————————————————–
ನಾಗೇಶ ಮೈಸೂರು
——————————————————————–

00498. ಸಿಗಿದು ತೋರಣ ಕಟ್ಟಿ…..!


00498. ಸಿಗಿದು ತೋರಣ ಕಟ್ಟಿ…..!
_________________________________

ಹಳೆಯ ಬಾಲ್ಯದ ಶಾಲಾ ದಿನಗಳಲ್ಲಿ ನೆನಪಾಗುವ ಒಂದು ಸಾಮಾನ್ಯ ಚಿತ್ರಣ – ಸ್ಕೂಲಿಗ್ಹೋಗಲಿಕ್ಕೆ ಹಠ ಮಾಡಿ ನಾನಾ ರೀತಿ, ನಾಟಕವಾಡುವ, ನೆಪ ಹೂಡುವ ಮಕ್ಕಳ ಆಟ. ಅದರಲ್ಲಿ ಕೆಲವು ಮೊಂಡು ಮಕ್ಕಳಿದ್ದರಂತೂ ಹೇಳ ತೀರದು. ಹೆಡೆಮುರಿ ಕಟ್ಟಿ ಹೊಯ್ವ ಶತೃ ಪಾಳಯದ ಸೈನಿಕನಂತೆ, ಜುಟ್ಟೋ, ಕತ್ತಿನ ಪಟ್ಟಿಯೊ, ಕೊನೆಗೆ ಬರದವನನ್ನು ದರದರನೆಳೆದೊಯ್ಯುವ ಅಂಗೈ ತುದಿಯೊ – ಒಟ್ಟಾರೆ ಬಾಯಲ್ಲಿ ರೋಧನ, ರಸ್ತೆಯಲ್ಲಿ ಕಥನ, ಕೈಲಿಡಿದ ಬೆತ್ತದಿಂದ ಮೈಯೆಲ್ಲಾ ನರ್ತನ ಹಾಗೂ ಬೈಗುಳದ ಮಳೆ ಸುರಿಯುತ್ತಿರುವ ಬಾಯಿಂದ ‘ಸಿಗಿದು ತೋರಣ ಕಟ್ಟೆ ಕಟ್ಟುವ’ ವಾಗ್ದಾನ! ಇದರ ಒಂದು ಪುಟ್ಟ ಚಿತ್ರಣ – ‘ಸಿಗಿದು ತೋರಣ ಕಟ್ಟಿ’ ಕವನ…

ನೆನಪಿದೆಯ ದಿನಗಳು
ಸಿಗಿದು ತೋರಣ ಕಟ್ಟಿದ ಬಾಳು
ಅಪ್ಪನೊ ಉಪಾಧ್ಯಾಯನೊ ಗೋಳು
ಕೆಂಗಣ್ಣಲಿ ನುಡಿದಾ ಕೋಲು ||

ಶಾಲೆಗೆ ಹೊರಟರೆ ಅಂದು
ಯಾವ ದಸರೆ ಅದರ ಮುಂದು
ಕೈ ಹಿಡಿದೆತ್ತಿದಳವ್ವ ದರದರ ಸೆಳೆದು
ರಸ್ತೆಯುದ್ದ ನಾಟ್ಯ ಬೆತ್ತವೆ ಮುರಿದು ||

ಅಳುವೆಂದರೆ ಅರ್ಭಟ, ಗಾನ
ಆಕರ್ಷಿಸುವಂತೆ ಸುತ್ತಲಿನ ಜನ
ಬಿಟ್ಟಾಳೆ ಕಾಳಿ ತಾಯಿ ಚಾಮುಂಡಿವನ
ಬಾಸುಂಡೆ ನಿಲಿಸದ ಕೋಲ್ನರ್ತನ ||

