00579. ಅಹಲ್ಯಾ ಸಂಹಿತೆ – ೨೩ (ದೇವೇಂದ್ರ ಸಲಹೆ – ಗೌತಮನ ಆಯ್ಕೆ)


00579. ಅಹಲ್ಯಾ ಸಂಹಿತೆ – ೨೩ (ದೇವೇಂದ್ರ ಸಲಹೆ – ಗೌತಮನ ಆಯ್ಕೆ)
_____________________________________

(Link to the previous episode 22 : https://nageshamysore.wordpress.com/2016/03/11/00578-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%a8/)

ಆ ಮಹಾನ್ ಕಾರ್ಯದ ಘನ ಉದ್ದೇಶದ ಸ್ವರೂಪ ಅರ್ಥವಾದವನಂತೆ ನುಡಿದ ದೇವರಾಜ: “ಬ್ರಹ್ಮದೇವ ಅದೇನೆ ಇದ್ದರು ನೀನು ನಿನ್ನ ಸ್ವಂತ ಉಸ್ತುವಾರಿಯಲ್ಲಿ ಈ ಸಂಶೋಧನೆಯನ್ನು ನಡೆಸಬೇಕಾದರೆ ನಿನಗೆ ಅದರಲ್ಲಿ ಸಹಾಯಕರಾಗಬಲ್ಲ, ನಿನ್ನ ಅನುಪಸ್ಥಿತಿಯಲ್ಲೂ ಆ ಸಂಶೋಧನೆಯನ್ನು ನಡೆಸಬಲ್ಲ ತಂಡವೊಂದನ್ನು ಮತ್ತದರ ನಾಯಕತ್ವ ವಹಿಸಬಲ್ಲ ಸಮರ್ಥ ವೈಜ್ಞಾನಿಕ ತಜ್ಞನನ್ನು ನೇಮಿಸಿಕೊಳ್ಳುವುದು ಉಚಿತವಲ್ಲವೆ ?”

” ನಾನು ಅದನ್ನೆ ಯೋಚಿಸುತ್ತಿದ್ದೇನೆ ಮಹೇಂದ್ರ.. ಸೂಕ್ತ ನಾಯಕತ್ವ ವಹಿಸಿ ಇದನ್ನು ಮುನ್ನಡೆಸಬಲ್ಲ ಸರಿಯಾದ ವ್ಯಕ್ತಿ ಯಾರಾದರೂ ಸಿಕ್ಕುವರೆನ್ನುವುದಾದರೆ..”

” ಬ್ರಹ್ಮದೇವ… ತಳಿವಿಜ್ಞಾನದ ಕ್ಷೇತ್ರದಲ್ಲಿ ಈಗ ಹೆಸರು ಮಾಡಿರುವ ಮಹತ್ವದ ವಿಜ್ಞಾನಿಯೆಂದರೆ ಗೌತಮ ಮುನಿ..” ನಿಧಾನವಾಗಿ ನುಡಿದ ದೇವೇಂದ್ರ..

” ಹೌದು ಬ್ರಹ್ಮದೇವ.. ನಾನೂ ಕೂಡ ಆತ ಬರೆದ ಅನೇಕ ಶಾಸ್ತ್ರಗ್ರಂಥ, ಲೇಖನ, ಬರಹಗಳನ್ನು ಓದಿದ್ದೇನೆ.. ಈ ವಿಷಯದಲ್ಲಿ ಆತನಿಗೆ ಅಗಾಧ ಪ್ರಭುತ್ವವಿರುವಂತಿದೆ..” ಊರ್ವಶಿಯೂ ತನ್ನ ದನಿ ಸೇರಿಸುತ್ತ ಅದನ್ನು ಅನುಮೋದಿಸಿದಳು..

” ನಾನೂ ಅದನ್ನೆ ಆಲೋಚಿಸುತ್ತಿದ್ದೇನೆ…. ನನ್ನ ಬಿಡುವಿಲ್ಲದ ಕಾರ್ಯದಲ್ಲಿ ಅವನಂತಹ ಸಮರ್ಥರಿದ್ದರೆ ನನಗೂ ಉಸ್ತುವಾರಿಯ ಕೆಲಸ ಸುಲಭವಾಗುತ್ತದೆ.. ಜತೆಗೆ ಹೊಸ ಆಲೋಚನೆ, ಮಾರ್ಗೋಪಾಯಗಳಿಂದ ಕ್ರಾಂತಿಕಾರಕ ಅವಿಷ್ಕಾರಗಳು ಊಹಿಸದ ವೇಗದಲ್ಲಿ ಆದರೂ ಆದೀತೇನೊ ..?”

