00602. ಅಹಲ್ಯಾ_ಸಂಹಿತೆ_೩೫ (ನರನಾರಾಯಣ-ಸೂರ್ಯರ ಒಡಂಬಡಿಕೆ)


00602. ಅಹಲ್ಯಾ_ಸಂಹಿತೆ_೩೫ (ನರನಾರಾಯಣ-ಸೂರ್ಯರ ಒಡಂಬಡಿಕೆ)
________________________________________

(Link to previous episode 34: https://nageshamysore.wordpress.com/2016/03/18/00597-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a9%e0%b3%aa-%e0%b2%b8%e0%b2%82%e0%b2%b6%e0%b3%8b%e0%b2%a7%e0%b2%a8/)

ನಾರಾಯಣ ಅರೆಗಳಿಗೆ ಮಾತಾಡದೆ ಮೌನವಾಗಿದ್ದು ಕಂಡು ನರನಿಗೆ ಕಸಿವಿಸಿಯಾದಂತಾಗಿ ಕೇಳಿದ.. ‘ ಯಾಕೆ ? ಏನಾದರು ತೊಡಕು ಕಂಡಿತೆ ? ‘ ಎಂದು.

‘ತೊಡಕೆಂದೇನು ಅಲ್ಲಾ… ತುಸು ನೈತಿಕತೆಯ ಪ್ರಶ್ನೆ… ತಾತ್ವಿಕವಾಗಿ ಕಾಡಿ ದಾರಿ ತಪ್ಪಿಸಿದ ಹಾಗೆ ಅನಿಸಿತು…’

‘ ಯಾಕೆ ? ನನಗೇನೂ ಅರ್ಥವಾಗಲಿಲ್ಲವಲ್ಲ ? ‘

‘ ನರ.. ಈಗಾಗಲೆ ಊರ್ವಶಿಯ ಪ್ರಕರಣದಿಂದ ಸಾಕಷ್ಟು ಶಕ್ತಿಪಾತವಾಗಿದೆ.. ಇನ್ನು ಈಗ ಹೆಚ್ಚು ವ್ಯಯಿಸಬೇಕೆಂದು ಮತ್ತಷ್ಟು ವರ್ಗಾಯಿಸಿಕೊಂಡರೆ ಮುಂದಿನ ಕದನದಲ್ಲಿ ಹೇಗೆ ನಿಭಾಯಿಸುವುದೋ ಎಂದು ಚಿಂತೆಯಾಗುತ್ತಿದೆ.. ಏಕೆಂದರೆ ಆ ಕೊನೆಯ ಕದನದಲ್ಲಿ ಸಹಸ್ರಕವಚ ತನ್ನೆಲ್ಲ ಶೇಷಬಲದ ಜತೆಗೆ ಜೀವವನ್ನೂ ಪಣವಾಗಿಟ್ಟು ಹೋರಾಡಿಯೇ ತೀರುತ್ತಾನೆ. ಮತ್ತಷ್ಟು ಕುಂಠಿತ ಬಲದೊಡನೆ ನೀನು ಆ ಕದನದಲ್ಲಿ ಅವನನ್ನು ಎದುರಿಸುವುದು ಸಾಧ್ಯವಾದೀತೆ ಎನ್ನುವ ಯೋಚನೆ ಹಚ್ಚಿಕೊಂಡಿದೆ..’

ನರನಿಗು ನಾರಾಯಣನ ಚಿಂತನೆಯ ಧಾಟಿ ಅರಿವಾಗಿ ಅವನೂ ತುಸು ಸಂದಿಗ್ದಕ್ಕೆ ಬಿದ್ದ. ಈ ಬಾರಿಯೇ ಇಷ್ಟು ಹೆಚ್ಚು ಸಾಮರ್ಥ್ಯದಿಂದ ಹೋರಾಡುತ್ತಿರುವ ದಾನವ ಮುಂದಿನ ಬಾರಿ ಜೀವದ ಹಂಗು ತೊರೆದು ಹೊಡೆದಾಡುವಾಗ ಬಿಟ್ಟುಕೊಡುತ್ತಾನೆಯೆ? ನಾರಾಯಣನ ಮಾತಿನಲ್ಲೂ ತಥ್ಯವಿದೆ ಅನಿಸಿತು. ಅದೇ ಹೊತ್ತಲ್ಲಿ ಮತ್ತೆ ನಾರಾಯಣನೆ ಮಾತಾಡಿದ್ದ..

