00595. ಅಹಲ್ಯಾ ಸಂಹಿತೆ – ೩೨ (ಪ್ರಾಮುಖ್ಯತಾನುಸಾರ ಸಂಶೋಧನೆಯ ವರ್ಗೀಕರಣ)


00595. ಅಹಲ್ಯಾ ಸಂಹಿತೆ – ೩೨ (ಪ್ರಾಮುಖ್ಯತಾನುಸಾರ ಸಂಶೋಧನೆಯ ವರ್ಗೀಕರಣ)

(Link to previous episode 31: https://nageshamysore.wordpress.com/2016/03/17/00593-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a7-%e0%b2%a4%e0%b2%82%e0%b2%a1%e0%b2%a6-%e0%b2%a8%e0%b2%be/)

“ಓಹೋ! ನನ್ನದೆ ತಡವಾಗಿರುವಂತಿದೆಯಲ್ಲಾ? ಎಲ್ಲಾ ನನ್ನನ್ನೆ ಕಾಯುತ್ತಿರುವಂತಿದೆ ?” ಎನ್ನುತ್ತಲೆ ಒಳಬಂದು ತನಗಾಗಿ ಕಾಯುತ್ತಿದ್ದ ಆಸನದತ್ತ ನಡೆದ ದೇವರಾಜ.

“ಕಡೆಗಳಿಗೆಯಲ್ಲಿ ಮುನ್ಸೂಚನೆಯಿಲ್ಲದೆ ನಿನ್ನನ್ನು ಬರಮಾಡಿಕೊಳ್ಳಬೇಕಾಯ್ತು.. ಆದ ಕಾರಣ, ನೀನು ತಡವಾಯ್ತೆನ್ನುವುದರಲ್ಲಿ ಹುರುಳಿಗಿಂತ ಔಪಚಾರಿಕತೆಯೆ ಹೆಚ್ಚಿದೆ ಇಂದ್ರ. ಇರಲಿ.. ವಿಷಯ ಗಹನ ವ್ಯಾಪ್ತಿಯದಾದ ಕಾರಣ ನಿನ್ನ ಇರುವಿಕೆ ಉತ್ತಮ ಕಾಣಿಕೆ ನೀಡಬಲ್ಲದೆನಿಸಿತು.. ಹೀಗಾಗಿ ಈ ಕಡೇ ಗಳಿಗೆಯ ಮಾರೋಲೆ..” ಸಂಕ್ಷಿಪ್ತದಲ್ಲಿಯೆ ಹಿನ್ನಲೆಯನ್ನು ವಿವರಿಸುತ್ತ ನುಡಿದ ಬ್ರಹ್ಮದೇವ.

“ಪಿತಾಮಹನ ಗೌರವದ ನುಡಿಗಳಿಗೆ ನಾನು ಚಿರ ಕೃತಜ್ಞ.. ವೈಜ್ಞಾನಿಕ ಸ್ತರದ ಚರ್ಚೆಗಳಲ್ಲಿಯೂ ನನ್ನ ಇರುವಿಕೆ ಕಾಣಿಕೆ ನೀಡಬಲ್ಲದೆಂದರೆ ಅದು ಗೌರವದ ಮಾತಲ್ಲವೆ? ನನ್ನ ಸಾಮರ್ಥ್ಯಕ್ಕನುಗುಣವಾಗಿ, ನನ್ನ ಶಕ್ತಿಮೀರಿ ಕಾಣಿಕೆ ಸಲ್ಲಿಸುತ್ತೇನೆಂದಷ್ಟೆ ಭರವಸೆ ಕೊಡಬಲ್ಲೆ ಈ ಗಳಿಗೆಯಲ್ಲಿ.. ಆದರೆ ನನ್ನ ವೈಜ್ಞಾನಿಕ ಜ್ಞಾನದ ತಳಹದಿ ಎಷ್ಟು ಭದ್ರಬುಡದ್ದೆಂದು ನಿಮಗೇ ಗೊತ್ತಿದೆ..” ತನ್ನ ಪಾತ್ರವೇನಿರಬಹುದೆಂಬ ಸ್ಪಷ್ಟ ಸೂಚನೆಯ ಅರಿವಿರದ ದೇವರಾಜ ಅದನ್ನೆ ಇಂಗಿತ ರೂಪದಲ್ಲಿ ವ್ಯಕ್ತಪಡಿಸಿದ್ದ ತನ್ನ ಇತಿಮಿಯನ್ನು ತೆರೆದಿಡಲೆತ್ನಿಸುತ್ತ…