“ಸರಿ..ಬ್ರಹ್ಮದೇವಾ.. ಹಾಗಿದ್ದರೆ ನಾನು ಗೌತಮನೊಡನೆ ಈ ವಿಷಯ ಚರ್ಚಿಸಿ, ನಿನ್ನನ್ನು ಭೇಟಿಯಾಗುವಂತೆ ಸೂಚಿಸಲೆ?” ತನ್ನ ಯೋಜನೆ ಕಾರ್ಯಗತವಾಗುತ್ತಿರುವ ಸುಳಿವಿನಿಂದ ಸಂತಸದಿಂದ ನುಡಿದ ದೇವರಾಜ.

ಆಗಲೆಂಬಂತೆ ತಲೆಯಾಡಿಸಿ ಭೇಟಿಯ ಮುಕ್ತಾಯವೆಂಬಂತೆ ಮೇಲೆದ್ದ ಬ್ರಹ್ಮದೇವ.. ಸುಲಭದಲ್ಲೆ ತನ್ನ ಉಪಾಯ ಕಾರ್ಯಗತವಾದದ್ದಕ್ಕೆ ಆನಂದತುಂದಿಲನಾದ ಮಹೇಂದ್ರ ಯಾವುದೊ ಮಹತ್ಕಾರ್ಯ ಸಾಧಿಸಿದ ಸಂತೃಪ್ತಿಯಲ್ಲಿ ತಾನು ತಾನೂ ಮೇಲೆದ್ದ.

ಅವನ ಜತೆಯಲ್ಲೆ ತಾನು ಮೇಳೇಳುತ್ತಿದ್ದ ಊರ್ವಶಿ, ಆಂತರ್ಯದಲ್ಲಿ ಏನೊ ಅರಿವಾದವಳಂತೆ ತಂತಾನೆ ನಕ್ಕು ಬ್ರಹ್ಮದೇವನನ್ನು ಹಿಂಬಾಲಿಸಿ ನಡೆದಳು, ತನ್ನ ಎಂದಿನ ದೈನಂದಿನ ಪ್ರಯೋಗದಲ್ಲಿ ಪಾಲ್ಗೊಳ್ಳಲು.

******************

ಅಧ್ಯಾಯ 08
___________

ಗೌತಮನ ಸೇರ್ಪಡಿಕೆಯಿಂದ ಸಂಶೋಧನೆಯ ಓಘಕ್ಕೆ ಇದ್ದಕ್ಕಿದ್ದಂತೆ ಬಲ ಬಂದಂತಾಗಿ ನಿತ್ಯವು ಚಟುವಟಿಕೆಗಳ ಕ್ರಿಯಾತ್ಮಕ ತಾಣವಾಗಿ ಬದಲಾಗಿ ಹೋಗಿದೆ ಆ ಜಾಗ..

ಈಗ ಊರ್ವಶಿಗು ಮೊದಲಿಗಿಂತ ಹೆಚ್ಚಿನ ಕೆಲಸ; ಮೊದಲಿಗಿಂತ ಹೆಚ್ಚು ಸಮಯವನ್ನವಳು ಪ್ರಯೋಗಶಾಲೆಯಲ್ಲೆ ಕಳೆಯುತ್ತಾಳೆ.. ಅವಳಿಗೂ ಅದೆಂತದ್ದೊ ಹಿಗ್ಗು, ಆ ವೈಜ್ಞಾನಿಕ ವಿಷಯದ ಮೇಲೆ ಅದೆಂತದೊ ಕುತೂಹಲ..

