00578. ಅಹಲ್ಯಾ ಸಂಹಿತೆ – ೨೨ (ಸಂಶೋಧನೆ ಪ್ರಯೋಗದ ಹಿನ್ನಲೆ)


00578. ಅಹಲ್ಯಾ ಸಂಹಿತೆ – ೨೨ (ಸಂಶೋಧನೆ ಪ್ರಯೋಗದ ಹಿನ್ನಲೆ)
_____________________________________

(Link to the previous episode 21: https://nageshamysore.wordpress.com/2016/03/10/00576-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%a7/)

” ದೇವರಾಜ.. ಬಲು ರಹಸ್ಯದ ಯೋಜನೆಯ ಭಾಗವಾಗಿ ನಡೆಯುತ್ತಿರುವ ನೂರಾರು ಪ್ರಯೋಗಗಳಲ್ಲಿ ಇದೂ ಒಂದು ಎಂದು ನೀನು ಬಲ್ಲೆ.. ಆ ದೇವ ರಹಸ್ಯದ ಒಟ್ಟಾರೆ ಸಮಗ್ರ ಚಿತ್ರಣದ ಅರಿವು ನಮಗ್ಯಾರಿಗೂ ಇರದಿದ್ದರು ಅಂತದ್ದೊಂದು ಯೋಜನೆ ನಡೆದಿರುವುದಂತು ನಮ್ಮೆಲ್ಲರಿಗು ತಿಳಿದ ವಿಷಯವೆ.. ಯಾರ್ಯಾರಿಗೆ ಎಷ್ಟೆಷ್ಟು ತಿಳಿದಿದೆಯೆನ್ನುವುದು ಚರ್ಚೆಯ ವಿಷಯವೆ ಹೊರತು , ತಿಳಿದಿದೆಯೊ ಇಲ್ಲವೊ ಅನ್ನುವುದಲ್ಲ… ಹೀಗಾಗಿ ಸೃಷ್ಟಿ ಕಾರ್ಯದ ಪ್ರಮುಖ ಖಾತೆಯ ಒಡೆಯನಾದ ನಾನು ತಳಿಶಾಸ್ತ್ರದ ವಿಷಯಗಳ ಸಂಶೋಧನೆ ನಡೆಸುವುದನ್ನು ಊಹಿಸುವುದೇನು ಕಷ್ಟವಲ್ಲ… ಆ ಸಂಶೋಧನೆಯ ಆಳದಲ್ಲೇನು ನಡೆದಿದೆ, ಅದರ ರೂಪುರೇಷೆಗಳೇನು ಎನ್ನುವುದು ತಿಳಿದಿರಲಾರದು ಅಷ್ಟೆ..”

” ಅದು ನಿಜ ಬ್ರಹ್ಮದೇವ..ಪ್ರಯೋಗದ ವಸ್ತು ಅದೇನೆ ಇದ್ದರು ಅದರ ಯೋಗಕ್ಷೇಮದ ಕುರಿತಷ್ಟೆ ನನ್ನ ಕಾಳಜಿ.. ದೇವರಾಜನಾಗಿ ಇವೆಲ್ಲದರ ಫಲಿತ, ಫಲಾಫಲಗಳ ನಿಭಾವಣೆ, ವಿತರಣೆ ಸ್ವರ್ಗಾಧಿಪತಿಯಾಗಿ ಮುಂದೆಂದೊ ಒಮ್ಮೆ ನನ್ನ ಪಾಲಿಗೂ ಬರುತ್ತದಲ್ಲವೆ ? ಆ ಕಾರಣಕ್ಕೆ ಸಾಧ್ಯವಿರುವ ಸಹಾಯ, ಸಲಕರಣೆ ಒದಗಿಸುವ ಸದುದ್ದೇಶವೆ ನನ್ನ ಆಶಯ.. ಆ ಸಂಶೋಧನೆಯ ವಿವರ, ವ್ಯಾಪ್ತಿ, ವಿಷಯಗಳೆಲ್ಲ ನನಗೆ ತಿಳಿಯುವುದಾದರು ಎಂತು ? ಊರ್ವಶಿಯೆ ಈ ಸಂಶೋಧನೆಯ ಪಾಲುದಾರಳಾದರು ನಾನೆಂದು ಅವಳಲ್ಲಿ ಈ ಕುರಿತು ಮಾತಾಡಿಲ್ಲ, ಯಾವ ಪ್ರಶ್ನೆಯನ್ನು ಕೇಳಿಲ್ಲ..”

