00576.ಅಹಲ್ಯಾ ಸಂಹಿತೆ – ೨೧ (ಬ್ರಹ್ಮ ಊರ್ವಶಿ ದೇವೇಂದ್ರ ಚರ್ಚೆ)


00576.ಅಹಲ್ಯಾ ಸಂಹಿತೆ – ೨೧ (ಬ್ರಹ್ಮ ಊರ್ವಶಿ ದೇವೇಂದ್ರ ಚರ್ಚೆ)
_____________________________________

(Link to previous episode 20: https://nageshamysore.wordpress.com/2016/03/09/00571-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%a6/)

ಅವನ ಸಲಹೆಯೇನಿರಬಹುದೆಂಬ ಕುತೂಹಲ ಮಾತಾಗಿ ಮೂಡುವ ಹೊತ್ತಿಗೆ ‘ ಹೇಗು ತಾನೆ ಜತೆಯಿರುವೆನಲ್ಲ? ಸಮಯ ಬಂದಾಗ ಅವನೆ ಸೂಕ್ತವಾಗಿ ವಿವರಿಸದಿರುವನೆ?’ ಎಂದುಕೊಂಡು ತನ್ನ ತವಕವನ್ನು ಹತೋಟಿಯಲಿಟ್ಟುಕೊಂಡು ಸುತ್ತಲ್ಲಿನ ವೇಗದಲ್ಲಿ ಸುಳಿದು ಮರೆಯಾಗುತ್ತಿದ್ದ ವನರಾಜಿಯನ್ನೆ ದಿಟ್ಟಿಸುತ್ತ ಕುಳಿತಳು, ಊರ್ವಶಿ…

ಅವಳ ಇನಿತೂ ಕುಂದಿಲ್ಲದ ಅದ್ಭುತ ಕೆತ್ತನೆಯಂತಹ ರೂಪವನ್ನೆ ನೋಡುತ್ತ, ಅದರ ಸೊಬಗನ್ನು ಆಸ್ವಾದಿಸುತ್ತ ಬರುತ್ತಿದ್ದ ಮಹೇಂದ್ರ, ‘ಅಬ್ಬಾ… ಎಂತಹ ಅದ್ಭುತ ಸೃಷ್ಟಿ!’ ಎಂದು ಮನದಲ್ಲೆ ಅಂದುಕೊಳ್ಳುತ್ತ ಅದು ಹೇಗೆ ಎಲ್ಲವು ಇಷ್ಟು ಪರಿಪಕ್ವವಾಗಿ, ಸೂಕ್ತಪ್ರಮಾಣಬದ್ದವಾಗಿ, ಯಾವ ಅಂಗದಲ್ಲಿಯೂ ಇನಿತು ದೋಷವಿರದಂತೆ ಸಕಲ ಪರಿಪೂರ್ಣತೆಯೊಡನೆ ಸೃಜಿಸಲು ಸಾಧ್ಯವಾಯಿತೆಂದು ಬೆರಗುಗೊಳ್ಳತೊಡಗಿದ…

ಅವಳ ಎತ್ತರವಾಗಲಿ, ಮುಖ ಚಹರೆಯಾಗಲಿ, ಕಣ್ಣು, ಮೂಗು, ಕಿವಿ, ಬಾಯಿಗಳಾಗಲಿ, ಹಗಲನ್ನೆ ದಿಗಿಲಿಸುವಂತಹ ಹೊನ್ನಿನ ಕಾಂತಿಯ ಮೈ ಬಣ್ಣವಾಗಲಿ, ನೀಳವಾದ ಚಿಗುರು ಕೈ ಬೆರಳುಗಳಾಗಲಿ, ಕೆತ್ತಿದ ತಿದಿಯೊತ್ತಿದಂತಿದ್ದ ಪಾದವಾಗಲಿ, ಅವಳ ಸೊಬಗಿಗೆ ಕಲಶವಿಟ್ಟಂತಿದ್ದ ಅದ್ಭುತ ಕೇಶರಾಶಿಯಾಗಲಿ, ಕಲಾವಿದನ ಚಿತ್ರವೆ ಚಿತ್ತಾರವಾಗಿ ಮೂಡಿಬಂತೇನೊ ಎನ್ನುವಂತೆ ಲಾಲಿತ್ಯವಿದ್ದ ಹಸ್ತವಾಗಲಿ – ಎಲ್ಲವು ಹೇಳಿ ಮಾಡಿಸಿದಂತಹ ಅನುಪಾತ, ಅತಿಶಯ…

