00573. ಕುದುರೆ


00573. ಕುದುರೆ
_________________________

  

ನಿದಿರೆಯಿಲ್ಲದ ರಾತ್ರಿ ಕುದುರೆಯನೇರಿ ನಡೆದೆ
ಕುದುರಲಿಲ್ಲ ಸ್ವಪ್ನಲೋಕದಲು ಕಲ್ಲು ಮುಳ್ಳು
ಮುದುರಿಕೊಂಡ ಮನಕೆ ಕನಸೇನು ? ನನಸೇನು ?
ಅಮೂರ್ತ ನೋವನುಭೂತಿ ಪಕ್ವ ಅನುಭವ ಗಮ್ಯ..

ದೇಕುತ್ತಿತ್ತೇನು ಅಶ್ವ ? ನಿಟ್ಟುಸಿರೊ ಬಿಸಿರಕ್ತವೊ ?
ಕೂತಂತೆಯೂ ಇಲ್ಲ, ಜಾರಿ ಬಿದ್ದಂತೆ ಕನಸಲ್ಲ
ಸಿಗುವ ಕಡೆ ಸಿಗಲಿಲ್ಲ, ಚೆಲ್ಲಾಡಿದ ಜಾಗ ಸಗಟು
ಇನ್ನೆಲ್ಲೊ ಹುಡುಕಿದರೇನು ? ಸಿಗುವ ಕಡೆ ಬಿಟ್ಟು..

ಜೀನು ಹಾಕಿದ ಮಾಯದ ಕುದುರೆ ಅವಿನಾಶಿ
ಅದರದೆ ಚಿತ್ತ ಮನೋಗತ ಮನೋರಥ ಸ್ಪೂರ್ತಿ
ಅಣತಿಯಿಕ್ಕುವ ಚಪಲ, ನೀರಸವಾಗಿ ಕರಗಿ
ತಂತಾನೆ ನಡೆದಿದೆ ಎಳೆದು, ಸಿಕ್ಕ ಹಾದಿಯಲಿ..

ಕಂಡಾರು ದೇವ ಯಕ್ಷ ಗಂಧರ್ವ ಅಪ್ಸರ ಗಣ
ಕೊಟ್ಟಾರು ಮದ್ದಿನ ಗುಳಿಗೆ ಮರೆಸುತೆಲ್ಲ ಭೀಕರ
ಆಶಯಕೆಲ್ಲಿ ಅಡೆತಡೆ ? ಮೋಡದೆ ನುಗ್ಗಿ ಧಾಳಿ
ಯಾಕೊ ದಾನವ ರಕ್ಕಸ ದೈತ್ಯ ಪಿಶಾಚಗಣ ವಾಚಾಳಿ..

ಕೊಂಕಣ ಸುತ್ತಿ ಮೈಲಾರಕೆ ಬರುವ ಪಾಡಿದು
ಮನಸನಿಟ್ಟು ನಡೆದರೆಲ್ಲೊ ಸಿಗದು ಗಮ್ಯ ನೆಮ್ಮದಿ
ಅರಸಿದೆಡೆ ಸಿಗಲಿಲ್ಲ, ಅರಸುವೆಡೆ ಸುಳಿವಿಲ್ಲ
ತ್ರಿಶಂಕು ಬದುಕೇ ಹೀಗೆ, ಮರೀಚಿಕೆಯ ಬೆನ್ನಟ್ಟುತ..

– ನಾಗೇಶ ಮೈಸೂರು

(Picture from wiktionary : https://kn.m.wiktionary.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Horse_gif.gif)

00572. ಮಾಯ(ವಾ)ದ ಮೆರವಣಿಗೆ..


00572. ಮಾಯ(ವಾ)ದ ಮೆರವಣಿಗೆ..
____________________________

  
ತಡರಾತ್ರಿಯ ಮೆರವಣಿಗೆಗಳು
ಹೊತ್ತು ಪಲ್ಲಕ್ಕಿಯೊ ಶವಪೆಟ್ಟಿಗೆಯೊ
ಹೊರಟಾಟ ಒರಟಾಟ ಹೊರಳಾಟ ಚಟ
ನರಳಾಟದ ನೆರಳಲಿ ನಲಿವಿಗೆ ಹುಡುಕಿವೆ..

ವಾಗ್ವಾದ ವಾಗ್ಯುದ್ದ ಪರಿಪರಿ ಸಮೃದ್ಧ
ನಿದ್ದೆಗೂ ಬಿಡದೆ ಕಾಡುವ ಮೌನದ ಯುದ್ಧ
ಮುನಿಸಿನ ಬೆನ್ನ ಕಚ್ಚಿದ ನಿರೀಕ್ಷೆ ಸಾಲಾಗಿ
ನಿರಾಶೆಯುಂಡು ಪೆಚ್ಚುನಗೆಯಲಿ ಕುಸಿತ..

ಯಾವುದು ದೂರ ಯಾವುದು ಹತ್ತಿರ ?
ಅಯೋಮಯದ ಹಾದಿ ಹೊರಟಾಗಿ ರಥ..
ಕಲ್ಲು ಮಣ್ಣು ಗುಂಡಿ ಕೆಸರು ಕೊಚ್ಚೆ ವಹಿಸೆಚ್ಚರ
ಎನ್ನುತಲೆ ಕಳುವಾಯ್ತೆಲ್ಲ ಹಸಿರು ಕಾಣಲೆ ಇಲ್ಲ..

ತಟ್ಟನೆ ರಥಬೀದಿಯ ನಟ್ಟ ನಡುವಲಿ ಸ್ಥಗಿತ
ಹೂತ ಚಕ್ರ ಅಲುಗಾಡದೆ ಅಪಶಕುನ ಸಂದೇಶ
ಎಳೆದವರೆಲ್ಲ ಖಾಲಿ ಹೊಲ ಮನೆ ಗದ್ದೆ ಸುದ್ಧಿಗೆ
ಅಸಹಾಯಕತೆಯೊಂದೆ ನಿಂತಿದೆ ಬಿಡದ ಶ್ರದ್ಧೆಗೆ..

ನಿಲ್ಲದ ಉರವಣಿ ನಿಂತಾಯ್ತು ಬಳಲಿ ನಡುವೆ
ತುಕ್ಕು ಹಿಡಿಯುತ ನಿಂತಲ್ಲೆ ಗೆದ್ದಲ ರಾಜ್ಯಕೆ ಹಬ್ಬ
ಇತಿಹಾಸದ ತುಣುಕಾಗದು ಬರಿ ಮಸುಕು ನೆನಪು
ಯಾತನೆ ಜತೆ ಯಾತ್ರೆ, ಮಿಕ್ಕುಳಿದ ಸ್ಥಬ್ದ ಮೆರವಣಿಗೆ ..

– ನಾಗೇಶ ಮೈಸೂರು

00571. ಅಹಲ್ಯಾ ಸಂಹಿತೆ – ೨೦ (ದೇವೇಂದ್ರನ ಯೋಜನೆ)


00571. ಅಹಲ್ಯಾ ಸಂಹಿತೆ – ೨೦ (ದೇವೇಂದ್ರನ ಯೋಜನೆ)
_______________________________

(Link to the previous episode 19: https://nageshamysore.wordpress.com/2016/03/09/00570-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%af/)

“ಅಲ್ಲಿರುವ ಗ್ರಂಥಗಳೆಲ್ಲ ಇಂತಹ ತಳಿಶಾಸ್ತ್ರಕ್ಕೆ ಸಂಬಂಧಿಸಿದವುಗಳೆ.. ನಾನು ಸುಮ್ಮನೆ ಹೊತ್ತು ಕಳೆಯಲು ಎಲ್ಲವನ್ನು ತಿರುವಿ ಹಾಕುತ್ತಿದ್ದೆ ಅಷ್ಟೆ… ಅದೇಕೊ ಅರಿಯೆ – ಗೌತಮರ ಗ್ರಂಥಗಳು ಮಾತ್ರ ಸುಲಭದಲ್ಲಿ ಓದಿಸಿಕೊಂಡು ಹೋಗುವ ಹಾಗಿವೆ.. ಸರಳರೂಪದಲ್ಲಿ ವಿವರಿಸಿದ ಕಾರಣ, ಸುಲಭದಲ್ಲಿ ಅರ್ಥವಾಗುವ ಹಾಗೆಯೂ ಇದೆ ಅನಿಸಿತು.. ಹೀಗಾಗಿ ಓದಲು ಆರಂಭಿಸಿದೆ.. ಅದು ಅಭ್ಯಾಸವಾದಂತೆ ಹವ್ಯಾಸವಾಗಿ ಬದಲಾಗಿ ಹೋಯ್ತು..!”

ಅವಳ ಮಾತು ಕೇಳುತ್ತಲೆ ದೇವೇಂದ್ರ ತನ್ನಲ್ಲೆ ಚಿಂತಿಸುತ್ತಿದ್ದ – ‘ಬ್ರಹ್ಮದೇವನೇಕೆ ಈ ಸಂಶೋಧನೆಯನ್ನಿಷ್ಟು ಗುಟ್ಟಲ್ಲಿ ನಡೆಸುತ್ತಿದ್ದಾನೆ – ಅದೂ ಯಾರ ಜತೆಗಾರಿಕೆಯೂ, ಸಹಾಯವೂ ಇಲ್ಲದಂತೆ ? ಏನಿರಬಹುದಂತಹ ಗುಟ್ಟಿನ ಪ್ರಯೋಗ ? ಅದನ್ನು ತಿಳಿದುಕೊಂಡರೆ ದೇವರಾಜನಾದ ತನಗೆ ಒಳಿತಲ್ಲವೆ ?’ ಎಂದು..

ಹಾಗೆ ಚಿಂತಿಸುತ್ತಲೆ ತಟ್ಟನೊಂದು ಯೋಜನೆಯೂ ಹೊಳೆದುಬಿಟ್ಟಿತು ಅವನ ಕುಟಿಲಮತಿಗೆ.. ಅದನ್ನೆ ಆಲೋಚಿಸುತ್ತ, ” ಊರ್ವಶಿ… ಯಾರೂ ಸಹಾಯಕರಿಲ್ಲದೆ ನಡೆಸುತ್ತಿರುವ ಕಾರಣದಿಂದ ಸಂಶೋಧನೆ, ಪ್ರಯೋಗದ ವೇಗವೇನಾದರು ಕುಂಠಿತವಾಗುತ್ತಿದೆಯೆಂದು ನಿನಗನಿಸಿದೆಯೆ? ಪಿತಾಮಹನೇನಾದರು ಆ ಕುರಿತಾದ ಇಂಗಿತವನ್ನು, ಅಸಹನೆಯನ್ನು ತೋರಿಸಿಕೊಂಡಿರುವನೆ ?” ಎಂದು ವಿಚಾರಿಸಿದ.

” ಖಂಡಿತ… ತನಗೆ ಬೇಕಾದ ವೇಗದಲ್ಲಿ ಇದು ನಡೆಯುತ್ತಿಲ್ಲವೆಂಬ ಅಸಹನೆ ಬ್ರಹ್ಮದೇವನಿಗಿದೆ.. ಆ ಭಾವವನ್ನು ನಾನೇ ಕಣ್ಣಾರೆ ಕಂಡಿದ್ದೇನೆ… ಪ್ರತಿ ಬಾರಿಯು ಪ್ರಯೋಗ ಬಿಟ್ಟು ಹೋಗಬೇಕಾದಾಗಲೆಲ್ಲ ಅವನ ಮುಖದಲ್ಲಿ ಅದುಂಟು ಮಾಡುವ ವ್ಯಗ್ರತೆ, ಅಸಹನೆ, ಅಸಂತೃಪ್ತಿ ಎದ್ದು ಕಾಣುವಂತಿರುತ್ತದೆ..”

ಆ ಉತ್ತರವನ್ನು ಕೇಳುತ್ತಿದ್ದಂತೆ ದೇವೇಂದ್ರನ ಅಸ್ಪಷ್ಟ ಮನದಲ್ಲೊಂದು ಸ್ಪಷ್ಟಯೋಜನೆ ರೂಪುಗೊಳ್ಳುತ್ತಿತ್ತು..

ದೇವರಾಜನಾಗಿ ತಾನು ಸುತ್ತಮುತ್ತ ನಡೆಯುತ್ತಿರುವುದೆಲ್ಲದರ ಮೇಲೆ ನಿಗಾ ಇಡುವುದು ಅಗತ್ಯ.. ಈ ಬಾರಿ ಗೌತಮನನ್ನು ಬಳಸಿಕೊಂಡು ಆ ಕೆಲಸ ಮಾಡಿದರೆ ಹೇಗೆ..?

ತನಗೂ ಅವನಿಗು ಇರುವ ಪರಿಚಯವನ್ನೆ ಬಳಸಿಕೊಂಡು ಅವನನ್ನು ಈ ಪ್ರಯೋಗದಲ್ಲಿ ಭಾಗವಹಿಸುವಂತೆ ಮಾಡಿ ಇಲ್ಲಿ ನಿಜಕ್ಕೂ ಏನು ನಡೆಯುತ್ತಿದೆಯೆಂಬ ವಿಷಯವನ್ನು ಅರಿತುಕೊಂಡರೆ, ಅದಕ್ಕೆ ಪೂರಕವಾದ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ..

ಹೌದು..ಅದೇ ಸರಿ.. ಈ ವಿಷಯದ ಕುರಿತು ಪಿತಾಮಹನೊಂದಿಗೆ ಒಮ್ಮೆ ಮಾತಾಡಿ ನೋಡುವುದೇ ಸರಿ.. ಒಪ್ಪಲಿ ಬಿಡಲಿ ತಾನು ಕಳೆದುಕೊಳ್ಳುವುದಾದರು ಏನು ? ಒಂದು ವೇಳೆ ಅಂದುಕೊಂಡಂತೆ ನಡೆದರೆ ಅದರಿಂದ ಅನುಕೂಲವಾಗುವ ಸಾಧ್ಯತೆಯೆ ಹೆಚ್ಚಲ್ಲವೆ..?