” ನೀನು ಕೇಳಿದ್ದರು ಹೇಳುವ ಪ್ರವೃತ್ತಿಯವಳಲ್ಲ ಊರ್ವಶಿ.. ಅವಳು ಹೆಣ್ಣೆ ಆದರು ಇತರರಂತೆ ಗುಟ್ಟು ಮುಚ್ಚಿಡಲಾಗದೆ ರಟ್ಟುಮಾಡುವ ಮಾಮೂಲಿ ಪ್ರಕೃತಿಯವಳಲ್ಲ ದೇವೇಂದ್ರ..” ತನ್ನ ಸತ್ಯಸಂಧತೆಯನ್ನು ಪ್ರಮಾಣಿಸುವ ಸಲುವಾಗಿ ಊರ್ವಶಿಯ ಹೆಸರಿನ ಆಸರೆ ಹಿಡಿದುದು ತನಗೆ ರುಚಿಸಲಿಲ್ಲವೆಂಬಂತೆ ತೀವ್ರದನಿಯಲ್ಲಿ ನುಡಿದ ಬ್ರಹ್ಮದೇವ..

ಅದನ್ನು ಕೇಳುತ್ತಿದ್ದ ಊರ್ವಶಿಯ ಮುಖ ನಾಚಿಕೆಗೇನೊ ಎಂಬಂತೆ ಕೆಂಪಾಗಿ ಬೆಳಗಿದರು, ಅವನ ಮಾತುಗಳಿಂದ ಎದೆಯುಬ್ಬಿ ಹೆಮ್ಮೆಯೂ ಆಯ್ತು. ಆ ಗಳಿಗೆಯ ಮಾತು ಹಾದಿ ತಪ್ಪಿಸುತ್ತಿದೆಯೇನೊ ಅನಿಸಿ ದೇವರಾಜ ತಟ್ಟನೆ ಮಾತು ಬದಲಿಸುವವನಂತೆ, “ಸಾಂಧರ್ಭಿಕವಾಗಿಯಷ್ಟೆ ಆ ಮಾತಾಡಿದೆ ತಾತಾ.. ನಾನಂದಂತೆ ನನ್ನಿಂದೇನಾದರು ಸಹಾಯವಾಗುವಂತಿದ್ದರೆ ಮಾಡಲೆಂದಷ್ಟೆ ನನ್ನ ಉದ್ದೇಶ..” ಎಂದ.

ಆ ಹೊತ್ತಿನ ನೂರೆಂಟು ವಿಷಯಗಳ ಜಂಜಡದಲ್ಲಿ ಇದು ಪ್ರಾಮುಖ್ಯತೆಯಿರದ ವಿಷಯವಾದ ಕಾರಣ ಆ ವಿಷಯವನ್ನು ಬೆಳೆಸಲಿಚ್ಚಿಸದೆ ಮುಖ್ಯ ವಿಷಯಕ್ಕೆ ಬಂದ ಪಿತಾಮಹ ಬ್ರಹ್ಮ…

