00584. ಅಹಲ್ಯಾ ಸಂಹಿತೆ – ೨೭ (ಊರ್ವಶಿ ಗೌತಮ ಸಂವಾದ)


00584. ಅಹಲ್ಯಾ ಸಂಹಿತೆ – ೨೭ (ಊರ್ವಶಿ ಗೌತಮ ಸಂವಾದ)

(Link to previous episode 26: https://nageshamysore.wordpress.com/2016/03/13/00583-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%ac-%e0%b2%89%e0%b2%9a%e0%b3%8d%e0%b2%9a%e0%b3%88%e0%b2%b6/)

” ಗೌತಮ, ಈ ನಿಟ್ಟಿನಲ್ಲಿ ಇಟ್ಟ ಹೆಜ್ಜೆ ಸೂಕ್ತವೆನ್ನುವುದರಲ್ಲಿ ನನಗೇನೂ ಸಂದೇಹವಿಲ್ಲ.. ಆದರೆ, ಈಗ ಕ್ರೋಢೀಕರಿಸಲ್ಪಟ್ಟ ಮಾಹಿತಿಗಳ ರಾಶಿ ನೋಡಿರುವೆಯ..? ಕೋಟ್ಯಾಂತರ ಸಾಧ್ಯತೆಗಳ ಅಗಣಿತ ಸಂಯೋಜನೆಗಳನ್ನು ಒಂದೊಂದಾಗಿ ಪರೀಕ್ಷಿಸುತ್ತ ಅದರ ಸಾಧ್ಯಾಸಾಧ್ಯತೆಗಳನ್ನು ಪರಾಮರ್ಶಿಸಿ ಸಾಧುವಾಗಿ ಕಂಡವನ್ನು ಉಳಿಸಿಕೊಂಡು ಮಿಕ್ಕವನ್ನು ಬದಿಗೆ ಸರಿಸಬೇಕು..”

” ಹೌದು.. ಸಂಶೋಧನೆಯ ಸೂತ್ರಬದ್ಧ ಕಾರ್ಯಾಚರಣೆಯಲ್ಲಿ ಯಾವೊಂದು ಸಣ್ಣ ಸಾಧ್ಯತೆಯೂ ಕಣ್ತಪ್ಪಿ ಹೋಗದಂತೆ ನೋಡಿಕೊಳ್ಳಬೇಕಾದರೆ ಅದು ತುಂಬಾ ಅಗತ್ಯವಲ್ಲವೆ ಊರ್ವಶಿ..?”

” ಅಹುದು.. ನಿಜವೆ.. ಆದರೆ ಇದಿನ್ನು ಮೊದಲ ಹಂತ… ಈ ಹಂತದ ನಂತರವೂ ಕನಿಷ್ಠ ಕೋಟ್ಯಾಂತರ ಸಾಧ್ಯತೆಗಳು ಮತ್ತೂ ಮಿಕ್ಕುಳಿದಿರುತ್ತವೆ.. ಅದರ ಪ್ರತಿಯೊಂದು ತುಣುಕನ್ನು ಮತ್ತೆ ಸಂಸ್ಕರಿಸುತ್ತ ಅದರ ಮೂಲ ಮಟ್ಟದಿಂದ ಕೊಂಚ ಕೊಂಚವಾಗಿ ಹಂತಹಂತವಾಗಿ ಮೇಲೆತ್ತುತ್ತ ಹೋಗಬೇಕು.. ಅದು ಅಂತಿಮವಾಗಿ ಗಮ್ಯದ ಮಟ್ಟಕ್ಕೆ ಪೂರ್ಣ ತಾಳೆಯಾಗುವತನಕ..”

” ನಿಜ..” ಚಿಂತಾಕ್ರಾಂತ ಮುಖದಲ್ಲಿ ತಾನೂ ಭಾಗಿಯಾಗುತ್ತ ನುಡಿದ ಗೌತಮ. ಅವನಿಗೆ ಊರ್ವಶಿಯ ಆಲೋಚನೆ ಮತ್ತು ಆತಂಕಕ್ಕೆ ಕಾರಣವೇನೆಂಬುದರ ಸುಳಿವು ಅಸ್ಪಷ್ಟವಾಗಿ ಕಾಣಿಸಿದಂತೆ ಅನಿಸಿತ್ತು..

