00596. ಅಹಲ್ಯಾ ಸಂಹಿತೆ – ೩೩ (ಜೀವಕೋಶದ ಆಯಸ್ಸು ಹೆಚ್ಚಿಸಲು ಯೋಜನೆ)


00596. ಅಹಲ್ಯಾ ಸಂಹಿತೆ – ೩೩ (ಜೀವಕೋಶದ ಆಯಸ್ಸು ಹೆಚ್ಚಿಸಲು ಯೋಜನೆ)

(Link to previous link 32: https://nageshamysore.wordpress.com/2016/03/17/00595-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a8-%e0%b2%aa%e0%b3%8d%e0%b2%b0%e0%b2%be%e0%b2%ae%e0%b3%81/)

ದೇವರಾಜನ ಮೊಗದಲ್ಲಿ ಮೂಡಿದ ಪ್ರಶ್ನಾರ್ಥಕ ಚಿಹ್ನೆಯನ್ನು ಗಮನಿಸಿದ ಬ್ರಹ್ಮದೇವ, ಅವನಿಗೆ ಮನದಟ್ಟಾಗಿಸಲು ಕೊಂಚ ಹೆಚ್ಚು ಸರಳ ರೂಪದಲ್ಲಿ ವಿವರಿಸತೊಡಗಿದ.

” ದೇವೇಂದ್ರ.. ಜೈವಿಕ ವಸ್ತುಗಳೆಲ್ಲವು ಮಾಡಲ್ಪಟ್ಟಿರುವ ಮೂಲವಸ್ತು ಈ ಜೀವಕೋಶವೆನ್ನುವುದು ನೀನು ಕೇಳಿ ಬಲ್ಲೆಯಷ್ಟೆ ? ಸಸ್ಯಜೀವಿಯಾದರೂ ಸರಿ, ಪ್ರಾಣಿಯಾದರೂ ಸರಿ…”

“ಅದನ್ನು ಬಲ್ಲೆ ಪಿತಾಮಹ… ದೇಹದ ಪ್ರತಿಯೊಂದು ಅಂಗವೂ ಅದರ ಮೂಲ ರೂಪಾಗಿಟ್ಟುಕೊಂಡಿರುವುದು ಈ ಕೋಶದ ಸಂಯೋಜಿತ ರೂಪವನ್ನೆ ತಾನೆ?”

“ನಿಜ.. ಈಗ ಆ ಜೈವಿಕ ಜೀವಿಯ ಹುಟ್ಟು ಅಳಿವುಗಳ ನೀರ್ಧಾರವಾಗುವುದು ಹೇಗೆ ಎಂದು ಅರಿವಿದೆಯೆ ಮಹೇಂದ್ರ?”

ಇಲ್ಲವೆನ್ನುವಂತೆ ತಲೆಯಾಡಿಸಿದ ಇಂದ್ರ.

” ಒಂದು ಜೀವಿ ಹುಟ್ಟಿತೆಂದಿಟ್ಟುಕೊ.. ಅದರರ್ಥ ಕೋಟ್ಯಾಂತರ ಸಂಖ್ಯೆಯಲ್ಲಿ ಅದರಲ್ಲಿನ ಹೊಸ ಜೀವಕೋಶಗಳು ಸಕ್ರೀಯವಾಯ್ತೆಂದು ಅರ್ಥ..”

“ಹೂಂ..?”

” ಆದರೆ ದುರದೃಷ್ಟವಶಾತ್ ಈ ಕೋಶಗಳ ಆಯಸ್ಸು ತೀರಾ ಕಡಿಮೆ.. ಅದರಿಂದಾಗಿಯೆ ದಿನಂಪ್ರತಿ ದೇಹದ ಸಾವಿರಾರು, ಲಕ್ಷಾಂತರ ಕೋಶಗಳು ಏಕಾಏಕಿ ಸಾಯುತ್ತವೆ.. ಅದೇ ಹೊತ್ತಿನಲ್ಲಿ ಅಷ್ಟೆ ಸಂಖ್ಯೆಯ ಅಥವಾ ಅದನ್ನು ಮೀರಿಸಿದ ಹೊಸ ಕೋಶಗಳು ಹುಟ್ಟಿಕೊಳ್ಳುತ್ತವೆ.. ಹೀಗೆ ಅವೆರಡರ ಸಮತೋಲಿತ ರೂಪವೆ, ಜೀವಿಯು ಬದುಕಿದ್ದು ತನ್ನ ದೈನಂದಿನ ಚಟುವಟಿಕೆಯನ್ನು ನಿರಂತರವಾಗಿಸುವಂತೆ ಕಾಯ್ದುಕೊಳ್ಳುತ್ತದೆ..”

ಆ ನಡುವೆ ತಟ್ಟನೆ ಬಂದ ಅನುಮಾನವೊಂದರ ಪರಿಹಾರಕ್ಕೆಂಬಂತೆ ನಡುವೆಯೆ ಪ್ರಶ್ನಿಸಿದ ಮಹೇಂದ್ರ, ” ಪಿತಾಮಹ, ದೇಹದೊಳಗೆ ದುಡಿಯುತ್ತ ಕಾರ್ಯಾಚರಣೆ ನಡೆಸಿ ಕ್ಷಯಿಸಿಹೋಗುವ ಕೋಶಗಳ ಕಲ್ಪನೆಯೇನೊ ಸರಿ.. ಸುಲಭದಲ್ಲಿ ಅಂದಾಜಿಗೆ ಸಿಗುತ್ತವೆ.. ಆದರೆ ಅವು ಕ್ಷಯಿಸಿದಂತೆ, ಅದೇ ಮಟ್ಟದಲ್ಲಿ ಹೊಸತರ ನಿರ್ಮಾಣ ಕಾರ್ಯವೂ ನಿರಂತರವಾಗಿಯೆ ನಡೆದಿರಬೇಕಲ್ಲಾ? ಶಕ್ತಿತತ್ವದನುಸಾರ ಅವು ಹೇಗೆ ನಿಭಾಯಿಸಿಕೊಳ್ಳುತ್ತವೆ ?” ಎಂದ.

ದೇವೇಂದ್ರನ್ನಲ್ಲಿರುವ ಮೆಚ್ಚಿಗೆಯ ಅಂಶವೆ ಅದು. ಅರ್ಥ ಮಾಡಿಕೊಂಡು ಸರಿಯಾದ ಪ್ರಶ್ನೆ ಕೇಳುವುದರಲ್ಲಿ ಅವನು ನಿಷ್ಣಾತ. ಅದನ್ನೇ ದನಿಯಲ್ಲಿ ದನಿಯಲ್ಲಿ ವ್ಯಕ್ತಪಡಿಸುತ್ತ ಉತ್ತರಿಸಿದ್ದ ಬ್ರಹ್ಮದೇವ: ” ಈ ಜೀವಿಗಳೇಕೆ ಆಹಾರ ಸರಪಳಿಯ ಸುಳಿಯಲಿ ತಮ್ಮ ಜೀವಿತವನ್ನು ನಿರ್ಬಂಧಿಸಬೇಕೆಂದು ಈಗರಿವಾಯ್ತೆ ಮಹೇಂದ್ರಾ? ಇದೇ ಅದರ ಪ್ರಮುಖ ಕಾರಣ; ಆಹಾರದ ಸೇವನೆಯ ಮೂಲಕ ಒದಗುವ ಶಕ್ತಿಯ ಭಾಗಾಂಶವೆ ಹೊಸ ಕೋಶಗಳ ರಚನೆಗೂ ಬಳಕೆಯಾಗುತ್ತದೆ..”

“ಅಂದ ಮೇಲೆ ಇದೊಂದು ನಿರಂತರ ಕ್ರಿಯೆಯಾಗಿ ಸಂತುಲನದಲ್ಲಿರಬೇಕಲ್ಲಾ ? ಯಾಕೆ ಮತ್ತಿಲ್ಲಿ ಹುಟ್ಟುಸಾವಿನ ಪ್ರಶ್ನೆ?”

” ಅಲ್ಲಿಯೆ ಚಮತ್ಕಾರವಡಗಿರುವುದು ದೇವರಾಜ. ಜೀವಿಯ ಹುಟ್ಟಿನ ಸಮಯದಲ್ಲಿ ಎಲ್ಲವು ಹೊಸತಾಗಿ, ಸಲೀಸಾಗಿ ನಡೆಯುವ ಕಾರಣ ಯಾವುದೇ ತೊಡಕಿರುವುದಿಲ್ಲ. ಆರಂಭದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಹೊಸ ಕೋಶಗಳು ಉತ್ಪತ್ತಿಯಾಗುವುದರಿಂದಲೆ ದೇಹದ ಬೆಳವಣಿಗೆಯಾಗಲಿಕ್ಕೆ ಸಾಧ್ಯ. ಆದರೆ ಸಮಯ ಕಳೆದಂತೆಲ್ಲ ಈ ಯಂತ್ರದ ನಿರಂತರ ಬಳಕೆಯಿಂದಾಗಿ ಅದರ ಕ್ಷಮತೆಯೂ ಕುಗ್ಗಬೇಕಲ್ಲವೆ ? ಅರ್ಥಾತ್, ಆಗ ನಶಿಸುವ ವೇಗದಲ್ಲೇನು ಬದಲಾವಣೆಯಿರುವುದಿಲ್ಲವಾದರು, ಹೊಸತರ ಸೃಷ್ಟಿ ನಿಧಾನವಾಗುತ್ತ ಹೋಗುತ್ತದೆ..ಅಂದರೆ ದಿನ ಕ್ರಮೇಣ ಹಳೆಯ ಸತ್ತ ಜೀವಕೋಶಗಳು ಪೇರಿಸಿಕೊಳ್ಳುತ್ತಾ ಹೋಗುತ್ತವೆ, ಆದರೆ ಅವನ್ನು ಹೊರದೂಡಿ ಅಲ್ಲಿ ಹೊಸಕೋಶಗಳ ಬದಲಾಯಿಸಿಡುವ ಕೆಲಸ ಕುಂಠಿತವಾಗಿಬಿಡುತ್ತದೆ…”

” ಓಹ್ .. ಈ ಸತ್ತ ಕೋಶಗಳು ದೇಹ ಬಿಟ್ಟು ಹೋಗದ ಕಾರಣಕ್ಕೆ ದೇಹದ ಮೇಲಿನ ಸುಕ್ಕುಗಟ್ಟಿದ ಚರ್ಮಗಳಾಗಿ ಕಾಣಿಸಿಕೊಳ್ಳುವುದು ?”