ಅವನ ಅಳುಕಿನ ಭಾವದ ಸೂಕ್ಷ್ಮತೆರೆಯನ್ನು ಸರಿಸಿ ನಿರಾಳಗೊಳಿಸುವವನಂತೆ ಈಗ ಮಾತನಾಡಿದವನು ಗೌತಮ.. ” ಆ ಆತಂಕ ಬಿಡು ದೇವೇಂದ್ರ.. ನಾವು ನಿಜಕ್ಕು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸೈದ್ದಾಂತಿಕ ನೆಲೆಗಟ್ಟಿನಲ್ಲೆ ಹೊರತು, ಆಳವಾದ ತಜ್ಞ ಸ್ತರದಲ್ಲಲ್ಲ.. ಆ ಸೈದ್ದಾಂತಿಕ ಚರ್ಚೆಗೆ ಬೇಕಾದಷ್ಟು ಮಟ್ಟಿಗಿನ ಮಾಹಿತಿಯನ್ನು ನಾನೆ ನೀಡಬಲ್ಲೆ.. ನಮ್ಮ ಚರ್ಚೆಗಳಿಗೆ ಅಷ್ಟು ಸಾಕು..” ಎಂದ.

ಆ ಮಾತಾಡುತ್ತ ಪಕ್ಕಪಕ್ಕದಲ್ಲಿ ಕುಳಿತ ಗೌತಮ, ದೇವೇಂದ್ರರನ್ನೆ ದಿಟ್ಟಿಸಿ ನೋಡುತ್ತ ಕುಳಿತಿದ್ದ ಊರ್ವಶಿಗೆ ಮತ್ತೆ ಫಕ್ಕನೆ ಅನಿಸಿದ್ದು – ಅವರಿಬ್ಬರಲ್ಲಿ ಎಷ್ಟು ಸಾಮ್ಯತೆಯಿದೆ ಎಂದು. ಒಂದೇ ತೆರದ ದಿರುಸಿನಲ್ಲಿ ಇಬ್ಬರೂ ಪಕ್ಕಪಕ್ಕ ನಿಂತರೆಂದರೆ, ಬರಿಯ ಗಡ್ಡ ಮೀಸೆಗಳಷ್ಟೆ ಅವರಿಬ್ಬರನ್ನು ಬೇರ್ಪಡಿಸಬಹುದಾದ ಅಂತರ. ಅದನ್ನು ಹೊರತಾಗಿಸಿ ಮಿಕ್ಕೆಲ್ಲವೂ ಪ್ರತಿಶತ ಪ್ರತಿರೂಪವೆನ್ನುವಷ್ಟು ಸಾದೃಶ್ಯ, ಹೋಲಿಕೆ – ಆಕಾರ ಗಾತ್ರ ಎಲ್ಲದರಲ್ಲು…

‘ಅದು ಹೇಗೆ ಅಷ್ಟೊಂದು ಹೋಲಿಕೆಯಿರಲು ಸಾಧ್ಯ?’ ಎಂದು ಚಿಂತಿಸುತ್ತಲೆ ಮತ್ತೆ ತಡವಾಗುತ್ತಿದೆಯೆಂಬ ಎಚ್ಚರಿಕೆಯ ದನಿಯೂ ತಲೆಯಲ್ಲಿ ಸುಳಿದುಹೋಗಿ ಅದನ್ನೆ ಬಾಹ್ಯದಲ್ಲಿ ಮಾರ್ದನಿಸುತ್ತ, “ಸರಿ.. ನಾವಿನ್ನು ಇಂದಿನ ಚರ್ಚೆಯನ್ನು ಆರಂಭಿಸೋಣವೇ ? ಈಗಾಗಲೆ ತಡವಾಗಿದೆ” ಎಂದಳು.

