00583. ಅಹಲ್ಯಾ ಸಂಹಿತೆ – ೨೬ (ಉಚ್ಚೈಶ್ರವಸ್ಸು)


00583. ಅಹಲ್ಯಾ ಸಂಹಿತೆ – ೨೬ (ಉಚ್ಚೈಶ್ರವಸ್ಸು)
____________________________________

(Link to previous episode 25 : https://nageshamysore.wordpress.com/2016/03/12/00581-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%ab/)

ಉಚ್ಚೈಶ್ರವಸ್ಸುವಿನ ಹೆಸರಿನಲ್ಲಿ ಉದ್ಭವವಾಗಿದ್ದ ಆ ಶ್ವೇತಾಶ್ವವೇನು ಅಂತಿಂತಹ ಸಾಮಾನ್ಯ ಸೃಷ್ಟಿಯಾಗಿರಲಿಲ್ಲ….!

ನಿರಂತರ ಅವಿಷ್ಕಾರ, ಸಂಶೋಧನೆಗಳ ಮೂಸೆಯಿಂದ ಹೊರಬರುತ್ತಿದ್ದ ಅಸಂಖ್ಯಾತ ಕೌತುಕಗಳಲ್ಲಿ ಕೆಲವು ಮಾತ್ರ ಊಹಿಸಲು ಆಗದ ಅಸೀಮ ವಿಸ್ಮಯ ಸ್ತರದ್ದವಾದರು, ಹೋಲಿಕೆಯನ್ನು ಹೊರತು ಪಡಿಸಿದರೆ, ಪ್ರತಿಯೊಂದೂ ತಮ್ಮದೇ ಆದ ವಿಶಿಷ್ಠ ಛಾತಿ, ಚಾತುರ್ಯವುಳ್ಳವು… ಆದರೆ ಆ ಗಳಿಗೆಯಲ್ಲಿ ಅವಿಷ್ಕೃತಗೊಂಡು ಹೊಮ್ಮುತ್ತಿದ್ದ ಅಸಂಖ್ಯಾತ ಶೋಧನೆಗಳ ನಡುವೆ ತೀರಾ ವಿಶೇಷವಾದುವಷ್ಟೆ ಹೆಚ್ಚು ಪ್ರಚಲಿತಗೊಳ್ಳುತ್ತಿದ್ದ ಕಾರಣ ಎಲ್ಲರು ಎಲ್ಲದರ ಕುರಿತು ಅರಿತಿರುವ ಸಾಧ್ಯತೆ ಇರಲಿಲ್ಲ.

ಆದರೆ ಉಚ್ಚೈಶ್ರವಸ್ಸುವಿನ ಕಥನ ಅಂತದ್ದರಲ್ಲೊಂದಾಗಿರಲಿಲ್ಲ….

ಅದಕ್ಕೆ ಮುಖ್ಯ ಕಾರಣ ಅದರ ಧವಳ ಶ್ವೇತ ಶುಭ್ರ ಬಣ್ಣದ ಜತೆಗೆ ಅದು ಹಾರಲು ಬಲ್ಲ ಕುದುರೆಯೆಂಬ ಮೊಟ್ಟ ಮೊದಲ ಖ್ಯಾತಿಗು ಪಾತ್ರವಾಗಿದ್ದುದು. ಅದುವರೆವಿಗು ಯಾರೂ ಕಂಡಿರದ ಪರಿಪೂರ್ಣ ಶುದ್ಧ ಬಿಳುಪು ಹೊದಿಕೆಯನ್ನೆ ತೊಗಲಾಗಿಸಿಕೊಂಡ ಅದರ ಕಣಕಣದ ಮಟ್ಟದಲ್ಲೂ ಬರಿಯ ಶ್ರೇಷ್ಠ ತಳಿಯ ಧನಾತ್ಮಕ ಅಂಶಗಳನ್ನು ಮಾತ್ರವೆ ಉಳಿಸಿಕೊಂಡು, ದೌರ್ಬಲ್ಯಕ್ಕೆ ಕಾರಣವಾದ ಋಣಾತ್ಮಕ ಅಂಶಗಳನ್ನು ನಿಷ್ಕ್ರಿಯಗೊಳಿಸಿದ ಕಾರಣ, ಹುಡುಕಿದರೂ ದೋಷ ಕಾಣದಷ್ಟು ಅಪ್ಪಟ ಪರಿಶುದ್ಧತೆ ಅದರ ಹೆಗ್ಗುರುತಾಗಿ, ತನ್ನ ಮೊಹರು ಒತ್ತಿಬಿಡುತ್ತಿತ್ತು ನೋಡುಗರ ಕಣ್ಣಲ್ಲಿ.

