00560. ಅಹಲ್ಯಾ ಸಂಹಿತೆ – ೧೧ (ನರ ತಪೋಭಂಗ )


00560. ಅಹಲ್ಯಾ ಸಂಹಿತೆ – ೧೧ (ನರ ತಪೋಭಂಗ)
____________________________

(Link to previous episode 10: https://nageshamysore.wordpress.com/2016/03/06/00556-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%a6/)

ದೇವರಾಜನ ಅಣತಿಯನುಸಾರ ನರನ ತಪದ ಹತ್ತಿರದ ವಲಯಕ್ಕೆ ಲಗ್ಗೆ ಹಾಕಿದ ಅಪ್ಸರೆಯರಿಗಾದರು ಅಲ್ಲಿಂದ ಮುಂದಕ್ಕೆ ಹೆಜ್ಜೆಯಿಡುವ ಧೈರ್ಯವಿನ್ನು ಬಂದಿಲ್ಲ..

ದಿನಕ್ಕೈದೊ ಹತ್ತೊ ಹೆಜ್ಜೆಯಷ್ಟೆ ಹತ್ತಿರ ಹತ್ತಿರವಾಗುತ್ತ ಬಂದ ಅಪ್ಸರಾ ಸ್ತ್ರೀಗಣ ಸುತ್ತ ಮುತ್ತಲ ಜಾಗವನ್ನು ಸ್ವಚ್ಛಗೊಳಿಸುತ್ತಲೊ, ಸುತ್ತ ಚೆಲ್ಲಾಡಿ ಹೋಗಿದ್ದ ಕಸಕಡ್ಡಿ ಎತ್ತುತ್ತಲೊ ಒಂದಲ್ಲ ಒಂದು ನೆಪದಲ್ಲಿ ಅಡ್ಡಾಡುತ್ತ ಇದ್ದಾರೆ, ಕೊಂಚ ಕೊಂಚವೆ ಆ ಜಾಗದ ಹತ್ತಿರ ಹತ್ತಿರಕ್ಕೆ ಸರಿಯುತ್ತ…

… ಈಗೆಲ್ಲರು ಸಮೀಪಕ್ಕೆ ಬಂದುಬಿಟ್ಟಿದ್ದಾರೆ… ಅವರೆಲ್ಲರ ಸಮೂಹಗಾಯನ, ವಾದನ, ನಾಟ್ಯಗಳು ದೂರದ ಸದ್ದುಗಳಾಗಿ ಉಳಿದಿಲ್ಲ.. ತಪದಲ್ಲಿ ಮೈ ಮರೆತು ಕೂತ ಮುನಿವರ ಕಣ್ಣಿಗೆ ಗೋಚರಿಸುವಷ್ಟು ಹತ್ತಿರದಲ್ಲಿ… !

ನಾಟ್ಯದ ನೆಪದಲ್ಲಿ ಅಷ್ಟಿಷ್ಟೆ ಹತ್ತಿರ ಸುಳಿದಂತೆ ಮಾಡಿ ಅಷ್ಟೇ ವೇಗದಲ್ಲಿ ಹಿಂದಕ್ಕೆ ಸರಿದು ನೀರಿನಾಳ ನೋಡುತ್ತಿದ್ದಾರೆ ಕೆಲವು ಮೋಹನಾಂಗಿಯರು..

ಅಂದೊಂದು ದಿನ ಮಿತ್ರವೃಂದೆ ನರ್ತನದ ಕೊನೆಯಲ್ಲಿ ಮುನಿವರನಿಗೆ ವಂದಿಸುವವಳ ಹಾಗೆ ಅವನ ಪಾದದ ಬಳಿ ಸರಿದು , ಅವನ್ನು ಮೆಲುವಾಗಿ ಸ್ಪರ್ಶಿಸಿ ಆಶೀರ್ವಾದ ಪಡೆವವಳಂತೆ ನಟಿಸಿ ಪಕ್ಕಕ್ಕೆ ನಡೆದುಬಿಟ್ಟಳು.. ! ಆ ನಂತರವೂ ಅವಳಿಗೇನೂ ಆಗದೆ ಇದ್ದದ್ದನ್ನು ಕಂಡು ಮಿಕ್ಕವರ ಧೈರ್ಯ, ಸ್ಥೈರ್ಯಗಳು ಹೆಚ್ಚಿದಂತಾಗಿ ಒಬ್ಬೊಬ್ಬರಾಗಿ ನಮಿಸುವ ನೆಪದಲ್ಲಿ ಹತ್ತಿರ ಸುಳಿದು ಮೆಲುವಾಗಿ ಪಾದ ಸ್ಪರ್ಶಿಸಿ ಬರತೊಡಗಿದರು…