ಅದರನುಸಾರ ಏನು ಮಾಡಬೇಕೆಂಬ ರೂಪುರೇಷೆಗಳನ್ನು ಸಿದ್ದಗೊಳಿಸತೊಡಗಿತು ದೇವರಾಜನ ಕುಶಾಗ್ರಮತಿ ಮನಸು..

****************

ಅಂದು ಎಂದಿನಂತೆ ಹೊರಡುವ ಸಿದ್ಧತೆ ನಡೆಸಿದ್ದ ಊರ್ವಶಿ, ಕೊನೆಯದಾಗಿ ತನ್ನ ತೆಳು ಪಾರದರ್ಶಕ ಚಿತ್ರವಿನ್ಯಾಸದ ಮೇಲು ಹೊದಿಕೆಯನ್ನು ಹೊದ್ದುಕೊಂಡು ಶೃಂಗಾರಖಾನೆಯಿಂದ ಹೊರಬಂದಳು. ಎಂದಿನಂತೆ ಮೇನೆಯ ಜನ ಸಿದ್ದರಾಗಿದ್ದ ಹೊತ್ತಲ್ಲೆ, ಅನತಿ ದೂರದಿಂದ ಇದ್ದಕ್ಕಿದ್ದಂತೆ ಗಾಲಿಗಳ ಸದ್ದು ಕೇಳಿಸಿತ್ತು…

‘ಯಾರೊ ಬರುತ್ತಿರುವಂತಿದೆಯಲ್ಲ ?’ ಎಂದುಕೊಂಡು ತಲೆಯೆತ್ತಿ ಕಣ್ಣು ಹಾಯ್ದಷ್ಟು ದೂರ ದಿಟ್ಟಿಸಿ ನೋಡಿದವಳಿಗೆ ಅದರ ಮೇಲುಭಾಗದಲ್ಲಿ ಹಾರಾಡುತ್ತಿದ್ದ ಧ್ವಜದ ಗುರುತಿನಿಂದಲೆ, ಆ ರಥ ದೇವರಾಜನದೆಂದು ಅರಿವಾಗಿ ಹೋಗಿತ್ತು. ಆದರೆ ಒಳಗೆ ದೇವೇಂದ್ರನಿದ್ದ ಹಾಗೆ ಕಾಣಿಸಲಿಲ್ಲ; ಬದಲಿಗೆ ಸಾರಥಿಯ ಆಸನದಲ್ಲಿ ವಿರಾಜಮಾನನಾಗಿದ್ದ ಮಾತಲಿ ಮಾತ್ರವೆ ಕಂಡುಬಂದ.

ಸ್ವತಃ ಮಾತಲಿಯೆ ಇಂದ್ರನ ರಥದೊಡನೆ ಬರುತ್ತಿರುವನೆಂದ ಮೇಲೆ ಏನೊ ಗಹನವಾದ ವಿಷಯವೆ ಇರಬೇಕೆಂದುಕೊಂಡು ಮೇನೆಯವರಿಗೆ ತುಸು ಹೊತ್ತು ಕಾಯುವಂತೆ ಹೇಳಿ ದ್ವಾರದ ಬಳಿಯೆ ನಿಂತಳು, ರಥದ ಆಗಮನವನ್ನು ನಿರೀಕ್ಷಿಸುತ್ತ.. ಮಿಂಚಿನ ವೇಗದಲ್ಲಿ ಚಲಿಸುವ ರಥ ಅವಳ ಮನೋವೇಗಕ್ಕೆ ಸ್ಪಂದಿಸುವಂತೆ ಕ್ಷಣಕಾಲದಲ್ಲೆ ಅವಳೆದುರಾಗಿ ನಿಂತಾಗ ಅದರಿಂದ ಕೆಳಗಿಳಿದು ಬಂದ ಮಾತಲಿ ವಿನಯದಿಂದ ನಮಸ್ಕರಿಸಿದ…

” ಏನು ವಿಷಯ ಮಾತಲಿ , ಎಲ್ಲಾ ಕುಶಲವೆ ? ಪ್ರಾತಃಕಾಲದಲ್ಲೆ ದೇವರಾಜನ ರಥದ ಸಮೇತ ಆಗಮಿಸಿಬಿಟ್ಟಿರುವೆ ? ಏನಾದರು ತುರ್ತಿನ ವಿಷಯವಿತ್ತೇನು ?” ಊರ್ವಶಿ ಒಂದು ವಿಧವಾದ ಕಕ್ಕುಲತೆ ಬೆರೆತ ದನಿಯಲ್ಲಿ ಪ್ರಶ್ನಿಸಿದಳು..

” ಎಲ್ಲವು ಕುಶಲವೆ ಊರ್ವಶಿದೇವಿ.. ನಿಯಮಿತ ಸೇವಾ ಕಾರ್ಯದ ಅನುವರ್ತಿಗಳಾದ ನನ್ನಂತಹವರಿಗೆ ಹೊತ್ತೇನು, ಗೊತ್ತೇನು ಬಿಡು ತಾಯಿ… ಇಂದು ನಸುಕಿನಲ್ಲಿ ದೇವರಾಜನು ಇದ್ದಕ್ಕಿದ್ದಂತೆ ನೀನು ಬ್ರಹ್ಮದೇವನ ತಾಣಕ್ಕೆ ಹೊರಡುವ ಮೊದಲೆ ನಿನ್ನಲ್ಲಿಗೆ ತಲುಪಿ, ಜತೆಯಲ್ಲಿಯೆ ಕರೆದುಕೊಂಡು ಬಾ ಎಂದು ಆಜ್ಞಾಪಿಸಿದ್ದರಿಂದ, ಕೊಂಚ ವೇಗವಾಗಿ ಅವಸರವಸರದಲ್ಲಿಯೆ ಬರಬೇಕಾಯ್ತು. ಹೀಗಾಗಿ ಮೊದಲೆ ಮುನ್ಸೂಚನೆ ಕಳಿಸಲು ಸಾಧ್ಯವಾಗಲಿಲ್ಲ..”

ಅದನ್ನು ಕೇಳುತ್ತಿದ್ದಂತೆ ಚಕಿತಳಾದ ಊರ್ವಶಿ, ” ಜತೆಗೆ ಕರೆದುಕೊಂಡು ಬರಲು ಹೇಳಿದನೆ ಮಹೇಂದ್ರ? ನಾನೀಗ ಪಿತಾಮಹ ಬ್ರಹ್ಮದೇವನ ಪ್ರಯೋಗಶಾಲೆಗೆ ಹೊರಟಿರುವೆ.. ನಿನ್ನ ಜತೆ ಹೊರಟರೆ ತಡವಾಗಿಬಿಡುವುದಲ್ಲ ? ಆ ಭೇಟಿ ಮುಗಿಸಿಕೊಂಡು ಬಂದ ಮೇಲೆ ದೇವರಾಜನನ್ನು ಕಂಡರಾಗುವುದಿಲ್ಲವೆ ?” ಎಂದು ಕೇಳಿದಳು.

” ಇಲ್ಲಾ ತಾಯಿ.. ಏನೊ ಅವಸರದ ವಿಷಯವೆ ಇರುವಂತಿದೆ.. ಪಿತಾಮಹರತ್ತ ಹೋಗುವ ಮೊದಲೆ ನಿನ್ನನ್ನು ತಲುಪಿ, ಜತೆಗೆ ಕರೆದುಕೊಂಡು ಶೀಘ್ರವಾಗಿ ಬರಬೇಕೆಂದು ಸ್ಪಷ್ಟವಾಗಿ ಅಣತಿಯಿತ್ತಿದ್ದಾನೆ.. ಬಹುಶಃ ತಡವಾದರೆ ಬ್ರಹ್ಮದೇವನಿಗೆ ಅವನೆ ಕಾರಣ ಹೇಳಿಕೊಳ್ಳಬಹುದು.. ನೀನು ಹೇಗೂ ಸಿದ್ದವಾಗಿಯೆ ನಿಂತಿರುವೆಯಲ್ಲ.. ಹೊರಡು ತಾಯಿ, ಇಲ್ಲಿ ಕಾಲಹರಣ ಮಾಡುವ ಬದಲು ಅವನನ್ನೆ ನೇರ ಕೇಳಿ ಬಿಡಬಹುದು ವಿಷಯವೇನೆಂದು…” ಎಂದ ಅನುಭವಸ್ಥ ಮಾತಲಿ..

ಇನ್ನು ಹೆಚ್ಚು ಮಾತಾಡಿ ವೃಥಾ ಸಮಯ ವ್ಯಯಿಸುವ ಬದಲು ಅವನ ಮಾತಿನಂತೆ ನಡೆಯುವುದೆ ಕ್ಷೇಮಕರವೆಂದು ಭಾವಿಸಿದ ಊರ್ವಶಿ, ಮರು ಮಾತಾಡದೆ ರಥವನ್ನೇರಲು ಹೊರಟಳು. ಆ ಹೊತ್ತಲ್ಲೆ ಮೇನೆಯೊಡನೆ ಸಿದ್ದರಾಗಿದ್ದ ಭದ್ರರಿಗೆ ಆ ದಿನದ ಸೇವೆಯ ಅಗತ್ಯವಿಲ್ಲವೆಂದು ಸುದ್ದಿ ನೀಡಿದ ಮಾತಲಿ ತನ್ನ ರಥವನ್ನು ದೌಡಾಯಿಸಿದ್ದ ದೇವರಾಜನ ವಸತಿಯ ಕಡೆಗೆ…

ಮನೋವೇಗದಷ್ಟೆ ಕ್ಷಿಪ್ರಗತಿಯಲ್ಲಿ ಬಂದು ತಲುಪಿದ ರಥದ ನಿರೀಕ್ಷೆಯಲ್ಲಿ, ತನ್ನ ವಸತಿಯಂಗಳದ ಹೆಬ್ಬಾಗಿಲಲ್ಲೆ ನಿಂತು, ಯಾರೊ ವಿಶೇಷ ಅತಿಥಿಗಳನ್ನು ಬರಮಾಡಿಕೊಳ್ಳುವವನಂತೆ ನಿಂತಿದ್ದ ಶಚೀಂದ್ರ. ಅವನು ಧರಿಸಿದ್ದ ಉಡುಗೆ ತೊಡುಗೆ ಮತ್ತಿತರ ಸಿದ್ದತೆಗಳನ್ನು ಗಮನಿಸಿದರೆ, ಅವನೂ ಕೂಡ ಎಲ್ಲಿಗೊ ಹೊರಡಲು ಸಿದ್ದನಾಗಿ ನಿಂತಂತೆ ಕಂಡಿತ್ತು..

ರಥವು ಅವನ ಹತ್ತಿರಕ್ಕೆ ಬಂದು ನಿಲ್ಲುತ್ತಿದ್ದಂತೆ, ಊರ್ವಶಿಯನ್ನಲಿ ಇಳಿಯಬಿಡದೆ ತಾನೆ ನೇರ ರಥದ ಬಳಿ ಬಂದು ಒಳ ಹತ್ತಲು ಮೆಟ್ಟಿಲಿಗೆ ಕಾಲಿರಿಸಿದ. ಅದನ್ನು ನೋಡುತ್ತಿದ್ದಂತೆ ದೇವರಾಜನು ಆ ದಿನ ತನ್ನ ಜತೆಯಾಗಿಯೆ ಪಿತಾಮಹನಲ್ಲಿಗೆ ಹೊರಟಿರುವನೆಂದು ಅರಿವಾಗಿ, ಏನು ಪ್ರಶ್ನೆ ಕೇಳದೆ ಪಕ್ಕಕ್ಕೆ ಸರಿದು ಅವನು ಕೂಡಲು ಅನುಕೂಲವಾಗುವಂತೆ ಜಾಗ ಮಾಡಿಕೊಟ್ಟಳು. ಸ್ವಸ್ಥವಾಗಿ ಏರಿ ಮೆತ್ತನೆಯ ಸುಖಾಸೀನದಲ್ಲಿ ಕೂರುತ್ತಿದ್ದಂತೆ ಆದೇಶವಿತ್ತಿದ್ದ ದೇವೇಂದ್ರ..

” ಮಾತಲಿ ನೇರ ಪಿತಾಮಹರ ಪ್ರಯೋಗಶಾಲೆಗೆ ನಡೆ..”

ಹಾದಿ ಕ್ರಮಿಸಲಾರಂಭವಾಗುತ್ತಿದ್ದ ಹಾಗೆಯೆ ಕುತೂಹಲದಿಂದ ಮೈಯೆಲ್ಲ ಕಿವಿಯಾದಂತಿದ್ದ ಊರ್ವಶಿಯತ್ತ ತಿರುಗಿದ ದೇವರಾಜ, ” ಇದೇನು ಇಂದು ನಾನು ನಿನ್ನ ಜತೆಗೆ ಹೊರಟಿರುವೆನೆಂದು ಅಚ್ಚರಿಯಾಗುತ್ತಿದೆಯೆ ಊರ್ವಶಿ ?”ಎಂದ ಮಾತಿನಾರಂಭಕ್ಕೆ ಪೀಠಿಕೆ ಹಾಕುತ್ತ..

” ನೀನು ಬ್ರಹ್ಮದೇವನನ್ನು ನೋಡ ಹೊರಡುವುದೇನು ಅಸಹಜವಲ್ಲ.. ದೈನಂದಿನ ಕಾರ್ಯ ಕಾರಣಗಳ ಸಲುವಾಗಿ ದಿನಕೆಷ್ಟು ಬಾರಿ ನೋಡುವೆಯೊ, ಮಾತಾಡುವೆಯೊ ನನಗರಿವಿರದಿದ್ದರು ಅದು ಸಾಕಷ್ಟು ಬಾರಿಯೆಂದು ಊಹಿಸಬಲ್ಲೆ… ಆದರೆ ನೀನೀದಿನ ಇಷ್ಟು ಬೆಳಗಿನ ಹೊತ್ತಲ್ಲೆ ನನ್ನ ಜತೆಗೆ ಹೊರಟಿದ್ದು ಮಾತ್ರ ಅಚ್ಚರಿಯೆ..!”