ಅದರಲ್ಲಿನ ಅದಾವ ಪ್ರಕ್ರಿಯೆ ಸಕ್ರಿಯವಾಗಿ ಅದನ್ನು ನಿರಂತರ ಶುಭ್ರವಾಗಿಡುತ್ತಿತ್ತೊ – ಅದೆಲ್ಲೆ ಸುತ್ತಾಡಿ ಬಂದರು, ಯಾವುದೆ ಕಲ್ಮಷಗಳಲ್ಲಿ ನೆಂದು, ಮಿಂದು ಬಂದರು ಅದರ ಕೋಶಕಣದಿಂದೇನೊ ತಂತಾನೆ ಸ್ರವಿಸಿಕೊಂಡು ಅದಕ್ಕಾವ ಕೊಳೆಯೂ ಅಂಟಿ ಕೂರದಂತೆ ಸ್ವಚ್ಚಗೊಳಿಸಿಬಿಡುತ್ತಿತ್ತು. ಹೀಗಾಗಿ ಅದನ್ನು ಕಂಡವರಾರು ಅದನ್ನು ಅಚ್ಚ ಬಿಳಿಯ ನವಿರಾದ ಪುಷ್ಪಗುಚ್ಚದಂತೆ ಕಾಣುವರೆ ಹೊರತು ಇಡೀ ಮೈಯಿನ ಯಾವುದೆ ಭಾಗದಲ್ಲಿ ಒಂದು ಸಣ್ಣ ಚುಕ್ಕೆಯನ್ನು ಕಾಣಲಶಕ್ಯ. ಆ ಬಿಳುಪಲ್ಲು ಸಹ ಒಂದೇ ಸಾಂದ್ರತೆ, ಒಂದೆ ನುಣುಪು, ಒಂದೆ ನಯ, ಒಂದೆ ಸ್ತರದ ಹೊಳಪು – ನೋಡಿದೆಲ್ಲೆಡೆಯೂ ಒಂದೆ ಸಮಾನಾದ ಅಂತಃಸತ್ವ…

ತನ್ನ ಸೊಬಗು ಸೊಗಡನ್ನರಿತ ಅಪ್ಸರೆಯಂತೆ ಆ ಅಶ್ವವೂ ಸಹ ಯಾವ ನಿರ್ಭಿಡೆಯೂ ಇಲ್ಲದೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಓಡಾಡಿಕೊಂಡು ನಿರಾತಂಕವಾಗಿ ಕಾಲ ಕಳೆಯುತ್ತಿತ್ತು. ಬೇಕೆಂದಾಗ ಭೂಮಿಗಿಳಿಯುತ್ತಾ, ಹಸಿರು ಕಂಡೆಡೆ ಹುಲ್ಲು ಮೇಯ್ದು ಮುನ್ನಡೆಯುತ್ತ ಕೆಲವೊಮ್ಮೆ ನೆಲದ ಮೇಲೆ, ಮತ್ತೆ ಕೆಲವೊಮ್ಮೆ ಗಗನ ಮುಖಿಯಾಗಿ ಆಕಾಶದಲ್ಲಿ ಹಾರಿಕೊಂಡು ವಿಹರಿಸುತ್ತಿದ್ದ ಅದರ ಸ್ವೇಚ್ಛೆ, ಸ್ವಾತಂತ್ರಕ್ಕೆ ದೇವತೆಗಳೂ ಕರುಬುವವರೆ. ಅದರಲ್ಲು ತನ್ನ ಜೈವಿಕ ಶಕ್ತಿಯ ಬಲದಲ್ಲೆ ಹಾರಬಲ್ಲ ಅದರ ಸಾಮರ್ಥ್ಯ ಎಲ್ಲರಿಗು ವಿಸ್ಮಯವೆ !

