00589. ಅಹಲ್ಯಾ ಸಂಹಿತೆ – ೩೦ (ಜೀವಕೋಶ ಮಟ್ಟದ ತುಲನೆ)


00589. ಅಹಲ್ಯಾ ಸಂಹಿತೆ – ೩೦ (ಜೀವಕೋಶ ಮಟ್ಟದ ತುಲನೆ)
______________________________________________

(Link to previous episode 29: https://nageshamysore.wordpress.com/2016/03/15/00588_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a8%e0%b3%af-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf/)

ಅವಳ ಮಾತುಗಳನ್ನು ಕೇಳುತ್ತಲೆ ಮೆಚ್ಚುಗೆಯಿಂದ ಮುಗುಳ್ನಕ್ಕ ಗೌತಮ, ” ಊರ್ವಶಿ ನಾನೂ ಹೆಚ್ಚೇನೂ ಹೇಳುವುದಿಲ್ಲ.. ನೀನು ಹೇಳಿದಂತೆಯೆ ಮಾಡುವ.. ಅದೊಂದು ಅದ್ಭುತ ಕಾರ್ಯಯೋಜನಾ ಸೂತ್ರ.. ಅದರಲ್ಲೂ ನಿನ್ನ ಸಂಚಾಲಕತ್ವದಲ್ಲಿ ಇದಕ್ಕೆ ಇನ್ನಷ್ಟು ಮೆರುಗು ಬರುತ್ತದೆ.. ನಡೆಯಲಿ ಸಾರಥ್ಯ, ಉರುಳಲಿ ನಿನ್ನ ಈ ಯೋಜನಾ ರಥ..”

ಅವನ ಹೊಗಳಿಕೆಗೆ ನಾಚಿಕೊಂಡರು, ಸಾವರಿಸಿಕೊಂಡು, ” ಆಯ್ತು ಗೌತಮ.. ಹಾಗಾದರೆ ಮತ್ತಿನ್ನೇನು ? ಈಗಿಂದಲೆ ಆರಂಭವಾಗಿಬಿಡಲಿ ಕೆಲಸ. ನೀನು ಗಮನಿಸಿದ ಅಂಶಗಳನ್ನು ಹೇಳುತ್ತಾ ಹೋಗು ಅದರ ಕ್ರಮ, ಸೂತ್ರಾದಿ ಸುಸಂಬದ್ಧತೆಗಳ ಗೊಡವೆಯಿಡದೆ.. ತದನಂತರ ನಾನವನ್ನು ಕ್ರಮಬದ್ಧವಾಗಿ ಆಯೋಜಿಸಿ ವಿಂಗಡಿಸುತ್ತೇನೆ ಮಿಕ್ಕವರ ಜತೆಯ ಕಾರ್ಯಾಗಾರಕ್ಕೆ ಹೊಂದಿಕೊಳ್ಳುವ ಹಾಗೆ..”

ಅವಳ ಕಾರ್ಯತತ್ಪರತಾ ಮನೋಭಾವಕ್ಕೆ ಮೆಚ್ಚುಗೆ ಸೂಚಿಸುತ್ತ ಮತ್ತೆ ತಡ ಮಾಡದೆ ತನಗನಿಸಿದ ಒಂದೊಂದೆ ಅಂಶವನ್ನು ಗಟ್ಟಿ ದನಿಯಲ್ಲಿ ಬಿತ್ತರಿಸತೊಡಗಿದ ಗೌತಮ..

ಅದನ್ನು ದಾಖಲಿಸುವ ಗ್ರಾಹಕ ಫಲಕದಲ್ಲಿ ಒಮ್ಮೆ ಕ್ಷಿಪ್ರವಾಗಿ ಪರಿಶೀಲಿಸುತ್ತ ಅದನ್ನೊಂದು ತಾರ್ಕಿಕ ಗುಂಪಿನ ಹಣೆಪಟ್ಟಿಯಡಿ ಕೊಂಡಿಯಾಗಿಸುತ್ತ ಸ್ಥೂಲವಾಗಿ ವರ್ಗೀಕರಿಸುತ್ತ ಸಂಗ್ರಹಿಸತೊಡಗಿದಳು ಊರ್ವಶಿ – ಎಲ್ಲರ ಗಮನಕ್ಕೆ ಬರಬೇಕಾದ ಗುಂಪೊಂದು ಕಡೆ, ಒಂದೇ ವಸ್ತು ವಿಷಯದ ಗುಂಪಿನ್ನೊಂದು ಕಡೆ, ನಿರ್ಧರಿಸಲಾಗದವುಗಳ ತಾತ್ಕಾಲಿಕ ಗುಂಪೊಂದು ಕಡೆ ಎಂಬಂತೆ.. ಸುಮಾರು ಹೊತ್ತು ವರ್ಗೀಕರಿಸಿದ ಮೇಲೆ ಅದರ ಪ್ರಮುಖ ಅಂಶಗಳ ಸಾರಾಂಶವನ್ನು ಎತ್ತಿ ಹಿಡಿದ ಫಲಕದಲ್ಲಿ ಈ ಕೆಳಕಾಣಿಸಿದ ಅಂಶಗಳು ಎದ್ದು ಕಾಣುತ್ತಿದ್ದವು..

