00565. ಅಹಲ್ಯಾ ಸಂಹಿತೆ – ೧೫ (ಊರ್ವಶಿಯ ಸೃಷ್ಟಿ, ಬ್ರಹ್ಮ ದಿಗ್ಭ್ರಮೆ)


00565. ಅಹಲ್ಯಾ ಸಂಹಿತೆ – ೧೫ (ಊರ್ವಶಿಯ ಸೃಷ್ಟಿ, ಬ್ರಹ್ಮ ದಿಗ್ಭ್ರಮೆ)
__________________________________________

(Link to the previous episode 14: https://nageshamysore.wordpress.com/2016/03/08/00564-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%aa/)

ಆ ಕಾರಣದಿಂದಾಗಿಯೆ ಊರ್ವಶಿಯನ್ನು ಕಂಡ ಬ್ರಹ್ಮದೇವ ಆಘಾತದಿಂದ ಬೆಚ್ಚಿಬೀಳುವಂತಾಗಿದ್ದುದ್ದು…

ಅವನು ಅದುವರೆಗೆ ಯಾವ ರೀತಿಯ ಸೌಂದರ್ಯವನ್ನು ಸೃಷ್ಟಿಸಬೇಕೆಂದು ಹಾತೊರೆಯುತ್ತಿದ್ದನೊ, ತನ್ನ ಪರಿಪಕ್ವ ಸೃಷ್ಟಿ ಹೇಗಿರಬಹುದೆಂದು ಊಹಿಸಿಕೊಳ್ಳುತ್ತಿದ್ದನೊ ಅದಕ್ಕು ಸಾವಿರಪಟ್ಟು ಮಿಗಿಲಾದ ಅಪರೂಪದ ವಿದ್ಯುಲ್ಲಹರಿಯಾಗಿದ್ದಳು ಊರ್ವಶಿ…!

ಒಂದೆಡೆ ತಾನೂ ಮಾಡಲಾಗದ ಈ ಸೃಷ್ಟಿ ಸಾಧ್ಯವಾದುದಾದರೂ ಹೇಗೆ ಎನ್ನುವ ಕುತೂಹಲ ಕೆರಳಿ ನಿಂತಿದ್ದರೆ, ಮತ್ತೊಂದೆಡೆ ಸೃಷ್ಟಿ ಮಾಡಿದವರ ಮೇಲೆ ಈರ್ಷೆಯೂ ಹುಟ್ಟಿಕೊಂಡಂತೆ ಅನಿಸಿಬಿಟ್ಟಿತ್ತು.. ಅದುವರೆವಿಗು ಅವರಿವರ ಬಾಯಿಂದ ಕಿವಿಗೆ ಬಿದ್ದಿದ್ದ ಊರ್ವಶಿಯ ಸೃಷ್ಟಿಯ ಕಥನ ಮತ್ತು ದಿಗ್ಭ್ರಮೆ ಹಿಡಿಸುವ ಸೌಂದರ್ಯದ ವರ್ಣನೆ, ಏನೊ ವಿಶಿಷ್ಠವಾದ ಅಪರೂಪದ ಸರಕಾಗಿರಬಹುದೆನ್ನುವ ಊಹೆಗೆಡೆ ಮಾಡಿತ್ತೆ ಹೊರತು, ಈ ಮಟ್ಟಿಗಿನ ದಿಗ್ಭ್ರಾಂತಿ ಹಿಡಿಸುವಂತ ಆಘಾತಕರ ಮಟ್ಟದಲ್ಲಲ್ಲ..