ಅದನ್ನು ಸಾಧ್ಯವಾಗಿಸಲು ನರನ ಕಲಿತ ವಿದ್ಯೆಯ ಪ್ರತಿಯೊಂದು ಅಂಶವನ್ನು ವ್ಯಯಿಸಬೇಕಾಗಿ ಬಂದಿತ್ತು. ಆದರೆ ಅದರ ಮುಖ್ಯ ಚಾಲಕಶಕ್ತಿಯೆಂದರೆ ಅದರಲ್ಲಂತರ್ಗತವಾಗಿದ್ದ ಸಿದ್ದಾಂತ. ಹಾರುವ ಖಗಮೃಗವರ್ಗದ ಶ್ರೇಷ್ಠ ತಳಿಯಿಂದಾಯ್ದ ಶುಕ್ಲಕಣಗಳ ತಂತುಗಳನ್ನು ಅಶ್ವದ ಶುದ್ಧಿಕರಿಸಿದ ಕಣತಂತುಗಳೊಡನೆ ಸಮೀಕರಿಸಿ, ಪಕ್ಷಿ ಸಂಕುಲದ ಮೂಲ ಜಾತಕ ಸೂತ್ರಗಳನ್ನು ಆ ಕುದುರೆಯ ಮೂಲಕ್ಕೆ ವರ್ಗಾಯಿಸಿಬಿಟ್ಟಿದ್ದ ಕಾರಣ, ನೈಸರ್ಗಿಕ ಸಹಜವೊ ಎಂಬಂತೆ ಅದರಲ್ಲಿ ಹಾರಲು ಬೇಕಾದ ಮೂಲವಿನ್ಯಾಸ ಅವಿರ್ಭವಿಸಿಬಿಟ್ಟಿತ್ತು.

ಇನ್ನು ಏನಿದ್ದರು ಅದರ ಚಾಲನೆಗೆ ತಕ್ಕಂತೆ ಬಳಸಲು ಬೇಕಾದ ಶಕ್ತಿಯ ಮೂಲ ಸಿಕ್ಕಿದರೆ ಸರಿ ಅದು ಹಾರಲು ಸಿದ್ದ. ಉರಿಯುವ ನಿರಂತರ ಕೆಂಡದಂತೆ ಸದಾ ಸುಡುತ್ತಾ ಬೆಳಗುತ್ತಿದ್ದ ಸೂರ್ಯದೇವನ ಪ್ರಖರ ಶಕ್ತಿಗಿಂತ ಮತ್ತಾವ ಮೂಲದ ಅಗತ್ಯವಿದ್ದೀತು ? ಹುಲ್ಲು ಮೇಯುವ ನೆಪದಲ್ಲಿ ನೆಲದಲ್ಲಿ ನಿಂತಾಗ ತನಗೆ ಬೇಕಾದ ಸೌರಶಕ್ತಿಯನ್ನು ಹೀರಿಕೊಳ್ಳುತ್ತ ಇಂಧನ ಭರ್ತಿ ಮಾಡಿಕೊಳ್ಳುವುದು ಅದರ ಸಾಮಾನ್ಯ ವಿಧಾನವಾದರೂ ಅದೂ ನೋಡುತ್ತಿದ್ದವರ ಗಮನ, ಪರಿಗಣನೆಗೆ ಸಿಕ್ಕದಂತೆ ನಡೆಯುತ್ತಿದ್ದ ಕಾಯಕ. ಇನ್ನು ತುಂಬಿದ ಕಸುವಿನೊಡನೆ ಶಕ್ತಿಯ ಚೀಲದಂತಿರುತ್ತಿದ್ದ ರೆಕ್ಕೆಗಳೆರಡನ್ನು ಒಮ್ಮೆ ಬೀಸಿದರೆ ಸಾಕು – ಭುವಿಯ ಗುರುತ್ವದ ಬಲವನ್ನೆಲ್ಲ ಒಂದೆ ಬೀಸಿಗೆ ಅಧಿಗಮಿಸಿಕೊಳ್ಳುತ್ತ ಮೇಲೇರಿಬಿಡುತ್ತಿತ್ತು ತನ್ನ ಹಗುರಾತಿಹಗುರ ದೇಹದ ಟೊಳ್ಳು ಅಸ್ಥಿಗಳಲ್ಲಾದ ಭಾರವನ್ನು ಹೂವಿನಂತೆ ಮೇಲೆತ್ತಿಕೊಂಡು ಹಾರುತ್ತ. ಅಂತಹ ನೆಲದ ಜೀವಿ ಹಾರಬಲ್ಲದೆಂದರೆ ಎಲ್ಲರಿಗು ಸೋಜಿಗ ತಾನೆ ? ಇನ್ನು ಅದರ ಗುಣ ಲಕ್ಷಣಗಳು ಜತೆ ಸೇರಿ ಅದು ವಿಸ್ಮಯ ಜಗದ ವಿಸ್ಮಯವೆಂಬಂತೆ ಮನೆ ಮಾತಾಗಿ ಹೋಗಿದ್ದರಲ್ಲಿ ಅತಿಶಯವಾದರೂ ಏನು ?