ಅವಳು ಸೃಷ್ಟಿಯಾದ ಬಗೆಯನ್ನು ತಾನೆ ಕಣ್ಣಾರೆ ಕಂಡಿರದಿದ್ದರೆ, ಅವಳು ಕ್ಷಣಮಾತ್ರದ ಕೋಪದ ಫಲವಾಗಿ ಸೃಷ್ಟಿಗೊಂಡ ಅಯೋನಿಜ ಕನ್ಯೆಯೆಂದು ಸ್ವತಃ ಅವನೆ ನಂಬುತ್ತಿರಲಿಲ್ಲ.. ಆದರೆ ಈ ಸೃಷ್ಟಿ ಮಾಮೂಲಿನದಲ್ಲ.. ಬ್ರಹ್ಮದೇವನಂತಹ ಪಿತಾಮಹನ ಸೃಷ್ಟಿಯೆ ಇದಕ್ಕೂ ನೂರುಪಾಲು ಕೆಳಮಟ್ಟದಲ್ಲಿರುವ ಸೃಷ್ಟಿಯೆಂದರು ತಪ್ಪಾಗಲಾರದು.. ಅದಕ್ಕೆ ಬ್ರಹ್ಮದೇವನಿಗು ಅವಳ ಮೇಲಿಷ್ಟು ಆಸಕ್ತಿ, ಗಮನ. ಅವನಿಗು ಕುತೂಹಲವಿರಬೇಕು – ಹೇಗೆ ತನ್ನ ಸೃಷ್ಟಿಯನ್ನು ಆ ಮಟ್ಟಕ್ಕೆ ಏರಿಸಿಕೊಳ್ಳಬಹುದೆಂದು… ಅದಕ್ಕೆ ಇರಬೇಕು ಈ ಪ್ರಯೋಗ..

ವಿಚಿತ್ರವೆಂದರೆ, ಅಂತಹ ಅದ್ಬುತವೆ ಕಣ್ಣ ಮುಂದಿದ್ದರು ಯಾಕೊ ಅವಳ ಕುರಿತಾದ ಕಾಮನೆಯ ಭಾವವೆ ಹುಟ್ಟುತ್ತಿಲ್ಲ ಮಹೇಂದ್ರನಿಗೆ…

ಇದು ಸ್ವತಃ ಅವನಿಗೆ ಅಚ್ಚರಿಯ ವಿಷಯ; ನರನೆ ಅವಳನ್ನು ದೇವಲೋಕಕ್ಕೆ ಉಡುಗೊರೆಯಾಗಿ ಕೊಟ್ಟ ಕಾರಣದಿಂದಾಗಿ ಅವಳನ್ನು ಇತರ ಅಪ್ಸರೆಯರಂತೆ ಬಳಸಿಕೊಳ್ಳಲು ಯಾವ ಅಡೆತಡೆಯಾಗಲಿ, ಭೀತಿಯಾಗಲಿ ಇರಲಿಲ್ಲ. ಅಂತೆಯೆ ದೇವರಾಜನಾದ ಅವನು ಬಯಸಿದರೆ ಒಲ್ಲೆನೆನ್ನುವಳೆಂಬ ಅಳುಕು ಇರಲಿಲ್ಲ. ಅವಳ ಮಟ್ಟಿಗೆ ಅದೊಂದು ಸಹಜ ಯಾಂತ್ರಿಕ ಪ್ರಕ್ರಿಯೆಯೆನ್ನುವಂತೆ ಕರೆಯನ್ನು ಮನ್ನಿಸಿ ಬರುವವಳೆ… ಬ್ರಹ್ಮನ ಪರೀಕ್ಷಾ ಪ್ರಯೋಗಕ್ಕು ಒಂದು ಪ್ರಶ್ನೆಯನ್ನು ಕೇಳದೆ ಅವನ ಆಜ್ಞೆಯನ್ನು ಶಿರಸಾವಹಿಸಿದ್ದ ಹೆಣ್ಣವಳು.

