00577. “ಯೇಗ್ದಾಗೆಲ್ಲಾ ಐತೆ ” (ಪುಸ್ತಕ ಪರಿಚಯ)


(೧೨ ಮಾರ್ಚ್ , ಈ ಲೇಖನ ನಿಲುಮೆಯಲ್ಲು ಪ್ರಕಟವಾಗಿದೆ : http://nilume.net/2016/03/12)
 
ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೆ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೆ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. ೨೫ ಸಾವಿರಕ್ಕೂ ಅಧಿಕ ಪ್ರತಿಗಳು ಅಚ್ಚಾಗಿದ್ದೇ ಅಲ್ಲದೆ ಇತರ ನಾಲ್ಕು ಭಾಷೆಗಳಿಗೂ ಅನುವಾದವಾಗಿದ್ದು, ನಾಟಕದ ರೂಪದಲ್ಲು ಜನಮನ ತಲುಪಿದ್ದು – ಇದೆಲ್ಲಾ ನೋಡಿದರೆ ಚಾಪೆಯಡಿ ನುಸುಳುವ ನೀರಂತೆ ಹರಿದು ಜನಪ್ರಿಯವಾಗುವುದು ಈ ಪುಸ್ತಕದ ‘ಯೇಗ್ದಾಗೇ’ ಇರುವಂತೆ ಕಾಣುತ್ತಿದೆ. 

ಒಂಭತ್ತಿಂಚಿನ ಪೀಜಾಗು ೩೦೦ ರಿಂದ ೬೦೦ ರೂಪಾಯಿ ಪೀಕುವ ಈ ಕಾಲದಲ್ಲಿ, ೧೪೦ ಪುಟಗಳ ಈ ಪುಸ್ತಕ, ಎಷ್ಟೋ ಕಡೆ ತೆರುವ ಕಾಫಿಯ ಕಾಸಿಗಿಂತಲು ಅಗ್ಗವಾಗಿ ೬೦ ರೂಪಾಯಿಗೆ ಸಿಕ್ಕಿತ್ತು ! ರೆಸ್ಟೊರೆಂಟಿನಲ್ಲಿ ಹಿಂದೆಮುಂದೆ ನೋಡದೆ ಸಾವಿರಾರು ಸುರಿವ ನಮಗೆ – ವರ್ಷಕ್ಕೊಂದು ಸಾರಿಯಾದರು ಕನ್ನಡ ಪುಸ್ತಕ ಕೊಳ್ಳುವುದು ‘ ಯೇಗ್ದಾಗೆ ಬರ್ದಿಲ್ಲ’ ಅಂತ ಕಾಣುತ್ತೆ. ಆದರು ಪ್ಲೀಸ್ – ಓದಲಿ, ಬಿಡಲಿ ಛಾನ್ಸ್ ಸಿಕ್ಕಿದ್ರೆ ಈ ಪುಸ್ತಕ ಮಾತ್ರ ಕೊಂಡುಕೊಂಡು ಬಿಡಿ. ಯಾಕೇಂದ್ರೆ ಈ ಪುಸ್ತಕ ಮಾರಿ ಬಂದ ಆದಾಯವೆಲ್ಲ ನೇರವಾಗಿ ಹೋಗೋದು ಬೆಳಗೆರೆಯ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ. ಓದದೇ ಇದ್ದರು ನಿಮ್ಮಿಂದ ಪುಕ್ಕಟೆ ಸಮಾಜ ಸೇವೆ ಮಾಡಿಸುತ್ತೆ ಈ ಪುಸ್ತಕ – ಅದೂ ತೀರಾ ಅಗ್ಗವಾಗಿ!