ಕುಚೋದ್ಯಕ್ಕೆಂದು ಅದರ ಬಿಳುಪಿಗೆ ಬಣ್ಣ ಹಚ್ಚಲೊ, ಕಪ್ಪು ಬಳಿಯಲೊ ಹೊರಟ ಯಾರ ಯತ್ನವು ಸಫಲವಾಗದೆ ಅದರ ಪ್ರಖ್ಯಾತಿಗೆ ಮತ್ತಷ್ಟು ಮೆರುಗಿತ್ತಂತಾಗಿತ್ತು. ತಾಯಿ ಕದ್ರುವಿನಣತಿಯಂತೆ ಹೇಗಾದರು ಅದರ ಮೈಯಲ್ಲೊಂದು ಕುಂದನ್ನಾರೋಪಿಸಬೇಕೆಂದು ಹೊರಟ ನಾಗಗಳು ಆ ಯತ್ನದಲ್ಲಿ ಸಫಲರಾಗದೆ ಕಪ್ಪು ಮೊರೆ ಹಾಕಿಕೊಂಡು ಮರಳಿದ್ದರು. ಆ ರೊಚ್ಚಿಗೆ ಕೊನೆಗೆ ಅದರ ಬಾಲಕ್ಕೆ ಸುತ್ತಿಕೊಂಡು ಕಪ್ಪಾಗಿ ಕಾಣಿಸುವಂತೆ ಮಾಡಿ ವಿನತೆಯ ಕಣ್ಣಿಗೆ ಮಣ್ಣೆರಚುವಲ್ಲಿ ಸಫಲವಾಗಿದ್ದು ಮಾತ್ರವಲ್ಲದೆ ತಾಯಿಯ ಆಸೆಯನ್ನು ತೀರಿಸುವಲ್ಲಿ ಹೇಗೊ ಸಫಲವಾಗಿದ್ದವು.

ಆದರೆ ಅದೆಲ್ಲಕ್ಕು ಮೀರಿದ ಮಹತ್ವದ, ಊರ್ವಶಿಯಷ್ಟೆ ಪ್ರಾಮುಖ್ಯತೆಯುಳ್ಳ ಪರೋಕ್ಷ ಪಾತ್ರವೊಂದನ್ನು ತನಗರಿವಿಲ್ಲದಂತೆಯೆ ಆ ಅಶ್ವ ವಹಿಸುವುದರಲ್ಲಿತ್ತು ಗೌತಮನ ಸಂಶೋಧನಾ ಯಜ್ಞದಲ್ಲಿ. ಅದು ನೇರ ಪಾಲ್ಗೊಳ್ಳದ ಕಾರಣ ಅದಕ್ಕೆ ಅರಿವಿಲ್ಲದಿರುವುದೇನೊ ಸಹಜವೆ…

ಆದರೆ ಅದು ತನ್ನ ಅವಿಷ್ಕಾರ ಯಜ್ಞದ ಅತಿ ಪ್ರಮುಖ ತಿರುವಿನ ಮೂಲಗ್ರಾಹಿ ಸರಕಾಗುವುದೆಂದು ಆ ಗಳಿಗೆಯಲ್ಲಿ ಸ್ವತಃ ಗೌತಮನಿಗೂ ಗೊತ್ತಿರಲಿಲ್ಲ..!