ಅಲ್ಲಿಂದ ಮುಂದುವರೆದ ಗೌತಮ ಮೊದಲ ಸಂಕ್ಷಿಪ್ತ ವರದಿಯನ್ನಿತ್ತು ಅದುವರೆವಿಗು ಕ್ರೋಢೀಕರಿಸಿದ ಮಾಹಿತಿ ಸಾರವನ್ನು ವಿವರಿಸಿದ. ಹಾಗೆ ಸಮೀಕರಿಸಿದ ಮಾಹಿತಿಯನ್ನೆಲ್ಲ ಒಟ್ಟುಗೂಡಿಸಿ ಅದನ್ನೆಲ್ಲ ಪರಸ್ಪರ ಹೋಲಿಸಿ ನೋಡಿದ್ದು, ಊರ್ವಶಿಯ ಸೃಷ್ಟಿಯ ಶ್ರೇಷ್ಠತೆಯನ್ನು ಗಣನೆ, ಗಮ್ಯಾಧಾರವಾಗಿಟ್ಟುಕೊಂಡು ಅವು ತಲುಪಬೇಕಿರುವ, ಕ್ರಮಿಸಬೇಕಿರುವ ದೂರದ ಲೆಕ್ಕಾಚಾರ ಹಾಕಿದ್ದು, ಸಮತೋಲಿತ ಪರಿಸರದ ಇಡೀ ವ್ಯವಸ್ಥೆಯ ಹಿನ್ನಲೆಯಲ್ಲಿ ಪರಿಶೀಲಿಸಿದ್ದು, ಪ್ರತಿಯೊಂದರ ಸಾಮಾನ್ಯ ಅಂಶಗಳನ್ನು ಬೇರ್ಪಡಿಸಿ ಪಟ್ಟಿ ಮಾಡಿ ಅದರ ಕುರಿತು ಮಥನ ಮಂಥನ ಕಾರ್ಯಾಗಾರಗಳನ್ನು ಆಯೋಜಿಸಿದ್ದು, ಕೊನೆಯಲ್ಲಿ ಹತ್ತು ಪ್ರಮುಖ ಅಂಶಗಳನ್ನು ಶೋಧಿಸಿ ಉನ್ನತ ಕಾರ್ಯಾಗಾರದ ವ್ಯಾಪ್ತಿಗೆ ಸೇರಿಸಿಟ್ಟಿದ್ದು – ಹೀಗೆ ಎಲ್ಲವನ್ನು ವಿವರಿಸಿ, ಸಾರದಲ್ಲಿ ಎರಡು ಅತಿ ಪ್ರಮುಖ ತೀರ್ಮಾನಗಳನ್ನು ಬೇರ್ಪಡಿಸಿ ಆ ದಿನದ ಚರ್ಚೆಗೆ ತಂದಿಟ್ಟಿದ್ದನ್ನು ಪ್ರಸ್ತಾಪಿಸಿದ.

“ಅಂದರೆ, ಯಾವುದೆ ಕೋಶವಾಗಲಿ ಅದು ನಿರಂತರವಾಗಿ ಅಥವಾ ಅತಿ ಹೆಚ್ಚು ಕಾಲದ ತನಕ ಬದುಕಿರುವ ಹಾಗೆ ಮಾಡುವುದು ಹೇಗೆ ಎನ್ನುವುದು ಒಂದು ಜಿಜ್ಞಾಸೆಯಾದರೆ, ಅದು ಕೋಶಮಟ್ಟದಲ್ಲೆ ಸ್ವಯಂಭುವಿನಂತೆ ತಂತಾನೆ ನಿಯಂತ್ರಿಸಿಕೊಳ್ಳುವ ವ್ಯವಸ್ಥೆ ಹೇಗೆ ಎನ್ನುವುದು ಎರಡನೆ ಜಿಜ್ಞಾಸೆ, ಅಲ್ಲವೆ?” ಆ ಎರಡು ಪ್ರಮುಖ ವಿಷಯಗಳ ಸಾರ ಗ್ರಹಿಸಿದವನಂತೆ ಕೇಳಿದ ದೇವೇಂದ್ರ.

