00529. ಬೆಳೆಯುತ್ತಾ ಕೂಸು..? 


00529. ಬೆಳೆಯುತ್ತಾ ಕೂಸು..?
_______________________________

  
(Picture from wikipedia – https://en.m.wikipedia.org/wiki/File:Niger_childhood_malnutrition_16oct06.jpg)

ಬೆಳೆಯುತ್ತಾ ಈ ಕೂಸು ?
ಬಾಲಿಶದಿಂದ ಪ್ರಾಯಶಃ ಪಕ್ವ ಪ್ರಬುದ್ಧ ಬುದ್ಧ
ಅದೇ ನೀರು ಗಾಳಿ ಮಣ್ಣು ಮತ್ತದೆ ಗೊಬ್ಬರ
ಜೊತೆಗಿಷ್ಟು ಜೀವನ ಪ್ರೀತಿ ತಬ್ಬಿಕೊಂಡ ಹತ್ತಿರ..

ಬೆಳೆಯೊ ಆಸೆ ಆಗಸದಾಚೆಗೆ
ಖಾಲಿ ಬಯಲ ಪಾರದರ್ಶಕದ ಅಪಾರ..
ಅಡೆತಡೆಯಿಲ್ಲ ಅಂತೆ ಚೌಕಟ್ಟಿಲ್ಲದ ಚಿತ್ರಪಠದೆ
ಗೊಂದಲ ಶಿಶುವನಾಥ ಕಳುವಾದಂತೆ ಸಂತೆ ಗದ್ದಲದೆ..

ಕಸಿವಿಸಿ ಮಗುವಿಗು ಯಾಕೊ
ಕಂಡಾಗೆಲ್ಲ ದಷ್ಠಪುಷ್ಠ ಮಕ್ಕಳ ಮೇಳ
ಕೃಶಕಾಯದೊಣಗಿದ ಬೆರಳಲಿ ಕೊರೆಗ್ಹುಡುಕಿ ಪ್ರಶ್ನೆ
ಉತ್ತರಕೆ ಬದಲು ಮೇಲ್ಹತ್ತಿದ ಸಂದಣಿ ನೂಕುನುಗ್ಗಲೂ..

ತನ್ನಂತಾನೆ ದಿಟ್ಟಿಸಿ ನೋಡಿ ಕೂಸು,
ಏನಿದೆ ಕಮ್ಮಿ? ಅರಿವಾಗದೆ ತೊಳಲಾಡಿ
ಎಲ್ಲೆಡೆಗ್ಹುಡುಕುತ ವಿಹ್ವಲ ಸೂತ್ರವದೇನು ತೋಚದೆ
ದಿಕ್ಕೆಟ್ಟಲೆಯುತ ಪಾತಾಳ ನೆಲ ಜಲ ಮುಗಿಲ ಕೊಳದಲಿ..

ಬೆಳೆದಿದ್ದೇನೊ ನೈಜ ಊದಿದಂತೆ ಹೊಟ್ಟೆ
ಕೃಶಕಾಯದ ಕೈಕಾಲು ಬೆಳೆದುದ್ದ ಹುಲ್ಲಂತೆ
ಸರ್ವಾಂಗೀಣ ಪ್ರಗತಿ ಮಾತಾಗುತಿದೆ ವೇದಿಕೆ ಗರಡಿ..
ಅಧಿಗಮಿಸೀತೆ ಕೂಸು ? ಬಲಿಪಶುವಾಗದೆ ಅವ್ಯವಸ್ಥೆಯ ನೀಗಿ..

– ನಾಗೇಶಮೈಸೂರು

00528. ಏನು ಗೊತ್ತಾ, ವಿಷಯ..?


00528. ಏನು ಗೊತ್ತಾ, ವಿಷಯ..? 
___________________________

   
(photo source wikipedia – https://en.m.wikipedia.org/wiki/File:Leonid_Pasternak_-_The_Passion_of_creation.jpg)

ನಿನಗೊಂದು ವಿಷಯಾ ಗೊತ್ತಾ ..
ಈಚೆಗ್ಯಾಕೊ ಏನೂ, ಸರಿ ಬರೀತಿಲ್ಲಾ ಚಿತ್ತ.
ಬುಳಬುಳ ಜೊಂಪೆ ಬರ್ತಿತ್ತಲ್ಲ ಎಲ್ಲಾ..?
ಯಾಕೊ ಕಣಿ-ಧರಣಿ, ಕೂತಲ್ಲೆ ತಟ್ಟಿ ಬೆರಣಿ..

ಒಂದಲ್ಲ ಹತ್ತಲ್ಲ ನೂರಾರು ವಸ್ತು !
ಸಾಲುಸಾಲು ಸೀಮೆಣ್ಣೆ, ರೇಷನ್ನಿನ ಹಾಗೆ..
ನಿಂತಿತ್ತಲ್ಲ ಕೂಗಾಡಿ, ಜಗಳಕೆ ಬಿದ್ದ ತರ ?
ತಾ ನಾ ಮುಂದು, ಗುದ್ದಾಡಿದ್ದೆಲ್ಲಾ ನಿಶ್ಯಬ್ದ…

ಹುಟ್ಟುತ್ತೇನೊ ಚಿಲುಮೆ, ಅಕ್ಷರ ಮಣಿಯೊಡವೆ
ಪದಪದವಾಗೊ ಮೊದಲೆ, ಯಾಕೊ ಒಲ್ಲದ ಮದುವೆ.
ತಟ್ಟಂತೇನೊ ಬೆಟ್ಟ, ಕುಸಿದಂತೆ ಮನೆ ಮಾಡು
ಪದಗಳವಕವಕೆ ಜಗಳ, ಹುಟ್ಟೊ ಮೊದಲೆ ಹಾಡು..

ಹುಟ್ಟಿದ್ದೂ ಹಸುಗೂಸು, ಮೀರಲೊಲ್ಲ ಬಾಲ್ಯ
ಬೆಳೆಯೊ ಕೂಸಿಗು ಹುಟ್ಟಲೆ, ಏನೊ ಅಂಗವೈಕಲ್ಯ..
ಹೆತ್ತ ಹೆಗ್ಗಣ ಮುದ್ದಿಗೆ, ಕಟ್ಟಿದರು ತೋರಣ ಬಳಗ
ತಡವಿ ಮೇಲೆತ್ತಿ ಆದರಿಸೋಕಿಲ್ಲ, ಪುರುಸೊತ್ತಿನ ಜಗ ..

ಆದರು ಬರೆಯೊದಂತು ತಾನು, ನಿಲಿಸಿರಲಿಲ್ಲ ಚಿತ್ತ
ಯಾಕೊ ಇದ್ದಕಿದ್ದಂತೆ, ಅನಿಸಿಬಿಡುತೆಲ್ಲ ಬರಿ ವ್ಯರ್ಥ
ಹಠದಿ ಸಂಪು ಕೂತಿವೆ, ಹಾಕೆಲ್ಲ ಭಾವಕೆ ಬಿಗಿ ಬೀಗ
ಮನ ಕಳವಳ ಮಾತ್ರ ಹುಡುಕಿದೆ, ಕೀಲಿ ಸಿಕ್ಕೊ ಜಾಗ..

– ನಾಗೇಶಮೈಸೂರು