” ಆ ಪ್ರತಿಯೊಂದು ಸಾಧ್ಯತೆಯನ್ನು ವಿಶ್ಲೇಷಿಸಿಕೊಂಡು, ಗುಟ್ಟು ಬಿಡಿಸುತ್ತ ಅದನ್ನು ಪಕ್ವವಾಗಿಸುತ್ತ ನಡೆಯಬೇಕೆಂದರೆ ಅದೆಷ್ಟು ಕೋಟಿ ಕೋಟಿ ವರ್ಷಗಳಾಗುವುದೆಂದು ಬಲ್ಲೆಯಾ? ಅದು ಅಂತಿಮವಾಗಿ ಫಲಪ್ರದವಾಗುವುದೊ ಇಲ್ಲವೊ ಹೇಳ ಬರದಿದ್ದರೂ, ಒಂದು ವೇಳೆ ಸಫಲವಾದೀತೆಂದೆ ಭಾವಿಸಿಕೊಳ್ಳೋಣ.. ಆ ಅನಿಸಿಕೆಯಲ್ಲು ಇಂತಿಷ್ಟೆ ಕಾಲಮಾನವೆಂದು ನಿಗದಿ ಪಡಿಸಲಾಗುವುದಿಲ್ಲ.. ಅಂದ ಮೇಲೆ ನಿಜಕ್ಕು ಈ ಪ್ರಯೋಗ ಸಫಲವಾಗುವುದುಂಟೆ? ಕೊನೆಗಾಣುವುದುಂತೆ ? ಎಂದನುಮಾನ ಆರಂಭವಾದರೆ ಆಯಿತು.. ನಡೆಯುವ ಕಾರ್ಯವು ನಿಂತುಹೋಗುವುದಿಲ್ಲವೆ ?”

ಅಷ್ಟು ಗಹನತೆಯ ವಸ್ತು ವಿಷಯವನ್ನು ಅದರ ಸೂಕ್ಷ್ಮ ಸ್ತರದಲ್ಲಿ ಅರಿತು, ಸಾರವನ್ನು ಸಾಮಾನ್ಯಗ್ರಾಹಿಯ ರೂಪದಲ್ಲಿ ಬಿಚ್ಚಿಟ್ಟ ಅವಳ ನಿರೂಪಣ ಸಾಮರ್ಥ್ಯಕ್ಕೆ ಮೆಚ್ಚದಿರಲಾಗದೆ ಗೌತಮ ಅವಳತ್ತ ಹೆಮ್ಮೆಯ ನೋಟ ಬೀರುತ್ತ ತಲೆಯಾಡಿಸಿದ..

” ಅದು ಗೊತ್ತಿರುವ ಕಾರಣದಿಂದಲೆ ನನಗೂ ಈ ಸಂಶೋಧನೆಗೊಂದು ಕಾಲಮಿತಿಯಿಡಲು ಆಗುತ್ತಿಲ್ಲ ಊರ್ವಶೀ.. ಆದರೆ ಬೇರೆ ದಾರಿಯಾದರೂ ಯಾವುದಿದೆ ?”

