00558. ವಿಶ್ವ ವನಿತೆಗೊಂದು ಪದ…


00558. ವಿಶ್ವ ವನಿತೆಗೊಂದು ಪದ…
_________________________

  
ನಿನಗನಿಸಿದ್ದೆಲ್ಲಾ ಮಾಡು
ಯಾರಿಟ್ಟವರಿಲ್ಲಿ ಕಟ್ಟುಪಾಡು ?
ಯಾರು ಹೇಳಬೇಕೇಕೆ ಹಿಡಿವ ಜಾಡು
ಹೆಣ್ಣೇ ನೀನಿಲ್ಲದೆ ಯಾವುದಿದೆ ನಾಡು ?

ನೀತಿ ನಿಯಮ ಸಂಹಿತೆ.
ಇಟ್ಟವರಿಗೇನು ಬದುಕಿ ಗೊತ್ತೆ ?
ಹೆಣ್ಣೊಳಗಿನಾಳ ಭ್ರೂಣದಾ ಪಾತಾಳ
ಬಂದರಲ್ಲೆ ಹುಟ್ಟಿ – ಶಾಸ್ತ್ರ ಬರೆದೇನು ಬಹಳ !

ಕಿತ್ತೊಗೆಯಬೇಡ ಸಂಕೋಲೆ
ಬಂಧ ಬಿಗಿದದ್ದು ನಂಟಿನ ಮಾಲೆ
ಬೇಡಿಯಾಗಿಸಿದರೆ ಹೊಡಿ ಗೋಲಿ ನಡೆದು
ಮುಟ್ಟಲೆನಿತಿದೆ ಗಮ್ಯ ದಾಟಿದರೆ ಸರಹದ್ದು !

ಪಾತ್ರಗಳವು ಸರಿ ನೂರಾರು
ಸರಿತಪ್ಪ ಲೆಕ್ಕ ಬಾಳಿಗಿಟ್ಟವರಾರು ?
ನಿನಗೊಂದು ಸತ್ಯ ತಿಳಿದಿರಲಿ ಶ್ರೀವನಿತೆ
ನೀ ಹಿಡಿದ ಜ್ಯೋತಿಯಲಿ ಹಚ್ಚುವುದೇ ಹಣತೆ..

ಕಿರುಚಿ ಕೂಗಾಟ ವಾದಬೇಧ ಮಾತು
ಯಾಕೆ ಬೇಕು ಎಲ್ಲರ ದೋಸೆಯು ತೂತು
ಹಮ್ಮುಬಿಮ್ಮುಗಳ ಬಿಟ್ಟು ನಡೆಯೋಣ ಒಟ್ಟು
ದಾರಿ ತಪ್ಪದಂತೆ ಪರಸ್ಪರ ಹಿಡಿದು ಸಡಿಲ ಜುಟ್ಟು..

– ನಾಗೇಶ ಮೈಸೂರು
೦೬. ಮಾರ್ಚ್. ೨೦೧೬

(Picture from kannada wikipedia : https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Frauentag_1914_Heraus_mit_dem_Frauenwahlrecht.jpg)

00557. ಈ ಶಿವರಾತ್ರಿಗೊಂದು ಕ್ಯಾತೆ..


00557. ಈ ಶಿವರಾತ್ರಿಗೊಂದು ಕ್ಯಾತೆ..
___________________________ 

  

ನಿನ್ನ ಏನ ಬೇಡಲೂ ಭಯವೋ ಶಿವನೆ
ನೀ ಬೇಡಿದ್ದೆಲ್ಲಾ ಕೊಟ್ಟೇ ಬಿಟ್ಟರೆ ?
ನಿನ್ನ ನಂಬಿ ಕೈ ಹಿಡಿದುಬಿಡುವೆ ಗಟ್ಟಿ
ಜಟ್ಟಿಯಂತೆ ನಂಬದೆ ನನದೇ ಶಕ್ತೀ..

ಶಿವರಾತ್ರಿಯಲ್ಲ ಲೆಕ್ಕ ಅಕ್ಕಪಕ್ಕ
ವರ್ಷಪೂರ ದಿನಗಳ ಬದುಕು ಬವಣೆ
ಏಗಿರುವೆ ನೀಸುತ ಕಷ್ಟವೊ ಸುಖವೊ
ವರ ಸಿಕ್ಕಿಬಿಟ್ಟರದೆ ಶ್ರದ್ಧೆಗೆ ಕೊನೆಯೊ…

ಕಿಲಾಡಿ ನೀನದಕೆ ಪೂರ ವರ್ಜಿಸಿ
ಉಪವಾಸದ ಹೆಸರಲಿ ಇಟ್ಟೆ ದೂರ
ಹಸಿದ ಹೊಟ್ಟೆ ಬೇಡಿದರು ಹೆಚ್ಚು ಲಭ್ಯ
ಹೊತ್ತೋಗಲೆಲ್ಲಿ ಕಸು? ಬಿಲ್ವಪತ್ರೆ ಮಾತ್ರ..

ಕ್ಷುಲ್ಲಕ ಮನದ, ಗಡಿಯಾರ ಕ್ಷುದ್ರ
ಪ್ರತಿ ಅರತಿ ಅರ್ಚನೆಗು, ಅಮಿಷ-ನಿಮಿಷ
ಆಚರಿಸುವುದೆ ಸಡಗರದೆ, ಪಡೆಯೆ ಸೌಖ್ಯ
ಭಯವೆಂದರೆ ನಗುವರೇಕೊ, ಮಂದಿ ಲೌಕಿಕ..

ನಿಜದಿ ಪ್ರಭುವೆ ಭೀತಿ – ಪಡೆಯಲಲ್ಲ ಭಿಕ್ಷೆ
ಕೇಳಿದರೇನನೊ ಬದಲಿಗೆ ? ಕಪಟ ಹುನ್ನಾರ
ಸಂಚಿದು ಮನದೆ ನಾಟಕ, ಪಡೆಯೆ ಸಕಲ
ಬೇಡವೆಂದರು ಕೊಟ್ಟರೆ, ತಪ್ಪು ನನದಲ್ಲ – ನಿನದೆ !

– ನಾಗೇಶ ಮೈಸೂರು
೦೬. ಮಾರ್ಚ್. ೨೦೧೬

(picture courtesy / source – http://kannada.oneindia.com/img/2011/03/02-shiva9.jpg)

00556. ಅಹಲ್ಯಾ ಸಂಹಿತೆ – ೧೦ (ಅಪ್ಸರಗಣ ಆಶ್ರಮದತ್ತ)


00556. ಅಹಲ್ಯಾ ಸಂಹಿತೆ – ೧೦ (ಅಪ್ಸರಗಣ ಆಶ್ರಮದತ್ತ)
___________________________________

(Link to previous episode 09 : https://nageshamysore.wordpress.com/2016/03/06/00555-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%af/)

ಅಧ್ಯಾಯ – 05
————-

“ಇದೇನೆ ಇದು ? ಅಕಾಲದಲ್ಲಿ ಮಳೆ ಅನ್ನುವ ಹಾಗೆ ಈ ಭಣಗುಟ್ಟುವ ದಟ್ಟಕಾಡಿನಲ್ಲಿ ಇದ್ದಕ್ಕಿದ್ದಂತೆ ವಸಂತ ಬಂದಂತಿದೆ ? ಇಲ್ಲಿನ ಗಿಡಗಳು ಹೂ ಬಿಟ್ಟಿದ್ದನ್ನು ನೋಡಿಯೆ ಯುಗಗಳಾಗಿ ಹೋದ ಹಾಗೆ ಅನಿಸಿರುವಾಗ, ಇದೆಲ್ಲಿಂದಲೊ ಇದ್ದಕ್ಕಿದ್ದಂತೆ ಬಂದಿಳಿದುಬಿಟ್ಟಿದೆಯಲ್ಲ ಈ ನವಚೇತನ ? ಬರಿಯ ಹೂಗಳು ಮಾತ್ರವೇನು ? ನೋಡಲ್ಲಿ ಹೇಗೆ ಝೆಂಕರಿಸಿವೆ ದುಂಬಿಗಳು..! ಎಲ್ಲಿ ಹೋಗಿತ್ತೊ ಈ ಸುವಾಸನಭರಿತ ಸುಗಂಧಪೂರ್ಣ ತಂಗಾಳಿ..? ”

“ಹೌದಲ್ಲವೆ..? ನಾವಿಲ್ಲಿ ಹುಟ್ಟಿಧಾರಭ್ಯ, ಬಾಳಿ ಬದುಕಿದ ಈ ಗಳಿಗೆಯವರೆಗೂ ಒಮ್ಮೆಯಾದರು ಇಲ್ಲಿ ಹೂ ಅರಳಿದ್ದು ಕಾಣಲಿಲ್ಲ.. ವಸಂತನಾಗಮನವನ್ನು ಕಾಣಲಿಲ್ಲ.. ನರನಾರಾಯಣರ ತಪೋನಿಷ್ಠೆಯ ಕಾವಿಗೆ ಕಮರಿ ಇಂಗಿಹೋದವೊ ಎಂಬಂತೆ ಎಲ್ಲವು ಒಂದು ಬದಲಾಗದ ಸ್ತಬ್ದಚಿತ್ರದಂತಾಗಿಬಿಟ್ಟಿದ್ದವಲ್ಲ ? ಇದೇನಿದು ಈ ಬದಲಾವಣೆ…? ತಪಸ್ವಿಗಳ ತಪ ಮುಗಿದುಹೋಯ್ತೇನು ?”

ಮರದ ಟೊಂಗೆಯೊಂದರ ಕವಲು ಮೂಲೆಯ ದೊಡ್ಡ ಪೊಟರೆಯೊಂದನ್ನೆ ಗೂಡನ್ನಾಗಿ ಮಾಡಿಕೊಂಡಿದ್ದ ಗಂಢಭೇರುಂಡದ ತಲೆಗಳೆರಡು ಹೀಗೆ ಮಾತನಾಡಿಕೊಳ್ಳುತ್ತಿದ್ದ ಅದೇ ಹೊತ್ತಲ್ಲಿ, ದೇವರಾಜನ ಅಪ್ಸರೆಯರ ಗುಂಪು ತಮ್ಮ ಬಿಡಾರ ಹೂಡಿದ್ದ ಕುಟೀರದಿಂದ ಹೊರಟು ನಿಂತಿತ್ತು ಕಾರ್ಯಸಾಧನೆಯ ಮೊದಲ ಅಂಗವಾಗಿ. ನಿತ್ಯ ಹಸಿರಿನಿಂದ ತುಂಬಿದ ಕಾನನವಾದರು ಹೂವೆ ಬಿಡದ ಕಡೆ, ಹಣ್ಣು ಕಾಯಾದರು ಬಿಡಲೆಲ್ಲಿ ? ಆಹಾರದ ಮೂಲವಿಲ್ಲದ ಕಡೆ ಯಾವ ಪಶುಪಕ್ಷಿ ಜಾತಿ ತಾನೆ ಬಂದು ಬದುಕುಳಿದೀತು..? ಅದರಿಂದಲೊ ಏನೊ ಆ ಸುತ್ತಲಿನ ಫಾಸಲೆಯಲ್ಲಿ ಹುಡುಕಿದರು ಒಂದು ಜೀವಜಂತು ಕಾಣುತ್ತಿರಲಿಲ್ಲ.

