00587. ಅಹಲ್ಯಾ ಸಂಹಿತೆ – ೨೮ (ಚರಾಚರ ಅಸ್ತಿತ್ವದ ಚರ್ಚೆ)


00587. ಅಹಲ್ಯಾ ಸಂಹಿತೆ – ೨೮ (ಚರಾಚರ ಅಸ್ತಿತ್ವದ ಚರ್ಚೆ)
___________________________________________

(Link to previous episode 27: https://nageshamysore.wordpress.com/2016/03/13/7967/)

” ಹೌದು ಗೌತಮ.. ನಿನ್ನ ಮಾತು ನನಗರ್ಥವಾಗುತ್ತಿದೆ.. ನೀನು ಹೇಳುತ್ತಿರುವುದು ಇಡಿ ವ್ಯವಸ್ಥೆಯೆ ತನ್ನ ಸಮತೋಲನದ ಮಟ್ಟವನ್ನು ಮೇಲೇರಿಸಿಕೊಂಡು ಅದರ ಮೇಲಿನ, ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು.. ಆದ್ದರಿಂದಲೆ ಈ ಬದಲಾವಣೆ ರಾತ್ರೋರಾತ್ರಿ ಘಟಿಸುವ ಹಠಾತ್ ಪ್ರಕ್ರಿಯೆಯಾಗುವುದು ಅಸಾಧ್ಯ. ಧರಣಿಯ ಇತಿಹಾಸವನ್ನೆ ನೋಡಿದರು ಇದೇ ಗಣಿತ – ಕೋಟ್ಯಾಂತರ ವರ್ಷಗಳ ಸಮಯ ತಗುಲುವ ಕಾರ್ಯ. ಆದರೆ ನಾವೀಗ ಬಯಸುತ್ತಿರುವ ಬದಲಾವಣೆ ಜೀವಜಗತ್ತಿನ ವಿಚಾರದಲ್ಲಿ ಮಾತ್ರವಲ್ಲವೆ ? ಅಂದ ಮೇಲೆ ಈ ಪ್ರಗತಿಯ ಅಭ್ಯುದಯವನ್ನು ಕೇವಲ ಆ ಜಗತ್ತಿಗೆ ಮಾತ್ರವೆ ಸೀಮಿತಗೊಳಿಸಿ ಮುಂದುವರೆಯುವುದು ಒಳಿತಲ್ಲವೆ ? ಇಲ್ಲೂ ಕೋಟ್ಯಾಂತರ ವರ್ಷಗಳ ಹಾದಿಯನ್ನೆ ಕ್ರಮಿಸಬೇಕಾದರು, ಕನಿಷ್ಠ ಕೆಲವು ಕೋಟ್ಯಾಂತರ ವರ್ಷಗಳ ಕಡಿತವನ್ನು ಮಾಡಬಹುದಲ್ಲವೆ, ಒಟ್ಟಾರೆಯ ಲೆಕ್ಕಾಚಾರದಲ್ಲಿ ?”

ತಜ್ಞ ಪರಿಣಿತಿಯವಳಂತೆ ಮಾತನಾಡುತ್ತಿದ್ದ ಊರ್ವಶಿಯನ್ನು ಮೆಚ್ಚದೆ ಇರಲಾಗಲಿಲ್ಲ ಗೌತಮನಿಗೆ.. ಆ ಮೆಚ್ಚುಗೆಯನ್ನು ತನ್ನ ನೋಟದಲ್ಲಿಯೆ ವ್ಯಕ್ತಪಡಿಸುತ್ತ, ಅವಳಿಗೆ ಹೇಗೆ ತನ್ನ ಸಮಷ್ಟಿವಾದವನ್ನು ಸರಳವಾಗಿ ವಿವರಿಸಬಹುದೆಂದು ಸಮಾನಾಂತರದಲ್ಲಿ ಆಲೋಚಿಸುತ್ತ, ಆ ಅರೆ ಕಣ್ಮುಚ್ಚಿದ ನಿಲುವಿನಲ್ಲೆ ಮಾತು ಜೋಡಿಸತೊಡಗಿದ ಗೌತಮ…