‘ ನರ ನನಗೊಂದು ಆಲೋಚನೆ ಬರುತ್ತಿದೆ.. ನಾವೀಗ ಯಾಕೆ ಸೂರ್ಯದೇವನೊಡನೆ ಸಮಾಲೋಚಿಸಬಾರದು? ಹೇಗೂ ಅವನು ನಡೆಸುತ್ತಿರುವ ಪ್ರಯೋಗದಲ್ಲಿ ಬೇಕಿರಲಿ , ಬಿಡಲಿ ಸಮಿತ್ತಾಗಿರುವವನು ಸಹಸ್ರಕವಚನೆ.. ನಾವೇಕೆ ಅವನೊಂದಿಗೆ ಚರ್ಚಿಸಿ ಒಂದು ದಾರಿ ಕಂಡುಕೊಳ್ಳಬಾರದು ?’

‘ನಾರಾಯಣ.. ಸಹಸ್ರಕವಚನೆಂದರೆ ಸೂರ್ಯದೇವನಿಗೆ ಮಾನಸಪುತ್ರನೆಂಬ ಅಭಿಮಾನವಿದೆ..ಹೀಗಾಗಿ ಅವನಿಂದ ಸಹಾಯವಾಗುವುದಕ್ಕಿಂತ ಅಡಚಣೆಯಾಗುವ ಸಾಧ್ಯತೆಯೇ ಹೆಚ್ಚು ಅನಿಸುತ್ತಿದೆ ನನಗೆ…’

‘ ಆದರೂ ಅದೇ ಸೂಕ್ತದಾರಿ ನರ… ಈಗಿರುವ ಪರಿಸ್ಥಿತಿಯಲ್ಲಿ ಅವನೇ ನಮಗೆ ಕ್ಷಿಪ್ರದಲ್ಲಿ ಸೂಕ್ತಮಾರ್ಗ ತೋರಿಸಬಲ್ಲ ವ್ಯಕ್ತಿ.. ನಾನು ತುಸು ವಿಶ್ರಮಿಸಿ ಬರುತ್ತೇನೆ.. ನೀನವನನ್ನು ಸಂಪರ್ಕಿಸಿ ನೋಡುವೆಯಾ ?’

ಸರಿಯೆನ್ನುವಂತೆ ತನ್ನ ಸಂಪರ್ಕ ಕೊಂಡಿಯನ್ನು ನಿಷ್ಕ್ರಿಯವಾಗಿಸಿ ಸೂರ್ಯದೇವನನ್ನು ಸಂಪರ್ಕಿಸತೊಡಗಿದ ನರ.. ಅದಾದ ಕೆಲವೇ ಗಂಟೆಗಳಲ್ಲಿ ನರನ ಆಶ್ರಮದಲ್ಲಿ ಬಂದು ವಿರಾಜಮಾನನಾಗಿದ್ದ ಸೂರ್ಯದೇವ. ಮತ್ತೆ ನಾರಾಯಣನ ಜತೆ ಸಂಪರ್ಕವೇರ್ಪಡಿಸಿ ಪರದೆಯ ಮೇಲೆ ಪ್ರಕ್ಷೇಪಿಸಿದ ನರ ತಾನೇ ಮಾತಿಗಾರಂಭಿಸಿದ.