ಹಸಿರು ಗಿಡಮರದ ದಟ್ಟ ಕಾನನದಲ್ಲಿ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿದ್ದುವೊ ಏನೊ ಹೊರತಾಗಿ, ಬರಿಗಣ್ಣಿಗೆ ಕಾಣುವ ಯಾವ ಜೀವಿಯೂ ಅಲ್ಲಿರಲಿಲ್ಲ. ಅಷ್ಟೇಕೆ ? ನರನಾರಾಯಣರು ಅಲ್ಲಿದ್ದ ಕಂದಮೂಲವನ್ನೊ, ಗಿಡದ ಎಲೆಗಳನ್ನೊ ಆಯ್ದು ಒಯ್ದಿದ್ದಿತ್ತೆ ಹೊರತು ಅವರೇನು ತಿನ್ನುತ್ತಿದ್ದರೆಂಬುದು ಒಮ್ಮೆಯೂ ಕಂಡವರಿಲ್ಲ..

ನರನಾರಾಯಣರನ್ನು ಬಿಟ್ಟರೆ ಆ ನಿಗೂಢತಮ ತಾಣದಲ್ಲಿದ್ದ ಮತ್ತೊಂದು ಜೋಡಿಯೆಂದರೆ ಈ ಗಂಢಭೇರುಂಡ ಮಾತ್ರ. ನರನಾರಾಯಣರ ಹಾಗೆಯೆ ಅನೋನ್ಯತೆಯ ಪ್ರತೀಕವೆಂಬಂತೆ ಒಂದೇ ದೇಹವನ್ನು ಹಂಚಿಕೊಂಡ ಎರಡು ತಲೆಗಳ ಆ ಜೀವಿ ಅದು ಹೇಗೊ ಬಂದು ಆ ಕಾಡಿನಲ್ಲಿ ಸೇರಿಕೊಂಡುಬಿಟ್ಟಿತ್ತು. ತಮ್ಮ ನೂರಾರು ಪ್ರಯೋಗಗಳ ನಡುವೆ ಅಂತಹ ವಿಚಿತ್ರ ಜೀವಿಯೊಂದನ್ನು ಪ್ರಯೋಗಾರ್ಥವಾಗಿ ಸೃಜಿಸಿದವರೆ ನರನಾರಾಯಣರು ಎಂದವರೂ ಉಂಟು…

ಅಲ್ಲಿದ್ದ ಎಲೆಗಳನ್ನೆ ತಿಂದು ಬದುಕುವ ಅಭ್ಯಾಸ ಮಾಡಿಕೊಂಡ ಆ ಗಂಢಭೇರುಂಡ ಜೋಡಿ ಯಾವುದೇ ರೀತಿಯಲ್ಲಿಯೂ ನರನಾರಾಯಣರ ತಪಸಿಗೆ ಭಂಗ ಬರದ ಹಾಗೆ ತಮ್ಮ ಪಾಡಿಗೆ ತಾವೂ ದೂರದ ಮರವೊಂದರಲ್ಲಿ ಬದುಕಿಕೊಂಡಿದ್ದವು. ಅದೆಷ್ಟು ಕಾಲದಿಂದ ಹಾಗೆ ಬದುಕಿದ್ದವೊ ? ಅವುಗಳಿಗೇ ಅರಿವಿರಲಿಲ್ಲ – ತಾತ, ಮುತ್ತಜ್ಜನ ಕಾಲದಿಂದ ಎಂದು ಲೋಕಾರೂಢಿಯಂತೆ ಹೇಳುವುದರ ಹೊರತು..

ಹೀಗಾಗಿಯೆ ಅಲ್ಲಿನ ಬದಲಾದ ವಾತಾವರಣ ಅವಕ್ಕೆ ಅಚ್ಚರಿ ಮೂಡಿಸಿದ್ದು….!

ಗಂಢಭೇರುಂಡವೊಂದರ ಜೋಡಿ ಸಾವಿರ ವರ್ಷಗಳ ಕಾಲ ಬದುಕಿರುವುದಾದರು, ಅದಕ್ಕೆ ಜನ್ಮವಿತ್ತ ಹಿಂದಿನ ತಲೆಮಾರುಗಳ ಬಾಯಿಂದ ಬಾಯಿಗೆ ದಂತಕಥೆಯಂತೆ ಹರಿದು ಬಂದ ವಿಷಯ – ನರನಾರಾಯಣರ ನಿರಂತರ ತಪ-ಕದನದ ಕಥಾನಕ. ಅಂದಿನಿಂದ ಇಂದಿನವರೆವಿಗು ಇದು ಬದಲಾಗದೆ ಉಳಿದ ವಾತಾವರಣ – ಇಂದೇಕೆ ಹೀಗೆ ಬದಲಾವಣೆ ಕಾಣುತ್ತಿದೆ ? ಎನ್ನುವ ವಿಸ್ಮಯದಿಂದ ಅವಕ್ಕೂ ಹೊರಬರಲಾಗಿಲ್ಲ ಇನ್ನೂ…

” ರತಿ ಮನ್ಮಥರ ಚಾಕಚಕ್ಯತೆ ಕಂಡೆಯಾ? ಒಂದೆ ಏಟಿಗೆ ಹೇಗೆ ಎಲ್ಲವನ್ನು ಬದಲಾಗಿಸಿಬಿಟ್ಟಿದ್ದಾರೆ ? ಅಲ್ಲಿ ನೋಡು.. ಬರಿಯ ಗುಡ್ಡದ ಸೀಳಿನ ನಡುವೆ ಹೇಗೆ ಜಲಪಾತ, ಝರಿಗಳು ಹರಿವ ಹಾಗೆ ಮಾಡಿಬಿಟ್ಟಿದ್ದಾರೆ ? ನಿಸ್ತೇಜವಾಗಿದ್ದ ವಾತಾವರಣವನ್ನು ಮನೋದ್ರೇಕ ಪ್ರೇರಕವಾಗುವಂತೆ ಬದಲಿಸಿಬಿಟ್ಟಿದ್ದಾರೆ..?” ಮೆಚ್ಚುಗೆಯನ್ನೆ ಧಾರೆಧಾರೆಯಾಗಿ ಹರಿಸುತ್ತ ನುಡಿದಳೊಬ್ಬ ಅಪ್ಸರೆ.

ನರನು ತಪಸಿನಲ್ಲಿದ್ದ ಎಡೆಯತ್ತ ಕಾಲುಹಾದಿಯಲ್ಲಿ ನಡೆದು ಬಂದ ಅವರಿಗೆ ಇನಿತೂ ಆಯಾಸವೆನಿಸದೆಷ್ಟು ಮನೋಹರ ವಾತಾವರಣ. ಆ ಆಹ್ಲಾದಕರ ಪರಿಸರದಲ್ಲಿ ಮಾಡಬೇಕಿರುವ ಮಹತ್ತರ ಕಾರ್ಯದ ಪರಿಣಾಮವೇನಾಗುವುದೊ ಎಂಬ ಭೀತಿಯನ್ನೆ ಮರೆಸುವಷ್ಟು ಮತ್ತೇರಿಸುವ ಉತ್ತೇಜಕ ವಾತಾವರಣ. ಅದೇ ಧೈರ್ಯದಿಂದ ಮುನ್ನಡೆದವರು ಹೆಜ್ಜೆಹೆಜ್ಜೆಗು ತಮ್ಮೊಂದಿಗೆ ತಂದಿದ್ದ ಸುಗಂಧ ದ್ರವ್ಯಗಳನ್ನು ಚಿಮುಕಿಸುತ್ತ ನಡೆಯುತ್ತಿದ್ದಾರೆ ಪರಿಸರದ ಮಾದಕತೆಗೆ ಮತ್ತಷ್ಟು ನೀರೆರೆಯುವಂತೆ…

ಅವರು ನರನ ತಪದ ಜಾಗದ ಹತ್ತಿರ ಬರುತ್ತಿದ್ದಂತೆ ಅಲ್ಲಿ ಆ ಬದಲಾವಣೆಯ ಪರಿಣಾಮ ಕುಗ್ಗುತ್ತ ಹೋಗಿರುವುದು ಕಾಣಿಸುತ್ತಿದೆ.. ಬದಲಾವಣೆಯ ಕುರುಹುಗಳು ಅಲ್ಲೂ ಇವೆಯಾದರೂ ಹೊರ ಸುತ್ತಿನಷ್ಟು ಗಾಢವಾಗಿಲ್ಲ… ಹಾಗೆಯೆ ಮುಂದುವರೆದ ಹೆಜ್ಜೆ ಮತ್ತಷ್ಟು ದಾರಿ ಸವೆಸುವ ಹೊತ್ತಿಗೆ ಸಾಲಿನ ಮುಂದಿದ್ದ ರಂಭೆ ತಟಕ್ಕನೆ ನಿಂತು, “ತಾಳಿ, ತಾಳಿ.. ರತಿದೇವಿಯ ಯೋಜನೆಯನುಸಾರ ನಾವು ಈ ದಿನ ಇಲ್ಲೆ ನೆಲೆಯೂರಬೇಕು… ಈ ದಿನದ ಪೂರ ಬರಿಯ ಮಧುರ ಗಾಯನ ಸಂಗೀತ ಗೋಷ್ಠಿಗಳನ್ನು ನಡೆಸುತ್ತ ಇಲ್ಲೆ ಬಿಡಾರ ಹೂಡಬೇಕು.. ಇಲ್ಲೆ ಎಂದರೆ ಈ ಪರಿಧಿಯ ಸುತ್ತಳತೆಯಲ್ಲೆ. ನೀವ್ಯಾರು ಇಲ್ಲಿಂದ ಮುಂದಕ್ಕೆ ಹೆಜ್ಜೆಯಿಕ್ಕದೆ ಬರಿಯ ಈ ಪರಿಧಿಯ ಸುತ್ತಳತೆಯಲ್ಲೆ ಹೆಜ್ಜೆಯಿಕ್ಕುತ್ತ ಸಾಗಬೇಕು. ಎಲ್ಲರು ತಲುಪಿ ಬಿಡಾರ ಹೂಡುವತನಕ ಕಾದು, ತಲುಪಿದ ಸಂಕೇತ ಸಿಕ್ಕಿದ ಮೇಲೆ ಮಾತ್ರವೆ ನಮ್ಮ ಕೆಲಸ ಆರಂಭಿಸಬೇಕು..”ಎಂದಳು.

ಎಲ್ಲರು ಅರ್ಥವಾದಂತೆ ತಲೆಯಾಡಿಸುವಾಗ ಅನುಮಾನಕ್ಕೆಡೆಯಿರದಂತೆ ತಿಳಿದುಕೊಳ್ಳುವವಳ ಹಾಗೆ ಕೇಳಿದವಳು ಘೃತಾಚಿ – “ಇಂದು ನಾವೆಲ್ಲ ಬರಿಯ ವಾದ್ಯ ವಾದನ ಮಾತ್ರದಲಷ್ಟೆ ನಿರತರಾಗಬೇಕಲ್ಲವೆ?”