೦೧. ಎಲ್ಲಾ ಗಣಗಳ ಕೋಶಸಮೂಹದ ಒಂದು ಸಾಮಾನ್ಯ ಅಂಶವೆಂದರೆ ಎಲ್ಲವು ಹೆಚ್ಚುಕಡಿಮೆ ಸಮಾನ ಸ್ತರದ ಪರಿಪಕ್ವತೆಯಲ್ಲಿರುವುದು.

೦೨. ಪ್ರತಿಯೊಂದು ತಂತಮ್ಮದೆ ಆದ ಪರಿಧಿಯಲ್ಲಿ, ತಮ್ಮದೆ ಆದ ರೀತಿಯಲ್ಲಿ ವಿಕಸನವಾಗಿದ್ದರು ಪರಸ್ಪರ ಹೋಲಿಸಿ ನೋಡಿದರೆ, ಅವು ಮುಟ್ಟಿರುವ ಮಟ್ಟ ಹೆಚ್ಚು ಕಡಿಮೆ ಒಂದೆ ಸ್ತರದಲ್ಲಿವೆ – ನಿಸರ್ಗ ಸಮತೋಲನದ ವಾದಕ್ಕೆ ಇಂಬು ಕೊಡುತ್ತ.

೦೩. ಕೋಶದ ಮೂಲರಚನೆ, ಮೂಲತತ್ವ, ಸಿದ್ದಾಂತಗಳೆಲ್ಲ ಬಹುತೇಕ ಎಲ್ಲದರಲ್ಲೂ ಒಂದೆ ರೀತಿಯದಾಗಿರುವುದು.

೦೪. ಒಟ್ಟಾರೆ ಪರಿಗಣನೆಯಲ್ಲಿ ಆ ಕೋಶದ ರಚನೆ, ವಿನ್ಯಾಸ, ವಿಕಸಿತ ಮಟ್ಟವನ್ನು ಊರ್ವಶಿಯ ಮಟ್ಟದ ಅತ್ಯುನ್ನತ ಶ್ರೇಣಿಯ ಕೋಶದ ಸ್ತರಕ್ಕೆ ಹೋಲಿಸಿದರೆ, ಎಲ್ಲವು ಸರಿ ಸುಮಾರು ಶೇಕಡ ಹತ್ತರ ಪ್ರಬುದ್ಧತೆ, ಪರಿಪಕ್ವತೆಯ ಮಟ್ಟದಲ್ಲಿದೆ.. ಊರ್ವಶಿಯ ಕೋಶದ ಸತ್ವ ಗುಣಮಟ್ಟ ತಲುಪಬೇಕೆಂದರೆ ಇರುವ ಅಂತರ ಕನಿಷ್ಟಾ ಶೇಕಡಾ ತೊಂಭತ್ತರಷ್ಟು..!

೦೫. ಊರ್ವಶಿಯನ್ನು ಸೃಜಿಸಲು ಬಳಸಿದ ಕೋಶ ರಚನೆಗು, ಪ್ರಸ್ತುತವಿದ್ದ ಸಾಮಾನ್ಯ ಕೋಶರಚನೆಗು ಇರುವ ಮತ್ತೊಂದು ಅಗಾಧ ವ್ಯತ್ಯಾಸದ ಮತ್ತೊಂದು ಪ್ರಮುಖ ಅಂಶ – ಅದರಲ್ಲಿ ಅಡಕವಾಗಿರುವ ಸತ್ವ ಮತ್ತದರ ಸ್ವಯಂಭೂ ಸ್ವಭಾವ.

