00531. ಜೋಗುಳ ಬ್ಲಾಗಿನ ನಿದ್ದೆಗೆ, ಕವಿತೆ ಮರಳಿ ಬರುವವರೆಗೆ..


00531. ಜೋಗುಳ ಬ್ಲಾಗಿನ ನಿದ್ದೆಗೆ, ಕವಿತೆ ಮರಳಿ ಬರುವವರೆಗೆ..
_______________________________________

 

ಜೋಜೋ ಮಲಗು ನನ್ನ ಬ್ಲಾಗೆ..
ಮತ್ತವಳು ಕವಿತೆ, ಮರಳುವ ತನಕ
ಮನಶ್ಯಾಂತಿಗರಸಿ, ನಡೆದಿಹಳು ದೂರಕೆ
ಹುಡುಕಿ ತಡಕಿ, ಕಾಲಯಾನದ ಅನಂತ… ||

ಗಳಿಗೆ ದಿವಸ ವಾರ ತಿಂಗಳು ವರ್ಷ ?
ತಿಥಿ ನಕ್ಷತ್ರ ಗೋತ್ರ ಶುಭ ಶಕುನದ ಪಾತ್ರ
ತಿಳಿಯದಂತವಳಿಗು ಮೊತ್ತದೆ, ಅಲೆದಾಟ
ತನುವೇರಿದ್ದೇನೊ ವಾಹನ, ಮನಸೇಕೊ ಅಸ್ವಸ್ಥ.. ||

ಮನದಲೆದಾಟ ವಿಮಾನ, ಹಕ್ಕಿಯ ಜಾಡು
ಹೋಗುವುದೆಲ್ಲೊ ಎಂತೊ, ಕಾಣದ ಗಗನದೆ ಹೆಜ್ಜೆ
ವಿಲವಿಲ ವಿಲಪಿಸಿ ಕವಿಮನ, ತಡೆದು ಬೇಡಿದರು
ಸ್ವಾಭಿಮಾನಿ ಕವಿತೆ ನುಡಿ, ಬಿಡೆನ್ನ ಪಾಡಿಗೆ ನನ್ನರೆಗಳಿಗೆ..||

ಶಾಂತಿಯ ತವರಿಗೆ ತಲುಪಿ, ಮಿಂದು ಜಳಕ
ಮುಗಿದಾಗೆದ್ದು ಬರುವ, ಅರೆಬರೆ ವಚನದ ಚಳಕ
ಬರುವಳೊ? ಬಾರಳೊ? ನೆನೆದು ಗಡಿಬಿಡಿ ಮನ ಧ್ವಂಸ
ಮಾಡಿದ ತಪ್ಪನೆ ಮಾಡಿಸೆ, ಯಾವ ಕ್ಷೀರ, ಎಲ್ಲಿಯ ಹಂಸ ? ||

ಸದ್ದುಗದ್ದಲ ಮಾಡಿ, ಕೆಡಿಸದಿರವಳ ಶಾಂತಿಯ ಯಾತ್ರೆ
ಚಿಮ್ಮುತಿರಲೆಲ್ಲಿಂದಾದರದು, ನೀ ಸುಮ್ಮನಿರು ನನ ಬ್ಲಾಗೇ..
ಅದೇ ಜೋಗುಳ ಪದ ಹಾಡುವೆ, ದಿನವು ನಿನ್ನ ಮಲಗಿಸುವೆ
ಮರಳಿದ ಹೊತ್ತಲಿ ಸಂಭ್ರಮ, ನಟ್ಟಿರುಳಲು ಬಡಿದೆಬ್ಬಿಸುವೆ.. ||

– ನಾಗೇಶಮೈಸೂರು