” ಹೌದು.. ಇಂದೆಲ್ಲ ಮೆಲುವಾದ ದನಿಯ ಮಧುರ ವಾದನವಷ್ಟೆ ಹಿತಕರವಾಗಿ ಹರಿಯುವ ಹಾಗೆ ನೋಡಿಕೊಳ್ಳಬೇಕು.. ನಾಳೆಯ ಪ್ರಾತಃಕಾಲ ಮತ್ತು ಸಂಧ್ಯಾ ಸಮಯದಲಷ್ಟೆ ವಾದನದ ಜತೆಗೆ ಮಧುರ ಗಾಯನವನ್ನು ಸೇರಿ ಸಮ್ಮೋಹಕ ವಾತಾವರಣ ಸೃಜಿಸಬೇಕು…”

” ಆ ಹೊತ್ತಿನಲ್ಲಿ ಜಾಗ ಬದಲಿಸದೆ ಅಲ್ಲೆ ಇರಬೇಕಲ್ಲವೆ?” ಈಗ ಮೇನಕೆಯ ಪ್ರಶ್ನೆ.

” ಊಹೂಂ… ಪ್ರತಿ ಆರು ತಾಸಿಗೊಮ್ಮೆ ಅರ್ಧ ಯೋಜನದಷ್ಟು ದೂರ ಪರಿಧಿಯಿಂದ ಒಳಗೆ ಪ್ರವೇಶಿಸಬೇಕು.. ಹೀಗೆ ಎಲ್ಲಾ ಕಡೆಯಿಂದ ಸುತ್ತುವರೆಯುತ್ತ ಮುಂದುವರೆದರು ಪರಿಣಾಮ ಮಾತ್ರ ಕ್ರಮೇಣವಾಗಿಯಷ್ಟೆ ವ್ಯಾಪಿಸುವಂತಿರಬೇಕೆ ಹೊರತು ಒಂದೆ ಬಾರಿಗೆ ಅನುಭವ ವೇದ್ಯವಾಗಬಾರದು…”

” ವಾದನ, ಗಾಯನದ ನಂತರದ ಮುಂದಿನ ಹಂತ..?” ತಿಲೋತ್ತಮೆಯ ಕಡೆಯಿಂದ ಬಂದಿತ್ತು ಮತ್ತೊಂದು ಪ್ರಶ್ನೆ.

” ನಾಳಿದ್ದಿನ ಪ್ರಾತಃಕಾಲದ ಹೊತ್ತಿಗೆ ವಾದನ ಗಾಯನದ ನಿರಂತರ ಗೋಷ್ಟಿ ಆರಂಭವಾಗಿಬಿಡಲಿ.. ಪ್ರತಿ ಆರು ತಾಸಿನ ನಂತರ ಮತ್ತೆ ಅರ್ಧ ಯೋಜನೆ ಸಾಗುವ ಕ್ರಮ ಮುಂದುವರೆಸಬೇಕು… ಹೀಗೆ ನಾಲ್ಕನೆ ದಿನಕ್ಕೆ ಕಾಲಿಟ್ಟಾಗ ಜತೆಯಲ್ಲೆ ನಿಧಾನವಾಗಿ ಮನಮೋಹಕವಾದ ನೃತ್ಯವೂ ಆರಂಭವಾಗಲಿ, ಹಿತವಾದ ಗೆಜ್ಜೆಸದ್ದಿನ ಜತೆಗೆ.. ಆರನೆ ದಿನಕ್ಕೆ ನಾವೆಲ್ಲ ನರ ಮುನಿಯ ತಪದ ಜಾಗದಿಂದ ಅರ್ಧ ಯೋಜನ ದೂರದಲ್ಲಿರುತ್ತೇವೆ… ಅಲ್ಲಿಗೆ ನಮ್ಮ ಪಯಣ ನಿಂತುಬಿಡಲಿ.. ಅಲ್ಲಿನ ಬೆಳವಣಿಗೆ, ಸನ್ನಿವೇಶದನುಸಾರ ನೋಡಿಕೊಂಡು ಮುಂದಿನ ಹೆಜ್ಜೆ ನಿರ್ಧರಿಸುವ..”

ಎಂದವಳೆ ರಂಭ ಪ್ರತಿಯೊಬ್ಬರಿಗೂ ಒಂದೊಂದು ಪುಟ್ಟ ಪೆಟ್ಟಿಗೆಯನ್ನು ಕೈಗಿತ್ತಳು. ಅದು ಕೇವಲ ದಿಕ್ಸೂಚಿ ಮಾತ್ರವಾಗಿರದೆ ಪ್ರತಿಯೊಬ್ಬರು ತಲುಪಿದ ಜಾಗವನ್ನು ತೋರಿಸುವ ಮಾಹಿತಿ ಪೆಟ್ಟಿಗೆಯೂ ಆಗಿತ್ತು.. ಅದರಲ್ಲಿ ಪರಸ್ಪರರಿಗೆ ಹೇಗೆ ಸಂಕೇತಗಳನ್ನು ರವಾನಿಸಬಹುದೆಂದು ಎಲ್ಲರಿಗು ಗೊತ್ತಿದ್ದ ಕಾರಣ ಯಾರೂ ಅದರ ಕುರಿತು ಏನೂ ಪ್ರಶ್ನೆ ಕೇಳದೆ, ತಂತಮ್ಮ ದಾರಿ ಹಿಡಿದು ನಡೆಯತೊಡಗಿದರು..

ಆ ರಾತ್ರಿ ಇದ್ದಕ್ಕಿದ್ದಂತೆ ಆ ಕಾನನದ ತುಂಬೆಲ್ಲ ದೈವಿಕವಾದ ಗಂಧರ್ವ ಸಂಗೀತದ ಮಧುರ ಝೆಂಕಾರವೆ ತುಂಬಿಹೋಯ್ತು, ಅದುವರೆವಿಗಿದ್ದ ನಿಗೂಢ ಮೌನದ ಸತ್ವವನ್ನೆ ಅಲ್ಲಾಡಿಸುವ ಹಾಗೆ..!

*********************

ನರನ ತಪದ ತಲ್ಲೀನತೆಯಲ್ಲೂ, ಅಂತರಾಳದಂತಃಕರಣದೊಳಗೆ ಏನೊ ಬದಲಾಗುತ್ತಿರುವ ಸುಳಿವು ಈಗಾಗಲೆ ಸಿಕ್ಕಿಹೋಗಿದೆ…

ಮೊದಮೊದಲು ದೂರದಿಂದೆಲ್ಲಿಂದಲೊ ಕೇಳಿ ಬರುತ್ತಿದ್ದ ವಾದನ, ಗಾಯನದ ಕ್ಷೀಣ ಸದ್ದುಗಳು, ಕ್ರಮೇಣ ಬಲವಾಗುತ್ತ ಹೋಗಿ ಈಗ ತೀರಾ ಹತ್ತಿರದಿಂದಲೆ ಕೇಳಿಸುತ್ತಿವೆಯೆಂಬಂತೆ ಭಾಸವಾಗುತ್ತಿದೆ. ಜತೆಜತೆಗೆ ಈಗ ಲಯಬದ್ಧವಾದ ಗೆಜ್ಜೆಯ ಸದ್ದುಗಳು ಕೇಳಿಸುತ್ತಿವೆಯಾಗಿ ಅದು ನೃತ್ಯ, ಗಾಯನ, ವಾದನಗಳ ಸಂಗಮಿತ ಧ್ವನಿಯೆಂದು ಅರಿವಾಗಿ, ಏನೊ ಹೊಳೆದಂತೆ ಆ ತಪೋನಿರತ ಮೊಗದಲ್ಲಿಯೂ ಕಂಡೂ ಕಾಣದ ಮಂದಹಾಸ ಮೂಡಿಸಿದೆ….

ಅದು ದೇವರಾಜನ ಹುನ್ನಾರವೆಂದರಿವಾದ ನಗೆಯೊ, ತನ್ನ ಸಾಮರ್ಥ್ಯ, ಕಠೋರ ನಿಶ್ಚಲತೆಯನ್ನರಿಯದೆ ಮಕ್ಕಳಾಟವೆನ್ನುವಂತೆ ಭಾವಿಸಿ ಬರುತ್ತಿರುವ ಅವರ ಎಳಸುತನಕ್ಕೆ ಹುಟ್ಟಿದ ಕರುಣಾಪೂರ್ಣ ನಗೆಯೊ ಅಥವಾ ಮುಂದೇನಾಗಲಿದೆಯೆಂಬ ಅರಿವಿನ ದೆಸೆಯಿಂದ ಹುಟ್ಟಿದ ವಿಷಾದದ ನಗೆಯೊ – ಆದರೆ ಅದು ನರನ ತಪದ ಏಕಾಗ್ರತೆಯನ್ನು ಉಂಗುಷ್ಟವಿರಲಿ, ಕಣ ಮಾತ್ರದಷ್ಟು ವಿಚಲಿತಗೊಳಿಸಲಾಗಿಲ್ಲ. ಅಪಾರ ಮನಃಶ್ಯಕ್ತಿಯ ತೇಜ ತನ್ನ ಪ್ರತಿವಸ್ತು ಪರಿವರ್ತನದ ನಿರಂತರ ಕಾರ್ಯದಲ್ಲಿ ತನ್ನ ಕಾರ್ಯಾಗಾರವನ್ನು ನಡೆಸುತ್ತಲೆ ಇದೆ – ತನ್ನ ಪಾಡಿಗೆ ತಾನು.

(ಇನ್ನೂ ಇದೆ)

(Link to next episode 11: https://nageshamysore.wordpress.com/2016/03/07/00560-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%a7/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

00555. ಅಹಲ್ಯಾ ಸಂಹಿತೆ – ೦೯ (ಸಹಸ್ರಕವಚನ ಕವಚದ ಹಿಂದಿನ ವಿಜ್ಞಾನ)


00555. ಅಹಲ್ಯಾ ಸಂಹಿತೆ – ೦೯ (ಸಹಸ್ರಕವಚನ ಕವಚದ ಹಿಂದಿನ ವಿಜ್ಞಾನ)
_________________________________________

(Link to previous episode 08: https://nageshamysore.wordpress.com/2016/03/06/00554-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%ae/)

ಸಹಸ್ರ ಕವಚಗಳ ಹರಣವೆ ದಶಲಕ್ಷ ವರ್ಷಗಳ ಯಾತನೆಯ ಕಥೆ.. ಅಷ್ಟೆ ಸಾಲದೆನ್ನುವಂತೆ, ಯಾರೇ ತನ್ನ ಕವಚ ಬೇಧಿಸಿದರು ಅಂತ್ಯದಲ್ಲಿ ಹಾಗೆ ಬೇಧಿಸಿದವನ ಮೃತ್ಯುವಾಗಬೇಕೆಂದು ಬೇರೆ ವರ ಕೇಳಿದ್ದ ಸಹಸ್ರಕವಚ..!