” ಊರ್ವಶಿ, ತೀರಾ ಕ್ಲಿಷ್ಟಕರ ಆಳಕ್ಕಿಳಿಯದೆ ಆದಷ್ಟು ಸರಳ ರೂಪದಲ್ಲಿ ಈ ಸೃಷ್ಟಿ-ಸ್ಥಿತಿ-ಲಯದ ಮೂಲತತ್ವವನ್ನು ವಿವರಿಸಲೆತ್ನಿಸುತ್ತೇನೆ.. ಆಗ ನಿನಗೆ ಅರ್ಥವಾಗುತ್ತದೆ, ನಾವೇಕೆ ಬರಿಯ ನಿಸರ್ಗದ ಒಂದು ಭಾಗ ಮಾತ್ರವನ್ನು ಪರಿಗಣಿಸಲಾಗದು ಎಂದು..”

ಅದಾಗಲೆ ಅದರ ಕುರಿತು ಗೌತಮ ಬರೆದಿದ್ದ ಹಲವಾರು ವ್ಯಾಖ್ಯೆ, ಭಾಷ್ಯ, ಸಂಶೋಧನೆಗಳನ್ನು ಓದಿದ್ದ ಊರ್ವಶಿಗೆ ಈಗ ಅವುಗಳ ಸಾರವನ್ನು ಸ್ವತಃ ಅವನಿಂದಲೆ ಕೇಳುವ ಅವಕಾಶ.. ಯಾರಿಗೆ ತಾನೆ ದೊರಕೀತು ಇಂತಹ ಸುವರ್ಣಾವಕಾಶ? ಮೈಯೆಲ್ಲಾ ಕಿವಿಯಾದವಳಂತೆ ಕುತೂಹಲಾಸಕ್ತಿಗಳೊಂದಿಗೆ ಮುಂದೆ ಬಾಗಿದಳು ಗವಾಕ್ಷದಿಂದ ಸರಿದು ಅವನತ್ತ ತಿರುಗುತ್ತ..

“ಈಗಿರುವುದೆಲ್ಲ ಸೃಷ್ಟಿಯ ಮೂಲಾದಿಮೂಲದಲ್ಲಿ ಏನೂ ಇರಲಿಲ್ಲ.. ಬರಿಯ ಶೂನ್ಯ ಎಂದಿಟ್ಟುಕೊ..”

“ಹೂಂ..”

” ಅಲ್ಲಿ ಏನು ಇರಲಿಲ್ಲವೆನ್ನುವುದರ ಅರ್ಥ ಎಲ್ಲವು ಇದೆ ಎನ್ನುವ ಹಾಗೆ..”

” ಅಂದರೆ ಅದೇ ಶೂನ್ಯದ ಪರಿಕಲ್ಪನೆಯ ಹಾಗೆ.. ಮೊತ್ತದಲ್ಲಿ ನೋಡಿದರೆ ಅದರ ಮೌಲ್ಯ ಏನೇನೂ ಇರದು.. ಆದರೆ ಅದರ ವೃತ್ತಾವರಣದ ಪರಿಧಿ ಸುತ್ತುವರೆದ ರೀತಿ ಗಮನಿಸಿದರೆ – ಅದರೊಳಗೆ ಎಲ್ಲವನ್ನು ಒಳಗೊಂಡಂತೆ, ಅದರಲ್ಲೆ ಎಲ್ಲವೂ ಇರುವ ಬಗೆ..”