‘ಸ್ವಾಗತ ಸೂರ್ಯದೇವಾ… ನಿನ್ನ ಬಿಡುವಿಲ್ಲದ ಕೆಲಸದ ನಡುವೆಯೂ ನಮ್ಮ ಕ್ಷಿಪ್ರ ಆಹ್ವಾನವನ್ನು ಮನ್ನಿಸಿ ಬದರೀಕಾಶ್ರಮಕ್ಕೆ ಬಂದದ್ದಕ್ಕೆ ಧನ್ಯವಾದಗಳು..’

‘ನರ ನಾರಾಯಣರಂತಹವರ ಮಹಾನ್ ವಿಜ್ಞಾನವೇತ್ತರ ಆಹ್ವಾನವೇ ಸುಕೃತ.. ಅಂದ ಮೇಲೆ ಬರುವುದೇನು ದೊಡ್ಡ ವಿಷಯ ? ವಿಷಯವೇನೆಂದು ಹೇಳಿ..’ ಸೂರ್ಯನದು ಎಂದಿನ ಅದೇ ವಿನಯ. ನೇರ ವಿಷಯಕ್ಕೆ ಬಂದ ಬಗೆಯೂ ಮೆಚ್ಚಿಕೆಯಾಗಿ ಈ ಬಾರಿ ನಾರಾಯಣನೆ ಮಾತಾಡಿದ.

‘ ನಿನ್ನಂತಹ ಜ್ಞಾನಿ, ನಿಗರ್ವಿಯಾದ ಸೌಜನ್ಯಪೂರ್ಣ ವ್ಯಕ್ತಿಗಳೊಡನೆ ಮಾತಾಡುವುದೇ ದೊಡ್ಡ ಸುಕೃತ ಸೂರ್ಯದೇವ.. ನೀನು ಸೃಜಿಸಿದ ಜೈವಿಕ ಕವಚದ ರಹಸ್ಯವನ್ನು ಅರಿತು ಅದನ್ನು ಉಪಸಂಹರಿಸಲು ನಾವು ಅದೆಷ್ಟು ಸಹಸ್ರ ವರ್ಷಗಳಿಂದ ಹೆಣಗುತ್ತಿದ್ದೇವೆಂದು ನೀನೂ ಬಲ್ಲೆ.. ಅದೇ ನಿನ್ನ ಶಕ್ತಿಯನ್ನು ತೋರಿದರೂ ಸಾಧಾರಣನಂತೆ ವರ್ತಿಸುವ ಈ ಶ್ಲಾಘನೀಯ ವಿನಯ, ಆ ನಿನ್ನ ಸಾಮರ್ಥ್ಯಕಿಟ್ಟ ಮತ್ತೊಂದು ಮುಕುಟ. ಅದಿರಲಿ.. ನಿನ್ನ ಗುಣಗಾನ ಮಾಡಿ ಹಾಡಿ ಹೊಗಳಲು ನಾವು ನಿನ್ನನ್ನು ಆಹ್ವಾನಿಸಲಿಲ್ಲ.. ನಿಜಕ್ಕೂ ಸಹಸ್ರಕವಚನ ನಿಗ್ರಹಣದ ಕುರಿತು ನಿನ್ನಲ್ಲಿ ಮುಕ್ತವಾಗಿ ಚರ್ಚಿಸಿ ಈಗಿರುವ ಬಿಕ್ಕಟ್ಟಿಗೆ ದಾರಿ ಕಂಡುಕೊಳ್ಳಬೇಕಿತ್ತು..’