ಹೀಗಾಗಿ ಕವಚದ ಅಂತಿಮ ಛೇಧನದ ಹೊತ್ತಲ್ಲಿ, ಅದರಲಿದ್ದ ಮಿಕ್ಕುಳಿದ ತಾಮಸ ಶಕ್ತಿಯೆಲ್ಲ ಭಯಂಕರ ವಿಷಾನಿಲದ ರೂಪತಾಳಿ, ಎದುರಾಳಿಯ ಅರಿವಿಗೆ ಬರುವ ಮೊದಲೆ ಅವನನ್ನು ನಿಶ್ಚೇಷ್ಟಿತನನ್ನಾಗಿಸಿ ಮರಣಿಸುವಂತೆ ಮಾಡಿಬಿಡುತ್ತಿತ್ತು… ಈ ಕಾರಣದಿಂದಲೆ ತಪದಲಿದ್ದ ನರನು ತಾನು ಕದನಕ್ಕೆ ತೊಡಗುವ ಮೊದಲು ತನ್ನ ತಪಃಶಕ್ತಿಯ ತುಣುಕನ್ನೆ ಬಳಸಿ, ನಾರಾಯಣನ ದೇಹಸತ್ವ ನಿಶ್ಚಲವಾಗುವ ಮುನ್ನವೆ ಆ ವಿಷನಿಗ್ರಹವಾಗಿ ನಿಷ್ಪಲವಾಗುವಂತೆ ಮಾಡಬೇಕಿತ್ತು. ನರನು ಕಾದಾಡುವ ಹೊತ್ತಲ್ಲಿ ಆ ಕೆಲಸ ನಾರಾಯಣನ ಪಾಲಿಗೆ… ಹೀಗೆ ಒಂದು ದಶಲಕ್ಷ ವರ್ಷಗಳವರೆಗು ತಮ್ಮ ಜೋಡಿ ಕದನವನ್ನು ಕಾಪಾಡಿಕೊಂಡು ಹೋಗುವುದರಿಂದಷ್ಟೆ ಸಹಸ್ರ ಕವಚನ ಅಂತಿಮವಧೆ ಸಾಧ್ಯವಾಗುತ್ತಿದ್ದುದು…!

ಹೀಗೆ ಒಂದೊಂದೇ ಕವಚಕ್ಕು ಸಹಸ್ರ ವರ್ಷಗಳನ್ನು ವ್ಯಯಿಸುತ್ತ ಎಲ್ಲಾ ಸಹಸ್ರ ಕವಚಗಳನ್ನು ನಿಗ್ರಹಿಸುವುದೆಂದರೆ ಸಾಮಾನ್ಯದ ಮಾತೆ ? ಆ ಕಾಲಧರ್ಮದ ಗಣನೆಯಲ್ಲೆ ಹುಚ್ಚು ಹಿಡಿದಂತಾಗಿ ಹೋಗುತ್ತದೆ.. ಆದರೆ ಈ ಯಾತ್ರೆಯಲ್ಲಿ ಈಗಾಗಲೆ ಅಂತಿಮ ಹಂತಕ್ಕೆ ಬಂದಾಗಿಬಿಟ್ಟಿದೆ.. ಇನ್ನುಳಿದಿರುವುದು ಎರಡೆ ಎರಡು ಕವಚ… ಈ ಬಾರಿ ನಾರಾಯಣನ ಕದನ ಮುಗಿದರೆ ಅದರೊಂದಿಗೆ ಮಿಕ್ಕುಳಿಯುವುದು ಕಡೆಯ ಕವಚ ಮಾತ್ರವೆ.. ಅದನ್ನು ಹೇಗಾದರೂ ಈ ಯುಗದ ಅಂತಿಮವಾಗುವುದರೊಳಗೆ ನಿಗ್ರಹಿಸಿಬಿಟ್ಟರೆ ಅಲ್ಲಿಗೆ ಈ ಸಾತ್ವಿಕ ಯಜ್ಞದ ಪೀಡಕವಾಗಿರುವ ಪ್ರಮುಖ ತಾಮಸಿ ಅಸುರ ಶಕ್ತಿಯೊಂದರ ದಮನವಾದಂತೆ…

ನರ ನಾರಾಯಣರು ದೈವಿಕ ಅಂಶದಿಂದ ಜನಿಸಿದವರಾದ ಕಾರಣ ಅವರು ತಪ ಮಾಡಿಯೆ ಏಕೆ ಯುದ್ಧಕ್ಕೆ ನಿಲ್ಲಬೇಕಾಯ್ತು ? ಎನ್ನುವ ಜಿಜ್ಞಾಸೆ ಸಹಜ. ಅದಕ್ಕೂ ಕಾರಣವಿರದಿರಲಿಲ್ಲ..

ಅದರ ಮುಖ್ಯ ಕಾರಣ ಅಡಗಿದ್ದುದ್ದು ಪ್ರತಿವಸ್ತುವಿನ ತತ್ವದಲ್ಲಿ..!

ಮೂಲತಃ ಪಂಚಭೂತ ದ್ರವ್ಯದಿಂದಾದ ಜೈವಿಕ ಕವಚವನ್ನು ಹರಿಯುವ ಪ್ರಕ್ರಿಯೆಯಲ್ಲಡಗಿತ್ತು ಆ ಗುಟ್ಟು. ಜೈವಿಕ ಕವಚದ ಹುಟ್ಟಿನ ಮೂಲವನ್ನೆ ಹಿಡಿದು, ಅದರ ವಿರುದ್ಧ ದಿಕ್ಕಿನ ಪ್ರಕ್ರಿಯೆಯಲ್ಲಷ್ಟೆ ಅದನ್ನು ನಾಶಪಡಿಸಲು ಸಾಧ್ಯವಿತ್ತು. ಅರ್ಥಾತ್, ಕವಚದಲ್ಲಿ ಶೇಖರಿತವಾದ ಅಪಾರ ಋಣಾತ್ಮಕ ಶಕ್ತಿಯನ್ನು ಅದರಷ್ಟೆ ಸಮಬಲದ ಧನಾತ್ಮಕ ಶಕ್ತಿಯಿಂದ ನಿಷ್ಕ್ರಿಯಗೊಳಿಸಿದ ನಂತರವಷ್ಟೆ ಅದರ ಶಕ್ತಿ ನಶಿಸುತ್ತಿದ್ದುದು. ಹೇಳಿ ಕೇಳಿ ಸಹಸ್ರಕವಚ ದಾನವ; ತಾಮಸತ್ವವೆನ್ನುವುದು ಅವನ ಹುಟ್ಟು ಗುಣ. ಹೀಗಾಗಿ ಕವಚ ರೂಪದಲ್ಲಿ ಸಮಷ್ಟಿಸಿದ ಅಸುರಿ ಶಕ್ತಿಯೆಲ್ಲ ಋಣಾತ್ಮಕ ತಾಮಸಿ ರೂಪದಲ್ಲಿರುವುದು ಸಹಜವೆ ಆಗಿತ್ತು.

ಆದರೆ ನರನಾರಾಯಣರ ತೊಡಕಿದ್ದುದು ಇಲ್ಲೆ… ಆ ಋಣಾತ್ಮಕತೆಯನ್ನು ಅಧಿಗಮಿಸಿ ಮೆಟ್ಟಿ ನಿಲಬಲ್ಲ ಧನಾತ್ಮಕ ಶಕ್ತಿಯನ್ನು ಕ್ರೋಢೀಕರಿಸಿದಾಗಲಷ್ಟೆ ಗೆಲುವು ಸಾಧ್ಯವಿದ್ದುದು. ಅಂದರೆ ಅಸೀಮ ಮನೋಬಲದ ಧನಾತ್ಮಕ ಸಾತ್ವಿಕ ಶಕ್ತಿಯಿದ್ದರೆ ಮಾತ್ರ ಸಾಲದು; ಜತೆಗೆ ಕ್ಷಾತ್ರಿಯ ತೇಜದ ರಾಜಸಶಕ್ತಿಯನ್ನು ಸೇರಿಸಿದರಷ್ಟೆ ಆ ಕದನದಲ್ಲಿ ಗೆಲ್ಲಲು ಸಾಧ್ಯ. ಸಹಸ್ರಬಾಹುವಿನ ವೀರತ್ವ, ಶೌರ್ಯವೇನು ಕಡಿಮೆಯದಲ್ಲವಲ್ಲ ? ತಮ್ಮ ಸಾತ್ವಿಕ ಮತ್ತು ರಾಜಸದ ಸಂಯುಕ್ತ ಬಲದಿಂದಲೆ ಅಸುರನ ತಾಮಸ ಮತ್ತು ರಾಜಸದ ಸಂಯುಕ್ತ ಬಲದ ಮೇಲೆ ಗೆಲುವು ಸಾಧಿಸಬೇಕು; ಆ ಪ್ರಕ್ರಿಯೆಯಲ್ಲಿ ನಶಿಸಿಹೋದ ತೇಜೋಬಲದ ಪುನರುತ್ಥಾನಕ್ಕಾಗಿ ಮತ್ತೆ ತಪಸ್ಸಿನಲ್ಲಿ ಕೂತು ಮುಂದಿನ ಸುತ್ತಿಗೆ ಸಿದ್ದರಾಗಬೇಕು – ಮತ್ತದೆ ಧನಾತ್ಮಕ ಶಕ್ತಿಯನ್ನು ಸಮಷ್ಟಿಸುತ್ತ.

ಸಹಸ್ರಕವಚನಲ್ಲಿದ್ದ ಶಕ್ತಿಮೂಲ ವಸ್ತುತತ್ವದಿಂದ ಉದ್ಭವಿಸಿದ್ದು ಎಂದಿಟ್ಟುಕೊಂಡರೆ, ಅದನ್ನು ಪ್ರತಿರೋಧಿಸಿ, ನಿರ್ಬಂಧಿಸಿ, ನಿಷ್ಕ್ರಿಯವಾಗಿಸಲು ನರನಾರಾಯಣರು ಪ್ರತಿ-ವಸ್ತುವಿನ ತತ್ವದ ಮೊರೆ ಹೋಗಬೇಕಿತ್ತು. ವಸ್ತುತತ್ವದ ಸರಕೇನೊ ಅವರಲ್ಲೂ ಹೇರಳವಾಗಿದ್ದರು, ಪ್ರತಿ-ವಸ್ತು ತತ್ವದ ಸ್ವರೂಪದಲ್ಲಿ ಇಲ್ಲದ ಕಾರಣ, ತಪಸ್ಸಿನ ಮೊರೆ ಹೊಕ್ಕು ತಮ್ಮೆಲ್ಲ ‘ವಸ್ತುಶಕ್ತಿ’ಯನ್ನು ‘ಪ್ರತಿವಸ್ತುಶಕ್ತಿ’ಯಾಗಿ ಪರಿವರ್ತಿಸಿಕೊಳ್ಳಬೇಕಿತ್ತು – ಅಂತರಂಗದ ಮಾನಸಿಕ ಶಕ್ತಿಯನ್ನೆ ದ್ರವ್ಯವಾಗಿ ಬಳಸಿಕೊಳ್ಳುತ್ತ. ಆ ಕಾರಣದಿಂದಲೆ ನಡುವಿನ ಅಸ್ಥಿರತೆಯ ಪ್ರಶ್ನೆಯೂ ಉದ್ಬವಿಸುತ್ತಿದ್ದುದ್ದು.

