00581. ಅಹಲ್ಯಾ ಸಂಹಿತೆ – ೨೫ (ತಪೋಶಕ್ತಿಪಾತಕ್ಕೆ ನರನ ಖೇದ)


00581. ಅಹಲ್ಯಾ ಸಂಹಿತೆ – ೨೫ (ತಪೋಶಕ್ತಿಪಾತಕ್ಕೆ ನರನ ಖೇದ)
___________________________________

(Link to previous episode 24: https://nageshamysore.wordpress.com/2016/03/12/00580-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%aa-%e0%b2%ae%e0%b2%b9%e0%b2%be%e0%b2%a8%e0%b3%8d-%e0%b2%b8/)

ಯುದ್ಧದಲ್ಲಿ ನಿರತನಾಗಿದ್ದ ನಾರಾಯಣನಿಗೆ ಇಲ್ಲಿ ನಡೆದುದ್ದೆಲ್ಲವನ್ನು ನೋಡಲು ಸಾಧ್ಯವಾಗಿಲ್ಲ.. ಆದರೆ ಏನೊ ಬೇಡದ್ದು ನಡೆದಿದೆಯೆಂಬ ಸುಳಿವು ಮಾತ್ರ ಸಿಗುತ್ತಿದೆ – ನರನ ಶಕ್ತಿಯನ್ನು ತನ್ನ ಚೇತರಿಕೆಯ ಸಲುವಾಗಿ ಆವಾಹಿಸಿಕೊಳ್ಳುವ ಯತ್ನದಲ್ಲಿ…

” ನಿನಗೆ ಇಲ್ಲೇನು ನಡೆಯಿತೆಂದು ಅರಿವಾಗಿರಬಹುದೆಂದುಕೊಂಡಿದ್ದೆ..'” ನಾರಾಯಣನನ್ನು ಮನಃಚಕ್ಷುವಿನ ಅಂತರ್ಪಟದಲ್ಲಿ ನೋಡುತ್ತಲೆ ಕೇಳಿದ ನರ.

ಆ ದನಿಯಲ್ಲಿದ್ದ ಖೇದವನ್ನು ಗಮನಿಸಿ, ಏನೊ ಮಹತ್ತರವಾದದ್ದೆ ನಡೆದಿರಬೇಕೆಂದು ಅರಿವಾಗಿ ತನ್ನ ಸ್ಮೃತಿ ಸಂಚಯದ ತಿರುಗಣೆಯನ್ನು ಹಾಗೆಯೆ ಹಿಂದಕ್ಕುರುಳಿಸಿ ನೋಡಿದ ನಾರಾಯಣ. ಆಗ ಅಲ್ಲಿ ನಡೆದುದೆಲ್ಲ ಕಣ್ಮುಂದಿನ ದೃಶ್ಯದಂತೆ ಭಾಸವಾಗಿ ದೇವೇಂದ್ರನ ಚಿತಾವಣೆಯಿಂದ ಊರ್ವಶಿಯ ಸೃಷ್ಟಿಯವರೆಗಿನ ಎಲ್ಲಾ ಘಟನೆಗಳು ನಿಲುಕಿಗೆ ಸಿಕ್ಕಿಬಿಟ್ಟವು…

ಆ ಅರಿವಿನ ಜಾಗೃತಿಯಲ್ಲೆ, ” ಎಲಾ ದೇವೇಂದ್ರಾ..?!” ಎನ್ನುವ ಉದ್ಗಾರವೂ ಹೊರಬಿದ್ದಿತ್ತು, ಕೊಂಚ ಅಚ್ಚರಿಯ ಲೇಪನದೊಂದಿಗೆ. ಅಂತೆಯೆ ನರನ ತಪೋಶಕ್ತಿಯ ಸಂಚಯದಿಂದ ಕಳುವಾದ ತೇಜಸ್ಸು ಊರ್ವಶಿಯೆಂಬ ಅದ್ಭುತ ರೂಪಾಗಿ ಪರಿಣಮಿಸಿದ ಪ್ರಸಂಗವೂ ನಿಲುಕಿಗೆ ಸಿಕ್ಕಿ, ಆ ಯತ್ನದಲ್ಲೇ ನರನ ಶೇಖರಿಸಿಟ್ಟ ಭಂಡಾರದ ಶಕ್ತಿಪಾತವಾಗಿ ಹೋದ ಸಂಗತಿಯೂ ಗ್ರಾಹ್ಯವಾಗಿ ಹೋಯ್ತು.

