00548. ಅಹಲ್ಯಾ ಸಂಹಿತೆ – ೦೩ (ನಾರದರ ಕಿತಾಪತಿ!)


00548. ಅಹಲ್ಯಾ ಸಂಹಿತೆ – ೦೩ (ನಾರದರ ಕಿತಾಪತಿ!)
______________________________

(Link to previous episode 02: https://nageshamysore.wordpress.com/2016/03/02/%e0%b2%a8%e0%b2%be%e0%b2%97%e0%b3%87%e0%b2%b6%e0%b2%ae%e0%b3%88%e0%b2%b8%e0%b3%82%e0%b2%b0%e0%b3%81%e0%b2%85%e0%b2%b9%e0%b2%b2%e0%b3%8d%e0%b2%af%e0%b2%be%e0%b2%a8%e0%b2%be%e0%b2%97%e0%b3%87%e0%b2%b6/)

ಅಧ್ಯಾಯ – 02 :

ಆ ಮನಸಿನ ವಿಸ್ಮಯ ತೋಟದಲ್ಲಿ ನೆನಪಿನ ಕೊಂಡಿಗಳಿಗೆ ಗುಂಡಿ ತೋಡುತ್ತ ಅದೆಷ್ಟು ಅಳಕ್ಕೆ ಇಳಿದಿತ್ತೊ ಅಹಲ್ಯೆಯ ಮನ ? ಕುಟೀರದೆದುರಿನ ಸೂರ್ಯಾಸ್ತ ದರ್ಶನದಿಂದ ತಮ್ಮ ಪ್ರಥಮ ಭೇಟಿಯತ್ತ ಓಡಿದ ಮನಕ್ಕೆ, ಆಗಲೆ ಪೂರ್ತಿ ಕತ್ತಲಾಗಿ ಹೋಗಿದ್ದು ಗೊತ್ತೇ ಆಗಿರಲಿಲ್ಲ.

ಅದಾವ ಮಾಯದಲ್ಲೊ ಬಂದು ಕುಟೀರ ಸೇರಿದ್ದ ಗೌತಮ ” ಅಹಲ್ಯೆ.. ಯಾಕಿನ್ನೂ ದೀಪವನ್ನೆ ಹಚ್ಚಿಲ್ಲ?” ಎಂದು ಮನೆಯೊಳಗಿಂದ ದೀಪ ಹಿಡಿದು ಹೊರಬಂದಾಗಲೆ ಅರಿವಾಗಿದ್ದು, ತಾನೆಲ್ಲೊ ಕಳೆದು ಹೋಗಿದ್ದೆನೆಂದು. ನೆನಪಿನ ನೌಕೆಯೇರಿ ಮೈ ಮರೆತು ಹೋದ ಪರಿಗೆ ನಾಚಿಕೆಯಿಂದಲೆ ಅವನ ಕೈಯಿಂದ ಒಂದು ದೀಪವನ್ನು ತೆಗೆದುಕೊಂಡು ಅಂಗಳದ ಗೋಡೆಯ ಗೂಡಿನಲ್ಲಿರಿಸುತ್ತ, ಉಲ್ಲಾಸಭರಿತ ಪ್ರಪುಲ್ಲ ಮನದಲ್ಲಿ ಪತಿದೇವರೊಡನೆ ಮನೆಯೊಳಗೆ ಹೆಜ್ಜೆಯಿಕ್ಕಿದಳು ಗೌತಮನ ಅಹಲ್ಯೆ.