ಪಾದದಿಂದಾರಂಭವಾದ ಸ್ಪರ್ಶ ಕರಸ್ಪರ್ಶವಾಗಿ, ‘ಆಕಸ್ಮಿಕ’ ಭುಜ ಸ್ಪರ್ಶ ಅಥವಾ ಮತ್ತಾವುದೊ ಗಮನ ಸೆಳೆಯುವ ಸೆರಗಿನ ನವಿರಾದ ಸವರುವಿಕೆಯೊ ಆಗಿ ಬದಲಾದಂತೆ ನರನ ಸಾತ್ವಿಕ ಮನದಲ್ಲೂ ಕೋಪದ ಉರಿ ಕಿಡಿಯ ರೂಪದಲ್ಲಿ ಕಾಣಿಸಿಕೊಳ್ಳತೊಡಗಿದೆ.. ಆದರೆ ಬಲು ಸಂಯಮದಿಂದ ತಡೆಹಿಡಿದುಕೊಂಡಿದ್ದಾನೆ – ತಪಸ್ಸು ಭಂಗಿಸಬಾರದಲ್ಲ ಎನ್ನುವ ಒಂದೆ ಕಾರಣಕ್ಕೆ…

ಆ ಸಂಯಮವನ್ನು ಸ್ವೇಚ್ಛೆಯ ಪರವಾನಗಿಯೆಂದು ಭಾವಿಸಿಕೊಂಡ ರಮಣಿಯರಲ್ಲಿ ಅದು ಮತ್ತಷ್ಟು ಧೈರ್ಯದ ಕಸುವನ್ನು ತುಂಬುತ್ತಿದೆ..

ಅದು ಹೀಗೆ ಅದೆಷ್ಟು ದಿನ ನಡೆದೀತು..?

ನೋಡು ನೋಡುತ್ತಿದ್ದಂತೆ ಅದೊಂದು ದಿನ ಅವರಲ್ಲೊಬ್ಬಳು ಧೈರ್ಯ ಮಾಡಿ ಪ್ರದಕ್ಷಿಸುವವಳಂತೆ ಹತ್ತಿರ ಬಂದವಳೆ, ಅವನ ಹಣೆಗೊಂದು ಹೂ ಮುತ್ತು ಕೊಟ್ಟು ಓಡಿಯೆಬಿಟ್ಟಳು..! ಅದನ್ನೆ ನೋಡುತ್ತಿದ್ದ ಮತ್ತೊಬ್ಬಳಿಗೆ ಅದೇನಾವೇಶ ಬಂದಿತೊ – ನೇರ ಅವನ ಕೆನ್ನೆಗಳ ಮೇಲೂ ಮುತ್ತೊಂದನ್ನಿರಿಸಿ ವಯ್ಯಾರದಿಂದ ನರ್ತಿಸುತ್ತ ನಡೆದುಬಿಟ್ಟಳು… !!ಅವರಿಬ್ಬರ ಕ್ರಿಯೆಯಿಂದಲೂ ಏನೂ ಆಗದೆ ಇದ್ದದ್ದು ಕಂಡು ಇನ್ನು ಹೆಚ್ಚಿನ ಧೈರ್ಯಗೊಂಡ ಮೂರನೆಯವಳು ಶೀಘ್ರ ಗತಿಯ ನರ್ತನದೊಂದಿಗೆ ಬಿರುಸಿನ ತಾಳದ ಹೆಜ್ಜೆ ಹಾಕುತ್ತ, ಗಿರಿಗಿರಿಗಿಟ್ಟಲೆ ಸುತ್ತುತ್ತ ಅವನ ಹತ್ತಿರ ನಡೆದವಳೆ ನೇರ ಅವನ ತುಟಿಗಳನ್ನೆ ಚುಂಬಿಸಿಬಿಟ್ಟಳು…!!!

ಆಗ ಸ್ಪೋಟಿಸಿಹೋಯ್ತು ಅಗ್ನಿ ಪರ್ವತ…. !