” ದೇವರಾಜ, ನಿನಗೆ ಗೊತ್ತಿರುವಂತೆ ನಿಸರ್ಗ ಸಹಜ ರೀತಿಯಲ್ಲಿ ಊರ್ವಶಿಯಂತಹ ಶ್ರೇಷ್ಠತಳಿಯನ್ನು ಸೃಜಿಸುವುದು ಇದುವರೆವಿಗು ಸಾಧ್ಯವಾಗಿಲ್ಲ… ಅಂತದ್ದೊಂದು ಉತ್ಕೃಷ್ಟ ಸೃಷ್ಟಿ ತಂತಾನೆ ಸ್ವನಿಯಂತ್ರಿತ ಪ್ರಕ್ರಿಯೆಯಾಗಿ ನಡೆಯುವ ಮಟ್ಟಿಗಿನ ಪಕ್ವತೆ, ಪ್ರಬುದ್ಧತೆ ಈ ಪ್ರಕೃತಿಗಿನ್ನು ಸಾಧ್ಯವಾಗಿಲ್ಲ.. ನಿಜ ಹೇಳುವುದಾದರೆ ಊರ್ವಶಿಯನ್ನು ಕಣ್ಣಾರೆ ಕಾಣುವತನಕ ಇಂತಹ ಅದ್ಭುತ ಸೃಷ್ಟಿ ಸಾಧ್ಯವೆಂಬುದು ನನ್ನ ಊಹೆಗೆ ಕೂಡಾ ನಿಲುಕಿರಲಿಲ್ಲ.. ಶ್ರೇಷ್ಠತೆಯ ಮಾನದಂಡವೆನ್ನುವುದು ಒಂದು ರೀತಿಯ ಹಾರುತ್ತ ಚಲನೆಯಲ್ಲಿರುವ ಹಕ್ಕಿಯ ಹಾಗೆ.. ಗುರಿಯಿಟ್ಟು ಬೇಟೆಯಾಡಲೆಂದು ಬಾಣ ಬೀಸುವಷ್ಟರಲ್ಲಿ ಆ ಗುರಿಯೆ ಸ್ಥಳಾಂತರಿಸಿಕೊಂಡು ಇನ್ನೆಲ್ಲೊ ಹೋಗಿಬಿಟ್ಟಿರುತ್ತದೆ…”

ಮಾತನಾಡುತ್ತಲೆ ಬ್ರಹ್ಮದೇವ ಎದುರಿನಲ್ಲಿದ್ದ ಪರದೆಯ ಮೇಲೊಂದು ಸಾಂಕೇತಿಕ ಚಿತ್ರ ಬರೆದು ಅದರ ಮೂಲಕ ತನ್ನ ವಿವರಣೆಯನ್ನು ಮುಂದುವರೆಸಿದ..

” ಅಂದರೆ ನಮ್ಮ ಗುರಿ ಹಕ್ಕಿಯಿರುವ ತಾಣಕ್ಕಿಂತ ಮುಂದೆ, ಅದು ತಲುಪಿರಬಹುದಾದ ದೂರದ ಲೆಕ್ಕಾಚಾರದಲ್ಲಿ ನಿರ್ಧಾರಿತವಾಗಿ, ನಿಖರವಾಗಿ ಅದರತ್ತ ಹೋಗುವಂತೆ ನಿಭಾಯಿಸಬೇಕು.. ಒಂದು ವೇಳೆ ಲೆಕ್ಕಾಚಾರ ತಪ್ಪಾದರು ಬೀಸಿದ ಗುರಿ ತಲುಪಿದ ದೂರ ಈಗಿರುವುದಕ್ಕಿಂತ ಹೆಚ್ಚಿನದಾದರು ಸಾಕು – ಅದು ಪ್ರಗತಿಯತ್ತ ಇಟ್ಟ ಸೂಕ್ತ ಹೆಜ್ಜೆಯಾಗುತ್ತದೆ.. ಆದರೆ ಈಗ ಊರ್ವಶಿಯ ಸೌಂದರ್ಯ, ಬುದ್ದಿಮತ್ತೆಯ ಸಾದೃಶ್ಯದಲ್ಲಿ ಹೋಲಿಸುವುದಾದರೆ ನಾವು ತಲುಪಬೇಕಾದ ಗುರಿ ಕೋಟಿಯೋಜನ ದೂರದಲ್ಲಿ.. ನಾವಿನ್ನು ಮೊದಲ ಯೋಜನವನ್ನು ಕ್ರಮಿಸಲಾಗಿಲ್ಲ… ಅಂದರೆ ಆ ಅಂತರ ಎಷ್ಟು ಅಗಾಧವೆಂದು ಅರಿವಾಗುವುದಲ್ಲವೆ ?”