ಸಹಸ್ರಕವಚನ ಹೆಸರು ಬರುತ್ತಿದ್ದಂತೆ ಮ್ಲಾನವದನನಾದ ಸೂರ್ಯದೇವ, ತನ್ನ ಅಹಿತಕರ ಭಾವನೆಯನ್ನು ಮುಚ್ಚಿಡಲೆತ್ನಿಸದೆ ನುಡಿದ – ‘ ಸಹಸ್ರಕವಚನ ಕುರಿತು ಉಳಿದಿರುವುದಾದರು ಏನು ನಾರಾಯಣ ? ಈ ಸಾರಿಯ ಕದನ ಮುಗಿದರೆ ಹೆಚ್ಚುಕಡಿಮೆ ಮಿಕ್ಕುಳಿದಿದ್ದು ಒಂದೇ ಜೈವಿಕ ಕವಚ.. ಅದರೊಂದಿಗೆ ಎಲ್ಲಾ ಮುಗಿದಂತೆ ತಾನೇ ?’ ಮಾನಸಪುತ್ರನ ಅಂತ್ಯ ಕಾಣುವ ಅಸಹನೀಯ ನೋವು ಅವನ ಮಾತಿನ ರೀತಿಯಲ್ಲೇ ವ್ಯಕ್ತವಾಗುತ್ತಿತ್ತು.

ಅವನನ್ನು ಸಮಾಧಾನಿಸುವವನಂತೆ ನಡುವೆ ನುಡಿದ ನರ – ‘ ಸೂರ್ಯದೇವ.. ಇದೆಲ್ಲಾ ಅನಿವಾರ್ಯವೆಂದು ನೀನು ಬಲ್ಲೆ.. ಸಹಸ್ರಕವಚ ಅಸುರೀಪ್ರವೃತ್ತಿಯನ್ನು ಬಳಸಿ ಪೀಡಕನಾಗುವ ಹಾದಿ ಹಿಡಿಯದಿದ್ದರೆ ಇವೆಲ್ಲ ನಡೆಯುವ ಅಗತ್ಯವೇ ಇರಲಿಲ್ಲ, ಅಲ್ಲವೇ ? ಆದರೆ ಈಗ ಅದನ್ನೆಲ್ಲ ಚಿಂತಿಸಿ ಫಲವಿಲ್ಲ.. ಈಗ ಉಳಿದಿರುವ ಅವಕಾಶದಲ್ಲಿ ಏನು ಮಾಡಬಹುದೋ ಎಂದು ಚಿಂತಿಸೋಣ..’ ಎಂದವನೇ ತನ್ನ ಮತ್ತು ನರನ ನಡುವಣ ನಡೆದ ಸಂವಾದ ಮತ್ತು ಚಿಂತೆಯ ಕಾರಣವನ್ನೆಲ್ಲ ವಿಶದವಾಗಿ ವಿವರಿಸಿದ. ಅದನ್ನೆಲ್ಲ ಗಮನವಿಟ್ಟು ಕೇಳಿದ ಸೂರ್ಯದೇವ ತನ್ನ, ಬ್ರಹ್ಮದೇವನ ಮತ್ತು ದೇವೇಂದ್ರನ ನಡುವಣ ಭೇಟಿಯನ್ನು ನೆನಪಿಸಿಕೊಂಡು,

‘ ನರ ನಾರಾಯಣ, ಇದೇ ಕುರಿತಾಗಿ ನಾನಾಗಲೇ ಬ್ರಹ್ಮ ಮತ್ತು ದೇವೇಂದ್ರರ ಜತೆ ಮಾತುಕತೆ ನಡೆಸಿದ್ದೆ.. ಸಹಸ್ರಕವಚ ಪೀಡಕನಾಗಿ ತನ್ನ ಅವನತಿಗೆ ತಾನೇ ಅಸ್ತಿಭಾರ ಹಾಕಿಕೊಂಡ ಎನ್ನುವುದು ನಿಜವಾದರೂ, ಕವಚರೂಪದಲ್ಲಿದ್ದ ತನ್ನೆಲ್ಲ ಅಗಾಧಶಕ್ತಿಯನ್ನು ಕಳೆದುಕೊಂಡು ಈಗ ಮೊದಲಿನ ಸಾವಿರದೊಂದನೆ ಅಂಶಕ್ಕೆ ಬಂದಿಳಿದಿದ್ದಾನೆ. ಈಗಲೂ ಅವನನ್ನು ಮೊದಲಿನಷ್ಟೇ ಅಪಾಯಕಾರಿ ಎಂದು ಪರಿಗಣಿಸುವುದು ಸರಿಯೇ ? ‘ ಎಂದ