ಹೀಗಾಗಿ ಅವರಿವರ ಬಾಯಲ್ಲಿ ಕೇಳಿದ್ದ ಅಂತೆ ಕಂತೆಗಳನ್ನೆ ದೇವರಾಜನ ಮೂಲಕ ಅಧಿಕೃತವಾಗಿ ತಿಳಿಯಲೆಂದು, ಆ ಕುರಿತು ಅವನನ್ನೆ ವಿಚಾರಿದ ಬ್ರಹ್ಮದೇವ. ಆ ಜಾಗದಲ್ಲಿ ನೇರ ಇರದಿದ್ದರೂ ದೂರದಿಂದಲೆ ನಡೆದಿರುವುದೆಲ್ಲವನ್ನು ನೋಡಿ, ಅದನ್ನು ದೃಶ್ಯ-ಶ್ರಾವ್ಯ ಸಮೇತವಾಗಿ ನಿಸ್ತಂತುವಾಗಿಯೆ ಸೆರೆಹಿಡಿದಿದ್ದ ದೇವರಾಜ, ಬ್ರಹ್ಮದೇವನ ಮಾತಿಗೇನೂ ಉತ್ತರಿಸದೆ, ತನ್ನ ಚಿತ್ರಣದ ಸುರುಳಿಯನ್ನೆ ಪರದೆಯ ಮೇಲೆ ಬಿಡಿಸಿಟ್ಟ..

ಈಗ ಅಲ್ಲಿ ನಿಜಕ್ಕು ನಡೆದುದೇನೆಂದು ಸ್ವಯಂ ನೋಡುವ ಅವಕಾಶ ಸಿಕ್ಕಿ, ಇಡೀ ಪ್ರಸಂಗವನ್ನು ತಲ್ಲೀನತೆಯಿಂದ ನೋಡುತ್ತ ಕುಳಿತ ಬ್ರಹ್ಮದೇವ.. ಅಲ್ಲಿನ ಅಂತರಾಳದ ಗುಟ್ಟುಗಳೆಲ್ಲ ಅರಿವಾಗದಿದ್ದರು, ಆ ಪ್ರಕ್ರಿಯೆ ನಡೆದ ಬಗೆ ಮನದಟ್ಟಾಗುತ್ತಿದ್ದಂತೆ ಒಂದಂತು ಚತುರ್ಬ್ರಹ್ಮನ ಸ್ಪಷ್ಟ ನಿಲುಕಿಗೆ ಬಂದುಬಿಟ್ಟಿತ್ತು – ನರನಾರಾಯಣರ ಕೈಗೆ ಈಗಾಗಲೆ ತಾನು ಯಾವಾಗಿನಿಂದಲೊ ಹುಡುಕುತ್ತಿರುವ ಅದ್ಭುತ ಶಕ್ತಿಸೂತ್ರವೊಂದು ಕರಗತವಾಗಿ ಹೋಗಿದೆಯೆಂದು…

ಮತ್ತು ಅದು ತಾನು ಬಯಸುವ ಮಟ್ಟಕ್ಕಿಂತ ನೂರಾರು ಪಾಲು ಅಧಿಕ ಕ್ಷಮತೆ , ಸಾಮರ್ಥ್ಯವುಳ್ಳ ಸರಕೆಂದು ಸಹ. ಅದನ್ನು ಪದೆ ಪದೆ ಮರಳಿ ನೋಡಿದ ಬ್ರಹ್ಮದೇವನ ಮನದಲ್ಲಿ ಈಗ ಸುಳಿದು ಬರುತ್ತಿದ್ದ ಒಂದೆ ಆಲೋಚನೆಯೆಂದರೆ – ನರನಾರಾಯಣರನ್ನು ಆದಷ್ಟು ಶೀಘ್ರದಲ್ಲಿ ಭೇಟಿ ಮಾಡಿಬಿಡಬೇಕು , ಆ ಸೃಷ್ಟಿ ಸಾಮರ್ಥ್ಯದ ರಹಸ್ಯವಾದರೂ ಏನೆಂದು ಅರಿತುಕೊಳ್ಳಲು..!