ಏನಿರಬಹುದೆಂದು ಅವಳಿಗೂ ಗೊತ್ತಿರಲಿಲ್ಲ.. ಏನಾಗಿರಬಹುದೆಂದು ಕಲ್ಪನೆಯ ಲೋಕದಲ್ಲಿ ಊಹಿಸಲೆತ್ನಿಸುತ್ತಲೆ ಮೇಲೆದ್ದು ಆಸನದ ಹಿಂದುಗಡೆಯಿದ್ದ ಗವಾಕ್ಷಿಯೊಂದರ ಬಳಿ ಹೋಗಿ, ಎದುರಿನಿಂದ ಬರುತ್ತಿರುವ ತಣ್ಣನೆಯ ಗಾಳಿಗೆ ಮುಖವೊಡ್ಡಿ ನಿಂತಳು, ಅದನ್ನೆ ಆಸ್ವಾದಿಸುವಂತೆ ಕಣ್ಣು ಮುಚ್ಚಿಕೊಳ್ಳುತ್ತ… ಅರೆಗಳಿಗೆಯ ಮೆಲುವಾದ ತಂಗಾಳಿ ಸ್ಪರ್ಶದ ಬಳಿಕ ಯಾವುದೊ ಉನ್ಮಾದವೆಲ್ಲ ಕರಗಿ ಹಗುರಾದಂತೆನಿಸಿ, ನಿಧಾನವಾಗಿ ಕಣ್ಣು ತೆರೆದು ಮತ್ತೆ ಆಗಸದತ್ತ ದಿಟ್ಟಿಸಿದಳು, ಬೆಳ್ಳಂಬೆಳ್ಳನೆಯ ಮೋಡಗಳ ಶೃಂಗಾರ ವೈವಿಧ್ಯವನ್ನೆ ಗಮನಿಸುತ್ತ..

ಆಗ ಕಾಣಿಸಿತ್ತು – ಆ ಮೋಡಗಳ ಮರೆಯಿಂದ ಶ್ವೇತ ತೇಜಸ್ಸಿನೊಂದಿಗೆ ಫಳಫಳ ಹೊಳೆಯುತ್ತ ಹೊರ ಹೊಮ್ಮುತ್ತಿದ್ದ ಆ ಆಕಾಶದ ಕುದುರೆ.. ತನ್ನ ಗಟ್ಟಿ ರೆಕ್ಕೆಗಳನ್ನು ಬಡಿಯುತ್ತ ಗಂಭೀರ ತೇಜದಲ್ಲಿ ಹಾರಿಕೊಂಡು ಹೋಗುತ್ತಿದ್ದ ಉಚ್ಚೈಶ್ರವಸ್ಸು. ಅದೇನಾಯಿತೊ ಏನೊ – ಸ್ವಚ್ಚಂದವಾಗಿ ಹಾರುತ್ತಿದ್ದ ಆ ಶ್ವೇತಾಶ್ವ ಇದ್ದಕ್ಕಿದ್ದಂತೆ ಯಾರೊ ತಡೆದು ನಿಲ್ಲಿಸಿದಂತೆ ಅಲ್ಲೆ ಸ್ತಬ್ದವಾಗಿ ನಿಂತುಬಿಟ್ಟಿತು ಆಕಾಶದ ಮಧ್ಯದಲ್ಲೆ. ಅದೇನು ಗಗನ ವಿಹಾರದ ಸವಿಯನ್ನನುಭವಿಸುತ್ತ ಆ ಗಳಿಗೆಯ ವ್ಯೋಮ ಸೌಂದರ್ಯವನ್ನು ಆಸ್ವಾದಿಸಲು ನಿಂತಿತ್ತೊ, ಅಥವಾ ಹಾಗೆ ನಿಂತು ಆಸ್ವಾದಿಸಿ ಮುಂದೆ ಹೋಗುವುದೆ ಅದರ ನಿತ್ಯದ ಪರಿಯೊ – ಒಟ್ಟಾರೆ ಮಿಂಚಿನ ವೇಗದಲಿದ್ದ ಅದರ ಚಲನೆ ಚಕ್ಕನೆ ಕಾಲು ಹಿಡಿದು ನಿಲ್ಲಿಸಿದಂತೆ ಒಂದೆ ಬಿಂದುವಿನಲ್ಲಿ ನೆಲೆಸಿ, ಕೇವಲ ಸಮತೋಲನಕ್ಕೇನೊ ಎಂಬಂತೆ ಆ ಬಿಂದುವಿನ ಅಕ್ಷದ ಸುತ್ತಲೆ ನಿಧಾನಗತಿಯ ಭ್ರಮಣದಲ್ಲಿ ಸುತ್ತತೊಡಗಿತು, ಕಂಡೂ ಕಾಣದ ಹಾಗೆ..