ಕರದೆ ದಂಡಾಯುಧ ವೈಭವ
ಕಿವಿ ಹಿಡಿದೆತ್ತಿದಂತೆ ಮೊಲ ಕಾಯವ
ಬಾಯ್ಕುಹರದೆ ವಂಶಾವಳಿಯ ಶಿವ ಶಿವ
ಬೀಸಿಗೆ ಮೇಲೆದ್ದು ಬಿದ್ದ ಮೊಲ ಜೀವ ||

ಸಹಸ್ರ ನಾಮಾರ್ಚನೆ ಸತತ
ತನು ಸಿಗಿದ್ಹಾಕುವ ವಾಗ್ದಾನ ಸಹಿತ
ಹಿಡಿತದಲೆ ಕಟ್ಟಿದ್ದರು ತೋರಣವಾಗಲೆ ಭೂತ
ಸಿಗಿದು ತೋರಣ ಕಟ್ಟುವ ಚರಮ ಗೀತ ||

——————————————————————-
ನಾಗೇಶ ಮೈಸೂರು
——————————————————————-

00497. ಸರಿಯೆ ಸಮಯದ ಗಡುವು?


00497. ಸರಿಯೆ ಸಮಯದ ಗಡುವು?
_______________________________

  
(Photo source, kannada wikipedia – https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Clock-french-republic.jpg)

ಈಗಿನ ಔದ್ಯೋಗಿಕ ಪ್ರಪಂಚದಲೆಲ್ಲರಿಗು ಪರಿಚಿತವಾದ ಪದ್ದತಿ ಕಾಲಗಣನೆ. ಪ್ರತಿಯೊಂದು ನಡುವಳಿಕೆಗೂ ಕಛೇರಿ, ಗಿರಣಿ, ಕಾರ್ಖಾನೆಗಳಲ್ಲಿ ಕಾಲ ಮಾಪನವೆ ಪ್ರಮುಖ ಮಾನದಂಡವಾಗಿ ಫಲಿತಗಳ, ಮಾನಕಗಳ ಅಳತೆಗೂ ಕಾಲವೆ ಪ್ರಮುಖವಾದ ಅಂಶವಾಗುವುದು ಸಹಜವಾಗಿ ಕಾಣುವ ಪ್ರಕ್ರಿಯೆ. ಕಾಲದ ಬೆನ್ನಲ್ಲೆ ಇಣುಕುವ ಶ್ರದ್ದೆ, ಶಿಸ್ತು, ಅಳತೆ ಮಾಡಿಸಿಕೊಳ್ಳಬಲ್ಲ ಸಾಮರ್ಥ್ಯ – ಇತ್ಯಾದಿಗಳ ತೋರಣವನ್ನೆಲ್ಲ ಬಿಚ್ಚಿ ಪಕ್ಕಕ್ಕಿಟ್ಟು ಅದು ಸರಿಯೆ, ತಪ್ಪೆ, ಪ್ರಸ್ತುತವೆ – ಎಂದು ಕೇಳುವ ಕವನ ‘ಸರಿಯೆ ಸಮಯದ ಗಡುವು?’ ಈ ರೀತಿಯ ಕಾಲಗಣನೆ, ಮಾಪನೆ, ಪರಿಗಣನೆ ಸಾಧುವೆ? ಎಷ್ಟರ ಮಟ್ಟಿಗೆ ಅದು ಫಲಿತಾಂಶ, ಗುರಿಸಾಧನೆಗೆ ಪೂರಕ ಎಂಬುದರ ಜಿಜ್ಞಾಸೆಯಲ್ಲಿ ಸಾಗುತ್ತದೆ..