ಹಾಗೆ ಒಳ ಬರುವಾಗ, ಕೈಲಿದ್ದ ಮತ್ತೊಂದು ದೀಪದ ಬೆಳ್ಕಾಂತಿಯ ಕೋಲಿನ ಪ್ರಭೆ ಅಹಲ್ಯೆಯ ಕನ್ನಡಿಯಂತ ನುಣುಪಾದ ವದನದಿಂದ ಹಲವು ಪಟ್ಟು ಗುಣಿತ ಪ್ರತಿಫಲಿಸಿ, ಇಡಿ ಕುಟೀರದ ಒಳಗನೆಲ್ಲ ಕಿರು ಸೂರ್ಯವೊಂದರಂತೆ ಪ್ರಖರವಾಗಿ ಬೆಳಗುತ್ತಿದೆಯೇನೊ ಅನಿಸಿತು. ಅದೇನು ಅವಳ ಸರಳ ಹಾಗೂ ಅದ್ಭುತ ಸೌಂದರ್ಯ ಹೊದಿಸಿದ ಭ್ರಮೆಯ ತೆರೆಯೊ, ಅವಳಿಗೆ ದೈವದತ್ತವಾಗಿ ಬಂದಿದ್ದ ತೇಜೋಯುಕ್ತ ಮೈಕಾಂತಿಯ ಸ್ವಾಭಾವಿಕ ಸೆಲೆಯೊ ಅಥವ ಅವೆರಡೂ ಅಲ್ಲದ ತಮ್ಮ ಕ್ಷಣಿಕ ಭ್ರಾಂತಿಯೊ ತಿಳಿಯಲಿಲ್ಲ. ಆದರೆ ಆ ಅದೃಶ್ಯಪ್ರಭೆಯು ತಂದಿತ್ತ ಅನುಭೂತಿ ಮಾತ್ರ ನಿರಾಕರಿಸಲೆ ಆಗದಷ್ಟು ಸ್ಪಷ್ಟವಾಗಿ ಗ್ರಹಿಕೆಗೆ ನಿಲುಕುತ್ತಿದೆ… ಅವಳ ಜತೆಗೂಡಿದಂದಿನಿಂದ ಅನುದಿನವೂ ಈ ಅನುಭವವಾಗುತ್ತಿದೆ.. ಅವಳ ಒಳಗಾವುದೊ ತೇಜೋಪುಂಜ ಹೊಕ್ಕಿಕೊಂಡಿರುವಂತೆ ಅದೃಶ್ಯ ಶಕ್ತಿ ಪ್ರವಾಹವೊಂದು ಸೇರಿಕೊಂಡು ಸದಾ ಪ್ರವಹಿಸುತ್ತಿರುವುದಂತೂ ಸತ್ಯ…

ಅದೃಶ್ಯ ಶಕ್ತಿ ಪ್ರವಾಹ….!

ಮನದ ಹಿನ್ನಲೆಯಲ್ಲಿ ಇದೆಲ್ಲವನ್ನು ಆಲೋಚಿಸುತ್ತ ಗೌತಮರಿಗೆ, ತಾನೇಕೆ ಈ ಶಕ್ತಿ ಪ್ರವಾಹದ ಕುರಿತು ಅಚ್ಚರಿಪಡುತ್ತಿರುವೆನೆನಿಸಿ ನಗು ಬಂತು.. ಅಹಲ್ಯೆಯ ಜನ್ಮದ ನಿಜವಾದ ಹಿನ್ನಲೆ ತಿಳಿದವರಿಗೆ ಅದು ಅತಿಶಯದ ಮಾತೆ ಅಲ್ಲ.. ! ಅದರಲ್ಲು, ತಮ್ಮ ಜೀವಮಾನವೆಲ್ಲ ಮುಡಿಪಿಟ್ಟ ಪ್ರಯೋಗದ ಮೂಲಕಾರಣ, ಪರೋಕ್ಷ ಸೂತ್ರಧಾರಿಣಿಯೆ ಅವಳಲ್ಲವೆ? ತಾನೇನಾದರೂ ಸಾಧಿಸಬೇಕೆಂದಿದ್ದರೆ, ಸಾಧಿಸಲಿದ್ದರೆ – ಅದರ ಕಡೆಯ ಮೆಟ್ಟಿಲವರೆಗೆ ಹಾಸುಗಂಬಳಿಯಾಗಿರುವವಳೆ ಅವಳು.. ಆ ಶಕ್ತಿಪ್ರವಾಹದ ಮೂಲ ತಮಗಲ್ಲದೆ ಮತ್ತಾರಿಗೆ ಗೊತ್ತಿರಲು ಸಾಧ್ಯ ?