ಸಾಮಾನ್ಯ ಪರಿಸ್ಥಿತಿಯಲ್ಲಿ ಮಾಮೂಲಿನ ಕೋಶಗಳು ಪುಟ್ಟ ಕಾರ್ಯಾಗಾರದಂತೆ ವರ್ತಿಸಿದರು, ಕೆಲವು ಕಾರ್ಯಗಳಿಗೆ ಅವುಗಳಲ್ಲಿ ಸ್ವಯಂ ನೇತೃತ್ವವಾಗಲಿ, ಸ್ವಯಂ ಬುದ್ಧಿಯಾಗಲಿ ಇಲ್ಲ – ಮೆದುಳು, ಹೃದಯ, ಶ್ವಾಸಕಾಂಗ, ಅಂತಃಕರಣ ಇತ್ಯಾದಿಗಳು ಹಿನ್ನಲೆಯಲ್ಲಿ ಕೆಲಸ ಮಾಡಿ ಅವುಗಳನ್ನು ಮುನ್ನಡೆಸಬೇಕು.

ಆದರೆ ಊರ್ವಶಿಯ ಕೋಶದ ರಚನೆಯಲ್ಲಿ ಪ್ರತಿ ಕೋಶಕ್ಕೂ ಅದರದೆ ಆದ ಒಂದು ಸೂಕ್ಷ್ಮಮೆದುಳು, ಸೂಕ್ಷ್ಮಹೃದಯ ಇತ್ಯಾದಿಗಳು ಕೋಶದ ಮಟ್ಟದಲ್ಲೆ ಉದ್ಭವವಾಗಿಬಿಟ್ಟಿವೆ.. ಕೇಂದ್ರದ ಮೆದುಳು, ಹೃದಯಗಳೇನಿದ್ದರೂ ಮೇಲುಸ್ತುವಾರಿ ಮತ್ತು ಸಮನ್ವಯ ಕಾರ್ಯಗಳಿಗೆ ಮಾತ್ರವೆ… !

ಇದರಿಂದಾಗಿ ಅವು ತಮಗೆ ಬೇಕಾದಷ್ಟು ದಿನ ಬದುಕಿರಬಲ್ಲವು, ಬೇಡವಾದಾಗ ತಮ್ಮನ್ನೆ ವಿಭಜಿಸಿಕೊಂಡು ಹೊಸತನ್ನು ಸೃಷ್ಟಿಸಿಕೊಂಡು, ತಾವು ಅಸ್ತಿತ್ವದಿಂದಲೆ ಮರೆಯಾಗಿಬಿಡಬಲ್ಲವು – ಸಮತೋಲನಕ್ಕೆ ಯಾವ ತೊಡಕೂ ಆಗದಂತೆ…

ಆದರೆ ಮಾಮೂಲಿ ಕೋಶಗಳ ಕಥೆ ಹಾಗಲ್ಲ – ಹೆಚ್ಚುಕಡಿಮೆ ನಿತ್ಯವೂ ಸಾಯುವ ಕೋಶಗಳ ಪ್ರವರ; ಅದನ್ನು ಸಂತುಲಿಸಲು ಹೊಸತಿನ ಕೋಶಗಳ ಉತ್ಪನ್ನವಾಗುವ ಕಾರ್ಯಕ್ಕೆ ಬಾಹ್ಯಶಕ್ತಿಯೆ ಆಧಾರ.. ಅದರಿಂದಾಗಿಯೆ ದಿನಗಳೆದಂತೆ, ವಯಸ್ಸಾದಂತೆ ಸಾಯುವ ಕೋಶಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ.. ಹೊಸತಾಗಿ ಹುಟ್ಟುವ ಕೋಶಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ – ಅಂತಿಮವಾಗಿ ಇದು ಸಾವಿನ ಸೋಪಾನವಾಗಿ ಪರಿವರ್ತಿತವಾಗುವತನಕ.

೦೬. ಪ್ರಚಲಿತ ವಿಧಾನದಲ್ಲಿ ವಿಕಸನ ಮುಂದುವರೆದರೆ ಚರಿತ್ರೆ, ಇತಿಹಾಸದ ಆಧಾರದಲ್ಲಿ ಹೇಳುವುದಾದರೆ ಕೋಟಿ ಕೋಟಿ ವರ್ಷಗಳ ವಿಕಸನ ಹೀಗೆ ಮುಂದುವರೆದರೂ ಅವು ಊರ್ವಶಿಯಂತಹ ಉತ್ತಮ ತಳಿಯನ್ನು ಸೃಜಿಸುವ ಸ್ವಯಂಪಕ್ವತೆಯ ಮಟ್ಟವನ್ನು ಮುಟ್ಟಲಾಗುವುದಿಲ್ಲ ; ಅಬ್ಬಬ್ಬಾ ಎಂದರೆ ಪ್ರಸ್ತುತವಿರುವ ಶೇಕಡಾ ಹತ್ತರಿಂದ ಇಪ್ಪತ್ತಕ್ಕೆ ಮುಟ್ಟುತ್ತವೊ ಏನೊ…?!

