00597. ಅಹಲ್ಯಾ ಸಂಹಿತೆ – ೩೪ (ಸಂಶೋಧನೆಯ ವೇಗದ ಚಿಂತನೆ)


00597. ಅಹಲ್ಯಾ ಸಂಹಿತೆ – ೩೪ (ಸಂಶೋಧನೆಯ ವೇಗದ ಚಿಂತನೆ)

(Link to the previous episode 33: https://nageshamysore.wordpress.com/2016/03/17/00596-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%a9-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6/)

“ತಾರ್ಕಿಕವಾಗಿ ಇವೆರಡು ಬೇರೆಯದೆ ಅಂಶಗಳೆನ್ನಬಹುದಾದರು, ಸಮಷ್ಟಿತ ಸ್ಥಿತಿಯಲ್ಲಿ ಎರಡಕ್ಕೂ ಸಂಬಂಧವಿದೆಯಲ್ಲವೆ ಗೌತಮ? ಏಕೆಂದರೆ ಮೊದಲ ಅಂಶ ಆಯಸ್ಸಿನ ವಿಸ್ತೀರ್ಣವನ್ನು ಹೆಚ್ಚಿಸಿದರು, ಅದರ ನಿರಂತರ ನಿಭಾವಣೆ, ನಿಯಂತ್ರಣಕ್ಕೆ ಬೇಕಾದ ಸೂಕ್ತ ವ್ಯವಸ್ಥೆಯನ್ನೊದಗಿಸಬಲ್ಲ ಸಾಧ್ಯತೆಯತ್ತ ಈ ಎರಡನೇ ಅಂಶ ಮಾತ್ರವೆ ಗಮನಹರಿಸಬಲ್ಲದು… ನನ್ನನಿಸಿಕೆ ಸರಿಯಿದೆಯೆ ?” ಮತ್ತೆ ದೇವೇಂದ್ರನ ವಿಶ್ಲೇಷಣಾಪೂರ್ಣ ಪ್ರಶ್ನೆ.

ಗೌತಮ ತನ್ನಲ್ಲೆ ಆಳವಾಗಿ ಆಲೋಚಿಸುತ್ತ, ದೇವರಾಜನ ಮಾತಿನ ಚಿತ್ರವನ್ನು ಮನಃಪಟಲದಲ್ಲಿ ಬಿಡಿಸಿಕೊಳ್ಳುತ್ತ ನುಡಿದ, ” ಹೌದು ಮಹೇಂದ್ರ.. ಇವೆಲ್ಲವು ಪರಸ್ಪರ ಕೊಂಡಿಯಿಂದ ಬಂಧಿತವಾಗುವ ಸಮಷ್ಟಿ ಚಿತ್ರಣದ ತುಣುಕುಗಳೆ… ಒಂದು ರೀತಿ ಇವೆರಡು ಸೃಷ್ಟಿ ಮತ್ತು ಸ್ಥಿತಿಗಳ ಪ್ರತಿನಿಧಿಯಿದ್ದ ಹಾಗೆ.. ಈ ಮೊದಲಿನಂಶ ನಾವಂದುಕೊಂಡ ಗಮ್ಯಕ್ಕೆ ತಲುಪಿಸಬಲ್ಲದಾದರು , ಅದು ಮತ್ತೆ ಜಾರಿಹೋಗದ ಹಾಗೆ ಸುಸ್ಥಿತಿಯಲ್ಲಿಡುವುದೆ ಇಲ್ಲವೆ ಎಂದು ಹೇಳಬರದು… ಅದಕ್ಕಾಗಿ ಈ ಸ್ವಯಂಭುತ್ವದ ಅಗತ್ಯತೆ..”

” ಅಲ್ಲಿಗೆ ಇಲ್ಲಿಯೂ ಕೂಡ ಮೊದಲಿನ ಕಾರ್ಯತಂತ್ರವೆ ನಡೆಯುವುದೆಂದಾಯ್ತಲ್ಲವೆ ? ಪ್ರತಿ ಸಮೂಹದ ತಜ್ಞರೆಲ್ಲರನ್ನು ಒಗ್ಗೂಡಿಸಿ ಆ ತಂಡಕ್ಕೆ ಇದರ ಹೊಣೆ ವಹಿಸಿದರೆ ಸಾಕು, ಅಲ್ಲವೆ ?” ಇದೂ ಸುಲಭ ಪರಿಹಾರದ ಪ್ರಶ್ನೆ ಎನ್ನುವ ದನಿಯಲ್ಲಿ ನುಡಿದ ದೇವರಾಜ.