ಊರ್ವಶಿಗೇನು ಆ ದೃಶ್ಯ ಹೊಸದಲ್ಲ.. ಸಾಕಷ್ಟು ಬಾರಿ ಉಚ್ಚೈಶ್ರವಸ್ಸು ಅದೇ ಹಾದಿಯಲ್ಲಿ ಬಂದು ಹಾಗೆಯೆ ನಿಂತು ವಿಶ್ರಮಿಸಿ ಹೋಗಿದ್ದನ್ನು ನೋಡಿದ್ದಾಳೆ. ಅದರ ಹಾರುವ ಸಾಮರ್ಥ್ಯಕ್ಕೆ ಮಾತ್ರವಲ್ಲದೆ ಅದರ ಪರಿಶುದ್ಧ, ಶ್ವೇತಧಾರಿ ಕಾಯದ ಸೌಂದರ್ಯಕ್ಕೆ ಬೆರಗಾಗಿ ಮಾತು ಹೊರಡದ ದಿಗ್ಭ್ರಾಂತಿಯಲ್ಲಿ ಮೂಕವಾಗಿ ದಿಟ್ಟಿಸುತ್ತ ನಿಂತುಬಿಟ್ಟಿದ್ದಾಳೆ ಅದೆಷ್ಟೊ ಬಾರಿ – ಅದೆ ಗವಾಕ್ಷದ ಮುಂದೆ. ಅದು ನಿತ್ಯವು ನಿಲ್ಲುವುದೆಂದು ಅವಳಿಗೆ ಗೊತ್ತಿದ್ದರು ಅದು ಯಾಕೆ ನಿಲ್ಲುವುದೆಂದು ಮಾತ್ರ ಗೊತ್ತಿಲ್ಲ. ಬಹುಶಃ ಹಾಗೆ ನಡುನಡುವೆ ನಿಂತು ಹೋಗುವುದೆ ಅದರ ನಿತ್ಯದ ಚಾಳಿ ಎಂದು ಅಂದುಕೊಂಡಿದ್ದಾಳೆ.

ಆದರೆ ಅವಳಿಗೂ ಗೊತ್ತಿರದ ವಿಷಯವೆಂದರೆ, ಆ ಶ್ವೇತಾಶ್ವ ಅಲ್ಲಿ ಸದಾ ಬಂದು ನಿಲ್ಲುವುದಿಲ್ಲ ಎಂದು.. ದೂರದಿಂದಲೆ ತನ್ನ ಚುರುಕಾದ ಕಣ್ಣುಗಳಿಂದ ಸುತ್ತಲೂ ನೋಡಿಕೊಂಡೆ ಹಾದುಹೋಗುವ ಆ ದೇವಾಶ್ವಕ್ಕೆ ಗವಾಕ್ಷಿಯಲ್ಲಿ ಊರ್ವಶಿ ಕಂಡಳೆಂದರೆ ಏನೊ ಅದ್ಭುತ ಕಂಡಂತೆ ಲೆಕ್ಕ.. ತಾನು ಕಂಡ ಇತರರೆಲ್ಲರಿಗು ಹೋಲಿಸಿದರೆ ಅವಳು ಸಹಸ್ರಾರು ಕೋಟಿ ಪಟ್ಟು ಉನ್ನತ ಸ್ಥಾಯಿಯವಳೆಂದು ಅದಕ್ಕೆ ನೋಡಿದ ತಕ್ಷಣವೆ ಅರಿವಾಗಿ ಹೋಗಿದೆ. ತಾನು ಹೇಗೆ ಅತ್ಯುತ್ತಮ ಜಾತಿ ತಳಿಯ ಶ್ವೇತಾಶ್ವವೊ, ಅವಳೂ ಅದೇ ರೀತಿಯ ಅದ್ಭುತ ತಳಿಯ ದೇವಮಾನವ ಸೃಷ್ಟಿ ಎಂದು ಅದಕ್ಕರಿವಾಗಿಹೋಗಿದೆ.. ಆ ಕಾರಣಕ್ಕೊ ಅಥವಾ ಅವಳ ಅಪ್ರತಿಮ ಸೌಂದರ್ಯಕ್ಕೊ – ಅವಳನ್ನು ಕಂಡಾಗೆಲ್ಲ ನಿಂತು ನೋಡಿ ಹೋಗುವುದು ಅದರ ದಿನಚರಿ. ಹೀಗೆ ಇಬ್ಬರೂ ಪರಸ್ಪರರ ಅರಿವಿರದೆ ಮತ್ತೊಬ್ಬರನ್ನು ಅನುಸರಿಸುವಂತೆ ಕಾಣುತ್ತಿದೆ ಅವರಿಬ್ಬರ ಆ ಹೊತ್ತಿನ ದಿನ ನಿತ್ಯದ ಭೇಟಿ…