ಶಾಲೆಯ ಎಲ್ಲ ಶಿಸ್ತಿನ ಮಕ್ಕಳು
ಜಯಶೀಲರೆ ಜೀವನದೊಳು?
ಶಿಸ್ತಿಂದ ಕೆಟ್ಟು ಕೆಳ ಕೂತವರುಂಟು
ಶಿಸ್ತಿಲ್ಲದೆ ಕೊಳೆತು ಹೋದವರೆಷ್ಟು? ||

ಆಫೀಸಿನಲ್ಲಿ ಸಮಯಪಾಲಕ ಜನ
ಕುಳಿತಿದ್ದರೆಂದರೆ ಪೂರ್ತಿ ದಿನ
ಉತ್ಪಾದಕತೆ ದಕ್ಷತೆ ಸರಿ ಹೆಚ್ಚುವುದೆ ?
ಕಳೆದ ಗಂಟೆಗಳೆಲ್ಲ ಫಲಿತದ ಸರಿಸದ್ದೆ? ||

ಎಷ್ಟು ಜನ ನೀತಿ ಪಂಚೆರಡು ಲಂಚೊಂದು
ಕಾಟಾಚಾರದಿ ಒಳಗೆ ಕೂತ ಬಂಧು
ಗುರಿ ಫಲಿತಾಂಶಗಳಲವರ ಅಳೆಯದಿರೆ
ಬರಿ ಸಮಯ ಲೆಕ್ಕದೆ ದಕ್ಷತೆ ಕೊಡುವರೆ? ||

ದಿಟದಿ ಕಲಿಸಬೇಕು ಎಲ್ಲೆಡೆ ಶಿಸ್ತಲ್ಲ ಸಮಯ
ಸರಿ ಸಹಜ ಮನೋಭಾವನೆಯ ದಾಯ
ಅದ ಕಲಿತವರೆಲ್ಲ ತಾನಾಗಿ ಎಲ್ಲೆಡೆ ಗೆಲ್ಲ
ಶಿಸ್ತು ಶ್ರದ್ಧೆ ಜವಾಬ್ದಾರಿ ಹಿಂದ್ಹಿಂದೆ ಸಕಲ ||

ಅದಕೆ ಕೆಡಿಸದೆ ತಲೆ ಶಿಸ್ತು ತುಂಬಿದ ನಾಲೆ
ಬಿಟ್ಟವರ ಕ್ರಿಯಾತ್ಮತೆ ಶಕ್ತಿ ಅರಳಲೆ
ಬೆಳೆಸಿ ಆತ್ಮವಿಶ್ವಾಸ ಜವಾಬ್ದಾರಿ ಮನೋಭಾವ
ತಾನಾಗೆ ಕುಗ್ಗುವುದು ಜನ-ಸತ್ಪ್ರಜೆಗಳ ಅಭಾವ ||

—————————————————————
ನಾಗೇಶ ಮೈಸೂರು
—————————————————————

00496. ಬಾಳೆ ಹೊಂಬಾಳೆ


00496. ಬಾಳೆ ಹೊಂಬಾಳೆ
________________________

  

(Picture source : kannada wikipedia – https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Luxor,_Banana_Island,_Banana_Tree,_Egypt,_Oct_2004.jpg)

ಬಾಳು ಬಾಳೆಯ ಗಿಡದ ಹಾಗೆ – ನೆಟ್ಟ ನೇರವೂ ಹೌದು, ಹಗುರವೂ ಹೌದು, ಕತ್ತರಿಸಲು ಸುಲಭವೂ ಹೌದು, ಸಿಹಿಯೂ ಹೌದು, ಅಳಿಸಲಾಗದ ಕಲೆಯೂ ಹೌದು, ಉಣಿಸುವ ಬಾಳೆಲೆಯೂ ಹೌದು, ಆ ಎಲೆಯಷ್ಟೆ ನವಿರಾದ ಜತನವೂ ಹೌದು, ಜಠರದ ಕಲ್ಲು ಕರಗಿಸುವ ಸ್ಪರ್ಶಮಣಿಯೂ ಹೌದು. ಈ ಬಾಳಿನ ಹೊಂಬಾಳೆಯನ್ನು ಕಾಯಿಂದ ಮಾಗಿಸಿ ಹಣ್ಣಾಗಿಸುವ ಬದುಕಿನ ಚಿತ್ರ ಸೂಚಿ – ಈ ಕವನ. ಬಾಳೆ ಪ್ರಬುದ್ದತೆಯಲ್ಲಿ ಮಾಗಿ ಹಣ್ಣಾಗಬೇಕೆಂಬ ಆಶಯವೂ ಇಲ್ಲಿಯದು.