ಪರಿವರ್ತನೆಯ ಪ್ರತಿ ಮೆಟ್ಟಿಲಲ್ಲು ಹಂತ ಹಂತವಾಗಿ ರೂಪಾಂತರವಾಗುತ್ತ ಹೋಗುತ್ತಿದ್ದ ಈ ಶಕ್ತಿ, ಕೊನೆಯ ಹಂತದಲ್ಲಿ ದಾನವ ಶಕ್ತಿಯನ್ನು ನೀಗಿಸಲು ಬೇಕಾದ ಗರಿಷ್ಠ ಮಟ್ಟವನ್ನು ತಲುಪುತ್ತಿತ್ತಾದರು, ಯಾವುದೆ ಕಾರಣದಿಂದ ಯಾವುದೆ ಹಂತದಲ್ಲಿ ಅಡ್ಡಿ, ತೊಡಕುಂಟಾದರು ಆ ಹಂತದ ಶಕ್ತಿಯ ಅಸ್ಥಿರ ಸ್ಥಿತಿಯ ದೆಸೆಯಿಂದಾಗಿ ಶೇಖರಿತವಾದದ್ದೆಲ್ಲ ಕರಗಿ ಮತ್ತೆ ಮೊದಲಿನಿಂದ ಆರಂಭಿಸಬೇಕಾಗುತ್ತಿತ್ತು. ಮೊದಲೆ ಸಹಸ್ರವರ್ಷಗಳ ಸಿದ್ದತೆ; ಅದರಲ್ಲಿ ತಡೆಯಾಯ್ತೆಂದರೆ ಈ ಕಾಲದ ಪರಿಧಿ ಇನ್ನೂ ವಿಸ್ತಾರವಾಯ್ತೆಂದೆ ಲೆಕ್ಕ. ಆ ಕಾರಣದಿಂದಾಗಿಯೆ ನರ ನಾರಾಯಣರಿಬ್ಬರು ಯಾರ ಸಂಪರ್ಕವನ್ನೂ ಇಟ್ಟುಕೊಳ್ಳದೆ, ಬದರೀಕಾಶ್ರಮದ ನಿಗೂಢ ತಾಣದಲ್ಲಿ ನೆಲೆಸಿ ಏಕಾಗ್ರತೆಗೆ ಭಂಗ ಬರದಂತೆ ತಪೋನಿರತರಾಗಿದ್ದುದ್ದು.

ಈಗಾಗಲೆ ನಿರಂತರ ಕದನದಲ್ಲಿ ನಿರತರಾಗಿದ್ದರೂ ಅವರ ಸಾಧನೆಯ ಛಲ, ಮನೋಸ್ಥೈರ್ಯ ಇನಿತೂ ಕುಗ್ಗಿಲ್ಲ – ಈಗಾಗಲೆ ಒಂಭೈನೂರ ತೊಂಭತ್ತೆಂಟು ಕದನಗಳನ್ನು ಮುಗಿಸಿಯಾಗಿದ್ದರು ಸಹ…! ಸಹಸ್ರಕವಚನ ಪ್ರತಿ ಕವಚವನ್ನು ಅಷ್ಟೆ ಬಾರಿ ಛೇಧಿಸುತ್ತ ಬಂದ ಕಾರಣ, ಈಗಿನ್ನುಳಿದಿರುವುದು ಎರಡೆ ಎರಡು ಕವಚ ಮಾತ್ರ. ಅದರಲ್ಲೀಗಾಗಲೆ ಒಂದು ಹೋರಾಟ ನಡೆಯುತ್ತಾ ಇದೆ – ನಾರಾಯಣನ ಜತೆಗೆ. ಆ ಕದನದ ಸಹಸ್ರವರ್ಷಗಳು ಮುಗಿಯುವುದರೊಳಗೆ ನರನ ತಪಸ್ಸು ಮುಗಿದಿರಬೇಕು – ಕಟ್ಟ ಕಡೆಯ ಸಾವಿರದನೆ ಹೋರಾಟ ಆರಂಭಿಸಲು..

ಇನ್ನೇನು ಹಿಡಿದ ಕಾರ್ಯ ಪೂರ್ಣಗೊಳ್ಳುವ ಕಾಲ ಹತ್ತಿರವಾಗುತ್ತಿದೆಯೆಂಬ ನಿರಾಳತೆ ಒಂದೆಡೆಯಾದರೆ ಅದೇ ಹೊತ್ತಿನಲ್ಲಿ ಮತ್ತೊಂದು ಆತಂಕವೂ ಕಾಡಿದೆ.. ಈ ಕಡೆಯ ಬಾರಿಯ ಸಹಸ್ರವರ್ಷ ಎಂದಿನಂತದ್ದಲ್ಲ ; ಅದು ಯುಗಸಂಧಿ ಕಾಲ. ಸತ್ಯಯುಗವು ಅಂತ್ಯವಾಗಿ ತೇತ್ರಾಯುಗದತ್ತ ಕಾಲಿಡುವ ಸಮಯ… ಅಂದರೆ ಆ ಯುಗಸಂಧಿಯ ರೂಪಾಂತರವನ್ನು ನಿಭಾಯಿಸುವ ಪ್ರಳಯವು ಆ ಸಮಯದಲ್ಲೆ ಸಂಭವಿಸಲಿದೆ. ಅದು ಎಂದು, ಹೇಗೆ ಸಂಭವಿಸಲಿದೆಯೆಂದು ಚೆನ್ನಾಗಿ ಬಲ್ಲ ನರನಾರಾಯಣರು ಆ ಆಧಾರದ ಮೇಲೆ ಲೆಕ್ಕ ಹಾಕಿಯೆ ತಪಸಿಗೆ ಕುಳಿತದ್ದು – ಪ್ರಳಯದ ಹೊತ್ತಿಗೆ ಮುನ್ನ ಸಹಸ್ರಕವಚನ ಎಲ್ಲಾ ಸಹಸ್ರ ಅವತಾರಗಳನ್ನು ಮುಗಿಸಿಬಿಡಬೇಕೆಂದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಮಿಕ್ಕುಳಿದ ಕವಚಶಕ್ತಿಯ ನಿಗ್ರಹಕ್ಕಾಗಿ ಮತ್ತೆ ಮುಂದಿನ ಯುಗದಲ್ಲಿಯೂ ಜನ್ಮವೆತ್ತಿ ಶ್ರಮಿಸಬೇಕಾಗುತ್ತದೆ.. ಅದು ಮತ್ತಷ್ಟು ಪ್ರಯಾಸದ, ಸಂಕೀರ್ಣತೆಯ ವಿಷಯ. ಅದಕ್ಕನುವು ಮಾಡಿಕೊಡದಂತೆ ಈ ಯುಗದಲ್ಲೆ ಎಲ್ಲಾ ಮುಗಿಸಿಬಿಡುವ ಹವಣಿಕೆ ನರನಾರಾಯಣರದು – ಅವರ ಈ ಮಹಾಕಾರ್ಯಕ್ಕೆ ಯಾವುದೂ ಅಡ್ಡಿ ಆತಂಕ ಬರದಿದ್ದರೆ.

ಆದರೆ ವಿಧಿ ನಿಯಮದ ತಿದಿಯೊಳಗಿನೊಳಗುಟ್ಟನ್ನು ಬಲ್ಲವರಾರು ? ಅದುವರೆವಿಗು ಅವರಿಬ್ಬರ ಬಗ್ಗೆ ತಲೆ ಕೆಡಿಸಿಕೊಂಡಿರದಿದ್ದ ಇಂದ್ರನೂ, ಈ ಕಡೆಯ ಹಂತದಲ್ಲಿ ಇದ್ದಕ್ಕಿದ್ದಂತೆ ಪ್ರಚೋದಿತನಾಗಿ ಅವರ ತಪೋಭಂಗಕ್ಕಿಳಿಯುವ ಅವಸರವಾದರೂ ಏನಿತ್ತೊ ? ದೇವರಾಜನೂ ನಾರದರೊಡನೆ ಹಾಗೆಯೆ ವಾದಿಸಿದ್ದ – ಒಂಭೈನೂರಕ್ಕೂ ಮೀರಿದ ತಪೋಕದನಗಳಲ್ಲಿ ನಿರತರಾಗಿರುವ ಅವರಿಬ್ಬರಿಗೆ ತನ್ನ ಪಟ್ಟದ ಮೇಲೇಕೆ ಆಸೆ ಬಂದೀತು ? ಹಾಗಿದ್ದರೆ ಇಷ್ಟು ಹೊತ್ತಿಗಾಗಲೆ ಬಂದು ಆಕ್ರಮಿಸಿಬಿಡಬಹುದಿತ್ತಲ್ಲಾ? ಎಂದು. ಆಗ ನಾರದರು ನುಡಿದಿದ್ದು ದೇವೇಂದ್ರನ ಕಿವಿಯಲ್ಲಿನ್ನು ರಿಂಗಣಿಸುತ್ತಿತ್ತು..

” ಅಯ್ಯೋ ಮೂಢಾ..! ಅಷ್ಟನ್ನು ಕಾಣಲಾಗುವುದಿಲ್ಲವೆ ನಿನ್ನ ಸೂಕ್ಷ್ಮಮತಿಗೆ ? ನರನಾರಾಯಣರಿಗೆ ಇಲ್ಲಿಯವರೆವಿಗು ಬೇರಾವ ಮಹತ್ವಾಕಾಂಕ್ಷೆಯೂ ಇರಲಿಲ್ಲ – ಸಹಸ್ರಕವಚನ ವಧೆಯ ಹೊರತಾಗಿ. ಆದರೀಗ ಆ ಕಾರ್ಯ ತನ್ನ ಅಂತಿಮ ಹಂತ ಮುಟ್ಟುತ್ತಿದೆ.. ಅವನ ವಧೆಯಾದ ಮೇಲೆ ಅವರಿಬ್ಬರ ಶಕ್ತಿ-ಸಾಮರ್ಥ್ಯ-ತಪೋಬಲಗಳು ನಷ್ಟವಾಗಿ ಹೋಗುವುದೇನು ? ನಿರಂತರ ಕದನೋತ್ಸಾಹದಿಂದ ಹುರಿಗೊಂಡ ಆ ಕ್ಷಾತ್ರತೇಜ ಎಲ್ಲಾ ಮುಗಿಯಿತೆಂದು ಮೂಗು ಹಿಡಿದು ಕಂದಾಹಾರ ಸೇವಿಸುತ್ತಾ ತಪಸ್ಸಿಗೆ ಕೂಡುವುದೆಂದುಕೊಂಡೆಯಾ ? ಆ ಅಸೀಮ ಬಲ, ಸಾಮರ್ಥ್ಯದ ಕ್ಷಾತ್ರತೇಜ ಅವರನ್ನು ಸುಮ್ಮನೆ ಕೂಡಬಿಡುವುದಿಲ್ಲ. ಆ ಬಲದ ಮುಂದೆ ಭೂಲೋಕದ ಯಾವ ರಾಜರೂ ತಾನೆ ಅವರ ಸರಿಸಾಟಿಯಾಗಿ ನಿಲ್ಲಲು ಸಾಧ್ಯ ? ಅಂದಮೇಲೆ ಅವರ ಕಣ್ಣು ಅಮರಾವತಿಯ ಮೇಲೆ ಬೀಳುವುದಿಲ್ಲ ಎಂದು ಹೇಗೆ ಭಾವಿಸುವೆ ? ಆ ಮಹತ್ತರ ಸಾಧನೆಯ ನಂತರ ಅವರ ಕೀರ್ತಿ ಪ್ರತಿಷ್ಠೆಗೆ ಶೋಭೆ ತರುವಂತಹ ಸ್ಥಾನಮಾನವೆಂದರೆ ಇಂದ್ರಪದವಿ ತಾನೆ ? ಯೋಚಿಸಿ ನೋಡು – ಸಾಧುವೊ, ಅಸಾಧುವೊ ಸಾಧ್ಯತೆಯಂತು ಖಂಡಿತ ಇದೆ.. ಇದುವರೆವಿಗು ಆ ಭೀತಿ ಇರಲಿಲ್ಲ ನಿಜ.. ಆದರೆ ಇನ್ನು ಮುಂದೆಯೂ ಇಲ್ಲ ಎಂದರೆ ನನಗೆ ನಂಬಿಕೆಯಿಲ್ಲ..”