ಆಗ ನಡುವೆ ಬಾಯಿ ಹಾಕಿದ ಬ್ರಹ್ಮದೇವ ದೇವರಾಜ, ಗೌತಮರಿಬ್ಬರತ್ತ ಮುಖ ಮಾಡಿ ನುಡಿದ, ” ದೇವೇಂದ್ರ, ಇಲ್ಲಿ ಪ್ರಶ್ನೆ ಕಾರ್ಯತಂತದ್ದು ಮಾತ್ರವಲ್ಲ.. ಹಿಂದಿನ ಅಂಶದಲ್ಲಿ ನಾವು ವೇಗದ ಕುರಿತು ಆಲೋಚಿಸಿದಂತೆ, ಇವೆರಡು ಅಂಶದಲ್ಲಿಯು ಮತ್ತೊಂದು ಆಯಾಮವಿರುತ್ತದೆ.. ಅದು ಪರಿಸರದೊಡನೆಯ ಸಂತುಲನದ ನಿರೀಕ್ಷೆ.. ಅಲ್ಲವೆ ಗೌತಮ?”

” ಹೌದು ಬ್ರಹ್ಮದೇವ.. ನಾವು ಜೈವಿಕ ಪರಿಸರದಲ್ಲಿ ಏನನ್ನೆ ಬದಲಿಸಿದರು ಅದರ ಸಮಾನುಪಾತದಲ್ಲಿ ಸುತ್ತಲ ಪರಿಸರದ ಜೈವಿಕಾಜೈವಿಕಗಳು ಬದಲಾಗಿ , ಜತೆಯಲ್ಲೆ ಮೇಲಿನ ಸ್ತರಕ್ಕೇರುವಂತಾಗಬೇಕೆಂಬುದು ಈ ವ್ಯವಸ್ಥೆಯ ಕನಿಷ್ಠ ನಿಯಮ… ಇಲ್ಲದಿದ್ದರೆ ನಾವೇನೆ ಸಾಧಿಸಿದರು, ಅದನ್ನು ಪೊರೆಯುವ ವಾತಾವರಣವಿರದೆ ಸೊರಗಿ, ಬಾಡಿಹೋಗುತ್ತವೆ. ವೇಗದ ಜತೆಗೆ ಇದೂ ಸಹ ಮತ್ತೊಂದು ಪ್ರಮುಖ ಅಂಶ – ನಮ್ಮ ಸಂಶೋಧನೆಗಳು ಹೇಗೆ ತಮ್ಮಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ತಮ್ಮ ಪರಿಸರದ ಮಿಕ್ಕ ಅಂಶಗಳನ್ನು ಮೇಲೊಯ್ಯಬಲ್ಲವೆಂಬುದು.. ಈ ಕಾರಣಕ್ಕಾಗಿಯೆ ಈ ಅಂಶವನ್ನು ಮೂರನೆಯದಾಗಿ ಸೇರಿಸಿದ್ದೇವೆ.. ಆದರೆ ಇದು ಮೇಲಿನ ಎರಡೂ ಅಂಶಗಳಿಗು ಪೂರಕವಾಗಿರುವುದರಿಂದ, ಎರಡು ತಂಡಗಳ ಜತೆಗೂ ಸಂಯೋಜಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.. ಅರ್ಥಾತ್, ದೇವರಾಜನ ಉಪಾಯದಂತೆ ಒಗ್ಗೂಡಿಸಿದ ಎರಡೂ ತಂಡಗಳಿಂದಲೆ ಮೂರನೆಯ ಮತ್ತೊಂದನ್ನು ಸೃಜಿಸಿ ಅದಕ್ಕೆ ಈ ಹೊಣೆ ಹೊರಿಸಬೇಕು.. ಅಲ್ಲಿಯೂ ದೇವೇಂದ್ರನ ಕಾರ್ಯತಂತ್ರವೆ ಹೊಂದುತ್ತದೆನ್ನುವುದರಲ್ಲಿ ಎರಡು ಮಾತಿಲ್ಲ..” ಧೀರ್ಘವಾದ ಉತ್ತರ ನೀಡುತ್ತ ನುಡಿದ ಗೌತಮ.