” ಹೌದು.. ವಯಸಾದಂತೆ ಹೊಸತಾಗಿ ಸೃಷ್ಟಿಯಾಗುವ ಕೋಶಗಳು ಕಡಿಮೆಯಾಗುತ್ತ ಹೋಗುತ್ತವೆ, ಆದರೆ ಸಾಯುವ ಕೋಶಗಳೇನು ಕಡಿಮೆಯಾಗುವುದಿಲ್ಲ.. ಹೀಗಾಗಿ ಉಂಟಾದ ಅಸಂತುಲಿತ ಸ್ಥಿತಿಯೆ ಕ್ರಮೇಣ ಮುಂದುವರೆದು, ಇನ್ನು ಜೀವಿ ಆ ಸ್ಥಿತಿಯಲ್ಲಿ ದೇಹದೆಲ್ಲಾ ಬೇಡಿಕೆ ಪೂರೈಸಲು ಸಾಧ್ಯವೆ ಇಲ್ಲಾ ಎನ್ನುವಂತಹ ಸ್ಥಿತಿ ತಲುಪಿದಾಗ ಸಾವಿನ ಅಂತಿಮ ಕ್ಷಣ ಎದುರು ನಿಲ್ಲುತ್ತದೆ.. ಇದು ಹೆಚ್ಚುಕಡಿಮೆ ದೇಹದ ಎಲ್ಲಾ ಕೋಶಗಳಲ್ಲು ನಡೆಯುವಾಗ, ನಿವ್ವಳ ಮೊತ್ತದಲ್ಲಿ ಸಮತೋಲನ ಹಳಿ ತಪ್ಪಿ ವೃದ್ದಾಪ್ಯವೆಂಬ ಹೆಸರಡಿ ವಿಶ್ರಾಂತ ಸ್ಥಿತಿಯತ್ತ ನಡೆಯತೊಡಗುತ್ತವೆ – ಸಾವಿನ ಕೊನೆ ತಲಪುವ ತನಕ..”

” ಅಂದರೆ ನೀನು ಹೇಳುವುದರ ಅರ್ಥ – ಯಾವುದಾದರು ವಿಧಾನದಲ್ಲಿ ಈ ಕೋಶಗಳ ಆಯಸ್ಸು ಹೆಚ್ಚಾಗಿ, ಅವು ಬೇಗನೆ ಸಾವಿನತ್ತ ನಡೆಯುವುದು ತಪ್ಪಿದರೆ ಆ ಮೂಲಕ ಜೀವಿಯ ಆಯಸ್ಸನ್ನು ಹೆಚ್ಚಿಸಬಹುದು ಎಂತಲೆ?”

ಹೌದೆನ್ನುವಂತೆ ತಲೆಯಾಡಿಸಿದ ಬ್ರಹ್ಮದೇವ.

” ಇದನ್ನು ಸಾಧಿಸುವ ದಾರಿ ಯಾವುದೆನ್ನುವುದನ್ನು ಹುಡುಕುವುದು ನಮ್ಮ ಮುಂದಿನ ಹೆಜ್ಜೆ ” ಗೌತಮ ಅದರ ತಾರ್ಕಿಕ ಅಂಶವನ್ನು ಎತ್ತಿ ತೋರಿಸುತ್ತ ನುಡಿದ.

” ಅದು ಬಾಯಿ ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲವೆನ್ನುವುದು ನೈಜ ವಿಷಯ, ಅದಿರಲಿ. ಈಗ ಆ ಗುರಿಯ ಸಾಧನೆಗೆ ಕಾರ್ಯತಂತ್ರವೇನಿರಬೇಕೆಂಬುದು ನಮ್ಮ ಮುಂದಿರುವ ಪ್ರಮುಖ ಪ್ರಶ್ನೆ..” ಎಂದ ಬ್ರಹ್ಮದೇವ.

ಏನನ್ನೊ ಯೋಚಿಸುತ್ತ ಗಹನ ಚಿಂತೆಯಲ್ಲಿದ್ದಂತೆ ಕಂಡ ದೇವರಾಜ, ” ಈ ಸಮಸ್ಯೆ ಎಲ್ಲ ತಂಡದ್ದು ಆಗಿರುವ ಕಾರಣ, ಪ್ರತಿಯೊಬ್ಬರೂ ಅವರವರ ತಜ್ಞರ ಪರಿಣಿತಿ ಬಳಸಿ ಈ ವಿಷಯದ ಕುರಿತು ಸಂಶೋಧನೆ ನಡೆಸುತ್ತಾರೆಂದಾಯ್ತಲ್ಲವೆ?”

” ಹೌದು.. ಅದು ನಿಜ.. ಹೀಗಾಗಿ ಅವರಲ್ಲಿ ಯಾರಾದರೊಬ್ಬರು ಯಶಸ್ವಿಯಾದರೂ ಮಿಕ್ಕವರಿಗೆ ಅದರ ಲಾಭ ದೊರಕುತ್ತದೆ..” ಎಂದ ಗೌತಮ.

” ಇಲ್ಲ ಗೌತಮ.. ನನಗೆ ಹಾಗನಿಸುವುದಿಲ್ಲ.. ಹೀಗೆ ಹತ್ತು ಹಲವಾರು ಗುಂಪುಗಳಲ್ಲಿ ಹಂಚಿ ಹೋದಾಗ ಅ ತಜ್ಞರೆಲ್ಲ ತಮ್ಮ ಪರಿಣಿತಿಯನ್ನು ಸಮರ್ಥವಾಗಿ ಬಳಸಬಲ್ಲರೆಂದು ನನಗನಿಸುವುದಿಲ್ಲ.. ಅಲ್ಲದೆ ಪ್ರತಿಯೊಬ್ಬರು ಎಲ್ಲಾ ಸೂಕ್ಷ್ಮ ವಿಷಯಗಳಲ್ಲಿ ಪರಿಣಿತಿಯಿರುವವರೆಂದು ಹೇಳಲಾಗದು…”

” ಅಂದರೆ..?”

” ಅಂದರೆ ನನಗನಿಸುವಂತೆ, ಈ ಮೂರು ಪ್ರಮುಖ ಅಂಶಗಳಿಗೆ ಸಂಬಂಧಿಸಿದ ತಜ್ಞರನ್ನೆಲ್ಲ ಒಗ್ಗೂಡಿಸಿ ಮೂರು ಪ್ರತ್ಯೇಕ ತಂಡಗಳನ್ನು ರೂಪಿಸಬೇಕು, ಪ್ರತಿ ಗುಂಪಿನಿಂದ ಆಯ್ದುಕೊಂಡು. ಆಗ ಅವರೆಲ್ಲರ ಸಮಸ್ತ ಶಕ್ತಿ, ಸಾಮರ್ಥ್ಯ, ತರ್ಕಗಳು ಒಂದೇ ನೆರಳಡಿ ಕೆಲಸ ಮಾಡಲು ಸಾಧ್ಯ.. ಇಲ್ಲಿನ ಕಾರ್ಯತಂತ್ರದ ಪ್ರಮುಖ ಅಂಶ ಇದೇ..”

” ಯೋಜನೆಯೇನೊ ಉಚಿತವಾಗಿಯೆ ಕಾಣುತ್ತಿದೆ.. ಇದರಿಂದ ಪ್ರತಿಯೊಬ್ಬರೂ ಅವರದೆ ಆದ ವಿಧಿ ವಿಧಾನಗಳನ್ನು ಕಂಡುಹಿಡಿಯುವುದಕ್ಕೇನೊ ಕಡಿವಾಣ ಬೀಳುತ್ತದೆ..”

” ಅಷ್ಟು ಮಾತ್ರವಲ್ಲ ಬ್ರಹ್ಮದೇವ.. ಇದೇ ಪ್ರಯೋಗ ಪ್ರತಿ ತಂಡದಲ್ಲು ಮರುಕಳಿಸುತ್ತಿದ್ದರೆ ಅದಕ್ಕೆ ತಗುಲುವ ದ್ರವ್ಯಾದಿ ವ್ಯರ್ಥ ಪ್ರಯತ್ನದ ಅಳತೆ ಮಾಡಲಾದೀತೆ ? ಈಗ ಈ ಕಾರ್ಯತಂತ್ರದಿಂದ ಆ ವ್ಯರ್ಥ ವೆಚ್ಚವನ್ನು ತಡೆದು ಒಂದೆ ಸೂರಿನಡಿಯ ಸಮಷ್ಟಿತ ವೆಚ್ಚವನ್ನಾಗಿಸಬಹುದಲ್ಲವೆ ? ಇದು ಎಲ್ಲ ತರದಲ್ಲು ಗೆಲಿಸುವ ಕಾರ್ಯತಂತ್ರವೆ.. ನಾವು ಈ ತಂಡದ ಉಸ್ತುವಾರಿ ಮಾಡಿಕೊಂಡು ಮಾರ್ಗದರ್ಶನ ನೀಡುತ್ತಿದ್ದರೆ ಸರಿ..”

ಆಗ ಅದುವರೆವಿಗು ಸುಮ್ಮನೆ ಅವರ ಮಾತನ್ನಾಲಿಸುತ್ತಿದ್ದ ಊರ್ವಶಿ, “ಹಾಗಾದರೆ ಈ ಅಂಶಕ್ಕೆ ಈ ಕಾರ್ಯತಂತ್ರ ಎಂದು ನಿಗದಿಸಿ ಮುಂದಿನ ಅಂಶಕ್ಕೆ ಹೋಗೋಣವೆ ? ” ಎಂದಳು – ತಡವಾಗಿ ಆರಂಭವಾದ ಸಮಯದ ನಷ್ಟವನ್ನು ಸರಿತೂಗಿಸಲೆಂಬಂತೆ, ಮೆಲುವಾಗಿ ಅವಸರಿಸುತ್ತ.

ಆಗಲೆನ್ನುವಂತೆ ಎಲ್ಲರೂ ತಲೆಯಾಡಿಸಿದಾಗ ಎರಡನೆ ವಿಷಯವನ್ನು ಚರ್ಚೆಗೆ ತಂದಿಟ್ಟಳು ಊರ್ವಶಿ.