” ನಿಜ ಮಹೇಂದ್ರ.. ಆದರೆ ಅವೆರಡು ಯಾವುದೇ ಪ್ರಚೋದನೆಯಿರದೆ ನಿಸರ್ಗಸಹಜ ಸೃಷ್ಟಿಯಲ್ಲಿ ತಂತಾನೆ ಅಳವಡಿಸಿಕೊಂಡು ಸ್ವಾಭಾವಿಕವಾಗಿ ಹೊರಹೊಮ್ಮಬೇಕೆನ್ನುವುದು ಮೊದಲ ಶರತ್ತು.. ಜತೆಗೆ ಆ ಪ್ರಕ್ರಿಯೆಯಲ್ಲಿ, ಸುತ್ತಲಿನ ಇಡಿ ಪರಿಸರವೆ ನೈಸರ್ಗಿಕವಾಗಿ ಭಾಗವಹಿಸುತ್ತ ಸಮತೋಲಿತ ರೀತಿಯಲ್ಲಿ ಪೂರ್ತಿ ವ್ಯವಸ್ಥೆಯನ್ನೆ ಮೇಲೆತ್ತಬೇಕೆನ್ನುವುದು ಎರಡನೆ ಶರತ್ತು..” ಗೌತಮ ಅದಕ್ಕೆ ಬೇಕಾದ ಇತರ ಗುಣಾತ್ಮಕ ಅಂಶಗಳನ್ನು ಸೇರಿಸುತ್ತ ವಿವರಿಸಿದ.

” ಆದರೆ ಇದು ನಡೆಯಬೇಕಾದ ವೇಗ ಕ್ರಾಂತಿಕಾರಕವಾಗಿರಬೇಕೆ ಹೊರತು ಕಿರುಸ್ತರದ ಹಂತಹಂತದ ಪ್ರಗತಿಯೊ ಅಥವಾ ಮಧ್ಯಮ ಸ್ತರದಲ್ಲಿ ಜರುಗುವ ಪ್ರಕ್ರಿಯೆಯೊ ಆಗಿದ್ದರೆ ಸಾಲದೆನ್ನುವುದು ಮೂರನೆಯ ಅನಿವಾರ್ಯ ಶರತ್ತು..” ಎನ್ನುತ್ತ ಅದರ ಮತ್ತೊಂದು ಆಯಾಮವನ್ನು ತೆರೆದಿಟ್ಟಳು ಊರ್ವಶಿ..

“ತಾಳಿ.. ತಾಳಿ.. ಇದನ್ನೆ ಸರಳೀಕರಿಸಿ ಹೇಳುವುದಾದರೆ, ಜೀವಕೋಶಗಳು ಸೇರಿದಂತೆ ಇಡೀ ಪರಿಸರ ತನ್ನ ಅಂತರ್ಗತ ಆಯಸ್ಸಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು – ಹೆಚ್ಚು ಕಾಲ ಬದುಕುವಂತೆ. ಅದನ್ನು ತಂತಾನೆ ನಿಭಾಯಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳಬೇಕು ನಿಸರ್ಗ ಸಹಜ ರೀತಿಯಲ್ಲೆ.. ಇದೆಲ್ಲವೂ ನಾಗಲೋಟದಲ್ಲಿ ಘಟಿಸಬೇಕು ಕ್ರಾಂತಿಕಾರಕವೆನ್ನುವಂತೆ, ನನ್ನ ಗ್ರಹಿಕೆ ಸರಿಯೆ?” ಎಂದು ಕೇಳಿದ ದೇವರಾಜ.