********************

ಅಧ್ಯಾಯ – 09
____________

ಅದಾದದ್ದಾದರು ಒಂದು ರೀತಿಯ ವಿಚಿತ್ರ ಸನ್ನಿವೇಶದಲ್ಲಿ…

ಗೌತಮ ಕಟ್ಟಿದ ತಂಡಗಳಲ್ಲಿ ಹಿಂದೆಂದೂ ಕಾಣದ ಬಿರುಸಿನ ತ್ವರಿತಗತಿಯಲ್ಲಿ ಚಟುವಟಿಕೆಗಳು ನಡೆಯಲಾರಂಭಿಸಿದ್ದವು. ಪ್ರತಿ ಗುಂಪಿಗು ವಹಿಸಿಕೊಟ್ಟ ಜವಾಬ್ದಾರಿಯ ಮೇಲ್ವಿಚಾರಣೆ ಮಾತ್ರವಲ್ಲದೆ ಅವೆಲ್ಲದರ ಸಮನ್ವೀಕರಣ ಮತ್ತು ಸರಿಸೂಕ್ತ ಹೊಂದಾಣಿಕೆ ಮಾಡಿ ತಾಳೆನೋಡುವ ಕಾರ್ಯವನ್ನು ತನ್ನ ಬಳಿಯೆ ಇಟ್ಟುಕೊಂಡಿದ್ದ ಗೌತಮ ಮುನಿ. ಅಚ್ಚರಿಯೆಂಬಂತೆ ಇದರಲ್ಲಿ ಅವನ ಸಹಾಯಕ್ಕೆ ಟೊಂಕಕಟ್ಟಿ ನಿಂತವಳು ಊರ್ವಶಿ..

ಆ ಸಂಶೋಧನೆಯ ಮೇಲದೇನು ಮೋಹವೊ, ಕೌತುಕವೊ, ಕುತೂಹಲವೊ.. ತನಗರಿವಾಗದ ಕ್ಲಿಷ್ಟ ವಿಷಯಗಳನ್ನು ಓದಿ ತಿಳಿಯುವ, ಗೊತ್ತಾಗದ ವಿಷಯವನ್ನು ತನ್ನಿಂದಲೆ ಕೇಳಿ ತಿಳಿಯುವ ಅವಳ ಆಸಕ್ತಿಯನ್ನು ಗಮನಿಸಿದ ಗೌತಮ ಮುನಿಯೆ ಅವಳನ್ನು ಬರಿಯ ಪ್ರಯೋಗಕ್ಕೆ ಮಾತ್ರ ಸೀಮಿತಗೊಳಿಸದಿರಲು ನಿಶ್ಚಯಿಸಿ, ತನ್ನ ಆಪ್ತ ಸಹಾಯಕಿಯ ಪಟ್ಟಕ್ಕೇರಿಸಿಬಿಟ್ಟಿದ್ದ. ಇದರಿಂದ ಈಗ ಹೆಚ್ಚು ಕಡಿಮೆ ಸದಾ ಕಾಲವು ಅಲ್ಲೆ ಇರಬೇಕಾದ ಪರಿಸ್ಥಿತಿ ಊರ್ವಶಿಯದು. ಗೌತಮನೆ ಆ ವಿಷಯವನ್ನು ದೇವೇಂದ್ರನಿಗೆ ಅರುಹುತ್ತ, ಅವನ ನೇರ ಒಪ್ಪಿಗೆಯನ್ನು ಪಡೆದುಕೊಂಡುಬಿಟ್ಟಿದ್ದ.