ಮನದಲ್ಲಿ ಹೀಗೇನೇನೊ ನೂರೆಂಟು ಪ್ರಶ್ನಾರ್ಥಕಗಳು ದಾಂಗುಡಿಯಿಟ್ಟ ಹೊತ್ತಿನಲ್ಲೆ, ಬ್ರಹ್ಮದೇವನ ಚಿಕಿತ್ಸಕ, ವೈಜ್ಞಾನಿಕ ಬುದ್ಧಿ ಊರ್ವಶಿಯನ್ನು ತದೇಕವಾಗಿ ದಿಟ್ಟಿಸುತ್ತ ಕೂಲಂಕುಶವಾಗಿ ಪರಿಶೀಲಿಸತೊಡಗಿತ್ತು – ಪ್ರಯೋಗ ಪಶುವಿನ ಮೇಲಾದ ಫಲಿತಾಂಶ ಪರಿಣಾಮಗಳನ್ನು ಖುದ್ದಾಗಿ ಪರೀಕ್ಷಿಸುವಂತೆ…

ತಣಿಯದ ಕುತೂಹಲವನ್ನು ಮರೆಮಾಚಲಾಗದೆ, ಊರ್ವಶಿಯನ್ನೆ ಹತ್ತಿರಕ್ಕೆ ಕರೆದು ಅವಳ ಮುಖದ ಚಹರೆ, ಮತ್ತಿತರ ದೇಹ ವಿನ್ಯಾಸಗಳನ್ನು ಆಳವಾಗಿ ನೋಡುತ್ತ, ಅವುಗಳ ಪರಿಪೂರ್ಣತೆಯ ಉತ್ಕೃಷ್ಟತೆಗೆ ಮನದಲ್ಲೆ ಮತ್ತೆ ಮತ್ತೆ ಬೆರಗಾಗುತ್ತ, ಸುಲಭದಲ್ಲಿ ನಂಬಲಾಗದ ಅದರ ಉತ್ಕೃಷ್ಠ ನಿಖರತೆಗೆ ಅಚ್ಚರಿಗೊಳ್ಳುತ್ತ ಪುಟ್ಟ ಮಗುವೊಂದರ ಕೈಗೆ ಅದ್ಬುತ ಆಟಿಗೆಯೊಂದು ಸಿಕ್ಕಷ್ಟೆ ಪರವಶತೆಯಿಂದ ಮೈ ಮರೆತುಹೋಗಿದ್ದ…!

ಆ ತಲ್ಲೀನ ಗಳಿಗೆಯಲ್ಲಿಯೆ ಅವಳ ಮೃದುಹಸ್ತವನ್ನು ಹಿಡಿದು ಅದರ ಸಾಮುದ್ರಿಕಾ ಲಕ್ಷಣಗಳ ಶುಭ ರೇಖೆಗಳನ್ನು ನೋಡುತ್ತಿದ್ದಂತೆ, ಅವನ ವಿಸ್ಮಯ ಸೆಲೆ ಸೀಮಾರೇಖೆಯನ್ನು ದಾಟಿ ‘ಅರೆರೆ… ಈ ಪರಿಯ ಸರ್ವಗುಣಸಂಪನ್ನ ಪರಿಪೂರ್ಣ ಸೃಷ್ಟಿ ಸಾಧ್ಯವಾದುದಾದರು ಎಂತು?’ ಎಂದು ಅಚ್ಚರಿಪಡತೊಡಗಿದ್ದ…

ಆ ಗಳಿಗೆಯ ಆ ಉನ್ಮೇಷ ಯಾವ ರೀತಿಯದಿತ್ತೆಂದರೆ ತಾನು ದೇವರಾಜನಿಗೆ ಛೀಮಾರಿ ಹಾಕಿ, ಖಂಡಿಸಲೆಂದು ಅವನನ್ನು ತನ್ನಲ್ಲಿಗೆ ಕರೆಸಿದ್ದು ಎಂಬುದನ್ನೆ ಮರೆತು ಊರ್ವಶಿಯ ಪರಿವೀಕ್ಷಣೆಯಲ್ಲಿ ಮೈಮರೆತು ಮುಳುಗಿಹೋಗುವಷ್ಟು..