ಆ ಮಾತು ಕೇಳಿದ್ದಂತೆ ಎದೆ ಧಸಕ್ಕೆಂದಿತ್ತು ದೇವೇಂದ್ರನಿಗೆ – ತಾನು ಆ ನಿಟ್ಟಿನಲ್ಲಿ ಯೋಚಿಸಿರಲೆ ಇಲ್ಲವಲ್ಲ ಎಂದು. ಈಗ ಚಿಂತಿಸಿದಷ್ಟು ಆ ಸಾಧ್ಯತೆ ಹೆಚ್ಚು ಎಂದೇ ಭಾಸವಾಗುತ್ತಿತ್ತು. ಅನುಮಾನವಿದ್ದ ಮೇಲೆ ಸುಮ್ಮನಿರುವುದಾದರು ಹೇಗೆ ? ಅದಕ್ಕಾಗಿಯೆ ನಿರ್ಧರಿಸಿಬಿಟ್ಟಿದ್ದ – ಆದದ್ದಾಗಲಿ ಈ ತಪದ ಭಂಗ ಮಾಡಲೇಬೇಕೆಂದು.

ಈ ಹಿನ್ನಲೆಯನ್ನೆಲ್ಲ ಅರಿಯದಿದ್ದರು ತಪೋನಿರತ ನರನ ಮನದಲ್ಲಿದ್ದದ್ದು ಅದೊಂದೆ ಆತಂಕ – ‘ಬರಿ ಸಹಸ್ರವರ್ಷದ ಕದನ ಮಾತ್ರ ಬಾಕಿಯಿದೆ.. ಯಾವುದಾದರು ಅಡ್ಡಿಯಿಂದ ತಪ ವಿಳಂಬಿತಗೊಂಡರೆ ಏನು ಮಾಡುವುದು ?’ ಎಂದು. ಏಕೆಂದರೆ ಇದು ಬರಿಯ ತಪದ ಮಾತು ಮಾತ್ರವಾಗಿರಲಿಲ್ಲ… ಯುಗಾಂತರ ಯಾನದ ಜಿಜ್ಞಾಸೆ !

ಆ ಗುರಿಯನ್ನೆ ನಿಶ್ಚಲ ಮನದ ಏಕೈಕ ಗಮನವಾಗಿರಿಸಿಕೊಂಡು, ಸುತ್ತಲಿನ ಪರಿಸರದ ಯಾವ ಪ್ರಚೋದನೆ-ಪ್ರಲೋಭನೆಗೂ ನಿಶ್ಚಲವಾಗಿರುವ ನರನ ಪ್ರಜ್ಞೆಗೂ, ಅಂದು ಏಕೊ ಇದ್ದಕ್ಕಿದ್ದಂತೆ ಸುತ್ತಲಿನ ವಾತಾವರಣದಲ್ಲೇನೊ ಬದಲಾವಣೆಯಾದಂತಿದೆಯಲ್ಲ ಅನಿಸಿತು…

ಕಾಮದೇವನ ಕೈಚಳಕ ಮತ್ತು ರತಿದೇವಿಯ ವಸಂತಚಿತ್ತದ ಚಮತ್ಕಾರ – ಎರಡೂ ತನ್ನ ಕೆಲಸ ಮಾಡಲಾರಂಭಿಸಿತ್ತು…!

(ಇನ್ನೂ ಇದೆ)

(Link to next episode 10: https://nageshamysore.wordpress.com/2016/03/06/00556-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%a6/)

00554.ಅಹಲ್ಯಾ ಸಂಹಿತೆ – ೦೮ (ಬದರಿಕಾಶ್ರಮದತ್ತ ಅಪ್ಸರ ಗಣ)


00554.ಅಹಲ್ಯಾ ಸಂಹಿತೆ – ೦೮  (ಬದರಿಕಾಶ್ರಮದತ್ತ ಅಪ್ಸರ ಗಣ)
____________________________________

(Link to the previous episode 07: https://nageshamysore.wordpress.com/2016/03/05/00552-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%ad/)

” ಮುಂದಿನ ಹೆಜ್ಜೆಯೇನೆಂದು ಈಗಾಗಲೆ ನಿರ್ಧರಿಸಿದ್ದೀರಾ ?”

ಎಲ್ಲರ ಮನದಲ್ಲಿದ್ದ ಪ್ರಶ್ನೆಗೆ ಮಾತಿನ ಮೂರ್ತರೂಪ ಕೊಟ್ಟವಳು ರತಿದೇವಿ… ಪತಿಯ ಕೆಲಸಕ್ಕೆ ಮುನ್ನ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಯಾವ ರೀತಿಯ ಚಟುವಟಿಕೆ ನಡೆಸಬೇಕೆಂಬ ರೂಪುರೇಷೆಗಳ ಯೋಜನೆ ಹಾಕಿಕೊಟ್ಟಿದ್ದವಳು ಅವಳೆ. ಆ ಹಿನ್ನಲೆಯಲ್ಲಿಯೆ ಈ ಪ್ರಶ್ನೆ ಕೇಳಿದ್ದಳು ರತಿದೇವಿ – ಅದನ್ನು ಕಾರ್ಯರೂಪಕ್ಕೆ ತಂದ ಪತಿಯಿಂದ ಪಡೆದ ವಿವರಣೆಯನ್ನೆಲ್ಲ ಮನದಲ್ಲೆ ಮೆಲುಕು ಹಾಕುತ್ತ..

“ನನಗಂತು ಇದು ಒಬ್ಬರಿಂದಾಗುವ ಕೆಲಸವಲ್ಲವೆಂದೆನಿಸುತ್ತಿದೆ…. ” ತನ್ನ ದನಿಯಲ್ಲಿದ್ದ ಸಂಶಯವನ್ನು ಬಚ್ಚಿಡದೆ ತೆರೆದಿಟ್ಟವಳು ಘೃತಾಚಿ.

” ನನಗೂ ಹಾಗೆಯೆ ಅನಿಸುತ್ತಿದೆ ಘೃತಾಚಿ.. ಈ ನರನಾರಾಯಣರು ಸಾಧಾರಣ ಮುನಿಗಳಂತಲ್ಲ. ಒಂದೆಡೆ ಮಹಾನ್ ತಪಸ್ವಿಗಳಾದರೆ ಮತ್ತೊಂದೆಡೆ ಅಸೀಮ ಪರಾಕ್ರಮಿಗಳು.. ವೀರತ್ವದ ಕ್ಷತ್ರೀಯತೇಜ ಮತ್ತು ತಪೋಬಲದ ಬ್ರಹ್ಮತೇಜವೆರಡರ ಸಮಷ್ಟಿತ ಸ್ವರೂಪದವರು.. ಅಂತಹವರೆದುರು ನಮ್ಮ ರೂಪು, ಲಾವಣ್ಯ, ಒನಪು, ವಯ್ಯಾರವೆಲ್ಲ ಎಷ್ಟರ ಮಟ್ಟಿಗೆ ಕೆಲಸಕ್ಕೆ ಬರುವುದೊ ಎಂದು ಹೇಳುವುದು ಕಷ್ಟ…” ಈ ಬಾರಿ ಸಾಧಾರಣವಾಗಿ ಹೆಚ್ಚು ಮಾತಾಡದ ಅಪ್ಸರಸಿ ಮೇನಕಾ ಕೂಡ ತನ್ನನಿಸಿಕೆಯನ್ನು ಮುಂದಿಟ್ಟಳು. ಅವಳು ಅಷ್ಟು ನುಡಿದಿದ್ದೆ ಒಂದೆಡೆ ಅವಳಲಿದ್ದ ಆತಂಕವನ್ನು ಪ್ರತಿಬಿಂಬಿಸುತ್ತ, ಮತ್ತೊಂದೆಡೆ ಮಾಡಬೇಕಾದ ಕಾರ್ಯದ ಗಹನೆತೆಯನ್ನು ಸಾರುತ್ತಿದ್ದಂತಿತು.

ಅದುವರೆವಿಗೆ ಅವರ ಮಾತುಗಳನ್ನೆಲ್ಲ ಆಲಿಸುತ್ತ ಕುಳಿತಿದ್ದ ತಿಲೋತ್ತಮೆಯೂ ಸಹಮತದಿಂದ ತನ್ನ ತಲೆಯಾಡಿಸುತ್ತ, “ನಿಜ..ನಿಜ.. ಇದು ಒಬ್ಬರಿಂದಾಗುವ ಕೆಲಸವಲ್ಲ.. ನಮ್ಮೆಲ್ಲರ ವೈಯಕ್ತಿಕ ಸಾಮರ್ಥ್ಯಗಳನ್ನು ಒಗ್ಗೂಡಿಸಿ ಅದರ ಸಮಷ್ಟಿತ ಪ್ರಭಾವದಿಂದ ತಪಸ್ವಿಯ ಮನವೊಲಿಸಿಕೊಳಲು ಸಾಧ್ಯವೆ? ಎಂದು ಪ್ರಯತ್ನಿಸುವುದೆ ಉಚಿತ.. ನಮ್ಮೆಲ್ಲರ ಬೇರೆಬೇರೆ ತರದ ಆಕರ್ಷಣೆಗಳು ಒಂದಾಗಿ ಪ್ರಲೋಭಿಸಿದಾಗ, ಅದೃಷ್ಟದ ಬೆಂಬಲವಿದ್ದು ಮುನಿವರನ ಮನ ಚಂಚಲವಾದರೆ ನಮ್ಮಲ್ಲಾರಾದರೊಬ್ಬರ ವಶನಾಗುವ ಸಾಧ್ಯತೆ ಹೆಚ್ಚು. ಅಪರೂಪದ ರೂಪಲಾವಣ್ಯಗಳ ಮನೋಹರ ಸಂಗಮವಾದಂತಾಗಿ, ಸ್ತ್ರೀ ಮೋಹದ ಮಾಯೆಯ ಬಲೆಯಲ್ಲಿ ಸಿಲುಕಿಕೊಳ್ಳುವುದು ಸುಲಭ.. ಅದರಿಂದ ನಾವೆಲ್ಲಾ ಒಟ್ಟಾಗಿ ಪ್ರಯತ್ನಿಸುವುದೆ ಸರಿಯೆಂದು ನನ್ನ ಭಾವನೆ ಕೂಡ..”