ಈ ಪುಸ್ತಕ ಮೂಲತಃ ಶ್ರೀ ಸಾಮಾನ್ಯನಂತಿದ್ದೂ ಅದ್ಭುತ ಯೋಗಿಯ ಬಾಳು ಬದುಕಿದ ಶ್ರೀ ಮುಕುಂದೂರು ಸ್ವಾಮಿಗಳ ‘ಪವಾಡ’ ವನ್ನು ಕುರಿತದ್ದು. ಪವಾಡವೆಂದರೆ ಇದು ಯಾವುದೊ ‘ಛೂ ಮಂತ್ರಕಾಳಿ’ಯ ತರದ ಬೂಟಾಟಿಕೆಯ ಪುಸ್ತಕವೆಂದು ಮೂಗು ಮುರಿಯಬೇಡಿ ತಾಳಿ… ಈ ಸ್ವಾಮಿಗಳನ್ನು ಹತ್ತಿರದಿಂದ ಕಂಡು ಅಲ್ಲೇನಾದರು ಢೋಂಗಿತನವಿತ್ತೆ ಎಂದು ಸ್ವತಃ ತಾವೆ ಅಳೆದು ನೋಡಲೆತ್ನಿಸಿದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು ವಿಜ್ಞಾನದ ನಿಲುಕಿಗೆ ಸಿಗದ ನೂರಾರು ಘಟನೆ, ಅನುಭವಗಳಿಂದ ವಿಸ್ಮಿತರಾಗಿ ನೆನಪಿನ ಕೋಶದಿಂದ ಸಿಕ್ಕಷ್ಟನ್ನು ಹೆಕ್ಕಿ ಕೊನೆಗೆ ಈ ಪುಸ್ತಕರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ವೇಳೆ ಬರೆಯುವ ಉದ್ದೇಶದಿಂದಲೆ ಅಭ್ಯಸಿಸಿ ಬರೆದಿದ್ದರೆ ಈ ಪುಸ್ತಕ ಇನ್ನೂ ಹೇಗಿರುತ್ತಿತ್ತೊ ?!

ತಾವು ಪವಾಡ ಪುರುಷರೆಂಬಂತೆ ಕರೆಸಿಕೊಳ್ಳಲೆ ಹಿಂಜರಿಯುತ್ತಿದ್ದ ಈ ಮುಕುಂದೂರು ಸ್ವಾಮಿಗಳು ಅದಕ್ಕಾಗಿಯೆ ಹಿನ್ನಲೆಯ ಅಲೆಮಾರಿ ಬೈರಾಗಿಯ ಬದುಕು ಸಾಗಿಸಿದ್ದಿರಬೇಕು. ಯಾವುದೇ ಶಾಸ್ತ್ರಾಧ್ಯಯನ, ವ್ಯಾಸಂಗದ ಹಂಗಿಲ್ಲದೆ ತಮ್ಮದೇ ಆದ ಆಡುಭಾಷೆಯಲ್ಲಿ ತೆಳುಹಾಸ್ಯದ ಲಹರಿ ಬೆರೆಸಿ ಗಹನವಾದ ವಿಷಯಗಳನ್ನು ಸರಳವಾಗಿ ಹೇಳುತ್ತಿದ್ದ ರೀತಿಯೇ ಅದ್ಭುತ.. ಅದರ ವೈವಿಧ್ಯಮಯ ತುಣುಕುಗಳನ್ನು ಪುಸ್ತಕದ ಪ್ರತೀ ಪುಟದಲ್ಲೂ ಕಾಣಬಹುದು. ಪ್ರತಿಯೊಂದನ್ನು ಹೊರ ಆವರಣದ ಹಾಸ್ಯದ ಹೊದಿಕೆ ಸರಿಸಿ ಒಳಗಿಣುಕಿದರೆ ಆಧ್ಯಾತ್ಮ, ವೇದಾಂತದ ಗಹನ ತತ್ವಗಳನ್ನೆಲ್ಲ ಸುಲಭದಲ್ಲಿ ಸಿಪ್ಪೆ ಸುಳಿದಿಟ್ಟ ಬಾಳೆಯ ಹಣ್ಣಿನಂತೆ ಕೈಗಿಟ್ಟುಬಿಡುತ್ತದೆ – ತೀರಾ ಸಾಮಾನ್ಯನ ತಲೆಯೊಳಗು ನಾಟುವಂತೆ, ಅದೂ ತೀರಾ ಲೌಕಿಕದ ಸಣ್ಣ ಪುಟ್ಟ ಉದಾಹರಣೆಯಲ್ಲಿ. ಆ ಗಹನತೆಯಲ್ಲಿರುವ ಸರಳತೆಯನ್ನು ಮಾತಿನಲ್ಲಿ ವಿವರಿಸುವ ಬದಲು ಕೆಳಗಿರುವ ಕೆಲವು ಉದಾಹರಣೆಗಳ ಮೂಲಕ ನೋಡಿ – ನಿಮಗೇ ತಿಳಿಯುತ್ತದೆ !