ಸಂಯಮದ ಕೋಟೆ ಕರಗಿ, ಚಪ್ಪಡಿಯ ಅಡಿಗಲ್ಲಂತಿದ್ದ ಸಹನೆ ಸಿಡಿದೆದ್ದು ಚೂರುಚೂರಾದಂತಾಯಿತು ಅವಳ ಆ ಅತಿಕ್ರಮಣದಿಂದ…

ಅದುವರೆವಿಗು ತಡೆಹಿಡಿದಿದ್ದ ಒಡ್ಡೊಡೆದು ಚೆಲ್ಲಾಡಿ ಹೋಗಿ, ಆ ಗಳಿಗೆಯಲ್ಲಿನ ಪೂರ್ವಾಪರ ವಿವೇಚನಾ ಶಕ್ತಿಯ ಕಟ್ಟೆಲ್ಲ ಸಡಿಲಿಸಿದಂತಾಗಿ ತಟ್ಟನೆ ಕಣ್ಣು ಬಿಟ್ಟ ಮುನಿವರ – ತನ್ನ ತಪೋಭಂಗವಾಗುತ್ತಿದೆಯೆನ್ನುವುದರ ಪರಿವೆಯೂ ಇರದವನಂತೆ..

ಕಣ್ಣು ಬಿಟ್ಟವನ ಮುಂದೆ ಉದ್ದಕ್ಕು ಬೆದರಿದ ಹರಿಣಿಯರಂತೆ, ದಿಗ್ಭ್ರಮೆಯಲಿ ಬೆಚ್ಚಿ ನಿಂತ ರಮಣಿಯರ ಸಾಲು.. ಅವರ ಸೌಂದರ್ಯ, ಅಂಗಲಾಸ್ಯ, ಹಾವಭಾವ, ವಸ್ತ್ರಾದಿ ಅಭರಣಗಳನ್ನು ನೋಡುತ್ತಿದ್ದಂತೆಯೆ ಅರಿವಾಗಿಹೋಗಿತ್ತು ಅವರಾರು ಎಂದು; ಮತ್ತವರ ಹುನ್ನಾರದ ಹಿಂದಿರುವವರು ಯಾರೆಂದು ಕೂಡ…

ಲೋಕಕಲ್ಯಾಣದ ಸಲುವಾಗಿ ವರ್ಷಾಂತರಗಳ ತಪದಲ್ಲಿ ತಮ್ಮನ್ನೆ ಸವೆಸುತ್ತಿರುವ ಪರಿಭಾವವನ್ನು ಲೆಕ್ಕಿಸದೆ, ಅಧಿಕಾರ ಲಾಲಸೆ ಮತ್ತು ಸಲ್ಲದ ಸಂಶಯಗಳ ಬೆನ್ನಟ್ಟಿ ತಪೋಭಂಗಕ್ಕೆ ಕೈ ಹಾಕಿದ ದೇವತೆಗಳ ಪೊಗರಿಗೆ ನಖಶಿಖಾಂತವೆಲ್ಲ ಉರಿದೆದ್ದಂತಾಗಿ, ಆ ಕಾವಿನ ತೀವ್ರತೆ ಕಣ್ಣಿಗೆ ನುಗ್ಗಿದ ಕಾದ ಲೋಹದ ಚೆಂಡಾಗಿ ಪ್ರತಿಫಲಿಸತೊಡಗಿತು. ತಮ್ಮ ಅಪರಿಮಿತ ಶಕ್ತಿಯ ಅರಿವಿದ್ದೂ, ತಮ್ಮಂತಹ ತಪಸ್ವಿಗಳು ಕೇವಲ ಈ ಸಾಧಾರಣ ಹೆಣ್ಣುಗಳ ರೂಪು ಲಾವಣ್ಯಕ್ಕೆ ಮರುಳಾಗಿ ಮೈಮರೆತು ಶರಣಾಗುವರೆಂದು ಭಾವಿಸಿದ ಅವನ ಬಾಲಿಶತನಕ್ಕೆ ಮರುಕಪಡುತ್ತಲೆ ಅವನಿಗೆ ಸರಿಯಾದ ಪಾಠ ಕಲಿಸಿಯೆ ತೀರಬೇಕೆಂಬ ಹಂಬಲದ ತೀವ್ರ ಒತ್ತಡವನ್ನು ಬಲವಂತದಿಂದ ನಿಗ್ರಹಿಸಲೆತ್ನಿಸುತ್ತ ಇರುವಾಗ ತನ್ನ ತುಟಿಯ ಚುಂಬನದ ಅಧಿಕ ಪ್ರಸಂಗತನ ಮಾಡಿದ ಹೆಣ್ಣು ಥರಥರನೆ ನಡುಗುತ್ತಾ ನಿಂತಿರುವುದು ಕಣ್ಣಿಗೆ ಬಿತ್ತು.