ತನ್ನ ಕೆಲಸ ಮುಗಿದರು ಅಲ್ಲೆ ಗ್ರಂಥಾಲಯದಲ್ಲಿರುವ ಹೊತ್ತಗೆಗಳನ್ನೋದುತ್ತಲೊ, ನಡೆದಿರುವ ಮತ್ತಾವುದೊ ಪ್ರಯೋಗದ ಹಂತಗಳನ್ನು ಆಸಕ್ತಿಯಿಂದ ನೋಡುತ್ತಲೊ ಕಾಲ ಕಳೆಯುತ್ತಾಳೆ. ಇತರ ಅಪ್ಸರೆಯರಂತೆ ನಾಟ್ಯ, ಗಾನ, ಪಾನ ಗೋಷ್ಟಿಗಳಲ್ಲಿ ಅವಳಿಗೆ ಆಸಕ್ತಿ ಕಡಿಮೆಯಾದರು, ದೇವರಾಜನಿಗೆ ಅಗೌರವವಾಗದ ರೀತಿಯಲ್ಲಿ, ಅವನ ಕೀರ್ತಿ, ಅಭಿಮಾನಕ್ಕೆ ಧಕ್ಕೆ ಬರದ ರೀತಿಯಲ್ಲಿ ಪಾಲ್ಗೊಂಡು ಎರಡೂ ಕಡೆಯನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ.

ದೇವರಾಜನಿಗು ಅದೇ ಒಂದು ರೀತಿಯ ಸಂತಸ – ತನ್ನ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಛಾತಿಯುಳ್ಳವಳೆಂದು ಮಾತ್ರವಲ್ಲದೆ, ಅದ್ಭುತವಾದ ದೇವತಾ ಸಂಶೋಧನಾ ಪ್ರಯೋಗದಲ್ಲಿ ತನ್ನ ಪರವಾಗಿ ಪಾಲ್ಗೊಳ್ಳುತ್ತಿರುವಳೆಂಬ ಹೆಮ್ಮೆ. ಎಷ್ಟೊ ಬಾರಿಯ ಸಭೆಗಳಲ್ಲಿ ಅದನ್ನು ಬಾಯ್ಬಿಟ್ಟು ಆಡಿಯೂ ತೋರಿಸಿದ್ದಾನೆ. ಅಂತೆಯೆ ಅವಳಿಗೆ ಕೆಲಸ ವಹಿಸಬೇಕಾದಾಗೆಲ್ಲ ತುಸು ಎಚ್ಚರಿಕೆಯನ್ನು ತೋರುತ್ತಾನೆ – ಅವಳಿಗೆ ತೀರಾ ಹೊರೆಯಾಗದ ರೀತಿ ಸಂಭಾಳಿಸುತ್ತ.

ಆದರೆ ಅವನೂ ಅರಿಯದ ಮತ್ತೊಂದು ವಿಷಯವೆಂದರೆ – ಅವಳು ತನ್ನ ಸಹ ಅಪ್ಸರೆಯರ ಜತೆಗಾರಿಕೆಯನ್ನು ನಿಭಾಯಿಸುತ್ತಿರುವ ರೀತಿ. ಪ್ರತಿಯೊಬ್ಬರ ಜತೆಯೂ ಆಪ್ತ ಗೆಳತಿಯಂತೆ ವರ್ತಿಸುತ್ತ ಅವರ ಗೌರವಾದರಗಳನ್ನು ಗೆದ್ದಿದ್ದಾಳೆ. ಅವರಾರಿಗು ತನ್ನ ಬಗ್ಗೆ ಈರ್ಷೆ ಮೂಡದಂತೆ, ಆತ್ಮೀಯ ಸ್ನೇಹದ ಬಲೆಯಲ್ಲಿ ಆಕರ್ಷಿಸಿ ತನ್ನ ಸಹಾನುವರ್ತಿಗಳಾಗುವಂತೆ ಮಾಡಿಬಿಟ್ಟಿದ್ದಾಳೆ.. ಅವಳ ಸದಾ ಸಹಾಯ ಮಾಡುವ ಮನೋಭಾವ ಎಲ್ಲರಿಗು ಪ್ರಿಯ.. ಆ ಅಪ್ಸರೆಯರೆಲ್ಲರಿಗು ಅವಳೆಂದರೆ ಅದೆಂತದೊ ಹೇಳಿಕೊಳ್ಳಲಾಗದ ಸ್ತರದ ಅಭಿಮಾನ.