” ಬ್ರಹ್ಮದೇವ.. ನಮ್ಮ ಮಾನದಂಡದಲ್ಲಿ ಆ ಅಳತೆಯನ್ನು ಸರಿಗಟ್ಟಬಲ್ಲ ದೂರಕ್ಕೆ ನಾವಿನ್ನು ಹೋಗಲಾಗಿಲ್ಲ ಎನ್ನುವುದು ಸತ್ಯ.. ನಾನೂ ಅದನ್ನು ಒಪ್ಪಿಕೊಳ್ಳುತ್ತೇನೆ.. ಆದರೆ ನರನಾರಾಯಣರಂತಹ ವೈಜ್ಞಾನಿಕ ಮುನಿಶ್ರೇಷ್ಠರು ಊರ್ವಶಿಯನ್ನು ಸೃಷ್ಟಿಸಿದ ತರ ನೋಡಿದರೆ, ಆ ಅಗಾಧ ಕೋಟಿ ಯೋಜನ ಅನತಿದೂರದಲ್ಲೆ ಇದೆ ಎಂದನಿಸುವುದಿಲ್ಲವೆ ?” ಅಚ್ಚರಿಯಿಂದ ಕೇಳಿದ ದೇವೇಂದ್ರ..

” ಇಲ್ಲ ದೇವರಾಜ, ವಿಷಯ ಅಷ್ಟು ಸುಲಭದ್ದಲ್ಲ.. ನರಮುನಿಯು ಸೃಜಿಸಿದ ಊರ್ವಶಿಯ ಸೃಷ್ಟಿ ಕಲಾವಿದನೊಬ್ವ ಸೃಜಿಸಿದ ಸುಂದರ ಶಿಲ್ಪದಂತೆ, ಅಪರೂಪದ ಚಿತ್ರಕಾರನ ಕಲಾಕೃತಿಯಂತೆ ಎನ್ನುವುದರಲ್ಲಿ ಸಂದೇಹವಿಲ್ಲ.. ಆದರೆ ಇದು ಅಯೋನಿಜ ಸೃಷ್ಟಿ.. ಇದು ತಂತಾನೆ ಪುನರಾವರ್ತಿಸಿಕೊಳ್ಳುತ್ತ ನಡೆಯುವ ಸ್ವಕೀಯ ಚಕ್ರದ ಸೃಷ್ಟಿಯಲ್ಲ.. ನಿಸರ್ಗ ನಿಯಮದಲ್ಲಿ ಪ್ರಕೃತಿಸಹಜವಾಗಿ ಯಾರ ಕೈವಾಡವಾಗಲಿ, ಅನಗತ್ಯ ಭಾಗವಹಿಸುವಿಕೆಯಾಗಲಿ ಇರದಂತೆ ಇದು ನಡೆಯಬೇಕಾದರೆ, ಈಗಿನ ನಿಸರ್ಗ ವ್ಯವಸ್ಥೆಯ ಪ್ರಬುದ್ಧತೆಯಲ್ಲಿ ಸಾಧ್ಯವಿಲ್ಲ… ನನ್ನ ಸಂಶೋಧನೆಯ ಮೂಲ ಪ್ರೇರಣೆಯೆ ಅಂತಹ ಸೃಷ್ಟಿನಿಯಮ ಪ್ರಬುದ್ದತೆಯನ್ನು ತರಲು ಸಾಧ್ಯವಿದೆಯೆ, ಇಲ್ಲವೆ? ಎನ್ನುವ ಮೂಲಪ್ರಶ್ನೆಯ ಕುರಿತದ್ದು. ಈಗ ನಿಸರ್ಗ ವಿಕಸನವಾಗುತ್ತ ನಡೆದಿರುವ ವೇಗ ನೋಡಿದರೆ, ಅದು ತಂತಾನೆ ಈ ಪ್ರಬುದ್ದ ಪಕ್ವತೆಯ ಮಟ್ಟ ತಲುಪಲು ಅದೆಷ್ಟು ಕೋಟಿ ಯೋಜನ ವರ್ಷಗಳಾಗುವುದೊ ಹೇಳಬರದು..”