ಅದರ ನೋಟ ತಂದ ಮುದದಿಂದ ಉತ್ತೇಜಿತಳಾದವಳಂತೆ ಕಂಡಳು ಊರ್ವಶಿ..!

” ಅದೋ ಅಲ್ಲಿ ನೋಡು ಗೌತಮ… ಆ ಗಗನಗಾಮಿ ಉಚ್ಚೈಶ್ರವಸ್ಸು ಹೇಗೆ ನಾವು ಕಾಣಬಹುದಾದ, ಕಾಣುತ್ತಿರುವ ಅದ್ಭುತಗಳೆಲ್ಲದರ ಮೂರ್ತಸ್ವರೂಪವಾಗಿ ನಿಂತಿದೆಯಲ್ಲಿ ? ನಿನ್ನ ಸಂಶೋಧನೆ ತಲುಪಬೇಕಾದ ಗಮ್ಯ ಆ ಮಟ್ಟದ್ದು.. ಆದರೆ ಅಭಿವೃದ್ಧೀಕರಣ ಆರಂಭಿಸಬೇಕಾದ್ದು ಸಾಮಾನ್ಯ ಸ್ತರದ ಅಶ್ವದಿಂದ… ಅವೆರಡರ ನಡುವಿನಲ್ಲಿರಬಹುದಾದ ಅಂತರ ಮತ್ತು ಅದನ್ನು ತಲುಪಲು ಬೇಕಾದ ವೇಗವೆ ನನ್ನ ಶಂಕೆಯ ಮೂಲ..”

ಗವಾಕ್ಷಿಯ ಹತ್ತಿರ ತಾನೂ ಬಂದ ಗೌತಮ ಅದೇನೆಂದು ದಿಟ್ಟಿಸಿ ನೋಡಲು. ಅವನು ಬಂದ ಒಂದೆರಡು ಗಳಿಗೆಯಲ್ಲೆ ಅದರ ಅರಿವಾದಂತೆ ಅಲ್ಲೆ ನಿಂತಿದ್ದ ದೇವಾಶ್ವ ಮತ್ತೆ ರೆಕ್ಕೆ ಬೀಸಿ ಮಿಂಚಿನ ವೇಗದಲ್ಲಿ ಹಾರಿಕೊಡು ವ್ಯೋಮದಗಾಧ ಬಯಲಲ್ಲಿ ಮಾಯವಾಗಿಹೋಯ್ತು.