‘ ಹಾಗಲ್ಲ ಸೂರ್ಯದೇವ.. ನೀನು ಸೃಜಿಸಿದ ಕೋಶಕವಚದ ವಿನ್ಯಾಸದ ಶಕ್ತಿಯಿಂದಾಗಿ ಕೊನೆಯ ಕವಚಶಕ್ತಿ ಕೂಡ ಕಾಲದ ಪೆಟ್ಟಿಗೆಯಲಿಟ್ಟು ಹಾಗೆ ಬಿಟ್ಟರೆ ತಂತಾನೆ ವೃದ್ಧಿಸಿಕೊಂಡು ವರ್ಧಿತವಾಗುತ್ತ ಹೋಗುತ್ತದಲ್ಲಾ ? ಈ ಯುಗದಲ್ಲೇ ಸಂಹಾರ ಪೂರ್ಣವಾಗುವುದಿದ್ದರೆ ಅದು ಅಷ್ಟೊಂದು ತೊಡಕಾಗುತ್ತಿರಲಿಲ್ಲ.. ಯುಗಸಂಧಿಯನ್ನು ದಾಟಬೇಕೆಂದರೆ ಅಗಾಧ ಕಾಲಮಾನ ಹಿಡಿಯುತ್ತದೆಯಾಗಿ ಈ ಶಕ್ತಿ ಭ್ರೂಣ ಅಪಾಯಕಾರಿ ಮಟ್ಟ ಮುಟ್ಟಬಲ್ಲುದಲ್ಲವೆ ?’ ಎಂದ ನಾರಾಯಣ ಅಪಾಯದ ಸಾಧ್ಯತೆಯನ್ನು ಮತ್ತೆ ವಿವರಿಸುತ್ತ..

‘ ಆ ಕೊನೆಯ ಕವಚದ ವಿನಾಶಕ ಶಕ್ತಿಯನ್ನು ಕುಗ್ಗಿಸುವ ಅಥವಾ ನಿರಪಾಯಕಾರಿ ರೂಪಕ್ಕೆ ಪರಿವರ್ತಿಸುವ ಸಾಧ್ಯತೆ ಕುರಿತು ನಾನೀಗಾಗಲೇ ಪ್ರಯೋಗ ನಡೆಸುತ್ತಿದ್ದೇನೆ… ಅದು ಯಶಸ್ಸಾದರೆ ಪರಿಹಾರವೊಂದು ಹೊಳೆಯುವ ದಾರಿಯ ಸಾಧ್ಯತೆ ಇದೆ ನಾರಾಯಣ..’

ಅದು ನರನಾರಾಯಣರಿಬ್ಬರಿಗು ಹೊಸತಾದ ವಿಷಯ.. ಅದನ್ನರಿತಿದ್ದ ಸೂರ್ಯದೇವ ತನ್ನ ವಿವರಣೆಯನ್ನು ಮುಂದುವರೆಸುತ್ತ ನುಡಿದ, ‘ ಈಗ ಸಹಸ್ರಕವಚನ ಅಸೀಮ ಬಲ ವಿನಾಶಕಾರಿಯಾಗಿರುವುದಕ್ಕೆ ಕಾರಣ ಅವನ ಶಕ್ತಿಯ ಬಹುತೇಕ ಭಾಗ ತಾಮಸಿ ಗುಣ ಪ್ರೇರಿತವಾಗಿರುವುದು.. ಅದನ್ನು ಸಾತ್ವಿಕ ಪ್ರಮುಖವಾಗುವಂತೆ ಪರಿವರ್ತಿಸಲು ಸಾಧ್ಯವಾಗುವುದಾದರೆ ಅವನ ದಮನಕಾರಕ ಪ್ರವೃತ್ತಿಯನ್ನು ಸಜ್ಜನಕಾರಕವಾಗಿಸಲು ಸಾಧ್ಯ… ಆದರೆ ಈ ಪ್ರಯೋಗದ ಪರಿಣಾಮ ತಿಳಿಯಲು ಈ ಕದನ ಮುಗಿಯುವವರೆಗೂ ಕಾಯಬೇಕು..ಆಗಷ್ಟೆ ಸಹಸ್ರಕವಚನ ಮೇಲೆ ಪ್ರಯೋಗ ನಡೆಸಿ ಇದು ಸಾಧುವೋ ಅಲ್ಲವೋ ಎಂದು ಅರಿಯಲು ಸಾಧ್ಯವಾಗುವುದು…’