ಅಂತಿದ್ದರು ಯಾಕೆ ಅವಳ ಮೇಲೆ ತನಗೆ ಮೋಹವಾಗಲಿ, ಪಡೆಯಬೇಕೆಂಬ ಆಸೆಯಾಗಲಿ ಉಕ್ಕುತ್ತಿಲ್ಲ ? ಅವಳ ಪರಿಪಕ್ವತೆಯೆ ಒಂದು ರೀತಿಯ ಪರಿಶುದ್ಧತೆಯ ಮಾಪಕವಾಗಿ, ತಾನು ಆ ಮಾನಕದಲ್ಲಿ ತೀರ ಕನಿಷ್ಠನೆಂಬ ಕೀಳರಿಮೆಯಿಂದ ಹಾಗಾಗುತ್ತಿದೆಯೆ ? ಇರಲಾರದು… ಕೀಳರಿಮೆಯುಂಟಾಗುವುದು ಯಾರಾದರು ಸ್ಪರ್ಧಿಗಳಿದ್ದಾಗ.. ಈ ವಿಷಯದಲ್ಲಿ ಇಡಿ ಸುರಲೋಕದಲ್ಲಿ ತಾನೆ ಸುರ ಸುಂದರಾಂಗ.. ತನ್ನನ್ನು ಮೀರಿಸಿದವರು ಏಳು ಲೋಕದಲ್ಲಿ ಯಾರೂ ಇಲ್ಲ.. ಆದರು ತನಗೇಕೆ ಊರ್ವಶಿಯ ಮೇಲೊಂದು ತರದ ನಿರಾಸಕ್ತಿ..?

ಹೀಗೆ ಆಲೋಚನೆಯ ಚಕ್ರದಲ್ಲಿ ಸಿಲುಕಿ ತಲ್ಲೀನತೆಯಿಂದ ತನ್ನ ಚಿಂತನೆಯಲ್ಲಿ ಮುಳುಗಿದ್ದ ದೇವೇಂದ್ರನಿಗೆ ತಟ್ಟನೆ ಅದಕ್ಕಿರಬಹುದಾದ ಕಾರಣವೊಂದು ಹೊಳೆದಿತ್ತು.. ಅದು …ಊರ್ವಶಿಯ ಬುದ್ಧಿಮತ್ತೆ..!

ಹೌದು.. ಬುದ್ದಿಮತ್ತೆಯ ವಿಷಯದಲ್ಲಿ ಇತರ ಹೆಣ್ಣುಗಳಂತಲ್ಲ ಊರ್ವಶೀ.. !

ಅವಳಂತಹ ಪರಿಪಕ್ವತೆಯ, ಪ್ರಬುದ್ಧತೆಯ, ಚಾಣಾಕ್ಷತೆಯ, ಜ್ಞಾನ ಮತ್ತು ತಿಳುವಳಿಕೆಯ ಹೆಣ್ಣನ್ನು ಇದುವರೆವಿಗು ತಾನು ಕಂಡಿಲ್ಲ.. ರೂಪ ಲಾವಣ್ಯಗಳ ಜತೆ ಬುದ್ದಿಮತ್ತೆಯಂತಹ ಮಿಕ್ಕೆಲ್ಲ ಗುಣಲಕ್ಷಣಗಳು ಅನುರೂಪದ ಪಾಕದಲ್ಲಿ ಹದಗೊಂಡ ಅಪರೂಪದ ಸೃಷ್ಟಿಯವಳು.. ಸಾಮಾನ್ಯ ಹೆಣ್ಣಿನಂತೆ ತೋರಿಕೆಗೆ ಹೊಗಳಿದರು ಮರುಳಾಗಿಬಿಡುವ ಸಾಮಾನ್ಯ ಹೆಣ್ಣುಗುಣ ಅವಳದಲ್ಲ.. ಆ ಹುನ್ನಾರಕ್ಕೆ ಮೊದಲೆ ಆ ಹಿನ್ನಲೆಯೇನೆಂದು ಅರಿತು ನೇರ ಮಾತಿಗೆ ಬರುವ ಛಾತಿಯ ಮಹಾನ್ ಚತುರಮತಿಯವಳು..