ಹೀಗೆ ಚರ್ಚೆ ಬಹು ಹೊತ್ತು ಮುಂದುವರೆಯಿತು ಆಳವಾದ ವಿವರಗಳತ್ತ ನೋಡುತ್ತ. ಅಂತಿಮವಾಗಿ ಎಲ್ಲವನ್ನು ಪರಾಮರ್ಶಿಸಿದ ಬ್ರಹ್ಮದೇವ ಅಂದಿನ ಸಭೆಯ ಕೊನೆಯ ಮಾತೆಂಬಂತೆ ನುಡಿದಿದ್ದ..

” ಸರಿ ಈಗ ನಾವು ಅಂದುಕೊಂಡಂತೆ ಮೊದಲೆರಡು ಅಂಶಗಳ ಗಣನೆಗೆ ತಂಡ ರಚಿಸುವ ಕಾರ್ಯ ಆರಂಭವಾಗಲಿ. ಅದರಲ್ಲೆ ಮೂರನೆ ಅಂಶದ ತಂಡವೂ ಆಗಬೇಕೆಂದು ನೆನಪಿರಲಿ.. ಆದರೆ ಗೌತಮ, ಈ ಮೂರನೆಯ ಅಂಶದ ತಂಡದ ಕಾರ್ಯಕ್ಷೇತ್ರ ತುಂಬಾ ಸಂಕೀರ್ಣವಾದದ್ದು .. ಇದನ್ನು ಯಾರಾರದೊ ಹೊಣೆಗೆ ಒಪ್ಪಿಸುವುದು ಸೂಕ್ತವಲ್ಲ.. ಇದರ ನೇರ ನಾಯಕತ್ವವನ್ನು ನೀನೇ ವಹಿಸಿಕೊ.. ಸಮಗ್ರ ಚಿತ್ರಣವಿರುವ ಕಾರಣ ನಿನಗೆ ಸಮಸ್ತದ ಉಸ್ತುವಾರಿಯೂ ಸುಲಭವಾಗುತ್ತದೆ.. ” ಎಂದು ಏನನ್ನೋ ನೆನಪಿಸಿಕೊಳ್ಳುವವನಂತೆ ತುಸು ಬಿಡುವು ನೀಡಿದ.

ತಾನು ಹೇಳಬೇಕಿದ್ದನ್ನು ಮನದಲ್ಲೇ ಕ್ರೋಢೀಕರಿಸಿಕೊಂಡು ಮುಂದುವರೆಸಿದ್ದ ಬ್ರಹ್ಮದೇವ,”ಅಂದ ಹಾಗೆ ಈ ದಿನ ನಾವು ಚರ್ಚಿಸಿ ನಿರ್ಧರಿಸಬೇಕಿದ್ದ ಮತ್ತೊಂದು ಆಯಾಮ ‘ವೇಗ’ ವೆಂದು ಈ ಮೊದಲೆ ನಿರ್ಧರಿಸಿದ್ದೆವಲ್ಲಾ? ಅದರ ನೇರ ಚರ್ಚೆಯನ್ನು ಈಗಲೆ ಮಾಡುವ ಬದಲು ಬರಿಯ ಅದೊಂದೆ ವಿಷಯದ ಕುರಿತು ನಾವು ಬೇರೆಯೆ ಕಾರ್ಯಾಗಾರ ನಡೆಸೋಣ.. ಆ ಕಾರ್ಯಾಗಾರದ ಸಿದ್ದತೆಯ ಹೊಣೆಯನ್ನು ದೇವರಾಜನೆ ವಹಿಸಿಕೊಳ್ಳಲಿ.. ವೇಗವನ್ನು ಗಳಿಸಲು ಸಾಧ್ಯವಾಗುವ ಎಲ್ಲಾ ದಾರಿಗಳನ್ನು ಹುಡುಕಿ ಚರ್ಚೆಗೆ ತರುವ ಹೊಣೆ ನಿನ್ನದೆ ಮಹೇಂದ್ರ.. ಊರ್ವಶಿ, ಇನ್ನೊಂದು ವಾರದಲ್ಲಿ ಈ ವೇಗದ ಚರ್ಚೆಗೆ ನಮ್ಮ ಸಭೆಯನ್ನು ನಿಗದಿಪಡಿಸು.. ಅಂತೆಯೆ ನಮ್ಮ ಈ ಅಂಶಗಳ ಫಲಿತ ಸ್ಪಷ್ಟವಾಗುವ ತನಕ ಮಿಕ್ಕ ಕೆಳಹಂತದ ಚಟುವಟಿಕೆಗಳು ತೀರಾ ಆಳಕ್ಕಿಳಿಯದೆ ಮಿತವಾಗಿ, ಸರಿಸೂಕ್ತ ರೀತಿಯಲ್ಲಿರುವಂತೆ ಮಾತ್ರ ನಡೆಯಲಿ. ಆ ರೀತಿಯ ನಿಯಂತ್ರಣಗಳನ್ನು ಅಳವಡಿಸಿಕೊಳ್ಳಿ.. ಮತ್ತೆ ಮುಂದಿನ ವಾರ ಪರಿಸ್ಥಿತಿಯನ್ನು ಪರಾಮರ್ಶಿಸೋಣ..” ಎಂದ.

