00559. ಜಾರಲೇಕೆ ಮನವೇ ಪಾತಾಳಕೆ ?


00559. ಜಾರಲೇಕೆ ಮನವೇ ಪಾತಾಳಕೆ ?
________________________  

ಧವಳ ಗಿರಿಯೆತ್ತರದ ಶೃಂಗದಲಿರಿಸಿದೆ ನಿನ್ನ
ಏಕೆ ಜಾರುವೆ ಮನಸೆ ಪಾತಾಳದಾಳಕೆ ?
ನೆಲದೆತ್ತರದ ಕೊಚ್ಚೆ ಕೊಂಪೆಗಳಿಂದಾಚೆಗೆ
ಮುಚ್ಚಟೆಯಿಂದಿಟ್ಟರು ನೆಲ ಕಚ್ಚುವೆಯೇಕೆ ? || 

ನಿನ್ನನಿರಿಸಿದ ಎತ್ತರ, ನಿನಗರಿವಾಗದ ಬಿತ್ತರ
ಅರಿತೂ ಅರಿಯದ ಹಾಗೆ ನಟಿಸುವುದು ಸರಿಯೆ ?
ಮತ್ತೆ ಮತ್ತೇರಿಸಿಯು, ಮತ್ತೆ ಜಾರಿದರೆ ನೀನಿಂತು
ಭ್ರಮನಿರಸನ ಮನದೆ, ನಿನದೆಂತ ಜಾಣ್ಮೆಯೆ ? ||

ನೀ ಜಾರಿದ ನೋವು, ನಿನಗಲ್ಲ ನನಗೆ ಮನ
ನಾನು ನಾನಾಗಿಲ್ಲ, ಮನಸಿಲ್ಲದೆಡೆ ಖಾಲಿ ಗುನುಗು
ನೀ ಕುಸಿಯುತಿರೆ ಕಣ್ಣಲ್ಲಿ , ದಿಗ್ಬ್ರಾಂತ ವೇದನೆ, ಖೇದ
ತುಂಬಿ ತುಳುಕುತಿದೆ ಕಣ್ಣಾಲಿ, ನಿಷ್ಠೂರ ನಡಿಗೆಯೆ ಬಡಿಗೆ ||

ಮನಸೆ ನಿನಗಿರಬಹುದು ಕ್ಷುಲ್ಲಕ, ನಾನೇರಿಸಿದೆತ್ತರ
ನಾ ಸಹಿಸಲೆಂತೊ ಕಾಣೆ, ನಿನ್ನಿಳಿಸಿರೆ ಸ್ತರ ಕನಿಷ್ಠ
ಸಲ್ಲಬಹುದು ನಿನಗದು ಸುಲಭ, ಆಡಿ ನಾನು ನನ್ನಿಷ್ಟ
ಭರಿಸಲೆಂತು ನಾನು, ಮುಕುಟವಾಗಿಸಲೆಂತು ಪದತಲ ? ||

ಜಾರುವುದ ನೋಡಲಾರೆ, ಕೂಡಲಾರೆ ಚಡಪಡಿಕೆ ಪ್ರಕ್ಷುಬ್ದ
ಮತ್ತಷ್ಟಿಳಿಯುವ ಮುನ್ನ, ಕಟ್ಟಿಟ್ಟುಬಿಡುವೆನೊಂದು ಸ್ಥಿರ ಚಿತ್ರ
ನೀ ಮತ್ತೆ ಜಾರಿದರೂ ನಿಜದೆ, ಕಾಣದಂತದರಡಿ ಮರೆಮಾಚಿ
ಮತ್ತಷ್ಟು ಕುಸಿವುದ ತಡೆವೆ, ಮನಸೆ ನಿಲಿಸುತ ನಿನ್ನನದೆ ಶೃಂಗದೆ ||

– ನಾಗೇಶ ಮೈಸೂರು

Picture :   

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s