ವಿಶ್ರಾಂತ ಸ್ಥಿತಿಯಲ್ಲಿ ಕುಳಿತ ಗೌತಮನ ಯೋಗಿಮನ ತನುಮನದ ನಿರ್ಬಂಧಗಳನ್ನೆಲ್ಲ ಸಡಿಲಿಸಿ ಬದಿಗಿಟ್ಟು , ಅಹಲ್ಯೆಯ ವರ್ಣನಾತೀತ ಅದ್ಭುತ ಸೌಂದಯವನ್ನು ಆಸ್ವಾದಿಸುತಿರುವಾಗಲೆ, ಅವಳ ಕಾರಣಜನ್ಮದ ಹಿನ್ನಲೆಯೆಲ್ಲ ಮನಃಪಟಲದಲ್ಲಿ ಮರುಕಳಿಸಿ, ಮೆಲುಕಾಗಿ ಮುತ್ತಿಕ್ಕಿದಂತೆ ಕಚಗುಳಿಯಿಡುತ್ತಾ ಸಾಗತೊಡಗಿತು.. ಆ ನಾಟಕದ ಮೊದಲಂಕದ ಪರದೆಯ ಅನಾವರಣ ಈ ಭೂಮಿಯ ಮೇಲೆ ಆಗಿರಲೆ ಇಲ್ಲ.. ಅಷ್ಟೇಕೆ, ಅದು ನಡೆದ ಹೊತ್ತಿನಲ್ಲಿ ಗೌತಮರು ಅದರ ಸೂತ್ರಧಾರಿಯಿರಲಿ, ಪಾತ್ರಧಾರಿಯೂ ಆಗಿರಲಿಲ್ಲ…

ಹೊರನೋಟಕ್ಕೆ ಆ ಪರದೆ ಎದ್ದ ಮೊದಲ ಜಾಗ ಸತ್ಯ ಲೋಕ…

ಅದರ ಪ್ರಮುಖ ಸೂತ್ರಧಾರ ಬೇರಾರೂ ಆಗಿರದೆ ಸೃಷ್ಟಿಕರ್ತ ಬ್ರಹ್ಮದೇವನಾಗಿದ್ದ…!

ಆದರೆ ನಿಜಾರ್ಥದಲ್ಲಿ ಇದಕ್ಕೆಲ್ಲ ಮೂಲ ಬೀಜ ಬಿತ್ತನೆಯಾಗಿದ್ದು ಬ್ರಹ್ಮದೇವನ ಸತ್ಯಲೋಕದಲ್ಲೂ ಅಲ್ಲ…! ಅದರ ಮೂಲ ಬೇರಿನ ಸೃಷ್ಟಿಯಾಗಿದ್ದು ಹಿಮಾಲಯದ ಬದರೀನಾಥದಲ್ಲಿ.. ! ಅದರ ಮೂಲ ಕಾರಣರಾದವರು ಇಬ್ಬರು ಮಹಾನ್ ತಪಸ್ವಿಗಳು – ನರ ಮತ್ತು ನಾರಾಯಣ. ಅವರು ಹುಟ್ಟಿಸಿದ ಅಳುಕಿನ ತರಂಗಗಳು ಬ್ರಹ್ಮಲೋಕದಲ್ಲಿ ಕಂಪನವೆಬ್ಬಿಸಿ, ಮುಂದಿನ ಮಹತ್ನಾಟಕಕ್ಕೆ ನಾಂದಿ ಆಡಿದ್ದವಷ್ಟೆ…

ಇಷ್ಟಕ್ಕೂ ಅದೇನು ಸಾಧಾರಣ ಸಂಘಟನೆಯೆ? ಒಂದರೆಗಳಿಗೆ ಬ್ರಹ್ಮನಂತಹ ಬ್ರಹ್ಮನೆ ನಡುಗಿ ಹೋಗಿದ್ದ ಆ ಪ್ರಕರಣಕ್ಕೆ.. ನರ ನಾರಾಯಣರ ವಿಷ್ಣು ಮೂಲದ ವಿಷಯ ತಿಳಿದಿರದಿದ್ದರೆ ಅವರನ್ನು ತನ್ನ ಶತ್ರುಗಳೆಂದೆ ನಿರ್ಧರಿಸಿಬಿಡುತ್ತಿತ್ತೊ ಏನೊ, ಆ ಗಳಿಗೆಯ ಅವನ ಮನಸ್ಥಿತಿ..