ಆ ಮಾತು ಕೇಳುತ್ತಿದ್ದಂತೆ ತಮ್ಮಲ್ಲೇ ಮುಖಾಮುಖ ನೋಡಿಕೊಂಡರು ನರನಾರಾಯಣರು… ಸಹಸ್ರಕವಚನ ನಿಗ್ರಹಕ್ಕೆ ಅವರು ಬಳಸುತ್ತಿದ್ದ ಪ್ರತಿವಸ್ತು ತತ್ವದಲ್ಲಿ, ತಾತ್ವಿಕವಾಗಿ ಹೆಚ್ಚುಕಡಿಮೆ ಅವರು ಮಾಡುತ್ತಿದ್ದುದು ಅದನ್ನೇ.. ಸಾಧ್ಯವಿದ್ದಷ್ಟನ್ನು ಸಾತ್ವಿಕ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಅದರ ಸಾಮರ್ಥ್ಯದಿಂದ ಅಸುರನ ತಾಮಸತ್ವವನ್ನು ಹಣಿಯುತ್ತಿದ್ದರು. ಈಗ ಅದನ್ನೇ ಬಳಸಿ ಸಹಸ್ರಕವಚನ ಮಿಕ್ಕಶಕ್ತಿಯನ್ನು ನಿರಪಾಯಕಾರಿಯಾಗಿಸಬಹುದೇ ? ತಾವೀ ತಂತ್ರವನ್ನು ಸೂರ್ಯನಿಗೊದಗಿಸಿದರೆ ತನ್ಮೂಲಕ ತಮ್ಮ ಕಾರ್ಯ ಕೈಗೂಡುವುದಲ್ಲವೆ ? ಎನಿಸಿತು.

‘ ಸೂರ್ಯದೇವ.. ನಮ್ಮದೊಂದು ಸಲಹೆಯಿದೆ.. ನೀನು ಸಾಧಿಸಬೇಕೆಂದಿರುವುದನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬಲ್ಲ ತಂತ್ರವೊಂದನ್ನು ನಾವಾಗಲೇ ಸಿದ್ಧಿಸಿಕೊಂಡಿದ್ದೇವೆ.. ಬಹುಶಃ ನೀನು ಅದನ್ನು ಬಳಸಿಕೊಳ್ಳುವ ಸಾಧ್ಯತೆಯಿದೆಯೆಂದು ಕಾಣುತ್ತದೆ… ಅದನ್ನು ಪ್ರಯೋಗಿಸಿ ನೋಡಿ ಖಚಿತಗೊಳಿಸಬೇಕಾದ ಅವಶ್ಯಕತೆಯಿಲ್ಲ… ಅದನ್ನು ನೀನು ಅಳವಡಿಸಿಕೊಳ್ಳುವ ಬಗೆ ಹೇಗೆಂದು ಕಂಡುಕೊಂಡರೆ ಸಾಕು..’