” ಹೌದು.. ಅದೇ ಸರಿಯಾದ ಆಲೋಚನೆ.. ನಮ್ಮೀ ಕಾರ್ಯತಂತ್ರದಲ್ಲಿ ಸಮಸ್ಯೆಯ ದಾಖಲೆ ಮತ್ತದರ ಪರಿಹಾರದತ್ತ ಇಕ್ಕುವ ಹೆಜ್ಜೆಯ ಸ್ಥೂಲ ನೋಟವಿರಬೇಕೆ ಹೊರತು, ಸಮಸ್ಯೆಯ ಪರಿಹಾರವನ್ನು ಇಲ್ಲೇ, ಈಗಲೇ ಹುಡುಕುವುದಲ್ಲ.. ಭಲೇ ಊರ್ವಶಿ ! ಸೊಗಸಾದ ನಿಯಂತ್ರಿಸುವಿಕೆಯ ಮಾದರಿ..!” ಎಂದು ತನ್ನ ದನಿಯಲ್ಲಿದ್ದ ಶ್ಲಾಘನೆಯನ್ನು ಅಡಗಿಸಿಡದೆ ನುಡಿದ ಗೌತಮ. ಎಲ್ಲರೆದುರಿನ ಆ ಹೊಗಳಿಕೆಗೆ ನಾಚಿದಂತಾದರು, ಅದರಿಂದುಕ್ಕಿದ ಪ್ರಸನ್ನತಾ ಭಾವಕ್ಕೆ ಮನ ತುಂಬಿದಂತಾಗಿ, ಆ ಪ್ರಪುಲ್ಲ ಭಾವದಲ್ಲೆ ಮುಂದಿನ ಅಂಶವನ್ನು ಅನಾವರಣಗೊಳಿಸಿದಳು ಊರ್ವಶಿ..

” ಇದರಲ್ಲಿ ಹೆಚ್ಚುಗಾರಿಕೆಯೇನು ಇಲ್ಲ ಗೌತಮ.. ಇವತ್ತಿನ ಕಾರ್ಯಯೋಜನೆಯನುಸಾರ ನಿಭಾಯಿಸುವ ಯತ್ನವಷ್ಟೆ… ಈಗ ನಮ್ಮೆದುರಿಗಿರುವ ಎರಡನೆ ಮುಖ್ಯ ಅಂಶವೆಂದರೆ ಈ ಪ್ರತಿ ಕೋಶಗಳಲ್ಲು ಸಂಪೂರ್ಣ ‘ಸ್ವಯಂಭುತ್ವ’ವನ್ನು ತರುವುದು ಹೇಗೆ ? ಅವು ಅವುಗಳದೆ ಆದ ಮೆದುಳು, ಬುದ್ದಿಯಿರುವಂತಹ ಸ್ಥಿತಿಯನ್ನು ತರುವುದು ಹೇಗೆ? ಎನ್ನುವುದು..”

ಅದೇ ಹೊತ್ತಿನಲ್ಲಿ ಇವೆಲ್ಲವನ್ನು ಆಲಿಸುತ್ತ ಮನ ಮಂಥನ ನಡೆಸುತ್ತಿದ್ದ ಬ್ರಹ್ಮದೇವ, ” ಈ ಕಾರ್ಯ ತಂತ್ರಗಳಲೆಲ್ಲಾ ಇರಬೇಕಾದ ಸರ್ವಸಾಧಾರಣ ಅಂಶವೆಂದರೆ, ಅದು ಸಾಧನೆಯಾಗಬೇಕಾದ ‘ಅಸಾಧಾರಣ ವೇಗ’… ಆ ವೇಗವನ್ನು ಕುರಿತು ಕೊನೆಯಲ್ಲಿ ಒಟ್ಟಿಗೆ ಚರ್ಚಿಸಬಹುದಾದ ಕಾರಣ ಊರ್ವಶಿಯ ಅಂಶ ನನಗೂ ಸಮ್ಮತವಾಗಿ ಕಾಣುತ್ತಿದೆ..” ಎಂದ.

(ಇನ್ನೂ ಇದೆ)

(Link to next episode 34: https://nageshamysore.wordpress.com/2016/03/18/00597-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%aa-%e0%b2%b8%e0%b2%82%e0%b2%b6%e0%b3%8b%e0%b2%a7%e0%b2%a8/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

00595. ಅಹಲ್ಯಾ ಸಂಹಿತೆ – ೩೨ (ಪ್ರಾಮುಖ್ಯತಾನುಸಾರ ಸಂಶೋಧನೆಯ ವರ್ಗೀಕರಣ)


00595. ಅಹಲ್ಯಾ ಸಂಹಿತೆ – ೩೨ (ಪ್ರಾಮುಖ್ಯತಾನುಸಾರ ಸಂಶೋಧನೆಯ ವರ್ಗೀಕರಣ)

(Link to previous episode 31: https://nageshamysore.wordpress.com/2016/03/17/00593-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a7-%e0%b2%a4%e0%b2%82%e0%b2%a1%e0%b2%a6-%e0%b2%a8%e0%b2%be/)

“ಓಹೋ! ನನ್ನದೆ ತಡವಾಗಿರುವಂತಿದೆಯಲ್ಲಾ? ಎಲ್ಲಾ ನನ್ನನ್ನೆ ಕಾಯುತ್ತಿರುವಂತಿದೆ ?” ಎನ್ನುತ್ತಲೆ ಒಳಬಂದು ತನಗಾಗಿ ಕಾಯುತ್ತಿದ್ದ ಆಸನದತ್ತ ನಡೆದ ದೇವರಾಜ.

“ಕಡೆಗಳಿಗೆಯಲ್ಲಿ ಮುನ್ಸೂಚನೆಯಿಲ್ಲದೆ ನಿನ್ನನ್ನು ಬರಮಾಡಿಕೊಳ್ಳಬೇಕಾಯ್ತು.. ಆದ ಕಾರಣ, ನೀನು ತಡವಾಯ್ತೆನ್ನುವುದರಲ್ಲಿ ಹುರುಳಿಗಿಂತ ಔಪಚಾರಿಕತೆಯೆ ಹೆಚ್ಚಿದೆ ಇಂದ್ರ. ಇರಲಿ.. ವಿಷಯ ಗಹನ ವ್ಯಾಪ್ತಿಯದಾದ ಕಾರಣ ನಿನ್ನ ಇರುವಿಕೆ ಉತ್ತಮ ಕಾಣಿಕೆ ನೀಡಬಲ್ಲದೆನಿಸಿತು.. ಹೀಗಾಗಿ ಈ ಕಡೇ ಗಳಿಗೆಯ ಮಾರೋಲೆ..” ಸಂಕ್ಷಿಪ್ತದಲ್ಲಿಯೆ ಹಿನ್ನಲೆಯನ್ನು ವಿವರಿಸುತ್ತ ನುಡಿದ ಬ್ರಹ್ಮದೇವ.

“ಪಿತಾಮಹನ ಗೌರವದ ನುಡಿಗಳಿಗೆ ನಾನು ಚಿರ ಕೃತಜ್ಞ.. ವೈಜ್ಞಾನಿಕ ಸ್ತರದ ಚರ್ಚೆಗಳಲ್ಲಿಯೂ ನನ್ನ ಇರುವಿಕೆ ಕಾಣಿಕೆ ನೀಡಬಲ್ಲದೆಂದರೆ ಅದು ಗೌರವದ ಮಾತಲ್ಲವೆ? ನನ್ನ ಸಾಮರ್ಥ್ಯಕ್ಕನುಗುಣವಾಗಿ, ನನ್ನ ಶಕ್ತಿಮೀರಿ ಕಾಣಿಕೆ ಸಲ್ಲಿಸುತ್ತೇನೆಂದಷ್ಟೆ ಭರವಸೆ ಕೊಡಬಲ್ಲೆ ಈ ಗಳಿಗೆಯಲ್ಲಿ.. ಆದರೆ ನನ್ನ ವೈಜ್ಞಾನಿಕ ಜ್ಞಾನದ ತಳಹದಿ ಎಷ್ಟು ಭದ್ರಬುಡದ್ದೆಂದು ನಿಮಗೇ ಗೊತ್ತಿದೆ..” ತನ್ನ ಪಾತ್ರವೇನಿರಬಹುದೆಂಬ ಸ್ಪಷ್ಟ ಸೂಚನೆಯ ಅರಿವಿರದ ದೇವರಾಜ ಅದನ್ನೆ ಇಂಗಿತ ರೂಪದಲ್ಲಿ ವ್ಯಕ್ತಪಡಿಸಿದ್ದ ತನ್ನ ಇತಿಮಿಯನ್ನು ತೆರೆದಿಡಲೆತ್ನಿಸುತ್ತ…

ಅವನ ಅಳುಕಿನ ಭಾವದ ಸೂಕ್ಷ್ಮತೆರೆಯನ್ನು ಸರಿಸಿ ನಿರಾಳಗೊಳಿಸುವವನಂತೆ ಈಗ ಮಾತನಾಡಿದವನು ಗೌತಮ.. ” ಆ ಆತಂಕ ಬಿಡು ದೇವೇಂದ್ರ.. ನಾವು ನಿಜಕ್ಕು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸೈದ್ದಾಂತಿಕ ನೆಲೆಗಟ್ಟಿನಲ್ಲೆ ಹೊರತು, ಆಳವಾದ ತಜ್ಞ ಸ್ತರದಲ್ಲಲ್ಲ.. ಆ ಸೈದ್ದಾಂತಿಕ ಚರ್ಚೆಗೆ ಬೇಕಾದಷ್ಟು ಮಟ್ಟಿಗಿನ ಮಾಹಿತಿಯನ್ನು ನಾನೆ ನೀಡಬಲ್ಲೆ.. ನಮ್ಮ ಚರ್ಚೆಗಳಿಗೆ ಅಷ್ಟು ಸಾಕು..” ಎಂದ.