ಅಲ್ಲಿಗೆ ಅಂದಿನ ಸಭೆ ಮುಕ್ತಾಯವಾಗಿತ್ತು.

*******************

ಅಧ್ಯಾಯ – 11
___________

ಏಕಾಗ್ರತಾ ಚಿತ್ತದಿಂದ ತಪೋನಿರತನಾಗಿ ಎಂದಿನಂತೆ ಸಮಾಧಿ ಸ್ಥಿತಿಯಲ್ಲಿ ಬಾಹ್ಯದರಿವಿಲ್ಲದಂತೆ ಮುಳುಗಿದ್ದ ನರನ ಪ್ರಜ್ಞೆಗೆ, ಯಾವುದೋ ಕಂಪನಗಳು ಮುತ್ತಿದಂತಾಗಿ ಅಂತರಂಗದ ಘನಿಷ್ಠ ಪ್ರಜ್ಞೆಯ ಕೋಶಕ್ಕೆ ಸೂಕ್ಷ್ಮರಂಧ್ರವೊಂದರ ಕೊರೆತದ ಅನುಭವಾಗುತ್ತ ಮೆಲುವಾಗಿ ಬಡಿದೆಬ್ಬಿಸತೊಡಗಿದವು. ಆ ಆಂತರ್ಯದ ತಾಕಲಾಟದ ತಾಡನ ತೀವ್ರವಾಗುತ್ತಿದ್ದಂತೆ, ಪ್ರಜ್ಞಾವಸ್ಥೆಯ ಸಂಸರ್ಗ ವಿಸ್ತೃತವಾಗುತ್ತ ಹೋಗಿ ಅಂತರ್ಪ್ರಜ್ಞೆಯ ಕಿರು ಭಾಗವೊಂದು ಚೇತನಪೂರ್ಣವಾಗಿ ಬಾಹ್ಯಕ್ಕೆ ತೆರೆದುಕೊಂಡು ಸ್ಪಂದಿಸುತ್ತ ಅದೇನಿರಬೇಕೆಂದು ತಡವತೊಡಗಿತ್ತು.