ನಾರಾಯಣನ ಮಾತು ಕೇಳುತ್ತಿದ್ದಂತೆ ಸೂರ್ಯದೇವನ ಕುತೂಹಲ ಕೆರಳಿ ಆ ತಂತ್ರದ ವಿವರಗಳನ್ನು ಕೇಳಿದ. ವಸ್ತು – ಪ್ರತಿವಸ್ತು ತತ್ವ ಅದರ ಮೂಲಸಿದ್ದಾಂತ ಎಂದರಿವಾಗುತ್ತಲೆ ಕೊಂಚ ನಿರಾಸೆಯಿಂದಲೆ ನುಡಿದ ‘ವಸ್ತುವೊಂದನ್ನು ಅದರ ಪ್ರತಿವಸ್ತುವಿನ ಸಂಪರ್ಕಕ್ಕೆ ತಂದಾಗ ಅವೆರಡರ ಸಂಘರ್ಷದಲ್ಲಿ ಆ ಪ್ರತಿವಸ್ತು ಮೂಲವಸ್ತುವನ್ನು ಇಲ್ಲವಾಗಿಸುತ್ತದೆಂಬ ಈ ತಂತ್ರ ಬಳಸಿ ಕವಚವನ್ನು ದಮನಿಸಿದಂತೆ ಇಲ್ಲಿ ನಡೆಯದು .. ನಾವೀಗ ಕಾಣಬೇಕಿರುವುದು ಶಕ್ತಿಯ ಗುಣಸತ್ವದ ರೂಪಾಂತರವೆ ಹೊರತು ಪೂರ್ಣ ವಿನಾಶವಲ್ಲ… ಈ ತಂತ್ರವನ್ನು ಹೇಗೆ ಬಳಸುವುದೊ ನನಗೆ ಅರಿವಾಗುತ್ತಿಲ್ಲ…’

ಅದನ್ನು ಗಮನಿಸಿದ ನರ ತಕ್ಷಣವೆ ಉತ್ತರಿದ,’ಮೂಲತಃ ಇದೊಂದು ವಿನಿಮಯ ತತ್ವವೇ ಸೂರ್ಯದೇವ.. ವಸ್ತು-ಪ್ರತಿವಸ್ತು ಪರಸ್ಪರ ವಿನಿಮಯಿಸಿಕೊಂಡು ಎರಡರ ಮೊತ್ತವೂ ನಿವ್ವಳದಲ್ಲಿ ಅಚರವೆನಿಸುವ ನಿಷ್ಕ್ರಿಯ ಸ್ಥಿತಿ ತಲುಪುವುದು.. ಬಹುಶಃ ಅದನ್ನೇ ತುಸು ವ್ಯತ್ಸಾಸಗೊಳಿಸಿ ನಿಷ್ಕ್ರಿಯವಾಗುವ ಬದಲು, ಅದಲುಬದಲಾಗುವ ಹಾಗೆ ಮಾಡಲು ಸಾಧ್ಯವಾಗುವುದಾದರೆ ಈ ರೂಪಾಂತರವೂ ಸಾಧ್ಯ…’

‘ಅಂದರೆ ನಾನೀಗ ನನ್ನ ಪ್ರಯೋಗದಲ್ಲಿ ಕಂಡುಹಿಡಿದಿರುವ ವಿಧಾನಕ್ಕೆ ನಿಮ್ಮ ವಸ್ತು-ಪ್ರತಿವಸ್ತು ತತ್ವದ ಫಲಿತವನ್ನು ಸಮೀಕರಿಸಿ ನಿಯಂತ್ರಿತ ರೂಪಾಂತರವನ್ನು ಸಾಧಿಸಬಹುದೆಂಬ ಆಶಯವೇ ?’

‘ ಅದು ಸಾಧ್ಯವಾಗದೆ ?’

(ಇನ್ನೂ ಇದೆ)

(Link to next episode 36: https://nageshamysore.wordpress.com/2016/03/21/00606-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ac/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore,

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s