ಅದೇ.. ಆ ಕಾರಣವೆ ಇರಬೇಕು.. ತನ್ನನ್ನು ತಡೆದಿರುವುದು.. ತನಗಿಂತ ಚಾಣಾಕ್ಷಳಿರುವವಳಲ್ಲಿ ಸಿಲುಕಿಕೊಳ್ಳಲು ದೇವರಾಜನಂತಹ ಸ್ವಯಂ ಹಮ್ಮಿನ, ಅಹಂಭಾವದ ಪುರುಷನಿಗೆ ಅದೆಂತು ಸಾಧ್ಯ..? ಅವನಿಗೇನಿದ್ದರು ಶರಣಾಗಿ ದಾಸಿಯಾಗಿ ಸಂತೃಪ್ತಿಯಿಂದ ಪಾದಕ್ಕೊರಗುವ ಹೆಣ್ಣು ಬೇಕು..

ಅಲ್ಲದೆ, ಅವನಿಗೊಂದು ಅಳುಕು ಇದೆ – ಹೋಲಿಕೆಯ ಮಟ್ಟಿಗೆ ಹೇಳುವುದಾದರೆ, ಇಷ್ಟು ಪರಿಪೂರ್ಣ ಸೃಷ್ಟಿಯವಳನ್ನು ತನ್ನಂತಹ ಅಪಕ್ವಸೃಷ್ಟಿಯ ಸಾಮರ್ಥ್ಯದಿಂದ ಗೆಲ್ಲಲು ಸಾಧ್ಯವಿದೆಯೆ ಎಂಬ ಅನುಮಾನ.. ಅವಳ ಮೇಲೆ ಒಡೆತನ ಸಾಧಿಸಬಹುದಾದ ಒಂದೆ ಅಸ್ತ್ರವೆಂದರೆ ಅವಳ ಮನದನ್ನನಾಗಿ ಅವಳ ಆರಾಧಾನ ಭಾವಕ್ಕೆ ಪಾತ್ರನಾಗಿಬಿಡಬಹುದಾದ ಸಾಧ್ಯತೆ…

ಆದರೆ ಹುಟ್ಟಿನಿಂದಲೆ ಇಷ್ಟೊಂದು ಪರಿಪೂರ್ಣಳಾದವಳು, ಉನ್ನತ ಶೃತಿಯ ಶೃಂಗಸ್ತರದವಳಾಗಿದ್ದರೆ ಏನು ಮಾಡುವುದು ? ಅವಳನ್ನು ತೃಪ್ತಿಪಡಿಸಿ ಜಯಿಸಲಾಗದ ಭಾವನೆಯೆ ಕೀಳರಿಮೆಯಾಗಿ ಕಾಡಿಬಿಡುವುದಿಲ್ಲವೆ..? ಯಾವುದಕ್ಕು ಅವಳಿಂದ ದೂರವಿರುವುದೇ ಕ್ಷೇಮ.. ಅವಳನ್ನು ಜಯಿಸಲಾಗದ ಕೀಳರಿಮೆ ತನ್ನನ್ನು ಕುಗ್ಗಿಸಿ ಕಂಗೆಡಿಸುವ ಹಾಲಹಲವಾಗಬಾರದಲ್ಲಾ.. ? ಅದೇನೆ ಅದ್ಭುತ ರೂಪಿದ್ದರು, ಕಣ್ಣಿಂದಷ್ಟೆ ಆಸ್ವಾದಿಸಿ ಆನಂದಿಸುವುದು ಸುರಕ್ಷಿತ..ಸದ್ಯಕ್ಕೆ ಬ್ರಹ್ಮಸೃಷ್ಟಿಯ ಅದ್ಭುತ ರೂಪಸಿಯರೆ ಬೇಕಾದಷ್ಟಿದ್ದಾರೆ ತನ್ನ ಬೆರಳ ಸಂಜ್ಞೆಗೆ ಕುಣಿಯಲು ಸಿದ್ದರಾಗಿ…