ನರ-ನಾರಾಯಣರಿಬ್ಬರು ತುಂಬು ಪ್ರಾಯದ ಅಸಾಮಾನ್ಯ ವಿಜ್ಞಾನಿಗಳು. ಅಸಾಧಾರಣ ತಪೋನಿರತ ಮುನಿ ಶ್ರೇಷ್ಠರು. ಹುಟ್ಟಿದ ಹೊತ್ತಿನಿಂದಲೆ, ಜನ್ಮದತ್ತವಾಗಿ ಅಪರೂಪದ ಜ್ಞಾನ, ಫ್ರೌಢಿಮೆ, ತಿಳುವಳಿಕೆಗಳ ನೈಸರ್ಗಿಕ ಮಹಾನ್ ಸಾಗರವನ್ನೆ ಒಡಲಲಿಟ್ಟುಕೊಂಡ ಅದ್ಬುತ ಸೃಷ್ಟಿ ರತ್ನಗಳು. ಬ್ರಹ್ಮಸೃಷ್ಟಿಯ ಮೂಲ ಪ್ರಕ್ರಿಯೆಯನ್ನೆ ಅಧಿಗಮಿಸಿ, ತಾವಾಗಿ ತಮ್ಮದೇ ಆದ ವಿಶಿಷ್ಠ ಹಾದಿಯಲ್ಲಿ ಸ್ವಯಂಭುಗಳಾಗಿ ಜನಿಸಿದ ಕಾರಣಕ್ಕೊ ಏನೊ, ಎಲ್ಲ ಅವರನ್ನು ಅವತಾರ ಪುರುಷರೆಂದೆ ಕರೆಯುತ್ತಿದ್ದುದು. ಸಾಲದೆಂಬಂತೆ ಎಣಿಕೆಗೆ ನಿಲುಕದಷ್ಟು ಬಾಹುಬಲ; ಅಸ್ತ್ರಶಸ್ತ್ರಾದಿ ಸಂಗ್ರಹಗಳ ಪ್ರಯೋಗ ಬಲ್ಲ ವೀರಾಧಿವೀರರು. ಸ್ವತಃ ಸೃಷ್ಟಿಕರ್ತ ಬ್ರಹ್ಮನೂ ತನ್ನ ಸೃಜಿಸುವ ಕಾರ್ಯದಲ್ಲಿ ಉಂಟಾಗುವ ಅದೆಷ್ಟೊ ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಅವರ ಸಲಹೆ, ಸಹಾಯಕ್ಕಾಗಿ ಅವರಲ್ಲಿಗೆ ಬಂದು ಸಮಾಲೋಚನೆ ನಡೆಸುತ್ತಿದ್ದನೆಂದ ಮೇಲೆ ಅವರ ಮಹಾನ್ ಸಿದ್ಧಿಯ ಮಹಿಮೆ ಅರಿವಿಗೆ ನಿಲುಕೀತು…!