ಆ ಹೊತ್ತಿನಲ್ಲಿ ಎದುರಿನ ಕನ್ನಡಿಯೊಂದರಲ್ಲಿ ತನ್ನ ಪ್ರತಿಬಿಂಬವನ್ನೆ ನೋಡಿಕೊಳ್ಳುತ್ತ ಮುಂಗುರುಳನ್ನು ತಿದ್ದುತ್ತಿದ್ದ ಮಿತ್ರವೃಂದ ತನ್ನ ಸಹವರ್ತಿಗಳತ್ತ ತಿರುಗಿ, “ನಾವು ಒಟ್ಟಾಗಿ ಕಾರ್ಯವೆಸಗುವುದರಿಂದ ಮತ್ತೊಂದು ಅನುಕೂಲವೂ ಇದೆ..” ಎಂದಳು. ಎಲ್ಲರೂ ಅದೇನು ಎನ್ನುವಂತೆ ಅವಳತ್ತ ತಿರುಗಿ ನೋಡಿದಾಗ ಅವಳು ತನ್ನ ಮಾತು ಮುಂದುವರೆಸುತ್ತ ನುಡಿದಳು “ಒಟ್ಟಾಗಿ ನಿಂತಾಗ ಅವರಿಗೆ ಮುನಿಸಾದರೂ, ಶಾಪವೀಯುವ ಮೊದಲು ಕೊಂಚ ಯೋಚಿಸುವಂತೆ ಮಾಡುತ್ತದೆ.. ಒಬ್ಬಳೆ ಇದ್ದಾಗ ತೋರುವ ಉಗ್ರಕೋಪಕ್ಕೂ, ಗುಂಪಿನಲ್ಲಿದ್ದಾಗ – ಅದೂ ಹೆಂಗಳೆಯರ ಗುಂಪಿನ ಮೇಲೆ ತೋರುವ ಕಾಠಿಣ್ಯದಲ್ಲಿ, ಕೊಂಚ ಹೆಚ್ಚು ಮೆದುತ್ವವಿರುತ್ತದೆಯೆನ್ನುವುದು ನನ್ನ ಅನಿಸಿಕೆ..”

ಎಲ್ಲರ ಮನದ ಮಾತು ಬಯಲಾಗುತ್ತಿದ್ದಂತೆ, ಸ್ವತಂತ್ರವಾಗಿ ಆ ಕಾರ್ಯ ನಿರ್ವಹಿಸುವಲ್ಲಿರುವ ಅವರ ಮನಗಳ ಅಳುಕು ತಂಡವಾಗಿ ಕಾರ್ಯ ನಿರ್ವಹಿಸುವುದೇ ಸುರಕ್ಷಿತವೆಂಬ ಪರೋಕ್ಷ ಭಾವದಲ್ಲಿ ಪ್ರಕಟವಾಗುತ್ತಿದೆ… ಇಲ್ಲವಾದಲ್ಲಿ ಅವರೆಂದೂ ಹೀಗೆ ಒಂದೇ ಸೂರಡಿ ಒಟ್ಟಾದವರಲ್ಲ – ‘ನೀ ಮಾಡು, ಇಲ್ಲವೇ ನನಗೆ ಬಿಡು’ ಎಂಬ ಆತ್ಮವಿಶ್ವಾಸದ, ಹಮ್ಮಿನ ಮಾತಾಡಿದ್ದೆ ಹೆಚ್ಚು… ದೇವರಾಜನಿಂದ ತಮ್ಮ ಕಾರ್ಯದ ವಿವರ ಪಡೆದವರೆ ತಂತಮ್ಮ ಸಖಿಯರ ಗುಂಪಿನ ಜೊತೆ ಕಾರ್ಯರಂಗಕ್ಕಿಳಿಯುವ ಸ್ವತಂತ್ರ ಮನೋಭಾವದ ಅಪ್ಸರಾ ಸ್ತ್ರೀಯರೆ ಅಲ್ಲಿದ್ದವರೆಲ್ಲ… ಅವರ ಈ ಮನೋಭಾವದ ಪೂರ್ಣ ಅರಿವಿದ್ದುದಕೊ ಏನೊ ದೇವೇಂದ್ರನಿಗು ಅವರನ್ನೆಲ್ಲ ಹೇಗೆ ಒಗ್ಗೂಡಿಸಿ ಕಾರ್ಯ ನಿರ್ವಹಿಸಬೇಕೆಂಬ ಗೊಂದಲ ಕಾಡಿದ್ದು.. ಅದರಲ್ಲೂ ಕಾರ್ಯಭಾರದ ಭಾಗಗಳನ್ನು ವಿಭಾಗಿಸಿ ವಿತರಿಸಬೇಕೆಂದರೆ ಯಾರಿಗೆ ಯಾವ ಭಾಗ? ಯಾರು ಹೆಚ್ಚು, ಯಾರು ಕಡಿಮೆ ? ಯಾರಿಗೆ ಯಾವುದು ಸೂಕ್ತ ಎಂದೆಲ್ಲ ಜಿಜ್ಞಾಸೆ, ಜಗಳ ಹುಟ್ಟಿಕೊಂಡು ಇವರ ನಡುವಿನ ವ್ಯಾಜ್ಯ ಪರಿಹಾರದಲ್ಲೆ ಸಮಯ ವ್ಯಯವಾಗಿ, ಹೋದ ಕೆಲಸ ಕೆಟ್ಟುಹೋಗುತ್ತದೆ. ಹೆಣ್ಣು ಮನದ ಸೂಕ್ಷ್ಮಗಳನ್ನರಿತ ದೇವರಾಜ ಅವರ ಪ್ರತಿಷ್ಠೆ, ಅಹಮಿಕೆಗೆ ಘಾಸಿ ಬರದಂತೆ, ಜತೆಗೆ ಹೋದ ಕೆಲಸವೂ ಕೆಡದಂತೆ ಈ ಸಂಧರ್ಭವನ್ನು ನಿಭಾಯಿಸುವುದು ಹೇಗೆ ? ಎಂದು ತಲೆ ಕೆಡಿಸಿಕೊಂಡು ಕೂತಿದ್ದಾಗ ಅವನ ನೆರವಿಗೆ ಬಂದವನು ಕಾಮದೇವ. ಅವನ ಸತಿ ರತಿದೇವಿ ಬರಿಯ ‘ನಿಸರ್ಗ ವಾಸ್ತುಶಿಲ್ಪ ತಜ್ಞೆ’ ಮಾತ್ರವಲ್ಲ, ಸ್ತ್ರೀ ಮನೋವೈಜ್ಞಾನಿಕ ವಿಷಯದಲ್ಲೂ ಪರಿಣಿತಿಯಿರುವ ಜಾಣೆ. ಇಂಥಹ ಸೂಕ್ಷ್ಮ ಸಂಧರ್ಭಗಳಲ್ಲಿ ಅವಳನ್ನು ಜತೆಗಿರಿಸಿಕೊಂಡರೆ ಅಪ್ಸರ ಸ್ತ್ರೀಯರೆಲ್ಲರ ನಡುವಿನ ಸೇತುಬಂಧವಾಗಿ ಕಾರ್ಯ ನಿರ್ವಹಿಸುವುದು ಮಾತ್ರವಲ್ಲದೆ, ಮನ್ಮಥನಿಗೆ ಯೋಜನಾ ರೂಪುರೇಷೆಯ ಸಹಾನುವರ್ತಿಯೂ ಆಗಿರಬಹುದು. ಹೇಗೂ ಅಪ್ಸರೆಯರಿಗೆಲ್ಲ ಅವಳು ಹೊರಗಿನವಳಾದ ಕಾರಣ ಅವಳ ಮುಂದೆ ಸಂಯಮದಿಂದ ಮತ್ತು ಔಚಿತ್ಯದ ಗೆರೆ ದಾಟದ ಹಾಗೆ ಪ್ರವರ್ತಿಸಬೇಕೆನ್ನುವ ಪ್ರಜ್ಞೆಯೂ ಜಾಗೃತವಾಗಿರುತ್ತದಾಗಿ ಕನಿಷ್ಠ ಕಲಹ, ಕಚ್ಚಾಟಗಳಿಗೆ ಅವಕಾಶವಿಲ್ಲದಂತಾಗುತ್ತದೆ… ಕಾಮದೇವನ ಈ ಚಿಂತನೆ ದೇವರಾಜನಿಗು ಪ್ರಿಯವೆನಿಸಿ ‘ಅಸ್ತು’ ಎಂದಿದ್ದ. ಆ ಭೂಮಿಕೆಯನ್ನು ಅವನ ಮೂಲ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಿಭಾಯಿಸಿದ್ದಳು ರತಿದೇವಿ…

ಹೀಗೆ ಸುಮಾರು ಹೊತ್ತು ಅವರ ಮಾತುಕಥೆಯನ್ನೆಲ್ಲ ಆಲಿಸುತ್ತಿದ್ದ ರತಿದೇವಿ ಕೊನೆಗೊಂದು ಮುಕ್ತಾಯ ಹಾಡುವಂತೆ, “ಅಲ್ಲಿಗೆ ಒಟ್ಟಿಗೆ ಸಮಷ್ಟಿಯಲ್ಲಿ ಧಾಳಿ ನಡೆಸುವುದು ಎಂದು ನಿರ್ಧಾರವಾದಂತಾಯ್ತಲ್ಲ ? ಇನ್ನು ಅದನ್ನು ಕಾರ್ಯಗತಗೊಳಿಸುವ ಬಗೆಯನ್ನು ನಿರ್ಧರಿಸಿಕೊಳ್ಳಿ..” ಎಂದು ಮುಂದಿನ ತಾರ್ಕಿಕ ನಡೆಯತ್ತ ಮಾತು ತಿರುಗಿಸಿದಳು. ಅಲ್ಲಿಂದ ಮುಂದೆ ಎಲ್ಲರು ತಮ್ಮ ಸಾಮರ್ಥ್ಯ, ಆಕರ್ಷಣೆಗನುಸಾರ ಏನು ಮಾಡಿದರೆ ಉಚಿತ ಎಂದು ಚರ್ಚಿಸತೊಡಗಿದರು. ವಿವರಗಳೆಲ್ಲ ಮೂಡತೊಡಗಿದಂತೆ ಒಂದು ವಿಚಾರದಲ್ಲಿ ಅವರೆಲ್ಲರ ಸಹಾನುಮತ ನಿಚ್ಚಳವಾಗಿ ಎದ್ದು ಕಂಡಿತ್ತು – ತಾವೇನೇ ಮಾಡಿದರು ಅತಿರೇಕದ ಪ್ರಚೋದನೆಗಿಳಿಯದೆ, ನಯವಿನಯದಲ್ಲಿ ಒಲಿಸಿಕೊಳುವ ಹಾದಿಯನ್ನೆ ಹಿಡಿಯಬೇಕೆಂಬುದು. ಯೋಜನೆಯ ಕಾರ್ಯತಂತ್ರದ ವಿವರಗಳನ್ನೆಲ್ಲ ಪರಸ್ಪರರಲ್ಲೆ ಚರ್ಚಿಸಿ ಉಪಾಯಗಳು ಯಶಸ್ವಿಯಾಗದ ಹೊತ್ತಲ್ಲಿ ಹೂಡಬೇಕಾದ ಬದಲಿ ಮಾರ್ಗೋಪಾಯಗಳನ್ನು ವಿಶದೀಕರಿಸಿಕೊಂಡು ತಮ್ಮ ಕಾರ್ಯಾಚರಣೆಯ ದಿನ, ಹೊತ್ತು, ಮುಹೂರ್ತಗಳನ್ನು ನಿರ್ಧರಿಸಿ, ವಿಶ್ರಮಿಸಿಕೊಳ್ಳಲು ತಂತಮ್ಮ ಬಿಡಾರಗಳಿಗೆ ತೆರಳಿದರು ಮುಂದಿನ ಹೆಜ್ಜೆಗಳನ್ನೆ ಮೆಲುಕು ಹಾಕುತ್ತ.