ಒಂದರೆಗಳಿಗೆಯ ಮೌನದ ನಂತರ, ” ಸಾಕಷ್ಟು ತೀವ್ರವಾಗಿಯೆ ಶಕ್ತಿಪಾತವಾಗಿರುವಂತಿದೆಯಲ್ಲ?’ ಎಂದ ಪುನರ್ಖಚಿತಪಡಿಸಿಕೊಳ್ಳುವವನಂತೆ..

“ಹೌದು ನಾರಾಯಣ.. ಆ ಗಳಿಗೆಯಲ್ಲಿ ಅದರ ಸಮಷ್ಟಿ ಮೊತ್ತದ ಗ್ರಹಿಕೆ ಸಿಗಲಿಲ್ಲ… ಅದು ಮುಗಿವ ಹೊತ್ತಿಗೆ ತಡವಾಗಿ ಹೋಗಿತ್ತು..”

” ಸರಿ ಸುಮಾರು ಎಷ್ಟು ಶಕ್ತಿಪಾತವಾಯ್ತೆಂದು ಅಂದಾಜು ಸಿಕ್ಕಿತೆ ?”

” ಕಡಿಮೆಯೆಂದರು ಐನೂರು ವರ್ಷಕ್ಕೆ ಸಮನಾಗುವಷ್ಟು…”

“ಓಹ್..! ಅದು ಸಹಸ್ರಕವಚನ ಜತೆಯುದ್ದಕ್ಕೆ ಬೇಕಾಗುವ ಅರ್ಧದಷ್ಟು..!”

” ಹೌದು ನಾರಾಯಣ.. ಅರ್ಥಾತ್, ನಾನೀಗ ಸಿದ್ದತೆಯ ಮಟ್ಟಿಗೆ ಹೇಳುವುದಾದರೆ ಐನೂರು ವರ್ಷಗಳಷ್ಟು ಹಿಂದೆ ಬಂದಿರುವನೆಂದೆ ಲೆಕ್ಕ…ಆ ಹಿಂದೆ ಬಿದ್ದ ಮೊತ್ತವನ್ನು ಮತ್ತೆ ಕ್ರೋಢೀಕರಿಸಿಕೊಳ್ಳಬೇಕೆಂದರೆ ಮತ್ತೆ ಐನೂರು ವರ್ಷಗಳ ಕಸರತ್ತು ಮಾಡಬೇಕು ”

ಆ ಮಾತು ಕೇಳುತ್ತಿದ್ದಂತೆ ಅರೆಕ್ಷಣ ಮೌನವಾದ ನಾರಾಯಣ.. ಅದರರ್ಥ ಈ ಕೊನೆಯ ಬಾರಿಯ ಸಾವಿರ ವರ್ಷದ ಕದನ ನಡೆಸಿ ಮುಗಿಸಲು ನರನಿಗೆ ಸಮಯ ಸಾಕಾಗುವುದಿಲ್ಲ.. ಅದು ಮುಗಿವ ಮೊದಲೆ ಪ್ರಳಯವಾವರಿಸಿಕೊಂಡು ಸರ್ವನಾಶವಾಗಿ ಹೋಗಿರುತ್ತದೆ..

