00546. ಅಹಲ್ಯಾ ಸಂಹಿತೆ – ೦೧ (ಗೌತಮನಾಶ್ರಮದಲ್ಲಿ ಅಹಲ್ಯೆ)


00546. ಅಹಲ್ಯಾ ಸಂಹಿತೆ – ೦೧ (ಗೌತಮನಾಶ್ರಮದಲ್ಲಿ ಅಹಲ್ಯೆ)
__________________________________

ಅಧ್ಯಾಯ – ೦೧:
________________

ತಣ್ಣಗೆ ಬೀಸಿದ ಗಾಳಿ ಸುತ್ತಲ ಹಸಿರು ಗಿಡಮರಗಳನೆಲ್ಲ ನೇವರಿಸಿ, ಮಾತಾಡಿಸಿಕೊಂಡು ಸಮಷ್ಟಿಯಾಗಿ ಕುಟೀರದ ಸುತ್ತ ಸುತ್ತು ಹಾಕಿ ಏನೊ ಆಲೋಚನೆಯಲ್ಲಿ ಮುಂದಿನ ಜಗುಲಿಯಲಿ ಕುಳಿತಿದ್ದ ಅಹಲ್ಯೆಯ ಮೊಗವನ್ನು ನೇವರಿಸಿದಾಗ, ಕಚಗುಳಿಯಿಟ್ಟಂತಾಗಿ ಕಣ್ಣು ತೆರೆದಳು. ಕುಳಿರ್ಗಾಳಿಯ ತಂಪು ಅವಳ ಸುಂದರ ಸುಕೋಮಲ ಕದಪುಗಳನು ಮೆಲುವಾಗಿ ಸವರಿ, ಮುಚ್ಚಿದ ಕಮಲದೆಸಳಿನಂತಿದ್ದ ಕಣ್ಣು ರೆಪ್ಪೆಗಳನ್ನು ತಣ್ಣಗಾಗಿಸಿ ಏನೊ ಆಹ್ಲಾದಕರ ಭಾವ ಒಳಗೆಲ್ಲ ತೀಡಿದಂತಾಗಿ, ಆ ಮತ್ತಿನಲೆ ಮತ್ತೆ ಕಣ್ಮುಚ್ಚುತ್ತ , ‘ ಇದೆಂತಾ ಸೊಗಸಾದ ಸಂಜೆಯಾಗುತ್ತಿರುವಂತಿದೆಯಲ್ಲ…! ಯಾಕೊ ಇನ್ನೂ ಗೌತಮರ ಸುಳಿವೆ ಕಾಣದೆ…?’ ಎಂದು ಆಲೋಚನೆಗಿಳಿಯುವ ಹೊತ್ತಿನಲ್ಲೆ, ಜಗುಲಿಯ ನೆಲದ ಮೇಲೆ ಮಂಡಿ ಮಡಿಸಿಕೊಂಡು ಕುಳಿತಿದ್ದ ಭಂಗಿಯಲ್ಲಿ, ಪಾದದ ತುದಿಯ ಬೆರಳುಗಳಲ್ಲಿ ಏನೊ ‘ಕುಳುಕುಳು’ಗುಟ್ಟುವ ಭಾವ ಉಂಟಾಗಿ, ಸಂಜೆಯ ಹೊತ್ತಿನಲಿ ಸರಿದಾಡುವ ಹುಳು ಉಪ್ಪಟೆಯಲ್ಲಾ ತಾನೆ, ಎಂದು ಬೆಚ್ಚುತ್ತ ಕಾಲೆಳೆದುಕೊಳ್ಳಹೋದವಳ ದಂತದ ಬಣ್ಣದ ಮೊಣಕಾಲಿಗೂ ಅದೆ ಸ್ಪರ್ಷದ ಅನುಭೂತಿಯಾಗಿ, ಅದು ಆಶ್ರಮದಲ್ಲಿ ಸದಾ ಕಾಲ ಸಂಗಾತಿಯಾಗಿರುವ ಪುಟ್ಟ ಜಿಂಕೆಯ ಮರಿ ‘ಹರಿಣಿ’ಯ ನಾಲಿಗೆಯ ಸ್ಪರ್ಷವೆಂದರಿವಾದಾಗ ನಿರಾಳವಾಯ್ತು. ಮತ್ತೆ ಆಚೆಯ ಬದಿಗೆ ಕಾಲು ಮಡಿಸುತ್ತ ಹರಿಣಿಯನ್ನು ಸೆಳೆದು ಮಡಿಲಿಗಿಟ್ಟುಕೊಂಡವಳೆ, ಅದರ ರೇಷಿಮೆಯಂತಹ ತುಪ್ಪಟದ ಮೃದು ಮುಖಕ್ಕೆ ಕೆನ್ನೆಯಾನಿಸಿ ತನ್ನ ಅಷ್ಟೆ ಮೃದು ಮಧುರ ಹಸ್ತಗಳಿಂದ ಅದರ ದೇಹವನ್ನು ನೇವರಿಸುತ್ತ –