ಆ ಹೊತ್ತಿನಲ್ಲಿ ಸ್ವತಃ ದೇವರಾಜನಿಗು ಇನ್ನು ಅರಿವಾಗದಿದ್ದ ಮುಖ್ಯ ವಿಷಯವೆಂದರೆ – ಅವನ ಮನದಲ್ಲಿ ಮೂಡುತ್ತಿದ್ದ ಭಾವನೆ, ಆಲೋಚನೆಗಳು ಅವನ ಪಕ್ಕದಲ್ಲಿದ್ದ ಊರ್ವಶಿಯ ಮನದಲ್ಲಿ ಅವನರಿವಿಲ್ಲದಂತೆಯೆ ತಂತಾನೆ, ಮೂಡಿದ ಅದೇ ಹೊತ್ತಿನಲ್ಲಿ ಯಥಾವತ್ತಾಗಿ ಅನುರಣಿತವಾಗುತ್ತವೆ ಎಂದು…!

ನರನ ಸೃಷ್ಟಿಯ ಆ ಅದ್ಭುತದ ಮತ್ತೊಂದು ಮಹತ್ತರ ವೈಶಿಷ್ಠ್ಯವದು – ಎಲ್ಲರು ಭಾಷೆಯ ಮೂಲಕ ಸಂವಹಿಸುವಂತೆ, ಊರ್ವಶಿ ಮಾನಸಿಕವಾಗಿಯೆ ಸಂವಹಿಸಬಲ್ಲ ಸಾಮರ್ಥ್ಯವುಳ್ಳವಳು. ಹೀಗಾಗಿ ಅವಳ ಕುರಿತು ಯಾರು ಏನೆ ಚಿಂತನೆ ನಡೆಸಿದರು ಅದು ಅವಳ ಮನಸಿಗೆ ತಂತಾನೆ ನಿವೇದನೆಯಾಗಿಬಿಡುತ್ತದೆ – ಅವರು ಬಾಯಿ ಬಿಟ್ಟು ಹೇಳುವ ಅಗತ್ಯವೆ ಇರದಂತೆ… !

ದೇವರಾಜನ ಮನದಲ್ಲಾಗುತ್ತಿದ್ದ ತಾಕಲಾಟಗಳ ಸಾರವನ್ನು ಅರಿಯುತ್ತಿದ್ದ ಹಾಗೆಯೆ ಅವಳ ಮೊಗದಲ್ಲಿ ಕಂಡೂ ಕಾಣದ ಹೆಮ್ಮೆಯ ಮುಗುಳ್ನಗು. ಸದ್ಯಕ್ಕೆ ಅಷ್ಟಾದರು ಭೀತಿಯಿಂದಿರುವನಲ್ಲ, ಅಷ್ಟು ಸಾಕು.. ತನ್ನನ್ನು ಗೌರವಾದರಗಳಿಂದ ನಡೆಸಿಕೊಳ್ಳಲು ಬೇಕಾದ ಮೂಲಸರಕನ್ನು ಅದೇ ಒದಗಿಸುತ್ತದೆ… ತನ್ನ ಆ ಮನಭಾಷೆಯ ಸಾಮರ್ಥ್ಯದಿಂದಲೆ ಅವಳಿಗೆ ಬ್ರಹ್ಮದೇವನ ಮೇಲೆ ಅಪಾರ ಗೌರವ – ಇದುವರೆವಿಗು ಅವಳನ್ನೊಂದು ಅದ್ಭುತ ಸೃಷ್ಟಿಯತಿಶಯ ಎಂಬ ದೃಷ್ಟಿಯನ್ನು ಬಿಟ್ಟರೆ ಮತ್ತಾವ ಭಾವವಿಕಾರವೂ ಅವಳಿಗೆ ಕಂಡಿಲ್ಲ. ಅಷ್ಟಿಲ್ಲದೆ ಅವನನ್ನು ಪಿತಾಮಹ ಎನ್ನುವರೆ..?