ಅದು ನಾರಾಯಣನ ಸಂಪರ್ಕಿಸುವ ಯತ್ನದಿಂದ ಪ್ರೇರಿತವಾದ ತರಂಗಗಳೆಂದು ಅರಿವಾಗುತ್ತಲ್ಲೆ ಸೂಕ್ಷ್ಮಮನದ ಕಿರು ಭಾಗವೊಂದು ಜಾಗೃತ ಪ್ರಜ್ಞೆಯೊಳಕ್ಕೆ ಆವಾಹಿಸಿಕೊಂಡು ನಾರಾಯಣನಲ್ಲಿರುವ ತನ್ನ ಸಂವಾದಿ ಭಾಗದತ್ತ ತರಂಗರೂಪದಲ್ಲಿ ಪ್ರವಹಿಸತೊಡಗಿತು. ಎರಡು ತರಂಗವಾಹಿಗಳು ಪರಸ್ಪರ ಸಂಪರ್ಕವೇರ್ಪಡಿಸಿಕೊಳ್ಳುತ್ತಿದ್ದಂತೆ , ಸಂವಹನಕ್ಕೆ ಬೇಕಾದ ಸುರಕ್ಷಿತ ಕೊಳವೆಯಾಕಾರದ ಅದೃಶ್ಯ ಸೇತುವೆಯೊಂದನ್ನು ಹಾಸಿದಂತಾಗಿ, ಪರಸ್ಪರರ ಚಿಂತನೆ, ಆಲೋಚನೆಗಳು ಶ್ರವ್ಯ ಮಾಧ್ಯಮ ಮೂಲವಾದ ಶಬ್ದದ ನೆರವಿಲ್ಲದೆಯೆ , ತಮ್ಮ ಮೂಲರೂಪದಲ್ಲಿ ಹರಿದಾಡಲು ತೊಡಗಿದವು. ಅದೇ ಹೊತ್ತಲಿ ಪ್ರಚೋದಿಸಿದ ಚಕ್ಷುತರಂಗಗಳ ಸಂಕಲನವೂ ಬೆರೆತು, ಕದನ ವಿರಾಮದಲ್ಲಿ ವಿಶ್ರಮಿಸಿಕೊಳ್ಳುತ್ತಿರುವ ಯುದ್ದದುಡುಗೆಯನುಟ್ಟುಕೊಂಡ ನಾರಾಯಣನ ಚಿತ್ರ ಕಣ್ಮುಂದೆ ನಿಂತಿತು.

‘ಏನು ನಾರಾಯಣ..? ಎಲ್ಲಾ ಸರಿಯಿದೆ ತಾನೆ ?’

‘ಹೂಂ.. ಸರಿಯಿದೆ… ಆ ಬಾರಿಯ ಕದನದಲ್ಲಿ ಮಾಮೂಲಿಗಿಂತ ಸ್ವಲ್ಪ ಹೆಚ್ಚೆ ಘಾಸಿ ಮಾಡಿಬಿಟ್ಟೆ, ಸಹಸ್ರಕವಚನಿಗೆ.. ಹೀಗಾಗಿ ಈ ಕದನ ವಿರಾಮದಿಂದ ಸುಧಾರಿಸಿಕೊಂಡು ಮತ್ತೆ ಸಿದ್ದನಾಗಿ ಬರಲು ಹೆಚ್ಚು ಸಮಯ ಹಿಡಿಯುತ್ತದೆ.. ಆ ಸಮಯದಲ್ಲಿ ನಿನ್ನೊಡನೆ ಹೆಚ್ಚು ಮಾತಾಡಲು ಸಾಧ್ಯವಾಗುವುದೆಂದೆಂದು ಸಂಪರ್ಕಿಸಿದೆ..’

‘ ಹೆಚ್ಚು ಘಾಸಿಯೆಂದರೆ, ನಿನ್ನಲ್ಲು ಹೆಚ್ಚಿನ ಶ್ಯಕ್ತಿಯ ವ್ಯಯವಾಗಿರಬೇಕಲ್ಲವೆ ? ಲೆಕ್ಕಾಚಾರದಂತೆ ಇರಬೇಕಾದಷ್ಟು ಇದೆಯೊ..? ಅಥವ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಶಕ್ತಿಪಾತವಾಗಿದೆಯೊ ?’ ಹಾಗನ್ನುತ್ತಲೆ ನಾರಾಯಣನ ದೇಹದ ಸುತ್ತ ಪ್ರವಹಿಸುತ್ತಿದ್ದ ತರಂಗ ಶಕ್ತಿಯ ಅಳತೆ ಮಾಡಲು ಯತ್ನಿಸುತ್ತ ಅದರ ಅಳತೆಯನ್ನು ಅಂದಾಜು ಮಾಡಲೆತ್ನಿಸತೊಡಗಿತ್ತು ಸೂಕ್ಷ್ಮಮನದ ಮತ್ತೊಂದು ತರಂಗ… ನಿಖರವಾಗಿಯಲ್ಲದಿದ್ದರು ಇರಬೇಕಾದುದಕ್ಕಿಂತ ಕಡಿಮೆ ಮಟ್ಟದ ಶಕ್ತಿಸಂಚಯವಿರುವುದನ್ನು ಆಗಲೆ ಗ್ರಹಿಸಿಬಿಟ್ಟಿತ್ತು, ಆ ಲೆಕ್ಕಾಚಾರದ ಪ್ರಕ್ರಿಯೆ..