ಅದುವರೆವಿಗೆ ಇವರ ಮಾತನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಬ್ರಹ್ಮದೇವ ಈಗ ನಡುವೆ ನುಡಿದ –

” ಹೌದು ದೇವರಾಜ.. ಊರ್ವಶಿಯ ಅಥವಾ ಉಚ್ಚೈಶ್ರವಸ್ಸಿನಂತಹ ಉನ್ನತಸ್ತರದ, ಅತ್ಯುತ್ಕೃಷ್ಟ ಶ್ರೇಣಿಯ ತಳಿಗಳನ್ನು ನಿಸರ್ಗ ನಿರಂತರವಾಗಿ ಸೃಜಿಸಿ, ನಿಭಾಯಿಸಿಕೊಳ್ಳುವ ದಾರಿ ಹುಡುಕಬೇಕಿದೆ ನಾವು.. ಆ ಗಮ್ಯ ತಲುಪಲು ಇರುವ ಅಂತರಗಳೆಲ್ಲ ಈಗಾಗಲೆ ಸಂಶೋಧನೆಯ ಪ್ರಮುಖ ವಿಷಯಗಳಾಗಿವೆ.. ಆ ಹಂತಕ್ಕೆ ತಲುಪಲು ಬೇಕಾದ ವೇಗ ಮತ್ತು ತಂತ್ರ ನಮಗೆ ಸಿದ್ದಿಸಿಲ್ಲದ ಕಾರಣ ಇಷ್ಟೆಲ್ಲಾ ಸಂಶೋಧನೆ, ಪ್ರಯೋಗಗಳ ದುಂಬಾಲು ಬೀಳಬೇಕಿದೆ. ಆದರೆ ನಾವೀಗಿರುವ ಆಮೆಯ ವೇಗದಲ್ಲಿ ಹೋದರೆ ಅದರ ಸಾಧನೆಯಾಗಲಿಕ್ಕೆ ಅದೆಷ್ಟು ಕಲ್ಪಗಳಾದೀತೊ ಹೇಳಲೆಂತು ? ವಿಪರ್ಯಾಸವೆಂದರೆ ಇಲ್ಲಿ ಕುದುರೆಯ ವೇಗವೆ ಆಗಲಿ, ನಾಗಾಲೋಟವೆ ಆಗಲಿ ಕೆಲಸಕ್ಕೆ ಬರದು. ಅದನ್ನು ಮೀರಿದ, ಮನೋವೇಗಕ್ಕೆ ಸರಿಸಮನಲ್ಲದಿದ್ದರು ಅಷ್ಟೆ ಪ್ರಬಲವಾದ ವೇಗದ ಅನ್ವೇಷಣೆಯಾದ ಹೊರತು ಈ ಪ್ರಯೋಗ ತನ್ನ ಸಾರ್ಥಕತೆಯನ್ನು ಕಾಣಲಾಗದು… ”

” ಅಲ್ಲಿಗೆ ಈ ಮೂರು ಪ್ರಮುಖ ಅಂಶಗಳನ್ನು ನಾವು ಗಮನಿಸಿದರೆ ಆಯಿತೇನು? ಇವಕ್ಕೆ ಉತ್ತರ ಸಿಕ್ಕರೆ ಎಲ್ಲಾ ಪರಿಹಾರವಾದ ಹಾಗೇನು?”