ಇನ್ನು ಅದೆಷ್ಟು ಹೊತ್ತು ಹಾಗೆಯೆ ಇರುತ್ತಿದ್ದನೊ ಏನೊ – ಜೈಕಾರ ಹಾಕಿ ವಂದಿಸುತ್ತ ಒಳಗೆ ಬಂದ ಸೂರ್ಯದೇವನ ದನಿ ಕೇಳಿಸಿರದಿದ್ದರೆ..!

*********

ಆಪ್ತ ಮಂತ್ರಾಲೋಚನೆಯ ಕೊಠಡಿಯೊಂದರಲ್ಲಿ ಸೇರಿದ ಬ್ರಹ್ಮದೇವ, ದೇವೇಂದ್ರ ಮತ್ತು ಸೂರ್ಯದೇವರು ಅಲ್ಲಿದ್ದ ಮೆತ್ತನೆಯ ಸುಖಾಸೀನಗಳಲ್ಲಿ ಒರಗುತ್ತ ಹತ್ತಿರದಲಿದ್ದ ಬಂಗಾರದ ಹೂಜಿಗಳಿಂದ ತಂಪು ಪಾನೀಯಗಳನ್ನು ಬಟ್ಟಲಿಗೆ ಸುರಿದುಕೊಂಡು ಮಾತಿಗನುವಾದರು…

ಅದು ಮೊದಲೆ ತಂಪು ವಾತಾಯನದ ವಿಶೇಷ ಸೌಲಭ್ಯದ ಕೋಣೆ. ಸದಾ ಬೆಂಕಿಯ ರಾಜ್ಯದಲ್ಲಿರುವ ಸೂರ್ಯದೇವನಿಂದ ಹೊಮ್ಮುವ ಶಾಖದ ಪ್ರಭೆಯಿಂದ ಮಿಕ್ಕವರಿಗೆ ತೊಡಕಾಗದಿರಲೆಂದೆ ಆ ಜಾಗವನ್ನು ಆರಿಸಿಕೊಂಡಿದ್ದು. ಇನ್ನು ಅಲ್ಲೇನು ಕೆಲಸ ಮಿಕ್ಕಿಲ್ಲವೆಂದು ಊರ್ವಶಿಯನ್ನು ಅಮರಾವತಿಗೆ ಹಿಂತಿರುಗ ಹೇಳಿದ್ದ ದೇವೇಂದ್ರ. ಹೀಗಾಗಿ ಮಾತುಕತೆ ಮೂವರಲ್ಲೆ ಆರಂಭವಾಗಿತ್ತು.

ಸುತ್ತಿ ಬಳಸಿ ಸಮಯ ವ್ಯರ್ಥ ಮಾಡದೆ ನೇರ ವಿಷಯಕ್ಕೆ ಬಂದವನು ಬ್ರಹ್ಮದೇವ..

” ಸೂರ್ಯದೇವ… ನಿನ್ನನ್ನಿಲ್ಲಿಗೆ ಕರೆಸಿದ ಕಾರಣ ತಿಳಿದಿದೆಯೆ..?”

” ನೇರ ಇಂತದ್ದೆ ಎಂದರಿವಿರದಿದ್ದರೂ ಯಾವುದಿರಬಹುದೆಂದು ಊಹಿಸಿದ್ದೇನೆ ತಾತಾ..” ಒರೆಗಣ್ಣಿನಿಂದ ದೇವರಾಜನತ್ತ ನೋಡುತ್ತ ನುಡಿದ ಸೂರ್ಯ.