ಆ ಸಂಧಿಕಾಲದಲ್ಲಿ ತನ್ನುಳಿದ ಶಕ್ತಿಯನ್ನು ಸೂಕ್ಷ್ಮೀಕರಿಸಿಕೊಂಡು ಸಹಸ್ರಕವಚ ಮುಂದಿನ ಯುಗಕ್ಕೆ ಸುಲಭದಲ್ಲಿ ಪಲಾಯನ ಮಾಡಿಬಿಡಬಹುದು – ಪ್ರಳಯದ ಬಂಧ, ಒತ್ತಡಗಳನ್ನು ಅಧಿಗಮಿಸಿಕೊಂಡು.. ಹಾಗೆಂದು ಅರೆಬರೆ ತಪಶಕ್ತಿಯಲ್ಲು ಕಾದಾಡುವಂತಿಲ್ಲ.. ಅದು ದಾನವನ ಜತೆಗಿನ ಕದನಕ್ಕೆ ಸಾಕಾಗುವುದಿಲ್ಲ..

” ಪ್ರಳಯ ಕಾಲದ ಗಡಿಯಾರ ನಿಖರವೆಂದು ನಾನು ಬಲ್ಲೆ.. ಆದರೂ ಒಂದೈನೂರು ವರ್ಷಗಳ ಲೋಪಗಳನ್ನು ಹೀರಿಕೊಳ್ಳುವಷ್ಟು ಸಡಿಲ ಸ್ವಾತ್ಯಂತ್ರ, ಸ್ವೇಚ್ಛೆ ಇರುವುದಿಲ್ಲವೆ ? ಅಷ್ಟು ಉದಾರತೆಯ ದಾಯಕ್ಕೂ ಅವಕಾಶವಿರದಷ್ಟು ಶಿಸ್ತು, ನಿಯಮಬದ್ದವೆ ಈ ಪ್ರಳಯದ ಗಡಿಯಾರ ?” ಅದು ಸಾಧ್ಯವಿಲ್ಲವೆಂದು ಅರಿತಿದ್ದೂ ಕೇಳಿದ ನರ..

ಪ್ರಳಯದ ಬಗ್ಗೆ ಮಾತಾಡುವಾಗ ಅವರಿಬ್ಬರಿಗೂ ಅರಿವಿದೆ ಅದರ ಹಿನ್ನಲೆಯಲ್ಲಿರುವ ವಿದ್ಯಾಮಾನ. ನಿಜಕ್ಕೂ ಅದೊಂದು ವ್ಯೋಮಲೋಕದ ನಿಯಮಿತ ತಲ್ಲಣ. ಸದಾ ನಿರಂತರವಾಗಿ ಮತ್ತು ಸತತವಾಗಿ ಹಿಗ್ಗುತ್ತಾ, ತನ್ನ ಹೊರ ಪರಿಧಿಯಾಚೆಗೆ ವಿಸ್ತೃತವಾಗುತ್ತ ಇರುವ ಈ ವಿಶ್ವ, ಆ ಪ್ರಕ್ರಿಯೆಯಲ್ಲಿಯೆ ತನ್ನ ಸಾಂದ್ರತೆಯನ್ನು ತೆಳುವಾಗಿಸಿಕೊಳ್ಳುವ ಅನಿವಾರ್ಯಕ್ಕು ಸಿಕ್ಕಿಬೀಳುತ್ತದೆ. ತೀರಾ ತೆಳುವಾಗಿ ‘ವಿಶ್ವದ ಅಗಾಧ ಅವಕಾಶಕ್ಕೆ’ ತೂತು ಬೀಳದಂತಿರಬೇಕಾದರೆ ಆ ಸಾಂದ್ರತೆಯ ಮಟ್ಟ ಒಂದು ಕನಿಷ್ಠ ಮಟ್ಟದಲ್ಲಿರುವಂತೆ ಕಾದುಕೊಳ್ಳಬೇಕು…