” ಸರಿಯಾದ ವಿವರಣೆ… ನೈಜದಲ್ಲಿ ಮೂಲಶಕ್ತಿಯೆನ್ನುವುದರ ಅಸ್ತಿತ್ವ ಪ್ರಕೃತಿಯಲ್ಲಿ ಸದಾ ಸರ್ವದ ಇರುತ್ತದೆ.. ಆದರೆ ಅದು ಜಡಸ್ವರೂಪದಲ್ಲಿ ನಿಷ್ಕ್ರಿಯ ರೂಪದಲ್ಲಿರುವ ಅಚೇತನ ಶಕ್ತಿ.. ಆ ಸ್ಥಿತಿಯಲ್ಲಿ ಅದರ ಶಕ್ತಿಮೊತ್ತವೆಲ್ಲ ಒಂದು ವೃತ್ತಕೇಂದ್ರದಲ್ಲಿ ಊಹಿಸಲಾಗದಷ್ಟು ಸೂಕ್ಷ್ಮಾತಿಸೂಕ್ಷ್ಮರೂಪದಲ್ಲಿ ಸಾಂದ್ರವಾಗಿ, ಒಂದು ವಿಧದ ನಿರಾಕಾರ, ನಿರ್ಗುಣ ಅಸ್ತಿತ್ವದಲ್ಲಿ ಸ್ಥಾಯಿಯಾಗಿರುತ್ತದೆ..ವ್ಯೋಮದಲ್ಲಿ ಕಣ್ಣಿಗೆ ಕಾಣದಿದ್ದರೂ ಅಸ್ತಿತ್ವದಲ್ಲಿರುವ ಕಪ್ಪು ಬಿಲದ ಹಾಗೆ..”

” ಓಹ್.. ಶೂನ್ಯವೆನ್ನುವುದು ಎಲ್ಲವು ಇರುವ, ಏನೂ ಅಲ್ಲದ ವಿಶಿಷ್ಠ ಸ್ಥಿತಿಯೆನ್ನುವುದರ ಕಲ್ಪನೆಯ ಸರಿಯಾದ ಅರ್ಥ ಈಗ ನಿಲುಕಿಗೆ ಸಿಗುತ್ತಿದೆ..ಎಂತಹ ಅದ್ಭುತ ಕಲ್ಪನೆ..!”

ಅವಳ ಮಾತಿಗೆ ಮೆಲುವಾಗಿ ನಕ್ಕು ನುಡಿದ ಗೌತಮ..” ನೈಜದಲ್ಲಿ ಅದು ಕಲ್ಪನೆಯಲ್ಲ ಊರ್ವಶಿ.. ಬ್ರಹ್ಮಾಂಡ ಸಹಿತ, ಜಗದೆಲ್ಲಾ ಅಸ್ತಿತ್ವದ ಸಮೂಲ ಸ್ವರೂಪವೆ ಅದು…”

“ಅರ್ಥವಾಯಿತು..”

” ಅದು ಆ ಜಡಚೇತನವಾಗಿ ನಿಷ್ಕ್ರಿಯವಾಗಿರುವ ತನಕ ಅದರಲ್ಲಿ ಯಾವುದೆ ಚಲನೆಯಾಗಲಿ, ಚಟುವಟಿಕೆಯಾಗಲಿ ಇರದು.. ಸಮಾಧಿಸ್ಥಿತಿಯಲ್ಲಿರುವ ಶಕ್ತಿ ಸಮಷ್ಟಿಯಾಗಿ ಅಸ್ತಿತ್ವದಲ್ಲಿರುತ್ತದೆಯಷ್ಟೇ ಹೊರತು ಮತ್ತೇನು ಅಲ್ಲಿ ಮತ್ತೇನು ಸಂಚಲನೆಯಿರುವುದಿಲ್ಲ… ಅದನ್ನು ಪ್ರಚೋದಿಸಿ, ಧೀರ್ಘ ಸುಷುಪ್ತಾವಸ್ಥೆಯಿಂದೆಬ್ಬಿಸಿ ಸಕ್ರೀಯವಾಗಿಸಬೇಕೆಂದರೆ ಮತ್ತೊಂದು ಬಾಹ್ಯ ಪ್ರಚೋದನೆ ಅಗತ್ಯ..”