ಗೌತಮ ಬಂದ ಮೇಲೆ ಆದ ಒಂದು ಮುಖ್ಯ ಬದಲಾವಣೆಯೆಂದರೆ, ಪಿತಾಮಹ ಬ್ರಹ್ಮದೇವ ಈಗ ಮೊದಲಿನಂತೆ ನಿತ್ಯವು ಪ್ರಯೋಗಶಾಲೆಗೆ ಬರುವುದಿಲ್ಲ. ನಿಗದಿತ ಅವಧಿಯ ಪರಾಮರ್ಶೆಯ ಮಂತ್ರಾಲೋಚನೆಗೆ ಮಾತ್ರ ತಪ್ಪದೆ ಹಾಜರಾಗುತ್ತಾನೆ. ಆ ಸಭೆಯಲ್ಲಿ ಊರ್ವಶಿಯೂ ಇರುತ್ತಾಳೆ – ಸಾರ ಸಂಗ್ರಹವನ್ನು ದಾಖಲಿಸಿ ಟಿಪ್ಪಣಿಯಾಗಿ ಬರೆದಿಡುವ ಕೆಲಸ ಮಾಡುತ್ತ. ಅದು ಗೌತಮನಿಗೆ ಬಲು ಉಪಯೋಗಕರ ಎಂದವಳಿಗೆ ಚೆನ್ನಾಗಿ ಗೊತ್ತು. ಆ ಅನಿಸಿಕೆಯ ಅನುಮೋದನೆಯನ್ನು ಅವನ ಕಣ್ಣಲ್ಲಿಯೂ ಗಮನಿಸಿದ್ದಾಳೆ ಊರ್ವಶಿ.

ಆದರೆ ಈ ಸಭೆಯಲ್ಲಿ ಪಾಲ್ಗೊಳ್ಳುವ ಅಚ್ಚರಿಯ ಅತಿಥಿಯೆಂದರೆ ದೇವರಾಜ ಇಂದ್ರ.. ಪ್ರಯೋಗದಲ್ಲಿ ನೇರ ಪಾಲ್ಗೊಳ್ಳುವ ವೈಜ್ಞಾನಿಕ ಹಿನ್ನಲೆ ಅವನಿಗಿರದಿದ್ದರು, ಅವನ ಸಹಾಯ ಹಸ್ತವನ್ನು ಮನ್ನಿಸಿದ ಬ್ರಹ್ಮದೇವ, ಅವನನ್ನು ಪ್ರಯೋಗದ ಆಸುಪಾಸಿನ ಉಸ್ತುವಾರಿಗಿರಲೆಂಬಂತೆ ಸೇರಿಸಿಕೊಂಡಿದ್ದಾನೆ. ಅಲ್ಲದೆ ಮಿಕ್ಕವರಾರಿಗು ವೆಚ್ಚ, ವ್ಯಯ, ಆದಾಯದ ವಿಷಯಗಳಲ್ಲಿ ಅವನಿಗಿರುವಂತಹ ಚಾಣಾಕ್ಷತೆಯಿಲ್ಲ.

ಸಂಶೋಧನೆಗೆ ಬೇಕಾದ ಸವಲತ್ತನ್ನೆಲ್ಲ ಒದಗಿಸುವುದು ಅವನ ಜವಾಬ್ದಾರಿಯೆಂದು ಬ್ರಹ್ಮದೇವನೆ ಹೊಣೆ ಹೊರಿಸಿದ ಮೇಲೆ ಅವನೂ ಆಗಾಗ ಪಾಲ್ಗೊಂಡು ಬೇಕಾದ್ದೆಲ್ಲ ಸಮರ್ಪಕವಾಗಿ ಸಿಗುವಂತೆ ನಿಗಾ ವಹಿಸುತ್ತಿದ್ದಾನೆ. ಆ ನೆಪದಲ್ಲಿ ಪ್ರಯೋಗದ ಪ್ರಗತಿ ಮತ್ತದರ ಆಗುಹೋಗುಗಳ ವರದಿಯೂ ಅವನ ಎಟುಕಿಗೆ ಅನಾಯಾಸವಾಗಿ ನಿಲುಕುತ್ತಿವೆ.

ಇದೆಲ್ಲಕ್ಕು ಮೀರಿದ ಮತ್ತೊಂದು ಮುಖ್ಯ ವಿಷಯವೆಂದರೆ – ಗೌತಮನ ಮನವೊಲಿಸಿ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಮಾಡುವಲ್ಲಿ ಅವನು ವಹಿಸಿದ ರಾಯಭಾರಿಯ ಪಾತ್ರ. ಆ ಭೂಮಿಕೆಯ ನಿಭಾವಣೆಯಲ್ಲಿ ಗೌತಮನಿಗೆ ಉಗ್ರಸ್ಥಾನದ ಪಟ್ಟ ಮಾತ್ರವಲ್ಲದೆ ಅದಕ್ಕಿರಬೇಕಾದ ಸೌಲಭ್ಯ, ಸವಲತ್ತುಗಳಾವುದು ತಪ್ಪಿ ಹೋಗದ ಹಾಗೆ ನೋಡಿಕೊಂಡಿದ್ದಾನೆ. ಔದಾರ್ಯದ ಉರುಳಲ್ಲಿ ಸಿಲುಕಿದ ಗೌತಮ ತನ್ನ ಬಗ್ಗೆ ಅಭಿಮಾನ ತಾಳುವಂತೆ ಎಚ್ಚರ ವಹಿಸಿದ್ದಾನೆ.