ತಟ್ಟನೆ ನಿಂತ ರಥದ ಸದ್ದಿನಿಂದ ವಾಸ್ತವಕ್ಕೆ ಬಂದರು ಊರ್ವಶಿ, ದೇವೇಂದ್ರರಿಬ್ಬರು.. ಬ್ರಹ್ಮದೇವನ ಪ್ರಯೋಗಾಲಯದ ಹೆಬ್ಬಾಗಿಲನ್ನು ಪ್ರವೇಸಿ ಒಳಬಂದಿದ್ದೂ ಅರಿವಾಗಿರಲಿಲ್ಲ ಇಬ್ಬರಿಗು. ರಥದಿಂದಿಳಿಯುತ್ತಿದ್ದ ಹಾಗೆ ಹಿಂದಿನಿಂದ ಮತ್ತೊಂದು ರಥವೂ ಬಂದು ನಿಂತಿತ್ತು – ಬ್ರಹ್ಮದೇವನನ್ನು ಅದೇ ಭವನದ ಮುಂದೆ ಇಳಿಸುತ್ತ …

*************************

ತನ್ನ ಪ್ರಯೋಗಶಾಲೆಯ ಒಳಕೊಠಡಿಯತ್ತ ನಡೆದ ಬ್ರಹ್ಮದೇವನನ್ನೆ ಹಿಂಬಾಲಿಸಿಕೊಂಡು ಬಂದ ದೇವರಾಜ. ಊರ್ವಶಿಯನ್ನು ಕಣ್ಸನ್ನೆಯಲ್ಲೆ ಅಲ್ಲಿನ ಆಸನಗಳ ಮೇಲೆ ಕೂರುವಂತೆ ಅಣತಿಯಿತ್ತ ಪಿತಾಮಹ ಬ್ರಹ್ಮ. ಅವನ ಮುಖ ಭಾವ ನೋಡಿದರೆ ದೇವರಾಜನ ಬರುವಿಕೆಯ ಬಗ್ಗೆ ಅವನಿಗೀಗಾಗಲೆ ಮುನ್ಸೂಚನೆ ಇದ್ದಂತಿತ್ತು.. ಬಹುಶಃ ಅವನೊಡನೆ ಮಾತಾಡಿ ಒಪ್ಪಿಗೆ ಪಡೆದೆ ಬಂದಿರಬೇಕು…

” ಪಿತಾಮಹ.. ನೀನು ಅದಾವ ಮಹಾನ್ ಪ್ರಯೋಗದಲ್ಲಿ ನಿನ್ನನ್ನು ತೊಡಗಿಸಿಕೊಂಡಿರುವೆಯೊ ನಾನರಿಯೆ.. ಆದರೆ ಅದೊಂದು ಮಹತ್ವದ ಘನತೆಯುಳ್ಳದ್ದೆಂದು ಮಾತ್ರ ಊಹಿಸಬಲ್ಲೆ.. ನಿನ್ನ ಅಪರಿಮಿತ ಕಾರ್ಯ ಬಾಹುಳ್ಯದಲ್ಲು ಅದು ಸುಲಲಿತವಾಗಿ, ಸುಗಮವಾಗಿ ನಡೆದಿದೆಯೆಂದು ಭಾವಿಸಬಹುದೆ ?” ದನಿಯಲ್ಲಿ ಆದಷ್ಟು ನಿರ್ಲಿಪ್ತತೆಯನ್ನು ತರಲು ಯತ್ನಿಸುತ್ತ ಅದೇ ಅವಸರದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಳಜಿಯೂ ದನಿಸದ ಹಾಗೆ ಎಚ್ಚರಿಕೆಯಿಂದ ಪದ ಜೋಡಿಸಿ ಮಾತಾಡಿದ್ದ ಮಹೇಂದ್ರ..

ಆ ಮಾತಿಗೆ ಉತ್ತರಿಸುವ ಮೊದಲು ಪಿತಾಮಹ ಬ್ರಹ್ಮದೇವ ಮೆಲುವಾಗಿ ಕೈ ತಟ್ಟಿ ಹೊರಗಿದ್ದವರನ್ನು ಒಳ ಬರುವಂತೆ ಆಜ್ಞಾಪಿಸಿದ. ಪ್ರಯೋಗಾಲಯದ ಸಹಾಯಕರಂತೆ ಸಮವಸ್ತ್ರ ಧರಿಸಿದ್ದ ಇಬ್ಬರು ಪ್ರವೇಶಿಸುತ್ತಿದ್ದಂತೆ ಅವರ ಕೈಲಿದ್ದ ಪ್ರಗತಿ ವರದಿಯ ಫಲಕವೊಂದನ್ನು ಕೈಗೆತ್ತಿಕೊಂಡು ಅವರಿಗೆ ಮತ್ತಷ್ಟು ಸೂಚನೆಗಳನ್ನು ನೀಡಿ ಕಳಿಸಿದವನೆ ಊರ್ವಶಿ ದೇವೇಂದ್ರರತ್ತ ದೃಷ್ಟಿ ಹಾಯಿಸಿದ..