” ಅಂದರೆ ಅದನ್ನು ಎಚ್ಚರವಾಗಿಸಿ ಜಡತೆಯಿಂದ ಚಲನಶೀಲವಾಗುವಂತೆ ಮಾಡಬಲ್ಲ ಪ್ರೇರಕ, ಸ್ಪೂರ್ತಿಕಾರಕ ವಸ್ತು.. ಅರೆ, ಗೌತಮ..? ಇದನ್ನು ಹಾಗೆಯೆ ತಾರ್ಕಿಕವಾಗಿ ವಿಸ್ತರಿಸಿದರೆ ಇವೆರಡು ಪುರುಷ-ಪ್ರಕೃತಿಯ ವಿವರಣೆಯಂತೆ ಕಾಣುವುದಿಲ್ಲವೆ ? ನೀನು ಹೇಳುತ್ತಿರುವ ಈ ಶಕ್ತಿಸಿದ್ದಾಂತದಲ್ಲಿ ಬರಿಯ ಅಚರ ಮತ್ತು ಅಮೂರ್ತವಾದ ಸ್ಥಾಯಿಶಕ್ತಿ ಮಾತ್ರವಿರುವುದನ್ನು ಪರಿಗಣಿಸಿದರೆ, ಪುರುಷ-ಪ್ರಕೃತಿಯೆಂಬ ಜೈವಿಕ ತತ್ವಕ್ಕೆ ಸಮೀಕರಿಸಿ ಹೋಲಿಸುವುದೇ ಅಸಂಬದ್ಧವಿರಬಹುದೇನೊ ? ಆದರೆ ಹೋಲಿಕೆಯಲ್ಲಂತು ಎರಡು ಹತ್ತಿರವಿರುವಂತೆ ಕಾಣುತ್ತಿದೆ..”

ಅವಳ ಮಾತಿಗೆ ಮತ್ತೆ ಮೆಚ್ಚುಗೆಯ ನಗೆ ನಕ್ಕು ನುಡಿದ ಗೌತಮ, ” ಅಸಂಬದ್ದವೇನೂ ಇಲ್ಲ ಊರ್ವಶಿ.. ನಿಜದಲ್ಲಿ ಶಕ್ತಿಯ ಮೂಲರೂಪ ಸಿದ್ದಾಂತದಲ್ಲಿ ಜೀವ-ನಿರ್ಜೀವಗಳೆಲ್ಲವೂ ಒಂದೆ. ವ್ಯತ್ಯಾಸವೇನಿದ್ದರು ವಸ್ತುವಿನ ಒಟ್ಟು ಸ್ಥಾಯಿಶಕ್ತಿಯ ಮೊತ್ತ ಮತ್ತು ಸಾಂದ್ರತೆಯಲ್ಲಷ್ಟೆ ಹೊರತು ಚರಾಚರದ ಮೂಲಸ್ವರೂಪದಲ್ಲಲ್ಲ.. ಹೀಗಾಗಿ ಜೈವಿಕಾಜೈವಿಕವೆರಡರಲ್ಲು ಈ ಜಡ-ಚೇತನ ಶಕ್ತಿಗಳ ಇರುವಿಕೆ ಸಹಜ ಮತ್ತು ಸರ್ವೇ ಸಾಮಾನ್ಯ.. ನಿನ್ನ ಮಾತಿನಲ್ಲಿಯೆ ಹೇಳುವುದಾದರೆ ಪ್ರತಿಯೊಂದರಲ್ಲು ಪುರುಷತತ್ವ ಮತ್ತು ಪ್ರಕೃತಿತತ್ವ ಇದ್ದೇ ಇರುತ್ತದೆ.. ಅದು ಬಾಹ್ಯ ಪ್ರಚೋದನೆಗೊಳಗಾಗಿ ಸಕ್ರೀಯವಾಗಿ ಚಲನಶೀಲತೆಯನ್ನಪ್ಪಿಕೊಂಡು ಜೀವಿಯಾಗುವ ಹಾದಿ ಹಿಡಿದರೆ, ಅದರ ಮಿಕ್ಕುಳಿದ ಅಚರಭಾಗ ಆ ಯಾತ್ರೆಗೆ ಪೂರಕವಾಗುವ ಪರಿಸರವಾಗಿ ಭಾಗವಹಿಸುತ್ತದೆ.. ಏಕೆಂದರೆ, ಚಲನಶೀಲ ಅಸ್ತಿತ್ವಕ್ಕು ಅದು ಅದರ ಅಸ್ತಿತ್ವದಲ್ಲಿ ನಿರಂತರವಾಗಿರಲು ಪೂರಕವಾಗಿರುವ ವಾತಾವರಣವಿರಬೇಕು – ಒಂದು ಬಗೆಯ ನಿರಂತರ ಶಕ್ತಿಯಮೂಲವಾಗಿ.. ಆಗಷ್ಟೆ ಆ ಅಚರ ಪರಿಸರದಿಂದಲೆ ಹೊಸ ಶಕ್ತಿಯನ್ನು ಮೊಗೆಯುತ್ತ ಚರಶಕ್ತಿ ತನ್ನ ಕಾಯಕವನ್ನು ನಿರಂತರವಾಗಿಸಬಹುದು, ಪೀಳಿಗೆಯಿಂದ ಪೀಳಿಗೆಗೆ ಕುದುರಿಕೊಳ್ಳುತ್ತಾ..”