“ಯಾಕೆ ದುಗುಡದಲ್ಲಿರುವಂತೆ ಕಾಣುವೆ ಹರಿಣಾ? ಎಲ್ಲಿ ಆ ನಿನ್ನಮ್ಮ ‘ಅಹರ್ನಿಶಿ’? ಸದಾ ಎಡಬಿಡದೆ ಯಾರಾದರೂ ನಿನ್ನ ಕದ್ದೊಯ್ದು ಬಿಡುವರೋ ಎಂಬಂತೆ ನಿನ್ನ ಹಿಂದೆಯೆ ಸುತ್ತುತ್ತಿರುವವಳು, ಇಂದು ನಿನ್ನನ್ನು ನಿರಾಳವಾಗಿ ಆಡಿಕೊಂಡಿರಲು ಬಿಟ್ಟಿದ್ದಾಳಲ್ಲ? ಬಹು ಅಚ್ಚರಿಯಾಗಿದೆಯೆ..?!” ಎಂದಳು.

ಅಮ್ಮ ಹತ್ತಿರವಿಲ್ಲದ ದುಗುಡಕ್ಕೆ ಮೊದಲ ಬಾರಿಗೊಳಗಾದ ಹಸುಗೂಸಿನಂತೆ, ತನ್ನ ಮುಂಗಾಲುಗಳನ್ನು ಮತ್ತಷ್ಟು ಮುಂದಕ್ಕೆ ತೂರಿಸಿ, ಅಹಲ್ಯೆಯ ತೊಡೆಯ ಮೇಲೆ ಸ್ವಸ್ಥವಾಗಿ ಕೂತುಬಿಟ್ಟಳು ಹರಿಣಿ, ತಾಯಿಲ್ಲದ ಹಂಗು ಕ್ಷಣಕಾಲವಾದರೂ ಮರೆಯುವ ಸುಪ್ಪತ್ತಿಗೆಯೆ ದೊರಕಿತೇನೊ ಎಂಬಂತೆ. ಅದರ ಆದರ ಪ್ರದರ್ಶಿಸಿದ ಬಗೆಗೆ ಮತ್ತಷ್ಟು ಪುಳಕಿತಳಾದವಳಂತೆ ಅದನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿ ಹಣೆಗೊಂದು ಹೂ ಮುತ್ತನಿರಿಸಿ, ಹತ್ತಿರದಲಿದ್ದ ಹುಲ್ಲು ಗರಿಕೆಯ ಪುಟ್ಟ ಕಂತೆಯೊಂದನ್ನು ಎಡಗೈಯಿಂದಲೆ ಹತ್ತಿರಕೆಳೆದುಕೊಂಡು ಅದರ ಬಾಯಿಗೆ ಹಿಡಿದಳು ಅಹಲ್ಯೆ. ಜಗದ ಚಿಂತೆಯೆಲ್ಲ ಮರೆತವಳಂತೆ ಅವಳ ಕೈಯ ಹುಲ್ಲನ್ನು ಮೆಲ್ಲ ತೊಡಗಿದ ಹೊತ್ತಲೆ ಹತ್ತಿರದ ಪೊದೆ ಸರಿದಾಡಿದ ಸದ್ದಾದಾಗ, ಅಲ್ಲಿಂದ ಹೊಳೆದ ಫಳಫಳ ಕಣ್ಣುಗಳು, ಅಹರ್ನಿಶಿಯದೇ ಎಂದು ಸುಲಭವಾಗಿ ಕಂಡು ಹಿಡಿದುಬಿಟ್ಟವು, ಅಹಲ್ಯೆಯ ಆ ಚುರುಕಾದ ಅನುಭವಿ ಕಣ್ಣುಗಳು.