ಅಂತಹವರು ಬೇರೆಲ್ಲ ಗೊಡವೆ ಬಿಟ್ಟು, ನಾರುಮಡಿಯುಟ್ಟು ಬದರಿಕಾಶ್ರಮದಲ್ಲಿ ಬೃಹತ್ ಆಶ್ರಮವೊಂದನ್ನು ನಿರ್ಮಿಸಿಕೊಂಡು ಧೀರ್ಘ ತಪದಲ್ಲಿ ಮುಳುಗಿಹೋಗಿದ್ದರು, ಹೊರ ಜಗದ ಪರಿವೆಯಿರದವರಂತೆ. ಆದರೆ ಅಲ್ಲಿ ಹೊರನೋಟಕ್ಕೆ ಕಾಣದ ಸತ್ಯವೆಂದರೆ – ಅವರಿದ್ದ ಆ ಜಾಗ ಬರಿಯ ಆಶ್ರಮವಲ್ಲಾ ಎಂಬುದು. ಮೇಲ್ನೋಟಕ್ಕೆ ಸಾಮಾನ್ಯ ಕುಟಿಯಂತೆ ಕಂಡರು, ಕೇವಲ ಇಬ್ಬರು ತಪಸ್ವಿಗಳ ವಾಸಕ್ಕೆ ಅಷ್ಟು ದೊಡ್ಡ ಅನುಕೂಲದ ಅಗತ್ಯವಿರಲಿಲ್ಲ.. ಆದರೆ ಆ ತಾಣವೆ ನರ-ನಾರಾಯಣರ ಅಂತರಂಗಿಕ, ನಿಗೂಢ ಪ್ರಯೋಗಶಾಲೆಯಾದ ಕಾರಣ, ಅವರಿಗೆ ಬೇಕಾದೆಲ್ಲಾ ಪರಿಕರ – ಪರಿಸರಗಳು ಅಲ್ಲಿ ನೈಸರ್ಗಿಕವಾಗಿ ವಿಕಸಿತಗೊಂಡಿದ್ದವೆನ್ನುವುದು ಆ ವಿಶಾಲ ತಾಣದ ಪ್ರಮುಖ ಹಿನ್ನಲೆ.

ಆದರೆ ಅಲ್ಲಿ ನಡೆಯುತ್ತಿರುವ ಪ್ರಯೋಗಗಳಾದರು ಏನು ? ನರ ನಾರಾಯಣರು ಯಾವ ಕುರಿತು ಸಂಶೋಧನೆ ನಡೆಸಿದ್ದಾರೆ ? ಎನ್ನುವುದು ಸ್ವತಃ ಆ ಬ್ರಹ್ಮನಿಗು ಗೊತ್ತಿರಲಿಲ್ಲ.. ಯಾವುದೊ ಮಹತ್ತರವಾದ ಸಿದ್ದಿಯ ಸಲುವಾಗಿ ಏನೊ ಮಹಾನ್ ಯಾಗದಲ್ಲಿ ತೊಡಗಿಸಿಕೊಂಡಿರಬೇಕೆಂಬ ಅನುಮಾನ ಬಿಟ್ಟರೆ, ಖಚಿತವಾಗಿ ಇಂತೆ ಎಂದು ಗೊತ್ತಿರಲಿಲ್ಲ. ಅವನು ಅದುವರೆವಿಗು ಸಲಹೆ, ಸಹಾಯ ಬಯಸಿ ಹೋದ ಪ್ರತಿ ವಿಷಯದಲ್ಲು ಅವರಿಬ್ಬರಿಗಿರುವ ಮಾಹಿತಿ, ಪಾಂಡಿತ್ಯ, ಜ್ಞಾನ ಅವನನ್ನೆ ದಂಗುಬಡಿಸಿಬಿಟ್ಟಿದೆ. ಅಂತೆಯೆ ಪ್ರತಿ ಬಾರಿಯೂ ಅನುಮಾನ ಹುಟ್ಟಿಸಿಬಿಟ್ಟಿದೆ, ಅವರ ಪ್ರಯೋಗದ ಮೂಲ ವಿಷಯ ಯಾವುದಿರಬಹುದೆಂದು. ಕೆಲವೊಮ್ಮೆ ತತ್ವ ಜ್ಞಾನಿಗಳಿರಬಹುದೆಂದು ಅನಿಸಿದರೆ ಮತ್ತೊಮ್ಮೆ ಮಹಾನ್ ಜೀವಶಾಸ್ತ್ರಜ್ಞರೆನಿಸಿದ್ದುಂಟು. ಮಗದೊಮ್ಮೆ ಸಮಾಜ ಶಾಸ್ತ್ರಜ್ಞರೆನಿಸಿದರೆ ಇನ್ನೊಮ್ಮೆ ಅದ್ಭುತ ರಣನೀತಿಜ್ಞರೆನಿಸಿದ್ದು ಉಂಟು. ಬಹುಶಃ ಅರವತ್ನಾಲ್ಕು ಕಲೆಯ ಪರಿಪೂರ್ಣ ಪಟುತ್ವ ಹಾಗು ಸರ್ವ ಸಿದ್ದಿ ಪಡೆದ ಮಹಾನುಭಾವರೆಂದೆ ಬ್ರಹ್ಮದೇವನ ಅಭಿಮತ. ಅಂತೆಯೆ ಅವರಿಬ್ಬರ ಮೇಲೆ ಅಮಿತ ಗೌರವ ಆತನಿಗೆ.