ಯಾವಾಗ ವಿಶ್ವದ ಅರಿವಿಗೆ ತಾನು ತೀರಾ ತೆಳುವಾಗುತ್ತಿರುವೆನೆಂಬ ಖಚಿತ ಮಾಹಿತಿ ಸಿಗುತ್ತದೋ, ಆಗದು ತನ್ನ ವಿಸ್ತರಣಾ ಪ್ರವೃತ್ತಿಗೆ ತಾತ್ಕಾಲಿಕ ತಡೆ ಹಾಕಿ ದಿಕ್ಕು ಬದಲಿಸಿ ವಿರುದ್ಧ ದಿಕ್ಕಿನತ್ತ ಕುಗ್ಗತೊಡಗುತ್ತದೆ.. ಈ ಸಂಕುಚನದ ಚೆಲ್ಲಾಟ ಎಷ್ಟು ಘೋರವೆಂದರೆ ಅದು ನಡೆಯುವಾಗ ಉಂಟಾಗುವ ತಲ್ಲಣ, ತಳಮಳ, ಅಡ್ಡಬಂದ ಕಾಯಗಳ ಘೋರ ಢಿಕ್ಕಿ, ತಿಕ್ಕಾಟ, ಬಡಿದಾಟಕ್ಕೆ ಸಿಕ್ಕಿ ಏನೆಲ್ಲಾ ಆಗುತ್ತದೆಯೆಂದು ಹೇಳಲೂ ಆಗದಷ್ಟು ಭೀಕರ. ಆ ಪ್ರಕ್ರಿಯೆಯಲ್ಲಿ ನೇರ ಅಡ್ಡ ಬಂದವುಗಳು ಹೇಳಹೆಸರಿಲ್ಲದಂತೆ ನಷ್ಟವಾಗಿ ಹೋದರೆ, ಪರೋಕ್ಷವಾಗಿ ಅದರ ಹೊಡೆತಕ್ಕೆ ಸಿಕ್ಕ ಭುವಿಯಂತಹ ಗ್ರಹಕಾಯಗಳು ತಮ್ಮೆಲ್ಲ ಅಸ್ತಿತ್ವದ ಸ್ವರೂಪವನ್ನೆ ಕಳೆದುಕೊಂಡು ಗುರುತೇ ಸಿಗದಂತಹ ಚಹರೆಯುಟ್ಟು ನಿಲ್ಲುತ್ತವೆ – ಹೆಸರು ಹೇಳಲೂ ಉಳಿದಿಲ್ಲದ ಜೀವ ವೈವಿಧ್ಯದ ಮೂಕಸಾಕ್ಷಿಯಾಗುತ್ತ…

ಆದರೆ ಈ ಪ್ರಕ್ರಿಯೆ ಆರಂಭವಾಗುವ ವಿಶ್ವದ ತುದಿಯಿಂದ ಒಳಾವರಣಕ್ಕೆ ಬರುವ ಕಾಲಯಾನವೂ ಸಣ್ಣದೇನಲ್ಲ.. ಹೀಗಾಗಿ ವಿಶ್ವದಂಚಿನಲ್ಲಿ ಹೊರಗಿನ ಕಂಪನಗಳು ದಿಕ್ಕುಬದಲಿಸುತ್ತಿದ್ದ ಹಾಗೆ ಅದರ ಸಂದೇಶ ಸಿಕ್ಕಿಬಿಡುತ್ತದೆ ತರಂಗಾಂತರ ರೂಪದಲ್ಲಿ. ಆಗ ಇರುವ ಸಮಯಾವಕಾಶದಲ್ಲೆ ಮೂಲಭೂತವಾಗಿ ಬೇಕಾದ ಎಲ್ಲಾ ಸಮಸ್ತ ಜೀವನಿರ್ಜೀವ ಚರಾಚರ ವಸ್ತುಗಳ ನಮೂನೆಗಳನ್ನು ಮೂಲಜಡಶಕ್ತಿಯ ರೂಪಕ್ಕೆ ಪರಿವರ್ತಿಸಿ ಅದನ್ನೆಲ್ಲ ಒಂದೆಡೆ ಕ್ರೋಢೀಕರಿಸಿ ಸಾಗರದಲ್ಲಿ ತೇಲಿಬಿಡುವುದು ಈ ಸಂಧರ್ಭದಲ್ಲಿ ನಡೆಸುವ ಪ್ರಕ್ರಿಯೆ – ತಲ್ಲಣಗಳ ನಡುವಲ್ಲೆ ಹೇಗೊ ತೇಲುತ್ತ, ಮುಳುಗುತ್ತಾ ಎಲ್ಲಾದರು ಒಂದು ಕಡೆ ದಡ ಕಂಡುಕೊಳ್ಳಲೆಂದು…