ಅವಳ ಮಾತಿಗೆ ನಸುನಕ್ಕ ಇಂದ್ರ, ” ಅದಕ್ಕೆ ಕಾರಣವಿಲ್ಲದಿಲ್ಲ ಊರ್ವಶಿ.. ನೀನು ಪಾಲ್ಗೊಂಡಿರುವ ಈ ವಿಜ್ಞಾನ ಯಜ್ಞಕ್ಕೆ ಸಂಬಂಧಿಸಿದಂತೆ ನನಗೊಂದು ಮುಖ್ಯ ಕೆಲಸವಿದೆ.. ಅದರ ಸಲುವಾಗಿ ನಿನ್ನ ಜತೆಯೆ ಹೊರಟೆ.. ಅದರ ಕುರಿತು ನಿನಗು ಅರಿವಿರಲೆಂಬ ಭಾವನೆಯಿಂದಲೆ ಜತೆಗೆ ಬಂದೆ.. ನನ್ನ ಸಲಹೆಯನ್ನೇನಾದರು ಪಿತಾಮಹನು ಅಂಗೀಕರಿಸಿದರೆ, ನೀನು ವಹಿಸಬೇಕಾದ ಪಾತ್ರವು ಈಗಿನದಕ್ಕಿಂತ ಹೆಚ್ಚು ಗಹನದ್ದಾಗಬಹುದು. ಅದಕ್ಕೆ ನೀನೂ ಜತೆಗಿದ್ದರೆ ಚೆನ್ನವೆಂದು ಭಾವಿಸಿ ಈ ಯೋಜನೆ ಮಾಡಿದೆ..” ಎಂದ ತಿಳಿಯಾಗಿ ನಗುತ್ತ.

(ಇನ್ನೂ ಇದೆ)

(Link to the next episode 21: https://nageshamysore.wordpress.com/2016/03/10/00576-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%a7/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore

00570. ಅಹಲ್ಯಾ ಸಂಹಿತೆ – ೧೯ (ಊರ್ವಶಿ – ದೇವೇಂದ್ರ ಚರ್ಚೆ)


00570. ಅಹಲ್ಯಾ ಸಂಹಿತೆ – ೧೯ (ಊರ್ವಶಿ – ದೇವೇಂದ್ರ ಚರ್ಚೆ)
__________________________________

(Link to previous episode 18: https://nageshamysore.wordpress.com/2016/03/09/00569-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%ae/)

ಅಂದು ಎಂದಿನಂತೆ ತನ್ನ ಸಂಶೋಧನಾ ಪ್ರಯೋಗದಲ್ಲಿ ನಿರತನಾಗಿದ್ದ ಚತುರ್ಮುಖ ಬ್ರಹ್ಮನ ಎದುರು ಬದಿಯ ಆಸನವೊಂದರಲ್ಲಿ ಆರಾಮವಾಗಿ ಒರಗಿ ಕೂತಿದ್ದಳು ಊರ್ವಶಿ, ತನ್ನ ಮುಂದಿನ ಅಣತಿಯೇನಿರಬಹುದೆಂಬ ನಿರೀಕ್ಷೆಯಲ್ಲಿ…

ಅದಾಗ ತಾನೆ ಬಂದವಳಿಗೆ ಮುಕ್ಕಾಲು ಪಾಲು ಬ್ರಹ್ಮದೇವ ಹೇಳಿದಂತೆ ಪರೀಕ್ಷಾ ಕೊಠಡಿಯ ಆಸನದಲ್ಲೊ ಅಥವ ವಿಶ್ರಮಿಸುವ ಅಂಗಳದಲ್ಲೊ ಕಾದು ಕೂರುವುದು ಬಿಟ್ಟರೆ ಹೆಚ್ಚು ಕೆಲಸವಿರುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ ಬಾಯಿಂದ ಜೊಲ್ಲುರಸದ ಮಾದರಿ ತುಂಬಿಸಿ ಕೊಡುವುದೊ, ಪಟಪಟನೆ ಕೈಯಾಡಿಸಿ ಹಸ್ತಗಳನ್ನು ತಾಕಲಾಡಿಸಿ ಸೂಕ್ಷ್ಮರೂಪದ ಜೀವಕೋಶ ಕಣಗಳನ್ನು ಪರೀಕ್ಷಾ ಯಂತ್ರ ಫಲಕದ ಮೇಲೆ ಉದುರಿಸುವುದೊ ಬಿಟ್ಟರೆ ಮಿಕ್ಕ ಸಮಯವೆಲ್ಲ ಬರಬಹುದಾದ ಕರೆಗಾಗಿ ಕಾದು ಕೂತಿರಬೇಕಿತ್ತು.

ಎಷ್ಟೊ ಬಾರಿ ಭೇಟಿಯಲ್ಲಿರುತ್ತಿದ್ದುದು ಒಂದು ಕರೆ ಮಾತ್ರ; ಮಿಕ್ಕ ಸಮಯದಲ್ಲಿ ಮಾಡಲೇನೂ ಇರದೆ ಅಲ್ಲಿರುತ್ತಿದ್ದ ಗ್ರಂಥಗಳ, ಪುಸ್ತಕಗಳ ಮೇಲೆ ಕಣ್ಣಾಡಿಸಿಕೊಂಡು ಕಾಲ ಕಳೆಯುತ್ತಿದ್ದಳು ಊರ್ವಶಿ. ಮೊದಮೊದಲು ನಿರಾಸಕ್ತಿಯಿಂದ ಪುಟ ತಿರುವುತ್ತಿದ್ದವಳು, ದಿನ ಕ್ರಮೇಣ ಸುಮ್ಮನೆ ಕಾಲಾಯಾಪನೆಗೆಂದು ಓದ ಹತ್ತಿದಳು.

ಕಾಲ ಕಳೆದಂತೆ ಆ ಅಭ್ಯಾಸವೆ ಹವ್ಯಾಸದಂತಾಗಿ ಇದ್ದಕ್ಕಿದ್ದಂತೆ ಆ ವಸ್ತು ವಿಷಯದ ಮೇಲೆ ಆಸಕ್ತಿಯೂ ಹುಟ್ಟಿಬಿಟ್ಟಿತು. ವಿಷಯದ ಕುರಿತಾದ ಆಸಕ್ತಿಯ ಕುತೂಹಲ, ಮತ್ತಷ್ಟು ಗ್ರಹಿಕೆಗೆ ಪ್ರೇರೇಪಣೆ ನೀಡಿ ಕೊಂಚ ಆಳವಾದ ಅಭ್ಯಾಸಕ್ಕೆ ಇಳಿಸಿಬಿಟ್ಟಿತು ಊರ್ವಶಿಯನ್ನು ; ಆಳಕ್ಕಿಳಿದಂತೆಲ್ಲ ಬ್ರಹ್ಮದೇವ ಮಾಡುತ್ತಿರುವ ಸಂಶೋಧನೆಯ ಸ್ಥೂಲ ಚಿತ್ರಣ ಸಿಕ್ಕಂತಾಗಿ ಅದರ ಹಿನ್ನಲೆಯೂ ಅರ್ಥವಾಗತೊಡಗಿತ್ತು.

ಆದರೆ ಆ ದಿನ ಮಾತ್ರ ಯಾಕೊ ಎಂದಿನಂತಿರಲಿಲ್ಲ.. ಅವಸರಾವಸರವಾಗಿ ಬಂದ ಬ್ರಹ್ಮದೇವ ತನ್ನ ಪ್ರಯೋಗದತ್ತ ಗಮನ ಹರಿಸಿ ಕೆಲವು ನಿಮಿಷಗಳೂ ಕಳೆದಿಲ್ಲ, ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ದೂತನೊಬ್ಬ ಅವಸರದ ವಿಷಯವೊಂದನ್ನು ಕಿವಿಯಲ್ಲಿ ಬಿತ್ತರಿಸಿ ಹೋಗಿಬಿಟ್ಟ. ಅದನ್ನು ಕೇಳಿದವನೆ ತಾನು ಮಾಡುತ್ತಿದ್ದ ಪ್ರಯೋಗವನ್ನು ಅಷ್ಟಕ್ಕೆ ನಿಲ್ಲಿಸಿ ನಡೆದುಬಿಟ್ಟಿದ್ದ ಬ್ರಹ್ಮ.. ಹೋಗುವಾಗ ಊರ್ವಶಿಗು ಆ ದಿನದ ಕೆಲಸ ಮುಗಿಯಿತೆಂದು ಸಂಜ್ಞೆಯಲ್ಲಿಯೆ ತಿಳಿಸಿ ನಡೆದ ಕಾರಣ, ಊರ್ವಶಿ ಮತ್ತೇನು ಮಾಡಲು ಕೆಲಸವಿಲ್ಲದೆ ಅಲ್ಲೆ ಇದ್ದ ಮತ್ತಷ್ಟು ಗ್ರಂಥ, ಬರಹ, ವರದಿಗಳನ್ನು ಓದತೊಡಗಿದಳು…

ಆಗಲೆ ಮೊದಲ ಬಾರಿಗೆ ಅವಳ ಕಣ್ಣಿಗೆ ಬಿದ್ದದ್ದು ಗೌತಮನೆಂಬ ಹೆಸರಿನ ಯುವವಿಜ್ಞಾನಿಯೊಬ್ಬ ಬರೆದ ಕೆಲವು ಸಂಶೋಧನಾತ್ಮಕ ಲೇಖನ, ಬರಹಗಳು…

ಒಂದು ಬರಹದಲ್ಲಿ ಅದರೊಡನೆ ಇದ್ದ ಚಿತ್ರವನ್ನು ನೋಡುತ್ತಿದ್ದ ಹಾಗೆ ಅಚ್ಚರಿಯೂ ಆಗಿತ್ತು – ಅಷ್ಟು ಚಿಕ್ಕ ವಯಸಿನ ವ್ಯಕ್ತಿಯ ಚಿತ್ರವನ್ನು ನೋಡಿ. ಆ ವಯಸಿನಲ್ಲೆ ಜಪತಪದ ಹಾದಿ ಹಿಡಿದ ಕಾರಣಕ್ಕೊ ಏನೊ, ಋಷಿಮುನಿಗಳಿಗಿರುವ ಹಾಗೆ ಗಡ್ಡ ಮೀಸೆಗಳಿದ್ದರು ಆ ಯುವ ತೇಜಸ್ಸನ್ನು ಮುಚ್ಚಿ ಹಿಡಿಯಲಾಗದೆ ಎತ್ತಿ ತೋರಿಸುವ ಅನಿವಾರ್ಯಕ್ಕೆ ಶರಣಾದಂತಿತ್ತು…

ಆ ಮುಖ ನೋಡುತ್ತಿದ್ದಂತೆ ಯಾಕೊ ಏನೊ ತೀರ ಪರಿಚಿತ ಭಾವವೊಂದು ಮೂಡಿದಂತೆನಿಸಿದಾಗ ಏನು ಕಾರಣವಿರಬಹುದೆಂದು ಆ ಚಿತ್ರವನ್ನೆ ಮತ್ತೆ ಆಳವಾಗಿ ದಿಟ್ಟಿಸಿದ್ದಳು ಊರ್ವಶಿ…

ಸುಮಾರು ಹೊತ್ತಿನ ಕಾಲ ತದೇಕಚಿತ್ತಳಾಗಿ ನೋಡಿದ ಮೇಲೆ ಆ ಪರಿಚಿತ ಭಾವನೆಗೆ ಕಾರಣವೇನೆಂದು ತಟ್ಟನೆ ಹೊಳೆದಿತ್ತು ಊರ್ವಶಿಗೆ – ಆ ಮುಖದ ಗಡ್ಡ ಮೀಸೆಗಳನ್ನೆಲ್ಲ ತೆಗೆದು ಕೊಂಚ ದೇವತೆಗಳ ವಸ್ತ್ರಾದಿ ಆಭರಣಗಳನ್ನು ಹಾಕಿಬಿಟ್ಟರೆ ಆ ವ್ಯಕ್ತಿ ಸಾಕ್ಷತ್ ದೇವೇಂದ್ರನನ್ನೆ ಹೋಲುವಷ್ಟು ತದ್ರೂಪಿಯಾಗಿದ್ದ !

ಋಷಿಮುನಿಯ ವೇಷ ಭೂಷಣಗಳ ನಡುವೆಯೂ ಪರಿಚಿತತೆ ಕಂಡ ಆ ಬಗೆಯನ್ನು ಪರಿಗಣಿಸಿದರೆ, ಹೋಲಿಕೆ ಬಹಳ ಹತ್ತಿರದ್ದೆ ಇರಬೇಕೆನಿಸಿತ್ತು ಊರ್ವಶಿಗೆ. ಅದನ್ನು ದೇವರಾಜನಿಗೆ ತಿಳಿಸಿ ಕೊಂಚ ಹಾಸ್ಯ, ಕೀಟಲೆ ಮಾಡಿದರೆ ಹೇಗೆ ಎನ್ನುವ ತುಂಟತನದ ಆಲೋಚನೆಯೂ ಮೂಡಿಬಂದಿತ್ತು… !