ಆ ಮಾತಾಡುತ್ತ ಪಕ್ಕಪಕ್ಕದಲ್ಲಿ ಕುಳಿತ ಗೌತಮ, ದೇವೇಂದ್ರರನ್ನೆ ದಿಟ್ಟಿಸಿ ನೋಡುತ್ತ ಕುಳಿತಿದ್ದ ಊರ್ವಶಿಗೆ ಮತ್ತೆ ಫಕ್ಕನೆ ಅನಿಸಿದ್ದು – ಅವರಿಬ್ಬರಲ್ಲಿ ಎಷ್ಟು ಸಾಮ್ಯತೆಯಿದೆ ಎಂದು. ಒಂದೇ ತೆರದ ದಿರುಸಿನಲ್ಲಿ ಇಬ್ಬರೂ ಪಕ್ಕಪಕ್ಕ ನಿಂತರೆಂದರೆ, ಬರಿಯ ಗಡ್ಡ ಮೀಸೆಗಳಷ್ಟೆ ಅವರಿಬ್ಬರನ್ನು ಬೇರ್ಪಡಿಸಬಹುದಾದ ಅಂತರ. ಅದನ್ನು ಹೊರತಾಗಿಸಿ ಮಿಕ್ಕೆಲ್ಲವೂ ಪ್ರತಿಶತ ಪ್ರತಿರೂಪವೆನ್ನುವಷ್ಟು ಸಾದೃಶ್ಯ, ಹೋಲಿಕೆ – ಆಕಾರ ಗಾತ್ರ ಎಲ್ಲದರಲ್ಲು…

‘ಅದು ಹೇಗೆ ಅಷ್ಟೊಂದು ಹೋಲಿಕೆಯಿರಲು ಸಾಧ್ಯ?’ ಎಂದು ಚಿಂತಿಸುತ್ತಲೆ ಮತ್ತೆ ತಡವಾಗುತ್ತಿದೆಯೆಂಬ ಎಚ್ಚರಿಕೆಯ ದನಿಯೂ ತಲೆಯಲ್ಲಿ ಸುಳಿದುಹೋಗಿ ಅದನ್ನೆ ಬಾಹ್ಯದಲ್ಲಿ ಮಾರ್ದನಿಸುತ್ತ, “ಸರಿ.. ನಾವಿನ್ನು ಇಂದಿನ ಚರ್ಚೆಯನ್ನು ಆರಂಭಿಸೋಣವೇ ? ಈಗಾಗಲೆ ತಡವಾಗಿದೆ” ಎಂದಳು.

ಅಲ್ಲಿಂದ ಮುಂದುವರೆದ ಗೌತಮ ಮೊದಲ ಸಂಕ್ಷಿಪ್ತ ವರದಿಯನ್ನಿತ್ತು ಅದುವರೆವಿಗು ಕ್ರೋಢೀಕರಿಸಿದ ಮಾಹಿತಿ ಸಾರವನ್ನು ವಿವರಿಸಿದ. ಹಾಗೆ ಸಮೀಕರಿಸಿದ ಮಾಹಿತಿಯನ್ನೆಲ್ಲ ಒಟ್ಟುಗೂಡಿಸಿ ಅದನ್ನೆಲ್ಲ ಪರಸ್ಪರ ಹೋಲಿಸಿ ನೋಡಿದ್ದು, ಊರ್ವಶಿಯ ಸೃಷ್ಟಿಯ ಶ್ರೇಷ್ಠತೆಯನ್ನು ಗಣನೆ, ಗಮ್ಯಾಧಾರವಾಗಿಟ್ಟುಕೊಂಡು ಅವು ತಲುಪಬೇಕಿರುವ, ಕ್ರಮಿಸಬೇಕಿರುವ ದೂರದ ಲೆಕ್ಕಾಚಾರ ಹಾಕಿದ್ದು, ಸಮತೋಲಿತ ಪರಿಸರದ ಇಡೀ ವ್ಯವಸ್ಥೆಯ ಹಿನ್ನಲೆಯಲ್ಲಿ ಪರಿಶೀಲಿಸಿದ್ದು, ಪ್ರತಿಯೊಂದರ ಸಾಮಾನ್ಯ ಅಂಶಗಳನ್ನು ಬೇರ್ಪಡಿಸಿ ಪಟ್ಟಿ ಮಾಡಿ ಅದರ ಕುರಿತು ಮಥನ ಮಂಥನ ಕಾರ್ಯಾಗಾರಗಳನ್ನು ಆಯೋಜಿಸಿದ್ದು, ಕೊನೆಯಲ್ಲಿ ಹತ್ತು ಪ್ರಮುಖ ಅಂಶಗಳನ್ನು ಶೋಧಿಸಿ ಉನ್ನತ ಕಾರ್ಯಾಗಾರದ ವ್ಯಾಪ್ತಿಗೆ ಸೇರಿಸಿಟ್ಟಿದ್ದು – ಹೀಗೆ ಎಲ್ಲವನ್ನು ವಿವರಿಸಿ, ಸಾರದಲ್ಲಿ ಎರಡು ಅತಿ ಪ್ರಮುಖ ತೀರ್ಮಾನಗಳನ್ನು ಬೇರ್ಪಡಿಸಿ ಆ ದಿನದ ಚರ್ಚೆಗೆ ತಂದಿಟ್ಟಿದ್ದನ್ನು ಪ್ರಸ್ತಾಪಿಸಿದ.

“ಅಂದರೆ, ಯಾವುದೆ ಕೋಶವಾಗಲಿ ಅದು ನಿರಂತರವಾಗಿ ಅಥವಾ ಅತಿ ಹೆಚ್ಚು ಕಾಲದ ತನಕ ಬದುಕಿರುವ ಹಾಗೆ ಮಾಡುವುದು ಹೇಗೆ ಎನ್ನುವುದು ಒಂದು ಜಿಜ್ಞಾಸೆಯಾದರೆ, ಅದು ಕೋಶಮಟ್ಟದಲ್ಲೆ ಸ್ವಯಂಭುವಿನಂತೆ ತಂತಾನೆ ನಿಯಂತ್ರಿಸಿಕೊಳ್ಳುವ ವ್ಯವಸ್ಥೆ ಹೇಗೆ ಎನ್ನುವುದು ಎರಡನೆ ಜಿಜ್ಞಾಸೆ, ಅಲ್ಲವೆ?” ಆ ಎರಡು ಪ್ರಮುಖ ವಿಷಯಗಳ ಸಾರ ಗ್ರಹಿಸಿದವನಂತೆ ಕೇಳಿದ ದೇವೇಂದ್ರ.

” ನಿಜ ಮಹೇಂದ್ರ.. ಆದರೆ ಅವೆರಡು ಯಾವುದೇ ಪ್ರಚೋದನೆಯಿರದೆ ನಿಸರ್ಗಸಹಜ ಸೃಷ್ಟಿಯಲ್ಲಿ ತಂತಾನೆ ಅಳವಡಿಸಿಕೊಂಡು ಸ್ವಾಭಾವಿಕವಾಗಿ ಹೊರಹೊಮ್ಮಬೇಕೆನ್ನುವುದು ಮೊದಲ ಶರತ್ತು.. ಜತೆಗೆ ಆ ಪ್ರಕ್ರಿಯೆಯಲ್ಲಿ, ಸುತ್ತಲಿನ ಇಡಿ ಪರಿಸರವೆ ನೈಸರ್ಗಿಕವಾಗಿ ಭಾಗವಹಿಸುತ್ತ ಸಮತೋಲಿತ ರೀತಿಯಲ್ಲಿ ಪೂರ್ತಿ ವ್ಯವಸ್ಥೆಯನ್ನೆ ಮೇಲೆತ್ತಬೇಕೆನ್ನುವುದು ಎರಡನೆ ಶರತ್ತು..” ಗೌತಮ ಅದಕ್ಕೆ ಬೇಕಾದ ಇತರ ಗುಣಾತ್ಮಕ ಅಂಶಗಳನ್ನು ಸೇರಿಸುತ್ತ ವಿವರಿಸಿದ.

” ಆದರೆ ಇದು ನಡೆಯಬೇಕಾದ ವೇಗ ಕ್ರಾಂತಿಕಾರಕವಾಗಿರಬೇಕೆ ಹೊರತು ಕಿರುಸ್ತರದ ಹಂತಹಂತದ ಪ್ರಗತಿಯೊ ಅಥವಾ ಮಧ್ಯಮ ಸ್ತರದಲ್ಲಿ ಜರುಗುವ ಪ್ರಕ್ರಿಯೆಯೊ ಆಗಿದ್ದರೆ ಸಾಲದೆನ್ನುವುದು ಮೂರನೆಯ ಅನಿವಾರ್ಯ ಶರತ್ತು..” ಎನ್ನುತ್ತ ಅದರ ಮತ್ತೊಂದು ಆಯಾಮವನ್ನು ತೆರೆದಿಟ್ಟಳು ಊರ್ವಶಿ..

“ತಾಳಿ.. ತಾಳಿ.. ಇದನ್ನೆ ಸರಳೀಕರಿಸಿ ಹೇಳುವುದಾದರೆ, ಜೀವಕೋಶಗಳು ಸೇರಿದಂತೆ ಇಡೀ ಪರಿಸರ ತನ್ನ ಅಂತರ್ಗತ ಆಯಸ್ಸಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು – ಹೆಚ್ಚು ಕಾಲ ಬದುಕುವಂತೆ. ಅದನ್ನು ತಂತಾನೆ ನಿಭಾಯಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳಬೇಕು ನಿಸರ್ಗ ಸಹಜ ರೀತಿಯಲ್ಲೆ.. ಇದೆಲ್ಲವೂ ನಾಗಲೋಟದಲ್ಲಿ ಘಟಿಸಬೇಕು ಕ್ರಾಂತಿಕಾರಕವೆನ್ನುವಂತೆ, ನನ್ನ ಗ್ರಹಿಕೆ ಸರಿಯೆ?” ಎಂದು ಕೇಳಿದ ದೇವರಾಜ.