” ಸಹಸ್ರಕವಚನಿಗೆ ನೀನಿತ್ತ ವರ ಸಾಮರ್ಥ್ಯದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಬಲ್ಲೆಯಾ ದಿನಮಣಿ ? ಒಂದೆಡೆ ನಿರಂತರ ಹೋರಾಟದಲ್ಲಿರಬೇಕಾದ ನರನಾರಾಯಣರಂತಹವರ ಅನಿವಾರ್ಯ ಪಾಡು.. ಮತ್ತೊಂದೆಡೆ ಈ ವರಗರ್ವಿತ ದಾನವರ ದಾಂಧಲೆಯಿಂದ ನಡುಗುವ ಏಳೇಳು ಲೋಕ… ಇದೆಲ್ಲಾ ಸಾಧುವೆ..?” ಎಂದು ತನ್ನಲ್ಲಿದ್ದ ಅಸಮಾಧಾನಕ್ಕೆ ದನಿ ಕೊಡುತ್ತ ನುಡಿದ ಬ್ರಹ್ಮದೇವ, ಮಾತಿನಲ್ಲಿನ ಅಸಹನೆ ಧ್ವನಿಯಾಗಿ ದನಿಸದಂತೆ ಎಚ್ಚರದಿಂದ ಗಮನಿಸುತ್ತ.

ಸೂರ್ಯ ಒಂದರೆಗಳಿಗೆ ಮಾತಾಡಲಿಲ್ಲ.. ಬಹುಶಃ ಹೇಗೆ ಉತ್ತರಿಸಬೇಕೆಂಬ ಚಿಂತನೆಯಲ್ಲಿದ್ದನೇನೊ. ಅದೆ ಅವನಿಗು ದೇವರಾಜನಿಗು ಇರುವ ಪ್ರಮುಖ ಅಂತರ; ದೇವೆಂದ್ರನ ಬಾಯಿಂದ ಮೊದಲು ಹೊರಡುವುದೆ ಮಾತು, ಆಮೇಲೆ ಕೆಲಸ. ಸೂರ್ಯ ಸದಾ ಮೊದಲು ಚಿಂತಿಸಿ, ಆಲೋಚಿಸಿ, ಮಥಿಸಿ ನಂತರ ತೂಕದ ಮಾತಾಡುವ ಗುಣದವನು. ಕೆಲ ಕ್ಷಣಗಳ ವಿಚಾರದ ನಂತರ ಸೂರ್ಯ ಮಾತಾಡಿದ..

” ಬ್ರಹ್ಮದೇವ.. ನಿನಗೆ ಗೊತ್ತಿರುವಂತೆ ನಾವೆಲ್ಲ ದೇವತೆಗಳು ಒಂದಲ್ಲ ಒಂದು ರೀತಿಯ ಪ್ರಯೋಗಗಳನ್ನು ನಡೆಸುತ್ತಲೆ ಇದ್ದೇವೆ.. ಅದರ ಗುರಿಯೇನು ಎಂಬುದು ನಿನಗೆ ಅರಿವಿರದ ವಿಷಯವಲ್ಲ..”

ಅದೊಂದು ದೊಡ್ಡ ದೇವರಹಸ್ಯದ ವಿಷಯವಾಗಿ ಹೆಚ್ಚು ಕಡಿಮೆ ಎಲ್ಲಾ ಹಿರಿಯ ದೇವತೆಗಳು ಅದರ ಪ್ರಮುಖ ಪಾಲುದಾರರಾಗಿ ತಂತಮ್ಮ ಪ್ರಯೋಗಗಳಲ್ಲಿ ನಿರತರಾಗಿರುವುದು ಬ್ರಹ್ಮಾದಿ ಮಹೇಂದ್ರರಿಗೂ ತಿಳಿದ ವಿಷಯವೆ.

ಆದರೆ ಅದರ ಮೂಲ ಉದ್ದೇಶ, ಹಿನ್ನಲೆಯ ಕಾರಣ , ಪರಿಸ್ಥಿತಿಯ ಅನಿವಾರ್ಯತೆ ಎಲ್ಲರಿಗು ತಿಳಿದಿಲ್ಲ. ತಿಳಿದಿರುವ ಕೆಲವೆ ದೇವತೆಗಳಲ್ಲಿ ತ್ರಿಮೂರ್ತಿಗಳಲೊಬ್ಬನಾದ ಬ್ರಹ್ಮದೇವನೂ ಒಬ್ಬ. ಅವನಿಗೂ ಪೂರ್ತಿಯಾಗಿ ತಿಳಿದಿದೆಯೆಂದೇನಲ್ಲ; ಮಿಕ್ಕವರಿಗಿಂತ ಹೆಚ್ಚು ಗೊತ್ತಷ್ಟೆ.