ಮೊದಮೊದಲು ಇಂತಹ ಬೃಹತ್ ಕಾರ್ಯ ತನ್ನಿಂದ ಸಾಧ್ಯವೆ ಎಂದು ಅನುಮಾನಿಸುತ್ತ ದೂರ ಸರಿಯಲೆತ್ನಿಸಿದ ಗೌತಮನನ್ನು ನಾಲ್ಕಾರು ಬಾರಿ ಸಂಧಿಸಿ, ನಿಧಾನವಾಗಿ ಅವನಲ್ಲಿ ಆತ್ಮಸ್ಥೈರ್ಯ ತುಂಬಿ, ಧೈರ್ಯ, ಸಾಹಸದ ಮಾತಾಡಿ ಅದೆಂಥಹ ಸುವರ್ಣಾವಕಾಶವೆಂದು ಅವನಿಗೆ ಮನದಟ್ಟಾಗುವಂತೆ ಮಾಡಿದ್ದಾನೆ. ಭವಿತದಲ್ಲಿ ಅವನ ಹೆಸರು ಚಿರಸ್ಥಾಯಿಯಾಗಿ ಉಳಿಯಬಲ್ಲ ಇಂತಹ ಸೊಗಸಾದ ಅವಕಾಶವನ್ನು ದೂರಿಕರಿಸದೆ ಅಪ್ಪಿ ಆಲಂಗಿಸಿಕೊಳ್ಳುವಂತೆ ಮಾಡುವಲ್ಲಿ ದೇವರಾಜನ ಪಾತ್ರವೇನು ಸಣ್ಣದಲ್ಲ.. ತನ್ನ ಜತೆಗೆ ಊರ್ವಶಿಯನ್ನು ಕರೆದೊಯ್ದು ಅವಳೂ ಅದರ ಕುರಿತು ಮಾತಾಡುವಂತೆ ಮಾಡಿದ ಮೇಲಷ್ಟೆ ಗೌತಮ ತುಸು ಮೃದುವಾಗಿದ್ದು.

ದೇವೇಂದ್ರನ ತೀವ್ರ ಒತ್ತಾಯದ ಹಿನ್ನಲೆಯ ಹುನ್ನಾರವೇನಿರಬಹುದೊ ಎಂದು ಚಿಂತನೆಯಲ್ಲಿದ್ದವನಿಗೆ ಊರ್ವಶಿಯ ಮಾತಿಂದ ಪ್ರಯೋಗದ ಸತ್ವ, ಸತ್ಯಾಸತ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದೆ. ಅದರಿಂದಲೆ ಅದೊಂದು ದೊಡ್ಡ ಅವಕಾಶವೆಂದು ಅವನಿಗು ಅರಿವಾಗಿ, ತದನಂತರವಷ್ಟೆ ತನ್ನ ಸಮ್ಮತಿ ಸೂಚಿಸಿದ್ದು. ಆದರೂ ಒಂದಳತೆಯಲ್ಲಿ ದೇವರಾಜನಿಗು ತನಗು ಸ್ವಲ್ಪ ಅಂತರವಿರುವ ಹಾಗೆ ಕಾಯ್ದುಕೊಂಡಿದ್ದಾನೆ, ತನ್ನ ಸ್ವತಂತ್ರ ಮನೋಭಾವಕ್ಕನುಗುಣವಾಗಿ.