ಬಾಳೇ ಎಳೆ
ಎಳಸು ಬಾಳೆಲೆ
ತೆಳುವಾದ ಹಾಳೆ
ಜತನ ಕಾದರೆ ಬಾಲೆ
ಎಳೆಳೆಯಾಗಿ ತೆರೆಯುವಳೆ ||

ಎಳೆತನ ಕಾಯ
ಜಾರಿಸುವಪಾಯ
ಗಾಳಿಗ್ಹರಿವ ಸಮಯ
ಕಾಯುತ್ತಲೆ ಸರಿ ಪ್ರಾಯ
ಸುತ್ತಿ ಮುಚ್ಚಿಡಲು ಉಪಾಯ ||

ಎಲೆಯ ಸಾರ
ದೋಣಿಯಾಕಾರ
ಸಿಗಿದು ಬೆನ್ನ್ಮೂಳೆ ತರ
ಕತ್ತರಿಸಿ ಮೂರಾಗುವ ಪೂರ
ಎಲೆಯಿಡೆ ಮೂರಾಳಿಗೆ ಆಹಾರ ||

ಬಾಳೇ ಗಿಡ
ನಿಂತಾಗ ನಡ
ಕಲಿಯುತ ಕನ್ನಡ
ಸೆಟೆದು ನಡೆವ ಜಡ
ಕಲಿತೆ ಬೆಳೆ ಬಾಳ ನಿಗೂಢ ||

ಗಿಡವಾಗಿ ಬಗ್ಗೆ
ಎಳೆ ಕಂದು ಕುಗ್ಗೆ
ಅಡಿಪಾಯದ ಮೊಗ್ಗೆ
ಮೈ ಮರೆತು ನುಗ್ಗಿ ನಗ್ಗೆ
ಜೀವಮಾನ ನೋವಿನ ಬುಗ್ಗೆ ||

——————————————————————-
ನಾಗೇಶ ಮೈಸೂರು
——————————————————————-
ಬಾಳೇ = banana (fruit), Life

00495. ಮೊಟ್ಟೆಯಿಡುವ ಕೋಗಿಲೆ, ಹುಡುಕಲೇಕೆ ಕಾಗೆ ನೆಲೆ?


00495. ಮೊಟ್ಟೆಯಿಡುವ ಕೋಗಿಲೆ, ಹುಡುಕಲೇಕೆ ಕಾಗೆ ನೆಲೆ?
_________________________________________

  
(photo source kannada wikipedia : https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Asian_Koel_(Male)_I_IMG_8190.jpg)

ಪ್ರತಿಯೊಬ್ಬ ವ್ಯಕ್ತಿಯೂ / ವ್ಯಕ್ತಿತ್ವವೂ ದೌರ್ಬಲ್ಯ ಮತ್ತು ಪ್ರಾಬಲ್ಯಗಳ ಸಂತುಲಿತ ಮೊತ್ತ. ಪ್ರತಿಯೊಬ್ಬರ ಒಳಗೊ, ಜೀವನ ವಿಶೇಷದಲ್ಲೊ ಇಣುಕಿ ನೋಡಿದಾಗ ಮೇಲ್ನೋಟಕ್ಕೆ ಕಾಣುವ ಪ್ರಾಬಲ್ಯಗಳಷ್ಟೆ, ದೌರ್ಬಲ್ಯಗಳು ಎದ್ದು ಕಾಣುವುದು ಸಹಜ. ಮೊಟ್ಟೆಯಿಡುವ ಕೋಗಿಲೆ, ಹುಡುಕಲೇಕೆ ಕಾಗೆ ನೆಲೆ’, ಅಪ್ರತಿಮ ಗಾನದ ಕೊರಳಿದ್ದು , ಕುರೂಪಿಯ ಹಿದಿಕೆಯ್ಹೊತ್ತು ನಡೆಯಬೇಕಾದ ಅನಿವಾರ್ಯ, ಹಾಗೆಯೆ ಕಾಗೆಯ ಗೂಡಲಿ ಮೊಟ್ಟೆಯಿಟ್ಟು ಮರಿಮಾಡುವ ಅದರ ಸೋಮಾರಿತನದ ಕುಟಿಲತೆಗಳ ವಿವರಣಾತ್ಮಕ ಸ್ತರದಲ್ಲಿ ವಿಶ್ಲೇಷಣೆಗೆ ಯತ್ನಿಸುತ್ತದೆ.