ಆ ದೇವರಹಸ್ಯದ ಫಲಶ್ರುತಿಯಾಗಿ ಮೂಡಿಬಂದ ಆದೇಶದನುಸಾರ ಎಲ್ಲರು ತಂತಮ್ಮ ಭೂಮಿಕೆ ನಿಭಾಯಿಸುತ್ತಿದ್ದಾರೆಂದು ಬ್ರಹ್ಮನೂ ಬಲ್ಲ. ಅದರಲ್ಲಿ ದೇವರಾಜನಂತಹ ಆಡಳಿತಾಧಿಕಾರಿಗಳಿಗೆ ಪ್ರಯೋಗ ನಿರತರಾಗುವ ಪ್ರಮೇಯವಿಲ್ಲದ ಕಾರಣ, ಅವನಿಗೆ ತಿಳಿದಿರುವುದು ಇನ್ನೂ ಕಡಿಮೆ. ಆದರೆ ಸೂರ್ಯನಂತಹ ವಿಜ್ಞಾನವೇತ್ತರಿಗೆ ಸ್ಪಷ್ಟ ಆದೇಶವಿದೆ, ಯಾವ ರೀತಿಯ ಪ್ರಯೋಗಗಳಲ್ಲಿ ನಿರತರಾಗಬೇಕೆಂದು. ಜೈವಿಕವಾಗಿ ಜೋಡಣೆಯಾಗಬಲ್ಲ ಬಾಹ್ಯಾಯುಧಗಳು ವಿಸ್ತೃತ ಅಂಗಗಳ ರೂಪದಲ್ಲಿ ಕೆಲಸ ಮಾಡಬಲ್ಲ ಸಾಮರ್ಥ್ಯ ಸೃಷ್ಟಿಸುವುದು ಅವನ ಪ್ರಯೋಗಾಲಯದ ಗುರಿಗಳಲ್ಲೊಂದು.

” ಆ ಪ್ರಯೋಗದ ಫಲಾಫಲಗಳನ್ನರಿಯಬೇಕಾದರೆ ಯಾರಾದರು ಪ್ರಯೋಗ ಪಶುಗಳಾಗಲು ಮುಂದೆ ಬರಬೇಕಲ್ಲವೆ ? ನಮ್ಮವರು ಯಾರು ತಾನೆ ಬಂದಾರು ಅಂತಹ ಸಾಹಸದ ಕೆಲಸಕ್ಕೆ? ಈ ದಾನವರಾಜನೊ ವರ ಬೇಡುವ ನೆಪದಲ್ಲಿ ಇಂತಹ ಸಾಮರ್ಥ್ಯವನ್ನೆ ಕೇಳಿದ್ದರಿಂದ ನಾನೂ ಚಾತುರ್ಯದಿಂದ ಅದನ್ನೆ ಪ್ರಯೋಗದ ಪರೀಕ್ಷಾರ್ಥ ಬಳಸಿಕೊಂಡೆ.. ಅದರ ಪ್ರತಿಫಲವಾಗಿ ಅವನ ಶಕ್ತಿ ನಿಜಕ್ಕು ವೃದ್ಧಿಸುವಂತಹ ಸ್ವಯಂಚಾಲಿತ ಪ್ರಕ್ರಿಯೆಯನ್ನು ಅವನ ಜೀವಕೋಶಗಳ ಮಟ್ಟದಲ್ಲಿ ಅಳವಡಿಸಿ ಋಣಮುಕ್ತನಾಗಲೆತ್ನಿಸಿದೆ.. ಇದರಲ್ಲಿ ನನ್ನ ತಪ್ಪೇನು ಬ್ರಹ್ಮದೇವ ? ತ್ರಿಮೂರ್ತಿಗಳಾದಿಯಾಗಿ ನೀವು ಮಾಡುವುದು ಸಹ ಇಂತಹ ಕಾರ್ಯಗಳನ್ನೆ ಅಲ್ಲವೆ ?”