ಆಚ್ಚರಿಯೆಂಬಂತೆ ದೇವರಾಜನೂ ಇದಕ್ಕೆ ಖುಷಿಯಿಂದಲೆ ಸಮ್ಮತಿಸಿದ್ದ – ಅವಳೆದುರಿನಲ್ಲಿರುವಾಗ ಉಂಟಾಗುವ ಕೀಳರಿಮೆಯ ಭಾವ ತಪ್ಪುವುದಲ್ಲ ಎಂಬ ಕಾರಣಕ್ಕೊ, ಅಥವಾ ಈ ಮೂಲಕ ಅಲ್ಲೇನು ನಡೆಯುತ್ತಿದೆಯೆನ್ನುವ ಆಳವಾದ ವಿವರಗಳನ್ನು, ಊರ್ವಶಿಯ ಮೂಲಕ ಸುಲಭದಲ್ಲಿ ತಿಳಿಯಬಹುದೆನ್ನುವ ಸಂತಸಕ್ಕೊ. ಅವಳ ಹೆಗಲಿಗೆ ಸಕಲ ತಂಡಗಳ ಚಟುವಟಿಕೆಗಳನ್ನು ಸಮನ್ವಯಿಸುವ ಹೊಣೆ ಹೊರಿಸಿ, ತನ್ನ ಕೆಲಸವನ್ನು ಹಗುರ ಮಾಡಿಕೊಂಡಿದ್ದ ಗೌತಮ.

ಆದರೆ ಅವನೂ ನಿರೀಕ್ಷಿಸದಿದ್ದ ವಿಷಯವೆಂದರೆ ಅವಳದನ್ನು ಅಷ್ಟು ಸಮರ್ಥವಾಗಿ ನಿಭಾಯಿಸಬಲ್ಲಳೆಂಬುದು. ಯಾವ ಹಿಂಜರಿಕೆ, ಕೀಳರಿಮೆ, ಆತಂಕಗಳಿಲ್ಲದೆ ವರ್ಷಾಂತರಗಳಿಂದಲು ಆ ವಿಷಯದಲ್ಲಿ ನುರಿತ ಅನುಭವಿಯಂತೆ, ಲೀಲಾಜಾಲವಾಗಿ ನಿರ್ವಹಿಸತೊಡಗಿದ್ದಳು.. ಪರಿಣಿತರಿಗು ಸಾಮಾನ್ಯ ಗ್ರಹಿಕೆಗೆ ಸಿಗದ ವಿಷಯಗಳನ್ನು ಅವಳು ಅರ್ಥ ಮಾಡಿಕೊಂಡು ನಿಭಾಯಿಸುತ್ತಿದ್ದ ರೀತಿ ಗೌತಮನಿಗು ಅತ್ಯಚ್ಚರಿ, ವಿಸ್ಮಯದ ವಸ್ತುವಾಗಿತ್ತು. ಅವಳು ಪರಿಣಿತಳಲ್ಲವೆಂಬುದನ್ನೂ ಮರೆತು ಅವಳೊಡನೆ ಸುಧೀರ್ಘ ಚರ್ಚೆಗಿಳಿದುಬಿಡುತ್ತಿದ್ದ ಎಷ್ಟೋ ಬಾರಿ..!

ಅಂದು ಅದೇ ರೀತಿಯ ಚರ್ಚೆಯಲ್ಲಿ ತಲ್ಲೀನರಾಗಿದ್ದ ಆ ಒಂದು ಗಳಿಗೆ..

” ಬಾ ಊರ್ವಶಿ.. ಕುಳಿತುಕೊ.. ಎಲ್ಲವೂ ಸೂಕ್ತವಾಗಿ ಯೋಜನಾಬದ್ದವಾಗಿ ನಡೆಯುತ್ತಿದೆ ತಾನೆ ?” ಪ್ರತಿಬಾರಿಯಂತೆ ಚರ್ಚೆಯ ಮುನ್ನ ಯಥಾರೀತಿಯ ಉಸ್ತುವಾರಿ ಪ್ರಶ್ನೆಯನ್ನು ಕೇಳಿದ್ದ ಗೌತಮ.