ಆ ಅಪ್ಸರೆಯನ್ನು ನೋಡುತ್ತಿದ್ದ ಹಾಗೆ ಒಂದೆಡೆ ಮರುಕವುದಿಸುತ್ತಿದ್ದರೆ ಮತ್ತೊಂದೆಡೆ, ” ಸೌಂದರ್ಯ, ವಯ್ಯಾರದಿಂದ ಯಾರನ್ನಾದರು ಗೆಲ್ಲಬಲ್ಲೆವೆಂಬ ಹಮ್ಮಿಂದಲ್ಲವೆ ಈ ದೇವಕನ್ನಿಕೆಯರೊಡಗೂಡಿದ ದೇವೇಂದ್ರ ಇಷ್ಟು ಕೊಬ್ಬಿ ಮೆರೆಯುತ್ತಿರುವುದು ? ಯಕಃಶ್ಚಿತ್ ಅಷ್ಟಿಷ್ಟು ಲಕ್ಷಣ, ಮೈ ಮಾಟವಿರುವ ಕಾರಣಕ್ಕೆ ಇಷ್ಟು ಪೊಗರೆ ?” ಎನ್ನುವ ಆಕ್ರೋಶ.

ಸೌಂದರ್ಯ ಲಕ್ಷಣಗಳನುಸಾರ ತಿದ್ದಿ ತೀಡಿದ ಲಾವಣ್ಯವತಿಯರು ಹೇಗಿರಬಹುದೆಂಬ ಕಲ್ಪನೆಯೂ ಇಲ್ಲದ ಇವರಿಗೆ ಪಾಠ ಕಲಿಸುವುದೆಂತು ? ಅದಕ್ಕಿಂತ ಮಿಗಿಲಾಗಿ ಸಮಯವನ್ನು ಹೆಚ್ಚು ವ್ಯರ್ಥ ಮಾಡದೆ ಇವರೆಲ್ಲ ಇಲ್ಲಿಂದ ತಕ್ಷಣವೆ ತೊಲಗಿ ಹೋಗಿಬಿಡುವಂತೆ ಮಾಡುವುದಾದರು ಹೇಗೆ ?

ಆ ನಡುಗುವ ಅಬಲೆಯನ್ನೆ ನೋಡುತ್ತ ಅಂತರಂಗದಲ್ಲೆ ಮಥನ ನಡೆಸಿದ್ದ ನರನಿಗೆ ಚಕ್ಕನೆ ಮಿಂಚು ಹೊಳೆದಂತಾಯ್ತು..ಅರೆ! ಹೌದಲ್ಲಾ ? ತಾವು ಅಸೀಮ ರೂಪವತಿಯರು, ಲಾವಣ್ಯದ ಮೇರು ಶಿಖರಗಳೆಂದು, ಅದರ ಬಲೆಗೆ ಯಾರನ್ನಾದರೂ ಕೆಡವಿ ಕರವಶ ಮಾಡಿಕೊಳ್ಳಬಲ್ಲೆವೆಂದು ತಾನೆ ಇವರಿಗೆ ಇಷ್ಟು ಅಹಂ? ಆ ಅಹಮಿಕೆಯ ಬುಡಕ್ಕೆ ಪೆಟ್ಟು ಕೊಟ್ಟುಬಿಟ್ಟರೆ ? ಹೆಣ್ಣಿಗೆ ಹೆಣ್ಣೆ ಶತೃವಂತೆ ; ಆ ಹೆಣ್ಣಿನ ಸ್ವರೂಪ ಕಲ್ಪನೆಯನ್ನೆ ಬಳಸಿ ಇವರೆಂದು ತಿರುಗಿ ನೋಡದಂತಹ ಏಟು ಕೊಟ್ಟರೆ ಹೇಗೆ ? ಹೇಗೂ ತಾವು ಹಿನ್ನಲೆಯಲ್ಲಿ ಮಾಡುತ್ತಿರುವ ಪ್ರಯೋಗದ ಸಫಲ ಪರಿಣಾಮಗಳು ಕೈಯಳತೆಯಲ್ಲೆ ಸಿಗುವಂತೆ ಆಶ್ರಮದಲ್ಲಿ ಸುರಕ್ಷಿತವಾಗಿ ಕುಳಿತಿವೆ. ಅದರ ಬಳಕೆಗೆ ಸೂಕ್ತ ಸಮಯವಾಗಲಿ, ವೇದಿಕೆಯಾಗಲಿ ಇದುವರೆವಿಗು ಸಿಕ್ಕಿರಲಿಲ್ಲ.. ಈಗ ಅದನ್ನು ಬಳಸಲು ಸಕಾಲವೆಂದೇಕೆ ಪರಿಗಣಿಸಬಾರದು?