“ಹೌದು ಮತ್ತು ಅಲ್ಲ ಮಹೇಂದ್ರ.. ಇಲ್ಲಿ ಆರಿಸಿರುವುದು ತೀರಾ ಪ್ರಮುಖವಾದ ಮೂರು ವಿಷಯಗಳಷ್ಟೆ.. ಇದರ ಕೆಳಗಿನ ಹಂತದಲ್ಲಿ ಇನ್ನು ಹತ್ತು ಇದೇ ರೀತಿಯ ವೈವಿಧ್ಯಮಯ ಸಂಬಂಧಿ ಅಂಶಗಳು ಇವೆ.. ಆ ಪ್ರತಿಯೊಂದಕ್ಕು ಬೇರೆಯೆ ಆದ ಕಾರ್ಯಗಾರ ನಡೆಸಿ ಅಲ್ಲಿಯೂ ವಿಷಯ ಸಮಗ್ರೀಕರಣ ಮಾಡಬೇಕಿದೆ.. ಆದರೆ ಅಲ್ಲಿ ಬ್ರಹ್ಮದೇವನ ಅಗತ್ಯವಿರುವುದಿಲ್ಲ.. ನಾವುಗಳೆ ನಿಭಾಯಿಸಬಹುದು. ಅದೇ ತರ್ಕದಲ್ಲಿ ಆ ಪ್ರತಿ ಹತ್ತರ ಗುಂಪಿನಲ್ಲು ಹತ್ತಾರು, ನೂರಾರು ಸಣ್ಣ, ಮಧ್ಯಮ ಹಾಗು ದೊಡ್ಡ ಮರುವಿಂಗಡಣೆಯಿರುತ್ತದೆ.. ಅಲ್ಲಿಯ ಕಾರ್ಯಾಗಾರಕ್ಕೆ ನಮ್ಮ ಭಾಗವಹಿಸುವಿಕೆಯ ಅಗತ್ಯವಿರದಿದ್ದರೂ, ಅದರ ಫಲಿತದ ಕ್ರೋಢೀಕರಣ ನಮಗೆ ಬೇಕಾಗುವ ಅಗತ್ಯ ಅಂಶ. ಹೀಗೆ ಈ ಸರಪಳಿ ಕೋಂಡಿಯನ್ಹಿಡಿದು ತುದಿಯವರೆಗು ನಡೆದರೆ ಅದೆಷ್ಟು ಕಾರ್ಯಾಗಾರಗಳು, ಅದೆಷ್ಟು ಮಾಹಿತಿಗಳು ಸಮಗ್ರವಾಗಿ, ಸಂಕೀರ್ಣವಾಗಿ ಸೇರ್ಪಡೆಯಾಗಬೇಕೆಂದು ಲೆಕ್ಕ ಹಾಕಲೆ ಆಗದಷ್ಟು ದೊಡ್ಡದು..” ಅದರ ಅಗಾಧ ವ್ಯಾಪ್ತಿಯನ್ನು ಮನವರಿಕೆ ಮಾಡಿಕೊಡುವವಳಂತೆ ವಿವರಿಸಿದಳು ಊರ್ವಶಿ.

” ಸರಿ ಅರ್ಥವಾಯಿತು.. ಈ ಮೂರು ಮುಖ್ಯ ವಿಷಯದ ಚರ್ಚಾ ಕಾರ್ಯಗಾರದಲ್ಲಿ, ಪಿತಾಮಹನೂ ಸೇರಿದಂತೆ ನಾವು ನಾಲ್ವರ ಕಾಯಾಚರಣೆಯಾದರೆ, ಮುಂದಿನ ಹತ್ತು ಅಂಶಗಳಲ್ಲಿ ಬರಿ ನಾವುಗಳಿದ್ದರೆ ಸಾಕು.. ಮಿಕ್ಕವುಗಳನ್ನು ಆಯಾ ತಂಡಗಳ ನಾಯಕರು ನಿಭಾಯಿಸಿಕೊಳ್ಳುವಂತೆ ಸರಪಳಿ ವ್ಯವಸ್ಥೆ ಮಾಡಿ ಅದೆಲ್ಲದರ ಒಟ್ಟಾರೆ ಉಸ್ತುವಾರಿಯನ್ನು ನಾವು ಗಮನಿಸುತ್ತ ಸಮಗ್ರ ಚಿತ್ರಣಕ್ಕೆ ಜೋಡಿಸಬೇಕು..ಅಲ್ಲವೇ ? ನಿಜವೆ.. ಇದು ಭಾರಿ ಯೋಜನೆಯೆ ಸರಿ!” ಎಂದ ದೇವೇಂದ್ರ ತಲೆಯಾಡಿಸುತ್ತ.