***********

ಯಾಕೊ ಸುತ್ತಲ ವಾತಾವರಣ ಮೊದಲಿನಂತಿಲ್ಲವೆಂದು ನರನ ಗಮನಕ್ಕು ಬಂದಿದೆ..

ಉಗ್ರತಪದ ಹೆಸರಿನಲ್ಲಿ ಏಕಾಗ್ರತೆಯನ್ನೆಲ್ಲ ಕ್ರೋಢೀಕರಿಸಿ ಮನಃಶ್ಯಕ್ತಿಯ ಸಮಗ್ರತೆಯನ್ನೆಲ್ಲ ಏಕಬಿಂದುವಿನಲ್ಲಿ ಕೇಂದ್ರೀಕರಿಸಿಕೊಳ್ಳುವ ಕಾರ್ಯ ನಿರಂತರವಾಗಿ ನಡೆದಿದೆ. ಆದರದು ಒಂದೆರಡು ದಿನದ ಕೆಲಸವಲ್ಲ – ಒಂದೇ ಸಮನೆ ಒಂದು ಸಹಸ್ರ ವರ್ಷಗಳವರೆಗು ಸತತವಾಗಿ, ನಿರಂತರವಾಗಿ, ನಿಲ್ಲಿಸದೆ ನಡೆಸಬೇಕಾದ ಕಾರ್ಯ. ಹಾಗೆ ನಡೆದರಷ್ಟೆ ನಿತ್ಯವೂ ಅಷ್ಟಿಷ್ಟು ಗಾತ್ರದ ತೇಜೋಪುಂಜ ಮೂಲಶಕ್ತಿಗೆ ಸಂಕಲಿತವಾಗಿ ಸೇರಿಕೊಳ್ಳುವುದು. ಆದರೆ ಹಾಗೆ ಸೇರಿದ ಶಕ್ತಿಪ್ರಮಾಣ ಆ ಪ್ರಯಾಸದಲ್ಲೆ ನಷ್ಟವಾಗದಿರಬೇಕಾದರೆ, ಅದಕ್ಕೆ ಬೇಕಾದ ‘ಕನಿಷ್ಠ ಘನಿಷ್ಠ ಮೊತ್ತ’ವನ್ನು ತಲುಪಬೇಕು. ಈ ಘನಿಷ್ಠ ಸ್ಥಿತಿ ಪ್ರತಿ ನೂರು ವರ್ಷದ ತಪಕ್ಕೆ ಸಮನಾದ ಕಾರಣ, ಪ್ರತಿ ನೂರರ ನಡುವೆ ಯಾವ ಅಚಾತುರ್ಯ ಘಟಿಸದಂತೆ ನೋಡಿಕೊಳ್ಳಬೇಕು. ಆಗಷ್ಟೆ ಅದು ಮತ್ತೆ ದ್ರವಿಸಿ ಕರಗಿಹೋಗದೆ, ಸ್ಥಿರಶಕ್ತಿಯ ರೂಪದಲ್ಲಿ ನೆಲೆ ನಿಲ್ಲುವ ಸಾಮರ್ಥ್ಯ ಪಡೆಯುವುದು. ಹೀಗೆ ಪ್ರತಿ ನೂರರ ಕಟ್ಟಿನಲ್ಲಿ ಸಂಗ್ರಹಿತವಾದ ಆ ಶಕ್ತಿತೇಜದ ಸಹಸ್ರ ವರ್ಷಗಳ ಮೊತ್ತವಷ್ಟೆ, ಸಹಸ್ರಕವಚನ ಜತೆಗಿನ ಒಂದು ಬಾರಿಯ ಯುದ್ಧಕ್ಕೆ ಬೇಕಾದ ಶಕ್ತಿಮೂಲದ ಸವಲತ್ತನ್ನೊದಗಿಸುವುದು.

ಒಂದು ವೇಳೆ ನೂರರ ನಡುವೆ ಏನಾದರೂ ತಪೋಭಂಗವಾಗಿ ಹೋಯ್ತೆಂದರೆ, ಅಲ್ಲಿಯತನಕ ಅರೆ-ಸ್ಥಿರ ರೂಪದಲ್ಲಿದ್ದ ತೇಜೋಪುಂಜದ ಮೇಲಿಟ್ಟಿದ್ದ ಹಿಡಿತ ಸಡಿಲವಾಗಿ, ಅವೆಲ್ಲ ಶಕ್ತಿ ಮತ್ತೆ ಸುತ್ತಲ ಪ್ರಕೃತಿಯಲ್ಲಿ ಕರಗಿ ಮಾಯವಾಗಿ ಹೋಗಿ, ಆ ಹಂತದ ಆರಂಭಿಕ ಬಿಂದುವಿಗೆ ಮರಳಿಬಿಡುವುದು… ಹಾಗೇನಾದರು ಆದಲ್ಲಿ ಆ ಹಂತದಲ್ಲಿ ಅದುವರೆವಿಗು ಮಾಡಿದ ತಪವೆಲ್ಲ ನಷ್ಟವಾದ ಹಾಗೆ ಲೆಕ್ಕ; ಮತ್ತೆ ಅದನ್ನು ಮರು ಗಳಿಸಲು ಮೊದಲಿನಿಂದ ತಪವನ್ನಾರಂಭಿಸಬೇಕು… ಒಂದು ಸಾವಿರ ವರ್ಷವಾಗುತ್ತಿದ್ದಂತೆ ಗಳಿಸಿದ ಸ್ಥಿರಶಕ್ತಿಯ ಸಾಮರ್ಥ್ಯದೊಂದಿಗೆ ನರನು ಕದನರಂಗಕ್ಕಿಳಿದರೆ, ನಾರಾಯಣನು ಹಿಂದಿನ ಕದನ ಮುಗಿಸಿ ವಿಶ್ರಾಂತಿಯ ರೂಪದಲ್ಲಿ ಮತ್ತೆ ಸಹಸ್ರ ವರ್ಷದ ತಪಕಿಳಿಯುತ್ತಾನೆ – ಮುಂದಿನ ಕದನಕ್ಕೆ ಅಣಿಯಾಗಲೆಂದು. ಆ ಹೊತ್ತಿನಲ್ಲಿ ಕಾದಾಡುವ ನರನು ತನ್ನ ತಪದ ಹೊತ್ತಿನ ಶಕ್ತಿಯನ್ನೆಲ್ಲ ಧಾರೆಯೆರೆದು ಅಸುರನನ್ನು ದಮನಿಸಬೇಕು – ಪ್ರತಿ ಕಾದಾಟದಲ್ಲು ಒಂದು ಕವಚ ಬೇಧಿಸಿ ಸಹಸ್ರಕವಚನನ್ನು ಅಷ್ಟರಮಟ್ಟಿಗೆ ದುರ್ಬಲಗೊಳಿಸುತ್ತ…

ಕೇವಲ ಒಂದೆ ಕವಚವಾಗಿದ್ದರೆ ಅದನ್ನು ಹರಿದು ಕೆಡವಿ ದೈತ್ಯ ಸಂಹಾರಗೈಯುವುದೇನು ದೊಡ್ಡ ಕೆಲಸವಾಗಿರಲಿಲ್ಲ ನರನಾರಾಯಣರಿಗೆ. ಆದರೆ ನಿಜವಾದ ತೊಡಕಿದ್ದುದು ಆ ಕವಚಗಳ ಸಂಖ್ಯೆಯಲ್ಲೆ. ಸಹಸ್ರಕವಚನೆಂತಹ ಚಾಣಾಕ್ಷಮತಿಯೆಂದರೆ ವರ ಬೇಡುವ ಹೊತ್ತಲ್ಲಿ ಸಾವಿರ ಕವಚ ಬೇಡಿದ್ದಲ್ಲದ್ದೆ, ಪ್ರತಿಯೊಂದರ ಸಾಮರ್ಥ್ಯ ಸಾವಿರ ವರ್ಷದವರೆಗು ತಾಳಿಕೊಳ್ಳುವ ಹಾಗೆ ಸೂರ್ಯದೇವನಿಂದ ವರ ಪಡೆದುಬಿಟ್ಟಿದ್ದ. ಕವಚವೆಂದರೆ ಅದೇನು ಭೌತಿಕ ಕವಚವಲ್ಲ; ಸೂರ್ಯದೇವ ಅವನ ತಪಸ್ಸಿಗೆ ಮೆಚ್ಚಿ ಪ್ರಕೃತಿದತ್ತವಾಗಿದ್ದ ಪಂಚಭೂತಗಳ ಮೂಲವಸ್ತುವಿನ ಶಕ್ತಿ ಸಮಷ್ಟಿಯನ್ನೆ ಸಮೀಕರಿಸಿ ಬೇಧಿಸಲಸಾಧ್ಯವಾದ ಜೈವಿಕ ಕವಚವನ್ನೆ ಸೃಜಿಸಿಬಿಟ್ಟಿದ್ದ ಅಸುರನಿಗಾಗಿ. ಆಕಾಶ, ಭೂಮಿ, ಜಲ, ವಾಯು, ಅಗ್ನಿಗಳ ಸಮಷ್ಟಿತ ಶಕ್ತಿಯ ಫಲಿತವಾದ ಈ ವಸ್ತು ಜೈವಿಕ ಅಬೇಧ್ಯ ಕವಚದ ರೂಪದಲ್ಲಿ ಅಸುರನ ತನುವನಾವರಿಸಿಬಿಟ್ಟಿತ್ತು ರಕ್ಷಣೆಯ ಭದ್ರ ಕೋಟೆಯಂತೆ. ಅದನ್ನು ಬೇಧಿಸಿದರೂ ಸಹ, ಅದರ ಮೂಲದ ಸತ್ವ ಆ ಛೇಧನದಿಂದಲೆ ಉಂಟಾದ ಮಿಕ್ಕ ಶಕ್ತಿಯನ್ನು ಮೂಲವಸ್ತುವಾಗಿ ಬಳಸಿ, ಅದರಿಂದಲೆ ಹೊಸ ಕವಚವನ್ನು ಸೃಜಿಸುವಂತೆ ಇತ್ತದರ ವಿನ್ಯಾಸ. ಕವಚದಿಂದ ಕವಚ ಸೃಷ್ಟಿಗೆ ಈ ಮಿಕ್ಕುಳಿವ ಶಕ್ತಿ ಕುಂಠಿತವಾಗುತ್ತ ಹೋಗುವುದಾದರು ಸಾವಿರ ಬಾರಿಯ ಪುನರಾವರ್ತನೆಗೆ ಸಾಲುವಷ್ಟು ಇದ್ದ ಕಾರಣ ಹೆಚ್ಚು ಕಡಿಮೆ ಅಮರತ್ವವನ್ನೆ ಪಡೆದಂತಾಗಿತ್ತು ದಂಭೋದ್ಭವ ಸಹಸ್ರಕವಚನಿಗೆ.

(ಇನ್ನೂ ಇದೆ)

(Link to next episode 09 : https://nageshamysore.wordpress.com/2016/03/06/00555-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%af/)