ಬ್ರಹ್ಮದೇವನಲ್ಲಿ ಧ್ವನಿಸಿದ ನಿರಾಸೆಯ ಕುರುಹನ್ನು ದೇವರಾಜನು ಗಮನಿಸದಿರಲಿಲ್ಲ. ಅದೇ ಹೊತ್ತಿನಲ್ಲಿ ಅದುವರೆವಿಗು ಅವರ ಸಂಭಾಷಣೆಯನ್ನು ಆಲಿಸುತ್ತಿದ್ದ ಊರ್ವಶಿಯೂ ನಡುವೆ ಬಾಯಿ ಹಾಕಿ, ” ಪಿತಾಮಹ.. ಅದು ಈಗಿನ ತರವೆ ನಡೆದುಕೊಂಡುಹೋದರೆ ಕೋಟ್ಯಾಂತರ ವರ್ಷಗಳಾಚೆಯವರೆಗು ಕಾಯಬೇಕೆನ್ನುವುದು ನಿಜ.. ಆದರೆ, ಆ ಹಾದಿಯ ನಡುವೆ ಯಾವುದಾದರು ಕ್ರಾಂತಿಕಾರಕ ಸಂಶೋಧನೆ ನಡೆದು ಆ ಚಕ್ರದ ವೇಗೋತ್ಕರ್ಷವನ್ನು ಏಕಾಏಕಿ ಹೆಚ್ಚಿಸಲು ಸಾಧ್ಯವಾದರೆ ಆ ಅವಧಿ ಕುಂಠಿತವಾಗುತ್ತದಲ್ಲವೆ ?” ಎಂದಳು.

ವೇಗವೆನ್ನುವ ಪದ ಬಳಸದೆ ವೇಗೋತ್ಕರ್ಷವೆನ್ನುವ ಪದವನ್ನು ಬಳಸುವ ಮೂಲಕ ಅವಳು ತೋರಿಸಿದ ಪಾಂಡಿತ್ಯ ಫ್ರೌಢಿಮೆಯನ್ನು ಬ್ರಹ್ಮದೇವನೂ ಮೆಚ್ಚದಿರಲಾಗಲಿಲ್ಲ.. ಆ ಮೆಚ್ಚುಗೆ ಅವನ ಕಣ್ಣಲ್ಲಿ ಪ್ರತಿಫಲಿಸಿದರು, ಅವಳ ವಿವರಣೆಯ ಮಥಿತಾರ್ಥವನ್ನು ಪೂರ್ತಿಯಾಗಿ ಅರಿಯಲಾಗದ ದೇವರಾಜ ‘ಹೌದಲ್ಲವೆ?’ ಎನ್ನುವಂತೆ ಬ್ರಹ್ಮದೇವನತ್ತ ನೋಡಿದ..