ಹಾಗೇನಾದರೂ ಆದರೆ ಮತ್ತೆ ಮೊದಲಿನಿಂದ ಜೀವ ವಿಕಾಸ ಪ್ರಕ್ರಿಯೆ ಆರಂಭ.. ಬದಲಿಗೆ ಭೂ ಕಾಯವೇ ನಷ್ಟವಾಗಿ ಹೋದರೆ, ಆ ತೇಲುವ ಶಕ್ತಿಮಾತ್ರ ಎಲ್ಲೋ ಹೇಗೊ ನೆಲೆ ಕಂಡುಕೊಳ್ಳುತ್ತದೆ – ಯಾವುದೋ ಕ್ಷುದ್ರಕಾಯವಾಗಿಯೊ, ಜಡಕಾಯವಾಗಿಯೊ ವ್ಯೋಮದಲ್ಲಿ ಅಲೆದಾಡುತ್ತ…

ಹಾಗೆ ಮುಚ್ಚಿಟ್ಟು ಸುರಕ್ಷಿತವಾಗಿ ತೇಲಿಬಿಡುವುದನ್ನೆ ಹಿರಣ್ಯಗರ್ಭ, ಸ್ವರ್ಣಗರ್ಭ ಎನ್ನುವುದು… ಅದನ್ನು ಕೆಲವೊಮ್ಮೆ ಹಾಗೆ ಅಲ್ಲೇ ತೇಲಿಬಿಡದೆ, ಪ್ರಳಯದ ಹಾವಳಿ ಮುಗಿಸಿಕೊಂಡು ತಣ್ಣಗಾದ ಅಂಚಿನ ಅವಕಾಶಕ್ಕೆ ರವಾನಿಸಿ ಸಂರಕ್ಷಿಸುವುದು ಮತ್ತೊಂದು ವಿಧಾನ. ಆಗ ಭುವಿಯಲ್ಲಿ ಹಾವಳಿ ಮುಗಿದನಂತರ ವಾಪಸ್ಸಾಗಿಸಿಕೊಂಡು ಬೀಜರೂಪವಾಗಿ ಬಳಸುತ್ತ ಸೃಷ್ಟಿಯ ಮರುಸೃಷ್ಟಿ ಮಾಡಬಹುದು.

ಈ ವಿಶ್ವಸಂಕುಚನ ಪ್ರಳಯ ನಡೆಯುವ ಕಾಲದ ಅಂತರ ಕೋಟಿಕೋಟಿಗಳ ವರ್ಷಗಳದ್ದು.. ಆದರೆ ಇದರ ನಡುವೆ ಬೃಹತ್ ವ್ಯೋಮದ ನಡುವಿನ ಸಣ್ಣಸಣ್ಣ ವಲಯಗಳಲ್ಲಿ ಈ ರೀತಿಯ ಪ್ರಕ್ರಿಯೆಗಳು ಆಗ್ಗಾಗ್ಗೆ ನಡೆದೆ ಇರುತ್ತದೆ – ಬೃಹತ್ ವ್ಯೋಮದ ಮರಿತಲ್ಲಣಗಳನ್ನು ಪ್ರತಿನಿಧಿಸುವಂತೆ. ಈಗಲೂ ಪರಿಣಾಮ ಒಂದೆ ಆದರು ಹಾನಿ ಮಾತ್ರ ಬ್ರಹ್ಮಾಂಡ ಮಟ್ಟದ್ದಾಗಿರದೆ ಕೇವಲ ಆ ವಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ… ಆದರೆ ಈ ಸೀಮಿತ ವಲಯಗಳಲ್ಲಿ ಅಪಾರ ಶಕ್ತಿತೇಜ ಸಂಗ್ರಹಿಸಿದ ದೇವ – ದಾನವರು ಯಾರಾದರೂ ಸರಿ, ಅದನ್ನೇ ಉರುವಲಾಗಿ ಬಳಸಿ ತಪ್ಪಿಸಿಕೊಂಡು ವಲಯದಿಂದಾಚೆಗೆ ಜಾರಿಕೊಂಡುಬಿಡಬಹುದು – ಘನೀಕರಿಸಿದ ಜಡಶಕ್ತಿಯ ರೂಪದಲ್ಲಿ. ಸಹಸ್ರಕವಚನೂ ಕೂಡ ಹಾಗೆ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯ… ಆಮೇಲೇನಿದ್ದರು ಬರಿ ಮರು ಸ್ಥಳಾಂತರ ಮತ್ತು ಮರು ರೂಪಾಂತರವಾಗುವತನಕ ಕಾಯಬೇಕಷ್ಟೆ.