೦೭. ಒಂದು ವೇಳೆ ಎಂದೊ ಒಮ್ಮೆ ಮುಟ್ಟುತ್ತವೆ ಎಂದಿಟ್ಟುಕೊಂಡರು, ತಮ್ಮದೆ ಆದ ಮೆದುಳು, ಹೃದಯ, ಶ್ವಾಸಾಂಗವನ್ನು ಹೊಂದಿರುವಂತಹ ಕೋಶಗಳ ವಿಕಸನವಾಗುವುದು ಒಟ್ಟಾರೆ ಅಸಾಧ್ಯದ ಮಾತು..

೦೮. ಪ್ರಸ್ತುತ ಕೋಶಗಳ ಹುಟ್ಟು ಸಾವಿನ ಚಕ್ರ ಮಾನವ ಜೀವಿತದ ರೀತಿಯೆ ಇದೆ – ಒಂದು ನಿಶ್ಚಿತ ಆಯಸ್ಸಿನ ನಂತರ ನಶಿಸಿ ಹೋಗುವುದು.. ಆದರೆ ಊರ್ವಶಿಯ ಕೋಶದ ವಿಷಯದಲ್ಲಿ ಸಾವೆಂಬುದೆ ಇಲ್ಲ.. ಹಳತಾದ ಕೋಶ ತನ್ನನ್ನೆ ವಿಭಜಿಸಿಕೊಂಡು ಎಳೆಯದಾದ ಎರಡಾಗಿ ತನ್ನ ಅಸ್ತಿತ್ವವನ್ನು ಮುಂದುವರೆಸಿಕೊಂಡು ಹೋಗುತ್ತದೆ..
೦೯. ಊರ್ವಶಿಯ ಕೋಶತತ್ವ ಅಯೋನಿಜ ಸ್ವರೂಪದ್ದಾದರೆ ಪ್ರಸ್ತುತವಿರುವ ಮಾನವ ಕೋಶ ಯೋನಿಜ ಮೂಲದ ಪ್ರಕೃತಿ-ಪುರುಷ ತತ್ವಗಳ ಸಮ್ಮಿಳನದಿಂದಾದ ಸ್ವರೂಪದ್ದು.

೧೦. ಎಲ್ಲಾ ಕೋಶಗಳಲ್ಲೂ ಒಂದೆ ಒಂದು ಸಮಾನವಿರುವ ಅಂಶವೆಂದರೆ – ಎಲ್ಲದರ ಮೂಲಸ್ವರೂಪದ ದ್ರವ್ಯ ಮತ್ತು ಅವುಗಳು ಮಾಡಲ್ಪಟ್ಟಿರುವ ಮೂಲಭೂತ ತತ್ವಕೋಶಗಳು ಅಪ್ಪಟ ಸರ್ವಸಮ. ಒಂದಿನಿತೂ ವ್ಯತ್ಯಾಸವಿರದ ಈ ಮೂಲಸ್ವರೂಪ, ಎರಡು ಬಗೆಯ ಕೋಶಗಳ ಹುಟ್ಟು ಅಸ್ತಿತ್ವದ ಸ್ವರೂಪ ಸಂಪೂರ್ಣವಾಗಿ ಒಂದೆ ಬಗೆಯದು ಎಂಬುದಕ್ಕೆ ಸಾಕ್ಷಿಯಾಗಿವೆ. ಬಹುಶಃ ಸಂಶೋಧನೆಗೆ ಬಲವಿತ್ತು ಇಂಬು ಕೊಡುವ ಒಂದೆ ಒಂದು ಸಮಾಧಾನಕರ, ಪ್ರೋತ್ಸಾಹಕರ ಪ್ರಮುಖವಾದ ಅಂಶವೆಂದರೆ ಇದೊಂದೆ ಎಂದು ಹೇಳಬಹುದು.