*********

೧. ದೇವರಿಗೆ ಪೂಜಿಸಿ ಎಡೆಯಿಡುವ ಕುರಿತು ಸ್ವಾಮಿಗಳು ಆಡುವ ಮಾತು : ” ಅಲ್ಲಾ ಯೆಡೆ ಅಂದ್ರೆ ಜಾಗ…ಜಾಗ ತಂದಿಕ್ಕೋದೆಂಗೆ? ಯೆಡೆ ತಂದಿಕ್ಕು ಅಂತಾರೆ (ನಕ್ಕು) ಅವ್ನೆಂದು ಉಪಾಸ ಇದ್ದ. ಅದೂ ಐತೆ ಅವನಿಗೆ ಯೆಡೆ ಮಾಡು ಅಂದ್ರೆ ಅವನಿಗೆ ಜಾಗ ಮಾಡು ನನ್ನೊಳಗೆ ಅಂಬೋ ಮಾತು….. ‘

೨. ಬಯಲಾಟದ ನೆಪದಲ್ಲಿ ಬೋಧಿಸಿದ ಆಧ್ಯಾತ್ಮವಿದು. ಜೂಜಿನಲ್ಲಿ ಗೆದ್ದು ದ್ರೌಪದಿಯ ವಸ್ತ್ರಾಪಹರಣ ಮಾಡಲು ನಿಂತ ದುಶ್ಯಾಸನನೊಡನೆ ನಡೆವ ಸಂವಾದದ ತುಣುಕು: (ಪುಸ್ತಕ ಓದುವಾಗ ಗಮನಿಸಿ : ಪಂಚಪಾಂಡವರು-ಪಂಚೆಂದ್ರಿಯಗಳು, ದ್ರೌಪತಿ – ಪ್ರಕೃತಿ, ದುಶ್ಯಾಸನ – ದುಸ್ವಾಸ)

‘…. (ಪಂಚೇಂದ್ರಿಯಗಳನ್ನು ತೋರಿಸಿ) ಪಂಚ ಪಾಂಡವರು ಸೋತ ಮೇಲೆ ಆ ದ್ರೌಪತಿ ಅನ್ನೋ ಗ್ನಾನಾಂಬಿಕೆ ಆಗೋದು – ಪ್ರಕೃತಿ ಅನ್ನೋ ಆವರ್ಣ ಅಳಿದು ಸುದ್ಧ ಗ್ನಾನಾಂಬಿಕೆ ಆಗೋದು……’ ‘ಸುದ್ದ ಗ್ನಾನಾಂಬಿಕೆ ಆದ ಮ್ಯಾಲೆ ಪ್ರಕೃತಿ ಇದ್ದರೂ ಇರಬೌದು , ಇಲ್ಲದಿರಲೂ ಬಹುದು. ಅದು ಸುದ್ಧ ಅಂದ್ರೆ ಸುದ್ಧ. ಅದಕ್ಕೆ ದುಸ್ವಾಸ ಅವಳ ಸೀರೆ ಸೆಳೆದ. ಅದು ಕೊನೆ ಮೊದಲು ಇಲ್ಲದ್ದು. ಅದನ್ನ ಸೆಳೆಯಾಕೆ ಆಗಲೇ ಇಲ್ಲ ನೋಡು.’

೩. ಬೆಟ್ಟ ಹತ್ತುವಾಗ :

ಕೃಷ್ಣಶಾಸ್ತ್ರಿಗಳು: ‘ಇಲ್ಲಿಂದ ಎಲ್ಲಿಯೂ ನಿಲ್ಲದೆ ಒಂದೇ ಸಮನಾಗಿ ಹತ್ತಿ, ಈ ಬೆಟ್ಟದ ನೆತ್ತಿಯ ಮೇಲಿರುವ ಗುಹೆಯೊಳಗೆ ಹೋಗಿ, ಅಲ್ಲಿಯ ಗಂಟೆಯನ್ನು ಬಾರಿಸಬೇಕು. ಯಾರು ಗೆಲ್ಲುತ್ತಾರೋ ನೋಡೋಣ..’