ಅವನ ಪ್ರಶ್ನೆಗೆ ನೇರ ಉತ್ತರವಿಲ್ಲವೆಂದು ಬ್ರಹ್ಮನಿಗು ಗೊತ್ತಿತ್ತು. ಸೂರ್ಯನ ಮಾತಲ್ಲಿ ಸತ್ಯವೂ ಇತ್ತು – ಆ ದೇವ ರಹಸ್ಯದ ಬೃಹತ್ ಕಾರ್ಯದಲ್ಲಿ ಪಾಲ್ಗೊಂಡಿದ್ದವರೆಲ್ಲರು ಯಾಕೆ? ಏನೂ? ಎಂಬುದನ್ನು ಪ್ರಶ್ನಿಸದೆ ತಮಗೊಪ್ಪಿಸಿದ ಕಾರ್ಯ ಮಾಡಿಕೊಂಡು ಹೋಗಬೇಕಿತ್ತು. ಅದರ ಅಂತಿಮ ಗಮ್ಯವೇನೆಂದು ಅವನ ಅರಿವಿಗು ನಿಲುಕದ್ದರಿಂದ ಆ ಕುರಿತು ಅವನೂ ಏನು ಹೇಳಲಾರ. ದೇವರಹಸ್ಯದ ಆ ಬೃಹತ್ ಯೋಜನೆಯ ರೂಪುರೇಷೆಯೆ ಅಂತದ್ದು.. ಅದರ ಸಲುವಾಗಿ ತಾನೆ, ಸ್ವಯಂ ತಾನೂ ಸಹ ಈ ನಿರಂತರ ಸೃಷ್ಟಿಯ ಪ್ರಯೋಗದಲ್ಲಿ ನಿರತನಾಗಬೇಕಾಗಿ ಬಂದಿದ್ದು ?

ಅಷ್ಟೇಕೆ ಊರ್ವಶಿಯಂತಹ ಅದ್ಭುತವನ್ನು ಸೃಷ್ಟಿಸಿದ ನರನಾರಾಯಣರೂ ಬಹುಶಃ ಇಂತದ್ದೆ ಯಾವುದೊ ‘ದೇವ ರಹಸ್ಯ’ ಪ್ರಯೋಗದಲ್ಲಿ ನಿರತರಾಗಿರಬಹುದು, ದೇವಿಯ ಆದೇಶದನುಸಾರ..

” ನಿಜ ಸೂರ್ಯದೇವ.. ಇಲ್ಲಿ ನಿಜಕ್ಕೂ ಈ ಪ್ರಯೋಗ ಫಲಿತಗಳನ್ನು ಪ್ರಶ್ನಿಸುವುದು ನನ್ನ ಉದ್ದೇಶವಲ್ಲ.. ಅದರೆ ಆ ಫಲಿತಾಂಶಗಳ ಸಾಧಕಬಾಧಕಗಳ ಚರ್ಚೆ, ವಿಚಾರ ವಿಮರ್ಶೆ ನನ್ನ ಮುಖ್ಯ ಗುರಿ.. ಈಗ ಪರಿಸ್ಥಿತಿ ಏನಾಗಿದೆಯೆಂದರೆ ಸಹಸ್ರಕವಚನ ಕಡೆಯ ಬಾರಿಯ ಕವಚಹರಣ ಮತ್ತು ವಧೆಯ ಕಾರ್ಯ ಈ ಯುಗಸಂಧಿಯ ದೆಸೆಯಿಂದಾಗಿ ಮುಕ್ತಾಯವಾಗದೆ ಮುಂದಿನ ಯುಗಕ್ಕು ಕಾಲಿಡುವ ಸೂಚನೆ ತೋರುತ್ತಿದೆ..”

(ಇನ್ನೂ ಇದೆ)

(Link to the next episode 16: https://nageshamysore.wordpress.com/2016/03/08/00566-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%ac/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s