” ನಿಜ ಊರ್ವಶಿ.. ಈ ಯಾನ ಯುಗಾಂತರ ವರ್ಷಗಳ ಬೃಹತ್ ಪಯಣ.. ಅದರ ಪರಿಗಣನೆಯಲ್ಲಿ ನಮ್ಮ ವೇಗೋತ್ಕರ್ಷವೆನ್ನುವುದು ಅತಿ ಕ್ಷುಲ್ಲಕ ಪರಿಣಾಮ ಬೀರುವಂತದ್ದು.. ಹೀಗಾಗಿ ವೇಗೋತ್ಕರ್ಷದ ವೇಗೋತ್ಕರ್ಷದ ವೇಗೋತ್ಕರ್ಷದಲ್ಲಿ ನಾವು ಪ್ರಗತಿ ಸಾಧಿಸದಿದ್ದರೆ ಆ ಗುರಿಯತ್ತ ಹೋಗಲಿಕ್ಕೆ ಆಗುವುದಿಲ್ಲ.. ಆ ವೇಗವೂ ಸಹ ಗಜಗಮನದೆದುರು ಇರುವೆಯ ನಡೆಯಂತೆ.. ಅರ್ಥಾತ್ ಅಂತಹ ಬೃಹತ್ಪಥದಲ್ಲಿ ನಾವು ಇಡುವ ಪ್ರತಿ ಹೆಜ್ಜೆಯು ಒಂದು ರೀತಿಯಲ್ಲಿ ಅಂಬೆಗಾಲಿಟ್ಟು ನಡೆಯುವ ನಡೆಯ ಹಾಗೆ. ಅದು ನಡುವಲ್ಲಿ ಕ್ರಾಂತಿಕಾರಕವೆನ್ನುವ ಕ್ಷಿಪ್ರವೇಗದ ನೆಗೆತದಲ್ಲಿ ಜಿಗಿದು ಮುನ್ನಡೆಯಬೇಕಿದ್ದರೆ, ಅಂತಹ ಕ್ರಾಂತಿಕಾರಕವೆನ್ನಬಹುದಾದ ಅವಿಷ್ಕಾರವೇ ಆಗಬೇಕು.. ಆ ಜಿಗಿತ ನೂರಾರು ಯೋಜನ ದೂರಕ್ಕೆ ಒಯ್ಯುವುದೊ, ಸಾವಿರ ಯೋಜನ ದೂರಕ್ಕೊಯ್ಯುವುದೊ ಹೇಳಲು ಆಗದು.. ಆದರೆ ಆ ಪಯಣವಂತು ಸಾಗುತ್ತಲೇ ಇರಬೇಕು ಆದಷ್ಟು ದೂರವನ್ನು ಕ್ರಮಿಸುತ್ತ..”

“ಪಿತಾಮಹಾ, ಅಂತಹ ಕ್ರಾಂತಿಕಾರಕ ಜಿಗಿತವನ್ನು ಸಾಧಿಸಬಲ್ಲ ತಂತ್ರದ ಹುಡುಕಾಟವೆ ನಿನ್ನ ಸಂಶೋಧನೆಯ ಸತ್ವ, ಅಲ್ಲವೆ..?” ಏನೊ ಮಿಂಚು ಹೊಳೆದವನಂತೆ ನುಡಿದ ದೇವೆಂದ್ರ..

” ಆ ಸತ್ವ ಕಂಡು ಹಿಡಿಯುವುದು ಆ ದೂರದಲ್ಲಿನ ಒಂದು ಯೋಜನ ಕ್ರಮಿಸಿದಷ್ಟೆ ಲೆಕ್ಕ ದೇವರಾಜ..”

“ಅಂದರೆ..?”