ಗೌತಮನೆಂದರೆ ಅಷ್ಟೇನು ಆಸ್ಥೆ, ಕುತೂಹಲವಿರದಿದ್ದವಳಿಗೂ ಈ ತದ್ರೂಪಿನ ಸಾಮ್ಯತೆಯಿಂದಾಗಿ ಒಂದು ಬಗೆಯ ವಿಚಿತ್ರ ಕುತೂಹಲ ಮೂಡಿ ಅವನ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕತೊಡಗಿದ್ದಳು, ಅಲ್ಲಿದ್ದ ಗ್ರಂಥ ಭಂಢಾರದ ಹೊತ್ತಗೆಗಳ ಮೂಲಕ…

ಅವಳೇನು ಮಾಡುತ್ತಿರಬಹುದೆಂಬ ಅರಿವಿರದಿದ್ದರು, ಹಿಂದೊಮ್ಮೆ ಅವಳು ಆಸ್ಥೆಯಿಂದ ಓದುತ್ತಿರುವ ಸಂಗತಿಯನ್ನು ಗಮನಿಸಿ, ಅವಳಿಗೆ ಬೇಕಾದ ಗ್ರಂಥವನ್ನು ಬೇಕಾದರೆ ಜತೆಗೊಯ್ದು ಓದಿದ ನಂತರ ಹಿಂತಿರುಗಿಸಬಹುದೆಂದು ಪರವಾನಗಿಯಿತ್ತಿದ್ದ ಬ್ರಹ್ಮದೇವ.. ಆ ನಂತರ ಕೆಲಸವಿಲ್ಲದ ಹೊತ್ತಿನಲ್ಲಿ ತನಗೆ ಬೇಕಾದ ಗ್ರಂಥವನ್ನು ಹೊತ್ತುಕೊಂಡು ಮನೆಗೆ ಹಿಂದಿರುಗಿ ಅಲ್ಲೆ ಓದು ಮುಂದುವರೆಸುವ ಪರಿಪಾಠವೂ ಆರಂಭವಾಗಿತ್ತು..

ಅದು ನಡೆದ ಮರುದಿನವೂ ಮತ್ತದೆ ಪ್ರಕ್ರಿಯೆ ಮರುಕಳಿಸಿ, ಮತ್ತೆ ಅವಸರದಲ್ಲಿ ಹೋಗಬೇಕಾಗಿ ಬಂತು ಬ್ರಹ್ಮದೇವನಿಗೆ…

ಇದೇ ಪ್ರಕ್ರಿಯೆ ಮತ್ತೆ ಮತ್ತೆ ಮರುಕಳಿಸತೊಡಗಿದಾಗ ಯಾಕೊ ಅಲ್ಲೆ ಕೂತಿರಲು ಬೇಸರವಾಗಿ, ತನಗೆ ಬೇಕಿದ್ದ ಹೊತ್ತಗೆಯನ್ನು ಕೈಗೆತ್ತಿಕೊಂಡು ಅಲ್ಲಿಂದ ತನ್ನ ತಾಣಕ್ಕೆ ಹಿಂತಿರುಗಿ ಅಲ್ಲೆ ಅಧ್ಯಯನ ಕೊಠಡಿಯಲ್ಲಿ ಕೂತು ಓದುವ ಅಭ್ಯಾಸ ಮಾಡಿಕೊಂಡಳು ಊರ್ವಶಿ.

ಆ ಒಂದು ದಿನ ಯಾವುದೊ ಕಾರಣಕ್ಕೆ ಅಲ್ಲಿಗೆ ಬಂದ ದೇವರಾಜನು ಬ್ರಹ್ಮದೇವನ ಪ್ರಯೋಗಶಾಲೆಯಲ್ಲಿರಬೇಕಿದ್ದ ಊರ್ವಶಿ, ಅಲ್ಲಿ ಕೂತು ಗ್ರಂಥಾದ್ಯಯನ ಮಾಡುತ್ತಿರುವುದನ್ನು ಕಂಡು ವಿಸ್ಮಿತನಾಗಿ ವಿಚಾರಿಸಿಕೊಂಡಿದ್ದ..

” ಯಾಕೆ ಊರ್ವಶಿ ? ಇಷ್ಟು ಬೇಗನೆ ಕೆಲಸ ಮುಗಿದು ಹೋಯ್ತೇನು.. ?”

” ಮುಗಿಯಿತೆಂದರೆ ಮುಗಿಯಿತು, ಇಲ್ಲವೆಂದರೆ ಇಲ್ಲ ದೇವರಾಜ…” ಅಷ್ಟೆ ಚತುರತೆಯಿಂದ ಓದಿನಿಂದ ತಲೆಯೆತ್ತದೆ ಮಾರುತ್ತರ ನೀಡಿದ್ದಳು ಊರ್ವಶಿ..

” ಅಂದರೆ..?”

ಓದುವುದನ್ನು ನಿಲ್ಲಿಸಿ ತಲೆಯೆತ್ತಿದ ಊರ್ವಶಿ, ” ಯಾಕೊ ಅರಿಯೆ ದೇವರಾಜ.. ಈಚೆಗೆ ಬ್ರಹ್ಮದೇವನಿಗೆ ಬಿಡುವಿರುವಂತೆ ಕಾಣುತ್ತಿಲ್ಲ.. ನಿತ್ಯವು ಬಂದ ತುಸು ಹೊತ್ತಿಗೆಲ್ಲ ಯಾವುದಾದರು ತುರ್ತುಕರೆಯ ನೆಪದಲ್ಲಿ ಅರ್ಧಕ್ಕೆ ಹೊರಟು ಹೋಗಬೇಕಾಗಿ ಬರುತ್ತಿದೆ..”

“ಓಹ್..! ಅರ್ಥವಾಯಿತು ಬಿಡು..ಹಾಗಾದಾಗೆಲ್ಲ ನೀನು ಅನಿವಾರ್ಯ ರಜೆ ತೆಗೆದುಕೊಂಡು ವಾಪಸ್ಸು ಬರಬೇಕಾಗುತ್ತಿದೆಯೇನು ?”

“ಹೌದು.. ಮೊದಲೆ ಗೊತ್ತಿದ್ದರೆ ಹೋಗುವ ಅಗತ್ಯವೆ ಇರುವುದಿಲ್ಲ… ಆದರೆ ನಾನು ಹೋದಾಗ ಪಿತಾಮಹ ಬ್ರಹ್ಮನೂ ಅಲ್ಲಿಗೆ ಬಂದಿರುತ್ತಾನೆ..ಅಂದರೆ ಅವನಿಗು ಈ ಮೊದಲೆ ಸುಳಿವಿರದ ಕಾರ್ಯಕ್ರಮಗಳೊ, ಅನಿವಾರ್ಯಗಳೊ ಅಕಸ್ಮಾತಾಗಿ ಬಂದು ಕಾಡುತ್ತಿರಬೇಕು.. ಪ್ರತಿ ಬಾರಿಯೂ ಕೆಲಸ ಮುಂದುವರೆಸಲಾಗುತ್ತಿಲ್ಲವಲ್ಲ, ಅಲ್ಲಿಗೆ ನಿಲ್ಲಿಸಬೇಕಲ್ಲಾ ಎನ್ನುವ ವ್ಯಾಕುಲತೆ, ಬೇಸರ ಅವನ ಮುಖದಲ್ಲು ಎದ್ದು ಕಾಣುತ್ತಿರುವುದನ್ನು ನಾನೆ ಗಮನಿಸುತ್ತಿದ್ದೇನೆ.. ಆದರಲ್ಲು ಈಚಿನ ಕೆಲವು ದಿನಗಳಿಂದ ಇದು ನಿತ್ಯದ ಪ್ರಕ್ರಿಯೆಯಾಗಿಬಿಟ್ಟಿದೆ..”

ಅವಳ ಮಾತನ್ನು ಆಲಿಸುತ್ತಲೆ ಅವಳ ಆಸನದ ಹತ್ತಿರಕ್ಕೆ ಬಂದ ದೇವರಾಜನ ಕಣ್ಣಿಗೆ ಅವಳು ಓದುತ್ತಿದ್ದ ಗ್ರಂಥದ ಮೇಲೂ ಕಣ್ಣು ಬಿತ್ತು…

” ಅದಿರಲಿ..ಇದೇನಿದು ? ಏನೊ ಗಹನವಾದ ಅಧ್ಯಯನದಲ್ಲಿ ತೊಡಗಿರುವಂತಿದೆಯಲ್ಲ ?” ಎಂದವನೆ ಆ ಗ್ರಂಥದ ತಾಳೆಗರಿಯ ಸಂಪುಟವನ್ನು ಕೈಗೆತ್ತಿಕೊಂಡ. ಅದೆಲ್ಲವೂ ಗೌತಮಮುನಿಯ ವೈಜ್ಞಾನಿಕ ಅಧ್ಯಯನದ ಕುರಿತಾದ ಲೇಖನ, ಬರಹಗಳ ಸಂಗ್ರಹ.. ಬಹುತೇಕ ಎಲ್ಲಾ ಬರಹಗಳು ಒಂದಲ್ಲ ಒಂದು ರೀತಿಯಲ್ಲಿ ತಳಿ ಶಾಸ್ತ್ರ, ಸಂತತಿಯ ಸೃಷ್ಟಿ ವಿಧಾನ ಇತ್ಯಾದಿಗಳಿಗೆ ಸಂಬಂಧಪಟ್ಟ ಬರಹಗಳೆ…

ಅದನ್ನೆಲ್ಲ ನೋಡುತ್ತಿದ್ದಂತೆ ಅದುವರೆವಿಗು ಬ್ರಹ್ಮದೇವನ ಪ್ರಯೋಗವೇನೆಂಬುದರ ಅರಿವಿಲ್ಲದ ದೇವರಾಜನಿಗು, ಅದೇನೊ ತಳಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗವಿರಬಹುದೆಂದು ಹೊಳೆದುಹೋಗಿತ್ತು.. ಅಲ್ಲದೆ ಊರ್ವಶಿಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪ್ರಯೋಗವೆಂದರೆ ಬಹುಶಃ ಏನೊ ಅದ್ಭುತವಾದ ಸೃಷ್ಟಿಯ ಸಲುವಾಗಿಯೆ ನಡೆಯುತ್ತಿರುವ ಪ್ರಯೋಗವಿರಬಹುದೆ?

ಗೌತಮನ ಹೆಸರೇನು ದೇವರಾಜನಿಗೆ ಅಪರಿಚಿತವಾದುದ್ದಾಗಿರಲಿಲ್ಲ.. ಈಗಾಗಲೆ ಸುಮಾರು ಬಾರಿ ಆತನ ಮುಖಾಮುಖಿಯಾಗಿದೆ, ವೈಜ್ಞಾನಿಕ ಕಮ್ಮಟಗಳಲ್ಲಿ ಪಾಲ್ಗೊಳ್ಳುವ ಪ್ರಮೇಯದಿಂದಾಗಿ. ಅಲ್ಲದೆ ಹಿಂದೊಮ್ಮೆ ದೇವಗುರು ಬೃಹಸ್ಪತಿಯ ವಿದ್ಯಾಲಯಾಶ್ರಯದಲ್ಲಿ ರಾಜನೀತಿಯ ಕುರಿತು ಅಧ್ಯಯನಕ್ಕೆಂದು ತಿಂಗಳುಗಟ್ಟಲೆ ತಂಗಿದ್ದ ಹೊತ್ತಲ್ಲಿ ಅದೇ ಆಶ್ರಮದಲ್ಲಿ ತಳಿಶಾಸ್ತ್ರದ ಪರಿಣಿತಿ ಪಡೆಯುವ ಸಲುವಾಗಿ ಬಂದು ತಂಗಿದ್ದ ಗೌತಮನ ಪರಿಚಯವಾಗಿತ್ತು..

ಆ ಪರಿಚಯ ತನ್ನ ಹಾಗೆಯೆ ಇರುವನಲ್ಲ ಎಂಬ ಕಾರಣಕ್ಕೊ ಏನೊ ಸಲಿಗೆಯ ಸ್ನೇಹವಾಗಿ ಬದಲಾಗಿ ಹೆಚ್ಚಿನ ಒಡನಾಟಕ್ಕೂ ಕಾರಣವಾಗಿತ್ತು…

” ಈ ಗೌತಮನು ಬ್ರಹ್ಮದೇವನ ಪ್ರಯೋಗದಲ್ಲಿ ಸಹಾಯಕನಾಗಿ ದುಡಿಯುತ್ತಿರುವನೇನು ?” ಎಂದು ಕೇಳಿದ ದೇವೇಂದ್ರ..

” ಇಲ್ಲಾ … ಇದುವರೆವಿಗು ಯಾವ ಸಹಾಯಕರು ನನ್ನ ಕಣ್ಣಿಗೆ ಬಿದ್ದಿಲ್ಲ.. ಬಹುಶಃ ಬಹಳ ರಹಸ್ಯದ ಪ್ರಯೋಗವೆಂದೊ ಏನೊ, ಯಾರಿಗು ಜತೆ ಸೇರಗೊಡದೆ ತಾನೆ ನಡೆಸಿರಬೇಕು ಪಿತಾಮಹ ಬ್ರಹ್ಮ..” ಎಂದಳು ಊರ್ವಶಿ ತನ್ನ ಊಹೆಯನ್ನು ಮಂಡಿಸುತ್ತ..

ಯಾರೂ ಸಹಾಯಕರಿಲ್ಲವೆಂದಾಗ ಅಚ್ಚರಿಗೊಂಡ ದೇವರಾಜ ಅದೇ ಚಕಿತ ದನಿಯಲ್ಲೆ, ” ಮತ್ತೆ ಈ ಗ್ರಂಥ, ಬರಹ, ಲೇಖನಗಳು..?” ಎಂದು ಕೇಳಿದ..