“ಗೌತಮ.. ಅಲ್ಲಿಯತನಕ ಹೋಗುವ ಮುನ್ನ ಚಿಕ್ಕದೊಂದು ಸಂದೇಹ.. ನೀನು ನುಡಿದ ಆ ಬಾಹ್ಯ ಪ್ರಚೋದಕವಾದರು ಎಂತದ್ದು ? ಅದರ ಸ್ವರೂಪವೇನು ? ಅದು ಬಂದಿದ್ದಾದರೂ ಎಲ್ಲಿಂದ ? ಅದಕ್ಕೊಂದು ಅಸ್ತಿತ್ವವೂ ಇರಲೇ ಬೇಕಲ್ಲವೆ ?” ಊರ್ವಶಿ ನಡುವಲ್ಲೆ ಅವನನ್ನು ತಡೆದು ನುಡಿದಳು..

” … ಗಹನತೆಯ ತೀರಾ ಆಳಕ್ಕಿಳಿಯದೆ ಮೇಲುಸ್ತರದಲ್ಲೆ ವಿವರಿಸುವ ಎಂದುಕೊಂಡೆ.. ಆದರೆ ನಿನ್ನೊಡನೆ ಅದಾಗದು.. ಮೂಲತಃ ನಿನ್ನನುಮಾನ ನಿಜ. ಈ ಪ್ರಚೋದಕ ಶಕ್ತಿಗು ಒಂದು ಅಸ್ತಿತ್ವ ಇರಲೇಬೇಕು…ಅದು ಎಲ್ಲಿಂದಲೊ ಒಂದು ಕಡೆಯಿಂದ ಬಂದಿರಲೇ ಬೇಕು ಎನ್ನುವುದು ನಿಜವೆ.. ಅದಕ್ಕೆ ಎರಡು ದೃಷ್ಟಿಕೋನದಲ್ಲಿ ಉತ್ತರಿಸಬೇಕು.. ಮೊದಲನೆಯದು ಎಲ್ಲಕ್ಕಿಂತ ಮೊದಲಿದ್ದ ಮೂಲಾತಿಮೂಲ ಸ್ಥಿತಿಯ ಕುರಿತದ್ದು..ಎರಡನೆಯ ದೃಷ್ಟಿಕೋನ ಆ ನಂತರದ ಸ್ಥಿತಿಯದ್ದು – ಅರ್ಥಾತ್ ಮೊದಲಸೃಷ್ಟಿಯ ನಂತರದ ಪರಿಸರದ ಗಣನೆಯಲ್ಲಿ ನಡೆಯುವಂತಾದ್ದು..”

“ಕೇಳುತ್ತಿದ್ದಷ್ಟೂ ಆಸಕ್ತಿದಾಯಕವಾಗಿರುವಂತೆ ತೋರುತ್ತಿದೆ ಗೌತಮ.. ದಯವಿಟ್ಟು ವಿವರಿಸಿ ಹೇಳು..” ಜ್ಞಾನದಾಹಿ ಊರ್ವಶಿಯ ಕುತೂಹಲ ಪೂರ್ಣ ದನಿ..