“ಅಕೋ, ನೋಡಲ್ಲಿ…ನಿನ್ನಮ್ಮ ಆಗಲೆ ಬಂದುಬಿಟ್ಟಳು. ನಿಜಕ್ಕು ಅದೆಲ್ಲಾದರು ಹೋಗಿದ್ದಳೊ ಅಥವಾ ನಿನ್ನನ್ನು ಆಟವಾಡಿಸಲು ಇಲ್ಲೆ ಎಲ್ಲಾದರೂ ಅವಿತಿದ್ದಳೊ ನಾಕಾಣೆ..ಹೋಗು, ನಿನ್ನ ಮುದ್ದಿನಬ್ಬೆಯ ಮಡಿಲಿಗೆ..’ ಎಂದು ಅದರ ಬೆನ್ನನ್ನು ಸವರುತ್ತಿದ್ದ ಕೈ ಮೇಲೆತ್ತಿಕೊಂಡವಳೆ, ತನಗೆ ತಾನೆ ಹೇಳಿಕೊಳ್ಳುವವಳಂತೆ ‘ಯಾಕಿನ್ನೂ ಗೌತಮನ ಸುಳಿವೆ ಇಲ್ಲವಲ್ಲಾ, ಇಂದು? ಏಕೆ ತಡವಾಯಿತೊ ಕಾಣೆನೆ?’ ಎಂದು ಅಲವತ್ತುಗೊಳ್ಳತೊಡಗಿದಳು..

ಅವಳ ಮಾತು ಮುಗಿಯುವ ಮುನ್ನವೆ, ಅವಳ ಮಡಿಲಿಂದ ಚಂಗನೆ ಎಗರಿದ ಹರಿಣಿ, ಅಹರ್ನಿಶಿಯತ್ತ ಓಡಿ ತಾಯಿಯ ಮೈ ನೆಕ್ಕತೊಡಗಿದಳು. ಅ ಕಕ್ಕುಲತೆಯನ್ನು ನೋಡಿ ನಕ್ಕು ಕರಗಿ ಮರುಳಾಗಿಹೋದ ತಾಯಿ ಅಹರ್ನಿಶಿ, ಮಾತಾ ಮಮತೆಯ ಹೊನಲನ್ಹರಿಸುವವಳಂತೆ ತನ್ನ ಕಂದನ ಮೈಯನೆಲ್ಲಾ ನೆಕ್ಕತೊಡಗಿದಳು ಆಗ್ರಹಪೂರ್ಣ ಪ್ರೀತಿಯನ್ನು ಪ್ರದರ್ಶಿಸುತ್ತ. ಬಹುಶಃ ಅಹಲ್ಯೆಯ ಮಡಿಲಲ್ಲಿದ್ದ ಮಗಳನ್ನು ಕಂಡು ಅವಳಿಗೆ ಒಂದರೆಗಳಿಗೆ ಈರ್ಷೆಯಾಗಿರಲಿಕ್ಕೂ ಸಾಕು; ಆ ಅಧಿಕಾರವೆಲ್ಲ ತನಗೆ ಮಾತ್ರವೆಂಬಂತೆ ಪ್ರವರ್ತಿಸುತ್ತಿದ್ದ ಅವಳತ್ತ ಅರಿಮೆಯ ಕಿರುನಗೆಯೊಂದನ್ನು ಬೀರುತ್ತ ಮೇಲೆದ್ದಳು ಅಹಲ್ಯೆ, ತನ್ನ ಕೈಲಿದ್ದ ಹುಲ್ಲಿನ ಕಂತೆಯನ್ನು ಅಹರ್ನಿಶಿಯತ್ತ ಉರುಳಿಸುತ್ತ.