(ಇನ್ನೂ ಇದೆ)

(Link to next episode 20: https://nageshamysore.wordpress.com/2016/03/09/00571-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%a6/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

00569. ಅಹಲ್ಯಾ ಸಂಹಿತೆ – ೧೮ (ಕುಂಠಿತ ವೇಗದ ಪ್ರಗತಿ)


00569. ಅಹಲ್ಯಾ ಸಂಹಿತೆ – ೧೮ (ಕುಂಠಿತ ವೇಗದ ಪ್ರಗತಿ)
________________________________

(Link to previous episode 17: https://nageshamysore.wordpress.com/2016/03/09/00568-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%ad/)

ಆದರೆ ಈ ಪ್ರಯೋಗವೇನು ಅಷ್ಟು ಸುಲಭದ್ದಲ್ಲವೆಂದು ಚತುರ್ಮುಖ ಬ್ರಹ್ಮನಿಗು ಚೆನ್ನಾಗಿ ಅರಿವಿತ್ತು…

ಅದರ ಕಾರಣವೇನೆಂದು ಅರಿಯಲು ತೀರಾ ತಡಕಾಡಬೇಕಾದ ಅಗತ್ಯವೇನಿರಲಿಲ್ಲ; ಇದುವರೆವಿಗು ಪ್ರಕೃತಿ-ಪುರುಷ ಅಂಶಗಳ ಸೂಕ್ತ ಸಂಯೋಗದ ಫಲಿತವಾಗಿ ಜೀವಸೃಷ್ಟಿಯಾಗುವ ವಿಜ್ಞಾನದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಅವನ ಪ್ರಯೋಗಾಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಯೋನಿಜ ಸೃಷ್ಟಿಯ ಪ್ರಯತ್ನ ಮಾಡಹೊರಟಿದ್ದ ಬ್ರಹ್ಮದೇವ – ಅದೂ ಊರ್ವಶಿಯನ್ನು ಕಂಡ ಮೇಲೆ…!

ಸಾಮಾನ್ಯ, ನಿಸರ್ಗಸಹಜ ಸೃಷ್ಟಿಯ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದವನಿಗೆ, ಪರಿಪೂರ್ಣತೆಯ ಮತ್ತೊಂದು ಹೆಸರೆ ತಾನೇನೊ? ಎನ್ನುವಂತಿದ್ದ ಊರ್ವಶಿಯನ್ನು ನೋಡುತ್ತಿದ್ದಂತೆ ಅರಿವಾಗಿಹೋಗಿತ್ತು – ಅವಳು ಅಯೋನಿಜ ಸೃಷ್ಟಿಯೆಂದು…

ಅವಳು ಸೃಜಿಸಲ್ಪಟ್ಟ ಕಥೆಯನ್ನು ಕೇಳಿದಾಗಲೆ ಅನುಮಾನವಾಗಿತ್ತು – ಅದೇನೊ ಹೊಸರೀತಿಯ ಪ್ರಕ್ರಿಯೆ ಇರಬಹುದೆಂದು… ಹೇಳಿ ಕೇಳಿ, ಗಂಡು ಹೆಣ್ಣಿನ ಸಂಗಮವಿರದೆ ಜೀವಸೃಷ್ಟಿಯೆ ಸಾಧ್ಯವಿಲ್ಲ ಎಂದು ದೃಢವಾಗಿ ನಂಬಿದ್ದ ಕಾಲವದು.

ಆದರೆ ಆ ರೀತಿಯ ಯೋನಿಜ ಸೃಷ್ಟಿಯನ್ನೆ ಲಕ್ಷಾಂತರ ವರ್ಷಗಳಿಂದ ಮಾಡಿಕೊಂಡು ಬಂದಿದ್ದರು, ಯಾಕೊ ಪರಿಪೂರ್ಣವೆನ್ನುವ ತಳಿಯ ಉದ್ಭವವೆ ಆಗಿರಲಿಲ್ಲ. ಪ್ರತಿ ಸಂತತಿಯಲ್ಲಿಯೂ ಏನಾದರೂ ಆಶ್ಚರ್ಯಪೂರ್ವಕವೆನ್ನುವ ಅಂಶಗಳು ಕಾಣಿಸಿಕೊಂಡಷ್ಟೆ ಸಹಜವಾಗಿ, ಎದ್ದು ಕಾಣಬಲ್ಲ ಲೋಪದೋಷಗಳು ಹುಟ್ಟಿಕೊಂಡು ಬರುತ್ತಿದ್ದವು, ಜತೆಜತೆಯಾಗಿ…

ಅದನ್ನೆಲ್ಲ ನೋಡುತ್ತ ಇದ್ದಂತೆ ಎಷ್ಟೊ ಬಾರಿ ಬ್ರಹ್ಮದೇವನಿಗೂ ಅನಿಸಿದ್ದುಂಟು – ಯೋನಿಜನ್ಯ ಸೃಷ್ಟಿಯಲ್ಲಿ ಪರಿಪೂರ್ಣ ಸೃಷ್ಟಿಯೆನ್ನುವುದು ಬಹುಶಃ ಮರೀಚಿಕೆಯೇನೊ ? ಎಂದು…

ಆದರೆ ಅವನಿಗೆ ವಹಿಸಿದ್ದ ಪ್ರಯೋಗದ ಮುಖ್ಯ ಗಮ್ಯವೆ ನಿರಂತರವಾಗಿ ತಳಿಯನ್ನು ಉತ್ತಮಪಡಿಸುತ್ತ ಅದರ ಪರಿಪೂರ್ಣ ಹಂತಕ್ಕೆ ಕೊಂಡೊಯ್ಯುವುದು. ಹೀಗಾಗಿ ನಿಲ್ಲದ ನಿರಂತರ ಪ್ರಯತ್ನ ಸಾಗಿಯೆ ಇದೆ ಸಹಸ್ರಾರು-ಲಕ್ಷಾಂತರ ವರ್ಷಗಳಿಂದ…

ಕೊನೆಗೆ ಇನ್ನೇನು ಈ ಗಮ್ಯ ಸಾಧಿಸಲಸಾಧ್ಯವಾದ ಗುರಿ ಎನ್ನುವ ನಿರಾಶದಾಯಕ ತೀರ್ಮಾನಕ್ಕೆ ಬರುವ ಹೊತ್ತಿಗೆ ಸರಿಯಾಗಿ ಊರ್ವಶಿಯ ಕಥಾನಕ ಬೆಳಕಿಗೆ ಬಂದಿತ್ತು.. ಅದರೊಂದಿಗೆ ಬ್ರಹ್ಮದೇವನೆ ಆಶೆಯೂ ಮತ್ತೆ ಚಿಗುರಿತ್ತು – ಕ್ಷಿತಿಜದಲ್ಲೊಂದು ಕ್ಷೀಣ ಬೆಳಕು ಕಂಡಂತಾಗಿ.

ಸೃಷ್ಟಿಕರ್ತನೆಂದೆ ಬಿರುದಾಂಕಿತನಾಗಿ, ಸೃಷ್ಟಿಪ್ರಕ್ರಿಯೆಯ ಪಿತಾಮಹನೆಂದೆ ಹೆಸರಾದ ಮಹಾನ್ ವಿಜ್ಞಾನಿ ಬ್ರಹ್ಮದೇವನಿಗೆ ಆ ಅನುಭವದ ಕಾರಣದಿಂದಲೆ ಊರ್ವಶಿಯ ಸೃಷ್ಟಿಯ ವಿಭಿನ್ನ ಹಿನ್ನಲೆ ತಟ್ಟನೆ ಗೋಚರಿಸಿಬಿಟ್ಟಿದ್ದು..!

ಎಲ್ಲವು, ಸರ್ವತರದಲ್ಲಿಯೂ ಪರಿಪಕ್ವವಿದ್ದ ಅಂದಚೆಂದದ ಅಂಗಗಳ ಲಾವಣ್ಯವತಿಯನ್ನು ಕಾಣುತ್ತಿದ್ದ ಹಾಗೆಯೆ ಅದರಲ್ಲೇನೊ ವಿಶೇಷತೆಯಿದೆಯೆಂದರಿತು ಆ ವಿವರಗಳನ್ನು ಕೆದಕತೊಡಗಿದಂತೆ, ಚಾಣಕ್ಷಮತಿ ಬ್ರಹ್ಮದೇವನಿಗೆ ಅದರ ಸುಳಿವು ಸಿಕ್ಕಿಹೋಗಿತ್ತು…

ಆದರೆ ಆ ಅಯೋನಿಜ ಸೃಷ್ಟಿಯನ್ನು ಸಾಧ್ಯವಾಗಿಸಿದ ರಹಸ್ಯ ಪ್ರಕ್ರಿಯೆ ಯಾವುದು ಎಂದು ಮಾತ್ರ ಗೊತ್ತಾಗಿರಲಿಲ್ಲ…!ಜೀವಕೋಶದ ಕಣಮೂಲಗಳ ಮಟ್ಟದಲ್ಲೆ ಏನೊ ಕೈ ಚಳಕ ನಡೆದಿರಬೇಕೆಂದು ಮಾತ್ರವೆ ಊಹಿಸಬಲ್ಲವನಾಗಿದ್ದ ಬ್ರಹ್ಮದೇವ, ಆ ಕೋಶಗಳಿಂದ ಅದರ ತದ್ರೂಪಿಯನ್ನೆ ಸೃಜಿಸಿ ಮೂಲಕೋಶವನ್ನೆ ದ್ವಿಗುಣಗೊಳಿಸುವ ಸಾಧ್ಯತೆಯನ್ನು ಕುರಿತು ಕೇಳಿದ್ದ…

ಇಲ್ಲಿಯೂ ಅಂತದ್ದೆ ಚಳಕ ನಡೆದಿದೆಯೆಂದು ಧಾರಾಳವಾಗಿ ಊಹಿಸಬಲ್ಲವನಾದರು, ಅದರ ವಿಸ್ತೃತ ವಿವರವೆಲ್ಲ ಗೊತ್ತಿರಲಿಲ್ಲ. ಆದರೆ ಆ ರೀತಿಯ ಸೂಕ್ಷ್ಮಸುಳಿವು ಸಿಕ್ಕಿದ ಮೇಲೆ ಅವನಂತಹ ಮಹಾನ್ ವಿಜ್ಞಾನಿ ಸುಮ್ಮನಿರುವನೆ ?

ಊರ್ವಶಿಯು ಹೇಗೂ ಕಣ್ಮುಂದೆಯೆ ಇರುವಳು… ಪ್ರಯೋಗದ ನಿರಂತರ ಬಳಕೆಗೆ ಅವಳೆ ಜೀವಂತ ಸಿಗುವುದರಿಂದ ತನ್ನೆಲ್ಲ ಪ್ರಯತ್ನಗಳಿಗು ತಾಳೆ ಹಾಕಿ ನೋಡಲು ಮತ್ತು ನಿರಂತರ ಪರಿಶೋಧಿಸುತ್ತ ತನ್ನ ಸಂಶೋಧನೆಯನ್ನು ಉತ್ತಮಪಡಿಸುತ್ತ ಹೋಗಲಿಕ್ಕೆ, ಅವಳ ಈ ಇರುವಿಕೆಯೆ ಆಯಾಚಿತ ವರದ ಹಾಗೆ…

ಅವಳು ಸಹಕರಿಸುತ್ತ ಹೋದರೆ, ತಾನು ತನ್ನ ಗಮ್ಯ ಮುಟ್ಟುವುದರಲ್ಲಿ ಸಂದೇಹವೇನೂ ಇಲ್ಲವೆಂದು ಅರಿವಾಗಿದ್ದ ಕಾರಣಕ್ಕೋ ಏನೊ ಕೊಂಚವೂ ಬಿಡುವು ನೀಡದೆ ತಕ್ಷಣವೆ ತನ್ನ ಸಂಶೋಧನೆಯನ್ನು ಆರಂಭಿಸಿಬಿಟ್ಟಿದ್ದ ‘ಹಿಮ್ಮುಖ ತಂತ್ರಜ್ಞತೆ’ಯ ನೀತಿಸೂತ್ರವನ್ನು ಅನುಕರಿಸುತ್ತ..

ಆದರೆ ಈ ವಿಧಾನದಲ್ಲಿನ ಪ್ರಮುಖ ಇತಿಮಿತಿಯೆಂದರೆ, ಊರ್ವಶಿಯೆನ್ನುವ ಫಲಿತ ಕಣ್ಣ ಮುಂದಿದ್ದರು ಅವಳನ್ನು ಕೇವಲ ಬಾಹ್ಯ ರೀತಿಯ ತಪಾಸಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಬಹುದಿತ್ತೆ ವಿನಃ, ಯಾವುದೆ ಅಂಗಛೇಧನದಂತಹ ಶಸ್ತ್ರಚಿಕಿತ್ಸೆಗೊಳಪಡಿಸಲು ಸಾಧ್ಯವಿರಲಿಲ್ಲ…

ಆಂತರಿಕ ಮತ್ತು ಬಾಹ್ಯದೆಲ್ಲ ವಿವರಗಳಿಗು ಕೇವಲ ಬಾಹ್ಯರೀತಿಯ ಚಿಕಿತ್ಸೆ, ಪರೀಕ್ಷೆಗಳ ಮೂಲಕ ಮಾಹಿತಿ ಸಂಗ್ರಹಿಸುವಾಗ ಕೆಲವು ಮಾತ್ರವೆ ನೇರವಾದ ಉತ್ತರ ನೀಡುವಂತದಾಗಿದ್ದರೆ, ಮಿಕ್ಕ ಬಹುತೇಕ ಇಂಗಿತಗಳು ಕೇವಲ ಪರೋಕ್ಷ ಮಾತ್ರವಾಗಿ ಸೂಕ್ತ ಊಹೆಗಳನ್ನು ಮಂಡಿಸಲು ಮಾತ್ರವೆ ಸಹಕಾರಿಯಾಗುವಂತದ್ದು…

ಹೀಗಾಗಿ ಸಾಧ್ಯವಿರುವ ಪ್ರತಿ ಊಹೆಯನ್ನು ಪರಿಗಣಿಸುತ್ತ ಒಂದೊಂದಾಗಿ ಅದು ಸರಿಯೆ, ತಪ್ಪೆ ಎನ್ನುವ ಪರೀಕ್ಷೆಗೆ ಒಳಪಡಿಸಿ ಎಳ್ಳು ಜೊಳ್ಳನ್ನು ಬೇರ್ಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿತ್ತು. ಸಹನೆ ಕಳೆದುಕೊಳ್ಳದೆ ಅದನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವುದೇನು ಸಾಮಾನ್ಯದ ಕೆಲಸವೆ ? ಅದರಲ್ಲು ಈ ಮಹತ್ವದ ಪ್ರಯೋಗ ಹಿಂದಿನ ಅನುಭವವಿಲ್ಲದೆ ಬರಿಯ ಸಿದ್ದಾಂತದ ಆಸರೆಯಲ್ಲಿ ನಡೆಯಬೇಕಾದ ಕಾರಣ ಯಾರನ್ನೊ ಸೂಕ್ತರಾದವರೊಬ್ಬರನ್ನು ನಿಯಮಿಸಿ ಯಾಂತ್ರಿಕವಾಗಿ ನಡೆಸಿಕೊಂಡು ಹೋಗುವಂತದ್ದಲ್ಲ…