” ಮೊಟ್ಟಮೊದಲ ಆರಂಭಿಕ ಸ್ಥಿತಿಯಲ್ಲಿ ಸಮಷ್ಟಿಗೆ ಇದ್ದದ್ದು ಕೇವಲ ಒಂದೇ ಒಂದು ಸ್ಥೂಲಶಕ್ತಿಯ ಶೂನ್ಯಸ್ವರೂಪ.. ಶಕ್ತಿಯ ಸಾಂದ್ರತೆಯೆಲ್ಲ ಈ ಕೇಂದ್ರದಲ್ಲೆ ಸಂಗ್ರಹಿತವಾಗುತ್ತ ಅದು ನಿರಂತರ ಬಲಿಯುತ್ತಲೆ ಬರುತ್ತಿತ್ತು ಜಡಶಕ್ತಿಯ ರೂಪದಲ್ಲಿಯೆ.. ಆದರೆ ಹೊರಗಿನ ಪ್ರಚೋದನೆ ಸಾಧ್ಯವಿರದ ಕಾರಣ, ಅದರ ಚಟುವಟಿಕೆಗಳು ಏನೂ ಇರದ ಬರಿಯ ಸುಷುಪ್ತಾವಸ್ಥೆ ಮಾತ್ರವಷ್ಟೆ… ಆದರೂ ಸಹ, ಈ ಶಕ್ತಿಸಂಚಯಕ್ಕೆ ತನ್ನ ಸಂಗ್ರಹ ಕಾರ್ಯಗಾರದಲ್ಲಿ ಸೀಮಿತ ಪರಿಧಿಯ ಅವಕಾಶವಷ್ಟೆ ಇದ್ದಿದ್ದು.. ಸಾಂದ್ರ ನಿಷ್ಕ್ರಿಯಶಕ್ತಿಯೆ ಸಂಗ್ರಹಿತವಾಗುತ್ತಿದ್ದರು, ಎಂದಾದರೊಮ್ಮೆ ಆ ಜೋಳಿಗೆಯೂ ತುಂಬಿ ತುಳುಕುವ ಸ್ಥಿತಿ ಬರಲೇಬೇಕಲ್ಲವೆ ? ಅದು ಆಗಲಿಕ್ಕೆ ಕೋಟ್ಯಾಂತರ ವರ್ಷಗಳೆ ಹಿಡಿದರೂ ಒಂದಲ್ಲ ಒಂದು ದಿನ ಅದು ಸಂಭವಿಸಲೇಬೇಕಲ್ಲವೆ ? ತನ್ನಲ್ಲಿ ಸೇರಿದ ಸಾಂದ್ರಶಕ್ತಿಯ ಮೊತ್ತ ತಾನೆ ಭರಿಸಲಸಾಧ್ಯವಾದ ಒತ್ತಡವಾದಾಗ, ಆ ಒತ್ತಡವೆ ಅಂತರೀಕ ಪ್ರಚೋದಕವಾಗಿ ಅದರ ನಿಶ್ಚಲ ಶೂನ್ಯರೂಪದಿಂದ ಸಕ್ರೀಯ ಚಟುವಟಿಕೆಯ ಸ್ವರೂಪಕ್ಕೆ ಏಕಾಏಕಿ ವರ್ಗಾಯಿಸಿಬಿಡುತ್ತದೆ..”

” ಅಂದರೆ ಗೌತಮಾ, ಈ ಬ್ರಹ್ಮಾಂಡದ ಸೃಷ್ಟಿಯ ಆದಿ ಭಾಗದಲ್ಲಾಯಿತೆಂದು ಹೇಳಲಾಗುವ ಬೃಹತ್ ಸ್ಪೋಟವೆಂದರೆ ಇದೇ ಏನು ?” ಅಚ್ಚರಿಯಿಂದ ಕೇಳಿದ್ದಳು ಊರ್ವಶಿ.