ಅದೆಲ್ಲವೂ ಹೇಗೊ ಸ್ವಸ್ಥವಾಗಿ, ಚೆನ್ನಾಗಿಯೆ ಇತ್ತು – ಆ ದೇವೇಂದ್ರನ ಕಿತಾಪತಿ, ಬೇಡದ ರಗಳೆ ಹುಟ್ಟಿಸುವ ತನಕ… ಜತೆಗೆ ಇದನ್ನೆಲ್ಲಾ ಹಿನ್ನಲೆಯಲ್ಲಿ ನಿಂತೆ ಸಂಘಟಿಸಿ, ಕೊನೆಯಲ್ಲಿ ತಾವು ಮಾತ್ರ ‘ನಾರಾಯಣ, ನಾರಾಯಣ’ ಎಂದು ತಂಬೂರಿ ಮೀಟಿಕೊಂಡು ಮಾಯವಾಗಿಬಿಡುವ ನಾರದ ಮಹರ್ಷಿಗಳ ತೀಟೆ ಕುಚೋದ್ಯದ ಪ್ರಚೋದನೆಯ ಸಫಲ ಸರಕಾಗುವ ತನಕ.. ನರ-ನಾರಾಯಣರು, ತಮ್ಮ ಅಸೀಮ ಸಾಧನೆಯ ಹಾದಿಯಲ್ಲಿ ತಪೋನಿರತರಾಗಿ ತಮ್ಮ ಪಾಡಿಗೆ ತಾವು ಹಿಮಾಲಯದ ತಪ್ಪಲಿನ ಬದರಿನಾಥದಲ್ಲಿ ಆಶ್ರಮ ಕಟ್ಟಿಕೊಂಡು ಜಪತಪ ಮಾಡಿಕೊಂಡಿದ್ದ ಹೊತ್ತು. ಆ ರೀತಿ ಅವರಿಬ್ಬರ ಬಲ, ಸಾಧನೆಗಳಿಂದ ಕಂಗೆಟ್ಟು ಭಯ ಭೀತನಾದವರಲ್ಲಿ ಅಗ್ರಗಣ್ಯ – ದೇವರಾಜ ಇಂದ್ರ. ಪಾಪಾ… ಇದರಲ್ಲೂ ನೇರ ಅವನ ತಪ್ಪೇನೂ ಇರಲಿಲ್ಲ.. ಎಲ್ಲಾ ಆರಂಭವಾದದ್ದು ಕಲಹ ಪ್ರಿಯ ನಾರದ ಮುನಿಗಳು ಅವನ ಆಸ್ಥಾನಕ್ಕೆ ಪ್ರಸ್ಥಾನ ಮಾಡಿದ ಹೊತ್ತಿನಿಂದ…!

ಅಪ್ಸರಾದಿಗಳ ಜತೆ ಸುಗಮಕೂಟ ನಿರತನಾಗಿ, ಸುಖ ಲೋಲುಪ್ತತೆಯಿಂದ ಗಾನನೃತ್ಯಸುರಾಮೋದಗಳಲ್ಲಿ ಕಳುವಾಗಿದ್ದ ಹೊತ್ತಲಿ, ಅದೊಂದು ಮುಂಜಾವು, ಪಲ್ಲಂಗದಲ್ಲಿ ಮತ್ತಿನಲ್ಲೆ ಪವಡಿಸಿದ ಹೊತ್ತಲಿ ನಾರದರು ಬಂದು ಕಾಯುತ್ತಿರುವ ಸುದ್ದಿ ತಿಳಿದಾಗ ಗಡಬಡಿಸಿ ಮೇಲೆದ್ದು ಉಟ್ಟಬಟ್ಟೆ, ದಿರಿಸನ್ನೆ ಸರಿಪಡಿಸಿಕೊಂಡು ಓಡಿ ಬಂದಿದ್ದ.