ಈ ಬಾರಿ ನರನಾರಾಯಣರು ಮಾತಾಡುತ್ತಿರುವುದು ಈ ಪುಟ್ಟ ವಲಯದ ಪ್ರಳಯದ ಕುರಿತೇ. ಈ ಬಾರಿ ಸೌರವ್ಯೂಹ ಸಮೇತ – ಭೂವಲಯದ ಪಾಳಿ – ಹೀಗಾಗಿ ಅವರ ಹತ್ತಿರ ಅದು ನಡೆಯುವ ಸಮಯದ ನಿಖರ ಮಾಹಿತಿಯಿದೆ . ಅದು ಕೇವಲ ದಿನ-ವಾರ-ತಿಂಗಳುಗಳ ಮಟ್ಟಿಗೆ ಏರುಪೇರಾಗಬಹುದೆ ವಿನಃ ವರ್ಷಾಂತರಗಳ ಲೆಕ್ಕದಲ್ಲಲ್ಲ.

” ಊಹೂಂ.. ನರ..ಅದು ಅಸಾಧ್ಯವೆಂದು ನಿನಗು ಗೊತ್ತು… ಕಾಲದ ಅನಾವರಣ ಶಕ್ತಿದ್ರವ್ಯ ಚಕ್ರದೊಡನೆ ಎಷ್ಟು ಬಲವಾಗಿ ನಿರ್ಬಂಧಿತವಾಗಿದೆಯೆಂದು ನಾನು ಹೇಳಬೇಕಿಲ್ಲ.. ಅಲ್ಲಿರುವ ಉದಾರತೆಯಂಚು ತೀರಾ ವಿಶೇಷ ಪರಿಸ್ಥಿತಿಯಲ್ಲಿ ಒಂದೆರಡು ವರ್ಷಗಳಿರಬಹುದೆ ಹೊರತು, ಇಷ್ಟು ದೊಡ್ಡದಲ್ಲ..”

” ಅಂದರೆ.. ಸಹಸ್ರ ಕವಚನ ಕೊನೆಯ ಕದನವನ್ನು ಮತ್ತು ವಧೆಯನ್ನು ಮುಂದಿನ ಯುಗಕ್ಕೆ ಪೂರ್ತಿಯಾಗಿ ಮುಂದೂಡದೆ ವಿಧಿಯಿಲ್ಲವೆ..”

“ಒಂದರ್ಥದಲ್ಲಿ ಅದು ನಿಜ.. ಆದರೆ ಪೂರ್ತಿ ಕದನವನ್ನು ಮುಂದೂಡಬೇಕೆಂದೇನೂ ಇಲ್ಲ..”

“ಮತ್ತೆ..”

” ನಿನ್ನ ತಪ ಯಥಾರೀತಿ ಮುಂದುವರೆದು ಸಹಸ್ರ ವರ್ಷಗಳ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಲಿ.. ನಂತರ ಯುದ್ದ ಆರಂಭವಾಗಲಿ – ಈ ಯುಗದಲ್ಲಿ ಮುಗಿಯದೆಂದು ಅರಿವಿದ್ದರೂ ಸಹ… ಈ ಕದನದಲ್ಲಿ ದಾನವನ ಗರಿಷ್ಠ ಎಷ್ಟು ಶಕ್ತಿ ಸಾಮರ್ಥ್ಯಗಳ ಪತನವಾಗುವುದು ಸಾಧ್ಯವೊ ಅಷ್ಟನ್ನು ಮಾಡಿ ಮುಗಿಸಿಬಿಡುವ.. ಅಂದರೆ ಅವನ ಬಲ ಈ ಯುಗದಲ್ಲೆ ಕುಗ್ಗಿದಷ್ಟು, ಮುಂದಿನದಕ್ಕೆ ಕೊಂಡೊಯ್ಯುವ ಮಾಪನದಲ್ಲಿ ಕಡಿತವುಂಟಾಗುತ್ತದೆ… ಅವನು ದುರ್ಬಲನಾದಷ್ಟು, ನಮ್ಮ ಕೆಲಸ ಸುಲಭವಾಗುತ್ತದೆ ಮುಂದಿನ ಯುಗದಲ್ಲಿ..”