ಅದುವರೆವಿಗೆ ಇವರ ಮಾತನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಬ್ರಹ್ಮದೇವ ಈಗ ನಡುವೆ ನುಡಿದ –

” ಹೌದು ದೇವರಾಜ.. ಊರ್ವಶಿಯ ಅಥವಾ ಉಚ್ಚೈಶ್ರವಸ್ಸಿನಂತಹ ಉನ್ನತಸ್ತರದ, ಅತ್ಯುತ್ಕೃಷ್ಟ ಶ್ರೇಣಿಯ ತಳಿಗಳನ್ನು ನಿಸರ್ಗ ನಿರಂತರವಾಗಿ ಸೃಜಿಸಿ, ನಿಭಾಯಿಸಿಕೊಳ್ಳುವ ದಾರಿ ಹುಡುಕಬೇಕಿದೆ ನಾವು.. ಆ ಗಮ್ಯ ತಲುಪಲು ಇರುವ ಅಂತರಗಳೆಲ್ಲ ಈಗಾಗಲೆ ಸಂಶೋಧನೆಯ ಪ್ರಮುಖ ವಿಷಯಗಳಾಗಿವೆ.. ಆ ಹಂತಕ್ಕೆ ತಲುಪಲು ಬೇಕಾದ ವೇಗ ಮತ್ತು ತಂತ್ರ ನಮಗೆ ಸಿದ್ದಿಸಿಲ್ಲದ ಕಾರಣ ಇಷ್ಟೆಲ್ಲಾ ಸಂಶೋಧನೆ, ಪ್ರಯೋಗಗಳ ದುಂಬಾಲು ಬೀಳಬೇಕಿದೆ. ಆದರೆ ನಾವೀಗಿರುವ ಆಮೆಯ ವೇಗದಲ್ಲಿ ಹೋದರೆ ಅದರ ಸಾಧನೆಯಾಗಲಿಕ್ಕೆ ಅದೆಷ್ಟು ಕಲ್ಪಗಳಾದೀತೊ ಹೇಳಲೆಂತು ? ವಿಪರ್ಯಾಸವೆಂದರೆ ಇಲ್ಲಿ ಕುದುರೆಯ ವೇಗವೆ ಆಗಲಿ, ನಾಗಾಲೋಟವೆ ಆಗಲಿ ಕೆಲಸಕ್ಕೆ ಬರದು. ಅದನ್ನು ಮೀರಿದ, ಮನೋವೇಗಕ್ಕೆ ಸರಿಸಮನಲ್ಲದಿದ್ದರು ಅಷ್ಟೆ ಪ್ರಬಲವಾದ ವೇಗದ ಅನ್ವೇಷಣೆಯಾದ ಹೊರತು ಈ ಪ್ರಯೋಗ ತನ್ನ ಸಾರ್ಥಕತೆಯನ್ನು ಕಾಣಲಾಗದು… ”

” ಅಲ್ಲಿಗೆ ಈ ಮೂರು ಪ್ರಮುಖ ಅಂಶಗಳನ್ನು ನಾವು ಗಮನಿಸಿದರೆ ಆಯಿತೇನು? ಇವಕ್ಕೆ ಉತ್ತರ ಸಿಕ್ಕರೆ ಎಲ್ಲಾ ಪರಿಹಾರವಾದ ಹಾಗೇನು?”

“ಹೌದು ಮತ್ತು ಅಲ್ಲ ಮಹೇಂದ್ರ.. ಇಲ್ಲಿ ಆರಿಸಿರುವುದು ತೀರಾ ಪ್ರಮುಖವಾದ ಮೂರು ವಿಷಯಗಳಷ್ಟೆ.. ಇದರ ಕೆಳಗಿನ ಹಂತದಲ್ಲಿ ಇನ್ನು ಹತ್ತು ಇದೇ ರೀತಿಯ ವೈವಿಧ್ಯಮಯ ಸಂಬಂಧಿ ಅಂಶಗಳು ಇವೆ.. ಆ ಪ್ರತಿಯೊಂದಕ್ಕು ಬೇರೆಯೆ ಆದ ಕಾರ್ಯಗಾರ ನಡೆಸಿ ಅಲ್ಲಿಯೂ ವಿಷಯ ಸಮಗ್ರೀಕರಣ ಮಾಡಬೇಕಿದೆ.. ಆದರೆ ಅಲ್ಲಿ ಬ್ರಹ್ಮದೇವನ ಅಗತ್ಯವಿರುವುದಿಲ್ಲ.. ನಾವುಗಳೆ ನಿಭಾಯಿಸಬಹುದು. ಅದೇ ತರ್ಕದಲ್ಲಿ ಆ ಪ್ರತಿ ಹತ್ತರ ಗುಂಪಿನಲ್ಲು ಹತ್ತಾರು, ನೂರಾರು ಸಣ್ಣ, ಮಧ್ಯಮ ಹಾಗು ದೊಡ್ಡ ಮರುವಿಂಗಡಣೆಯಿರುತ್ತದೆ.. ಅಲ್ಲಿಯ ಕಾರ್ಯಾಗಾರಕ್ಕೆ ನಮ್ಮ ಭಾಗವಹಿಸುವಿಕೆಯ ಅಗತ್ಯವಿರದಿದ್ದರೂ, ಅದರ ಫಲಿತದ ಕ್ರೋಢೀಕರಣ ನಮಗೆ ಬೇಕಾಗುವ ಅಗತ್ಯ ಅಂಶ. ಹೀಗೆ ಈ ಸರಪಳಿ ಕೋಂಡಿಯನ್ಹಿಡಿದು ತುದಿಯವರೆಗು ನಡೆದರೆ ಅದೆಷ್ಟು ಕಾರ್ಯಾಗಾರಗಳು, ಅದೆಷ್ಟು ಮಾಹಿತಿಗಳು ಸಮಗ್ರವಾಗಿ, ಸಂಕೀರ್ಣವಾಗಿ ಸೇರ್ಪಡೆಯಾಗಬೇಕೆಂದು ಲೆಕ್ಕ ಹಾಕಲೆ ಆಗದಷ್ಟು ದೊಡ್ಡದು..” ಅದರ ಅಗಾಧ ವ್ಯಾಪ್ತಿಯನ್ನು ಮನವರಿಕೆ ಮಾಡಿಕೊಡುವವಳಂತೆ ವಿವರಿಸಿದಳು ಊರ್ವಶಿ.

” ಸರಿ ಅರ್ಥವಾಯಿತು.. ಈ ಮೂರು ಮುಖ್ಯ ವಿಷಯದ ಚರ್ಚಾ ಕಾರ್ಯಗಾರದಲ್ಲಿ, ಪಿತಾಮಹನೂ ಸೇರಿದಂತೆ ನಾವು ನಾಲ್ವರ ಕಾಯಾಚರಣೆಯಾದರೆ, ಮುಂದಿನ ಹತ್ತು ಅಂಶಗಳಲ್ಲಿ ಬರಿ ನಾವುಗಳಿದ್ದರೆ ಸಾಕು.. ಮಿಕ್ಕವುಗಳನ್ನು ಆಯಾ ತಂಡಗಳ ನಾಯಕರು ನಿಭಾಯಿಸಿಕೊಳ್ಳುವಂತೆ ಸರಪಳಿ ವ್ಯವಸ್ಥೆ ಮಾಡಿ ಅದೆಲ್ಲದರ ಒಟ್ಟಾರೆ ಉಸ್ತುವಾರಿಯನ್ನು ನಾವು ಗಮನಿಸುತ್ತ ಸಮಗ್ರ ಚಿತ್ರಣಕ್ಕೆ ಜೋಡಿಸಬೇಕು..ಅಲ್ಲವೇ ? ನಿಜವೆ.. ಇದು ಭಾರಿ ಯೋಜನೆಯೆ ಸರಿ!” ಎಂದ ದೇವೇಂದ್ರ ತಲೆಯಾಡಿಸುತ್ತ.

“ಆದರೆ ಈವತ್ತಿನ ಈ ಕಿರು ಭೇಟಿ ಕೇವಲ ಆ ಮೊದಲ ಮೂರು ಅಂಶಗಳ ಚರ್ಚೆಗೆ ಮಾತ್ರ ಸೀಮಿತ.. ಈ ಮೂರು ಅಂಶಗಳು ಮಾತ್ರವೆ ಮಿಕ್ಕೆಲ್ಲದಕ್ಕು ಒಂದು ರೀತಿಯಲ್ಲಿ ಸಾಮಾನ್ಯವಾಗಿರುವಂತಹ ಗ್ರಹಿಕೆಗಳು.. ಇವುಗಳ ಫಲಿತವಾಗಿ ಹೊರಡಬಹುದಾದ ಯಾವುದೇ ತೀರ್ಮಾನಗಳು, ಮರು ಸಿದ್ದಾಂತಗಳು ಮಿಕ್ಕೆಲ್ಲದಕ್ಕು ಮಾರ್ಗದರ್ಶಿಯಾಗುವ ಕಾರಣ ಇವನ್ನು ನಿರ್ದಿಷ್ಠವಾಗಿ ಗೊತ್ತು ಪಡಿಸುವ ತನಕ ಮಿಕ್ಕವುಗಳು ತಂತಮ್ಮ ಆಳಕ್ಕಿಳಿಯಲು ಪರವಾನಗಿ ಸಿಗುವುದಿಲ್ಲ” ಎಂದು ಮತ್ತೆ ಆ ದಿನದ ವಿಷಯ ಸೂಚಿಕೆಗೆ ಸೂಕ್ತ ಪರಿಧಿ, ದಿಕ್ಸೂಚಿ ಹಾಕಿದವಳು ಊರ್ವಶಿ.

“ಸರಿ ಹಾಗಾದರೆ ಈ ಮೂರರಲ್ಲಿ ಮೊದಲ ವಿಷಯವನ್ನು ಕೈಗೆತ್ತಿಕೊಳ್ಳುವ.. ಇದು ಜೀವಕೋಶಗಳ ಜೀವಿತಾವಧಿಗೆ ಸಂಬಂಧಿಸಿದ ವಿಷಯ. ನಾವು ಈಗ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಊರ್ವಶಿಯ ಸ್ತರದ ತಳಿಯ ಮಟ್ಟಕ್ಕೆ ಹೋಲಿಸಿ ತುಲನಾತ್ಮಕವಾಗಿ ನೋಡಿದಾಗ ಕಂಡು ಬಂದ ಅಂತರ ಅಗಾಧವಾದದ್ದು. ಈ ಅಂತರ ಮಿಕ್ಕೆಲ್ಲ ಕೋಶಗಳಲ್ಲು ಇರುವುದು ಮಾತ್ರವಲ್ಲದೆ, ಬಹುತೇಕ ಅಂತರದ ಗಾತ್ರ ಕೂಡ ಒಂದೆ ಮಟ್ಟದಲ್ಲಿರುವುದು ಗಮನಾರ್ಹ.. ಹೀಗಾಗಿ ಈ ಅಂಶದ ತೊಡಕು ನಮ್ಮ ಮಿಕ್ಕೆಲ್ಲಾ ಕೆಳಸ್ತರದ ಸಂಶೋಧನೆಗಳನ್ನು ಕಾಡಲಿದೆ.. ಇದರ ಪರಿಹಾರ ಕಂಡುಕೊಳ್ಳದಿದ್ದರೆ, ಎಲ್ಲರಿಗು ಇದರ ಫಲಶೃತಿಯ ಅವಲಂಬನೆ ಇರುವ ಕಾರಣ ಇದು ಪ್ರತಿಯೊಬ್ಬರ ಪ್ರಗತಿಯನ್ನು ಕುಂಠಿತವಾಗಿಸುವುದು ಮಾತ್ರವಲ್ಲದೆ, ಸಮಗ್ರ ಸಂಶೋಧನೆಯ ಗತಿಯನ್ನು ನಿಧಾನವಾಗಿಸಿಬಿಡುತ್ತದೆ.. ಆ ಕಾರಣಕ್ಕೆ ಇದು ಒಂದು ಪ್ರಮುಖ ಕಾರ್ಯಯೋಜನಾ ಭಾಗಾಂಶವೆಂದು ಹೇಳಬೇಕು..” ನೇರ ವಿಷಯಕ್ಕೆ ಬರಲೆತ್ನಿಸುತ್ತ ಪೀಠಿಕೆ ಹಾಕಿದ ಗೌತಮ.