” ಬೃಹತ್ಸ್ಪೋಟವೆನ್ನು.. ಪೂರ್ವದ ತಿರೋದಾನದ ನಂತರ ನಡೆಯುವ ಅನುಗ್ರಹಾ ನಂತರದ ಪುನರುತ್ಥಾನವೆನ್ನು.. ಏನೆ ಹೆಸರಲ್ಲಿ ಕರೆದರೂ ಸರಿ – ನಿಷ್ಕ್ರಿಯ ಜಡರೂಪದಲಿದ್ದ ಶಕ್ತಿ, ನಿವ್ವಳ ಲೆಕ್ಕದಲ್ಲಿ ಸಕ್ರೀಯ ಚೇತನಾರೂಪವಾಗಿ ಪರಿವರ್ತಿತವಾಯಿತು ಎನ್ನಬಹುದು… ಆ ಭರಿಸಲಾಗದ ಸಾಂದ್ರಶಕ್ತಿಯೆ ಆಸ್ಪೋಟನೆಯ ರೂಪದಲ್ಲಿ ತಾಂಡವ ನೃತ್ಯದಂತೆ ಅನಾವರಣಗೊಂಡಾಗ, ಮೂಲದಲಿದ್ದ ಒಂದೊಂದು ಭಾಗವೂ ಸಹಸ್ರ, ಕೋಟ್ಯಾಂತರ ಹಿರಿ ಕಿರಿ ತುಣುಕುಗಳಾಗಿ ಸಿಡಿದು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿತು – ಈ ವಿಶಾಲ ವ್ಯೋಮದಲಿ; ಕೆಲವು ಜಡಶಕ್ತಿಯನ್ನು ಮಾತ್ರ ಹೊದ್ದ ತುಣುಕುಗಳಾದರೆ ಇನ್ನು ಕೆಲವು ಸಕ್ರೀಯ ಚಲನಶಕ್ತಿಯ ತುಣುಕುಗಳು.. ಮೇಲ್ನೋಟಕ್ಕೆ ಅವು ಸ್ವತಂತ್ರ ಅಸ್ತಿತ್ವಗಳಂತೆ ಕಂಡರೂ, ನೈಜದಲ್ಲಿ ಅವು ಪರಸ್ಪರ ಪೂರಕ ಅಸ್ತಿತ್ವಗಳು.. ಎರಡಾಗಿ ಭಾಗವಾದ ತುಣುಕಲ್ಲಿ ಮೊದಲನೆಯದು ಚಲನಶೀಲವಾಗುವ ಹಾದಿ ಹಿಡಿದರೆ – ನಿನ್ನ ವಿವರದಂತೆ ಪ್ರಕೃತಿಯೆಂದು ಕರೆಯೋಣ.. ಎರಡನೆಯದು ಅದರ ಮೂಲಭೂತ ಬೇಕು ಬೇಡಗಳನ್ನು ಒದಗಿಸುವ ಶಕ್ತಿಮೂಲ ಜಡಪುರುಷವಾಗಿ, ಜತೆಗೆ ಸಮತೋಲನ ಏರ್ಪಡಿಸಿಕೊಂಡು ತಾನೂ ಅಸ್ತಿತ್ವದಲ್ಲಿ ಇದ್ದುಬಿಡುತ್ತದೆ.. ಇದೇ ನಾನು ಹೇಳುತ್ತಿದ್ದ ಸಮತೋಲನದ ಮೂಲ ತತ್ವ..”

(ಇನ್ನೂ ಇದೆ)

(Link to next episode 29: https://nageshamysore.wordpress.com/2016/03/15/00588_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%af-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

00586. ಕೊಂದ ಪಾಪ…( ಹಾಸ್ಯ)


00586. ಕೊಂದ ಪಾಪ…( ಹಾಸ್ಯ)
_________________________

  

ವಾರದ ಕೊನೆ, ಗೌಡರ ಮನೆ
ಸದ್ದು ಗದ್ದಲ, ತುಂಬಿದ ಗೊನೆ
ಇಣುಕುತ್ತಾ ನೋಡಲು ನಿಮಿಷ
ಏನಿಲ್ಲ, ಕುರಿ ಕೋಳಿಗೆ ಮೋಕ್ಷ 🙂 ||

ಅಪ್ಪಟ ಸಸ್ಯಾಹಾರಿ ಗೌಡತಿ
ಭಾನುವಾರ ಮಾತ್ರ ಭಢತಿ
ಬಾರಿಸೆ ಭರ್ತಿ ಮಾಂಸಾಹಾರಿ
ಕುರಿಕೋಳಿ ಅಪ್ಪಟ ಸಸ್ಯಾಹಾರಿ ||

ಕೇಳಿಯೆ ಅರೆಯೋ ಮಸಾಲೆ
ಗೌಡರ ಮಾತೆ ಕೊನೆ ಸಾಲೆ
ಕುರಿಕೋಳಿಮೀನೆಲ್ಲಾ ಗುತ್ತಿಗೆ
ಕೊಟ್ಟರೆ ಸಾಕವರು ತಮ್ಮೊಪ್ಪಿಗೆ ! ||