ಅವನ ಮಾತು ಅರ್ಥವಾದವನಂತೆ ಮೌನವಾದ ನರ.. ಅವನಿಗು ಅದಕ್ಕಿಂತ ಮಿಗಿಲಾದ ದಾರಿ ಕಾಣುತ್ತಿರಲಿಲ್ಲ.. ಶಕ್ತಿ ನಿಭಾವಣೆಯ ವಿಷಯದಲ್ಲಿ ದೇವದಾನವರೆಂಬ ಬೇಧವಿಲ್ಲದೆ ಎಲ್ಲರ ಸ್ಥಾಯಿಯೂ ಒಂದೇ ಇರುತ್ತದೆ, ಅವರ ಶಕ್ತಿದ್ರವ್ಯಕ್ಕನುಗುಣವಾಗಿ..

ಅದೇ ಹೊತ್ತಿನಲ್ಲಿ ಕದನ ವಿರಾಮ ಸಮಯ ಮುಗಿಯುತ್ತಿರುವುದರ ನೆನಪಾಗಿ ಅವಸರದಲ್ಲೆ ಕೇಳಿದ ನಾರಾಯಣ,”ಅದಿರಲಿ.. ಅದೇನು ವಿಷಯ ? ಅಚ್ಚ ಬಿಳಿಯದಾದ ಸ್ವಚ್ಚ ಶುಭ್ರ ಶ್ವೇತಾಶ್ವವೊಂದನ್ನು ಸೃಜಿಸಿದೆಯಲ್ಲಾ?”ಎಂದ. ಅವನು ಕೇಳುತ್ತಿರುವುದು ಉಚ್ಚೈಶ್ರವಸ್ಸು ಎಂಬ ಒಂದೇ ಒಂದು ಕಪ್ಪು ಚುಕ್ಕಿಯೂ ಇರದಂತಹ ಅಚ್ಚಬಿಳಿಯ ಕುದುರೆಯ ಕುರಿತಾಗಿ.

” ಸಂಶೋಧನೆಯ ಹೊತ್ತಿನಲ್ಲಿ ಸರ್ವ ಸಂಪೂರ್ಣತೆಯಿರುವ ಪರಿಶುದ್ಧ ಆಯಾಮದ ಸೃಷ್ಟಿ ಸಾಧ್ಯವೆ ಎಂದು ನಡೆಸುತ್ತಿದ್ದ ಪ್ರಯೋಗದ ಫಲವದು.. ಮಿಕ್ಕೆಲ್ಲ ಕಲ್ಮಷದ ಅಂಶಗಳನ್ನು ಬೇರ್ಪಡಿಸಿ ಶುದ್ದ ಮೂಲದ್ರವ್ಯವನ್ನು ಮಾತ್ರ ಉಳಿಸಿಕೊಂಡು ಅದು ಹೊಸ ಪರಿಶುದ್ಧ ಜೀವಿಯಾಗುವ ಹಾಗೆ ಮಾರ್ಪಡಿಸಿದೆ..”

” ಆದರೆ.. ನಾನದನ್ನು ನೆಲದಲ್ಲಿ ಓಡುವ ಬದಲು ಗಗನ ಮುಖಿಯಾಗಿ ಹಾರಿದ್ದು ನೋಡಿದೆ?” ಎಂದು ನಕ್ಕ ನಾರಾಯಣ..