(ಇನ್ನೂ ಇದೆ)

(Link to Nex episode 33: https://nageshamysore.wordpress.com/2016/03/17/00596-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a9-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

00594. ಮರಳಿ ಬಾರೆ..


00594. ಮರಳಿ ಬಾರೆ..
____________________

 

ಬರಬಾರದೇ ತಿರುಗಿ ?
ಮಮ್ಮಲ ಮರುಗುತಿದೆ ಕೊರಗಿ
ಕೂತಲ್ಲೆ ಗಿರಗಿರ ಗಿರಣಿ ತಲೆ
ಗಿರಗಿಟ್ಟಲೆ ಬಿಡದಾ ಶೂಲೆ..

ಕಾಲದ ಲೇಹ್ಯ ಹಚ್ಚಿದೆ
ಮಾಯವಾಗುವುದೆಂದು ತಿಳಿದೆ
ನಿಂತರು ದೂರದೆ ನೀನು
ನುಣ್ಣನೆ ಬೆಟ್ಟ ಕಾಣುವೆ ಗೊತ್ತೇನು ?

ನಿರಾಳವಿದ್ದರು ಅರೆಗಳಿಗೆ
ಬರದಿದ್ದೀತೆ ಕಾಡುವ ಗಳಿಗೆ ?
ಪ್ರತಿ ಕ್ಷಣದ ಯಾತನೆ ಗಣನೆ
ಬಿಚ್ಚು ಮಾತಲ್ಲಿರೆ, ಬೇಕೆ ಸುಮ್ಮನೆ ?

ಬಿಡು ಆಡಿದ್ದೆಲ್ಲಾ ಮಾತಾಟ
ಮನದ ಬಗೆಬಗೆ ಕೂತಾಟ
ಅರಿತಾಗಿ ನಿಜ ಮನದೊಳಗು
ಆಪ್ಯಾಯತೆ ತೆರೆಯುವ ಬೆರಗು..

ಇಂದಿಲ್ಲದ ಶೂನ್ಯದೆ ಆಕಾಶ
ಬರಿ ಕತ್ತಲು ಹೆಣೆದ ಜೀವಕೋಶ
ಇದ್ದ ಹಾಗೆ ಒಪ್ಪೆ, ತೆರೆದವಕಾಶ
ಬಿಟ್ಟರದೆ ಬೆಪ್ಪೆ, ಉಳಿಸಿ ಬರಿ ಕ್ಲೇಷ..

– ನಾಗೇಶ ಮೈಸೂರು
೧೭.೦೩.೨೦೧೬

(Picture source: https://www.google.com.sg/imgres?imgurl=http://etc.usf.edu/clipart/74000/74085/74085_return_home_lg.gif&imgrefurl=http://etc.usf.edu/clipart/74000/74085/74085_return_home.htm&h=564&w=1024&tbnid=_tYMO-m_jPSWpM:&docid=_ZQoeVWfw6FC0M&ei=SP3pVvisM9DVuQTU7K7wDQ&tbm=isch&client=safari&ved=0ahUKEwj48MKovsbLAhXQao4KHVS2C94QMwh3KE0wTQ)

00593. ಅಹಲ್ಯಾ ಸಂಹಿತೆ – ೩೧ (ತಂಡದ ನಾಲ್ಕನೇ ಆಧಾರಸ್ತಂಭ ಆಯ್ಕೆ)


ಅಧ್ಯಾಯ – 10
______________

(Link to previous episode 30: https://nageshamysore.wordpress.com/2016/03/15/00589-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a6-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6/)

ಬ್ರಹ್ಮದೇವನ ಆ ಪ್ರಯೋಗಶಾಲೆಯಲ್ಲೀಗ ಬಿಡುವಿಲ್ಲದ ನಿರಂತರ ಚಟುವಟಿಕೆ…

ಅದರ ಗಾತ್ರ ವ್ಯಾಪ್ತಿ ವೇಗಗಳನ್ನು ಕಂಡು ಬ್ರಹ್ಮದೇವನಿಗೂ ಹಿಗ್ಗು – ‘ಗೌತಮ ತನ್ನ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲವಲ್ಲ’ ಎಂದು. ಗಮ್ಯದ ಸಾಧನೆಗದು ಸಾಕೆ, ಸಾಲದೆ ಎನ್ನುವುದು ಮತ್ತೊಂದು ವಿಷಯ; ಅದರೆ ಅದು ನಡೆದ ಹಾದಿ ಮತ್ತು ರೀತಿ ಮಾತ್ರ ಸರಿಯಾದ ದಿಶೆಯಲ್ಲಿದೆ ಎಂದು ಅವನಿಗು ಮನವರಿಕೆಯಾಗಿದೆ. ಅವನೀಗ ಅಲ್ಲಿಗೆ ನಿತ್ಯ ಬರುವ ಅಗತ್ಯವಿರದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಗೌತಮ, ಊರ್ವಶಿಯರು.

ಊರ್ವಶಿಯಂತು ಪ್ರತೀ ದಿನದ ಸಾರವನ್ನೆಲ್ಲ ಒಂದು ಪುಟ್ಟ ಟಿಪ್ಪಣಿಯಾಗಿಸಿ ತನಗು, ಗೌತಮನಿಗೂ ರವಾನಿಸುತ್ತಿದ್ದಾಳೆ – ಅಲ್ಲೇನು ನಡೆಯುತ್ತಿದೆಯೆಂಬ ಮೇಲ್ನೋಟದ ವರದಿ ಸಲ್ಲಿಸುತ್ತ. ಆದರು ಬ್ರಹ್ಮದೇವ ವಾರಕ್ಕೊಮ್ಮೆಯಾದರು ಬಂದು ಭೇಟಿಯಿತ್ತು ಹೋಗುತ್ತಾನೆ, ಅವರೆಲ್ಲರನ್ನು ಹುರಿದುಂಬಿಸುವ ಸಲುವಾಗಿ. ಬಂದಾಗ ಸುಮ್ಮನೆ ಕೂಡದೆ ಸಂಶೋಧನೆಗಳ ವಿಭಾಗಗಳತ್ತ ನಡೆದು ಅಲ್ಲಿರುವವರ ಜತೆ ಮಾತಾಡಿ ಬೆನ್ನು ತಟ್ಟಿ ಹೋಗುತ್ತಾನೆ. ಆ ಕ್ಷಿಪ್ರ ಭೇಟಿಯಲ್ಲೆ ತಾನು ಗಮನಿಸಿದ ಸಣ್ಣಪುಟ್ಟ ಅಂಶಗಳ ಕುರಿತು ಸಲಹೆ, ಸೂಚನೆ ನೀಡಿ ಆ ವಿಷಯಗಳ ತನ್ನ ಪಾಂಡಿತ್ಯ, ಆಳ ಜ್ಞಾನದ ನೆರವು ಅವರಿಗು ಸಿಗುವಂತೆ ಮಾಡುವ ಅವನ ಚರ್ಯೆಯಿಂದ ಎಲ್ಲರಿಗು ಅವನ ಕುರಿತಿದ್ದ ಗೌರವ ಇಮ್ಮಡಿ, ಮುಮ್ಮಡಿ, ನೂರ್ಮಡಿಯಾಗಿಹೋಗಿದೆ.

ಅವನು ಹಾಗೆ ಬಂದು ಸುತ್ತಾಡುವ ಹೊತ್ತಲಿ ಗೌತಮ ಜತೆಗೆ ಹೋಗುವುದಿಲ್ಲ. ಅವನ ಸ್ವಯಂ ಪರಾಮರ್ಶೆಗೆ ಎಲ್ಲವನ್ನು ಬಿಟ್ಟು, ಅವನು ತಿರುಗಿ ಬರುವವರೆಗೆ ಕಾಯುತ್ತಾನೆ. ಅಗ ನಡೆವ ಪುಟ್ಟ ಚರ್ಚೆಯಲ್ಲಿ ಅನೇಕ ಗಹನ ಮತ್ತು ಸೂಕ್ಷ್ಮವಿಷಯಗಳ ವಿನಿಮಯವಾಗುತ್ತದೆ. ಆದರೆ ಊರ್ವಶಿ ಮಾತ್ರ ಗೌತಮನಿಗಿಂತ ಭಿನ್ನ ಹಾದಿ ಅನುಸರಿಸುತ್ತಾಳೆ. ಬ್ರಹ್ಮದೇವ ಹೋದಲ್ಲೆಲ್ಲ ತಾನೂ ಹಿಂಬಾಲಿಸುತ್ತ ಅವನ ಮತ್ತು ಮಿಕ್ಕವರ ಜತೆಯ ಕಿರು ಸಂವಾದದಲ್ಲಿ ಕಳೆದುಹೋಗಬಹುದಿದ್ದ ಮುಖ್ಯ ವಿಷಯಗಳನ್ನು ದಾಖಲಿಸಿಟ್ಟುಕೊಳ್ಳುತ್ತಾಳೆ – ಮುಂದಿನ ಪರ್ಯಾಲೋಚನೆಗೆ. ಗೌತಮ ಬ್ರಹ್ಮದೇವರ ಚರ್ಚೆಯ ಹೊತ್ತಿನಲ್ಲಿ ಆ ದಾಖಲೆಯನ್ನು ಬಳಸಿಕೊಂಡು ಅಲ್ಲಿನ ಎಲ್ಲಾ ಅಂಶಗಳನ್ನು ಅವರು ವಿನಿಮಯ ಮಾಡಿಕೊಳ್ಳುವಂತೆ ನೋಡಿಕೊಳ್ಳುವ ಛಾತಿ ಬ್ರಹ್ಮದೇವನಿಗೂ ಬಲು ಪ್ರಿಯವೆ.