” ಆ ಸತ್ವದ ಅರಿವಿಗೆಂದೆ ಊರ್ವಶಿಯನ್ನು ಮಾದರಿಯಾಗಿಟ್ಟುಕೊಂಡು ಸಂಶೋಧನೆಯನ್ನು ಆರಂಭಿಸಿದ್ದು.. ಅಂದರೆ ತಲುಪಬೇಕಾದ ಗುರಿಯ ಸ್ಥೂಲ ರೂಪ ಮಾತ್ರವಲ್ಲದೆ, ಸೂಕ್ಷ್ಮರೂಪದಲ್ಲು ಅದನ್ನರಿಯುವ ಪ್ರಯತ್ನಕ್ಕೆ ಊರ್ವಶಿಯ ಇರುವಿಕೆ ತುಂಬಾ ಸಹಾಯಕವಾಗುತ್ತದೆ.. ಅದರ ನೆರವಿನಿಂದ ಅವಳಂತಹದ್ದೆ ಪ್ರತಿರೂಪವನ್ನು ನಾವು ಪ್ರಯೋಗಾಲಯದಲ್ಲಿ ಸೃಜಿಸಲು ಸಾಧ್ಯವಾದರೆ, ಆ ಪ್ರಯತ್ನದಲ್ಲೆ ಅಂತಹ ಸೃಷ್ಟಿಗೆ ಇರಬೇಕಾದ ಮೂಲಭೂತ ಶರತ್ತುಗಳನ್ನು, ಪರಿಸಾರಿಕ ಸನ್ನಿವೇಶಗಳನ್ನು, ಅವನ್ನು ಕಟ್ಟಬಲ್ಲ ಮೂಲಾಗ್ರಮೂಲವಸ್ತುಗಳ ಸ್ವರೂಪ, ರೂಪುರೇಷೆಗಳನ್ನು ಅರಿತುಕೊಳ್ಳಬೇಕು.. ಆ ಅರಿಯುವಿಕೆಯೆ ಅದೆಷ್ಟು ವರ್ಷಗಳ ಶೋಧನೆಯೊ ಬಲ್ಲವರಾರು?”

“ಅದಾದ ಹೊತ್ತಿಗಾದರು ನಾವೊಂದು ಮುಖ್ಯ ಘಟ್ಟ ತಲುಪಿದಂತಾಗುವುದಲ್ಲವೆ ಬ್ರಹ್ಮದೇವ?” ಊರ್ವಶಿಯ ಕುತೂಹಲದ ಪ್ರಶ್ನೆ ನಡುವಲ್ಲಿ ತೂರಿಬಂತು.

” ಈ ಸೃಷ್ಟಿಕ್ರಿಯೆಯ ವಿಕಸನ ಯಾತ್ರೆಯಲ್ಲಿ ಅದೊಂದು ಪ್ರಮುಖ ಘಟ್ಟ ಎನ್ನುವುದೇನೊ ನಿಜವೆ ಊರ್ವಶಿ.. ಆದರೆ ಅದು ಅಂಬೆಗಾಲಿನ ಮೊದಲ ಹೆಜ್ಜೆ ಇಟ್ಟಷ್ಟು ಲೆಕ್ಕ ಅಷ್ಟೆ… ಆ ಅರಿವಾದ ಸತ್ವದ ಅಂಶಗಳನ್ನು ಸಂತತಿಯ ವಂಶವಾಹಿ ಕಣಗಳೊಂದಿಗೆ ಅಂತರ್ಗತಗೊಳಿಸಿ ಅದು ನಿಸರ್ಗಸಹಜ ಸೃಷ್ಟಿಯ ಭಾಗವಾಗುವಂತೆ ಪರಿವರ್ತಿಸಬೇಕು.. ಅದಾಗಬೇಕೆಂದರೆ ಅದೆಷ್ಟು ಪೀಳಿಗೆ, ಸಂತತಿಗಳ ನಿರಂತರ ಪ್ರಕ್ರಿಯೆಯೊ , ಏನೊ ?” ತನ್ನಲ್ಲೆ ಆ ದೂರದ ಚಿತ್ರವನ್ನು ಊಹೆಯಲ್ಲಿಯೆ ಚಿತ್ರಿಸಿಕೊಳ್ಳುತ್ತ ನುಡಿದ ಬ್ರಹ್ಮದೇವ..

(ಇನ್ನೂ ಇದೆ)

(Link to next episode 23: https://nageshamysore.wordpress.com/2016/03/12/00579-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-23-%e0%b2%97%e0%b3%8c%e0%b2%a4%e0%b2%ae%e0%b2%a8-%e0%b2%86%e0%b2%af%e0%b3%8d/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s