ತನ್ನ ದಾಖಲಿಸಿಕೊಂಡ ನೂರಾರು ಅಂಶಗಳಿಂದ ಪ್ರಮುಖ ಹತ್ತನ್ನು ಮಾತ್ರ ಬೇರ್ಪಡಿಸಿಟ್ಟಿದ್ದಳು ಊರ್ವಶಿ. ಈ ಹತ್ತು ಪ್ರಮುಖ ಅಂಶಗಳು ಬ್ರಹ್ಮದೇವನೂ ಸೇರಿದಂತೆ ಗಣ ಪ್ರಮುಖರ ಜತೆ ಸೇರಿ ಮಂಥನ ಕಾರ್ಯಾಗಾರದಲ್ಲಿ ಚಿಂತನೆ ನಡೆಸಬೇಕಾದ ವಿಚಾರಾಂಶಗಳು. ಮಿಕ್ಕವುಗಳನ್ನು ಬೇರೆಯೆ ಆದ ಗಣಗಳ ಜವಾಬ್ದಾರಿಯನುಸಾರ ವಿಂಗಡಿಸಿ ಆಯೋಜಿಸಬೇಕು…

ಅಲ್ಲಿ ದಾಖಲಿಸಿದ್ದ ಹತ್ತನ್ನು ಒಮ್ಮೆ ದೀರ್ಘವಾಗಿ ನೋಡುತ್ತ ಓದತೊಡಗಿದ ಗೌತಮ. ಕರಡು ರೂಪವಾದ ಕಾರಣ ಅವನು ಬಾಯಲ್ಲಿ ಹೇಳಿದ್ದೆ ಅಲ್ಲಿಯೂ ಅದೇ ರೂಪದಲ್ಲಿ ದಾಖಲಾಗಿತ್ತು. ಹೀಗಾಗಿ ಅದನ್ನು ಓದುತ್ತಿದ್ದ ಹಾಗೆಯೆ ಅದನ್ನು ಹೊರಡಿಸಿದ ಹಿನ್ನಲೆಯ ಚಿಂತನೆಯೂ ನೆರವಿಗೆ ಬಂದು ಎಲ್ಲ ಅಂಶಗಳ ಸೂಕ್ತತೆಯೂ ಚೆನ್ನಾಗಿ ಮನದಟ್ಟಾಯ್ತು.

” ಊರ್ವಶಿ..ಇದರಲ್ಲಿ ಎರಡು ಅಂಶಗಳು ನನಗೆ ತುಂಬಾ ಪ್ರಮುಖವಾಗಿ ಕಾಣುತ್ತಿವೆ.. ಅವೆರಡನ್ನು ಬ್ರಹ್ಮದೇವನ ಜತೆಯಲ್ಲೆ ಮಥಿಸಬೇಕೇ ಹೊರತು, ಮಿಕ್ಕವರ ಜತೆ ಪ್ರಯೋಜನಕ್ಕೆ ಬರುವುದಿಲ್ಲ..” ಎಂದ ಗೌತಮ.

ಅದೇನು ಎನ್ನುವಂತೆ ಹುಬ್ಬೇರಿಸಿ ಅವನನ್ನೆ ದಿಟ್ಟಿಸಿದಳು ಊರ್ವಶಿ..

“ಈ ಪ್ರಯೋಗ ಯಶಸ್ಸಾಗಬೇಕಿದ್ದರೆ ವೇಗ ತುಂಬಾ ಮುಖ್ಯ. ಅದನ್ನು ಗಳಿಸಲು ಸಾಧ್ಯವಿಲ್ಲವೆಂದಾದರೆ ಹೇಗಾದರೂ ಈ ಎರಡು ಅಂಶಗಳನ್ನು ಸಾಧಿಸುವ ಕ್ಷಿಪ್ರದಾರಿಯೊಂದನ್ನು ಹುಡುಕಬೇಕು – ಮೊದಲನೆಯದು, ಮಾನವ ಕೋಶಗಳ ಆಯಸ್ಸು ವೃದ್ಧಿಸುವಂತೆ ಮಾಡುವ ಪ್ರಕ್ರಿಯೆ; ಹಳತು ಕೋಶ ಸತ್ತು ಹೊಸತರ ಸೃಷ್ಟಿಯಾಗುವುದು, ವಯಸಾದಂತೆ ದುರ್ಬಲವಾಗಿ ಬಿಡುವುದರಿಂದ ಅಂತಿಮವಾಗಿ ಅದು ಸಾವಿನಲ್ಲಿ ಪರ್ಯಾವಸಾನವಾಗುತ್ತಿದೆಯಲ್ಲವೆ ? ಅದನ್ನು ಅಧಿಗಮಿಸಬೇಕಾದರೆ ಹೇಗಾದರು ಕೋಶಗಳು ಸಾಯದೆ ಜೀವಂತವಿದ್ದು ಸಕ್ರೀಯವಿರುವಂತೆ ನೋಡಿಕೊಳ್ಳಬೇಕು..”