ಕೆದರಿದ ಕೇಶರಾಶಿ, ಮತ್ತಿನ ಅಮಲಿನ ಕಣ್ಣುಗಳೇ ಎಲ್ಲಾ ಕಥೆಯನ್ನು ಹೇಳುತ್ತಿರುವಾಗ ಅವನು ಬಾಯಿಬಿಟ್ಟು ಹೇಳದಿದ್ದರೂ, ಎಲ್ಲಾ ಸ್ವಯಂ ವೇದ್ಯವಾಗುವಂತಿತ್ತು..

“ಅನುಭವಿಸು ಸುರೇಂದ್ರ..ಅನುಭವಿಸು. ಈಗಿರುವ ಸುಖ ಇನ್ನೆಷ್ಟು ದಿನ ಕಾಲು ಮುದುರಿಕೊಂಡು ನಿನ್ನ ಕಾಲ ಬಳಿಯಿರುವುದೋ ಬಲ್ಲವರಾರು? ಇರುವತನಕ ಚೆನ್ನಾಗಿ ಅನುಭವಿಸಿಬಿಡು…”

ದನಿಯಲಿದ್ದ ವ್ಯಂಗ್ಯವನ್ನು ಅರಿಯಲಾರದಷ್ಟು ಮುಗ್ದನಲ್ಲ ದೇವರಾಜ. ಅವರನ್ನು ಕಾಯಿಸದೆ ಭೇಟಿ ಮಾಡಬೇಕೆಂದು ತಾನಿದ್ದ ಸ್ಥಿತಿಯಲ್ಲೆ ಎದ್ದುಬಿದ್ದು ಓಡಿ ಬಂದಿದ್ದ. ಅದರಲ್ಲೂ ನಾರದ ಮುನಿಗಳೆಂದರೆ ತುಸು ಅಂಜಿಕೆ ಹೆಚ್ಚೆ…ತಂದು ಹಾಕಿ ತಮಾಷೆ ನೋಡುತ್ತಾನೆಂದು ಎಲ್ಲಾ ಸುಮ್ಮನೆ ಹೇಳುತ್ತಾರೆಯೆ? ಅದರಲ್ಲೂ ಈ ಬ್ರಹ್ಮಚಾರಿಗೆ ಏನೆ ಮಾಡಬೇಕೆಂದರೂ ಸಮಯ ಹಾಸಿಕೊಂಡು ಬಿದ್ದಿರುತ್ತದೆ – ಏನು ಹೆಂಡಿರೆ, ಮಕ್ಕಳೆ ? ಬರಿ ಲೋಕ ಸಂಚಾರವಷ್ಟೆ ಅನ್ನುವುದು ಬಿಟ್ಟರೆ ಬೇರೆ ಕೆಲಸವಾದರೂ ಏನಿರುತ್ತದೆ?

“ಕ್ಷಮಿಸಬೇಕು ಮುನಿವರ್ಯ..ತಮ್ಮಂತಹ ಮಹನೀಯರನ್ನು ಕಾಯಿಸಬಾರದೆಂಬ ಅವಸರದಲ್ಲಿ ಇದ್ದ ಹಾಗೆ ಬಂದುಬಿಟ್ಟೆ… ರಾತ್ರಿಯ ಗೋಷ್ಟಿಯಲ್ಲಿ ಸರಿಹೊತ್ತು ಮೀರಿ ಗಾನ ಪಾನಗಳಲ್ಲಿ ಮುಳುಗಿದ್ದ ಕಾರಣ ಹೀಗಾಯಿತು..ಮತ್ತೆ ಹೀಗಾಗದಂತೆ ನೋಡಿಕೊಳ್ಳುವೆ…”

(ಇನ್ನೂ ಇದೆ)

(Link to the next episode 04: https://nageshamysore.wordpress.com/2016/03/04/00549-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%aa/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s