ಅಂದು ಬ್ರಹ್ಮದೇವ ತನ್ನ ಎಂದಿನ ಭೇಟಿಯ ಸಲುವಾಗಿ ಬಂದಿಲ್ಲ. ಬದಲಿಗೆ ಗೌತಮನ ವಿಶೇಷ ಆಹ್ವಾನವನ್ನು ಮನ್ನಿಸಿ ಬಂದಿದ್ದಾನೆ… ಸಂಶೋಧನೆಯ ಹಾದಿಯಲ್ಲಿ ಇದೊಂದು ಮೈಲಿಗಲ್ಲಿನ ಹಂತವಾದ ಕಾರಣ ಅದರ ಫಲಿತಾಂಶವೇನೆಂದು ಅವನಿಗು ಕುತೂಹಲ. ಜತೆಗೆ ಯೋಜನೆ ಹಾಕಿದ್ದ ಸಮಯಕ್ಕಿಂತ ಮೊದಲೆ ಆ ಮೈಲಿಗಲ್ಲನ್ನು ಕಾರ್ಯಗತಗೊಳಿಸುವ ಮೂಲಕ ಗೌತಮ ತನ್ನ ಚಾಣಾಕ್ಷತೆಯನ್ನು ಮೆರೆದಿದ್ದಾನೆ.

ಹಾಗೆಂದು ಅದರ ಪೂರ್ಣ ಶ್ರೇಯಸ್ಸು ಅವನೊಬ್ಬನಿಗೆ ಸಲ್ಲಬೇಕೆಂದೇನು ಅಲ್ಲ. ಒಂದೆಡೆ ಅವನ ಬೆನ್ನೆಲುಬಿನಂತೆ ನಿಂತು ಸಹಕರಿಸುತ್ತಿರುವ ಊರ್ವಶಿಯಲ್ಲದೆ, ಇನ್ನು ಹಲವು ಸಹಸ್ರಾರು ತಜ್ಞರ ದಂಡೆ ಹಗಲಿರುಳು ಅವಿರತ ಕಾರ್ಯನಿರತವಾಗಿದೆಯೆಂದು ಅವನಿಗೂ ಗೊತ್ತು. ಆದರೆ ಅವೆಲ್ಲವುಗಳ ರೂವಾರಿಯಂತೆ ಅವನ್ನು ಸಮಷ್ಟಿತ ರೂಪದಲ್ಲಿ ನಿಭಾಯಿಸುತ್ತಿರುವ ಶ್ರೇಯಸ್ಸು ಮಾತ್ರ ಗೌತಮನದೆ ಎನ್ನುವುದರಲ್ಲಿ ಸಂಶಯವಿಲ್ಲ.

ಗೌತಮ, ಊರ್ವಶಿಯರಿಬ್ಬರೂ ಈ ಯೋಜನೆಯ ಎರಡು ಪ್ರಮುಖ ಆಧಾರ ಸ್ಥಂಭಗಳು. ಸ್ವಯಂ ಬ್ರಹ್ಮದೇವನೆ ಅದರ ಮೂರನೆ ಆಧಾರ ಸ್ಥಂಭದಂತೆ ಎಂದರೂ ಸರಿಯೆ. ಆದರೆ ಮೇಲ್ನೋಟಕ್ಕೆ ಕಾಣಿಸದಂತೆ, ದೈನಂದಿನ ಚಟುವಟಿಕೆಯಲ್ಲಿ ಅಷ್ಟೇನು ಎದ್ದು ಕಾಣಿಸಿಕೊಳ್ಳದಂತಿರುವ ಆದರೆ ಅದರಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತೊಬ್ಬ ವ್ಯಕ್ತಿಯೂ ಇದ್ದಾನೆ. ಅವನೆ ಆ ಚಚ್ಚೌಕದ ನಾಲ್ಕನೆ ಆಧಾರ ಸ್ತಂಭ ಎಂದು ಬ್ರಹ್ಮದೇವನಿಗೆ ಚೆನ್ನಾಗಿ ಗೊತ್ತು.

ಅವನ ಸೂಕ್ಷ್ಮದೃಷ್ಟಿಕೋನ, ಜಾಣ್ಮೆ, ಚತುರತೆಗಳ ಬಲವಿರದಿದ್ದರೆ ಗೌತಮ ಈ ಅಗಾಧ ಬೃಹತ್ಗಾತ್ರದ ಕಾರ್ಯಾಚರಣೆಯನ್ನು ನಡೆಸಲು ಬೇಕಾದ ವ್ಯವಸ್ಥೆಯನ್ನು ಸೃಜಿಸಿ, ಅದು ನಯವಾಗಿ ನಡೆದುಕೊಂಡು ಹೋಗುವಂತೆ ಮಾಡಲು ಸಾಧ್ಯವಿರಲಿಲ್ಲ. ಅದಕ್ಕೆ ಬೇಕಾದ ಸಂಪನ್ಮೂಲವನ್ನೆಲ್ಲ ಕ್ರೋಢೀಕರಿಸಿ, ಗೌತಮ ಬಯಸಿದ ಜನೋಪಕರಣಗಳಾದಿಯಾಗಿ ಸಕಲ ಸವಲತ್ತನ್ನು ಒಟ್ಟುಗೂಡಿಸಿ ಅವನು ನಿಗದಿಪಡಿಸಿದ ದಿನಕ್ಕು ಮೊದಲೆ ಸಿದ್ದವಾಗಿರುವಂತೆ ನೋಡಿಕೊಂಡಿರುವುದು ಆ ವ್ಯಕ್ತಿಯೆ…

ಅಂತೆಯೆ ಆ ಕಾರ್ಯದಲ್ಲಿ ಭಾಗಿಗಳಾಗುವಂತೆ ಅದೆಷ್ಟೊ ಜನರ ಮನವೊಲಿಸಿ ಅದರ ಮಹತ್ವದ ಹುದ್ದೆಗಳಲ್ಲಿ ಸೂಕ್ತ ಪರಿಣಿತಿಯುಳ್ಳವರು ಮತ್ತು ನೈಜ ಆಸಕ್ತಿಯುಳ್ಳವರು ಪಾಲ್ಗೊಳ್ಳುವಂತೆ ಮಾಡುವಲ್ಲಿ ಅವನ ಪಾತ್ರ ಅತ್ಯಂತ ಹಿರಿದು. ಅದೆಲ್ಲವನ್ನು ಮಾಡಿ ಮುಗಿಸಿದ ಮೇಲೂ ಆ ಇಡೀ ವ್ಯವಸ್ಥೆಯ ಕಾರ್ಯಾಗಾರ ಯಂತ್ರ ಸುಲಲಿತವಾಗಿ ಉರುಳಿಕೊಂಡು ಹೋಗುವಂತೆ ನಿಭಾಯಿಸಿಕೊಂಡು, ಅದು ಸೂಕ್ತ ನಿಯಂತ್ರಣದಲ್ಲಿ ನಡೆಯುವಂತೆ ನೀತಿ, ನಿಯಮಾವಳಿಗಳನ್ನು ರೂಪಿಸಿ ನಡೆಸಿಕೊಂಡು ಹೋಗುತ್ತಿರುವವನೂ ಅವನೆ…

ಅದಕ್ಕೆ ಬ್ರಹ್ಮದೇವನಿಗೆ ಅವನ ಮೇಲೂ ಆದರ, ವಿಶ್ವಾಸ ಈ ಸಂಶೋಧನೆಯ ವಿಷಯದಲ್ಲಿ…

ಅವನು ಬೇರಾರೂ ಅಲ್ಲ.. ಸ್ವಯಂ ದೇವರಾಜ ದೇವೇಂದ್ರನೆ !

ಊರ್ವಶಿ ಇನ್ನೇನು ಬ್ರಹ್ಮದೇವನೊಡನೆಯ ಪರಾಮರ್ಶಣಾ ಸಭೆಯನ್ನು ಆರಂಭಿಸಬೇಕೆಂಬ ಅವಸರದಲ್ಲಿ ಸಿದ್ದತೆಗಳನ್ನು ನಡೆಸುತ್ತಿರುವಾಗ, ತುಸು ನಿಧಾನಿಸುವಂತೆ ಸಂಜ್ಞೆ ನೀಡಿದ್ದ ಚತುರ್ಮುಖ. ಅದೇಕಿರಬಹುದೆಂಬ ಅಚ್ಚರಿಯಲ್ಲಿ ಊರ್ವಶಿ ಗೌತಮರಿಬ್ಬರು ವಿಧಾತನತ್ತ ದಿಟ್ಟಿಸಿ ನೋಡಿದಾಗ ಅವನ ದೃಷ್ಟಿ ನೇರ ಮುಖ್ಯದ್ವಾರದತ್ತ ನೆಟ್ಟಿದ್ದು ಕಂಡು, ಇನ್ನಾರದೋ ನಿರೀಕ್ಷೆಯಲ್ಲಿರುವನೆಂದು ಖಚಿತವಾಗಿತ್ತಾದರು, ಯಾರಿರಬಹುದೆಂದು ಇಬ್ಬರಿಗು ಗೊತ್ತಿರಲಿಲ್ಲ. ಅವರ ಮುಖದಲ್ಲಿದ್ದ ಪ್ರಶ್ನೆ, ಗೊಂದಲಗಳನ್ನು ಗಮನಿಸಿದವನಂತೆ ಬ್ರಹ್ಮದೇವ ಮುಗುಳ್ನಕ್ಕು,

“ದೇವರಾಜ ನರೇಂದ್ರನು ಹೊರಟುಬರುವ ಹಾದಿಯಲ್ಲಿದ್ದಾನೆ.. ಈ ಯೋಜನೆಯ ಮೇಲುಸ್ತುವಾರಿಯಲ್ಲಿ ದ್ರವ್ಯ ನಿಭಾವಣೆಯ ಸಂತುಲನೆಯಲ್ಲಿ ಅವನೆ ಮುಖ್ಯ ಪಾತ್ರದಾರಿಯಲ್ಲವೆ ? ನಿಮ್ಮ ವರದಿಯನ್ನು ಅವನ ಜತೆಗೆ ಒಟ್ಟಾಗಿ ಚರ್ಚಿಸೋಣ.. ಅವನಲ್ಲಿರುವ ಯೋಜನೋಪಾಯಗಳನ್ನು ನಾವೂ ಬಳಸುವಂತಾದರೆ, ಒಳಿತಾದೀತೆಂದು ನಾನೆ ಬರ ಹೇಳಿದೆ…ಮತ್ತೆ ಅವನ ಆಯವ್ಯಯ ಯೋಜನೆಯ ಪರಾಮರ್ಶೆಗು ಅನುಕೂಲ..” ಎಂದ.