ಮೂಲತಃ ತಳಿಶಾಸ್ತ್ರದ ಮಹಾನ್ ವಿಜ್ಞಾನಿಯಾದ ಬ್ರಹ್ಮದೇವನಿಗೆ ಸಹನೆಯಿಂದ ನಿರಂತರ ಪ್ರಯೋಗ ನಡೆಸುವುದೇನು ದೊಡ್ಡ ವಿಷಯವಾಗಿರಲಿಲ್ಲ – ಅದರಲ್ಲೂ ಆ ಪ್ರಯೋಗ ಮತ್ತದರ ಫಲಿತಾಂಶ ಅವನ ಮನಸಿಗೆ ತೀರಾ ಹತ್ತಿರವಾದ ವಸ್ತುವಿಗೆ ಸಂಬಂಧಪಟ್ಟಿದ್ದು…

ಆದರೆ ಬರಿಯ ಪ್ರಯೋಗ ಮಾಡಿಕೊಂಡು ಕೂತಿರಲು ಅವನ ಮಿಕ್ಕ ಜವಾಬ್ದಾರಿ ಬಿಡಬೇಕಲ್ಲಾ ? ನಿರಂತರ ಸೃಷ್ಟಿಯ ಪ್ರಸಕ್ತ ಕಾರ್ಯವೂ ಅಡಚಣೆಯಿರದೆ ಸಾಗಿಕೊಂಡಿರಬೇಕು ತಾನೆ ? ಹೆಣ್ಣು ಗಂಡುಗಳೆಂಬ ಪ್ರಕೃತಿ ಪುರುಷ ಅಂಶಗಳನ್ನು ಸೃಜಿಸಿ ಬಿಟ್ಟ ಮೇಲೆ ಸೃಷ್ಟಿಕಾರ್ಯವೇನೊ ತಂತಾನೆ ನಡೆದುಕೊಂಡು ಹೋಗುತ್ತಿದೆ ನಿಜ ; ಆದರೆ ಅದರ ಗುಣಮಟ್ಟ, ಫಲಿತವಿನ್ನು ಮೊದಲು ಸಾಧಿಸಲುಬಯಸಿದ್ದ ನಿರೀಕ್ಷಿತ ಮಟ್ಟವನ್ನಿನ್ನು ಮುಟ್ಟಿಲ್ಲ…

ಅಲ್ಲುಂಟಾಗುವ ಕನಿಷ್ಠ ಸ್ತರದ ಪ್ರಗತಿಗು ಅದರ ನಿರಂತರ ಮೇಲುಸ್ತುವಾರಿಕೆ ತಪ್ಪಿದ್ದಲ್ಲ. ಅಲ್ಲದೆ ಅದನ್ನು ಹತೋಟಿಯಲ್ಲಿಡುವ ಸ್ಥಿತಿಕಾರಕ ವಿಷ್ಣು ಮತ್ತು ಲಯಕರ್ತ ಶಿವನ ಜತೆಗಿನ ಹೊಂದಾಣಿತ ಜತೆಗಾರಿಕೆ ಸಹ ನಿತ್ಯದ ಕೆಲಸದ ಪ್ರಮುಖ ಪಾಲು… ಯಾವುದೇ ಸಮತೋಲನಕ್ಕೆ ಕುಂದು ಬರದಂತೆ ನಿಭಾಯಿಸಿಕೊಂಡು ಹೋಗಲಿಕ್ಕೆ ಮೂವ್ವರಲ್ಲೊಬ್ಬರು ಸದಾ ಜಾಗೃತ ಸ್ಥಿತಿಯಲ್ಲಿ ಕಾಯುತ್ತಿರಬೇಕು.. ಸಂದರ್ಭಾನುಸಾರ ತಂತಮ್ಮ ಕ್ರಿಯೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಒಟ್ಟಾರೆ ಸಂತುಲಿತ ಸ್ಥಿತಿ ನಷ್ಟವಾಗದಂತೆ ನೋಡಿಕೊಳ್ಳಬೇಕು.

ಇದೆಲ್ಲ ಕಾರಣದಿಂದ ಬ್ರಹ್ಮದೇವ ಊರ್ವಶಿಯ ಪ್ರಯೋಗದಲ್ಲಿ ಹೆಚ್ಚು ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಸಿಗುವ ಅಲ್ಪಸ್ವಲ್ಪ ಸಮಯದಲ್ಲಿಯೆ ಸಾಧ್ಯವಾದಷ್ಟನ್ನು ಮಾಡಿ ಮುಗಿಸಿ ಮತ್ತೆ ದೈನಂದಿನ ಜಂಜಾಟಕ್ಕೆ ಓಡಿಹೋಗಬೇಕಾಗುತ್ತಿತ್ತು…

ಎಷ್ಟೊ ಬಾರಿ, ಯಾರಾದರೊಬ್ಬರನ್ನು ಆಪ್ತ ಸಹಾಯಕ್ಕೆ ನೇಮಿಸಿಕೊಂಡರೆ ತಾನಿಲ್ಲದ ಹೊತ್ತಿನಲ್ಲು ಕೆಲಸ ನಡೆಸಬಹುದಲ್ಲ ?ಎನಿಸುತ್ತಿತ್ತು…

ಆದರೆ ತನ್ನಷ್ಟೆ ಅರಿವು ಮತ್ತು ಸಾಮರ್ಥ್ಯವಿರುವ ಸರಿಯಾದ ಜತೆಗಾರರನ್ನೆಲ್ಲಿ ಹುಡುಕುವುದು ? ಅಲ್ಲದೆ ಇದು ಸದ್ಯಕ್ಕೆ ಬಲು ರಹಸ್ಯದಿಂದ ನಡೆಸಬೇಕಾದ ಕಾರ್ಯ; ಯಾರು ಯಾರನ್ನೊ ನೇಮಿಸಿಕೊಳ್ಳುವ ಹಾಗೂ ಇಲ್ಲ. ಬಹುಶಃ ಯಾರದರೊಬ್ಬ ಯುವ ವಯಸಿನ ಎಳೆಯ ವಿಜ್ಞಾನಿಯೊಬ್ಬನನ್ನು ಸಹಾಯಕ್ಕೆ ನೇಮಿಸಿಕೊಂಡರೆ ಹೇಗೆ ?

ಏನಿಲ್ಲವೆಂದರು ದಿನಂಪ್ರತಿ ತಾನು ಆರಂಭಿಸಿದ ಕಾರ್ಯಗಳನ್ನು ನೋಡಿಕೊಳ್ಳುತ್ತ ಅದರ ಸ್ಥಿತಿಗತಿ, ಪ್ರಗತಿಗಳನ್ನು ದಾಖಲಿಸಿ ವರದಿಯೊಪ್ಪಿಸಲಾದರು ಸಹಾಯವಾದೀತಲ್ಲ ?

ನಡುವೆ ತೀರ ತುರ್ತಾದ ಹೊತ್ತಲ್ಲಿ ತನಗೆ ಅದರ ಸುದ್ಧಿ ಕೊಟ್ಟು, ತಾನಲ್ಲಿಗೆ ಬರುವವರೆಗೆ ನಿಭಾಯಿಸಲೊಬ್ಬರಿದ್ದರೆ ಪ್ರಯೋಗದ ಆರೋಗ್ಯಕ್ಕು ಒಳ್ಳೆಯದಲ್ಲವೆ ? ಯಾರಿಗೆ ಗೊತ್ತು – ಸರಿ ಸೂಕ್ತನಾದ ಕಿರಿಯ ವಿಜ್ಞಾನಿ ಸಿಕ್ಕಿದನೆಂದರೆ ಅವನಿಗೆ ಜತೆಜತೆಗೆ ತರಬೇತು ನೀಡುತ್ತ ತನ್ನ ಸಹಾಯಕ ವಿಜ್ಞಾನಿಯ ಮಟ್ಟಕ್ಕೂ ಏರಿಸಬಹುದು…

ಆಗ ತಾನಿಲ್ಲದ ಹೊತ್ತಲು ಪ್ರಯೋಗ ಕೊಂಚಮಟ್ಟಿಗೆ ಮುಂದುವರೆಯುವುದು ಸಾಧ್ಯವಾಗುವುದು ಮಾತ್ರವಲ್ಲದೆ, ಸೂಕ್ತ ಹಿನ್ನಲೆಯ ವ್ಯಕ್ತಿಯಾದರೆ, ಸ್ವಲ್ಪ ಅನುಭವವಾದ ಮೇಲೆ ಕೆಲವು ಪ್ರಯೋಗದ ಭಾಗಾಂಶಗಳನ್ನು ಅವನ ಜವಾಬ್ದಾರಿಗೆ ಒಪ್ಪಿಸಿಬಿಡಬಹುದು. ಸ್ವಲ್ಪ ಪ್ರಯೋಗಕ್ಕು ವೇಗ ಸಿಕ್ಕಂತಾಗುತ್ತದೆ ಜತೆಗೆ ತನಗು ನಿರಾಳವಾದಂತಾಗುತ್ತದೆ.

ಆದರೆ ಅಂತಹ ವ್ಯಕ್ತಿಯಾದರೂ ಯಾರಿದ್ದಾರೆ ?

ಪ್ರಯೋಗದಲ್ಲಿ ತಲ್ಲೀನನಾಗಿ ತನ್ನದೇ ಆದ ಚಿಂತನಾಲೋಕದಲ್ಲಿ ಮುಳುಗಿದ್ದ ಬ್ರಹ್ಮದೇವನನ್ನು ಮತ್ತೆ ವಾಸ್ತವಕ್ಕೆ ತರಿಸಿತ್ತು ಊರ್ವಶಿಯ ದನಿ, ” ಪಿತಾಮಹ.. ನಾನಿನ್ನು ಹೊರಡಲೆ ? ಈವತ್ತಿನ ಕೆಲಸ ಮುಗಿಯಿತಲ್ಲವೆ ?”

ಆಗಲೆಂಬಂತೆ ಸಂಜ್ಞೆಮಾಡಿ ಮೆಚ್ಚುಗೆಯ ಕಿರುನಗೆಯೊಂದನ್ನು ದಯಪಾಲಿಸಿ ಹೊರಡಲನುಮತಿಯಿತ್ತ ಬ್ರಹ್ಮದೇವನಿಗೆ, ಕ್ರಮಬದ್ಧವಾದ ರೀತಿಯಲ್ಲಿ ಶಿರಬಾಗಿಸಿ ವಂದಿಸುತ್ತ ಹೊರನಡೆದಿದ್ದಳು ಊರ್ವಶಿ.

ಬ್ರಹ್ಮದೇವನ ಮನಸು ಮಾತ್ರ ಇನ್ನೂ ಅದನ್ನೆ ಚಿಂತಿಸುತ್ತಿತ್ತು, ‘ಆಪ್ತ ಸಹಾಯಕರಾಗಿ ಯಾರನ್ನು ನೇಮಿಸಿಕೊಳ್ಳಲಿ’ ಎಂದು….

(ಇನ್ನೂ ಇದೆ)

(Link to the next episode 19: https://nageshamysore.wordpress.com/2016/03/09/00570-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%af/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

00568. ಅಹಲ್ಯಾ ಸಂಹಿತೆ – ೧೭ (ಮಹಾಪ್ರಯೋಗ – ಸಂಶೋಧನೆಗೆ ನಾಂದಿ)


00568. ಅಹಲ್ಯಾ ಸಂಹಿತೆ – ೧೭ (ಮಹಾಪ್ರಯೋಗ – ಸಂಶೋಧನೆಗೆ ನಾಂದಿ)
________________________________________

(Link to the previous episode 16: https://nageshamysore.wordpress.com/2016/03/08/00566-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%ac/)

” ಬ್ರಹ್ಮದೇವಾ..”

“ಏನಾದರೂ ಉಪಾಯ ಹೊಳೆಯಿತೆ ಸೂರ್ಯ..?”

” ಒಂದು ಹಾದಿ ಕಾಣಿಸುತ್ತಿದೆ, ಸೂಕ್ತವೊ ಅಲ್ಲವೊ ನಾನೀಗಲೆ ಹೇಳಲಾರೆ…”

“ಏನಾ ದಾರಿ?”

” ಮತ್ತೇನಿಲ್ಲ.. ನಾನೀಗ ನಡೆಸ ಹೊರಟಿರುವ ಹೊಸ ಪ್ರಯೋಗ ತಾಮಸಿ ಪ್ರವೃತ್ತಿಯ ಗುಣಧರ್ಮವನ್ನು ಬದಲಿಸಿ ಸಾತ್ವಿಕವನ್ನಾಗಿಸಬಹುದೆ? ಎಂದು ”

” ಅರ್ಥವಾಯಿತು ಸೂರ್ಯ.. ಅದನ್ನೆ ಬಳಸಿಕೊಂಡು ಸಹಸ್ರಕವಚನ ಶಕ್ತಿತೇಜವನ್ನು ಸಾತ್ವಿಕವಾಗಿಸಿ ನಂತರ ಮುಂದಿನ ಯುಗಕ್ಕೆ ರವಾನಿಸಿಬಿಡುವುದು ಎಂದಲ್ಲವೆ ?” ಕಾತುರದಲ್ಲಿ ನುಡಿದ ಬ್ರಹ್ಮದೇವ..