” ಊರ್ವಶಿ.. ನೀನೆ ಬಲ್ಲಂತೆ ನೀನು ಮತ್ತು ಈ ದೇವಾಶ್ವ – ನೀವಿಬ್ಬರು ಅಯೋನಿಜ ಸೃಷ್ಟಿಯ ಮೂಲ ರೂಪಿಗಳು. ನಿಮ್ಮಂತಹವರು ಇರುವುದೀಗ ಬೆರಳೆಣಿಕೆಯಲ್ಲಿ ಮಾತ್ರ.. ಆದರೆ ನಿಮ್ಮಿಬ್ಬರ ಸೃಜನೆಯಾಗಿರುವುದು ಒಂದು ರೀತಿಯಲ್ಲಿ ಕಲೆಗಾರನೊಬ್ಬನ ಕೈಯಲ್ಲಿ ಸುಂದರ ಚಿತ್ರಪಠ ತಿದ್ದಿದ ಹಾಗೊ ಅಥವಾ ಶಿಲ್ಪಿಯೊಬ್ಬನ ಕೈಯಲ್ಲಿ ಜತನದಿಂದ ರೂಪುಗೊಂಡ ಅಪರೂಪದ ಶಿಲ್ಪದ ಹಾಗೆ… ಆ ಕಲಾವಿದನ ಕಲ್ಪನೆಯ ಮೂಸೆಯಲ್ಲಿ ಯಾವುದೆ ಕುಂದಿಗೆ, ಲೋಪದೋಷಕ್ಕೆ ತಾವಿಲ್ಲದ ಕಾರಣ, ಸರ್ವಲಕ್ಷಣ ಪರಿಪೂರ್ಣವೆನಿಸುವ ಸೃಷ್ಟಿ ಆಗಿಬಿಡುತ್ತದೆ..”

“ಹೌದು ಗೌತಮ.. ಅದನ್ನು ನಾನೂ ಬಲ್ಲೆ..” ತಮ್ಮಿಬ್ಬರನ್ನು ಸೃಜಿಸಿದ ನರ-ನಾರಾಯಣರ ಪ್ರಯೋಗಶಾಲೆಯಲ್ಲಿ ಅವರಿಬ್ಬರೆ ಆ ಮಹೋನ್ನತ ವೈಜ್ಞಾನಿಕ ಕಲಾವಿದರು; ತಾವಿಬ್ಬರು ಅವರು ಸೃಜಿಸಿದ ಸೃಷ್ಟಿ ಜಗದ ಅದ್ಭುತಗಳು..

” ಆದರೆ ಯೋನಿಜ ಜಗದ ವ್ಯಾಪಾರದ ಸೃಷ್ಟಿಧರ್ಮವೆ ಬೇರೆ… ಇಲ್ಲಿ ಅದ್ಭುತ ಚಳಕವುಳ್ಳ ಕಲಾವಿದರ ಗಣನೆ ಲೆಕ್ಕಕ್ಕೆ ಬರುವುದಿಲ್ಲ.. ಅರ್ಥಾತ್ ಈ ಜಗದಲ್ಲಿ ಎಲ್ಲರೂ ಅಂತಹ ಸಾಮರ್ಥ್ಯವಿರುವ ಕಲಾವಿದರಿರುತ್ತಾರೆಂದು ಅಂದುಕೊಳ್ಳಲಾಗದು. ಒಂದು ಸಣ್ಣ ಪ್ರಮಾಣದಲ್ಲಿ ಅಂತಹ ಮನಃಸತ್ತ್ವದವರೂ ಇರುತ್ತಾರೆಂದುಕೊಂಡರೂ, ಬಹುಮತದಲ್ಲಿರುವವರು ಸಾಮಾನ್ಯ ಸ್ತರದ ಜೀವಿಗಳು. ಇಲ್ಲಿ ಯಾವುದೆ ವಿಶೇಷ ಯತ್ನವಿಲ್ಲದೆ, ತಂತಾನೆ ಸ್ವನಿಯಂತ್ರಿತವಾಗಿ ನಡೆದುಕೊಂಡು ಹೋಗುವ, ಆ ಸಲುವಾಗಿ ತನ್ನ ಸಂತತಿಯನ್ನೆ ನಕಲು ಮಾಡಿಕೊಂಡು ವೃದ್ಧಿಸುತ್ತ ಹೋಗುವ ಸರಳ ಸಾಮಾನ್ಯ ಸ್ತರದ ವ್ಯವಸ್ಥೆ ಇರಬೇಕಲ್ಲವೆ?”