” ಎಲ್ಲಿಯ ಸುಗಮತೆ, ಯಾವ ಸುಲಲಿತತೆ ಇಂದ್ರ ? ನೀನೆ ಬಲ್ಲ ಹಾಗೆ ಪ್ರಸ್ತುತದ ನೂರಾರು ಜಂಜಾಟಗಳ ಮಧ್ಯೆ ಶಾಂತಮನದ ಪರಿಸರದಲ್ಲಿ ನಡೆಯುವ ಕ್ರಿಯೆಗಳಿಗೆ ಅವಕಾಶವಾದರೂ ಎಲ್ಲಿದ್ದೀತು ? ಏನೊ ಬಲವಂತದಿಂದ, ಸಿಕ್ಕಷ್ಟು ಸಮಯದಲ್ಲಿ ಆದಷ್ಟನ್ನಾದರು ಮಾಡೋಣವೆಂದು ಪ್ರಯತ್ನಿಸುತ್ತಿದ್ದೇನಷ್ಟೆ.. ಅದೂ ಊರ್ವಶಿಯ ಸಹಕಾರದಿಂದ ಗಾಲಿ ನಿಲ್ಲದಂತೆ ಉರುಳುತ್ತಿದೆ..”

” ನಾನದನ್ನು ಬಲ್ಲೆ ಪಿತಾಮಹ.. ಈ ಮಹಾಯಜ್ಞ್ನದ ಜಾತಕ, ದಿಕ್ಕು, ದೆಸೆಗಳನ್ನರಿಯದ ನಾನು ಇದರ ಕುರಿತು ಹೆಚ್ಚು ಮಾತಾಡುವುದು ಸಮಂಜಸವಲ್ಲವಾದರು ಲೋಕ ಕಲ್ಯಾಣದ ದೃಷ್ಟಿಯಿಂದ ಈ ಪ್ರಯೋಗ ಅತಿ ಮಹತ್ವದ್ದಿರಬೇಕೆಂದು ನಾನು ಊಹಿಸಬಲ್ಲೆ.. ನನಗಿರುವ ಸೀಮಿತ ಜ್ಞಾನ ಪರಿಧಿ ಮತ್ತು ನಿನ್ನ ಕಾರ್ಯಕ್ಷೇತ್ರದ ಸೀಮಿತ ಅರಿವಿನಿಂದ ಈ ಪ್ರಯೋಗವೂ ತಳಿಶಾಸ್ತ್ರಕ್ಷೇತ್ರಕ್ಕೆ ಸಂಬಂಧಿಸಿದ್ದೆಂದು ಸ್ಥೂಲವಾಗಿ ಊಹಿಸಬಲ್ಲೆ… ಆ ಮಹತ್ವದ ಅರಿವಿನ ಹಿನ್ನಲೆಯಲ್ಲೆ ಒಂದೆರಡು ಮಾತಾಡಲು ಬಯಸಿ ಬಂದೆ ಪಿತಾಮಹ.. ತಾವೂ ತಪ್ಪು ತಿಳಿಯದಿದ್ದರೆ…?”

ತಾನು ಹೇಳಹೊರಟ ವಿಷಯಕ್ಕೆ ಹೇಗೆ ಪೀಠಿಕೆ ಹಾಕುವುದೆಂದು ಚಿಂತಿಸುತ್ತಲೆ ಆರಂಭದ ಚಾಲನೆ ಕೊಟ್ಟ ದೇವರಾಜ.

(ಇನ್ನೂ ಇದೆ)

(Link to the next episode 22 : https://nageshamysore.wordpress.com/2016/03/11/00578-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%a8/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s