‘ ಇಲ್ಲ ನರ.. ಮಾಮೂಲಿಗಿಂತ ಹೆಚ್ಚಿನ ಶಕ್ತಿಯನ್ನೆ ವ್ಯಯಿಸಬೇಕಾಗಿ ಬಂತು.. ಸಹಸ್ರಕವಚನಿಗು ಚೆನ್ನಾಗಿ ಗೊತ್ತು ಇದವನ ಕೊನೆಯ ಕವಚದ ಹಂತಗಳು ಎಂದು.. ಹೀಗಾಗಿ ಅಸೀಮ ಶಕ್ತಿಯ ಜತೆಗೆ ಅಸೀಮ ಮನೋಬಲವನ್ನು ಸಮೀಕರಿಸಿ ಹೋರಾಡುತ್ತಿದ್ದಾನೆ.. ಜೀವಭಯವಿಲ್ಲದವರ ಹೋರಾಟ ಹೇಗಿರುತ್ತದೆಂದು ನಿನಗೆ ಗೊತ್ತಿದೆಯಲ್ಲಾ ? ಹೀಗಾಗಿ ನಾನೂ ನನ್ನೆಲ್ಲ ಯುಕ್ತಿ-ಶಕ್ತಿಯನ್ನು ವ್ಯಯಿಸಿ ಅವನನ್ನು ಎದುರಿಸಬೇಕಾಗಿದೆ.. ಈಗ ಮಿಕ್ಕುಳಿದ ಶಕ್ತಿ ಈ ಹೋರಾಟದ ಕಡೆಯತನಕ ಸಾಲುವುದೊ ಇಲ್ಲವೊ ಗೊತ್ತಾಗುತ್ತಿಲ್ಲ.. ಅದೇನಾದರು ಸಾಲದೆ ಹೋದರೆ ನಾವು ಇನ್ನು ಹೆಚ್ಚಿನ ತೊಡಕಿಗೆ ಸಿಕ್ಕಿಬೀಳುತ್ತೇವೆ..’

‘ಇಲ್ಲಾ ನಾರಾಯಣ ಹಾಗಾಗಲಿಕ್ಕೆ ಬಿಡುವುದು ಬೇಡ .. ಈಗ ಅವನ ಶಕ್ತಿಯನ್ನು ಎಷ್ಟು ಕುಂದಿಸಲು ಸಾಧ್ಯವೊ ಅಷ್ಟು ಕುಂದಿಸಿಬಿಟ್ಟು, ಮೊತ್ತದಲ್ಲಿ ಕ್ಷೀಣಿಸುವಂತೆ ಮಾಡುವುದು ಕ್ಷೇಮ.. ಹಾಗಾದಲ್ಲಿ ಮಾತ್ರ ಮುಂದಿನ ಯುಗಾಂತರದ ಕೊನೆಯ ಕವಚವನ್ನು ಭೇದಿಸುವ ಹೋರಾಟವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯ.. ಅದು ಆಗಬೇಕಾದರೆ ನಾವೊಂದು ಕೆಲಸ ಮಾಡಬೇಕು…’

‘ಅದು ಏನು ಕೆಲಸ..?’

‘ ಈಗ ಮೊದಲಿನಂತೆ ಒಬ್ಬೊಬ್ಬರ ಶಕ್ತಿಯನ್ನು ಮಾತ್ರ ಬಳಸಿ ಅವನ ಜೊತೆ ಹೋರಾಡುವ ಬದಲು ಇಬ್ಬರ ಶಕ್ತಿಯನ್ನು ಸಮಷ್ಟಿಸಿ ಹೋರಾಟ ಮುಂದುವರೆಸಬೇಕು.. ಈಗ ನಿನ್ನಲ್ಲಿರುವ ಕೊರತೆಯನ್ನು ನಿಭಾಯಿಸಲು ನಾನು ಗಳಿಸಿದ ಇನ್ನೊಂದಷ್ಟು ಶಕ್ತಿಯನ್ನು ವರ್ಗಾಯಿಸುತ್ತೇನೆ.. ಆಗ ಈ ಕವಚದ ಹರಣ ಖಚಿತವಾಗಿ ಆಗಲಿಕ್ಕೆ ಸಾಧ್ಯ..’

(ಇನ್ನೂ ಇದೆ)

(Link to next episode 35: https://nageshamysore.wordpress.com/2016/03/19/00602-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ab/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s