” ಅದು ನಿಜವೆ.. ಇನ್ನು ಎರಡನೆಯ ಅಂಶವಾವುದು ಗೌತಮ..?”

” ಇನ್ನಾವುದಾಗಿರಲಿಕ್ಕೆ ಸಾಧ್ಯ ? ಪ್ರತಿ ಕೋಶವೂ ತನ್ನದೆ ಅಸ್ತಿತ್ವದಲ್ಲಿ ತಾನೇ ಸ್ವಯಂಭುವಾಗಿರಲು ಸಾಧ್ಯವಾಗುವಂತಹ ಸೂಕ್ಷ್ಮಹೃದಯ, ಮೆದುಳು, ಇತ್ಯಾದಿಗಳನ್ನೊಳಗೊಂಡ ಕೋಶದ ಸಂಶೋಧನೆ.. ಇದು ಯಶಸ್ವಿಯಾಗದ ಹೊರತು ತಂತಾನೆ ಸ್ವನಿಯಂತ್ರಣದಲ್ಲಿ ನಡೆಯುವ ಪೀಳಿಗೆ ತಳಿಯ ಶೋಧನೆ ಅಸಾಧ್ಯ..”

” ಹೌದಲ್ಲವೆ..? ಇದು ಮುಖ್ಯವಾದ ಅಂಶವೆ..”

“ಇವೆರಡನ್ನು ಬ್ರಹ್ಮದೇವನ ಜತೆಗೆ ಬೇರೆಯಾಗಿ ಸಂವಾದಿಸಲು ಆಗುವಂತೆ ಮತ್ತೊಂದು ಕಾರ್ಯಾಗಾರದ ವ್ಯವಸ್ಥೆ ಮಾಡೋಣ.. ಆ ಎರಡರ ಜತೆಗೆ ಮತ್ತೊಂದು ಹೊಸ ಅಂಶವೂ ಸೇರಿಕೊಂಡಿರಲಿ – ಸಂಶೋಧನೆಯ ಸದ್ಯದ ಹಂತ, ಹಂತದ ಪ್ರವೃತ್ತಿಯನ್ನು ಅಧಿಗಮಿಸಿ, ಕ್ಷಿಪ್ರದಲ್ಲಿಯೆ ಮಧ್ಯಮ ಸ್ತರದ ಜಿಗಿತ ಪ್ರಗತಿಯನ್ನು ಸಾಧಿಸುತ್ತ, ದೂರಗಾಮಿತ್ವದ ಸಲುವಾಗಿ ಕ್ರಾಂತಿಕಾರಕವೆನ್ನಬಹುದಾದ ಮಹಾನ್ ಪರಿವರ್ತನಾ ಯಾನವನ್ನು ಹೇಗೆ ಸಾಧಿಸಬಹುದೆನ್ನುವುದೆ ಆ ಮೂರನೆ ವಿಷಯ..”

ಅವನ ಕ್ಷಿಪ್ರಗತಿಯ ಗ್ರಹಣ ಮತ್ತು ಆಲೋಚನಾ ಶಕ್ತಿಗೆ ಮನದಲ್ಲೆ ತಲೆದೂಗುತ್ತ ಆಗಲೆಂದು ತಲೆಯಾಡಿಸಿ ಮೇಲೆದ್ದಳು ಊರ್ವಶಿ.. ಅವಳಿಗೀಕೇಕೊ ಏನೊ ವಿಶೇಷವಾದ ಹುರುಪು ಹುಟ್ಟಿಕೊಂಡುಬಿಟ್ಟಿತ್ತು ಈ ಕಾರ್ಯ ಯೋಜನೆಯಲ್ಲಿ!

********************

(ಇನ್ನೂ ಇದೆ)

(Link to next episode 31: https://nageshamysore.wordpress.com/2016/03/17/00593-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a7-%e0%b2%a4%e0%b2%82%e0%b2%a1%e0%b2%a6-%e0%b2%a8%e0%b2%be/)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s