ಈ ಆಲೋಚನೆ ಬರುತ್ತಿದ್ದಂತೆ ಅದೇ ಬಿರುಸಿನ ಮುಖಭಾವದಲ್ಲಿ ಸರಸರನೆದ್ದು ವೇಗವಾಗಿ ಹೆಜ್ಜೆಯಿಕ್ಕುತ್ತ ತನ್ನ ಕುಟೀರದೊಳಗೆ ಬಿರುಗಾಳಿಯಂತೆ ಹೊಕ್ಕಿಕೊಂಡುಬಿಟ್ಟ ನರ. ಮುಂದೇನು ಗತಿ ಕಾದಿದೆಯೊ ಎಂದು ತವಕಾತಂಕಗಳಿಂದ ಕಾಯುತ್ತ ನಿಂತವರಿಗೆ ಅವನು ಒಳಗಿರುವ ಒಂದೊಂದು ಕ್ಷಣವೂ ಯುಗದಂತೆ ಭಾಸವಾಗಿ, ನಿಂತಲ್ಲೆ ನಿಲಲಾಗದ ಚಡಪಡಿಕೆಯಲ್ಲಿ ಒದ್ದಾಡತೊಡಗಿದ್ದರು.

ಒಳಗೆ ಹೋದ ಅದೇ ಬಿರುಸಿನಲ್ಲಿ ಹೊರಬಂದ ನರನ ಕೈಯಲೊಂದು ಪೂರ್ತಿ ಭರ್ತಿ ತುಂಬಿದ ಕಮಂಡಲವನ್ನು ಕಾಣುತ್ತಲೆ, ‘ಮುಗಿಯಿತಿನ್ನು.. ಅಯ್ಯೊ ಗ್ರಹಚಾರವೆ? ಮುನಿವರನ ಕೈಯಲ್ಲಿ ಮಂತ್ರ ಜಲ.. ಇನ್ನು ಕ್ಷಣಗಳ ಮಾತಷ್ಟೆ.. ಅದನ್ನು ಪ್ರೋಕ್ಷಿಸಿ ತಮ್ಮನ್ನೆಲ್ಲ ಶಾಪಕ್ಕೀಡು ಮಾಡಿಬಿಡುವವನಿದ್ದಾನೆ ಈ ಮಹಾತ್ಮ.. ದೇವರಾಜನನಿಗೆ ಸಹಾಯ ಹಸ್ತ ಚಾಚಲು ಹೋಗಿ ನಾವೆ ಸಂಕಷ್ಟದಲ್ಲಿ ಸಿಲುಕಬೇಕಾಯ್ತೆ ?’ ಎಂದು ಮಮ್ಮಲ ಮರುಗುತ್ತ ಮುಂದಿನದನ್ನು ನೋಡಲಾರೆವೆಂದು ಕಣ್ಮುಚ್ಚಿಕೊಳ್ಳುತ್ತಿರುವ ಹೊತ್ತಿಗೆ ನರನು ನೇರವಾಗಿ ಮತ್ತೆ ತನ್ನ ತಪಸಿಗೆ ಕೂತಿದ್ದ ಜಾಗಕ್ಕೆ ಹೋಗಿ ಮೊದಲಿನ ಹಾಗೆ ಕೂತು ಗಾಡಾಲೋಚನೆಯಲ್ಲಿರುವವನಂತೆ ಕಣ್ಮುಚ್ಚಿಬಿಟ್ಟಿದ್ದನು…!