“ಆದರೆ ಈವತ್ತಿನ ಈ ಕಿರು ಭೇಟಿ ಕೇವಲ ಆ ಮೊದಲ ಮೂರು ಅಂಶಗಳ ಚರ್ಚೆಗೆ ಮಾತ್ರ ಸೀಮಿತ.. ಈ ಮೂರು ಅಂಶಗಳು ಮಾತ್ರವೆ ಮಿಕ್ಕೆಲ್ಲದಕ್ಕು ಒಂದು ರೀತಿಯಲ್ಲಿ ಸಾಮಾನ್ಯವಾಗಿರುವಂತಹ ಗ್ರಹಿಕೆಗಳು.. ಇವುಗಳ ಫಲಿತವಾಗಿ ಹೊರಡಬಹುದಾದ ಯಾವುದೇ ತೀರ್ಮಾನಗಳು, ಮರು ಸಿದ್ದಾಂತಗಳು ಮಿಕ್ಕೆಲ್ಲದಕ್ಕು ಮಾರ್ಗದರ್ಶಿಯಾಗುವ ಕಾರಣ ಇವನ್ನು ನಿರ್ದಿಷ್ಠವಾಗಿ ಗೊತ್ತು ಪಡಿಸುವ ತನಕ ಮಿಕ್ಕವುಗಳು ತಂತಮ್ಮ ಆಳಕ್ಕಿಳಿಯಲು ಪರವಾನಗಿ ಸಿಗುವುದಿಲ್ಲ” ಎಂದು ಮತ್ತೆ ಆ ದಿನದ ವಿಷಯ ಸೂಚಿಕೆಗೆ ಸೂಕ್ತ ಪರಿಧಿ, ದಿಕ್ಸೂಚಿ ಹಾಕಿದವಳು ಊರ್ವಶಿ.

“ಸರಿ ಹಾಗಾದರೆ ಈ ಮೂರರಲ್ಲಿ ಮೊದಲ ವಿಷಯವನ್ನು ಕೈಗೆತ್ತಿಕೊಳ್ಳುವ.. ಇದು ಜೀವಕೋಶಗಳ ಜೀವಿತಾವಧಿಗೆ ಸಂಬಂಧಿಸಿದ ವಿಷಯ. ನಾವು ಈಗ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಊರ್ವಶಿಯ ಸ್ತರದ ತಳಿಯ ಮಟ್ಟಕ್ಕೆ ಹೋಲಿಸಿ ತುಲನಾತ್ಮಕವಾಗಿ ನೋಡಿದಾಗ ಕಂಡು ಬಂದ ಅಂತರ ಅಗಾಧವಾದದ್ದು. ಈ ಅಂತರ ಮಿಕ್ಕೆಲ್ಲ ಕೋಶಗಳಲ್ಲು ಇರುವುದು ಮಾತ್ರವಲ್ಲದೆ, ಬಹುತೇಕ ಅಂತರದ ಗಾತ್ರ ಕೂಡ ಒಂದೆ ಮಟ್ಟದಲ್ಲಿರುವುದು ಗಮನಾರ್ಹ.. ಹೀಗಾಗಿ ಈ ಅಂಶದ ತೊಡಕು ನಮ್ಮ ಮಿಕ್ಕೆಲ್ಲಾ ಕೆಳಸ್ತರದ ಸಂಶೋಧನೆಗಳನ್ನು ಕಾಡಲಿದೆ.. ಇದರ ಪರಿಹಾರ ಕಂಡುಕೊಳ್ಳದಿದ್ದರೆ, ಎಲ್ಲರಿಗು ಇದರ ಫಲಶೃತಿಯ ಅವಲಂಬನೆ ಇರುವ ಕಾರಣ ಇದು ಪ್ರತಿಯೊಬ್ಬರ ಪ್ರಗತಿಯನ್ನು ಕುಂಠಿತವಾಗಿಸುವುದು ಮಾತ್ರವಲ್ಲದೆ, ಸಮಗ್ರ ಸಂಶೋಧನೆಯ ಗತಿಯನ್ನು ನಿಧಾನವಾಗಿಸಿಬಿಡುತ್ತದೆ.. ಆ ಕಾರಣಕ್ಕೆ ಇದು ಒಂದು ಪ್ರಮುಖ ಕಾರ್ಯಯೋಜನಾ ಭಾಗಾಂಶವೆಂದು ಹೇಳಬೇಕು..” ನೇರ ವಿಷಯಕ್ಕೆ ಬರಲೆತ್ನಿಸುತ್ತ ಪೀಠಿಕೆ ಹಾಕಿದ ಗೌತಮ.

(ಇನ್ನೂ ಇದೆ)

(Link to Nex episode 33: https://nageshamysore.wordpress.com/2016/03/17/00596-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a9-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s