ಸ್ವಾಮಿಗಳು:ಹೂಂ! ಒಳ್ಳೆಯ ಪಂದ್ಯ ಕಣೋ ( ತಮ್ಮ ಎದೆಯನ್ನು ತೋರಿಸುತ್ತ ) ಈ ಗವಿಯೊಳಗೆ ಹೊಕ್ಕು ನೋಡ್ ಬೇಕು ಅಂದ್ರೆ ನಾಮುಂದು ತಾಮುಂದು ಅಂತ ನುಗ್ಗಬೇಕು’

೪. ಶರೀರಕ್ಕಾದ ವ್ರಣವೊಂದರ ಬಗೆ: ‘ಬಂದವನು ಹೋಗ್ತಾನೇ, ಇರುವವನು ಹೋಗೋಲ್ಲ’

೫. ರಾಮಾಣ್ಯ ಅಂದ್ರೆ ಸಾಮಾನ್ಯ ಅಲ್ಲಾ..!

‘ ….ದಸರತ ಅಂತ ಒಬ್ಬ. ಅಂಗಂದ್ರೇನು ? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು. ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡ್ಕೊಂಡವನು ಯಾರೇ ಆಗಿರಲಿ ಅವನು ದಸರತ..’

‘ರಾವಣ ಅತ್ತು ತಲೆ, ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಊಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡ್ಕೊಂಡಿದ್ದ. ಅದೇ ರಾವಣಾಸುರ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೇ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ. ಅವುಗಳದೇ ಕಾರುಬಾರು..’

‘ ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು. ಅಲ್ಲ, ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನು ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಾಳೆ ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು ?’

*********

ನೋಡಿದಿರಾ…? ಇಡೀ ಪುಸ್ತಕದ ಪ್ರತಿ ಪುಟದಲ್ಲೂ ಬರೀ ಇಂತಾ ವಿವರಣೆಯೇ ! ಪಂಡಿತರಿಂದ ಹಿಡಿದು ಪಾಮರರವರೆಗೂ ರುಚಿಸುವಂತ ಅಚ್ಚುಕಟ್ಟಾದ ರಸಗವಳ – ವಿಸ್ಡಮ್ ಸರ್ವ್ಡ್ ವಿತ್ ಅ ಟಚ್ ಆಫ್ ಹ್ಯೂಮರ್ – ಅದೂ ಕೈ ಕಚ್ಚದ ಅಗ್ಗದ ದರದಲ್ಲಿ..! ಹೇಳೋಕೆ ಹೊರಟರೆ ಇನ್ನು ಎಷ್ಟೋ ಉದಾಹರಣೆ ಸೇರಿಸಬಹುದು – ಆದರೆ ಪುಸ್ತಕ ಓದೋ ಸ್ವಾರಸ್ಯ ಕೆಡದೆ ಇರೋಕೆ ಇಲ್ಲಿಗೆ ಸಾಕು ಮಾಡೋಣ..

ನಿಜ ಹೇಳೋದಾದ್ರೆ ನಾವು ಕೊಡೊ ಅರವತ್ತೆಪ್ಪತ್ತು ರೂಪಾಯಿಯ ಕಿಮ್ಮತ್ತು ಏನಕ್ಕೂ ಇಲ್ಲ. ಈ ಪರಿಚಯ ಲೇಖನ ಓದಿಯೆ ಮುಂಗಡವಾಗಿ ಪೈಸಾ ವಸೂಲಾದಂತೆ. ಇನ್ನು ಪುಸ್ತಕದಲ್ಲಿ ಓದೋ ಮಿಕ್ಕಿದ್ದೆಲ್ಲ ಪೂರಾ ಬೋನಸ್..! ಇನೇನು ಯೋಚನೆ ? ವೀಕೆಂಡಲ್ಲಿ ಸ್ವಪ್ನಲೋ, ಇಲ್ಲಾ ಯಾವ್ದಾದ್ರು ಆನ್ಲೈನ್ ಸ್ಟೋರಲ್ಲೊ ಹುಡುಕಿ ತಂದು ಓದಿಬಿಡಿ.. ಈ ಪುಸ್ತಕ ಓದೋ ಭಾಗ್ಯ ‘ಎಲ್ಲಾರ ಯೇಗ್ದಾಗೂ ಐತೆ’ ಅನ್ಸಿಬಿಡೋಣ…!

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s