ಹೊರಗಿನವರ ಕಣ್ಣಿಗದು ಹೇಗೇ ಕಂಡಿದ್ದರು, ಒಳಗೆ ಮಾತ್ರ ತನ್ನ ಅಂತರ್ಶಕ್ತಿಯ ಭಾಗಂಶ ಬಲವನ್ನು ತನ್ನ ಬಲಭಾಗದ ತೊಡೆಯ ಸ್ನಾಯುಗಳತ್ತ ನಿರ್ದೇಶಿಸುತ್ತ ಏಕಾಗ್ರತೆಯಿಂದ ಏನನ್ನೊ ಗುಣುಗುಣಿಸುತ್ತ ಕೂತವನ ಚಮತ್ಕಾರದ ಅರಿವು ಅಲ್ಲಾರಿಗೆ ತಾನೆ ಇದ್ದೀತು ? ಪಂಚಭೂತಗಳ ಸರಕನ್ನೆ ಪೂರ್ವ ನಿರ್ಧಾರಿತ ಅನುಪಾತದಲ್ಲಿ ಸಮಷ್ಟಿಸುತ, ಮಂತ್ರ ಜಲದ ಹೆಸರಿನ ಆ ರಾಸಾಯನಿಕದ ಸಹಾಯದಿಂದ ಅವರ ಸೌಂದರ್ಯಕ್ಕೆ ಸಡ್ಡು ಹೊಡೆದು ನಿಲಬಲ್ಲ ಅಪೂರ್ವ ಪ್ರತಿ ಸೃಷ್ಟಿಯೊಂದರ ಸೃಜನೆಯಲ್ಲಿ ತೊಡಗಿಸಿಕೊಂಡಿರುವನೆಂದು ಅವರ ಅರಿವಿಗೆ ಬರುವುದಾದರೂ ಹೇಗೆ ?

ಆ ಹೊತ್ತಲ್ಲಿ ಪಂಚಭೂತಗಳಲ್ಲದೆ ಆ ಧಿಡೀರ್ ಜೀವಸೃಷ್ಟಿಗೆ ಬೇಕಾದ ಮತ್ತೊಂದು ಮೂಲಸರಕು, ಹುಟ್ಟುವ ಜೀವಿಯ ಕುಲಕ್ಕೆ ಸೇರಿದ ಜೈವಿಕ ಪದಾರ್ಥವಾಗಿರಬೇಕು.. ಅದಕ್ಕೆಂದೆ ಅವನ ಗಮನ ಹರಿದಿದ್ದು ಅವನದೆ ತೊಡೆಯ ಸ್ನಾಯುಗಳತ್ತ.. ಆ ಹೊತ್ತಿನಲ್ಲಿ ತೊಡೆಯ ಸ್ನಾಯುವಿನ ಮೇಲ್ಪದರದ ಭಾಗಾಂಶವನ್ನು ಸುತ್ತಲಿನ ನೈಸರ್ಗಿಕ ಪರಿಸರದಲ್ಲಿ ಹೇರಳವಾಗಿದ್ದ ಪಂಚಭೂತ ಸತ್ವಗಳೊಡನೆ ಸಮೀಕರಿಸಿ, ಹಸ್ತದಲ್ಲಿ ಕಮಂಡಲದ ನೀರು ಪ್ರೋಕ್ಷಿಸಿಕೊಂಡು ತೊಡೆಯ ಮೇಲೆ ಪಸರಿಸುತ್ತ ತನ್ನ ಬೆರಳುಗಳಿಂದಲೆ ಏಕಮುಖವಾಗಿ, ಯೋಜನಾಬದ್ಧವಾಗಿ ಮೆಲುಸ್ಪರ್ಶದೊಡನೆ ಉದ್ದೀಪಿಸತೊಡಗಿದ ಮೃದುವಾದ ಘರ್ಷಣೆಯೊಡನೆ..

(ಇನ್ನೂ ಇದೆ)

(Link to the next episode 12: https://nageshamysore.wordpress.com/2016/03/07/00561-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%a8-%e0%b2%8a%e0%b2%b0%e0%b3%8d%e0%b2%b5%e0%b2%b6%e0%b2%bf/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s