ಅಸ್ತಮಿಸಲು ಸಿದ್ದನಾಗುತ್ತಿದ್ದ ದಿನಕರ ತನ್ನೆಲ್ಲ ಪ್ರಖರತೆಯನ್ನು ಒರೆಯೊಳಗಿಟ್ಟು, ಮೃದುಲ ಕಾಂತಿಯ ಹಳದಿ ಮಿಶ್ರ ಕೆಂಪು ಕಿರಣಗಳನ್ನು ಸೂಸುತ್ತ ಬಾನೆತ್ತರದ ಗಾಢ ಗಿಡಮರದೆಲೆಗಳ ಸಂದಿನಿಂದ ಇಣುಕುತ್ತಿರುವುದನ್ನು ನೋಡಿದವಳೆ, ‘ಅರೆ, ಇಳಾದೇವೀಯೂ ತನ್ನ ಪರಿಭ್ರಮಣದ ಸುತ್ತನ್ನು ಮುಗಿಸುವ ಹವಣಿಕೆಯಲ್ಲಿದ್ದಾಳೆ, ಆದಿತ್ಯನಿಗೆ ಬೆನ್ನು ಹಾಕುತ್ತ ; ಅನಂತಾಗಸದ ಕತ್ತಲ ಗರ್ಭದತ್ತ ಮುಖ ತಿರುಗಿಸಿಕೊಂಡು ತಂಪಾಗುವ ಹುನ್ನಾರದಲ್ಲಿ ಹೊರಟಿದ್ದಾಳೆ..ಆದರೂ, ಗೌತಮ ಬರುವ ಕುರುಹು ಕಾಣುತ್ತಿಲ್ಲವಲ್ಲ? ಈ ವೇಳೆಗೆ ಅವನ ಬರುವನ್ನು ಸಾರುವ ಗಿಳಿವಂಕಗಳು, ಇನ್ನು ಮೌನದ ವ್ರತ ಹಿಡಿದೆ ಕುಳಿತಿವೆ… ಅದೋ, ಆ ಹತ್ತಿರದ ಕೊಳದಲ್ಲಿನ ಜಕ್ಕವಕ್ಕಿಗಳೂ ಸಹ ಹಗಲಿನ ಸಾಂಗತ್ಯದ ಪಾಳಿಯನ್ನು ಮುಗಿಸಿ, ಇರುಳಿನ ವಿರಹವನ್ನು ಭರಿಸಲಾರದ ಯಾತನೆಗೇನೊ ಎಂಬಂತೆ ಕಣ್ಣೀರಲಿ ಗೋಳಿಡುತ್ತ ಹೋಗಲಾರದೆ, ಇರಲೂ ಆಗದೆ ಒದ್ದಾಡುತ್ತಿವೆ… ಅವು ಬೇರಾಗುವ ಮುನ್ನವೆ ಗೌತಮನೊಡನೆ ಇಲ್ಲೆ ದಡದ ಕಲ್ಲಿನ ಮೇಲೆ ಕೂತು, ಮೈದಡವಿ ಸಮಾಧಾನಿಸುತ್ತ ಅವೆರಡನ್ನೂ ಒಟ್ಟಾಗಿ ಬೀಳ್ಕೊಡುತ್ತಿರಲಿಲ್ಲವೆ ? ಇಂದೇನಾಯ್ತೋ ಕಾಣೆನೆ ?

ಚಿಂತಾಕ್ರಾಂತಳಾಗಿ ಬಿಗಿದ ಮುಖದ ಚಿಂತೆಯ ಯಾವ ಭಾವವೂ ಹೊರಸೂಸದಂತೆ ಬಚ್ಚಿಡುವುದರಲ್ಲಿ ನಿಷ್ಣಾತಳೊ, ಅಥವಾ ಅದವಳ ಸ್ನಿಗ್ದ, ಮುಗ್ದ ಸೌಂದರ್ಯಕೆ ಪ್ರಕೃತಿದತ್ತವಾಗಿ ಬಂದ ವರವೊ – ಆ ಚಿಂತೆಯೂ ಚಿಂತನೆಯಾದಂತೆ ಹುಬ್ಬುಗಳೆರಡನ್ನೂ ಕ್ರೋಢೀಕರಿಸಿ, ಮೇಧಾವಿ ತೀಕ್ಷ್ಣಮತಿ ಹೆಣ್ಣೊಂದರ ಚಿತ್ತಾರವನ್ನು ಕೆತ್ತಿದಾಗ, ಈ ನೋಟಕ್ಕೆ ಬೆರಗಾಗಿ ತಾನೇ ಗೌತಮ ತನ್ನ ಕೈ ಹಿಡಿಯಬೇಕಾಗಿ ಬಂದ ಸಂಧರ್ಭ ನಿರ್ಮಿತವಾಗಿದ್ದು ಎಂದು ನೆನಪಾಯ್ತು – ಇದೇ ರೀತಿಯ ಸಂಜೆಯೊಂದರ ಸೂರ್ಯ ಮುಳುಗುವ ಹೊತ್ತಲ್ಲಿ..

(ಇನ್ನೂ ಇದೆ )

(Link to episode 02: https://nageshamysore.wordpress.com/2016/03/02/%e0%b2%a8%e0%b2%be%e0%b2%97%e0%b3%87%e0%b2%b6%e0%b2%ae%e0%b3%88%e0%b2%b8%e0%b3%82%e0%b2%b0%e0%b3%81%e0%b2%85%e0%b2%b9%e0%b2%b2%e0%b3%8d%e0%b2%af%e0%b2%be%e0%b2%a8%e0%b2%be%e0%b2%97%e0%b3%87%e0%b2%b6/)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s