ಗಾನಯೋಗಿ ಕೋಗಿಲೆ ಚಿಗುರಿಗೆ
ತಿಂದ್ಹಾಡುವ ಗಾಯನವೆ ಸೊಬಗೆ
ಮಧುರ ಕಂಠ ಪಾಲಿಸಿದ ದೈವಕೆ
ಸಮತೋಲನದಲಿ ಕಪ್ಪು ರೂಪಕೆ ||

ರೂಪವಷ್ಟಿದ್ದರೆ ಸಾಲದ ಒಗಟೇಕೆ
ಕುಯುಕ್ತಿ ಕುತಂತ್ರಗಳು ಜತೆಗೇಕೆ
ಬಸಿರಿಗೆ ಮೊಟ್ಟೆಯಿಟ್ಟು ಕೋಗಿಲೆ
ಸಾಕಲು ಹುಡುಕಲೇಕೆ ಕಾಗೆನೆಲೆ? ||

ಮುಗ್ದರಿರುವ ಜಗದಲಿ ಪೀಡಕರು
ಯಾವ ಸಮತೋಲನಕೊ ತೇರು
ಪರಪುಟ್ಟನ ಅರಿವಾಗದ ಕೃತಿಮ
ಕಾವಿಕ್ಕಿ ಮೊಟ್ಟೆ ಮರಿಗೆ ಕಾಕಮ್ಮ ||

ಸೋಮಾರಿಯೆ ಚಾಣಾಕ್ಷ್ಯ ಸರಿಯೆ
ಮುಖ್ಯ ನಿಜಾಯತಿ ನೈತಿಕತೆಯೆ
ದೈವದತ್ತ ಕೊರಳಿದ್ದರು ಕೋಗಿಲೆ
ವಂಚಿಸೊ ಮನಸಾದರು ಹೇಗೆಲೆ ? ||