ಆದರೆ ಗೌತಮನಿಗೆ ಎಲ್ಲಕ್ಕಿಂತ ಮಿಗಿಲಾಗಿ ಮನಸಿಗೆ ಹಿಡಿಸಿದ್ದು – ಬ್ರಹ್ಮದೇವನ ಜತೆಗಿನ ಕೆಲಸದ ವ್ಯಾಪ್ತಿ ಮತ್ತು ಪಿತಾಮಹನು ಅವನಿಗಿತ್ತ ಕಾರ್ಯ ನಿರ್ವಹಣಾ ಸ್ವಾತಂತ್ರ್ಯ…

ಬಂದ ಮೊದಲ ಭೇಟಿಯಲ್ಲೆ ಚತುರ್ಮುಖ ಬ್ರಹ್ಮ ಸ್ಪಷ್ಟವಾಗಿ ಹೇಳಿಬಿಟ್ಟಿದ್ದ – ಅಂತಿಮ ಫಲಿತಾಂಶದ ಸಾಧನೆಯ ದಿಕ್ಕಿನಲ್ಲಿ ಯಾವುದೆ ಹೆಜ್ಜೆಯಿಡಬೇಕಿದ್ದರು ನಿರಾತಂಕವಾಗಿ, ಧೃತಿಗೆಡದೆ ದಿಟ್ಟವಾಗಿ ಮುನ್ನಡೆಯಬಹುದೆಂದು. ಪ್ರತಿ ಸಣ್ಣಪುಟ್ಟ ವಿಷಯಕ್ಕು ತನ್ನ ಅನುಮತಿಗೆ ಕಾಯದೆ, ಗೌತಮನ ಮನಸಿಗೆ ಸರಿ ಬಂದ ರೀತಿಯಲ್ಲಿ ಮುಂದಕ್ಕೆ ಹೆಜ್ಜೆ ಇಡುವ ಸ್ವಾತಂತ್ರ್ಯವನ್ನು ದಯಪಾಲಿಸಿಬಿಟ್ಟಿದ್ದ !

ಒಂದೆಡೆ ಇದು ಅವನ ಮೇಲಿಟ್ಟ ಆತ್ಮವಿಶ್ವಾಸದ ದ್ಯೋತಕವಾಗಿದ್ದರೆ, ಮತ್ತೊಂದೆಡೆ ಅವನು ತನ್ನ ಸ್ವಂತ ಸಿದ್ದಾಂತದ ಮೂಲತತ್ವಗಳನ್ನೆ ಸರಕಾಗಿಟ್ಟುಕೊಂಡು ಎಲ್ಲಾ ತರದ ವಿಭಿನ್ನ ಪ್ರಯೋಗಗಳನ್ನು ನಿರಾತಂಕವಾಗಿ ನಡೆಸಬಹುದಿತ್ತು – ಯಾವುದೆ ಆರ್ಥಿಕ ಅಡಚಣೆಯಾಗಲಿ, ಸಂಶೋಧನಾ ಸಲಕರಣೆಗಳ ಕೊರತೆಯಾಗಲಿ, ಸಂಪನ್ಮೂಲಗಳ ದಿಗಿಲಾಗಲಿ ಇರದಂತೆ..

ಅದಕ್ಕು ಮೀರಿದ ಮತ್ತೊಂದು ಮಹತ್ವದ ವಿಷಯವೆಂದರೆ, ಗೌತಮ ತನಗೆ ಸರಿಕಂಡ ಹಾಗೆ ತನ್ನದೆ ಆದ ತಂಡವೊಂದನ್ನು ಕಟ್ಟಿಕೊಳ್ಳಲು ಅನುಮತಿಯಿತ್ತಿದ್ದ ಬ್ರಹ್ಮದೇವ. ಸಾಮಾಜಿಕ ಮತ್ತು ಪರಿಸರ ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರೀತಿಯ ವಿನಾಶಕಾರಕ ದುಷ್ಪರಿಣಾಮಗಳು ಉಂಟಾಗದ ಹಾಗೆ ಸಂಶೋಧನಾ ಪ್ರಯೋಗಗಳನ್ನು ನಡೆಸಿಕೊಂಡು ಹೊರಟರೆ ಸಾಕಿತ್ತು. ತನ್ನ ಮಾತು ಮುಗಿಸುವ ಮೊದಲು ಬ್ರಹ್ಮದೇವ ಮತ್ತೊಂದು ಪ್ರಮುಖ ಸಂಗತಿಯನ್ನು ಅರುಹಿ ಹೋಗಿದ್ದ, ತನ್ನ ಈ ಪ್ರಯೋಗದಲ್ಲಿ ಗೌತಮನ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಅವನಿಗೆ ಮನದಟ್ಟಾಗಿಸುತ್ತ..