ಪೂರ್ಣವಾಗಿ ವೈಜ್ಞಾನಿಕವೆನಿಸಬಹುದಾದ ವಿಚಾರ ಚರ್ಚೆಯಲ್ಲಿ ದೇವರಾಜನ ಆಗಮನ ಗೌತಮನಿಗೆ ರುಚಿಸಿದಂತೆ ಕಾಣಲಿಲ್ಲ. ಆದರೆ ಈ ಮಹಾ ಪ್ರಯೋಗದ ಮಹಾನ್ ಸ್ಥಪತಿ ಬ್ರಹ್ಮನ ಬಾಯಿಂದಲೆ ಆ ಮಾತು ಹೊರಟ ಮೇಲೆ ಮತ್ತಿನ್ನೇನೂ ಮಾತನಾಡಲಸ್ಪದವಿಲ್ಲವಾಗಿ, ಸರಿಯೆನ್ನುವಂತೆ ಸುಮ್ಮನೇ ಗೋಣು ಆಡಿಸಿದ. ಈ ತೀರಾ ವೈಜ್ಞಾನಿಕವೆನ್ನಬಹುದಾದ ಚರ್ಚೆಯಲ್ಲಿ ದೇವರಾಜನಂತಹ ಉಸ್ತುವಾರಿ ಪರಿಣಿತರು ನೀಡಬಹುದಾದ ಕಾಣಿಕೆಯೇನು ಎನ್ನುವ ನೈಜ ಪ್ರಶ್ನಾರ್ಥಕ ಮನೋಭಾವದ ಹೊರತು, ಬೇರಾವ ಕಲ್ಮಷ ಭಾವವೂ ಅಲ್ಲಿರಲಿಲ್ಲ. ಅದನ್ನರಿತವನಂತೆ ಬ್ರಹ್ಮದೇವ ನುಡಿದಿದ್ದ.

” ಹಾಗಲ್ಲ ಗೌತಮ.. ನರೇಂದ್ರ ವೈಜ್ಞಾನಿಕ ವಿಷಯ ತಜ್ಞನಲ್ಲ ಎನ್ನುವುದು ನಿಜ.. ಆದರೆ ಸೈದ್ದಾಂತಿಕ ಚರ್ಚೆ ನಡೆಸುವಾಗ ಆ ವಿಷಯ ವ್ಯಾಪ್ತಿಯ ಹೊರಗಿನವರಾರಾದರು ಇದ್ದರೆ ಒಳಿತು. ಅವರು ಯಾವುದೇ ಪೂರ್ವಾಗ್ರಹ ಪೀಡಿತ ಮನೋಭಾವವಾಗಲಿ ಅಥವಾ ಆ ವಿಷಯದ ಮೇಲಿನ ಅತೀವ ಮೋಹಾರಾಧನೆಯ ಭೂಮಿಕೆಯಾಗಲಿ ಇರದ ಕಾರಣ ಯಾವುದೇ ದಾಕ್ಷಿಣ್ಯವಿಲ್ಲದೆ ಆದರ ಕುರಿತು ಮಾತನಾಡುತ್ತಾರೆ, ಪ್ರಶ್ನಿಸುತ್ತಾರೆ, ಸರಿ ಕಾಣದಿದ್ದರೆ ಖಂಡಿಸುತ್ತಾರೆ.. ಆ ದೃಷ್ಟಿಕೋನ ಕ್ರಾಂತಿಕಾರಕ ಬದಲಾವಣೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಅತೀ ಮುಖ್ಯವಾದದ್ದು..”

ಅದುವರೆವಿಗೂ ಆ ಕೋನದಿಂದ ಆಲೋಚಿಸದಿದ್ದ ಗೌತಮನಿಗೆ ತಟ್ಟನೆ ಬ್ರಹ್ಮದೇವನಾ ಅಲೋಚನಾ ಲಹರಿಯ ಹಿನ್ನಲೆ ಸ್ಪಷ್ಟವಾಗಿ ಗೋಚರಿಸಿತ್ತು…

” ನಿಜ ಬ್ರಹ್ಮದೇವ.. ನಾನಾ ದಿಕ್ಕಿನಲ್ಲಿ ಆಲೋಚಿಸಿಯೇ ಇರಲಿಲ್ಲ… ಈ ವ್ಯಾಪ್ತಿಯಲ್ಲಿ ನೋಡಿದರೆ ದೇವರಾಜನ ಹಾಜರಿ ಮಹತ್ವದ್ದೆಂದೇ ಅನಿಸುತ್ತಿದೆ.. ಯಾಕೆಂದರೆ ವಿಜ್ಞಾನದ ಆಲೋಚನೆಯ ಪರಿಧಿಯನ್ನು ಮೂಲಾಗ್ರವಾಗಿ ಅರ್ಥೈಸಿಕೊಂಡು ಅದನ್ನು ನೈಜ ಪರಿಸರದ ಪರಿಮಿತಿ, ಇತಿಮಿತಿಗಳ ಚೌಕಟ್ಟಿನಲ್ಲಿ ವಿಶ್ಲೇಷಿಸಬಲ್ಲ ಜ್ಞಾನ, ಸಾಮರ್ಥ್ಯ ಅವನಿಗೆ ಸಹಜವಾಗಿ ಸಿದ್ದಿಸಿರುವ ಕಲೆ.. ಆ ಸೃಜನಶೀಲತೆಯ ಪ್ರಶ್ನಾರ್ಥಕ ಒಳನೋಟಗಳು ನಾವು ಆಲೋಚಿಸದಿದ್ದ ಕಡೆಯೂ ಗಮನ ಹರಿಸುವಂತೆ ಮಾಡಿ ನಮ್ಮ ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಸಿಗುವಂತೆ ಮಾಡುತ್ತವೆ.. ಇದುವರೆವಿಗು ನನಗಿದ್ಯಾಕೊ ಹೊಳೆಯಲಿಲ್ಲವೊ ಕಾಣೆ..” ಎಂದವನೆ ಊರ್ವಶಿಯತ್ತ ತಿರುಗಿ ನೋಡಿದವನೆ,

“ಊರ್ವಶಿ, ನಮ್ಮ ಮುಂದಿನ ಉನ್ನತ ಸ್ತರದ ಪರಾಮರ್ಶೆಯ ಚರ್ಚೆಗಳಲ್ಲಿ ದೇವರಾಜನನ್ನು ಆಹ್ವಾನಿಸು.. ಅವನ ನಿಗದಿತ ಪುನರಾವರ್ತಿತ ಭೇಟಿಯ ಚರ್ಚೆಗಳಿಂದ ನಮ್ಮ ಪ್ರತಿಯೊಂದು ಆಲೋಚನೆಯೂ ಲಾಭ ಪಡೆಯಲಿ.. ಹೇಗೂ ದ್ರವ್ಯ ನಿಯಂತ್ರಣ ಚರ್ಚೆಯ ಸಲುವಾಗಿ ನಾವು ಸಂಧಿಸುತ್ತಲೆ ಇರುತ್ತೇವೆ. ಅದನ್ನೆ ವಿಸ್ತರಿಸಿ, ಈ ವಿಷಯಕ್ಕೂ ಬಳಸಿಕೊಳ್ಳಬಹುದೆನಿಸುತ್ತಿದೆ, ದೇವರಾಜನಲ್ಲೊಮ್ಮೆ ವಿಚಾರಿಸಿ ನೋಡು, ಸಾಧ್ಯವೇ ಎಂದು..” ಎಂದು ಅಣತಿಯಿತ್ತ.

ತೀಕ್ಷ್ಣಗತಿಯಲ್ಲಿ ವಿಷಯ ಸಾರ ಗ್ರಹಿಸಿ, ಅದರ ಸಾಧಕಬಾಧಕಗಳ ಜಿಜ್ಞಾಸೆಯೊಡನೆ ಅದನ್ನು ಮತ್ತೂ ವಿಸ್ತರಿಸಿ ಅನುಷ್ಠಾನದ ಮಟ್ಟಕ್ಕೆ ಕಾರ್ಯಗತಗೊಳಿಸಿದ ಅವನ ಛಾತಿಗೆ ಮೆಚ್ಚುಗೆಯಿಂದ ದಿಟ್ಟಿಸಿ ನೋಡಿ ಕಣ್ಣಲ್ಲೆ ಅಭಿನಂದಿಸಿದ ಬ್ರಹ್ಮದೇವ…

ಅವನಿಗೆ ಸ್ವಯಂ ತನ್ನ ಪ್ರತಿಬಿಂಬವೆ ಗೌತಮನಲ್ಲಿ ಪ್ರತಿರೂಪವಾಗಿ ಕಾಣಿಸಿಕೊಂಡಂತನಿಸತೊಡಗಿತ್ತು. ತನ್ನ ಆಯ್ಕೆ ಸೂಕ್ತವಾದದ್ದೆನ್ನುವ ಸಂತೃಪ್ತಿಯ ಜತೆಗೆ ಅದನ್ನು ಸಲಹೆಯ ರೂಪದಲ್ಲಿ ಸೂಚಿಸಿ, ಅನುಮೋದಿಸಿದ ವ್ಯಕ್ತಿಯೂ ದೇವರಾಜನೆ ಎಂದು ನೆನಪಾಗಿ ಇನ್ನು ನಿರಾಳ ಭಾವ ಮೂಡಿತ್ತು. ‘ಊರ್ವಶಿಯ ಜತೆ ಅವರಿಬ್ಬರು ಸೇರಿದ ತಂಡ, ಯಾವ ಅನಗತ್ಯ ಮೇಲ್ವಿಚಾರಣೆಯ ಹಂಗಿಲ್ಲದೆ ತಂತಾನೆ ನಡೆದುಕೊಂಡುಹೋಗಬಲ್ಲದು; ತಾನು ಇನ್ನು ನಿರಾಳವಾಗಿ ಬೇರೆ ಕಡೆ ಗಮನ ಹರಿಸಬಹುದು’ ಎಂದುಕೊಳ್ಳುತ್ತಿದ್ದ ಹಾಗೆ ಆಗ ತಾನೆ ಬಂದು ತಲುಪಿದ ದೇವೇಂದ್ರನ ಪ್ರವೇಶವಾಯಿತು.

(ಇನ್ನೂ ಇದೆ)

(Link to next episode 32: https://nageshamysore.wordpress.com/2016/03/17/00595-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a8-%e0%b2%aa%e0%b3%8d%e0%b2%b0%e0%b2%be%e0%b2%ae%e0%b3%81/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,