– ನಾಗೇಶ ಮೈಸೂರು

00494. ದೌರ್ಬಲ್ಯ ಪ್ರಾಬಲ್ಯಗಳ ಮೊತ್ತ


00494. ದೌರ್ಬಲ್ಯ ಪ್ರಾಬಲ್ಯಗಳ ಮೊತ್ತ
__________________________________

ಪ್ರತಿಯೊಬ್ಬ ವ್ಯಕ್ತಿಯೂ / ವ್ಯಕ್ತಿತ್ವವೂ ದೌರ್ಬಲ್ಯ ಮತ್ತು ಪ್ರಾಬಲ್ಯಗಳ ಸಂತುಲಿತ ಮೊತ್ತ. ಪ್ರತಿಯೊಬ್ಬರ ಒಳಗೊ, ಜೀವನ ವಿಶೇಷದಲ್ಲೊ ಇಣುಕಿ ನೋಡಿದಾಗ ಮೇಲ್ನೋಟಕ್ಕೆ ಕಾಣುವ ಪ್ರಾಬಲ್ಯಗಳಷ್ಟೆ, ದೌರ್ಬಲ್ಯಗಳು ಎದ್ದು ಕಾಣುವುದು ಸಹಜ. ರೂಪವಿಲ್ಲದ ವ್ಯಕ್ತಿಯ ದೌರ್ಬಲ್ಯವನ್ನು ಅಪರಿಮಿತ ಬುದ್ಧಿಮತ್ತೆಯಿಂದಲೊ ಅಥವಾ ಸಿರಿವಂತಿಕೆಯಿಂದಲೊ ಸರಿದೂಗಿಸುವ ಹುನ್ನಾರದಂತೆ – ಈ ಒಂದು ಸಮತೋಲನವನಿಟ್ಟು ವ್ಯಕ್ತಿ ಹತೋಟಿ ಮೀರಿ ಗರ್ವಿಸದಂತೆ ನೋಡಿಕೊಳ್ಳುವ ನಿಯತಿಯ ಕುಹಕವೆ ಇದಿರಬಹುದೆಂಬ ಕವಿಯ ಅನುಮಾನ, ಈ ಕವನದ ಹಿನ್ನಲೆಯಲಿರುವ ಅಂತರ್ಗತ ಭಾವ.

ದೌರ್ಬಲ್ಯ ಪ್ರಾಬಲ್ಯಗಳ ಮೊತ್ತ
ಸರಿದೂಗಿಸೆ ಸಮತೋಲನದತ್ತ
ವಿಭಜಿಸಿಟ್ಟಿಹನೆ ವಿಧಾತ ಸೂತ್ರ
ಹಂಚಿಬಿಟ್ಟು ಬಗೆಬಗೆಯಾ ಪಾತ್ರ ||

ಅಪ್ರತಿಮ ಸೌಂದರ್ಯರಾಶಿ ಸಿರಿ
ಆಗಿರಬೇಕಿಲ್ಲ ಬುದ್ಧಿ ಮತ್ತೆ ಐಸಿರಿ
ಕೈ ತೊಳೆದು ಮುಟ್ಟುವ ಬಂಗಾರಿ
ಬಣ್ಣನೆ ಕರಗಿದರೆ ಭಾರಿ ದುಬಾರಿ ||

ಅಂತೆಯೆ ಪ್ರಚಂಡ ಬುದ್ಧಿ ಶಾಲಿ
ಇರಬೇಕಿಲ್ಲ ಸುರಸುಂದರ ಕಲಿ
ಸಾಮಾನ್ಯ ರೂಪ ಸಮತೋಲನ
ಬುದ್ದಿ ಮಟ್ಟದೆದುರು ವ್ಯವಕಲನ ||

ಹೊಂದಾಣಿಸುವ ಸರಾಸರಿ ಕಥೆ
ಸಾಮಾನ್ಯ ರೂಪು ಬುದ್ಧಿಯ ಜತೆ
ಆರಕ್ಕೇರದಲೆ ಮೂರಕ್ಕಿಳಿಯದಾ
ಸಮತೋಲನದಲಿಡುವ ಸಂಪದ ||

ವಿಪರ್ಯಾಸದ ಸಂದಿಗ್ದ ಸಿಕ್ಕಲು
ಕಂಡೂ ಕಾಣದ ಕ್ರಮದ ಸುಕ್ಕಲು
ಯಾವುದೊ ಯೋಜನೆಗೆ ಬದ್ದತೆ
ಬೆಸೆದಿಟ್ಟಿರುವ ದೇವರಾಟ ಸಿದ್ದತೆ ||

ಸಮಭಾರ ಯಂತ್ರ ತೂಗಿದ ಹಾಗೆ
ಸರಿದೂಗಿಸುವ ಹವಣಿಕೆಗೆ ತೂಗೆ
ಕುಂದು ಕೊರತೇ ಮುಚ್ಚುವ ಹಾಗೆ
ಎಲ್ಲರಲೇನೊ ಹೆಚ್ಚು ಇಟ್ಟೆ ಸೋಗೆ ||

——————————————————————-
– ನಾಗೇಶ ಮೈಸೂರು
——————————————————————-