ಒಂದು ಪುಟ್ಟ ಪದ-ವಾಕ್ಯ ಪುಂಜದಲ್ಲಿ ಇಡಿ ತಿರುಳನ್ನು ಕಟ್ಟಿಕೊಟ್ಟವನತ್ತ ಮೆಚ್ಚುಗೆಯಿಂದ ದಿಟ್ಟಿಸಿ ನೋಡಿದಳು ಊರ್ವಶಿ.. ಬ್ರಹ್ಮದೇವನಿಗಿವನು ಸರಿಯಾದ ಜೋಡಿ. ಅಷ್ಟಿರದೆ ಅವನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳುವರೆ ? “ನಿಜ ಮುನೀಂದ್ರ.. ಈ ವ್ಯವಸ್ಥೆಯ ತೊಡಕೆಂದರೆ ಇಲ್ಲಿ ಎಲ್ಲವು ಸಣ್ಣ ಪ್ರಮಾಣದ ಏರಿಕೆಯ ಕ್ರಮದಲ್ಲಿ ನಡೆಯುವಂತದ್ದು… ಅದೂ ಪೀಳಿಗೆಯಿಂದ ಪೀಳಿಗೆಗೆ, ಸಂತತಿಯಿಂದ ಸಂತತಿಗೆ ನಿಧಾನ ಗತಿಯಲ್ಲಿ ನಡೆಯುವ ಪರಿಕ್ರಮ..”

” ತನ್ನನ್ನು ತಾನೆ ವಿನಾಶಕ್ಕೆಳೆಯದ ಹಾಗೆ ಸ್ವನಿಯಂತ್ರಿತವಾಗಿ, ನಿರಂತರವಾಗಿ ಉಳಿಸಿಕೊಳ್ಳಲು ನಿಸರ್ಗ ಕಂಡುಕೊಂಡ ಸಮತೋಲನದ ವ್ಯವಸ್ಥೆಯಿದಲ್ಲವೆ ಊರ್ವಶಿ ? ಇಲ್ಲಿ ಏನೆ ಬದಲಾಗುವುದಿದ್ದರೂ ಸಮಷ್ಟಿಯ ಮಟ್ಟದಲ್ಲೆ ಆಗಬೇಕು. ಅಂದರೆ ಎಲ್ಲೊ ಅಲ್ಲೊಂದು, ಇಲ್ಲೊಂದು ನಿನ್ನಂತಹ ಅದ್ಭುತಗಳನ್ನು ಸೃಜಿಸಿದರೆ ಸಾಲದು. ಇಡೀ ವ್ಯವಸ್ಥೆಯ ಹೊರಗಿನ ಯಾವ ಒತ್ತಡಗಳ, ಕುಮ್ಮುಕ್ಕುಗಳ ಅನಿವಾರ್ಯವಿರದೆಯೆ ನಿನ್ನಂತಹ ತಳಿಗಳನ್ನು ನಿಸರ್ಗ ಸಹಜವಾಗಿ ಸೃಷ್ಟಿಸಿಕೊಳ್ಳುವ ‘ಸಮತೋಲಿತ ನಿಸರ್ಗ’ದ ಮಟ್ಟಕ್ಕೆ ಬರಬೇಕು… ಪ್ರತಿ ಸೃಷ್ಟಿಯೂ ಯಾರ ಸಹಾಯ ಹಸ್ತವೂ ಇರದೆ ತಮ್ಮನ್ನು ತಾವೆ ನಿಭಾಯಿಸಿಕೊಳ್ಳುವ ಹಾಗೆ…”

(ಇನ್ನೂ ಇದೆ)

(Link to next episode 28:  https://nageshamysore.wordpress.com/2016/03/14/00587-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%ae-%e0%b2%9a%e0%b2%b0%e0%b2%be%e0%b2%9a%e0%b2%b0-%e0%b2%85/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s