“ಸೈದ್ದಾಂತಿಕವಾಗಿ ಹೌದು.. ಆದರೆ ಇದೀಗ ಆರಂಭಿಸಬೇಕಾದ ಪ್ರಯೋಗ ಯಶಸ್ಸಾಗುವುದೊ ಇಲ್ಲವೊ ಗೊತ್ತಿಲ್ಲ.. ಅಲ್ಲದೆ ಮತ್ತಷ್ಟು ತೊಡಕುಗಳನ್ನು ಪರಿಹರಿಸಿಕೊಂಡು ಮುನ್ನಡೆಯಬೇಕು..”

” ಮತ್ತಾವ ತೊಡಕು ?”

” ಮೊದಲಿಗೆ ಸಹಸ್ರಕವಚನ ಜತೆಗಿನ ಯುದ್ಧ ನಡೆದೆ ಇರುತ್ತದೆ ಯುಗಾಂತ್ಯದವರೆಗೆ.. ಹೀಗಾಗಿ ಅಲ್ಲಿಯವರೆಗು ಅವನನ್ನು ಪ್ರಯೋಗಕ್ಕೆ ಬಳಸಲು ಸಾಧ್ಯವಿಲ್ಲ..”

” ಮೊದಲೆ ಯಾಕೆ ಸಾಧ್ಯವಿಲ್ಲ ಸೂರ್ಯ?” ಅರ್ಥವಾಗದ ದನಿಯಲ್ಲಿ ಕೇಳಿದ ದೇವೇಂದ್ರ.

” ದೇವರಾಜ.. ಸಹಸ್ರಕವಚನಲ್ಲಿರುವ ಶಕ್ತಿಯ ಬಲ ಅಸೀಮ ಸಾಮರ್ಥ್ಯದ್ದು.. ಅದನ್ನು ಎಷ್ಟು ಕುಗ್ಗಿಸಲು ಸಾಧ್ಯವೊ ಅಷ್ಟು ಕುಗ್ಗಿಸುವುದು ಒಳಿತು.. ಅದು ಮೆದುವಾದಷ್ಟು ಪ್ರಯೋಗಕ್ಕೆ ಅನುಕೂಲ..”

ಅರ್ಥವಾದವನಂತೆ ತಲೆಯಾಡಿಸಿದ ಇಂದ್ರ.

” ನನ್ನ ಪ್ರಯೋಗ ಸಿದ್ಧಾಂತದನುಸಾರ ತತ್ವದ ಮೂಲಾಂಶಗಳನ್ನು ನಾಶಮಾಡಲು ಆಗುವುದಿಲ್ಲ.. ಬದಲಿಗೆ ಬೇಡದ್ದನ್ನು (ಉದಾಹರಣೆಗೆ ತಾಮಸತ್ವ) ಹತ್ತಿಕ್ಕುವ ಹಾಗೆ ಬೇಕಿದ್ದನ್ನು (ಉದಾಹರಣೆಗೆ ಸಾತ್ವಿಕತೆ) ಬಲವಾಗಿಸಿ ಪ್ರಮುಖ ಪಾತ್ರ ವಹಿಸುವಂತೆ ಮಾಡುವುದು.. ಹೀಗಾಗಿ ಬೇಡದ್ದರ ತುಣುಕು ಅಷ್ಟಿಷ್ಟು ಉಳಿದೆ ಇರುವುದಾದರು ಪ್ರಕಟವಾಗಿ ಕಾಣಿಸಿಕೊಳ್ಳದೆ ಅಂತರ್ಮುಖಿಯಾಗಿ ಉಳಿದುಬಿಡಬಹುದು.. ಅದೇನೆ ಇರಲಿ, ನಾನು ಪ್ರಯೋಗ ಆರಂಭಿಸಲು ಸಾಧ್ಯವಾಗುವುದು ಯುಗದ ಕೊನೆಯಾದ ಮೇಲಷ್ಟೆ..”

“ಅರ್ಥಾತ್ ಅವನ ಕಾಟವನ್ನು ಮುಂದಿನ ಯುಗಕ್ಕೆ ರವಾನಿಸುವುದನ್ನು ತಪ್ಪಿಸಲಾಗದು ಎಂದರ್ಥವೆ?” ಆತಂಕದಲ್ಲಿ ಕೇಳಿದ ಬ್ರಹ್ಮ..

” ಹಾಗಲ್ಲ ನನ್ನ ಮಾತಿನರ್ಥ… ಯುಗಾಂತ್ಯದಲ್ಲಿ ಅವನ ಶಕ್ತಿಯನ್ನು ಸ್ಥೂಲೀಕರಿಸಿ ನನ್ನ ಪ್ರಯೋಗಾಲಯಕ್ಕೊಯ್ದರು ಮುಂದಿನ ಯುಗಕ್ಕೆ ಸಿದ್ದನಾಗಿಸಲು ಬೇಕಾದ ಸಮಯ ಇರುವುದಿಲ್ಲ.. ಅವನ ಶಕ್ತಿಯನ್ನು ಹಾಗೆ ಕಾದರಿಸಿ, ಮತ್ತೊಂದು ಯುಗದವರೆಗು ನಿಶ್ಚೇಶ್ಟಿತವಾಗಿಸಿ ಅದು ಸಾಕಷ್ಟು ಸೊರಗಿದ ಮೇಲಷ್ಟೆ ಪರಿವರ್ತನೆಯ ಕಾರ್ಯ ಆರಂಭಿಸಬೇಕು..”

“ಅರ್ಥಾತ್ ಅವನ ಪುನರವತರಣಿಕೆ ಮತ್ತೊಂದು ಯುಗದ ನಂತರ ಮಾತ್ರ ಸಾಧ್ಯವೆಂದಲ್ಲವೆ ?”

“ಹೌದು … ಈಗ ಸತ್ಯಯುಗ.. ಮುಂದಿನ ತೇತ್ರಾಯುಗದಲ್ಲಿ ಅವನನ್ನು ಪರಿವರ್ತನೆಯ ಪ್ರಯೋಗಕೊಡ್ಡಿದರೆ, ದ್ವಾಪರದಲ್ಲಿ ಅವನ ಜನ್ಮವಾಗುವಂತೆ ಆಯೋಜಿಸಬೇಕು…”

” ಅಂದರೆ ಅವನ ಅಂತಿಮ ದಮನ ಕಾರ್ಯಕ್ಕೆ ನರನಾರಾಯಣರೂ ಸಹ ದ್ವಾಪರದತನಕ ಕಾಯಬೇಕೆಂದಾಯ್ತಲ್ಲವೆ?” ಎಂದ ಬ್ರಹ್ಮ.

ಈಗ ಅಚ್ಚರಿಯಾಗುವ ಸರದಿ ಸೂರ್ಯನದಾಗಿತ್ತು..” ಅಂದರೆ ತಾಮಸದಿಂದ ಸಾತ್ವಿಕಕ್ಕೆ ಬದಲಾದರೂ ಸಹಸ್ರಕವಚನನ್ನು ವಧಿಸದೆ ಬಿಡುವುದಿಲ್ಲವೆ ? ಇದು ಮೋಸವಲ್ಲವೆ ” ಎಂದ.

” ಸೂರ್ಯ ನಿನ್ನ ಕಾಳಜಿಯನ್ನು ನಾನು ಬಲ್ಲೆ.. ಆದರೆ ಇದು ಋಣಧರ್ಮ, ಪ್ರತಿಫಲದ ವಿಷಯ.. ಜನ್ಮಾಂತರವಾಗಲಿ, ಯುಗಾಂತರವಾಗಲಿ ಅನುಭವಿಸದೆ ವಿಧಿಯಿಲ್ಲ..”

ಅದನ್ನು ಕೇಳುತ್ತಿದ್ದಂತೆ ಮ್ಲಾನವದನನಾಗಿ ತಲೆ ತಗ್ಗಿಸಿಕೊಂಡು ಕೂತ ಸೂರ್ಯ.. ಅವನ್ನನ್ನು ಸಮಾಧಾನಿಸುವಂತೆ ನುಡಿದ ಬ್ರಹ್ಮದೇವ..

” ಸೂರ್ಯ ನನಗೆ ನಿನ್ನ ಯೋಜನೆಯೆ ಸಮಯೋಚಿತವೆನಿಸುತ್ತಿದೆ.. ನೀನು ಅದನ್ನೆ ಕಾರ್ಯಗತಗೊಳಿಸು.. ಇನ್ನು ಸಹಸ್ರಕವಚ ಸಾತ್ವಿಕನಾಗುವಲ್ಲಿ ಸಫಲನಾದರೆ ಅವನ ದಾನವ ವ್ಯಕ್ತಿತ್ವವನ್ನು ಪ್ರತ್ಞೇಕಿಸಿ ಅವನನ್ನು ಹೇಗೆ ಸದ್ಗುಣವಂತನ ಸ್ವರೂಪದಲ್ಲಿ ಪ್ರಕ್ಷೇಪಿಸಬಹುದೆಂದು ನಂತರ ಆಲೋಚಿಸೋಣ… ಒಟ್ಟಾರೆ ಎಲ್ಲರಿಗು ಸಲ್ಲುವ ಉಪಾಯ ಹುಡುಕೋಣ ”

ತಲೆಯಾಡಿಸಿದ ಸೂರ್ಯ ಆಗಲೆಂದು ಸಮ್ಮತಿ ಸೂಚಿಸಿದ.

ಅದುವರೆವಿಗೂ ಅವರಿಬ್ಬರ ಮಾತನ್ನು ಆಲಿಸುತ್ತಿದ್ದ ಇಂದ್ರ, ” ಇದೆಲ್ಲ ಆಗಿದ್ದು ನನ್ನಿಂದಲೆ.. ನಾನು ನರನಿಗೆ ಮಾಡಿದ ತೊಂದರೆಗೆ ಬದಲಾಗಿ ಅವನಿಗೇನಾದರೂ ರೀತಿಯಲ್ಲಿ ಸಹಾಯವಾಗುವ ಹಾಗೆ ಮಾಡಬೇಕು – ಬಹುಶಃ ಕೊನೆಯ ವಧೆಯ ಅವತಾರವೆತ್ತಿದಾಗ ನರನ ಕಾರ್ಯ ಪೂರ್ಣಗೊಳ್ಳುವಂತೆ ನಾನು ಸಹಕರಿಸುತ್ತೇನೆ.. ಅದೇ ಹೊತ್ತಿನಲ್ಲಿ ಸಹಸ್ರಕವಚನ ಕೀರ್ತಿ ಪ್ರತಿಷ್ಠೆಗೂ ಭಂಗ ಬರದ ಹಾಗೆ ನೋಡಿಕೊಳ್ಳುವ ಯತ್ನಮಾಡುತ್ತೇನೆ ” ಎಂದ..

ಮೂವರೂ ಮಾತು ಮುಗಿಸಿ ಮೇಲೆದ್ದಾಗ ಏನೊ ಒಂದು ತರದ ಸಮಾಧಾನದ ಭಾವ ನೆಲೆಸಿತ್ತು ಆ ಮೂವ್ವರಲ್ಲು..

ಆ ಮಹತ್ವದ ಸಭೆಯಲ್ಲಿ ಸೂರ್ಯಪುತ್ರನೆಂಬ ಹಣೆಪಟ್ಟಿಯಲ್ಲಿ ಕವಚಕುಂಡಲಧಾರಿಯಾಗಿ ತನ್ನ ಕಡೆಯ ಕವಚದೊಂದಿಗೆ ಕರ್ಣನೆಂಬ ಹೆಸರಿನಲ್ಲಿ ಜನಿಸಲು ಮೂಲ ಬೀಜಾಂಕುರವಾಯ್ತೆಂದು ಆ ಹೊತ್ತಿನಲ್ಲಿ ಅವರಿಗು ಅರಿವಿರಲಿಲ್ಲ…

ಅದೇ ತೆರದಲ್ಲಿ ನರನಾರಾಯಣರ ಅರ್ಜುನ ಕೃಷ್ಣಾವತಾರದ ರೂಪಧಾರಣೆಗು ಅದೇ ಮೂಲ ಕಾರಣವಾಯ್ತೆಂಬ ಸ್ಪಷ್ಟನೆ ಸಹ..

ಆದರೆ ಬ್ರಹ್ಮದೇವ ಮಾತ್ರ ಇನ್ನು ಚಡಪಡಿಸುತ್ತಲೆ ಇದ್ದ – ಊರ್ವಶಿಯ ಜನ್ಮರಹಸ್ಯದ ಅದ್ಭುತಾಮೋಘ ವೈಜ್ಞಾನಿಕ ಹಿನ್ನಲೆಯನ್ನು ಅರಿಯಲಾಗದೆ. ಅವನಾಗಲೆ ನಿಶ್ಚಯಿಸಿಯಾಗಿತ್ತು – ಆದಷ್ಟು ಬೇಗನೆ ನರನಾರಾಯಣರನ್ನು ಭೇಟಿ ಮಾಡಿ ಅದರ ರಹಸ್ಯವನ್ನು ಕೇಳಬೇಕೆಂದು..

ಆದರೆ ಅದಕ್ಕೆ ಈ ಬಾರಿಯ ಕದನ ಮುಗಿದು ನಾರಾಯಣ ವಾಪಸಾಗುವ ಮತ್ತು ನರ ಮುಂದಿನ ಕದನಕ್ಕೆ ಹೋಗುವ ಸಂಧಿ ಕಾಲದವರೆಗೆ ಕಾಯದೆ ವಿಧಿಯಿರಲಿಲ್ಲ. ಆಗ ಮಾತ್ರವೆ ಅವರಿಬ್ಬರನ್ನು ಒಟ್ಟಾಗಿ ಕಾಣಲು ಸಾಧ್ಯವಿದ್ದುದ್ದು..

ಅಂದರೆ ಇನ್ನು ನೂರಾರು ಮಾನವ ವರ್ಷಗಳವರೆಗೆ ಕಾಯದೆ ವಿಧಿಯಿಲ್ಲ – ತನ್ನ ಕುತೂಹಲವನ್ನು ತಣಿಸಲು..