” ನಡೆಯುತ್ತಿದೆ ಗೌತಮ… ನಿಜ ಹೇಳಬೇಕೆಂದರೆ ಎಲ್ಲರೂ ತಂತಮ್ಮ ಗುರಿಯ ಹಾದಿಯಲ್ಲಿ ನಿರೀಕ್ಷೆಗಿಂತ ಒಂದೆರಡು ಹೆಜ್ಜೆ ಮುಂದೆಯೆ ಇದ್ದಾರೆ….”

” ಅಂದ ಮೇಲೇಕೆ ನಿನ್ನ ದನಿಯಲ್ಲಿ ಏನೊ ಅನುಮಾನದ ಎಳೆ ? ಅವರು ಹಿಡಿದ ಪಥ ಸರಿಯಿಲ್ಲವೆಂದು ನಿನ್ನನಿಸಿಕೆಯೆ ?”

“ಹಾಗೇನೂ ಇಲ್ಲಾ ಗೌತಮ… ಅವರು ಹಿಡಿದು ಹೊರಟಿರುವ ಪಥ ನೀನು ಹಾಕಿಕೊಟ್ಟ ಮೇಲ್ಪಂಕ್ತಿಗೆ ಅನುಸಾರವಾಗಿಯೆ ಇದೆ.. ಹೀಗಾಗಿ ಅದರಲ್ಲೇನು ದೋಷ ಹುಡುಕುವಂತಿಲ್ಲ..”

ಕುಳಿತಲ್ಲಿಂದ ಎದ್ದು ನಿಂತವನೆ ಗೌತಮ ಊರ್ವಶಿಯ ಆಸನದ ಹತ್ತಿರಕ್ಕೆ ಬಂದು ಅರೆಗಳಿಗೆ ಅವಳನ್ನೆ ನೇರವಾಗಿ ದಿಟ್ಟಿಸಿದ.. ನಂತರ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ” ಊರ್ವಶಿ… ಅದೇನು ನಿನ್ನ ಮನದಲ್ಲಿದೆಯೆಂದು ಹೇಳಿಬಿಡಬಾರದೆ ? ಅದು ನಿಖರವೊ, ಅಲ್ಲವೊ ಎಂಬ ಅನುಮಾನವಿದ್ದರೂ ಸಹ ಹೇಳಿಬಿಡುವುದರಿಂದ ಕನಿಷ್ಠ ಅದರ ಸೂಕ್ತಾಸುಕ್ತತೆಗಳನ್ನು ತಾಳೆ ನೋಡಿದಂತಾಗುವುದಲ್ಲವೆ ?” ಎಂದ ಕಳಕಳಿಯ, ನಿಜಾಯತಿಯ ದನಿಯಲ್ಲಿ..

ಅವನ ಮಾತು ಮುಗಿದು ಕೆಲಕ್ಷಣಗಳವರೆಗು ಏನು ಪ್ರತಿಯಾಡದೆ ಮೌನದಲ್ಲೆ ಕುಳಿತಿದ್ದಳು ಊರ್ವಶಿ.. ಬಹುಶಃ ಹೇಗೆ ಹೇಳಬೇಕೆಂದು ಮನದಲ್ಲೆ ರೂಪಿಸಿಕೊಳ್ಳುತ್ತಿದ್ದಳೇನೊ? ಅಥವಾ ಹೇಳಬೇಕಾದ ಉತ್ತರದ ಸ್ಪಷ್ಟತೆಯಿಲ್ಲದ ಕಾರಣ ಅನುಮಾನಿಸುತ್ತಿದ್ದಳೊ? ಅದೆಂತೆ ಇದ್ದರೂ ಗೌತಮನ ಮಾತಿನಿಂದ ಅವಳಿಗು ಸ್ವಲ್ಪ ನಿರಾಳವಾದಂತೆನಿಸಿ, ನಿಧಾನವಾಗಿ ತೂಗಿ ತೂಗಿ ಆಡುವಂತೆ ಒಂದೊಂದೆ ಪದಗಳನ್ನು ಜೋಡಿಸತೊಡಗಿದಳು..

(ಇನ್ನೂ ಇದೆ)

(Link to next episode 27: https://nageshamysore.wordpress.com/2016/03/13/7967/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s