” ಗೌತಮ, ನಿನಗೀಯುತ್ತಿರುವ ಈ ಜವಾಬ್ದಾರಿ ಎಷ್ಟು ಮಹತ್ವದ್ದೆಂದು ನಿನಗೆ ಚೆನ್ನಾಗಿ ಅರಿವಿದೆಯೆಂದು ಭಾವಿಸುವೆ… ಒಂದು ವೇಳೆ ಇನ್ನು ಸಂಶಯ, ಗೊಂದಲವಿದ್ದರೆ ಈ ಮಾತು ಕೇಳಿ ಪರಿಹರಿಸಿಕೊ.. ಈ ಸಂಶೋಧನೆಯ ಹೊಣೆಯನ್ನು ಬೇರಾರಿಗು ಒಪ್ಪಿಸದೆ ಸ್ವತಃ ನಾನೆ ನಡೆಸಬೇಕೆಂಬುದು ನನ್ನ ಬಲವಾದ ಇಚ್ಛೆಯಾದರೂ, ನನ್ನ ಕಾರ್ಯಬಾಹುಳ್ಯದಲ್ಲಿ ಅದು ಸಾಧ್ಯವಾಗದೆಂಬ ನೈಜ ಸ್ಥಿತಿಯ ಅರಿವಿನಿಂದಷ್ಟೆ ಇದನ್ನು ನಿಭಾಯಿಸುವ ಸಮರ್ಥ ವ್ಯಕ್ತಿಗಾಗಿ ಹುಡುಕಾಟ ನಡೆಸಬೇಕಾಗಿ ಬಂದಿದ್ದು… ಅಂದರೆ ಈ ಕಾರ್ಯ ಅದೆಷ್ಟು ಮಹತ್ವದ್ದೆಂದು ನಿನಗೂ ಅರಿವಾಗಿರಬಹುದು. ಇದರಲ್ಲಿ ನೀನು ಪ್ರಗತಿ, ಯಶ ಸಾಧಿಸಿದಷ್ಟೂ ನಾನೇ ಗೆದ್ದಂತೆ ಲೆಕ್ಕ. ಆ ಕಾರಣಕ್ಕೆ ನಿನಗೆ ನನಗಿಲ್ಲಿದ್ದ ಸ್ಥಾನದ ಪೂರ್ಣ ಅಧಿಕಾರವನ್ನು ಯಥಾವತ್ತಾಗಿ ವರ್ಗಾಯಿಸುತ್ತಿದ್ದೇನೆ. ನಾನು ನಿನ್ನ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆನೊ ಅದನ್ನೆ ನೀನು ನಿರಾತಂಕವಾಗಿ ಮಾಡಬಹುದು. ನೀನು ಎಲ್ಲಾ ನಿರ್ಧಾರಗಳನ್ನು ಸರ್ವತಂತ್ರ ಸ್ವತಂತ್ರನಂತೆ ಕೈಗೊಳ್ಳಬಹುದು. ನಿಗದಿತ ಮಂತ್ರಾಲೋಚನೆಯ ಭೇಟಿಯಲಿ ನನಗದರ ಸಾರಾಂಶ ವರದಿ ಕೊಟ್ಟರೆ ಸಾಕು..ಆದರೆ ನೆನಪಿನಲ್ಲಿಟ್ಟುಕೊ… ಈ ಯಜ್ಞದಲ್ಲಿ ನೀನು ಗೆದ್ದರೆ ಅದು ಬರಿಯ ನಿನ್ನ ಗೆಲುವಲ್ಲ – ಸ್ವತಃ ಬ್ರಹ್ಮದೇವನ ಗೆಲುವು.. ಒಂದು ವೇಳೆ ನೀನೇನಾದರು ಸೋತೆಯೊ, ಅದು ನಿನ್ನ ಸೋಲಲ್ಲ ; ಬದಲಿಗೆ ಸ್ವತಃ ಬ್ರಹ್ಮದೇವನ ಸೋಲಾಗುತ್ತದೆ.. ಆ ಹಿನ್ನಲೆಯನ್ನು ಮನದಲಿಟ್ಟುಕೊಂಡು ಮುನ್ನಡೆದರೆ ಸಾಕು..”

(ಇನ್ನೂ ಇದೆ)

(Link to next episode 24: https://nageshamysore.wordpress.com/2016/03/12/00580-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%aa-%e0%b2%ae%e0%b2%b9%e0%b2%be%e0%b2%a8%e0%b3%8d-%e0%b2%b8/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel, nageshamysore

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s