” ಓಹ್ ಅದೇ? ಆ ಹೊತ್ತಿನಲ್ಲೆ ಪಕ್ಷಿಯ ಹಾರಾಟ ತತ್ವವನ್ನು ಅಳವಡಿಸಿ ಹಾರುವ ಕುದುರೆಯನ್ನಾಗಿಸಬಹುದೆ ಎಂದು ಪರೀಕ್ಷಿಸಿದೆ..ಅಷ್ಟೆ..”

ಆ ಗಳಿಗೆಯಲ್ಲು ನಾರಾಯಣನಿಗೆ ನಗು ಬಂತು – ಆ ಕುದುರೆಯ ಬಾಲದಲ್ಲಿ ಕಪ್ಪು ಮಚ್ಚೆಯಿದೆಯೆಂದು, ಇಲ್ಲವೆಂದು ಪರಸ್ಪರ ತಮ್ಮಲ್ಲೆ ವಾದಿಸುತ್ತ, ಕಚ್ಚಾಡುತ್ತ, ಗುದ್ದಾಡಿಕೊಂಡ ವಿನತೆ, ಕದ್ರೆಯರೆಂಬ ಸೋದರಿಯರಿಬ್ಬರು ಪಂಥಕ್ಕೆ ಬಿದ್ದು ಗದ್ದಲ ಮಾಡಿಕೊಂಡ ಕಥೆಯನ್ನು ನರನಿನ್ನೂ ಗಮನಿಸಿದಂತಿಲ್ಲ…

ಅದರ ಸಲುವಾಗಿ ಮಗ ಗರುಡನೊಡನೆ ಸವತಿ ಕದ್ರು ಮತ್ತವಳ ಸರ್ಪಸಂತಾನಕ್ಕೆ ದಾಸಿಯಾಗಬೇಕಾದ ವಿನತೆಯ ಪಾಡಿಗೆ ತನ್ನ ಆ ಸೃಷ್ಟಿಯೆ ಕಾರಣವೆಂದು ಅರಿತರೆ ಸಹಜವಾಗಿಯೆ ಆತಂಕಗೊಳ್ಳುತ್ತಾನೆ.. ‘ಇರಲಿ ಸದ್ಯಕೆ ಅವನಿಗದನ್ನು ನೆನಪಿಸಿ ಚಂಚಲಿತನಾಗಿಸುವ ಬದಲು, ಅವನನ್ನು ಅವನ ಪಾಡಿಗೆ ತಪಸ್ಸಿಗೆ ಬಿಟ್ಟುಬಿಡುವುದೊಳಿತು. ಅವನೇ ಸೂಕ್ತ ಸಮಯದಲ್ಲಿ ಅದನ್ನರಿತುಕೊಳ್ಳಲಿ’ ಎಂದು ತೀರ್ಮಾನಿಸಿದ.

“ಸರಿ..ಸರಿ.. ಈ ಕದನವೆಲ್ಲ ಮುಗಿದ ಮೇಲೆ ಆ ಸಂಶೋಧನೆಗಳತ್ತ ಹೆಚ್ಚು ಗಮನ ನೀಡಬೇಕು.. ನಾನೀಗಲೆ ವಿರಮಿಸುವೆ.. ಕದನ ವಿರಾಮ ಮುಗಿಯುತ್ತಾ ಬಂತು” ಎಂದ ನಾರಾಯಣ.

“ಸರಿ..ಶುಭವಾಗಲಿ” ಎಂದು ನರ ತಾನೂ ತನ್ನ ಅಂತರ್ತಪೋ ಲೋಕಕ್ಕೆ ನಿರ್ಗಮಿಸುವ ಸಲುವಾಗಿಯೇನೊ ಅನ್ನುವಂತೆ ಕಣ್ಮುಚ್ಚಿದ.

(ಇನ್ನೂ ಇದೆ)

(Link to next episode 26: https://nageshamysore.wordpress.com/2016/03/13/00583-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%ac-%e0%b2%89%e0%b2%9a%e0%b3%8d%e0%b2%9a%e0%b3%88%e0%b2%b6/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s