ಅಲ್ಲಿಯವರೆಗು ತನ್ನ ಪ್ರಯೋಗಗಳನ್ನಂತು ಮುಂದುವರೆಸಿರಬಹುದು ತನ್ನ ಪ್ರಯೋಗಾಲಯದಲ್ಲಿ.. ಹೇಗೂ ಊರ್ವಶಿಯೆ ಎದುರಿರುವಳಲ್ಲ? ಅವಳನ್ನೆ ಬಳಸಿಕೊಂಡು ಅವಳ ಸೃಷ್ಟಿ ಹೇಗಾಯ್ತೆನ್ನುವುದರ ಮೂಲವನ್ನು ಹಿಮ್ಮುಖ ಪ್ರಯೋಗ ತಂತ್ರದ ಮೂಲಕ ಕಂಡು ಹಿಡಿಯಲು ಯತ್ನಿಸಬೇಕು..

ಆ ಆಲೋಚನೆಯಲ್ಲೆ ಆಯಾಸದಿಂದ ಆಸನಕ್ಕೆ ತಲೆಯೊರಗಿಸಿ ವಿಶ್ರಮಿಸುವ ಹವಣಿಕೆಯಲ್ಲಿ ಕಣ್ಮುಚ್ಚಿ ಕುಳಿತ ಬ್ರಹ್ಮದೇವ..

******************

ಅಧ್ಯಾಯ – 07

ಬ್ರಹ್ಮದೇವನ ಅಣತಿಯಂತೆ ದೇವರಾಜ ಊರ್ವಶಿಗೊಂದು ದೈನಂದಿನ ವೇಳಾಪಟ್ಟಿ ಹಾಕಿಕೊಟ್ಟು ಬಿಟ್ಟಿದ್ದ. ಅಮರಾಮತಿಯ ಸಭಾಕಲಾಪಗಳಿರಲಿ ಬಿಡಲಿ ಅವಳು ಮಾತ್ರ ಪ್ರತಿದಿನ ಬೆಳಗಿನ ನಿಯಮಿತ ವೇಳೆಯಲ್ಲಿ ಬ್ರಹ್ಮದೇವನ ಪ್ರಯೋಗಾಲಯದಲ್ಲಿ ಅವಳು ಹಾಜರಿರಬೇಕೆಂದು.

ಇರಬೇಕೇನು ಬಂತು ? ಅವಳು ಹೊರಡಬೇಕಿದ್ದ ಹೊತ್ತಿಗೆ ಸರಿಯಾಗಿ ಅಲ್ಲೊಂದು ಮೇನೆ ಕಾದಿರುತ್ತಿತ್ತು ಅವಳ ಸಲುವಾಗಿ. ಉದ್ದಕ್ಕು ರಾಜೋಪಚಾರ ಮಾಡಿಸಿಕೊಂಡೆ ಸಾಗುತ್ತಿದ್ದ ಅವಳ ಹಾದಿಯುದ್ದಕ್ಕು ಅವಳು ‘ಹೂಂ’ಗುಟ್ಟಿದರು ಸಾಕು ಅವಳಣತಿಗೆ ಕಾಯುವ ಸೇವಕರು ಹಾಜರು…

ಪ್ರಯೋಗಾಲಯ ತಾಣ ತಲುಪಿದ ಮೇಲು ಅಷ್ಟೆ – ಮಹಾರಾಣಿಯ ರೀತಿಯ ವೈಭೋಗದ ಸತ್ಕಾರ. ಎಲ್ಲಕ್ಕು ಮೀರಿದ ವೈಶಿಷ್ಠ್ಯವೆಂದರೆ ಸ್ವತಃ ಬ್ರಹ್ಮದೇವನೆ ಅವಳ ಜತೆಗಿರುತ್ತಿದ್ದುದು…

ಕೈ ಕೆಳಗಿನವರಾರ ಅಧೀನಕ್ಕು ಬಿಡದೆ ಸ್ವತಃ ತಾನೇ ಗಮನಿಸುತ್ತಿದ್ದಾನೆಂದ ಮೇಲೆ ಅದು ತುಂಬಾ ಮಹತ್ವದ ವಿಚಾರವೆ ಇರಬೇಕೆಂದು ಅಲ್ಲಿದ್ದ ಮಿಕ್ಕವರು ಅಷ್ಟೆ ಗೌರವ, ಭೀತಿಯಿಂದ ನೋಡಿಕೊಳ್ಳುತ್ತಿದ್ದರು ಉಪಚಾರದ ವಿಷಯದಲ್ಲಿ ಅವಳಿಗೇನು ಕುಂದು ಕೊರತೆಯಾಗದಂತೆ…

ಬ್ರಹ್ಮದೇವನ ಅಷ್ಟೊಂದು ಕಾಳಜಿಗೆ ಕಾರಣವಿರದಿರಲಿಲ್ಲ. ಅವಳನ್ನು ಹತ್ತಿರದಿಂದ ಅಭ್ಯಸಿಸಿ ನೋಡುವುದರಿಂದಾಗಿ ಅವಳ ಆ ಅದ್ಭುತ ಸೌಂದರ್ಯದ ಮೂಲಸ್ವರೂಪದ ರಚನೆಯನ್ನು ಅರಿಯುವ ಅದಮ್ಯ ಬಯಕೆ…

ಆ ರೀತಿ ಮಾಡುವುದರಿಂದ ತನ್ನ ಈಗಿನ ಸೃಷ್ಟಿಯ ಮೂಲಸರಕಿಗು, ಊರ್ವಶಿಯಲ್ಲಿರುವ ವಸ್ತು ಅಸ್ತಿತ್ವಕ್ಕು ಇರುವ ವ್ಯತ್ಯಾಸ ಅರಿಯುವ ಸಾಧ್ಯತೆ ಹೆಚ್ಚು. ಪ್ರಸ್ತುತ ಅರಿವಿನ ಜತೆ ಈ ಅರಿವನ್ನು ತಾಳೆಯಾಗಿಸಿ ಹೊಂದಾಣಿಸಿದರೆ ತನ್ನ ಸೃಷ್ಟಿಯಲ್ಲಿರುವ ಇತಿಮಿತಿಯನ್ನು ಅಧಿಗಮಿಸಲು ಬೇಕಾದ ಸುಳಿವು ಸಿಕ್ಕಿಬಿಡುತ್ತದೆ.

ಆ ಸುಳಿವಿನ ಆಧಾರದಲ್ಲಿ ಮುನ್ನಡೆದರೆ ತಾನೂ ಕೂಡ ಊರ್ವಶಿಯಂತಹದ್ದೆ ಉತ್ಕೃಷ್ಟ ಮಟ್ಟದ ತಳಿ ಸೃಷ್ಟಿಸಲು ಸಾಧ್ಯವಾಗಬಹುದು…

ಅದು ಸಾಧ್ಯವಾದರೆ, ಅದನ್ನು ಮತ್ತೆ ಪರಿಷ್ಕರಿಸಿ ಸಹಜ ಸೃಷ್ಟಿಯ ಮಾಮೂಲಿ ಪ್ರಕ್ರಿಯೆಯನ್ನು ಅದೇ ಮಟ್ಟಕ್ಕೆ ಏರಿಸಲು ಯತ್ನಿಸಬಹುದು…

ಆದರಿದು ಸಾಧ್ಯವಾಗಲಿಕ್ಕೆ ಅದೆಷ್ಟು ದಿನಗಳು ಹಿಡಿಯುವುದೊ ಹೇಳಲಾಗದು. ಅದೆಷ್ಟು ಬಾರಿ ಪ್ರಯತ್ನಿಸಿ ನೋಡಬೇಕೊ ಎಂದು ಹೇಳಬರುವುದಿಲ್ಲ.. ಅದೆಷ್ಟು ತಳಿ ವಂಶಾವಳಿಗಳ ರೂಪಾಂತರವಾಗಬೇಕೊ, ಇನ್ನೆಷ್ಟು ಪೀಳಿಗೆಗಳ ಮೂಲಕ ಸಾಗಿ ಆ ಪರಿಪಕ್ವ ಹಂತ ತಲುಪಬೇಕೊ ಎನ್ನುವುದು ಅನಿಶ್ಚಿತ ವಿಷಯವೆ….

ಆ ಕಾರಣದಿಂದಾಗಿಯೆ ಊರ್ವಶಿಯನ್ನು ನಿತ್ಯವೂ ಬಂದಿರಲು ಹೇಳಿದ್ದು… ಎಂತಾದರೂ ಕೊನೆಯಲ್ಲಿ ಊರ್ವಶಿಯನ್ನೆ ಮೀರಿಸುವಂತಹ ಅಥವಾ ಕನಿಷ್ಠ ಅವಳ ಮಟ್ಟಕ್ಕಾದರು ಸರಿಗಟ್ಟುವಂತವ ಸೃಷ್ಟಿ ಸಾಧ್ಯವಾದರೆ ತನ್ನ ಗುರಿ ಮುಟ್ಟಿದ ಹಾಗೆಯೆ ಲೆಕ್ಕ..

ಹೀಗೆಲ್ಲ ಲೆಕ್ಕಚಾರ ಹಾಕಿಯೆ ತನ್ನ ಪ್ರಯೋಗಕ್ಕೆ ಚಾಲನೆ ಕೊಟ್ಟಿದ್ದ ಬ್ರಹ್ಮದೇವ…!

(ಇನ್ನೂ ಇದೆ)

(Link to next episode 18: https://nageshamysore.wordpress.com/2016/03/09/00569-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a7%e0%b3%ae/)

00567. ದ್ವಂದ್ವಮುಖಿಯೊಬ್ಬನ ಕಥೆ..


00567. ದ್ವಂದ್ವಮುಖಿಯೊಬ್ಬನ ಕಥೆ..
________________________

  
ಅವನಿರುವ ಎತ್ತರದ ಜಾಗ
ಉನ್ನತ ಸ್ಥಾನದ ಜವಾಬ್ದಾರಿ
ನಿಭಾಯಿಸುವುದೆಲ್ಲಾ ತರತರ ಸಂಕೀರ್ಣ
ಕ್ಲಿಷ್ಟ ಸಮಸ್ಯೆಗಳೆಲ್ಲವೂ ನೀರು ಕುಡಿದಂತೆ ಸಲೀಸು ..

ನೋಡುತ್ತಾರವನತ್ತಾ ದಿಟ್ಟಿಸಿ ನಿತ್ಯ
ತಾಕಲಾಟ ಗೊಂದಲ ಕೆಲಸದ ಪೂರ
ಛಾತಿಯವನದಪರೂಪ ನಿವಾರಿಸೋ ಚಾಕಚಕ್ಯತೆ
ಮೀರಿದ ಬುದ್ಧಿ ಚತುರಮತಿ, ಇರದೆಯು ಏನೂ ಸಿದ್ದತೆ..

ಅಂತೆ ಎಲ್ಲರಿಗೂ ಗೌರವ ಜ್ಞಾನಿಯ ಸ್ಥಾನ ಮರ್ಯಾದೆ
ಸ್ಥಾನದ ಜತೆಜತೆಗೆ ಅಭಿಮಾನದ ಬೆರಗು
ದಿಟ್ಟಿಸಿದಳವಳು ಅಚ್ಚರಿ ಜಿಂಕೆಯ ಕಣ್ಣಿನ ಬಾಲೆ
ಅಟ್ಟುತ ಬಂತು ನಂಟು ಬಂಧಿಸಿ ಸಂಬಂಧ ಸುಸೂತ್ರ..

ಅವನೋ ಪರಿಣಿತ ಬರಿ, ನಂಟು ನಿಭಾವಣೆಯಲಿ ಹಸುಕಂದ
ಜೀವನ ಪೂರಾ ಸಿಗದ ಅನುಭೂತಿಯಲಿ ಮಿಂದನೆ ಪೂರಾ
ಹಿಡಿದನೆ ಗಟ್ಟಿ ಬಂದಂತೆ ಅಪ್ಪುತ ಬಿಗಿಯಾಗಿ
ಬಿಟ್ಟರೆಲ್ಲಿ ಜಾರೀತೋ? ಹೆದರಿಕೆಯೇ ಕೆಡಿಸುವ ಸಹದ್ಯೋಗಿ..!

ತಂದಿಟ್ಟ ಹತ್ತಿರ ಬಿಗಿಯುವ ಕುಣಿಕೆ ಅರಿವಿಲ್ಲದ ಕುರಿ
ವಿಹ್ವಲವಾಗಿಸಿ ಸರಿಸಿತೆ ದೂರಕೆ ಅನರ್ಥ ಮಾತಿನ ಪರಿಪರಿ
ಪಕ್ವ ಪ್ರಬುಧ್ಧನೆಂದೆಣಿಸಿದಳು ಮರೆತು, ನಂಟ ಭಾವದಲವ ಹಸುಗೂಸು
ಸರಿದಷ್ಟೂ ದೂರ ಹಿರಿದಾಯ್ತೆ, ಕಂದಕ ಬಿರುಕ ಮುಚ್ಚದೆ ಮೊದಲ ತೊದಲಲ್ಲೆ..

ಅರಿಯಲಿಲ್ಲ ಅವಳು ಬೇಕಿತ್ತು ಹಠಮಾರಿ ಕಂದನ ನಿಭಾವಣೆ ನೀತಿ
ಪೋಷಿಸಿ ಲಾಲಿಸಿ ಲಲ್ಲೆ ಹೊಡೆದಿದ್ದರೆ ವಾಸಿಯಾಗಿ ಬೇನೆ
ಅರಿವಾದರೂ ಅವನಿಗೆ, ಉಸಿರುಗಟ್ಟಿಸದಂತಿರಬೇಕು ಬಂಧ
ನಿಭಾಯಿಸಲರಿಯದ ವಿಪರ್ಯಾಸ – ವೃತ್ತಿಯಲೆತ್ತರ ನಂಟಲಿ ಮುಗ್ದ ಕ್ಷುದ್ರ ಸ್ತರ…

(picture source wikipedia: https://en.m.wikipedia.org/wiki/File:Dissociative_identity_disorder.jpg)