ಆಮೇಲಿನದೆಲ್ಲ ಬರಿ ಖಾರ
ರುಬ್ಬಿ ಜಬ್ಬಿದರೆ ಸಾಂಬಾರ
ಗಮಗಮ ಎದ್ದರೆ ಪರಿಮಳ
ಗೌಡರಿಗೆ ಬಾಟಲಿಯ ಗೀಳ ||

ಥರ್ಟಿ ಸಿಕ್ಸ್ಟಿ ನೈಂಟಿ ದೀಕ್ಷಾ
ಹಾಕಿರೆ ಸತ್ತವಕ್ಕೆ ಮೋಕ್ಷಾ
ಕೊಂದವ್ರ ಪಾಪ, ತಿಂದು ಪರಿಹಾರ
ಮಾಡಿ ಬಡಿಸೋರ, ಪಾಪವೆ ತೀವ್ರ! ||

– ನಾಗೇಶ ಮೈಸೂರು
( ಸುಮ್ನೆ ತಮಾಷೆಗೆ 😛)

(picture source : http://www.eastendfoods.co.uk/assets/Uploads/Recipes_Category_photos/Non-Veg-Main-.jpg)

00585. ನಿರ್ದೋಷಿ ಕವಿತೆಗೆ..


00585. ನಿರ್ದೋಷಿ ಕವಿತೆಗೆ..
____________________________   

ಮಾತಾಡಳು ಏಕೋ ಕವಿತೆ
ಆಡದಂತೆ ಮೌನ ಸುಲಿದಿದೆ ಮನಸ
ಸುಲಿದೆಸೆದ ಸಿಪ್ಪೆ ಎಂದೋ ಆಡಿದ ಮಾತು
ಒಣಗಿ ನಲುಗಿ ಒರಟಾಗಿ ಕಂಬನಿ ಕುಯಿಲು ||

ಮಾತೆ ಆಡಿರದಿದ್ದರದು ಸರಿ
ಇಂದಿಲ್ಲ, ಎಂದೂ ಇರಲಿಲ್ಲ ಮೊತ್ತ
ಈ ಕಳವಳ ಕಸಿವಿಸಿ ಯಾಕಂತ ಗೊತ್ತಾ ?
ಬೆವರಲಿ ಬಸಿದಿಟ್ಟ ಮಾಲಿದು ಹೀಗೆ ಕಳುವಾಗಿತ್ತೆ ||

ಏನೀ, ಏಕೀ ಜರೂರತ್ತು ಶರತ್ತೂ?
ಯಾವತ್ತೂ ಇರದ ಜೂರತ್ತಿನ ದರ್ಪಣ
ಕಾರಣ ಹೇಳದೆ ಹೋಗುವ ಕಾರಣವೇನು?
ಅರಿಯದ ತೊಳಲಾಟದಲಿ ಒಗಟಾಗಿ ಕವಿತೆ ||

ಆದರು ಬರದೇಕೊ ಮುನಿಸಲ್ಲಿ
ಹುಡುಕುತಲ್ಲಿ ಕಾರ್ಯಾಕಾರಣ ಪ್ರವೃತ್ತಿ
ಹಿತವೇನನೊ ಬಯಸಿದೆ ಕವಿತೆ ಮನದಲ್ಲಿ
ದೂರುತ ದೂರಾಗುವ ಹವಣಿಕೆ ಮುಖವಾಡ ||

ಮೌನ ನಿನದು, ಮೂಕನಾಗಿದ್ದು ನಾನು
ಇದು ತಾದಾತ್ಮ್ಯಕತೆಯ ಅಚ್ಚರಿಯದ್ಭುತ
ಅರಿತೂ ಅರಿಯದ ಸೋಗಲಿ ನಡೆದಿರುವೆ ನೀ
ಹುಡುಕಿರುವೆ ಕಾರಣ ನಿನ್ನ ನಿರ್ದೋಷಿಯಾಗಿಸಲು ||

– ನಾಗೇಶ ಮೈಸೂರು

(Picture source wikipedia: https://upload.wikimedia.org/wikipedia/commons/a/a4/P_literature.gif)